WFTW Body: 

ಅಪೊಸ್ತಲ ಪೌಲನು 2ಕೊರಿಂಥದವರಿಗೆ 2:14ರಲ್ಲಿ ಹೇಳಿರುವ ಮಾತು, "ದೇವರಿಗೆ ಸ್ತೋತ್ರವಾಗಲಿ! ದೇವರು ನಮ್ಮನ್ನು ಯಾವಾಗಲೂ ಅವರ ಜಯೋತ್ಸವದೊಡನೆ ಮುನ್ನಡೆಸುತ್ತಾರೆ." ಇದೇ ವಚನವನ್ನು 'Living Bible'ನ ಭಾವಾನುವಾದವು ಹೀಗೆ ವಿವರಿಸುತ್ತದೆ, "ದೇವರಿಗೆ ಧನ್ಯವಾದಗಳು! ಕ್ರಿಸ್ತನು ನಮ್ಮಲ್ಲಿ ಏನು ಕಾರ್ಯ ಮಾಡಿದ್ದಾನೋ, ಅದರಿಂದ ದೇವರು ನಮ್ಮ ಮೇಲೆ ಜಯಶಾಲಿಯಾಗಿದ್ದಾರೆ!" ಆದುದರಿಂದ ನಾವು ನಮ್ಮ ಜೀವಿತದಲ್ಲಿ ವಿಜಯೋತ್ಸವದಲ್ಲಿ ಜೀವಿಸಲು, ನಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ದೇವರು ನಮ್ಮ ಮೇಲೆ ಜಯ ಹೊಂದಬೇಕು.

ಮುಂದೆ ಬರಲಿರುವ ಒಂದು ದಿನದಲ್ಲಿ ಪ್ರತಿಯೊಬ್ಬರೂ ಮೊಣಕಾಲೂರಿ, ಯೇಸುವನ್ನು ತಮ್ಮ ಒಡೆಯನೆಂದು (ಕರ್ತನೆಂದು) ಸ್ವೀಕರಿಸುತ್ತಾರೆ (ಫಿಲಿ. 2:10,11). ಆದರೆ ಅದಕ್ಕೆ ಮೊದಲು ಈಗ, ಯೇಸುವಿಗೆ ನಿಮ್ಮ ಶರೀರಭಾವದ ಪ್ರತಿಯೊಂದು ದುರಾಸೆಯು ತಲೆಬಾಗಬೇಕು ಮತ್ತು ಆತನೇ ಒಡೆಯನೆಂದು (ಕರ್ತನೆಂದು) ಒಪ್ಪಿಕೊಳ್ಳಬೇಕು. ನಿಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿರುವ ದುರಾಸೆಗಳು ಸೋತು ತಲೆಬಾಗಬೇಕು ಮತ್ತು ಯೇಸುವೇ ನಿಮ್ಮ ದೇಹದ ಒಡೆಯನು(ಕರ್ತನು), ಎಂದು ಒಪ್ಪಿಕೊಳ್ಳಬೇಕು.

"ಕರ್ತನ ಖಡ್ಗವು ತಲೆಯಿಂದ (ಉತ್ತರ) ಪಾದದ (ದಕ್ಷಿಣ) ವರೆಗೆ ಸಕಲ ನರಪ್ರಾಣಿಗಳ ಮೇಲೆ ಬೀಳುವುದು; ಆಗ ಕರ್ತನು ಎಲ್ಲಾ ಜನರ ವಿರುದ್ಧವಾಗಿ ತನ್ನ ಖಡ್ಗವನ್ನು ಎತ್ತಿದ್ದಾನೆಂದು ಅವರಿಗೆ ಗೊತ್ತಾಗುವುದು" (ಯೆಹೆ. 21:4,5).

ದೇವರು ನಮಗಾಗಿ ಸಂಕಲ್ಪಿಸಿದ ಗುರಿ, "ಎಲ್ಲದರಲ್ಲೂ ಯೇಸು ಕ್ರಿಸ್ತನೇ ಪ್ರಾಮುಖ್ಯನಾಗಿರಬೇಕು" ಎಂಬುದಾಗಿದೆ (ಕೊಲೊ. 1:18). ನೀವು ಕೂಡ ಇದನ್ನೇ ನಿಮ್ಮ ಗುರಿಯಾಗಿಸಿಕೊಂಡರೆ, ಆಗ ಎಲ್ಲಾ ಸಮಯದಲ್ಲಿ - ನಿಮ್ಮ ಜೀವನದಲ್ಲಿ ಮತ್ತು ನೀವು ಆತನಿಗಾಗಿ ಸಾಕ್ಷಿ ನೀಡುವುದರಲ್ಲಿ - ನೀವು ದೇವರ ಸಹಾಯವನ್ನು ಪಡೆಯುವಿರಿ, ಎಂದು ನೀವು ನಂಬಬಹುದು.

ನಿಮ್ಮ ಪ್ರತಿಯೊಂದು ಕಾರ್ಯದಲ್ಲಿ ಕ್ರಿಸ್ತನಿಗೆ ಮೊದಲನೆಯ ಸ್ಥಾನವನ್ನು ಕೊಡಬೇಕು, ಅಂದರೆ ನೀವು ಸಮಯವನ್ನು ಮತ್ತು ಹಣವನ್ನು ಬಳಸುವ ರೀತಿಯಲ್ಲಿ, ನೀವು ಓದುವ ಪುಸ್ತಕಗಳಲ್ಲಿ, ಆಲಿಸುವ ಸಂಗೀತದಲ್ಲಿ, ನೋಡುವ ’ದೂರದರ್ಶನ’ ಕಾರ್ಯಕ್ರಮಗಳಲ್ಲಿ, ನೀವು ಮಾಡುವ ಸ್ನೇಹಿತರ ಸಹವಾಸದಲ್ಲಿ, ಆಡುವ ಒಂದೊಂದು ಮಾತಿನಲ್ಲಿ, ಇವೆಲ್ಲದರಲ್ಲೂ ಯೇಸುವನ್ನು ಪ್ರಭುವಾಗಿ ಸ್ವೀಕರಿಸುವುದರ ಅರ್ಥ ಇದೇ ಆಗಿದೆ. ಹೀಗೆ ಮಾಡಿದರೆ ಮಾತ್ರ ದೇವರು ಪ್ರತಿಯೊಂದು ಕ್ಷೇತ್ರದಲ್ಲಿ ನಿಮ್ಮನ್ನು ಆಳುತ್ತಿದ್ದಾರೆಂದು ನೀವು ಖಚಿತಪಡಬಹುದಾಗಿದೆ. ಇದು ಒಂದು ರಾತ್ರಿಯಲ್ಲಿ ಆಗುವ ಕಾರ್ಯವಲ್ಲ. ಆದರೆ ಇದನ್ನು ನಿಮ್ಮ ದೀರ್ಘಾವಧಿಯ ಗುರಿಯನ್ನಾಗಿಸಿಕೊಂಡು, ಅದಕ್ಕಾಗಿ ಶ್ರಮಿಸಬೇಕು. ಆಗ ನೀವು ದಿನದಿಂದ ದಿನಕ್ಕೆ ಮತ್ತು ವರ್ಷದಿಂದ ವರ್ಷಕ್ಕೆ ಆ ಗುರಿಯ ಹತ್ತಿರ ಸರಿಯುತ್ತೀರಿ.

ಯೇಸುವು ಲೋಕದ ಪಾಪಗಳನ್ನು ಹೊತ್ತ ದೇವರ ಕುರಿಮರಿಯಾಗಿದ್ದನು. "ವಧಿಸುವುದಕ್ಕಾಗಿ (ಕೊಲ್ಲುವುದಕ್ಕಾಗಿ) ನೇಮಿಸಿದ ಕುರಿಗಳು," ಎಂಬ ಕರೆಯನ್ನು ಈಗ ನಾವು ಹೊಂದಿದ್ದೇವೆ (ರೋಮಾ. 8:36), ಮತ್ತು ನಾವು ನಮ್ಮ ವಿರುದ್ಧ ಇತರರು ಮಾಡುವ ಪಾಪಗಳನ್ನು ಸಹಿಸಿಕೊಳ್ಳಬೇಕು. ಮೊರೀಯ ಬೆಟ್ಟದಲ್ಲಿ ನಡೆದ ಹಾಗೆ, ಕಟ್ಟಿಗೆಯೂ ಬೆಂಕಿಯೂ ತಯಾರಾಗಿವೆ (ನಮ್ಮ ಜೀವನದ ಸಂದರ್ಭಗಳು). ಆದರೆ ಈಗ ಉತ್ತರಿಸಬೇಕಾದ ಪ್ರಶ್ನೆ (ಇಸಾಕನು ಅಬ್ರಹಾಮನನ್ನು ಆದಿಕಾಂಡ 22:7ರಲ್ಲಿ ಕೇಳಿದಂತೆ), "ಹೋಮಕ್ಕೆ ಬೇಕಾದ ಕುರಿ ಎಲ್ಲಿದೆ"? ಇದಕ್ಕೆ ಸಿಗುವ ಜವಾಬು, "ನೀನೇ ಆ ಕುರಿಯಾಗಿರಬೇಕು," ಎಂಬುದಾಗಿದೆ.