WFTW Body: 

ದೇವರ ಮುಂದೆ ರಹಸ್ಯವಾಗಿ ಜೀವಿಸಿರಿ ಮತ್ತು ಎಲ್ಲಾ ವೇಳೆಯಲ್ಲಿ ನಿಮ್ಮ ಹೃದಯದಲ್ಲಿ ಅವರಿಗಾಗಿ ಹಂಬಲಿಸಿರಿ. ದೇವರಿಗಾಗಿ ಈ ರೀತಿಯಾದ ಹಂಬಲವನ್ನು ಕಳೆದುಕೊಂಡಾಗ, ಕ್ರೈಸ್ತತ್ವವು ಒಂದು ಒಣ ಹಾಗೂ ಟೊಳ್ಳು (ಬರಿದಾದ) ಧರ್ಮವಾಗುತ್ತದೆ. ಹಾಗಾಗಿ ದೇವರ ಹಂಬಲವನ್ನು ಉಳಿಸಿಕೊಳ್ಳುವುದಕ್ಕೆ ಎಷ್ಟೇ ವೆಚ್ಚವಾದರೂ, ಅದನ್ನು ಉಳಿಸಿಕೊಳ್ಳಿರಿ. ನಿಮ್ಮ ನಂಬಿಕೆಯ ಅತಿ ಮುಖ್ಯ ಅಂಶ ಇದಾಗಿದೆ. ಬಾಯಾರಿದ ಜಿಂಕೆಯು ನೀರಿಗಾಗಿ ಹಾತೊರೆಯುವ ಹಾಗೆ ನಾವು ನಿರಂತರವಾಗಿ ದೇವರಿಗಾಗಿ ಹಾತೊರೆಯಬೇಕು.

ದೇವರು ನಮಗೆ ನೀಡುವ ಶಿಕ್ಷಣದಲ್ಲಿ ಒಳಗೊಂಡಿರುವ ಅನೇಕ ಸಂಗತಿಗಳು ಲೋಕದ ದೃಷ್ಟಿಯಲ್ಲಿ "ವಿಫಲತೆ"ಎಂದು ಕರೆಯಲ್ಪಡುತ್ತವೆ. ಆದಾಗ್ಯೂ, ಈ ಸಂಗತಿಗಳು ನಮಗೆ ಯಾವುದೋ ಉತ್ತಮ ಫಲವನ್ನು ನೀಡುವುದಕ್ಕಾಗಿ "ದೇವರು ವ್ಯವಸ್ಥೆಗೊಳಿಸಿದಂತವು"ಆಗಿವೆ. ನಮ್ಮ ಜೀವಿತದಲ್ಲಿ ನಾವು ಇಂತಹ ನಿರಾಶೆಗಳನ್ನು ಎದುರಿಸದಿದ್ದರೆ, ಮತ್ತೊಬ್ಬರಿಗೆ ಮಾರ್ಗದರ್ಶನ ನೀಡುವ ಯೋಗ್ಯತೆ ನಮ್ಮಲ್ಲಿ ಇರುವುದಿಲ್ಲ. ಜೀವನದ ಶಿಕ್ಷಣದಲ್ಲಿ ವಿಫಲತೆಯೂ ಸೇರಿದೆ, ಏಕೆಂದರೆ ಲೋಕದಲ್ಲಿ ಶೇಕಡ 99.9% ಜನರು ಸೋಲನ್ನು ಅನುಭವಿಸುತ್ತಾರೆ ಮತ್ತು ನಾವು ಅವರಿಗೆ ಸಹಾಯ ಮಾಡಬೇಕಾದರೆ ನಮಗೂ ಸಹ ಸೋಲಿನ ಅನುಭವ ಅವಶ್ಯವಾಗಿದೆ. ಸೋಲಿನ ಎರಡು ಉದ್ದೇಶಗಳು ಯಾವುವೆಂದರೆ,

(1) ಅದು ನಮ್ಮನ್ನು ತಗ್ಗಿಸುತ್ತದೆ (ನಮ್ಮನ್ನು ಮುರಿಯುತ್ತದೆ) ಮತ್ತು
(2) ಅದು ನಾವು ಇತರರನ್ನು ಕರುಣೆಯಿಂದ ನೋಡುವಂತೆ ಮಾಡುತ್ತದೆ.

ನಿಮ್ಮ ಆತ್ಮಿಕ ಹೋರಾಟಗಳು ಸಹ ನಿಮ್ಮ ಶಿಕ್ಷಣದ ಒಂದು ಭಾಗವೆಂದು ಹೇಳಬಹುದು. ನೀವು ಇಹಲೋಕದ ಪದವಿಗಳಿಗಾಗಿ ಬಹಳಷ್ಟು ಶ್ರಮಿಸುವಾಗ, ನಿತ್ಯತ್ವದ ಸ್ವರ್ಗೀಯ ಪದವಿಗಾಗಿ ಎಷ್ಟೋ ಪಟ್ಟು ಹೆಚ್ಚಾಗಿ ಶ್ರಮಿಸಲೇಬೇಕು. ಸಮಯ ಕಡಿಮೆ ಇದೆ ಮತ್ತು ಈ ದಿನಗಳು ದುಷ್ಟತನದ ಕಾಲವಾಗಿವೆ. ನಮ್ಮ ಎಲ್ಲಾ ಲೌಕಿಕ ಕಾರ್ಯಗಳ ನಡುವೆ, ನಮ್ಮ ಮನಸ್ಸಿನ ದೃಷ್ಟಿಯನ್ನು ನಿತ್ಯತ್ವದ ಕಡೆಗೆ ತಿರುಗಿಸಬೇಕು. ನೀನು ಎಲ್ಲಾ ವೇಳೆಯಲ್ಲಿ ಸ್ವತಃ ನಿನ್ನನ್ನು ನ್ಯಾಯತೀರ್ಪು ಮಾಡಿಕೋ ಮತ್ತು ಸದಾಕಾಲ ನಿನ್ನ ಒಳಜೀವಿತದಲ್ಲಿ ಕರ್ತನೊಂದಿಗೆ ಪರಿಶುದ್ಧತೆಯಲ್ಲಿ ನಡೆಯುತ್ತಿರು.

"ಕ್ರೈಸ್ತರಾದ ನಮ್ಮ ಸಾಕ್ಷಿಯ ಗುಣಮಟ್ಟ ಈ ಲೋಕದ ಗುಣಮಟ್ಟಕ್ಕಿಂತ ಬಹಳ ಉನ್ನತವಾಗಿರಬೇಕು"

ಅಪೊಸ್ತಲ ಪೌಲನು ತಿಮೊಥೆಯನಿಗೆ, "ನಿನ್ನ ವಶಕ್ಕೆ ಕೊಡಲ್ಪಟ್ಟಿರುವದನ್ನು ಶ್ರೇಷ್ಠವೆಂದು ತಿಳಿದು, ಅದನ್ನು ನಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮನ ಮೂಲಕ ಕಾಪಾಡು," ಎಂದು ಬೋಧಿಸಿದನು (2 ತಿಮೊ. 1:14). ದೇವರು ನಮಗೆ ಕೊಟ್ಟಿರುವ ದೇಹಗಳನ್ನು ಪವಿತ್ರ ಸಂಪತ್ತೆಂದು ತಿಳಿದು, ನಮ್ಮ ಇಹಲೋಕದ ಪ್ರಯಾಣದ ಅವಧಿಯಲ್ಲಿ ನಾವು ಇದನ್ನು ಅವರಿಗಾಗಿ ಜೋಪಾನವಾಗಿ ನೋಡಿಕೊಳ್ಳಬೇಕು. ನಾವು ಈ ದೇಹವನ್ನು ಪ್ರತಿದಿನ ಅವರಿಗೆ ಒಪ್ಪಿಸಿಕೊಡಬೇಕು, ಮತ್ತು ಆ ಮೂಲಕ ನಮ್ಮ ದೇಹಗಳು ಎಲ್ಲಾ ಪಾಪಗಳಿಂದ ಶುದ್ಧೀಕರಿಸಲ್ಪಡುತ್ತಾ, ನಮ್ಮ ಜೀವನದ ಪ್ರಯಾಣವು ಕೊನೆಗೊಳ್ಳುವವರೆಗೂ ಪವಿತ್ರವಾಗಿ ಸಂರಕ್ಷಿಸಲ್ಪಡುತ್ತವೆ.

ಒಂದು ಉದಾಹರಣೆಯನ್ನು ಕೊಡುವುದಾದರೆ: ಒಂದು ಸಂಸ್ಠೆಯು ನಮಗೆ ಐವತ್ತು ಲಕ್ಷ ರೂಪಾಯಿಗಳನ್ನು ಕೊಟ್ಟು, ಅದನ್ನು ಸುರಕ್ಷಿತವಾಗಿ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯಲು ಹೇಳಿತೆಂದು ಭಾವಿಸಿರಿ. ಆದರೆ ನಾವು ಆ ಹಣದಲ್ಲಿ ಸ್ವಲ್ಪವನ್ನು ವ್ಯರ್ಥ ಮಾಡಿದ್ದೇವೆ ಮತ್ತು ಮಿಕ್ಕಿದ್ದನ್ನು ದಾರಿಯಲ್ಲಿ ಕಳಕೊಂಡಿದ್ದೇವೆ. ಈಗ ನಾವು ಸೋಲನ್ನು ಒಪ್ಪಿಕೊಂಡು, ಪಶ್ಚಾತ್ತಾಪಪಟ್ಟು ಕರ್ತನ ಬಳಿಗೆ ಹಿಂದಿರುಗಿ ಬರುತ್ತೇವೆ. ಆಗ ಕರ್ತನು ಏನು ಮಾಡುತ್ತಾನೆ? ಆತನು ನಮ್ಮನ್ನು ತಿರಸ್ಕರಿಸುವುದಿಲ್ಲ. ಅದಕ್ಕೆ ಬದಲಾಗಿ ಆತನು ನಮ್ಮನ್ನು ಕ್ಷಮಿಸುತ್ತಾನೆ ಮತ್ತು ನಮಗೆ ಇನ್ನೂ ಐವತ್ತು ಲಕ್ಷ ರೂಪಾಯಿಗಳನ್ನು ನೀಡಿ, ಅದನ್ನು ನಮ್ಮ ಜೀವಿತದ ಕೊನೆಯ ತನಕ ಸುರಕ್ಷಿತವಾಗಿ ಉಳಿಸಿಕೊಳ್ಳಬೇಕೆಂದು ಹೇಳುತ್ತಾನೆ. ದೇವರು ಎಷ್ಟು ಒಳ್ಳೆಯವರು.

ಕ್ರೈಸ್ತರಾದ ನಮ್ಮ ಸಾಕ್ಷಿಯು ಈ ಲೋಕದ ಗುಣಮಟ್ಟಕ್ಕಿಂತ ಬಹಳ ಹೆಚ್ಚಿನದ್ದು ಆಗಿರಬೇಕು. ನಾವು ಮಾಡುವ ಯಾವುದೇ ಕಾರ್ಯದಲ್ಲಿ ಕೆಟ್ಟತನದ ತೋರಿಕೆಯೂ ಇರಬಾರದು. ಯಾವುದೇ ಕಾರ್ಯದ ಬಗ್ಗೆ ಸಂದೇಹವಿದ್ದಾಗ, ಅವಸರದ ನಿರ್ಣಯವನ್ನು ಮಾಡದೆ, ಎಚ್ಚರಿಕೆ ವಹಿಸಿ ಹೆಚ್ಚಿನ ಜಾಗರೂಕತೆಯ ನಿರ್ಣಯವನ್ನೇ ಕೈಗೊಳ್ಳುವುದು ಒಳ್ಳೆಯದು.