WFTW Body: 

ಜನರನ್ನು ದ್ವೇಷಿಸುವ ತಪ್ಪು ಮನೋಭಾವದ ಬಗ್ಗೆ ಯೇಸುವು ಮಾತನಾಡಿದ್ದಾರೆ. "ನಿಮ್ಮ ನೆರೆಯವರನ್ನು ಪ್ರೀತಿಸಿ ಶತ್ರುಗಳನ್ನು ದ್ವೇಷಿಸಬೇಕೆಂದು ಹೇಳಿಯದೆ ಎಂಬುದಾಗಿ ಕೇಳಿದ್ದೀರಷ್ಟೆ?" (ಮತ್ತಾ. 5:43). ಹಳೆ ಒಡಂಬಡಿಕೆಯಲ್ಲಿ ಇಸ್ರಾಯೇಲ್ಯರು ಕಾನಾನ್ಯರನ್ನು ದ್ವೇಷಿಸಿದರು, ಅವರು ಫಿಲಿಷ್ಟಿಯರನ್ನು ದ್ವೇಷಿಸಿದರು, ಅಮೋರಿಯರು ಹಾಗೂ ಮೋವಾಬ್ಯರು ಹೀಗೆ ಅನೇಕರನ್ನು ಅವರು ದ್ವೇಷಿಸಿದರು. ಅವರು ಅವರನ್ನು ನಾಶಮಾಡುವ ಉದ್ದೇಶವುಳ್ಳವರಾಗಿದ್ದರು. ಆದರೆ ಈಗ ಯೇಸು ಹೀಗೆ ಹೇಳುತ್ತಾರೆ, "ನಾನು ನಿಮಗೆ ಹೇಳುತ್ತೇನೆ ನಿಮ್ಮ ಶತ್ರುಗಳನ್ನು ಪ್ರೀತಿಸಿರಿ." ಹಾಗಾದರೆ ಕಾಲಮಾನಗಳಲ್ಲಿ ದೇವರು ಬದಲಾಗಿದ್ದಾರೆಯೇ? ಇಲ್ಲ. ಈಗ ಮನುಷ್ಯನಿಗೆ ಯೇಸು ಕ್ರಿಸ್ತನು ಜೀವಿಸಿದಂತೆಯೇ ಜೀವಿಸುವ ಅತ್ಯುನ್ನತ ಸಾಧ್ಯತೆಗಳಿವೆ. ಹಳೆ ಒಡಂಬಡಿಕೆಯಲ್ಲಿ ಮನುಷ್ಯನು ಯೇಸುವು ಜೀವಿಸಿದಂತೆ ಜೀವಿಸಲು ಸಮರ್ಥನಾಗಿರಲಿಲ್ಲ. ಪವಿತ್ರಾತ್ಮನಿಲ್ಲದೆ ದೇವರು ಬಯಸುವ ರೀತಿಯಲ್ಲಿ ನಿಮ್ಮ ಶತ್ರುಗಳನ್ನು ನಿಜವಾಗಿಯೂ ಪ್ರೀತಿಸುವುದು ಅಸಾಧ್ಯ. ನೀವು ತುಂಬಾ ದಯಾಳು ವ್ಯಕ್ತಿಯೆಂದು ಸ್ವಲ್ಪ ಗೌರವ ಪಡೆದುಕೊಳ್ಳಲು ನಿಮ್ಮ ಶತ್ರುಗಳನ್ನು ಪ್ರೀತಿಸಬಹುದು, ಆದರೆ ದೇವರ ಮಹಿಮೆಗಾಗಿ ನಿಮ್ಮ ಶತ್ರುಗಳನ್ನು ಪ್ರೀತಿಸುವುದರ ಬಗ್ಗೆ ಏನು? ಪವಿತ್ರಾತ್ಮನಿಂದ ತುಂಬಿಸಲ್ಪಟ್ಟ ವ್ಯಕ್ತಿ ಮಾತ್ರ ಅದನ್ನು ಮಾಡಲು ಸಾಧ್ಯ. "ಆದುದರಿಂದ ನಾನು ನಿಮಗೆ ಹೇಳುತ್ತೇನೆ, ನಿಮ್ಮ ಶತ್ರುಗಳನ್ನು ಪ್ರೀತಿಸಿರಿ ಮತ್ತು ನಿಮ್ಮನ್ನು ಹಿಂಸೆಪಡಿಸುವವರಿಗೋಸ್ಕರ ಪ್ರಾರ್ಥಿಸಿರಿ."

ಜಗತ್ತಿನಾದ್ಯಂತ ಶಿಷ್ಯರಾಗಿರುವ ಎಲ್ಲಾ ವಿಶ್ವಾಸಿಗಳಿಗೂ ನಾವು ಈ ಆಜ್ಞೆಗಳನ್ನು ಉಪದೇಶಿಸಬೇಕಾಗಿದೆ, ಎಂಬುದನ್ನು ನೆನಪಿಡಿ. ನಾನು ಸಭೆಯನ್ನು ಕಟ್ಟಬೇಕಾದರೆ, ಸಭೆಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಶತ್ರುಗಳಲ್ಲಿ ಪ್ರತಿಯೊಬ್ಬರನ್ನು ಪ್ರೀತಿಸುವ ಸಭೆಯನ್ನು ನಾನು ಕಟ್ಟಬೇಕು. ಅವನಿಗೆ 10 ಮಂದಿ ಶತ್ರುಗಳಿದ್ದು ಮತ್ತು ಅವನು 9 ಮಂದಿಯನ್ನು ಪ್ರೀತಿಸಿದರೆ, ಅವನು ಆ ಆಜ್ಞೆಯನ್ನು ಪಾಲಿಸಿಲ್ಲ. ಯೇಸು ಹೇಳಿದರು, "ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ ... ನಾನು ಅವರಿಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವುದಕ್ಕೆ ಅವರಿಗೆ ಉಪದೇಶ ಮಾಡಿರಿ." ಬೇರೆ ರೀತಿಯಲ್ಲಿ ಹೇಳುವುದಾದರೆ, ನಾನು ಮೊದಲು ಇಂತಹ ಅನುಭವಗಳ ಮೂಲಕ ಹೋಗಬೇಕು. ಮತ್ತು ಅದಕ್ಕಾಗಿಯೇ ಪ್ರತಿಯೊಬ್ಬ ದೇವರ ಸೇವಕನು ಶತ್ರುಗಳನ್ನು ಎದುರಿಸುವುದನ್ನು ದೇವರು ಅನುಮತಿಸುತ್ತಾರೆ. ಇದರಿಂದ ಆತನು ಅವರನ್ನು ಪ್ರೀತಿಸುವುದನ್ನು ಕಲಿಯಬಹುದು. ಆಗ ಆತನು ಇತರರಿಗೆ ತಮ್ಮ ಶತ್ರುಗಳನ್ನು ಪ್ರೀತಿಸುವುದು ಹೇಗೆ ಎಂಬುದನ್ನು ಕಲಿಸಬಹುದು.

ಇದೇ ಕಾರಣಕ್ಕಾಗಿ ದೇವರ ಪ್ರತಿಯೊಬ್ಬ ನಿಜವಾದ ಸೇವಕನು ಹಿಂಸೆಯನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಆಗ ಮಾತ್ರ ಅವನು ತನ್ನನ್ನು ಹಿಂಸಿಸುವವರಿಗಾಗಿ ಹೇಗೆ ಪ್ರಾರ್ಥಿಸಬೇಕೆಂದು ಕಲಿಯಬಹುದು, ಮತ್ತು ಅವನು ಇತರರಿಗೂ ಸಹ ತಮ್ಮನ್ನು ಹಿಂಸಿಸುವವರಿಗಾಗಿ ಹೇಗೆ ಪ್ರಾರ್ಥಿಸಬೇಕೆಂದು ಕಲಿಸಬಹುದು. ಅದಕ್ಕಾಗಿ ಯೇಸು ಹೇಳಿದರು, "ಇದರಿಂದ ನೀವು ಸ್ವರ್ಗದಲ್ಲಿರುವ ನಿಮ್ಮ ತಂದೆಯ ಮಕ್ಕಳಾಗಬಹುದು,"ಎಂದು. "ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುವ ಮತ್ತು ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆ ಸುರಿಸುವಂತಹ" ನಮ್ಮ ಸ್ವರ್ಗೀಯ ತಂದೆಯನ್ನು ನೋಡಬೇಕೆಂದು ಆತನು ನಮಗೆ ಸೂಚಿಸುತ್ತಾನೆ (ಮತ್ತಾ. 5:45).

ಇಬ್ಬರು ರೈತರು ಇದ್ದಾರೆಂದು ನಾವು ಊಹಿಸಿಕೊಳ್ಳೋಣ. ಒಬ್ಬನು ನಾಸ್ತಿಕನು ಮತ್ತು ಇನ್ನೊಬ್ಬನು ದೇವರಿಗೆ ಭಯಪಡುವ ರೈತ. ಅವರ ಹೊಲಗಳು ಒಂದಕ್ಕೊಂದು ಪಕ್ಕದಲ್ಲಿವೆ, ಮತ್ತು ಒಬ್ಬ ವ್ಯಕ್ತಿ ನಿರಂತರವಾಗಿ ಪ್ರಾರ್ಥಿಸುತ್ತಾನೆ, ಇನ್ನೊಬ್ಬನು ದೇವರಿಲ್ಲ ಮತ್ತು ಇದೆಲ್ಲವೂ ವ್ಯರ್ಥವಾದವುಗಳು ಎಂದು ಭಾವಿಸುತ್ತಾನೆ. ಆದರೂ ದೇವರು ಅವರಿಬ್ಬರ ಮೇಲೆಯೂ ಮತ್ತು ಅವರ ಹೊಲಗಳ ಮೇಲೆಯೂ ಸೂರ್ಯನು ಉದಯಿಸುವಂತೆ ಮಾಡುತ್ತಾರೆ! ದೇವರು ಅವರಿಬ್ಬರ ಹೊಲಗಳಿಗೂ ಸಮಾನವಾಗಿ ಮಳೆ ಸುರಿಯುವಂತೆ ಮಾಡುತ್ತಾರೆ, ಇದರಿಂದ ಅವರಿಗೆ ಒಳ್ಳೆಯ ಬೆಳೆ ಬೆಳೆಯುತ್ತದೆ ಮತ್ತು ಅವರ ಮರಗಳಲ್ಲಿ ಒಳ್ಳೆಯ ಹಣ್ಣು ಬೆಳೆಯುತ್ತದೆ. ದೇವರು ಎಷ್ಟು ಒಳ್ಳೆಯವರು ಎಂದು ನೀವು ಕಂಡಿದ್ದೀರಾ! ಅವರು ನಾಸ್ತಿಕನ ಮೇಲೆಯೂ ದೇವಭಯ ಇರುವ ರೈತನ ಮೇಲೆಯೂ ಒಳ್ಳೆಯದನ್ನು ಸುರಿಸುತ್ತಾರೆ ಹಾಗೂ ನೀವು ಹಾಗೆಯೇ ಮಾಡಬೇಕೆಂದು ಹೇಳುತ್ತಾರೆ. ನೀನು ದೇವರ ಸದ್ಗುಣಗಳನ್ನು ಪಡೆದುಕೋ - ನಿನಗೆ ಒಳ್ಳೆಯವನಾಗಿರುವಾತನಿಗೂ ಮತ್ತು ನಿನಗೆ ಕೆಟ್ಟವನಾಗಿರುವಾತನಿಗೂ ಸಮಾನವಾಗಿ ಒಳ್ಳೆಯವನಾಗಿರು. ಪವಿತ್ರಾತ್ಮನ ಬಲವನ್ನು ಹೊಂದದೆ ಈ ರೀತಿ ದೇವರ ಗುಣಗಳನ್ನು ನಾವು ಹೊಂದುವುದು ಅಸಾಧ್ಯವಾದದ್ದು - ಅದಕ್ಕಾಗಿಯೇ ಹಳೆಯ ಒಡಂಬಡಿಕೆಯಲ್ಲಿ ಇಂತಹ ಆಜ್ಞೆಗಳು ನಮಗೆ ಕಂಡುಬರುವುದೇ ಇಲ್ಲ.

ಯೇಸು ಮುಂದುವರೆಯುತ್ತಾ ಹೇಳುತ್ತಾರೆ, "ನಾವು ನಮ್ಮನ್ನು ಪ್ರೀತಿಸುವವರನ್ನಷ್ಟೆ ಪ್ರೀತಿಸಿದರೆ, ಅದರಲ್ಲಿ ವಿಶೇಷವಾದದ್ದೇನೂ ಇಲ್ಲ, ಏಕೆಂದರೆ ಸುಂಕ ವಸೂಲಿ ಮಾಡುವವರು, ಕೊಲೆಗಾರರಂತಹ ಕೆಟ್ಟ ಪಾಪಿಗಳು, ಸುಳ್ಳು ಧರ್ಮಗಳನ್ನು ಅನುಸರಿಸುವವರು ಹಾಗೂ ಇತರ ಗುಂಪುಗಳ ಜನರು ಸಹ ಅದನ್ನೇ ಮಾಡುತ್ತಾರೆ. ಆದ್ದರಿಂದ ನೀವು ನಿಮ್ಮ ಸ್ನೇಹಿತರು ಅಥವಾ ನಿಮ್ಮ ಸಹೋದರರಿಗೆ ಮಾತ್ರ ಶುಭ ಹಾರೈಸಿದರೆ, ನೀವು ಅನ್ಯ ಜನರಿಗಿಂತ ವಿಶೇಷವಾದವರಲ್ಲ” (ಮತ್ತಾ. 5:47).

ಯೇಸುವು ಹೀಗೆ ಹೇಳಿದರು, "ನಾವು ನಮ್ಮನ್ನು ಪ್ರೀತಿಸುವವರನ್ನಷ್ಟೇ ಪ್ರೀತಿಸಿದರೆ, ಅದರಲ್ಲಿ ವಿಶೇಷವಾದದ್ದೇನೂ ಇಲ್ಲ."

ನೀವು ಯಾವಾಗಲಾದರೂ ನಿಮಗೆ ಶುಭ ಹಾರೈಸದವರ ಬಳಿಗೆ ಹೋಗಿ ಅವರಿಗೆ ಶುಭ ಹಾರೈಸಿದ್ದೀರಾ? ನಾನು ಅನೇಕ ಬಾರಿ ಅದನ್ನು ಮಾಡಿದ್ದೇನೆ. ನಾನು ಕರ್ತನ ಸೇವಕನಾಗಿರುವುದರಿಂದ, ಅನೇಕ ಜನರು ನಾನು ಸಾರುವ ಸತ್ಯಾಂಶಗಳ ನಿಮಿತ್ತ - ದೇವರ ವಾಕ್ಯದ ಸತ್ಯಾಂಶಗಳು - ನನ್ನ ವಿಷಯದಲ್ಲಿ ಅಸಮಾಧಾನಗೊಳ್ಳುತ್ತಾರೆ. ಕಳೆದ ಇಪ್ಪತ್ತು ಶತಮಾನಗಳಿಂದ, ಯೇಸು ಸ್ವಾಮಿ ಮತ್ತು ಪೌಲನು ಸೇರಿದಂತೆ ಅನೇಕ ದೇವರ ಸೇವಕರ ವಿಷಯದಲ್ಲಿ ಜನರು ಅಸಮಾಧಾನಗೊಂಡಂತೆ, ಕೆಲವರು ನನ್ನನ್ನು ರಸ್ತೆಯಲ್ಲಿ ಕಂಡರೆ ವಂದಿಸುವುದಿಲ್ಲ. ಕೆಲವೊಮ್ಮೆ ನಾನು ಅವರನ್ನು ವಂದಿಸುವ ಸಲುವಾಗಿ ರಸ್ತೆಯನ್ನು ದಾಟಿ ಹೋಗಿದ್ದೇನೆ, ಏಕೆಂದರೆ ಸತ್ಯವೇದ ಹೇಳುತ್ತದೆ, "ನಿಮ್ಮನ್ನು ವಂದಿಸಲು ಬಯಸದವರನ್ನು ವಂದಿಸಿ ನಿಮಗೆ ಅವರ ವಿಷಯದಲ್ಲಿ ಯಾವುದೇ ವಿರೋಧವಿಲ್ಲ ಎಂಬುದನ್ನು ತೋರಿಸಿರಿ”.

ಒಂದು ಸಾರಿ ಯಾರೋ ಒಬ್ಬರು, ನಿಮಗೆ ಎಷ್ಟು ಸ್ನೇಹಿತರಿದ್ದಾರೆ ಎಂದು ನನ್ನನ್ನು ಕೇಳಿದರು. ಆಗ ನಾನು ಪ್ರಪಂಚದಲ್ಲಿ ಎಷ್ಟು ಜನರಿದ್ದಾರೋ ಅಷ್ಟು ಸ್ನೇಹಿತರು ನನಗಿದ್ದಾರೆ, ಮತ್ತು ಆ ಸಂಖ್ಯೆಯು ಪ್ರತಿದಿನ ಹೆಚ್ಚಾಗುತ್ತಾ ಹೋಗುತ್ತದೆ ಎಂದು ಹೇಳಿದೆ! ಒಂದು ವೇಳೆ ಪ್ರಪಂಚದಲ್ಲಿ ಏಳು ನೂರು ಕೋಟಿ ಜನರಿದ್ದರೆ, ನನ್ನ ಮಟ್ಟಿಗೆ ಅವರೆಲ್ಲರೂ ನನ್ನ ಸ್ನೇಹಿತರು. ನನಗೆ ವೈರಿಗಳು ಯಾರೂ ಇಲ್ಲ. ಅವರೆಲ್ಲರನ್ನು ನಾನು ಪ್ರೀತಿಸುತ್ತೇನೆ. ಅವರು ನನ್ನನ್ನು ವೈರಿಯೆಂದು ಯೋಚಿಸಬಹುದು, ಆದರೆ ನಾನು ಅವರನ್ನು ವೈರಿಗಳೆಂದು ಯೋಚಿಸುವುದಿಲ್ಲ. ನನಗೆ ತೊಂದರೆ ಉಂಟುಮಾಡಿರುವ ಜನರಿಗಾಗಿ, ನನ್ನನ್ನು ಹಿಂಸಿಸಿದ ಜನರಿಗಾಗಿ ನಾನು ಪ್ರಾರ್ಥಿಸುತ್ತೇನೆ. ನನ್ನನ್ನು ಶಪಿಸಿದ ಜನರನ್ನು ನಾನು ಆಶೀರ್ವದಿಸಲು ಬಯಸುತ್ತೇನೆ. "ನಿಮ್ಮನ್ನು ಹಿಂಸೆ ಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ," ಎಂದು ದೇವರ ವಾಕ್ಯದಲ್ಲಿ ಬರೆಯಲ್ಪಟ್ಟಿದೆ (ಮತ್ತಾ. 5:44). ನೀವು ಹೀಗೆ ಮಾಡುತ್ತೀರಾ?

ನಿಮಗೆ ಯಾವ ಶಾಪವೂ ಯಾವ ಕೇಡೂ ಮಾಡಲಾರದೆಂದು ನಿಮಗೆ ಗೊತ್ತಿದೆಯೇ? ಯಾಕೆಂದರೆ, ನಾವು ದೇವರ ಆಶೀರ್ವಾದದ ಕೆಳಗಿದ್ದೇವೆ. ಕ್ರಿಸ್ತನು ಪ್ರತಿಯೊಂದು ಶಾಪವನ್ನು ಶಿಲುಬೆಯ ಮೇಲೆ ತೆಗೆದುಕೊಂಡನು. ಈಗ ನಾವು ದೇವರ ಆಶೀರ್ವಾದದ ಕೆಳಗಿದ್ದೇವೆ. ಯಾವ ವ್ಯಕ್ತಿಯಾದರೂ ನನ್ನನ್ನು ಶಪಿಸಿದರೆ ಅದು ಯಾವುದೇ ರೀತಿಯಲ್ಲಿ ನನಗೆ ತೊಂದರೆ ಕೊಡಲು ಆಗುವುದಿಲ್ಲ. ಅದು ಅವನಿಗೆ ಗೊತ್ತಿಲ್ಲ. ಮತ್ತು ನಾನು ಅದರ ಪ್ರತಿಯಾಗಿ ಅವನನ್ನು ಆಶೀರ್ವದಿಸಿ, "ದೇವರು ನಿನ್ನನ್ನು ಆಶೀರ್ವದಿಸಲಿ" ಎಂದು ಹೇಳುತ್ತೇನೆ. ಪ್ರಪಂಚದ ಪ್ರತಿ ಮನುಷ್ಯನ ಕಡೆಗೆ ತಿರುಗಿ ನಾನು ದೇವರು ನಿಮ್ಮನ್ನು ಆಶೀರ್ವದಿಸಲಿ, ಎಂದು ಹೇಳಬಲ್ಲೆ. ನಾನು ಯಥಾರ್ಥವಾಗಿ ಪ್ರತಿ ವ್ಯಕ್ತಿಗೂ ಅದನ್ನೇ ಆಶಿಸುತ್ತೇನೆ. ದೇವರು ಅವರನ್ನು ಆಶೀರ್ವದಿಸುತ್ತಾರೋ ಅಥವಾ ಇಲ್ಲವೋ, ಅದು ಆ ವ್ಯಕ್ತಿಯ ಮನೋಭಾವ ಮುಂತಾದವುಗಳ ಮೇಲೆ ಅವಲಂಬಿಸಿದೆ, ಆದರೆ ದೇವರು ಅವರನ್ನು ಆಶೀರ್ವದಿಸಬೇಕೆಂದು ನಾನು ಖಂಡಿತವಾಗಿ ಆಶಿಸುತ್ತೇನೆ.