ಯೇಸುವು ಕರ್ತನಾದ ದೇವರ ಸೇವಕನಾಗಿದ್ದನು. "ಹೀಗಿರಲು ಒಬ್ಬ ಸೇವಕನು ಪ್ರಾಮುಖ್ಯವಾಗಿ ತನ್ನ ಯಜಮಾನನು ಹೇಳಿದ್ದನ್ನು ಹೇಳಿದಂತೆಯೇ ಪಾಲಿಸಬೇಕು" (1 ಕೊರಿಂಥದವರಿಗೆ 4:2 - TLB). ಯೇಸುವು ತನ್ನ ತಂದೆಯ ಮಾತನ್ನು ಕೇಳಿಸಿಕೊಳ್ಳುತ್ತಾ ತನ್ನ ಸಂಪೂರ್ಣ ಜೀವಿತವನ್ನು ಕಳೆದನು, ಮತ್ತು ಹೀಗೆ ತನ್ನ ತಂದೆಯ ಚಿತ್ತವನ್ನು ಸಂಪೂರ್ಣವಾಗಿ ಪೂರೈಸಿದನು; ಅವನಲ್ಲಿ ಯಾವುದೇ ಬೇಸರ ಅಥವಾ ’ಚಟುವಟಿಕೆಗಳನ್ನು ಮಾಡುವ ಅವಸರ’ ಇರಲಿಲ್ಲ. ಆತನು ತನ್ನ ಮಾನವ ಆಸೆಗಳನ್ನು ಸಾಯಿಸಿದನು. ಆತನು ಶರೀರಭಾವದಲ್ಲಿ (ತನ್ನ ಸ್ವಂತ ಮನಸ್ಸಿನ ಇಷ್ಟದಂತೆ) ಜೀವಿಸಲಿಲ್ಲ. ಆತನು ಆತ್ಮಿಕನಾಗಿದ್ದನು.
ಯೇಸುವು ತನ್ನ ಜೀವಿತದಲ್ಲಿ ಪ್ರಾರ್ಥನೆಗೆ ಬಹಳ ಹೆಚ್ಚು ಪ್ರಾಮುಖ್ಯತೆ ನೀಡಿದನು. ಅನೇಕ ಬಾರಿ ಆತನು ಪ್ರಾರ್ಥನೆ ಮಾಡಲಿಕ್ಕಾಗಿ ಯಾರಿಗೂ ತಿಳಿಯದಂತೆ ಅರಣ್ಯ ಪ್ರದೇಶಗಳಿಗೆ ಹೋಗುತ್ತಿದ್ದನು (ಲೂಕನು 5:16). ಒಂದು ಸಂದರ್ಭದಲ್ಲಿ ಆತನು ತನ್ನ ಹನ್ನೆರಡು ಶಿಷ್ಯರನ್ನು ಆರಿಸಿಕೊಳ್ಳಲಿಕ್ಕಾಗಿ ದೇವರ ಚಿತ್ತವನ್ನು ಕಂಡುಕೊಳ್ಳಲು ಇಡೀ ರಾತ್ರಿಯನ್ನು ಪ್ರಾರ್ಥನೆಯಲ್ಲಿ ಕಳೆದನು (ಲೂಕನು 6:12,13). ಆಲೋಚನೆಗಳಂತೆ ಜೀವಿಸುವ (ಶರೀರಭಾವದ) ಕ್ರೈಸ್ತನು ದೇವರ ಚಿತ್ತವನ್ನು ತಿಳಿಯುವುದಕ್ಕಾಗಿ ಕಾಯುವುದು ವ್ಯರ್ಥವೆಂದು ಯೋಚಿಸುತ್ತಾನೆ ಮತ್ತು ಮನಸ್ಸಾಕ್ಷಿಯ ತೃಪ್ತಿಗಾಗಿ ಮಾತ್ರ ಪ್ರಾರ್ಥನೆ ಮಾಡುತ್ತಾನೆ. ಅವನು ತನ್ನಲ್ಲಿ ಭರವಸೆ ಇರಿಸುವುದರಿಂದ, ಅವನಿಗೆ ಪ್ರಾರ್ಥನೆಯ ತೀವ್ರ ಅವಶ್ಯಕತೆ ಇರುವುದಿಲ್ಲ. ಆದರೆ ಆತ್ಮಿಕ ಮನುಷ್ಯನು ಪ್ರತಿಯೊಂದಕ್ಕೂ ದೇವರನ್ನು ನಿರಂತರವಾಗಿ ಅವಲಂಬಿಸುತ್ತಾನೆ, ಮತ್ತು ತನ್ನ ತೀವ್ರವಾದ ಅವಶ್ಯಕತೆಯ ನಿಮಿತ್ತವಾಗಿ ಪ್ರಾರ್ಥನೆ ಮಾಡುತ್ತಾನೆ.
ಯೇಸುವು ಹೇಳಿದಂತೆ, ನಾವು ಆತನ ವಾಕ್ಯವನ್ನು ಕೇಳಿಸಿಕೊಳ್ಳಬೇಕಿದೆ (ಲೂಕನು 10:42). ಬೆಥಾನ್ಯದ ಮರಿಯಳು ಇದಕ್ಕೆ ಒಂದು ಮಾದರಿಯಾಗಿದ್ದಳು. ಮತ್ತೊಂದು ಕಡೆ, ಮಾರ್ಥಳು ನಿಸ್ವಾರ್ಥ ಸೇವೆಯಲ್ಲಿ ತೊಡಗಿದ್ದರೂ, ಆಕೆಯ ಮನಸ್ಸಿನಲ್ಲಿ ಸಮಾಧಾನ ಇರಲಿಲ್ಲ ಮತ್ತು ಮರಿಯಳ ಕುರಿತಾಗಿ ಆತಂಕವಿತ್ತು. ನಾವು ಈ ಇಬ್ಬರು ಸಹೋದರಿಯರಲ್ಲಿ ಆತ್ಮಿಕ ಸ್ವಭಾವ ಮತ್ತು ಶರೀರ ಭಾವದ ನಡುವಿನ ವ್ಯತ್ಯಾಸವನ್ನು ಕಾಣುತ್ತೇವೆ. ಮಾರ್ಥಳು ಕರ್ತ ಮತ್ತು ಆತನ ಶಿಷ್ಯರ ಸೇವೆ ಮಾಡಿದ್ದು ಪಾಪವಾಗಿರಲಿಲ್ಲ. ಆದಾಗ್ಯೂ ಆಕೆಯಲ್ಲಿ ಅಶಾಂತಿ ಮತ್ತು ಮರಿಯಳ ಕುರಿತಾದ ಬೇಸರವಿತ್ತು. ಇದು ಶರೀರ ಭಾವದ ಸ್ಪಷ್ಟ ಚಿತ್ರಣವಾಗಿದೆ. ಶರೀರ ಭಾವದ ಕ್ರೈಸ್ತನಲ್ಲಿ ಅಶಾಂತಿ ಮತ್ತು ಆತಂಕವಿರುತ್ತದೆ. ಆತನು "ಸ್ವಕಾರ್ಯಗಳನ್ನು" ಕೊನೆಗೊಳಿಸಿಲ್ಲ, ಮತ್ತು ದೇವರ ವಿಶ್ರಾಂತಿಯನ್ನು ಹೊಂದಿಲ್ಲ (ಇಬ್ರಿಯರಿಗೆ 4:10). ಆತನ ಉದ್ದೇಶಗಳು ಉತ್ತಮವಾಗಿರಬಹುದು, ಆದರೆ ಮಾನಸಾಂತರದ ನಂತರವೂ ಆತನು ಮಾಡುತ್ತಿರುವ ಸ್ವಕಾರ್ಯಗಳು ಎಷ್ಟು ಒಳ್ಳೆಯದಾಗಿದ್ದರೂ, ಅವು ದೇವರ ದೃಷ್ಟಿಯಲ್ಲಿ "ಹೊಲೆಯ ಬಟ್ಟೆಗಳಂತೆ" ಇವೆಯೆಂದು ಅವನು ಅರಿತಿಲ್ಲ (ಯೆಶಾಯನು 64:6).
ದೇವರಿಗೆ ಅಮಾಲೇಕ್ಯರ ಉತ್ತಮ ಕುರಿಗಳು (ಇವನ್ನು ಸ್ವಚಿತ್ತ ಅಥವಾ ಶರೀರಭಾವಕ್ಕೆ ಹೋಲಿಸಬಹುದು) ಹೀನವಾದ ಕುರಿಗಳಷ್ಟೇ ಅಸ್ವೀಕಾರವಾಗಿವೆ (1 ಸಮುವೇಲನು 15:3,9-19). ಆದರೆ ಮಾನವ ಆಲೋಚನೆ ಇದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಉತ್ತಮ ಕುರಿಗಳನ್ನು ದೇವರಿಗೆ ಸಮರ್ಪಿಸುವುದರ ಬದಲಾಗಿ ಅವುಗಳನ್ನು ಬಿಟ್ಟುಬಿಡುವುದು ಹುಚ್ಚುತನವೆಂದು ಅನಿಸಬಹುದು. ಆದರೆ ದೇವರಿಗೆ ವಿಧೇಯತೆ ಬೇಕಾಗಿದೆ, ಯಜ್ಞ ಸಮರ್ಪಣೆಯಲ್ಲ. "ಯಜ್ಞವನ್ನು ಅರ್ಪಿಸುವುದಕ್ಕಿಂತ ವಿಧೇಯರಾಗುವುದು ಉತ್ತಮವಾಗಿದೆ" (1 ಸಮುವೇಲನು 15:22). ಆದರೆ ನಾವು ದೇವರ ಮಾತಿಗೆ ಕಿವಿಗೊಡದೆ ವಿಧೇಯರಾಗಲು ಸಾಧ್ಯವಿದೆಯೇ? ದೇವರ ವಾಕ್ಯವನ್ನು ಮೊದಲು ಕೇಳಿಸಿಕೊಂಡು ಅದಕ್ಕೆ ವಿಧೇಯರಾಗಬೇಕು. ಇದಕ್ಕಾಗಿಯೇ ಯೇಸುವು ತನ್ನ ಸ್ವರವನ್ನು ಕೇಳಿಸಿಕೊಳ್ಳುವುದು ಒಂದು ಅವಶ್ಯ ಸಂಗತಿಯೆಂದು ಹೇಳಿದನು. ಬೇರೆಲ್ಲವೂ ಇದನ್ನು ಆತುಕೊಂಡಿವೆ.
ಮಾರ್ಥಳ ಹಾಗೆ ’ಸೇವೆ ಮಾಡುವವರು’ ಎಷ್ಟು ಯಥಾರ್ಥರಾಗಿದ್ದರೂ, ಅವರು ಸ್ವತಃ ತಮಗೆ ಸೇವೆಮಾಡುತ್ತಾರೆ. ಅವರನ್ನು ಕರ್ತನ ಸೇವಕರೆಂದು ಕರೆಯಲು ಸಾಧ್ಯವಿಲ್ಲ, ಏಕೆಂದರೆ ಒಬ್ಬ ಸೇವಕನು ಸೇವೆಗೆ ಕೈಹಾಕುವುದಕ್ಕೆ ಮೊದಲು, ತನ್ನ ಯಜಮಾನನು ತನಗೆ ಏನು ಮಾಡಲು ಹೇಳುತ್ತಾನೆಂದು ಕೇಳಿಸಿಕೊಳ್ಳಲು ಕಾದಿರುತ್ತಾನೆ.
ನಾವು ಸ್ವಾವಲಂಬನೆಯನ್ನು ತ್ಯಜಿಸುವುದಾದರೆ, ಸೊಲೊಮೋನನು ಪ್ರಾರ್ಥಿಸಿದಂತೆ, "ಓ ಕರ್ತನಾದ ನನ್ನ ದೇವರೇ, ನಿನ್ನ ಸೇವಕನಾದ ನನಗೆ ನ್ಯಾಯ ಅನ್ಯಾಯಗಳನ್ನು ಕಂಡುಹಿಡಿಯುವುದಕ್ಕೆ ನನ್ನ ಹೃದಯದಲ್ಲಿ ವಿವೇಕವನ್ನು ದಯಪಾಲಿಸು" ಎಂದು ಪ್ರಾರ್ಥಿಸುತ್ತೇವೆ (1 ಅರಸುಗಳು 3:7,9 - ಟಿಪ್ಪಣಿ). (ಪರಲೋಕದ ದೃಷ್ಟಿಯಲ್ಲಿ) ಯಾವುದು ಒಳ್ಳೆಯದು ಮತ್ತು ಯಾವುದು ಒಳ್ಳೆಯದಲ್ಲ - ಯಾವುದು ತನ್ನ ತಂದೆಯ ಚಿತ್ತ ಮತ್ತು ಯಾವುದು ಅಲ್ಲ - ಎಂಬ ವಿವೇಚನೆಯನ್ನು ಪಡೆಯಲು ತನ್ನ ತಂದೆಯ ಮಾತನ್ನು ಕೇಳಿಸಿಕೊಳ್ಳುವುದು ಅವಶ್ಯವೆಂದು ಯೇಸುವಿಗೆ ತಿಳಿದಿತ್ತು.
ಯೆರೂಸಲೇಮಿನ ದೇವಾಲಯದ ಸುಂದರದ್ವಾರದ ಹೊರಗಡೆ ಒಬ್ಬ ಹುಟ್ಟುಕುಂಟನಾಗಿದ್ದ ಮನುಷ್ಯನು ಭಿಕ್ಷೆ ಬೇಡುವುದನ್ನು ಯೇಸುವು ಸಾಮಾನ್ಯವಾಗಿ ನೋಡುತ್ತಿದ್ದನು. ಆದರೆ ಆತನು ಅವನನ್ನು ಗುಣಪಡಿಸಲಿಲ್ಲ, ಏಕೆಂದರೆ ಹಾಗೆ ಮಾಡಬೇಕೆಂಬ ನಡೆಸುವಿಕೆಯನ್ನು ಆತನು ತನ್ನ ತಂದೆಯಿಂದ ಪಡೆದಿರಲಿಲ್ಲ. ಮುಂದೆ, ಆತನು ಪರಲೋಕಕ್ಕೆ ಏರಿಹೋದ ನಂತರ, ಪೇತ್ರ ಮತ್ತು ಯೋಹಾನರು ಆ ಮನುಷ್ಯನನ್ನು ಗುಣಪಡಿಸಿದರು - ಇದು ತಂದೆಯಾದ ದೇವರ ಪರಿಪೂರ್ಣ ಸಮಯವಾಗಿತ್ತು - ಮತ್ತು ಇದರ ಫಲವಾಗಿ ಅನೇಕ ಜನರು ಕರ್ತನ ಕಡೆಗೆ ತಿರುಗಿಕೊಂಡರು (ಅ.ಕೃ. 3:1-26,4:1-4). ಆ ಮನುಷ್ಯನ ಗುಣಪಡಿಸುವಿಕೆಗೆ ತಂದೆಯು ನಿರ್ಣಯಿಸಿದ್ದ ಸೂಕ್ತ ಸಮಯ ಅದೇ ಆಗಿತ್ತು, ಇದಕ್ಕಿಂತ ಮುಂಚೆ ಅಲ್ಲ. ಯೇಸುವು ಮೊದಲೇ ಈ ಮನುಷ್ಯನನ್ನು ಗುಣಪಡಿಸಿದ್ದರೆ, ಆತನು ತಂದೆಯ ಚಿತ್ತಕ್ಕೆ ಅಡ್ಡಿಯಾಗುತ್ತಿದ್ದನು. ತಂದೆಯ ಸಮಯವೇ ಅತ್ಯಂತ ಸೂಕ್ತ ಸಮಯವೆಂದು ಯೇಸು ಅರಿತಿದ್ದನು, ಹಾಗಾಗಿ ಆತನು ಯಾವುದನ್ನು ಮಾಡಲಿಕ್ಕೂ ಅವಸರ ಪಡಲಿಲ್ಲ.
ಯೇಸುವಿನ ಜೀವನವು ಪರಿಪೂರ್ಣ ವಿಶ್ರಾಂತಿಯ ಜೀವನವಾಗಿತ್ತು. ಆತನಿಗೆ ಪ್ರತಿದಿನದ 24 ತಾಸುಗಳಲ್ಲಿ ತನ್ನ ತಂದೆಯ ಚಿತ್ತದಂತೆ ಎಲ್ಲವನ್ನು ಮಾಡಲು ಸಾಕಷ್ಟು ಸಮಯವಿತ್ತು. ಆದರೆ ಆತನು ತನಗೆ ಒಳ್ಳೆಯದೆಂದು ತೋರಿದ ಕೆಲಸಗಳನ್ನು ಕೈಗೊಳ್ಳಲು ನಿಶ್ಚಯಿಸಿದ್ದರೆ, ಆಗ ದಿನದ 24 ತಾಸುಗಳು ಸಾಕಾಗುತ್ತಿರಲಿಲ್ಲ ಮತ್ತು ಹೆಚ್ಚಿನ ದಿನಗಳ ಕೊನೆಯಲ್ಲಿ ಆತನು ಅಶಾಂತನಾಗಿ ಇರುತ್ತಿದ್ದನು. ಯೇಸುವು ತಾನು ಎದುರಿಸಿದ ಪ್ರತಿಯೊಂದು ತಡೆ ಅಥವಾ ಆತಂಕದಲ್ಲಿ ಸಂತೋಷಿಸಲು ಸಾಧ್ಯವಾಯಿತು, ಏಕೆಂದರೆ ಪರಲೋಕದಿಂದ ಸಮಸ್ತವನ್ನು ನಿಯಂತ್ರಿಸುವ ತಂದೆಯು ತನ್ನ ದಿನನಿತ್ಯದ ಕಾರ್ಯಕ್ರಮವನ್ನು ನಿಯೋಜಿಸುತ್ತಾರೆ ಎಂಬ ಅಂಶವನ್ನು ಆತನು ಅರಿತಿದ್ದನು. ಹಾಗಾಗಿ ಅಡೆತಡೆಗಳು ಎದುರಾದಾಗ ಆತನಲ್ಲಿ ಆತಂಕ ಅಥವಾ ಗೊಂದಲ ಇರುತ್ತಿರಲಿಲ್ಲ. ನಮ್ಮ ಒಳ ಹೃದಯದಲ್ಲೂ ಯೇಸುವಿನ ಇಂತಹ ಜೀವಿತವಿದ್ದರೆ, ಅದು ಪರಿಪೂರ್ಣ ವಿಶ್ರಾಂತಿಯನ್ನು ತರುವುದು. ಇದರ ಅರ್ಥ ನಾವು ಏನೂ ಮಾಡದೆ ಸುಮ್ಮನಿರುತ್ತೇವೆ ಎಂದಲ್ಲ, ಆದರೆ ನಮ್ಮ ಜೀವಿತಕ್ಕಾಗಿ ತಂದೆಯಾದ ದೇವರು ನಿಯೋಜಿಸಿರುವುದನ್ನು ಮಾತ್ರ ನಾವು ಮಾಡುತ್ತೇವೆ. ನಾವು ಆ ಗುರಿಯನ್ನು ಇರಿಸಿಕೊಂಡಾಗ, ನಾವು ಮೊದಲೇ ಹಾಕಿಕೊಂಡ ಸ್ವಂತ ಕಾರ್ಯಕ್ರಮಕ್ಕಿಂತ ಹೆಚ್ಚಾಗಿ ತಂದೆಯ ಚಿತ್ತವನ್ನು ಮಾಡಿ ಮುಗಿಸಲು ನಾವು ಹೆಚ್ಚು ಉತ್ಸುಕರಾಗುತ್ತೇವೆ.
ಶರೀರಭಾವದ ಕ್ರೈಸ್ತರು ’ತಮ್ಮ ಸ್ವಂತ ಗುರಿ ಅಥವಾ ಯೋಜನೆಯನ್ನು’ ಸಾಧಿಸುವುದಕ್ಕಾಗಿ ಎಷ್ಟು ತವಕಿಸುತ್ತಾರೆ ಎಂದರೆ, ಅನೇಕ ವೇಳೆ ಅವರಲ್ಲಿ ಆತಂಕ ಮತ್ತು ಗಲಿಬಿಲಿ ಕಾಣಿಸುತ್ತದೆ. ಅವರಲ್ಲಿ ಕೆಲವರು ಕೊನೆಗೆ ಮಾನಸಿಕ ಬಳಲುವಿಕೆ ಅಥವಾ ದೈಹಿಕ ಅನಾರೋಗ್ಯಕ್ಕೆ ಗುರಿಯಾಗುತ್ತಾರೆ.
ಯೇಸುವು ಮಾನಸಿಕ ಬಳಲುವಿಕೆಗೆ ಒಳಗಾಗುವುದು ಅಸಾಧ್ಯವಾಗಿತ್ತು, ಏಕೆಂದರೆ ಆತನ ಒಳ ಹೃದಯದಲ್ಲಿ ಸಂಪೂರ್ಣ ವಿಶ್ರಾಂತಿಯಿತ್ತು. ಆತನು ನಮಗೆ ಹೀಗೆ ಹೇಳುತ್ತಾನೆ, "ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನ ಮಾದರಿಯನ್ನು ಅನುಸರಿಸಿರಿ, ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವದು" (ಮತ್ತಾ. 11:29,30).
ದೇವರಾತ್ಮನು ಯೇಸುವಿನ ಈ ಮಹಿಮೆಯನ್ನು ನಮಗೆ ದೇವರ ವಾಕ್ಯದಲ್ಲಿ ತೋರಿಸುತ್ತಾನೆ ಮತ್ತು ಆತನು ಅದೇ ಮಹಿಮೆಯನ್ನು ನಮಗೆ ಒದಗಿಸಲು ಹಾಗೂ ನಮ್ಮ ಮೂಲಕ ಅದನ್ನು ಇತರರಿಗೆ ಪ್ರಕಟಗೊಳಿಸಲು ಬಯಸುತ್ತಾನೆ.
ಕರ್ತನು ನಮ್ಮ ಕುರುಬನಾಗಿದ್ದಾನೆ ಮತ್ತು ಆತನು ತನ್ನ ಕುರಿಮಂದೆಯನ್ನು ಹಸಿರುಗಾವಲುಗಳಲ್ಲಿ ತಂಗಿಸುತ್ತಾನೆ. ಕುರಿಗಳು ತಮ್ಮದೇ ಆದ ಯೋಜನೆಯನ್ನು ಹಾಕಿಕೊಳ್ಳುವುದಿಲ್ಲ ಅಥವಾ ಮುಂದೆ ಯಾವು ಹುಲ್ಲುಗಾವಲಿಗೆ ಹೋಗಬೇಕೆಂದು ನಿಶ್ಚಯಿಸುವುದಿಲ್ಲ. ಅವು ಸುಮ್ಮನೆ ತಮ್ಮ ಕುರುಬನನ್ನು ಹಿಂಬಾಲಿಸುತ್ತವೆ. ಆದರೆ ನಾವು ಈ ರೀತಿಯಾಗಿ ನಮ್ಮ ಕುರುಬನಾದ ಯೇಸುವಿನ ಹಿಂದೆ ಹೋಗಲಿಕ್ಕೆ ನಮ್ಮ ಸ್ವಾಭಿಮಾನ ಮತ್ತು ಸ್ವಾವಲಂಬನೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಯೇಸುವು ದೀನತೆಯಿಂದ ತನ್ನ ತಂದೆಗೆ ವಿಧೇಯನಾದನು. ಆದರೆ ಶರೀರಭಾವದ (ಮನಸ್ಸಿನ ಆಲೋಚನೆಗಳಂತೆ ನಡೆಯುವ) ಕ್ರೈಸ್ತರು ಕುರಿಗಳಂತೆ ಹೋಗಲು ಒಪ್ಪುವುದಿಲ್ಲ, ಮತ್ತು ಇದರಿಂದಾಗಿ ತಮ್ಮ ಸ್ವಂತ ಬುದ್ಧಿಯ ಮೂಲಕ ತಪ್ಪು ದಾರಿಗೆ ನಡೆಸಲ್ಪಡುತ್ತಾರೆ. ನಮ್ಮ ಬುದ್ಧಿಶಕ್ತಿಯು ದೇವರು ದಯಪಾಲಿಸಿರುವ ಒಂದು ಅದ್ಭುತ ಮತ್ತು ಅತಿ ಉಪಯುಕ್ತ ವರವಾಗಿದೆ, ಆದರೆ ನಮ್ಮ ಜೀವನದಲ್ಲಿ ಬುದ್ಧಿಶಕ್ತಿಗೆ ಅಧಿಕಾರದ ಸ್ಥಾನವನ್ನು ಕೊಟ್ಟರೆ, ಆಗ ಅದು ಅತ್ಯಂತ ಅಪಾಯಕಾರಿ ವರವಾಗಬಹುದು.
ಕರ್ತನು ತನ್ನ ಶಿಷ್ಯರಿಗೆ ಹೀಗೆ ಪ್ರಾರ್ಥಿಸಬೇಕೆಂದು ಕಲಿಸಿಕೊಟ್ಟನು, "ತಂದೆಯೇ, ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ." ಪರಲೋಕದಲ್ಲಿ ದೇವರ ಚಿತ್ತವು ಹೇಗೆ ನೆರವೇರುತ್ತದೆ? ದೇವದೂತರುಗಳು ಅಲ್ಲಿಲ್ಲಿ ಸುತ್ತಾಡುತ್ತಾ ’ದೇವರಿಗಾಗಿ ಏನನ್ನಾದರೂ ಮಾಡಬೇಕು’ ಎಂದು ಪ್ರಯತ್ನಿಸುವುದಿಲ್ಲ. ಅವರು ಹಾಗೆ ಮಾಡಿದ್ದರೆ ಪರಲೋಕವು ಕ್ರಮವಿಲ್ಲದೆ ಅವ್ಯವಸ್ಥೆಗೆ ಒಳಗಾಗುತ್ತಿತ್ತು. ದೇವದೂತರು ಏನು ಮಾಡುತ್ತಾರೆ? ಅವರು ದೇವರ ಸನ್ನಿಧಿಯಲ್ಲಿ ದೇವರ ಆಜ್ಞೆಯನ್ನು ಕೇಳಿಸಿಕೊಳ್ಳಲು ಕಾದಿರುತ್ತಾರೆ, ಮತ್ತು ವೈಯಕ್ತಿಕವಾಗಿ ತಾವು ಕೇಳಿಸಿಕೊಂಡ ಕಾರ್ಯವನ್ನು ನಿಖರವಾಗಿ ಮಾಡಿ ಪೂರೈಸುತ್ತಾರೆ. ದೇವದೂತನಾದ ಗಬ್ರಿಯೇಲನು ಜಕರೀಯನಿಗೆ ಏನು ಹೇಳಿದನೆಂದು ಕೇಳಿಸಿಕೊಳ್ಳಿರಿ, "ನಾನು ದೇವರ ಸನ್ನಿಧಿಯಲ್ಲಿ ನಿಲ್ಲುವ ಗಬ್ರಿಯೇಲನು; ನಿನ್ನ ಕೂಡ ಮಾತಾಡಲಿಕ್ಕಾಗಿ ನಾನು ಕಳುಹಿಸಲ್ಪಟ್ಟಿದ್ದೇನೆ ...." (ಲೂಕನು 1:19). ಕರ್ತನಾದ ಯೇಸುವು ಕೂಡ ಇದೇ ಮನೋಭಾವವನ್ನು ಇರಿಸಿಕೊಂಡಿದ್ದನು - ತನ್ನ ತಂದೆಯ ಸನ್ನಿಧಿಯಲ್ಲಿ ಕಾದಿರುವುದು, ಅವರ ಧ್ವನಿಯನ್ನು ಕೇಳಿಸಿಕೊಂಡು, ಅವರ ಚಿತ್ತವನ್ನು ಪೂರೈಸುವುದು.
ಶರೀರಭಾವದ ಕ್ರೈಸ್ತರು ಕೆಲಸಗಳಲ್ಲಿ ಬಹಳ ಶ್ರಮಿಸಬಹುದು ಮತ್ತು ಹೆಚ್ಚಿನ ತ್ಯಾಗವನ್ನು ಮಾಡಬಹುದು, ಆದರೆ ನಿತ್ಯತ್ವದ ಶುಭ್ರ ಬೆಳಕಿನಲ್ಲಿ ಅವರ ಕಾರ್ಯವು, "ರಾತ್ರಿಯೆಲ್ಲಾ ಪ್ರಯಾಸಪಟ್ಟರೂ ಏನೂ ಸಿಕ್ಕಲಿಲ್ಲ," ಎಂಬಂತೆ ಪ್ರಕಟಗೊಳ್ಳುವುದು. ಆದರೆ ಯಾರು ದಿನಾಲೂ ಶಿಲುಬೆಯನ್ನು ಹೊರುತ್ತಾರೋ (ಸ್ವಚಿತ್ತದ ಜೀವಿತವನ್ನು ನಿರಾಕರಿಸುವುದು ಮತ್ತು ಅದನ್ನು ಸಾಯಿಸುವುದು) ಮತ್ತು ಕರ್ತನಿಗೆ ವಿಧೇಯರಾಗುತ್ತಾರೋ, ಆ ದಿನದಲ್ಲಿ ಅವರ ಬಲೆಯಲ್ಲಿ ಬಹಳ ಹೆಚ್ಚು ಮೀನುಗಳು ಸಿಕ್ಕುತ್ತವೆ (ಯೋಹಾನನು 21:1-6).
"ಯಾವನಾದರೂ ಆತನಿಗಾಗಿ ನಾನು ಸಿದ್ಧಪಡಿಸುವ ಕಾರ್ಯದಿಂದ ಬೇರೆ ಕಡೆಗೆ ಗಮನ ಹರಿಸಿದರೆ, ಅವನು ದೇವರ ರಾಜ್ಯಕ್ಕೆ ತಕ್ಕವನಲ್ಲ," ಎಂದು ಯೇಸುವು ಹೇಳಿದನು (ಲೂಕನು 9:62 - TLB). "ನೀನು ಕರ್ತನಿಂದ ಹೊಂದಿರುವ ಸೇವೆಯನ್ನು ನೆರವೇರಿಸುವದಕ್ಕೆ ಎಚ್ಚರವಾಗಿದ್ದು, ಅದನ್ನು ಪೂರೈಸು" (ಕೊಲೊಸ್ಸೆಯವರಿಗೆ 4:17).
"ಪರಲೋಕದಲ್ಲಿರುವ ನನ್ನ ತಂದೆಯು ನೆಡದಿರುವ ಗಿಡಗಳೆಲ್ಲಾ ಬೇರಿನೊಂದಿಗೆ ಕಿತ್ತುಹಾಕಲ್ಪಡುವವು" (ಮತ್ತಾ. 15:13).
ಇಲ್ಲಿ ಬರುವ ಪ್ರಶ್ನೆ ಗಿಡವು ಒಳ್ಳೆಯದೋ ಅಲ್ಲವೋ ಎಂಬುದಲ್ಲ, ಆದರೆ ಅದನ್ನು ಯಾರು ನೆಟ್ಟರು ಎಂಬುದು. ಯಾವುದೇ ಕಾರ್ಯದ ನ್ಯಾಯಬದ್ಧ ನಿಯೋಜಕರು ದೇವರು ಮಾತ್ರವೇ ಆಗಿದ್ದಾರೆ. ಸತ್ಯವೇದವು ಈ ವಾಕ್ಯದೊಂದಿಗೆ ಆರಂಭವಾಗುತ್ತದೆ, "ಆದಿಯಲ್ಲಿ ದೇವರು." ಹಾಗೆಯೇ ನಮ್ಮ ಸಕಲ ಕಾರ್ಯಗಳು ಈ ರೀತಿ ಇರಬೇಕು: ಅವು ನಿತ್ಯತ್ವದಲ್ಲಿ ಭದ್ರವಾಗಿ ನಿಲ್ಲಬೇಕಾದರೆ, ಅವು ದೇವರಿಂದ ಉತ್ಪತ್ತಿಯಾಗಬೇಕು, ಮತ್ತು ನಮ್ಮ ಮನಸ್ಸಿನಲ್ಲಿ ಅಲ್ಲ.
"ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು" (1 ಯೋಹಾನನು 2:17).
ಬೇರೆಲ್ಲವೂ ನಾಶವಾಗುವವು.
ಹಾಗಾಗಿ ನಾವು ನಮ್ಮನ್ನೇ ಈ ರೀತಿಯಾಗಿ ಪ್ರಶ್ನಿಸಿಕೊಳ್ಳೋಣ:
ನಾನು ದೇವರ ಚಿತ್ತದಲ್ಲಿ ಜೀವಿಸಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದೇನೆಯೇ?