WFTW Body: 

ಯೋಸೇಫ:

ನಾವು ಮತ್ತಾ. 1:19 ರಲ್ಲಿ ಓದುವಂತೆ, ಯೋಸೇಫನಿಗೆ ಮರಿಯಳು ಬಸುರಾಗಿದ್ದು ತಿಳಿದು ಬಂದಾಗ, ಮತ್ತು ದೇವರು ಆಕೆಯ ಗರ್ಭದಲ್ಲಿ ಈ ಅದ್ಭುತಕಾರ್ಯವನ್ನು ಮಾಡಿದ್ದರು ಎಂದು ಆತನಿಗೆ ತಿಳಿಯದೇ ಇದ್ದುದರಿಂದ, ಮತ್ತು ಇಲ್ಲಿ ಹೇಳಲಾದಂತೆ ಆತನು ಒಬ್ಬ ಸಜ್ಜನನಾಗಿದ್ದರಿಂದ, ಆಕೆಯನ್ನು ಅವಮಾನಕ್ಕೆ ಗುರಿಪಡಿಸಲು ಮನಸ್ಸಿಲ್ಲದೆ, ಆಕೆಯ ಪಾಪವೆಂದು ಆತನು ಅಂದುಕೊಂಡದ್ದನ್ನು ಮುಚ್ಚಿಡಲು ಬಯಸಿದನು.

ನಾವು ಈ ಘಟನೆಯಲ್ಲಿ ’ನೀತಿವಂತಿಕೆಯ’ ಕುರಿತಾದ ಒಂದು ಪಾಠವನ್ನು ಕಲಿಯಬಹುದು. ದುಷ್ಟನು ನೀತಿವಂತನಾಗಿ ಬದಲಾಗುವದು ಸುವಾರ್ತೆಯ ಮುಖ್ಯ ಸಂದೇಶವಾಗಿದೆ. ಯೋಸೇಫನು ಹೊಸ ಒಡಂಬಡಿಕೆಯಲ್ಲಿ ನೀತಿವಂತನೆಂದು ಕರೆಯಲ್ಪಟ್ಟ ಮೊದಲ ವ್ಯಕ್ತಿಯಾಗಿದ್ದಾನೆ. ಆತನು ನೀತಿವಂತನೆಂದು ಕರೆಯಲ್ಪಟ್ಟದ್ದು, ಇನ್ನೊಬ್ಬರ ಪಾಪವನ್ನು ಮರೆಮಾಡಿ, ಆ ವ್ಯಕ್ತಿ ನಾಚಿಕೆಗೆ ಈಡಾಗದಂತೆ ಕಾಪಾಡಲು ಬಯಸಿದ ದೃಷ್ಟಾಂತದಲ್ಲಿ. ನಿಜವಾದ ನೀತಿವಂತನ ಮನೋಭಾವ ಇದಾಗಿದೆ.

ಯಾರೋ ಪಾಪಕ್ಕೆ ಬಿದ್ದ ಸುದ್ದಿ ನಿಮ್ಮ ಕಿವಿಗೆ ಬಿದ್ದಾಗ, ನಿಮ್ಮ ’ಮೊದಲ ಪ್ರತಿಕ್ರಿಯೆ’ ಏನಾಗಿರುತ್ತದೆ? ನೀವು ಸಜ್ಜನರಾಗಿದ್ದರೆ, ನೀವು ಅದನ್ನು ಮುಚ್ಚಿಡಲು ಬಯಸುತ್ತೀರಿ. ನೀವು ದುಷ್ಟರಾಗಿದ್ದರೆ, ಇತರರೊಂದಿಗೆ ಸಂಭಾಷಣೆಯಲ್ಲಿ ಅದನ್ನು ಬಯಲು ಪಡಿಸುತ್ತೀರಿ. ಹಾಗಿರುವಾಗ ಯೋಸೇಫನು, ಪವಿತ್ರಾತ್ಮನ ವರವಿಲ್ಲದೆಯೂ ಮತ್ತು ಹೊಸ ಒಡಂಬಡಿಕೆಗೆ ಸೇರಿದವನು ಆಗಿರದಿದ್ದರೂ, ಹೊಸದಾಗಿ ಹುಟ್ಟಿದವರೆಂದು ಹೇಳಿಕೊಳ್ಳುವ ಲಕ್ಷಾಂತರ ವಿಶ್ವಾಸಿಗಳಿಗಿಂತ ಬಹಳ ಹೆಚ್ಚಿನ ನೀತಿವಂತನಾಗಿದ್ದುದನ್ನು ನಾವು ಕಾಣುತ್ತೇವೆ. ’ಹಳೆಯ ಒಡಂಬಡಿಕೆ’ಯ ಮಟ್ಟವನ್ನು ಮಾತ್ರ ತಿಳಿದಿದ್ದ ಯೋಸೇಫನು, ತನ್ನ ದೃಷ್ಟಿಯಲ್ಲಿ ಪಾಪವೆಂದು ಕಂಡುಬಂದದ್ದನ್ನು ಮುಚ್ಚಿಡಲು ನಿಶ್ಚಯಿಸಿದನು. ಆತನು ಮರಿಯಳ ಹೆಸರನ್ನು ಕೆಡಿಸದೇ ಇದ್ದುದಕ್ಕೆ ದೇವರಿಗೆ ಸ್ತೋತ್ರ. ಆತನು ಹಾಗೇನಾದರೂ ಮಾಡಿದ್ದರೆ, ನಿಜವನ್ನು ಅರಿತಾಗ - ಆಕೆ ನೂರಕ್ಕೆ ನೂರರಷ್ಟು ಪರಿಶುದ್ಧಳು ಮತ್ತು ನಿರ್ದೋಷಿಯು ಆಗಿದ್ದಳು ಎಂಬುದನ್ನು - ಆತನು ಎಂತಹ ಖೇದ ಮತ್ತು ಮನೋವ್ಯಥೆಗೆ ಒಳಗಾಗುತ್ತಿದ್ದನು ಎಂಬುದನ್ನು ಯೋಚಿಸಿರಿ!!

ಈ ವಿಷಯಗಳು ನಮ್ಮ ಶಿಕ್ಷಣಕ್ಕಾಗಿ ಬರೆಯಲ್ಪಟ್ಟಿವೆ. ನೀವು ಇತರರ ಕುರಿತಾಗಿ ಹರಡಿದ ಸುದ್ದಿಗಳು ಸುಳ್ಳೆಂದು ಆ ಮೇಲೆ ನಿಮಗೆ ತಿಳಿದರೆ, ಅವುಗಳನ್ನು ಹಿಂತೆಗೆದುಕೊಳ್ಳಲು ಆಗುತ್ತದೆಯೇ? ನೀವು ಸುದ್ದಿಯನ್ನು ಒಬ್ಬನಿಗೆ ತಿಳಿಸಿದ್ದರೆ, ಬಹುಶಃ ಆತನು ಅದನ್ನು ಇನ್ನೂ ಹತ್ತು ಜನರಿಗೆ ತಿಳಿಸಿರಬಹುದು ಮತ್ತು ಅವರು ಇನ್ನೂ ಹಲವರಿಗೆ ಪ್ರಸಾರ ಮಾಡಿರಬಹುದು. ಹಾಗಾಗಿ ಹೊಸ ಒಡಂಬಡಿಕೆಯ ಮೊದಲನೇ ಅಧ್ಯಾಯದಿಂದ ನಮಗೆ ಸಿಗುವ ಒಂದು ಎಚ್ಚರಿಕೆ ಮತ್ತು ಉತ್ತಮ ಮಾದರಿ ಇದಾಗಿದೆ. ಇತರರ ಪಾಪಗಳನ್ನು ಮುಚ್ಚಿಡಿರಿ. ಯೋಸೇಫನ ಉದಾಹರಣೆಯಿಂದ ಕಲಿಯಬೇಕಾದ ಪಾಠ ಇದು.

ಶೇಮ್ ಮತ್ತು ಯೆಫೆತ:

ನಾವು ಆದಿ. 9:20-27 ರಲ್ಲಿ ಓದುವಂತೆ, ಒಂದು ದಿನ ನೋಹನು ಕುಡಿದು ಅಮಲೇರಿದ್ದರಿಂದ, ಗುಡಾರದಲ್ಲಿ ಬೆತ್ತಲೆಯಾಗಿ ಬಿದ್ದಿದ್ದನು. ಅವನ ಮಗನಾದ ಹಾಮನು, ಬೆತ್ತಲೆಯಾಗಿದ್ದ ತಂದೆಯನ್ನು ನೋಡಿ, ಹೊರಗಿದ್ದ ತನ್ನ ಅಣ್ಣತಮ್ಮಂದಿರಿಗೆ ತಿಳಿಸಿದನು. ಹೀಗೆ ಹಾಮನು ತನ್ನ ತಂದೆಯನ್ನು ಅವಮಾನ ಪಡಿಸಿದ್ದರಿಂದ ಶಾಪಗ್ರಸ್ತನಾದನು. ಶೇಮ್ ಮತ್ತು ಯೆಫೆತರು ಕಂಬಳಿಯನ್ನು ತೆಗೆದುಕೊಂಡು ಹಿಮ್ಮುಖವಾಗಿ ನಡೆದು, ಅದನ್ನು ತಮ್ಮ ತಂದೆಯ ಮೇಲೆ ಹೊದಿಸಿ, ಅವನ ಮಾನವನ್ನು ಕಾಪಾಡಿದರು. ಹಾಗಾಗಿ ಅವರು ಆಶೀರ್ವಾದವನ್ನು ಹೊಂದಿದರು. ಇದರಲ್ಲಿ ನಮಗೆ ಒಂದು ಮುಖ್ಯವಾದ ಸಂದೇಶವಿದೆ. ಸತ್ಯವೇದದಲ್ಲಿ ಮೊದಲ ಬಾರಿ, ತಂದೆಯನ್ನು ಆವಮಾನ ಪಡಿಸಿದ್ದಕ್ಕಾಗಿ, ದೇವರು ಒಬ್ಬ ಮಗ ಮತ್ತು ಆತನ ಸಂತಾನವನ್ನು ಶಿಕ್ಷಿಸಿದ್ದನ್ನು ನಾವು ಇಲ್ಲಿ ಓದುತ್ತೇವೆ.

ನಾವು ಒಬ್ಬ ಮೇಲಧಿಕಾರಿಗೆ ಅಗೌರವ ತೋರಿಸುವುದು, ದೇವರ ಮುಂದೆ ಒಂದು ಗಂಭೀರ ವಿಷಯವಾಗಿದೆ. ನೀವು ನಿಮ್ಮ ತಂದೆ ಅಥವಾ ಒಬ್ಬ ದೈವಿಕ ಮನುಷ್ಯನಲ್ಲಿ ಒಂದು ದುರ್ಬಲತೆಯನ್ನು ನೋಡಿದಾಗ, ಶಾಪ ಅಥವಾ ಕೇಡಿನಿಂದ ನೀವು ದೂರವಿರಲು ಬಯಸಿದರೆ, ಹಾಮನು ಮಾಡಿದಂತೆ ಅವರ ನಗ್ನತೆಯನ್ನು ಇತರರಿಗೆ ಪ್ರಕಟ ಪಡಿಸಬೇಡಿ. ಶೇಮ್ ಮತ್ತು ಯೆಫೆತರಂತೆ ಆ ಸಂಗತಿಯನ್ನು ಮುಚ್ಚಿಡಿರಿ. "ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ" (1 ಪೇತ್ರ. 4:8; ಜ್ಞಾನೋ. 10:12).

ನೋಹನು ಶೇಮ್ ಮತ್ತು ಯೆಫೆತ್‌ರಿಗೆ ಪರಸ್ಪರ ಅನ್ಯೋನ್ಯತೆಯ ಆಶೀರ್ವಾದವನ್ನು ನೀಡಿ, "ದೇವರು ಯೆಫೆತನನ್ನು ವಿಸ್ತರಿಸಲಿ. ಅವನು ಶೇಮನ ಗುಡಾರಗಳಲ್ಲಿ ವಾಸವಾಗಿರಲಿ," ಎಂದು ಹೇಳಿದನು (ಆದಿ. 9:27). ಒಟ್ಟಾಗಿ ಜೀವಿಸಿ, ಪರಸ್ಪರ ಪಾಪಗಳನ್ನು ಮುಚ್ಚುವಂತ ವಿಶ್ವಾಸಿಗಳೊಂದಿಗೆ ಅನ್ಯೋನ್ಯತೆಯನ್ನು ನಾವೂ ಸಹ ಬೆಳೆಸಿಕೊಳ್ಳಬೇಕು. ಕೇವಲ ಇಂತಹ ವಿಶ್ವಾಸಿಗಳು ಯೇಸು ಕ್ರಿಸ್ತನ ಸಭೆಯನ್ನು ಕಟ್ಟುತ್ತಾರೆ.