ಒಬ್ಬ ವ್ಯಕ್ತಿಯು ತಾನು ಪರಿಶುದ್ಧತೆಯನ್ನು ಹೊಂದಿದ್ದೇನೆ ಎಂಬುದಾಗಿ ಹೇಳಿಕೊಳ್ಳಬಹುದು, ಆದರೆ ಆತನು ದೈವಿಕ ಪ್ರೀತಿಯನ್ನು ಪ್ರಕಟಪಡಿಸದಿದ್ದರೆ, ಆಗ ಅವನಲ್ಲಿರುವಂಥದ್ದು ಯಥಾರ್ಥವಾದ ಪವಿತ್ರತೆಯಲ್ಲ, ಅದು ಫರಿಸಾಯರ ನೀತಿವಂತಿಕೆಯಾಗಿದೆ. ಇನ್ನು ಕೆಲವರು ತಾವು ಎಲ್ಲರನ್ನೂ ವಿಶೇಷವಾಗಿ ಪ್ರೀತಿಸುತ್ತೇವೆಂದು ಹೇಳಿಕೊಳ್ಳಬಹುದು, ಆದರೆ ಅವರ ಜೀವನದಲ್ಲಿ ಪರಿಶುದ್ಧತೆಯಾಗಲೀ, ನೀತಿವಂತಿಕೆಯಾಗಲೀ ಇಲ್ಲವಾದಲ್ಲಿ, ಅವರೂ ಸಹ ಭ್ರಾಂತಿಯಲ್ಲಿದ್ದಾರೆ ಮತ್ತು ತಮ್ಮ ಮನಸ್ಸಿನ ಹುಚ್ಚು ಕಲ್ಪನೆಗಳನ್ನು ದೈವಿಕ ಪ್ರೀತಿಯೆಂದು ತಪ್ಪಾಗಿ ಭಾವಿಸಿ ವಂಚಿಸಲ್ಪಟ್ಟಿದ್ದಾರೆ.
ಫರಿಸಾಯರಲ್ಲಿ ಒಂದು ವಿಧವಾದ ಗಡುಸಾದ ಮತ್ತು ಒಣಗಿಹೋದ ನೀತಿವಂತಿಕೆಯಿತ್ತು. ಅವರು ಎಲುಬುಗೂಡುಗಳಂತೆ - ಕಠಿಣವಾಗಿ ಮತ್ತು ಅಸಹ್ಯವಾಗಿ - ಕಂಡುಬರುತ್ತಿದ್ದರು. ಅವರು ಕೆಲವು ಸತ್ಯಾಂಶಗಳನ್ನು ಹೊಂದಿದ್ದರು, ಆದರೆ ಅವೆಲ್ಲವೂ ವಿರೂಪಗೊಂಡಿದ್ದವು ಮತ್ತು ಬಾತುಕೊಂಡಿದ್ದವು.
ಯೇಸುವಿನಲ್ಲಿ ಎಲ್ಲಾ ಸತ್ಯವೂ ನೆಲೆಗೊಂಡಿತ್ತು. ಆತನು ಫರಿಸಾಯರಿಗಿಂತ ಹೆಚ್ಚಾಗಿ ದೇವರ ಧರ್ಮಶಾಸ್ತ್ರದಲ್ಲಿ ಬರೆಯಲ್ಪಟ್ಟಿದ್ದ ಒಂದೊಂದು ಚುಕ್ಕೆಯನ್ನೂ ಮತ್ತು ಒಂದೊಂದು ಒತ್ತಕ್ಷರವನ್ನೂ ಸಮರ್ಥಿಸಿ ಪ್ರತಿಪಾದಿಸಿದನು. ಆದರೆ ಆತನು ಕೇವಲ ಎಲುಬಾಗಿರಲಿಲ್ಲ. ಎಲುಬುಗಳ ಮೇಲೆ ಮಾಂಸವು ಆವರಿಸಿತ್ತು, ಏಕೆಂದರೆ ದೇವರು ಮಾನವನನ್ನು ಸೃಷ್ಟಿಸಿದಾಗ ಆ ಉದ್ದೇಶವನ್ನು ಇಟ್ಟು ಕೊಂಡಿದ್ದರು. ಸತ್ಯಕ್ಕೆ ಪ್ರೀತಿಯ ಹೊದಿಕೆಯಿರುತ್ತದೆ. ಯೇಸುವು ಸತ್ಯವನ್ನೇ ನುಡಿದನು, ಆದರೆ ಆತನ ಮಾತು ಪ್ರೀತಿಯಿಂದ ಕೂಡಿತ್ತು (ಎಫೆ. 4:15). ಆತನ ಮಾತಿನಲ್ಲಿ ಅಧಿಕಾರವಿತ್ತು, ಆದರೆ ಅದರಲ್ಲಿ ಕರುಣೆಯೂ ಕೂಡಿತ್ತು (ಲೂಕ. 4:22,36).
ಪವಿತ್ರಾತ್ಮನು ನಮಗೆ ಇದೇ ಸ್ವಭಾವವನ್ನು ತೋರಿಸಿಕೊಡಲು ಇಚ್ಛಿಸುತ್ತಾನೆ ಮತ್ತು ಅದು ನಮ್ಮ ಮೂಲಕ ಇತರರಿಗೆ ಪ್ರಕಟವಾಗಬೇಕೆಂಬ ಉದ್ದೇಶದಿಂದ ಆತನು ನಮ್ಮ ಸಂಗಡ ಮಾತನಾಡುತ್ತಾನೆ.
ದೇವರು ಪ್ರೀತಿಸ್ವರೂಪಿಯಾಗಿದ್ದಾರೆ. ಇದರ ಅರ್ಥ, ದೇವರ ಕಾರ್ಯಗಳಲ್ಲಿ ಪ್ರೀತಿಯು ಕಂಡುಬರುತ್ತದೆ ಎಂದಷ್ಟೇ ಅಲ್ಲ. ದೇವರ ಮೂಲ ಸ್ವರೂಪವೇ ಪ್ರೀತಿಯಾಗಿದೆ. ಯೇಸುವಿನಲ್ಲಿ ಕಂಡು ಬಂದ ದೇವರ ಮಹಿಮೆಯು ಇದನ್ನು ಸ್ಪಷ್ಟವಾಗಿ ತೋರಿಸಿಕೊಡುತ್ತದೆ. ಯೇಸುವು ಕೇವಲ ಪ್ರೀತಿಯ ಕ್ರಿಯೆಗಳನ್ನು ಮಾಡಲಿಲ್ಲ. ಹೋದಲ್ಲೆಲ್ಲಾ "ಉಪಕಾರಗಳನ್ನು ಮಾಡುವುದು"ಆತನ ಸ್ವಭಾವವಾಗಿತ್ತು (ಅ.ಕೃ. 10:38). ಆದರೆ ಇದಕ್ಕೆ ಕಾರಣ ಯೇಸುವಿನ ಹೃದಯದಲ್ಲಿ ದೇವರ ಪ್ರೀತಿರಸವು ಧಾರಾಳವಾಗಿ ಸುರಿಸಲ್ಪಟ್ಟಿತ್ತು.
"ಒಬ್ಬ ಮನುಷ್ಯನನ್ನು ಪ್ರೀತಿಸುವುದು ಎಂದರೆ, ಅವನನ್ನು ದೇವರ ದೃಷ್ಟಿಕೋನದಿಂದ - ಅನುಕಂಪದಿಂದ - ನೋಡುವುದು."
ಪರಿಶುದ್ಧತೆ ಮತ್ತು ದೀನತೆಯಂತೆಯೇ, ಪ್ರೀತಿಯೂ ಸಹ ನಮ್ಮ ಅಂತರ್ಯದಿಂದ ಬರುವಂಥದ್ದಾಗಿದೆ. ದೇವರ ಆತ್ಮನಿಂದ ತುಂಬಿಸಲ್ಪಟ್ಟ ಮನುಷ್ಯನ ಹೊಟ್ಟೆಯೊಳಗಿನಿಂದ (ಅಂತರ್ಯದಿಂದ) ಜೀವಕರವಾದ ನದಿಗಳು ಹರಿಯುವವು (ಯೋಹಾ. 7:38,39). ನಮ್ಮ ಆಲೋಚನೆಗಳು ಹಾಗೂ ಮನೋಭಾವಗಳು (ನಾವು ಅವುಗಳನ್ನು ಎಂದಿಗೂ ವ್ಯಕ್ತಪಡಿಸದಿದ್ದರೂ ಸಹ) ನಮ್ಮ ಮಾತುಗಳು, ಕಾರ್ಯಗಳು ಹಾಗೂ ನಮ್ಮ ವ್ಯಕ್ತಿತ್ವಕ್ಕೆ ಒಂದು ವಾಸನೆಯನ್ನು ನೀಡುತ್ತವೆ. ಇತರರು ಇದನ್ನು ಸುಲಭವಾಗಿ ಗ್ರಹಿಸಬಹುದು. ಇತರರ ಕುರಿತಾದ ನಮ್ಮ ಆಲೋಚನೆಯಲ್ಲಿ ಮತ್ತು ಮನೋಭಾವದಲ್ಲಿ ಸ್ವಾರ್ಥತೆ ಹಾಗೂ ದೂಷಣೆಯಿದ್ದರೆ, ಪ್ರೀತಿಯ ಮಾತುಗಳು ಮತ್ತು ಕ್ರಿಯೆಗಳು ಯಾವ ಲೆಕ್ಕಕ್ಕೂ ಬರುವುದಿಲ್ಲ. ದೇವರು ನಮ್ಮ "ಅಂತರ್ಯದಲ್ಲಿ ಸತ್ಯವನ್ನು"ಬಯಸುತ್ತಾರೆ (ಕೀರ್ತ. 51:6).
ಯೇಸುವು ಎಲ್ಲಾ ಮನುಷ್ಯರನ್ನು ಅಮೂಲ್ಯರೆಂದು ಪರಿಗಣಿಸಿದರು ಮತ್ತು ಹಾಗಾಗಿ ಅವರು ಎಲ್ಲಾ ಮನುಷ್ಯರನ್ನು ಗೌರವಿಸಿದರು. ದೇವಭಕ್ತರು, ಗಣ್ಯ ವ್ಯಕ್ತಿಗಳು ಮತ್ತು ಬುದ್ಧಿವಂತರು, ಇವರೆಲ್ಲರನ್ನು ಗೌರವಿಸುವುದು ಸುಲಭ. ನಾವು ಕ್ರಿಸ್ತನಲ್ಲಿ ನಮ್ಮ ಸಹ-ವಿಶ್ವಾಸಿಗಳಾಗಿರುವ ಎಲ್ಲರನ್ನು ಪ್ರೀತಿಸಿದರೆ, ಆಗ ನಾವು ಅತಿ ಉನ್ನತ ಮಟ್ಟವನ್ನು ತಲುಪಿದ್ದೇವೆಂದು ಅಂದುಕೊಳ್ಳಬಹುದು. ಆದರೆ ಯೇಸುವು ಎಲ್ಲಾ ಮಾನವರನ್ನು ಪ್ರೀತಿಸಿದ್ದರಲ್ಲಿ ದೇವರ ಮಹಿಮೆಯನ್ನು ಕಾಣಬಹುದು. ಯೇಸುವು ಜನರ ಬಡತನ, ಅಜ್ಞಾನ, ಕುರೂಪ ಅಥವಾ ಅಸಭ್ಯತೆಗಾಗಿ ಯಾರನ್ನೂ ಎಂದೂ ಹೀನೈಸಲಿಲ್ಲ. ಒಬ್ಬ ಮನುಷ್ಯನ ಪ್ರಾಣವು ಇಡೀ ಲೋಕ ಮತ್ತು ಅದರ ಸಕಲ ಸಂಪತ್ತಿಗಿಂತ ಹೆಚ್ಚಿನ ಬೆಲೆಯುಳ್ಳದ್ದೆಂದು ಯೇಸುವು ನಿಖರವಾಗಿ ಹೇಳಿದರು (ಮಾರ್ಕ. 8:36). ಅವರು ಮನುಷ್ಯನನ್ನು ಇಷ್ಟು ಅಮೂಲ್ಯನೆಂದು ಪರಿಗಣಿಸಿದರು. ಆದ್ದರಿಂದ ಅವರು ಎಲ್ಲಾ ಮನುಷ್ಯರಲ್ಲಿ ಸಂತೋಷಪಟ್ಟರು. ಜನರು ಸೈತಾನನಿಂದ ವಂಚಿಸಲ್ಪಟ್ಟು, ಸೆರೆ ಹಿಡಿಯಲ್ಪಟ್ಟದ್ದನ್ನು ನೋಡಿದ ಅವರು, ಅವರನ್ನು ಬಿಡುಗಡೆ ಮಾಡಬೇಕೆಂದು ತದೇಕಚಿತ್ತದಿಂದ ಹಾರೈಸಿದರು.
ಜನರು ಲೌಕಿಕ ವಸ್ತುಗಳಿಗಿಂತ ಎಷ್ಟೋ ಹೆಚ್ಚು ಅಮೂಲ್ಯರೆಂದು ಯೇಸುವು ತಿಳಿದಿದ್ದರು. ಅವರು ಮನುಷ್ಯರನ್ನು ಅಪಾರವಾಗಿ ಪ್ರೀತಿಸಿ, ಮನುಷ್ಯರೊಂದಿಗೆ ತನ್ನನ್ನು ಸಂಪೂರ್ಣವಾಗಿ ಗುರುತಿಸಿಕೊಂಡರು ಮತ್ತು ತನಗೆ ಜನರು ಬೇಕಾಗಿದ್ದಾರೆಂದು ತೋರಿಸಿಕೊಟ್ಟರು. ಯೇಸುವು ಜನರ ಕಷ್ಟಗಳಲ್ಲಿ ತಾನೂ ಭಾಗಿಯಾಗಿ, ಶೋಷಿಸಲ್ಪಟ್ಟ ಜನರಿಗೆ ಕರುಣೆ ತೋರಿಸಿ, ಜೀವನದ ಹೋರಾಟಗಳಲ್ಲಿ ಸೋತಿದ್ದವರನ್ನು ಪ್ರೋತ್ಸಾಹಿಸಿದರು. ಅವರು ಎಂದಿಗೂ ಯಾವುದೇ ಮನುಷ್ಯನನ್ನು ಕೆಲಸಕ್ಕೆ ಬಾರದವನೆಂದು ಪರಿಗಣಿಸಲಿಲ್ಲ. ಜನರಲ್ಲಿ ಒರಟು ಸ್ವಭಾವ ಇರಬಹುದು ಅಥವಾ ಸಭ್ಯತೆ ಇಲ್ಲದಿರಬಹುದು, ಆದರೂ ಅವರೆಲ್ಲರೂ ರಕ್ಷಣೆ ಹೊಂದಲು ಸೂಕ್ತರಾದ ಜನರಾಗಿದ್ದರು.
ಮತ್ತೊಂದೆಡೆ, ಯೇಸುವಿಗೆ ವಸ್ತುಗಳು ಸ್ವಲ್ಪವೂ ಮುಖ್ಯವಾಗಿರಲಿಲ್ಲ. ಲೌಕಿಕ ವಸ್ತುಗಳು ಜನರ ಪ್ರಯೋಜನಕ್ಕಾಗಿ ಬಳಸಲ್ಪಡದಿದ್ದರೆ ಅವುಗಳಿಗೆ ಯಾವುದೇ ಬೆಲೆಯಿರುವುದಿಲ್ಲ. ನೆರೆಹೊರೆಯ ಒಂದು ಮಗುವು ಯೇಸುವಿನ ಬಡಗಿಯ ಅಂಗಡಿಗೆ ಬಂದು, ಒಂದು ದುಬಾರಿಯಾದ ವಸ್ತುವನ್ನು ಮುರಿದರೆ, ಅದರಿಂದ ಯೇಸುವಿಗೆ ಯಾವುದೇ ರೀತಿಯ ಅಶಾಂತಿ ಉಂಟಾಗುತ್ತಿರಲಿಲ್ಲ, ಏಕೆಂದರೆ ಮುರಿದ ಆ ವಸ್ತುವಿಗಿಂತ ಆ ಮಗುವು ಎಷ್ಟೋ ಹೆಚ್ಚು ಪ್ರಮುಖವಾಗಿತ್ತು ಮತ್ತು ಬೆಲೆಯುಳ್ಳದ್ದಾಗಿತ್ತು. ಯೇಸುವು ಜನರನ್ನು ಪ್ರೀತಿಸಿದರೇ ಹೊರತು ವಸ್ತುಗಳನ್ನಲ್ಲ. ಜನರ ಉಪಯೋಗಕ್ಕಾಗಿ ವಸ್ತುಗಳನ್ನು ಬಳಸಬೇಕಾಗಿದೆ.
ಪವಿತ್ರಾತ್ಮನು ನಮ್ಮ ಮನಸ್ಸನ್ನು ನವೀಕರಿಸುತ್ತಾನೆ, ಮತ್ತು ಆಗ ನಾವು ದೇವರ ದೃಷ್ಟಿಕೋನದಿಂದ ವಿಷಯಗಳನ್ನು ಗ್ರಹಿಸಲು ಸಾಧ್ಯವಾಗುತ್ತದೆ (ಕೊಲೊ. 1:9-10 - ಭಾವಾನುವಾದ). ಒಬ್ಬ ಮನುಷ್ಯನನ್ನು ಪ್ರೀತಿಸುವುದು ಎಂದರೆ, ಅವನನ್ನು ದೇವರ ದೃಷ್ಟಿಕೋನದಿಂದ - ಸಹಾನುಭೂತಿಯಿಂದ - ನೋಡುವುದು.
ದೇವರು ತನ್ನ ಜನರನ್ನು ನೋಡಿ ಹಾಡುಗಳನ್ನು ಹಾಡುತ್ತಾ ಹರ್ಷಧ್ವನಿ ಗೈಯುತ್ತಾರೆ (ಚೆಫನ್ಯನು 3:17). ಯೇಸುವು ದೇವರಾತ್ಮನಿಂದ ತುಂಬಲ್ಪಟ್ಟದ್ದರಿಂದ, ಪರಲೋಕದ ತಂದೆಯು ತನ್ನ ಮಕ್ಕಳನ್ನು (ವಿಶ್ವಾಸಿಗಳನ್ನು) ನೋಡಿ ಹೊಂದುವ ಸಂತೋಷವು ಯೇಸುವಿಗೂ ಸಹ ಪ್ರಾಪ್ತವಾಯಿತು. ಮನಸ್ಸಿನಲ್ಲಿ ನವೀಕರಿಸಲ್ಪಟ್ಟ ಎಲ್ಲರೂ (ವಿಶ್ವಾಸಿಗಳು) ಸಹ ಹೀಗೆಯೇ ದೇವರ ದೃಷ್ಟಿಕೋನದಿಂದ ಇತರರನ್ನು ನೋಡಿ ಆನಂದಿಸುತ್ತಾರೆ. ಇತರರ ಬಗ್ಗೆ ಯೇಸುವಿನ ಆಲೋಚನೆಗಳು ಯಾವಾಗಲೂ ಒಂದೇ ಸಮನಾಗಿ ಪ್ರೀತಿಯಿಂದ ಕೂಡಿದ್ದವು. ಜನರ ವಿಚಿತ್ರ ನಡತೆಯ ಬಗ್ಗೆ ಅಥವಾ ಅವರ ಒರಟುತನದ ಬಗ್ಗೆ ಟೀಕೆ ಅಥವಾ ದೂಷಣೆಯ ಆಲೋಚನೆಗಳು ಆತನಲ್ಲಿ ಇರಲಿಲ್ಲ. ಆದ್ದರಿಂದ ಜನರು ಆತನ ಆತ್ಮದ ಸುವಾಸನೆಯನ್ನು ಗುರುತಿಸಲು ಸಾಧ್ಯವಾಯಿತು, ಮತ್ತು "ಸಾಮಾನ್ಯ ಜನರು ಆತನ ಮಾತನ್ನು ಸಂತೋಷದಿಂದ ಕೇಳುತ್ತಿದ್ದರು"(ಮಾರ್ಕ. 12:37,38). ನಾವು ಪವಿತ್ರಾತ್ಮನಿಂದ ತುಂಬಲ್ಪಟ್ಟಾಗ ದೇವರು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿಯುವ ಪ್ರೀತಿಯೂ ಸಹ ಇದೇ ಆಗಿದೆ (ರೋಮಾ. 5:5).