WFTW Body: 

ದೇವರಲ್ಲಿ ನಂಬಿಕೆ ಇರಿಸದೆ ನೀವು ಬೇರೆ ಏನನ್ನು ಮಾಡಿದರೂ ದೇವರನ್ನು ಮೆಚ್ಚಿಸಲು ಸಾಧ್ಯವಿಲ್ಲ (ಇಬ್ರಿ. 11:6). ಹವ್ವಳು ಏದನ್ ತೋಟದಲ್ಲಿ ಪಾಪ ಮಾಡುವುದಕ್ಕೆ ಕಾರಣವೇನೆಂದರೆ, ಆಕೆಯಲ್ಲಿ ನಂಬಿಕೆಯಿರಲಿಲ್ಲ. ಏದೇನಿನಲ್ಲಿ ಆ ಆಕರ್ಷಕ ಮರವನ್ನು ನೋಡಿ ಆಕೆ ಶೋಧಿಸಲ್ಪಟ್ಟಾಗ, ಆಕೆಯಲ್ಲಿ ದೇವರ ಪರಿಪೂರ್ಣ ಪ್ರೀತಿ ಮತ್ತು ಜ್ಞಾನದ ಬಗ್ಗೆ ಭರವಸೆ ಇದ್ದಿದ್ದರೆ, ತನ್ನನ್ನು ಪ್ರೀತಿಸುವ ದೇವರು ಆ ಮರದ ಹಣ್ಣನ್ನು ತಿನ್ನಬೇಡವೆಂದು ತನಗೆ ಹೇಳಿದ್ದು ಏಕೆಂದು ಆಕೆಗೆ ತಿಳಿಯದಿದ್ದರೂ, ಆಕೆ ಆ ಪಾಪ ಮಾಡುತ್ತಿರಲಿಲ್ಲ. ಆದರೆ ಯಾವಾಗ ಸೈತಾನನು ಆಕೆಯಲ್ಲಿ ದೇವರ ಪ್ರೀತಿಯ ಬಗ್ಗೆ ಸಂಶಯವನ್ನು ಹುಟ್ಟಿಸಿದನೋ, ಆಕೆ ಬಹಳ ಬೇಗನೆ ಬಿದ್ದುಹೋದಳು.

ದೇವರು ನಾವು ಕೂಡ ಅನೇಕ ಸಂಗತಿಗಳನ್ನು ಮಾಡಬಾರದೆಂದು ನಿಷೇಧಿಸಿದ್ದಾರೆ ಮತ್ತು ನಮ್ಮ ಅನೇಕ ಪ್ರಾರ್ಥನೆಗಳು ಕೂಡ ಉಚಿತವಲ್ಲವೆಂದು ಅವರು ಉತ್ತರ ಕೊಡದಿರಲು ನಿಶ್ಚಯಿಸಬಹುದು. ಅಂತಹ ಸಂದರ್ಭಗಳಲ್ಲಿ ನಾವು ದೇವರ ಪರಿಪೂರ್ಣ ಪ್ರೀತಿ ಮತ್ತು ಜ್ಞಾನದಲ್ಲಿ ನಂಬಿಕೆಯಿಡಬೇಕು. ಶಿಲುಬೆಯ ಮೇಲೆ ಯೇಸುವು ಕೈಬಿಡಲ್ಪಟ್ಟಾಗಲೂ ತನ್ನ ತಂದೆಯ ಮೇಲೆ ನಂಬಿಕೆ ಇರಿಸಿದ್ದರು. ಅವರು, "ಓ ದೇವರೇ, ನನ್ನನ್ನು ಯಾಕೆ ಕೈಬಿಟ್ಟಿದ್ದೀಯಾ?" ಎಂದು ಪ್ರಶ್ನಿಸಲಿಲ್ಲ. ಅವರು ಹೇಳಿದ್ದು, "ನನ್ನ ದೇವರೇ ...." ಎಂಬುದಾಗಿ, ಅದರ ಅರ್ಥ, "ನೀವು ನನ್ನನ್ನು ಕೈಬಿಟ್ಟದ್ದು ಯಾಕೆಂದು ನನಗೆ ತಿಳಿಯದೇ ಇದ್ದರೂ, ನೀವೇ ನನ್ನ ದೇವರಾಗಿದ್ದೀರಿ".ಯೇಸುವು ಕೇಳಿದ ಪ್ರಶ್ನೆಗೆ ಪರಲೋಕದಿಂದ ಏನೂ ಉತ್ತರ ದೊರೆಯಲಿಲ್ಲ. ಆದರೂ ಯೇಸು ದೇವರನ್ನು ನಂಬಿ ಮರಣ ಹೊಂದಿದರು. ಯೇಸುವು ಹೇಳಿದ ಮಾತು, "ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ".. ’ಕೊನೆಯ ವರೆಗೂ ತಾಳುವುದು’ ಎಂಬುದರ ಅರ್ಥ ಇದಾಗಿದೆ.

ಯೇಸುವು ಪೇತ್ರನಿಗೆ ತಿಳಿಸಿದ ಹಾಗೆ, ಸೈತಾನನು ಪೇತ್ರನನ್ನು ಶೋಧಿಸಲು ಅಪ್ಪಣೆ ಕೇಳಿದನು. ಇದು ಸೈತಾನನು (ಹಳೆ ಒಡಂಬಡಿಕೆಯಲ್ಲಿ) ಯೋಬನನ್ನು ಶೋಧಿಸುವುದಕ್ಕೆ ದೇವರ ಅನುಮತಿಯನ್ನು ಕೇಳಿದ್ದಕ್ಕೆ ಹೋಲುತ್ತದೆ. ದೇವರ ಅನುಮತಿಯಿಲ್ಲದೆ ಸೈತಾನನು ನಮಗೆ ಏನನ್ನೂ ಮಾಡಲು (ನಮ್ಮನ್ನು ಶೋಧನೆಗೆ ಒಳಪಡಿಸಲೂ ಕೂಡ) ಸಾಧ್ಯವಿಲ್ಲ. ಆದರೆ ಪೇತ್ರನು ಶೋಧಿಸಲ್ಪಡುವಾಗ, ಆತನ ನಂಬಿಕೆ ಕುಂದಿಹೋಗದಂತೆ ಪ್ರಾರ್ಥನೆ ಮಾಡುವುದಾಗಿ ಯೇಸುವು ಆತನಿಗೆ ಭರವಸೆ ನೀಡಿದರು (ಲೂಕ. 22:31,32). ನಂಬಿಕೆ ಸ್ಥಿರವಾಗಿರುವುದೇ ಮುಖ್ಯವಾದ ಅಂಶವಾಗಿದೆ. ಯೇಸುವು ನಾವು ಶೋಧನೆಗೆ ಒಳಗಾಗಬಾರದೆಂದು ಅಥವಾ ನಮ್ಮ ಆರೋಗ್ಯ ಅಥವಾ ಐಶ್ವರ್ಯ ಅಥವಾ ನೌಕರಿ ಕಳೆದು ಹೋಗಬಾರದೆಂದು ಪ್ರಾರ್ಥಿಸುವುದಿಲ್ಲ, ಆದರೆ ನಮ್ಮ ನಂಬಿಕೆ ಬಿದ್ದು ಹೋಗಬಾರದೆಂದು ಮಾತ್ರ ಪ್ರಾರ್ಥಿಸುತ್ತಾರೆ.

ಆದ್ದರಿಂದ, ಯೇಸುವಿನ ದೃಷ್ಟಿಯಲ್ಲಿ ನಮ್ಮ ನಂಬಿಕೆಯು ಅತ್ಯಂತ ಅಮೂಲ್ಯ ಸಂಪತ್ತಾಗಿದೆ. ನಾವು ಸಹ ಪೇತ್ರನ ಹಾಗೆ ಶೋಚನೀಯವಾಗಿ ವಿಫಲರಾದರೂ, ನಮ್ಮಲ್ಲಿ ವಿಶ್ವಾಸವಿದ್ದರೆ ನಾವು ಎದೆಗುಂದುವುದಿಲ್ಲ. ನಾವು ಬಿದ್ದ ತಕ್ಷಣ ಮೇಲೆದ್ದು (ನಿಧಾನ ಮೇಲೇಳುವುದು ಅಲ್ಲ, ಆದರೆ ಜಿಗಿದು ಏಳುವುದು), ನಮ್ಮ ಪಾಪದಿಂದ ತಿರುಗಿಕೊಂಡು ದೇವರ ಮುಂದೆ ತಪ್ಪೊಪ್ಪಿಕೊಂಡಾಗ, ನಾವು ಯಜ್ಞದ ಕುರಿಯಾದಾತನ ರಕ್ತದ ಮೂಲಕ ಸಂಪೂರ್ಣವಾಗಿ ಶುದ್ಧಗೊಳಿಸಲ್ಪಡುತ್ತೇವೆ, ಮತ್ತು ಇದರ ಬಗ್ಗೆ ಸಾಕ್ಷಿ ಹೇಳುವುದರ ಮೂಲಕ ಸೈತಾನನನ್ನು ಜಯಿಸುತ್ತೇವೆ (ಪ್ರಕ. 12:11). ನಾವು ಯೇಸುವಿನ ರಕ್ತದಿಂದ ಶುದ್ಧೀಕರಿಸಲ್ಪಟ್ಟಿದ್ದೇವೆ ಮತ್ತು ಇನ್ನು ಮುಂದೆ ದೇವರು ನಮ್ಮ ಹಿಂದಿನ ಯಾವ ಪಾಪವನ್ನು ಸಹ ನೆನಪಿಸಿಕೊಳ್ಳುವುದಿಲ್ಲ, ಎಂದು ನಾವು ಸೈತಾನನ ಮುಂದೆ ಒಪ್ಪಿಕೊಳ್ಳಬೇಕು (ಇಬ್ರಿ. 8:12). ಇದನ್ನು ನಾವು ನಮ್ಮ ಬಾಯಿಯಿಂದ ಸೈತಾನನಿಗೆ ಹೇಳಬೇಕು, ಏಕೆಂದರೆ ಅವನಿಗೆ ನಮ್ಮ ಆಲೋಚನೆಗಳು ಕೇಳಿಸುವುದಿಲ್ಲ. ಹೀಗೆ ನಾವು ಅವನನ್ನು ಎದುರಿಸಿ ಸೋಲಿಸುತ್ತೇವೆ ಮತ್ತು ಅವನು ನಮ್ಮನ್ನು ಬಿಟ್ಟು ಓಡಿಹೋಗುವನು.

"ಓ ನನ್ನ ಶತ್ರುವೇ, ನನ್ನ ವಿಷಯದಲ್ಲಿ ಹಿಗ್ಗಬೇಡ; ನಾನು ಬಿದ್ದರೂ ಏಳುವೆನು, ಕತ್ತಲಲ್ಲಿ ಕೂತಿದ್ದರೂ ಕರ್ತನು ನನಗೆ ಬೆಳಕಾಗಿರುವನು. ಆತನು ನನ್ನನ್ನು ಬೆಳಕಿಗೆ ತರುವನು. ಇದನ್ನು ನೋಡುವಾಗ ನಾಚಿಕೆಯು ನನ್ನ ಶತ್ರುವನ್ನು ಆವರಿಸುವುದು, ಏಕೆಂದರೆ ’ನಿನ್ನ ಕರ್ತನಾದ ದೇವರು ಎಲ್ಲಿದ್ದಾನೆ?’ ಎಂದು ಅವನು ನನ್ನನ್ನು ಪ್ರಶ್ನಿಸಿದ್ದನು. ಆಗಲೇ ಆತನು ಬೀದಿಯ ಕೆಸರಿನಂತೆ (ನಮ್ಮ ಕಾಲುಗಳ ಕೆಳಗೆ) ತುಳಿಸಲ್ಪಡುವನು(ಮೀಕ. 7:8-10).

ನಾವು ಎಲ್ಲಾ ಸಮಯದಲ್ಲಿ ಧೈರ್ಯದಿಂದ ಹೀಗೆ ಹೇಳಬೇಕು, "ಕರ್ತನು ನನ್ನ ಸಹಾಯಕನು. ನಾನು ಯಾವುದಕ್ಕೂ (ಮನುಷ್ಯನಿಗೆ ಅಥವಾ ದೆವ್ವಕ್ಕೆ ಅಥವಾ ಸನ್ನಿವೇಶಕ್ಕೆ ಅಥವಾ ಬೇರೆ ಯಾವುದಕ್ಕಾದರೂ) ಹೆದರುವುದಿಲ್ಲ, ಏಕೆಂದರೆ ದೇವರು ಎಂದಿಗೂ ನನ್ನನ್ನು ಕೈಬಿಡುವುದಿಲ್ಲ ಅಥವಾ ತೊರೆಯುವುದಿಲ್ಲ, ಎಂಬ ವಾಗ್ದಾನ ನನಗಿದೆ" (ಇಬ್ರಿ. 13:6,5). ಈ ರೀತಿಯಾಗಿ ನಾವು ನಮ್ಮ ನಂಬಿಕೆಯನ್ನು ಧೈರ್ಯವಾಗಿ ಅರಿಕೆ ಮಾಡಬೇಕು.