WFTW Body: 

"ಸಮಸ್ತವು ಆತನಿಗಾಗಿ ಇರುತ್ತದೆ" (ರೋಮಾ. 11:36) . ದೇವರು ಆದಿಯೂ ಅಂತ್ಯವೂ, ಪ್ರಾರಂಭವೂ ಸಮಾಪ್ತವೂ, ಮೊದಲನೆಯವರೂ ಕಡೆಯವರೂ ಆಗಿದ್ದಾರೆ. ಆದ್ದರಿಂದ, ನಿತ್ಯತ್ವಕ್ಕೆ ಸೇರಿದ ಎಲ್ಲ ಸಂಗತಿಗಳೂ ಅವರಿಂದ ಉತ್ಪತ್ತಿಯಾಗುತ್ತವೆ ಮತ್ತು ತಮ್ಮ ಅಂತಿಮ ಸಂಕಲ್ಪವನ್ನು ಸಹ ಅವರ ಮೂಲಕವೇ ಪೂರೈಸುತ್ತವೆ. ದೇವರು ಎಲ್ಲಾ ಸಂಗತಿಗಳನ್ನು ತಮ್ಮ ಮಹಿಮೆಗಾಗಿ ಸೃಷ್ಟಿಸಿದರು. ಅವರು ನಮ್ಮಿಂದ ಮಹಿಮೆಯನ್ನು ಬಯಸುವುದಕ್ಕೆ ಸ್ವಾರ್ಥತೆ ಕಾರಣವಲ್ಲ. ಅವರು ಸ್ವತಃ ಸಂಪೂರ್ಣವಾಗಿ ಸ್ವಾವಲಂಬಿಯಾಗಿದ್ದಾರೆ, ಮತ್ತು ನಾವು ಅವರಿಗೆ ಯಾವುದನ್ನೋ ಸಮರ್ಪಿಸಿ ಅವರ ಪರಿಪೂರ್ಣತೆಯನ್ನು ಹೆಚ್ಚಿಸಲು ಆಗುವುದಿಲ್ಲ. ಅವರನ್ನು ಮಹಿಮೆಪಡಿಸಲು ಅವರು ನಮ್ಮನ್ನು ಕರೆದಿರುವುದು ಏಕೆಂದರೆ, ನಾವು ಹೆಚ್ಚಿನ ಆಶೀರ್ವಾದ ಗಳಿಸಲು ಅದೇ ಅತ್ಯುತ್ತಮ ಮಾರ್ಗವಾಗಿದೆ. ಇಲ್ಲದಿದ್ದಲ್ಲಿ ನಾವು ಸ್ವಾರ್ಥಿಗಳಾಗುತ್ತಿದ್ದೆವು ಮತ್ತು ನಮ್ಮ ಜೀವಿತವು ಶೋಚನೀಯವಾಗಿರುತ್ತಿತ್ತು.

ದೇವರಲ್ಲಿಯೇ ಕೇಂದ್ರಿತರಾಗಿ ಇರುವುದು ದೇವರ ಸೃಷ್ಟಿಯ ಒಂದು ನಿಯಮವಾಗಿದೆ. ಈ ನಿಯಮವನ್ನು ಸ್ವಂತ ಚಿತ್ತವನ್ನು ಹೊಂದಿರುವ ನೈತಿಕ ಜೀವಿಗಳು ಮಾತ್ರ ಉಲ್ಲಂಘಿಸಬಹುದು. ನಿರ್ಜೀವ ಸೃಷ್ಟಿಯು ತನ್ನ ಸೃಷ್ಟಿಕರ್ತನಿಗೆ ಸಂತೋಷದಿಂದ ವಿಧೇಯವಾಗಿರುತ್ತದೆ ಮತ್ತು ಆತನನ್ನು ಮಹಿಮೆಪಡಿಸುತ್ತದೆ. ಆದರೆ ಆದಾಮನು ಆ ನಿಯಮವನ್ನು ಉಲ್ಲಂಘಿಸಿದನು, ಮತ್ತು ಇದರ ಪರಿಣಾಮವನ್ನು ಮಾನವ ಕುಲದ ದುರ್ಗತಿಯಲ್ಲಿ ನಾವು ನೋಡುತ್ತಿದ್ದೇವೆ.

ಕರ್ತರು ತನ್ನ ಶಿಷ್ಯರಿಗೆ ಕಲಿಸಿದ ಪ್ರಾರ್ಥನೆಯಲ್ಲಿ ಮೊಟ್ಟಮೊದಲನೆಯ ವಿನಂತಿ, "ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ," ಎಂದಾಗಿದೆ. ಇದು ಕರ್ತನಾದ ಯೇಸುವಿನ ಹೃದಯದ ಪ್ರಾಥಮಿಕ ಹಂಬಲವಾಗಿತ್ತು. ಅವರು, "ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸಿಕೋ," ಎಂದು ಪ್ರಾರ್ಥಿಸಿದರು ಮತ್ತು ಶಿಲುಬೆಯ ಮಾರ್ಗವನ್ನು ಆರಿಸಿಕೊಂಡರು, ಏಕೆಂದರೆ ಅದರಿಂದ ತಂದೆಯು ಮಹಿಮೆ ಹೊಂದಿದರು (ಯೋಹಾ. 12:27,28).

ಯೇಸುವಿನ ಜೀವಿತದಲ್ಲಿ ಒಂದು ಪರಮೋನ್ನತ ಅಭಿಲಾಷೆ - "ತಂದೆಯನ್ನು ಮಹಿಮೆಪಡಿಸುವುದು", ಅವರನ್ನು ನಡೆಸಿತು. ಅವರು ಮಾಡಿದ ಪ್ರತಿಯೊಂದು ಕಾರ್ಯವು ತಂದೆಯ ಮಹಿಮೆಗಾಗಿ ಆಗಿತ್ತು. ಅವರ ಜೀವನದಲ್ಲಿ ಪವಿತ್ರ ಕಾರ್ಯಗಳು ಮತ್ತು ಪ್ರಾಪಂಚಿಕ ಕಾರ್ಯಗಳು ಎಂಬ ವಿಂಗಡನೆ ಇರಲಿಲ್ಲ. ಅವರಿಗೆ ಎಲ್ಲ ಕಾರ್ಯಗಳೂ ಪವಿತ್ರವಾಗಿದ್ದವು. ಅವರು ಬೋಧಿಸುವಾಗ ಮತ್ತು ರೋಗಿಗಳನ್ನು ಗುಣಪಡಿಸುವಾಗ ದೇವರನ್ನು ಮಹಿಮೆಪಡಿಸಿದಂತೆಯೇ, ಕುರ್ಚಿಗಳನ್ನು ಮತ್ತು ಮೇಜುಗಳನ್ನು ತಯಾರಿಸುವಾಗಲೂ ದೇವರನ್ನು ಮಹಿಮೆಪಡಿಸಿದರು. ಅವರಿಗೆ ಪ್ರತಿ ದಿನವೂ ಸಮಾನವಾಗಿ ಪವಿತ್ರವಾಗಿತ್ತು; ಮತ್ತು ದಿನನಿತ್ಯದ ಜೀವನಾವಶ್ಯಕತೆಗಳಿಗೆ ಖರ್ಚು ಮಾಡುವ ಹಣವು, ದೇವರ ಕೆಲಸಕ್ಕೆ ಅಥವಾ ಬಡವರಿಗೆ ದಾನಮಾಡಿದ ಹಣದಷ್ಟೇ ಪವಿತ್ರವಾಗಿತ್ತು.

ಯೇಸುವಿನ ಜೀವನದ ಎಲ್ಲಾ ವೇಳೆಯಲ್ಲಿ ಅವರ ಹೃದಯದಲ್ಲಿ ಪರಿಪೂರ್ಣವಾದ ಸಮಾಧಾನವಿತ್ತು, ಏಕೆಂದರೆ ಅವರ ಒಂದೇ ಉದ್ದೇಶ ತಂದೆಯನ್ನು ಮಹಿಮೆಪಡಿಸುವುದಾಗಿತ್ತು ಮತ್ತು ತಂದೆಯ ಮೆಚ್ಚುಗೆಯನ್ನು ಮಾತ್ರ ಅವರು ಬಯಸಿದರು. ಅವರು ತನ್ನ ತಂದೆಯ ಮುಖದ ಮುಂದೆ ಜೀವಿಸಿದರು ಮತ್ತು ಮಾನವರ ಮಾನ್ಯತೆಯನ್ನು ಅಥವಾ ಹೊಗಳಿಕೆಯನ್ನು ಅಪೇಕ್ಷಿಸಲಿಲ್ಲ. ಯೇಸುವು ಹೇಳಿದ್ದು ಏನೆಂದರೆ, "ಯಾರು (ಬೋಧಿಸುವಾಗ) ತಾನೇ ಕಲ್ಪಿಸಿ ಹೇಳುತ್ತಾನೋ, ಅವನು ತನಗೆ ಸನ್ಮಾನ ಸಿಗಬೇಕೆಂದು ಅಪೇಕ್ಷಿಸುತ್ತಾನೆ" (ಯೋಹಾ. 7:18).

ಒಬ್ಬ ಶರೀರಭಾವದ ಕ್ರೈಸ್ತನು ದೇವರನ್ನು ಮಹಿಮೆಪಡಿಸುವಂತೆ ಕಾಣಿಸಿದರೂ ಅಥವಾ ಹಾಗೆ ನಟನೆ ಮಾಡಿದರೂ, ಆತನು ಅಂತರಾಳದಲ್ಲಿ ನಿಜವಾಗಿ ತನ್ನ ಸ್ವಂತ ಗೌರವವನ್ನೇ ಬಯಸುತ್ತಾನೆ. ಆದರೆ ಯೇಸುವು ಸ್ವ-ಗೌರವವನ್ನು ಅಪೇಕ್ಷಿಸಲೇ ಇಲ್ಲ. ಮಾನವನ ಚಾತುರ್ಯದಿಂದ ಆರಂಭವಾದದ್ದು ಮತ್ತು ಮಾನವನ ಸೂಕ್ಷ್ಮ ಬುದ್ಧಿ ಮತ್ತು ಪ್ರತಿಭೆಯ ಮೂಲಕ ನಡೆಸಲ್ಪಟ್ಟದ್ದು, ಯಾವಾಗಲೂ ಕೊನೆಯಲ್ಲಿ ಮಾನವನನ್ನು ಮಹಿಮೆಪಡಿಸುತ್ತದೆ. ಪ್ರಾಣದಿಂದ ಆರಂಭವಾದದ್ದು ಪ್ರಾಣಿಯನ್ನು ಮಾತ್ರ ಮಹಿಮೆಪಡಿಸುತ್ತದೆ. ಆದರೆ ಭೂಮಿಯಲ್ಲಿ ಅಥವಾ ಆಕಾಶದಲ್ಲಿ ಯಾವ ಮನುಷ್ಯನಿಗೂ ಮಾನ್ಯತೆ ಅಥವಾ ಮಹಿಮೆಯನ್ನು ತರುವಂತ ಯಾವುದೇ ಸಂಗತಿಯು ಮುಂದೆ ಬರಲಿರುವ ಯುಗಾಂತರದ ನಿತ್ಯತ್ವದಲ್ಲಿ ಇರುವುದಿಲ್ಲ. ಕೇವಲ ದೇವರಿಂದ, ದೇವರ ಮೂಲಕ ಮತ್ತು ದೇವರಿಗಾಗಿ ಇರುವಂತ ಪ್ರತಿಯೊಂದು ಸಂಗತಿಯು ಕಾಲದ ಪರಿಮಿತಿಯನ್ನು ಮೀರಿ, ನಿತ್ಯತ್ವದ ಯುಗವನ್ನು ಪ್ರವೇಶಿಸುತ್ತದೆ.

ದೇವರು ಒಂದು ಕಾರ್ಯದ ಬೆಲೆ ಮತ್ತು ಯೋಗ್ಯತೆಯನ್ನು ಪರಿಗಣಿಸುವಾಗ, ಆ ಕಾರ್ಯದ ಹಿನ್ನೆಲೆಯ ಉದ್ದೇಶ ಏನಾಗಿತ್ತೆಂದು ನೋಡುತ್ತಾರೆ. ನಾವು ಮಾಡುವ ಕಾರ್ಯಕ್ಕೆ ಪ್ರಾಮುಖ್ಯತೆ ಇದೆ, ಆದರೆ ನಾವು ಯಾವ ಉದ್ದೇಶದಿಂದ ಅದನ್ನು ಮಾಡಿದೆವು, ಎಂಬುದಕ್ಕೆ ಇನ್ನೂ ಹೆಚ್ಚಿನ ಪ್ರಾಮುಖ್ಯತೆ ಇದೆ.