WFTW Body: 

ಒಂದು ದೇಶವು ಸ್ವತಂತ್ರವಾಗಿ ಇರುವುದಕ್ಕಾಗಿ ಸೈನಿಕರು ಅಪಾರವಾದ ತ್ಯಾಗ ಮಾಡುವುದಾದರೆ, ನಾವು ನಮ್ಮ ಜೀವಿತದ ಪ್ರತಿಯೊಂದು ಕಾರ್ಯದಲ್ಲಿ ಕರ್ತನನ್ನು ಮಹಿಮೆಪಡಿಸುವುದಕ್ಕಾಗಿ ಮತ್ತು ಸೈತಾನನನ್ನು ನಾಚಿಕೆಗೆ ಒಳಪಡಿಸುವುದಕ್ಕಾಗಿ ಇನ್ನೂ ಹೆಚ್ಚಿನ ತ್ಯಾಗವನ್ನು ಮಾಡಲು (ಪ್ರಾಣವನ್ನು ಅರ್ಪಿಸುವುದಕ್ಕೂ ಸಹ) ಸಿದ್ಧರಾಗಿರಬೇಕು.

ನಿಮ್ಮ ಕಾರ್ಯಗಳಲ್ಲಿ ನೀವು ದೇವರ ಕೃಪೆಯನ್ನು ಅದ್ಭುತವಾಗಿ ಪಡೆದುಕೊಳ್ಳುತ್ತಿದ್ದೀರಿ ಎಂಬ ಭರವಸೆ ನನಗಿದೆ. ನಿಮ್ಮ ವಿದ್ಯಾಭ್ಯಾಸ ಮತ್ತು ನಿಮ್ಮ ನೌಕರಿಯನ್ನು ಉತ್ತಮವಾಗಿ ಮಾಡುವಂತ ಜ್ಞಾನವನ್ನು ನಿಮಗೆ ಕೊಡಬೇಕೆಂದು ನೀವು ದೇವರನ್ನು ಕೇಳಿಕೊಳ್ಳಬಹುದು. ದೇವರು ನಿಮಗೆ ಸಹಾಯ ಮಾಡುವರು. ನಂಬಿಕೆಯಿಂದ ದೇವರನ್ನು ಕೇಳಿರಿ - ಮತ್ತು ದೇವರು ಅದ್ಭುತವಾದ ಕಾರ್ಯಗಳನ್ನು ಮಾಡುವುದನ್ನು ನೀವು ಕಾಣುವಿರಿ. ನಾವು ಹೀಗೆ ಅವರ ಅದ್ಭುತ ಕಾರ್ಯಗಳನ್ನು ಸಾಬೀತುಪಡಿಸುತ್ತಾ ಹೋಗುತ್ತಿರುವಾಗ, ನಮ್ಮ ನಂಬಿಕೆಯು ಬಲಗೊಳ್ಳುತ್ತದೆ. ಎಲ್ಲಾ ಸಮಯದಲ್ಲಿ ದೇವರನ್ನು ಸನ್ಮಾನಿಸಿರಿ. ಅವರನ್ನು ಸನ್ಮಾನಿಸುವವರಿಗೆ ಯಾವಾಗಲೂ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಶ್ರೇಷ್ಠವಾದದ್ದು ಸಿಗುತ್ತದೆ. ನಾನು ಕ್ರೈಸ್ತನಾಗಿ ಹೊಸದಾಗಿ ಹುಟ್ಟಿದಾಗಿನಿಂದಲೂ ಇದನ್ನು ಎಷ್ಟರ ಮಟ್ಟಿಗೆ ಸಾಬೀತುಪಡಿಸಿದ್ದೇನೆಂದರೆ, ನಾನು ಈ ಕೆಳಕಂಡ ಅಂಶಗಳನ್ನು ಪ್ರಪಂಚದ ಎಲ್ಲೆಡೆ ಜನರಿಗೆ ಸಾರಿ ಹೇಳಲು ಇಚ್ಛಿಸುತ್ತೇನೆ:

  • ಪ್ರತಿಯೊಂದು ಸಂದರ್ಭದಲ್ಲಿ ದೇವರನ್ನು ಸನ್ಮಾನಿಸಿರಿ
  • ಎಲ್ಲಾ ವಿಷಯಗಳಲ್ಲಿ ದೇವರಿಗೆ ಪ್ರಥಮ ಸ್ಥಾನವನ್ನು ಕೊಡಿರಿ
  • ಎಲ್ಲಾ ವೇಳೆಯಲ್ಲಿ ನಿಮ್ಮ ಮನಸ್ಸಾಕ್ಷಿಯನ್ನು ಶುದ್ಧವಾಗಿ ಇಟ್ಟುಕೊಳ್ಳಿರಿ
  • ಹೀಗೆ ಮಾಡಿದಾಗ ಮಾತ್ರ ನೀವು ಉಪಯುಕ್ತವಾದ ಜೀವನವನ್ನು ಜೀವಿಸಬಹುದು.

    ಯಾರು ತಮ್ಮ ಪ್ರತಿಭೆಗಳು ಮತ್ತು ತಮ್ಮ ಲೌಕಿಕ ಸಾಧನೆಗಳ ಮೂಲಕ ಉಪಯುಕ್ತವಾದ ಜೀವನವನ್ನು ಜೀವಿಸಬಹುದೆಂದು ಯೋಚಿಸುತ್ತಾರೋ, ಮತ್ತು ಮೇಲೆ ಹೇಳಿದ ವಿಷಯಗಳಿಗೆ ಪ್ರಾಮುಖ್ಯತೆ ನೀಡುವುದಿಲ್ಲವೋ, ಅಂತಹ ಜನರು ಪ್ರಪಂಚದಲ್ಲಿ ಅತೀ ದೊಡ್ಡ ಮೂರ್ಖರಾಗಿದ್ದಾರೆ. ಅಂತಿಮವಾಗಿ ಇವುಗಳು ಯಾರನ್ನೂ ತೃಪ್ತಿಗೊಳಿಸಲಾರವು.

    ಯೋಹಾನ. 15ನೇ ಅಧ್ಯಾಯವು ಅದ್ಭುತವಾಗಿದೆ. "ನೆಲೆಗೊಳ್ಳುವುದು" (ಕೊಂಬೆಯು ದ್ರಾಕ್ಷಾಬಳ್ಳಿಯಲ್ಲಿ ಇರುವ ಹಾಗೆ) ಆತಂಕ ಅಥವಾ ಕಳವಳವಿಲ್ಲದೆ ಸಂಪೂರ್ಣ ವಿಶ್ರಾಂತಿಯನ್ನು ಹೊಂದಿರುವುದರ ಒಂದು ಚಿತ್ರಣವಾಗಿದೆ - ಇದು ದೇವರು ನಮ್ಮ ಜೀವಿತದ ಪ್ರತಿಯೊಂದು ವಿವರದ ಬಗ್ಗೆ ಕಾಳಜಿ ವಹಿಸುತ್ತಾರೆ ಎಂಬ ನಂಬಿಕೆಯ ಫಲಿತಾಂಶವಾಗಿದೆ. ಶ್ರಮೆ ಮತ್ತು ಕಷ್ಟಗಳು ಇದ್ದರೂ, ಆತಂಕವಾಗಲೀ ಉದ್ವೇಗವಾಗಲೀ ಇರುವುದಿಲ್ಲ. ಮರದಿಂದ ಕೊಂಬೆಗೆ ನಿರಂತರವಾಗಿ ಹರಿಯುವ ಜೀವರಸವು, ಪವಿತ್ರಾತ್ಮನ ತುಂಬುವಿಕೆಯ ನಿರಂತರ ಅಗತ್ಯತೆಯನ್ನು ತೋರಿಸುವ ಒಂದು ಚಿತ್ರಣವಾಗಿದೆ.

    ====================
    ದೇವರನ್ನು ಸನ್ಮಾನಿಸುವವರು ಯಾವಾಗಲೂ ಜೀವಿತದ ಪ್ರತಿಯೊಂದು ಕ್ಷೇತ್ರದಲ್ಲೂ ಶ್ರೇಷ್ಠವಾದುದನ್ನು ಹೊಂದುತ್ತಾರೆ
    ====================
    ಎರಡು ವಿಷಯಗಳಿಗಾಗಿ ಕರ್ತರನ್ನು ಬೇಡಿಕೊಳ್ಳಿರಿ:

    1. ಕರ್ತನ ನೀತೀಕರಣವು ಎಷ್ಟು ಪ್ರಬಲವಾಗಿದೆ ಎಂದರೆ, ನೀವು ನಿಮ್ಮ ಜೀವಿತದಲ್ಲಿ ನಿಜವಾಗಿಯೂ ಈ ದಿನದವರೆಗೆ ಪಾಪವನ್ನೇ ಮಾಡಿಲ್ಲವೆಂಬಂತೆ ಕರ್ತರು ನಿಮ್ಮನ್ನು ನೋಡುತ್ತಾರೆ ಎಂಬ ಸತ್ಯಾಂಶವನ್ನು ತನ್ನ ವಾಕ್ಯದ ಮೂಲಕ ತೋರಿಸುವುದು.

    2. ನೀವು ಎಲ್ಲಾ ಮನುಷ್ಯರ ಅಭಿಪ್ರಾಯಗಳಿಂದ ಸಂಪೂರ್ಣವಾಗಿ ಬಿಡುಗಡೆ ಪಡೆಯುವುದು.

    ಎಷ್ಟರ ಮಟ್ಟಿಗೆ ಮನುಷ್ಯರ ಅಭಿಪ್ರಾಯದ ಗುಲಾಮರಾಗಿದ್ದೇವೆಂದು ನಾವು ಅರಿತಿಲ್ಲ. ನೀವು ಮೇಲಿನ ಎರಡು ವಿಷಯಗಳ ಮೇಲೆ ಹೆಚ್ಚು ಗಮನವಿಟ್ಟು ಅದಕ್ಕಾಗಿ ಶ್ರಮಿಸಿದರೆ, ದೇವರ ಕೈಯಲ್ಲಿ ಅತಿ ಉಪಯುಕ್ತ ಪಾತ್ರೆಗಳಾಗಿ ಮಾರ್ಪಡುತ್ತೀರಿ. ನಾವು ನಮ್ಮ ಹಿಂದಿನ ಸೋಲುಗಳನ್ನು ನೆನಪಿಸಿಕೊಳ್ಳುತ್ತಾ ಅದಕ್ಕಾಗಿ ನರಳಾಡುವುದು ದೀನತೆಯ ಲಕ್ಷಣ, ಎಂದು ನಾವು ಯೋಚಿಸುವಂತೆ ಮಾಡಲು ಸೈತಾನನು ಬಹಳ ಪ್ರಯತ್ನಿಸುತ್ತಾನೆ. ನಾವು ನಮ್ಮ ಹಿಂದಿನ ಸೋಲುಗಳನ್ನು ಯಾವಾಗ ನೆನಪಿಸಿಕೊಳ್ಳಬೇಕು ಎಂದರೆ, ಇತರರನ್ನು ಕಠಿಣವಾಗಿ ನೋಡುವ ಶೋಧನೆಗೆ ಒಳಗಾದಾಗ ಮಾತ್ರ (2 ಪೇತ್ರನು 1:9). ಬೇರೆ ಸಂದರ್ಭಗಳಲ್ಲಿ ಅಲ್ಲ.

    ಇವೆರಡು ಅಂಶಗಳನ್ನು ನೀವು ಸ್ಪಷ್ಟವಾಗಿ ಅರಿತುಕೊಂಡರೆ, ನಿಮ್ಮ ಜೀವಿತವು ಒಂದು ರಾಕೆಟ್ ನಂತೆ ಜಿಗಿದು ಹಾರುತ್ತದೆ ಮತ್ತು ಯಾವುದೇ ಶಕ್ತಿಯು ನಿಮ್ಮನ್ನು ಕೆಳಕ್ಕೆ ತಳ್ಳುವುದಿಲ್ಲ. ಇವೆರಡು ಸಂಗತಿಗಳನ್ನು ತರ್ಕಬದ್ಧವಾಗಿ ಅರ್ಥಮಾಡಿಕೊಳ್ಳುವುದನ್ನು ಬಿಟ್ಟುಬಿಡಿರಿ. ಕೇವಲ ದೇವರ ವಾಕ್ಯವನ್ನು ನಂಬಿರಿ ಮತ್ತು ಅದರ ಮೇಲೆ ವಿಶ್ವಾಸವಿಡಿರಿ.

    ಯಾವಾಗಲೂ ಸ್ವ-ನಿಂದನೆ ಮತ್ತು ನಿರುತ್ಸಾಹವು ಸೈತಾನನಿಂದಲೇ ಬರುತ್ತವೆ. ನೀವು ಹಿಂದಿನ ದಿನಗಳ ಬಗ್ಗೆ ಯೋಚಿಸುತ್ತಾ ಜೀವಿಸಬಾರದು. ನಿಮ್ಮ ಹಳೆಯ ಸೋಲುಗಳ ಯೋಚನೆಯನ್ನು ನಿಲ್ಲಿಸಿರಿ - ಅದರಂತೆಯೇ ನಿಮ್ಮ ಹಳೆಯ ಜಯಗಳ ಬಗ್ಗೆಯೂ ಯೋಚಿಸಬೇಡಿರಿ. ಒಂದು ವೇಳೆ ನೀವು ಜಾರಿ ಬಿದ್ದರೆ, ತಕ್ಷಣವೇ ಮೇಲೇಳಿರಿ, ಆಲ್ಲೇ ನಿಲ್ಲದೆ ಓಟವನ್ನು ಮುಂದುವರಿಸಿರಿ. ಎಂದಿಗೂ ಓಟವನ್ನು ನಿಲ್ಲಿಸಬೇಡಿರಿ.