ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ನಾಯಕರಿಗೆ ತಿಳಿಯುವುದು
WFTW Body: 

ಪ್ರಕಟನೆಯ ಪುಸ್ತಕವು ನೀಡಿರುವ ಪರಲೋಕದ ಏಳು ಇಣುಕು ನೋಟಗಳಲ್ಲಿ, ಪ್ರತೀ ಬಾರಿಯೂ ಪರಲೋಕ ನಿವಾಸಿಗಳು ದೇವರನ್ನು ಮಹಾ ಶಬ್ದದಿಂದ ಎಡೆಬಿಡದೆ ಸ್ತುತಿಸುವುದನ್ನು ಕಾಣುತ್ತೇವೆ - ಕೆಲವೊಮ್ಮೆ ಆ ಶಬ್ದವು ಗುಡುಗಿನಂತೆ, ಮತ್ತು ಮಹಾ ಜಲ ಪ್ರವಾಹದ ಘೋಷದಂತೆ ಇತ್ತು. ಪರಲೋಕದ ವಾತಾವರಣವು ಇಂಥದ್ದಾಗಿದೆ - ಅಲ್ಲಿ ನಿರಂತರವಾದ ಸ್ತೋತ್ರ ಇರುತ್ತದೆ, ಯಾವುದೇ ದೂರುಗಳು ಮತ್ತು ಬೇಡಿಕೆಗಳು ಇರುವುದಿಲ್ಲ. ಪವಿತ್ರಾತ್ಮನು ಇಂತಹ ವಾತಾವರಣವನ್ನು ನಮ್ಮ ಹೃದಯಗಳಲ್ಲಿ, ನಮ್ಮ ಮನೆಗಳಲ್ಲಿ ಹಾಗೂ ನಮ್ಮ ಸಭೆಗಳಲ್ಲಿ ಉಂಟುಮಾಡಲು ಇಚ್ಛಿಸುತ್ತಾನೆ. ಇದರ ಮೂಲಕವೇ ಈ ಜಾಗಗಳಿಂದ ಸೈತಾನನು ಹೊರಕ್ಕೆ ದಬ್ಬಲ್ಪಡುವನು.

ಪ್ರಕಟನೆ 4:10 ರಲ್ಲಿ ಪರಲೋಕದ ಒಂದು ವಿಶೇಷತೆಯು ನೋಡಲಿಕ್ಕೆ ಸಿಗುತ್ತದೆ. ನಾವು ಅಲ್ಲಿ ಓದುವುದು ಏನೆಂದರೆ, ಹಿರಿಯರು "ತಮ್ಮ ಕಿರೀಟಗಳನ್ನು ದೇವರ ಪಾದದ ಬಳಿ ಹಾಕುತ್ತಾರೆ", ಎಂದು. ಪರಲೋಕದಲ್ಲಿ ಯೇಸುವಿನ ಹೊರತಾಗಿ ಇನ್ಯಾರೂ ತಮ್ಮ ತಲೆಯ ಮೇಲೆ ಕಿರೀಟಗಳನ್ನು ಇರಿಸಿಕೊಳ್ಳುವುದಿಲ್ಲ. ಅಲ್ಲಿ ಮಿಕ್ಕವರಾದ ನಾವೆಲ್ಲರೂ ಸಾಮಾನ್ಯ ಸಹೋದರ ಸಹೋದರಿಯರು ಆಗಿರುತ್ತೇವೆ. ಪರಲೋಕದಲ್ಲಿ ವಿಶೇಷ ಸಹೋದರ ಸಹೋದರಿಯರು ಇರುವುದಿಲ್ಲ. ಸಭೆಯಲ್ಲಿ ವಿಶೇಷ ಸಹೋದರರು ಮತ್ತು ಸಹೋದರಿಯರು ಆಗಲು ಬಯಸುವ ಜನರು ನರಕದ ವಾತಾವರಣವನ್ನು ಸಭೆಯ ಒಳಕ್ಕೆ ತರುತ್ತಾರೆ. ತಂದೆಯ ಸನ್ನಿಧಿಯಲ್ಲಿ ನಿಲ್ಲುವಾಗಲೂ ಸಹ, ನಾವು ಯಾವುದೇ ರೀತಿಯಲ್ಲಿ ನಮ್ಮನ್ನೇ ಹೆಚ್ಚಳ ಪಡಿಸಿಕೊಳ್ಳುವುದಿಲ್ಲ. ನಾವು ನಮ್ಮಲ್ಲಿರುವ ಎಲ್ಲವನ್ನೂ ಅವರ ಮುಂದೆ ಹಾಕಿ ಬಿಡುತ್ತೇವೆ. ಪರಲೋಕದಲ್ಲಿ ಯಾರೂ ಯಾವುದರ ಬಗ್ಗೆಯೂ (ಅವರು ಪಡೆದುಕೊಂಡ ಕಿರೀಟವೂ ಸೇರಿದಂತೆ) "ಇದು ನನ್ನದು," ಎಂದು ಯಾವತ್ತೂ ಹೇಳುವುದಿಲ್ಲ. ನಮ್ಮ ಸಭೆಗಳಲ್ಲಿ ಪರಲೋಕದ ವಾತಾವರಣವು ಹರಡಲು ಆರಂಭಿಸಿದಾಗ, ನಾವೂ ಸಹ ನಮ್ಮ ಯಾವುದೇ ಸಂಗತಿಯ ಬಗ್ಗೆಯೂ, "ಇದು ನನ್ನದು," ಎಂದು ಹೇಳುವುದಿಲ್ಲ. ಪ್ರತಿಯೊಂದೂ ದೇವರ ಸ್ವತ್ತು ಎಂದು ಪರಿಗಣಿಸಲ್ಪಡುತ್ತದೆ, ಹಾಗಾಗಿ ಅವೆಲ್ಲವೂ ಭೂಲೋಕದಲ್ಲಿ ದೇವರ ರಾಜ್ಯದ ಹೆಚ್ಚಳಕ್ಕಾಗಿ ಧಾರಾಳವಾಗಿ ದೊರಕುತ್ತವೆ.

ಪರಲೋಕದಲ್ಲಿ ದೇವರ ಚಿತ್ತವು ಹೇಗೆ ನೆರವೇರುತ್ತದೆ? ನಾನು ನಾಲ್ಕು ವಿಷಯಗಳನ್ನು ತೋರಿಸಲು ಬಯಸುತ್ತೇನೆ. ಮೊದಲನೆಯದಾಗಿ, ದೇವದೂತರು ಹಗಲಿರುಳು ದೇವರ ಅಜ್ಞೆಗಳಿಗಾಗಿ ಅವರ ಮುಂದೆ ಕಾದಿರುತ್ತಾರೆ. ಅವರು ಮೊದಲು ದೇವರ ಆಜ್ಞೆಗಾಗಿ ಕಾಯುತ್ತಾರೆ - ಅನಂತರ ಆ ಕೆಲಸವನ್ನು ಕೈಗೊಳ್ಳುತ್ತಾರೆ. ಇದರಂತೆಯೇ, ನಮ್ಮ ಪ್ರಾರ್ಥನೆಯಲ್ಲಿ, "ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ" (ಮತ್ತಾ. 6:10) ಎಂದು ಹೇಳುವುದರ ಅರ್ಥ, ನಾವು ಎಲ್ಲಕ್ಕೂ ಮೊದಲು ದೇವರು ನಮಗೆ ಏನು ಹೇಳಲು ಬಯಸುತ್ತಾರೆಂದು ಕೇಳಲು ಬಯಸುತ್ತೇವೆ, ಎಂದು. ಎರಡನೆಯದಾಗಿ, ದೇವರು ಮಾತನಾಡಿದಾಗ, ದೇವದೂತರು ಒಡನೆಯೇ ಅದನ್ನು ಪಾಲಿಸುತ್ತಾರೆ. ಮತ್ತು ಮೂರನೆಯದಾಗಿ, ಪರಲೋಕದಲ್ಲಿ ದೇವರು ಒಂದು ಆಜ್ಞೆಯನ್ನು ನೀಡಿದಾಗ, ಅದನ್ನು ಸಂಪೂರ್ಣವಾಗಿ ಕೈಗೊಳ್ಳಲಾಗುತ್ತದೆ. ಮತ್ತು ಕೊನೆಯದಾಗಿ, ದೇವದೂತರು ಉಲ್ಲಾಸ ಚಿತ್ತದಿಂದ ವಿಧೇಯರಾಗುತ್ತಾರೆ.

ಪರಲೋಕದಲ್ಲಿ, ಮಧುರ ಅನ್ಯೋನ್ಯತೆ ಇದೆ. ಅಲ್ಲಿ ಇತರರ ಮೇಲೆ ಯಾವುದೇ ವಿಧವಾದ ದೊರೆತನ, ಬಲಾತ್ಕಾರಗಳು ಇರುವುದಿಲ್ಲ. ಅಲ್ಲಿ ಎಲ್ಲರೂ ಇತರರ ಸೇವಕರು ಆಗಿರುತ್ತಾರೆ. ಪರಲೋಕದಲ್ಲಿ ಒಂದು ಅಪೂರ್ವವಾದ ವಾತಾವರಣ ಇರುವದಕ್ಕೆ ಕಾರಣ, ಅಲ್ಲಿ ದೇವರು ತಂದೆಯಾಗಿದ್ದಾರೆ. ಅವರು ಜನರನ್ನು ನಿಯಂತ್ರಿಸುವುದಿಲ್ಲ, ಆದರೆ ಅವರಿಗೆ ಪ್ರೀತಿಪೂರ್ವಕವಾಗಿ ಮಾರ್ಗದರ್ಶನ ನೀಡಿ, ಅವರ ಸೇವೆ ಮಾಡುತ್ತಾರೆ. ನಮ್ಮ ಹೃದಯದಲ್ಲೂ ಈ ಸ್ವಭಾವವು ಬೇರೂರಬೇಕು. ಈಗ ನಾವು ಯಥಾರ್ಥರಾಗಿ ಜೀವಿಸಿದರೆ, ಪರಲೋಕದಲ್ಲಿ ನಮಗೆ ಕಿರೀಟಗಳನ್ನು ಪಡೆಯುವ ವಾಗ್ದಾನ ನೀಡಲಾಗಿದೆ. ಅದು ಹೇಗಿರುತ್ತದೆ? ಅಲ್ಲಿ ನಾವು ಜನರ ಮೇಲೆ ಅಧಿಕಾರ ಚಲಾಯಿಸುತ್ತೇವೆಂದು ಇದರ ಅರ್ಥವೋ? ಇಲ್ಲ, ಖಂಡಿತವಾಗಿ ಹಾಗಲ್ಲ. ಇದರ ಅರ್ಥವೇನೆಂದರೆ, ನಾವು ಈ ಲೋಕದಲ್ಲಿ ನಮ್ಮ ಸಹೋದರರ ಸೇವೆ ಮಾಡಲು ಹಂಬಲಿಸಿದರೂ, ಹಲವಾರು ಅಡಚಣೆಗಳಿಂದಾಗಿ ಇದನ್ನು ಉತ್ತಮ ರೀತಿಯಲ್ಲಿ ಮಾಡಲು ಆಗದಿದ್ದಲ್ಲಿ, ಪರಲೋಕದಲ್ಲಿ ಎಲ್ಲಾ ಅಡೆತಡೆಗಳು ನಿವಾರಿಸಲ್ಪಟ್ಟಾಗ, ನಾವು ಇತರರ ಸೇವೆಯನ್ನು ಬಹಳ ಉತ್ತಮ ರೀತಿಯಲ್ಲಿ ಮಾಡಬಹುದು. ಈ ರೀತಿಯಾಗಿ ನಮ್ಮ ಹೃದಯದ ಹಾರೈಕೆಯು ಈಡೇರುತ್ತದೆ.

ಪರಲೋಕದಲ್ಲಿ ಅತಿ ಶ್ರೇಷ್ಠ ವ್ಯಕ್ತಿ ಸ್ವತಃ ಯೇಸುವೇ ಆಗಿರುತ್ತಾರೆ, ಮತ್ತು ಅಲ್ಲಿನ ಅತ್ಯುತ್ತಮ ಸೇವಕರೂ ಸಹ ಯೇಸುವೇ ಆಗಿರುತ್ತಾರೆ. ಸದಾಕಾಲವೂ ಅವರ ಆತ್ಮವು ಸೇವೆಯ ಆತ್ಮವಾಗಿರುತ್ತದೆ. ದೇವರು ಕ್ರಿಸ್ತಸಭೆಯನ್ನು ಭೂಲೋಕದಲ್ಲಿ ಇರಿಸಿರುವ ಉದ್ದೇಶ, ಇಲ್ಲಿ ಪರಲೋಕದ ಒಂದು ಚಿಕ್ಕ ಮಾದರಿಯನ್ನು ಎಲ್ಲರೂ ರುಚಿಸಿ ನೋಡಲಿ, ಎಂದಾಗಿದೆ. ಯಾವುದೇ ಒಂದು ಸಭೆಯಲ್ಲಿ ಅತೀ ಅಮೂಲ್ಯ ಸಹೋದರ ಮತ್ತು ಸಹೋದರಿ ಯಾರೆಂದರೆ, ಆ ಸಭೆಗೆ ಇಂತಹ ಪರಲೋಕದ ವಾತಾವರಣವನ್ನು ತಂದು, ಅಲ್ಲಿರುವ ಸಹೋದರ ಸಹೋದರಿಯರ ನಡುವೆ ಅನ್ಯೋನ್ಯತೆ ಹಾಗೂ ಐಕ್ಯತೆಯನ್ನು ಬೆಳೆಸುವಂಥವರು. ಹೀಗೆ ಮಾಡುವ ವ್ಯಕ್ತಿ ಆ ಸಭೆಯ ಹಿರಿಯ ಸಹೋದರನೇ ಆಗಿರಬೇಕಿಲ್ಲ. ನಮ್ಮಲ್ಲಿ ಪ್ರತಿಯೊಬ್ಬರಿಗೂ ಇಂತಹ ಅಮೂಲ್ಯ ಸಹೋದರರು ಮತ್ತು ಸಹೋದರಿಯರು ಆಗುವ ಅವಕಾಶವಿದೆ.

ಒಂದು ಸಭೆಯಲ್ಲಿ ಇಂತಹ ಒಬ್ಬ ಸಹೋದರ ಅಥವಾ ಸಹೋದರಿ ಇದ್ದಲ್ಲಿ, ವಾತಾವರಣ ಹೇಗಿರುತ್ತದೆಂದು ಯೋಚಿಸಿರಿ. ಆ ವ್ಯಕ್ತಿಯು ಸಭೆಯ ಒಂದು ಕೂಟಕ್ಕೆ ಅಥವಾ ಒಂದು ಮನೆಯ ಒಳಕ್ಕೆ ಬಂದಾಗ, ಅಲ್ಲಿ ನಿಮಗೆ ತಂಪಾದ ಗಾಳಿ ಬೀಸಿದ ಅನುಭವ ಆಗುತ್ತದೆ. ಇಂತಹ ಒಬ್ಬಾತ/ ಒಬ್ಬಾಕೆ ಆ ಸಭೆಯಲ್ಲಿ ಎಷ್ಟು ಅಮೂಲ್ಯ ಮತ್ತು ಉಪಯುಕ್ತ ವ್ಯಕ್ತಿ ಆಗಿರುತ್ತಾರೆ! ಅವರು ನಿಮ್ಮನ್ನು ಭೇಟಿ ಮಾಡಿ, ನಿಮ್ಮೊಂದಿಗೆ ಕೇವಲ ಐದು ನಿಮಿಷ ಕಳೆದರೆ, ಅದು ನಿಮ್ಮನ್ನು ಉತ್ಸಾಹ ಪಡಿಸುತ್ತದೆ. ಆ ಐದು ನಿಮಿಷಗಳ ಅನುಭವವು ನಿಮಗೆ ಪರಲೋಕವೇ ಮನೆಗೆ ಬಂತೇನೋ ಎಂಬ ಭಾವನೆಯನ್ನು ತರುತ್ತದೆ! ಅವರು ಭೇಟಿ ಮಾಡಿದಾಗ, ನಿಮಗೆ ಪ್ರಸಂಗ ಮಾಡದಿರಬಹುದು ಅಥವಾ ದೇವರ ವಾಕ್ಯದಿಂದ ನಿಮಗೆ ಒಂದು ಹೊಸ ಪ್ರಕಟನೆಯನ್ನು ಕೊಡದಿರಬಹುದು. ಆದರೆ ಆತನಲ್ಲಿ ನಿಜವಾದ ಪರಿಶುದ್ಧತೆ ನಿಮಗೆ ಕಾಣಿಸಿತು. ಅವನಲ್ಲಿ ಬೇಸರ ಅಥವಾ ದುಃಖ ಇರಲಿಲ್ಲ ಮತ್ತು ಅವನು ಯಾರನ್ನೂ ದೂಷಿಸಲಿಲ್ಲ.