ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಯೌವನಸ್ಥರಿಗೆ ಮನೆ ಸಭೆ
WFTW Body: 

’ಪ್ರಾರ್ಥನೆ’ಯಲ್ಲಿ ದೇವರೊಂದಿಗೆ ಮಾತನಾಡುವುದು ಅಷ್ಟೇ ಅಲ್ಲ, ’ದೇವರ ಮಾತನ್ನು ಕೇಳುವುದು’ ಸಹ ಸೇರಿದೆ. ವಾಸ್ತವವಾಗಿ, ದೇವರೊಂದಿಗೆ ಮಾತನಾಡುವುದಕ್ಕಿಂತ ಹೆಚ್ಚು ಪ್ರಮುಖ ಅಂಶ ಅವರ ಮಾತನ್ನು ಕೇಳುವುದಾಗಿದೆ. ವಿಚಾರಮಾಡಿರಿ: ನಿಮಗಿಂತ ವಯಸ್ಸಿನಲ್ಲಿ ಹಿರಿಯನೂ, ಹೆಚ್ಚು ದೈವಿಕನೂ ಆಗಿರುವ ಒಬ್ಬ ವ್ಯಕ್ತಿಯೊಂದಿಗೆ ನೀವು ಮೊಬೈಲ್ ಫೋನಿನಲ್ಲಿ ಮಾತಾಡುವುದಾದರೆ, ಮಾತನಾಡುವುದಕ್ಕಿಂತ ಬಹಳ ಹೆಚ್ಚಾಗಿ ನೀವು ಕೇಳಿಸಿಕೊಳ್ಳುತ್ತೀರಿ. ಯಥಾರ್ಥವಾದ ಪ್ರಾರ್ಥನೆಯೂ ಹೀಗಿರಬೇಕು - ನೀವು ದೇವರ ಮಾತನ್ನು ಹೆಚ್ಚಾಗಿ ಕೇಳಿಸಿಕೊಳ್ಳಬೇಕು ಮತ್ತು ನಿಮ್ಮ ಮಾತು ಕಡಿಮೆ ಇದ್ದರೆ ಸಾಕು.

ನೀವು ಯಾವುದೋ ಒಂದು ಕಾರ್ಯವನ್ನು ಮಾಡಲು ಬಹಳ ಉತ್ಸುಕರಾಗಿದ್ದರೆ, ಅದರ ಕುರಿತಾಗಿ ಒಂದು ಚಿಕ್ಕ ಪ್ರಾರ್ಥನೆ ಮಾಡಿ ನಿಮ್ಮ ಮನಸ್ಸಾಕ್ಷಿಯನ್ನು ಸಮಾಧಾನದಲ್ಲಿರಿಸಿ, ಅನಂತರ ನಿಮ್ಮ ಮನಸ್ಸಿನೊಳಗೆ "ಇದನ್ನು ಮಾಡುವುದರ ಬಗ್ಗೆ ನನಗೆ ಮನಸ್ಸಿನಲ್ಲಿ ಸಮಾಧಾನ ಲಭಿಸಿದೆ" ಎಂದು ನಿಮಗೆ ನೀವೇ ಹೇಳಿಕೊಂಡು, ಅದು ದೇವರ ಚಿತ್ತವಾಗಿದೆಯೆಂದು ನಿಮ್ಮನ್ನು ನೀವೇ ಸುಲಭವಾಗಿ ವಂಚಿಸಿಕೊಳ್ಳಬಹುದು - ಆ ಮೇಲೆ ಮುಂದುವರಿದು ಆ ಕಾರ್ಯವನ್ನು ಮಾಡಿಬಿಡುತ್ತೀರಿ! ನೀವು ಹೀಗೆ ಮಾಡಿದರೆ ದೇವರ ಚಿತ್ತವನ್ನು ಪೂರ್ತಿಯಾಗಿ ಕಳೆದುಕೊಳ್ಳಬಹುದು. ಇದನ್ನು ನೆನಪಿರಿಸಿಕೊಳ್ಳಿರಿ: "ನೀವು ಮಾಡಬೇಕಾದ ನಿರ್ಧಾರವು ಎಷ್ಟು ಹೆಚ್ಚು ಮಹತ್ವದ್ದಾಗಿದೆಯೋ, ನಿರ್ಧರಿಸುವುದಕ್ಕೆ ಮೊದಲು ನೀವು ಅಷ್ಟು ಹೆಚ್ಚಾಗಿ ದೇವರ ಉತ್ತರಕ್ಕಾಗಿ ಕಾಯಬೇಕು."

ಶರೀರಭಾವವು ಮೂಲತಃ ಮೈಗಳ್ಳತನ ಮತ್ತು ಸುಖಭೋಗದ ಆಸೆ ಮತ್ತು ಹಾಯಾಗಿ ಜೀವಿಸುವುದನ್ನು ಬಯಸುವ ಸ್ವಭಾವವಾಗಿದೆ. ಈ ಸ್ವಭಾವದಿಂದ ವಂಚಿಸಲ್ಪಡಬೇಡಿರಿ. ನೀವು ದೇವರ ಚಿತ್ತವನ್ನು ಹುಡುಕುತ್ತಿರುವಾಗ, ನಿಮಗೆ ಇಂದ್ರಿಯಗಳಿಂದ ಬರುವ ಅನಿಸಿಕೆಗಳನ್ನು ನೀವು ನಿರಾಕರಿಸಬೇಕು. ನಿಮ್ಮ ಅಲೋಚನೆಗಳು ಮತ್ತು ದೇವರ ಅಲೋಚನೆಗಳ ನಡುವೆ ಭೂಮಿ ಮತ್ತು ಆಕಾಶದ ನಡುವೆ ಇರುವಷ್ಟು ಅಂತರವಿದೆ(ಯೆಶಾ. 55:8,9). ದೇವರ ಕಾರ್ಯ ವಿಧಾನಗಳು ನಿಮ್ಮ ಕಾರ್ಯ ವಿಧಾನಗಳಿಗಿಂತ ಎಷ್ಟೋ ಉನ್ನತವಾಗಿವೆ. ದೇವರು ಈ ಕಾರಣಕ್ಕಾಗಿ - ಅವರ ಅತ್ಯುತ್ತಮವಾದುದನ್ನು ನೀವು ಹೊಂದುವುದಕ್ಕಾಗಿ - ನೀವು ತನ್ನ ಚಿತ್ತಕ್ಕೆ ಅಧೀನರಾಗಬೇಕೆಂದು ಬಯಸುತ್ತಾರೆ.

ನೀವು ಪ್ರಾರ್ಥನೆಯಲ್ಲಿ ತುಂಬ ಸಮಯ ಕಳೆಯಲು ಸಾಧ್ಯವಾಗದಿರಬಹುದು. ಆದರೆ ನಿಮ್ಮ ನಿರ್ಧಾರಗಳನ್ನು ಕೈಗೊಳ್ಳುವಾಗ ಕರ್ತನ ಚಿತ್ತಕ್ಕಾಗಿ ಕಾದು ನಿಲ್ಲುವ ಸ್ವಭಾವ ನಿಮ್ಮಲ್ಲಿರಬೇಕು. ಹಾಗಾಗಿ ಪ್ರತಿದಿನ - ಮುಂಜಾನೆ ಮೊದಲನೆಯದಾಗಿ ಇದನ್ನು ಮಾಡಿದರೆ ಮೇಲು - ದೇವರ ಮುಂದೆ ಕುಳಿತು ಅವರ ಸನ್ನಿಧಿಯಲ್ಲಿ ಕೆಲವು ನಿಮಿಷ ಕಳೆಯುವಂತೆ ನಿಮ್ಮನ್ನು ಶಿಸ್ತಿಗೆ ಒಳಪಡಿಸಿಕೊಳ್ಳಬೇಕು. ಇದು ಮುಂಜಾನೆ ಸಾಧ್ಯವಾಗದಿದ್ದರೆ, ದಿನದ ಬೇರೆ ಸಮಯದಲ್ಲಿ ಹೀಗೆ ಮಾಡಬೇಕು. ಇಲ್ಲವಾದರೆ, ನಿಮ್ಮ ಸ್ವಂತ ಅಭಿಪ್ರಾಯಗಳು ನಿಮಗಾಗಿರುವ ದೇವರ ಚಿತ್ತದಿಂದ ನಿಮ್ಮನ್ನು ದೂರ ಸರಿಸಿ, ತಪ್ಪು ದಾರಿಗೆ ನಡೆಸಬಹುದು.

ಪ್ರತಿದಿನವೂ ದೇವರು ನಿಮ್ಮೊಂದಿಗೆ ಸಂಪರ್ಕ ಇರಿಸಿಕೊಳ್ಳಲು ಬಯಸುತ್ತಾರೆ. ಸತ್ಯವೇದದ ಮೊದಲ ಪುಟದಿಂದಲೇ ಈ ಅಂಶ ಎದ್ದು ಕಾಣುತ್ತದೆ; ಅಲ್ಲಿ ಹೇಳಿರುವುದನ್ನು ನೋಡಿರಿ: "ಮೊದಲನೆಯ ದಿನ, ದೇವರು ಹೀಗೆಂದರು .... ಎರಡನೆಯ ದಿನ, ದೇವರು ಹೀಗೆಂದರು .... ಮೂರನೆಯ ದಿನ ...., ನಾಲ್ಕನೆಯ ದಿನ ..., ಐದನೆಯ ಮತ್ತು ಆರನೆಯ ದಿನಗಳಲ್ಲಿ, ದೇವರು ಮಾತನಾಡಿದರು". ಪ್ರತಿ ದಿನವೂ ದೇವರು ಮಾತನಾಡಿದಾಗ ಏನಾದರೂ ಸಂಭವಿಸುತ್ತಿತ್ತು ಮತ್ತು ಅದರಿಂದ ಉಂಟಾದ ಅಂತಿಮ ಫಲಿತಾಂಶವು "ಬಹು ಒಳ್ಳೇದಾಗಿತ್ತು". ಹೀಗೆಯೇ ನೀವು ಪ್ರತಿ ದಿನ ದೇವರ ಮಾತಿಗೆ ಕಿವಿಗೊಟ್ಟರೆ, ನಿಮ್ಮ ಜೀವನದಲ್ಲಿ ಕೂಡ ಈ ರೀತಿಯಾಗಿ ನಡೆಯಬಹುದು. ಯೇಸುವು ಹೀಗೆ ಹೇಳಿದರು, "ಮನುಷ್ಯನು ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು" (ಮತ್ತಾ. 4:4). ನೀವು ನಿಮ್ಮ ಜೀವನದಲ್ಲಿ ಪ್ರತಿದಿನ ದೇವರಿಗೆ ಮೊದಲ ಸ್ಥಾನ ಕೊಡದಿದ್ದರೆ, ಬಹಳ ಸುಲಭವಾಗಿ ಹಿಂಜಾರಬಹುದು.

"ದೇವರ ಮಾತನ್ನು ಕೇಳಿಸಿಕೊಳ್ಳುವುದು" ಎಂದು ನಾನು ಹೇಳಿದ್ದರ ಅರ್ಥ ಸತ್ಯವೇದವನ್ನು ಓದುವುದು ಎಂದಲ್ಲ, ಆದರೆ ಅದಕ್ಕಿಂತಲೂ ವಿಶೇಷವಾಗಿ ದಿನವಿಡೀ ನಿಮ್ಮ ಮನಸ್ಸಾಕ್ಷಿಯಲ್ಲಿ ಪವಿತ್ರಾತ್ಮನ ಧ್ವನಿಯನ್ನು ಕೇಳಿಸಿಕೊಂಡು, ಆ ಮೂಲಕ ದೇವರಿಗೆ ಮೆಚ್ಚುಗೆಯಾದುದನ್ನು ಮಾಡುವುದು ಮತ್ತು ಅವರಿಗೆ ಅಸಮಾಧಾನ ಉಂಟುಮಾಡುವ ಪ್ರತಿಯೊಂದನ್ನು ನಿರಾಕರಿಸುವುದು.

ದೇವರು ಯಾವಾಗಲೂ ನಮ್ಮ ಪ್ರಾರ್ಥನೆಗಳಿಗೆ ಉತ್ತರ ನೀಡಲು ಬಯಸುತ್ತಾರೆ. ಆದರೆ ನಾವು ಅವರ ಉತ್ತರವನ್ನು ಹೊಂದುವುದಕ್ಕೆ ನಮ್ರತೆಯಿಂದ ಕಾದು ನಿಲ್ಲಬೇಕು. ಕೆಲವು ಸಲ ಅವರ ಉತ್ತರ "ಇಲ್ಲ" ಎಂದಾಗಿರಬಹುದು. ಕೆಲವೊಮ್ಮೆ ಅದು "ಕಾದು ನಿಂತಿರು" ಎಂದಾಗಿರಬಹುದು. ವಾಹನ ಸಂಚಾರಕ್ಕೆ ಕೆಂಪು, ಹಳದಿ ಮತ್ತು ಹಸಿರು ದೀಪಗಳು ಇರುವ ಹಾಗೆ, ದೇವರ ಉತ್ತರ "ಬೇಡ", "ಕಾದು ನಿಂತಿರು" ಅಥವಾ "ಮುಂದುವರಿದು ಹೋಗು" ಎಂದು ಆಗಿರಬಹುದು.