ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಶಿಷ್ಯಂದಿರಿಗೆ
WFTW Body: 

ಕರ್ತನು ನಮಗೆ ನೀಡಿರುವ ದೊಡ್ಡ ಕಾರ್ಯ ಯಾವುದೆಂದರೆ, "ಸುವಾರ್ತೆಯ ಪ್ರಸಾರ" (ಮಾರ್ಕ. 16:15) ಮತ್ತು "ಜನರನ್ನು ಶಿಷ್ಯರನ್ನಾಗಿ ಮಾಡಿ, ಆತನ ಎಲ್ಲಾ ಆಜ್ಞೆಗಳನ್ನು ಕಾಪಾಡಿಕೊಳ್ಳುವಂತೆ ಅವರಿಗೆ ಬೋಧಿಸುವುದು" (ಮತ್ತಾ. 28:19,20) . ಒಂದು ದೃಷ್ಟಾಂತವನ್ನು ತೆಗೆದುಕೊಳ್ಳಿರಿ: ಒಂದು ಮರದ ದಿಮ್ಮಿಯನ್ನು 100 ಜನರು ಹೊತ್ತು ಸಾಗಿಸುತ್ತಿರುವಾಗ, ಅವರಲ್ಲಿ 99 ಜನ ಒಂದು ತುದಿಯನ್ನು ಹಿಡಿದುಕೊಂಡು, ಕೇವಲ ಒಬ್ಬ ಮನುಷ್ಯ ಇನ್ನೊಂದು ತುದಿಯಲ್ಲಿ ಇರುವುದನ್ನು ನೀವು ನೋಡಿದರೆ, ನೀವು ಯಾವ ತುದಿಗೆ ಹೋಗಿ ನೆರವಾಗುತ್ತೀರಿ? ಈ ದಿನ ಅನೇಕ ದೇಶಗಳಲ್ಲಿ, ಶೇಕಡಾ 99ರಷ್ಟು ಕ್ರೈಸ್ತ ಕಾರ್ಯಕರ್ತರು ಸುವಾರ್ತಾ ಪ್ರಸಾರದಲ್ಲಿ ತೊಡಗಿದ್ದಾರೆ ಮತ್ತು ಶೇಕಡಾ 1ರಷ್ಟು ಜನ ಕ್ರಿಸ್ತನನ್ನು ಹೊಸದಾಗಿ ಸ್ವೀಕರಿಸಿದವರನ್ನು ಶಿಷ್ಯರನ್ನಾಗಿ ಮಾಡಿ, ಅವರನ್ನು ಒಂದು ಸ್ಥಳೀಯ ಸಭೆಯನ್ನಾಗಿ ಕಟ್ಟುವುದಕ್ಕೆ ಕೈ ಹಾಕುತ್ತಾರೆ. ಈ ಕಾರಣಕ್ಕಾಗಿ ನಾನು ಮರದ ದಿಮ್ಮಿಯ 1%-ತುದಿಯಲ್ಲಿ ಸಹಾಯಕ್ಕಾಗಿ ಸೇರಿಕೊಳ್ಳುವ ನಿರ್ಣಯ ಮಾಡಿದೆ. ಅದರ ಮತ್ತೊಂದು ತುದಿಯಲ್ಲಿ ಇರುವವರನ್ನು ನಾನು ವಿರೋಧಿಸುವುದಿಲ್ಲ. ಅವರೂ ಸಹ ಬೇಕಾಗಿದ್ದಾರೆ. ಆದರೆ ಈಗಾಗಲೇ ಆ ತುದಿಯಲ್ಲಿ ಬಹಳ ಜಾಸ್ತಿ ಜನ ಸೇರಿಕೊಂಡಿದ್ದಾರೆ.

ಪೌಲ ಮತ್ತು ಅಪೊಲ್ಲೋಸರು ಜೊತೆ ಕೆಲಸಗಾರರು ಆಗಿದ್ದರು, ಮತ್ತು ಅವರು ಕರ್ತನಿಗಾಗಿ ಜನರನ್ನು ಮಾನಾಸಾಂತರಕ್ಕೆ ನಡೆಸಿದರು ಮತ್ತು ಕರ್ತನಿಗಾಗಿ ಸಭೆಗಳನ್ನು ಸಹ ಕಟ್ಟಿದರು. ಪೌಲನು ಸಸಿಯನ್ನು ನೆಟ್ಟನು, ಅಪೊಲ್ಲೋಸನು ನೀರು ಹೊಯಿದನು, ಆದರೆ ದೇವರು ಬೆಳೆಸುತ್ತಾ ಬಂದರು. ಹಾಗಾಗಿ ಎಲ್ಲಾ ಮಹಿಮೆ ದೇವರಿಗೆ ಸಲ್ಲಬೇಕು. ಪೌಲನು ತನ್ನ ಮತ್ತು ಅಪೊಲ್ಲೋಸನ ಕುರಿತಾಗಿ, "ನಾವು ಗಣನೆಗೆ ಬಾರದವರು. ನಾವು ಏನೂ ಅಲ್ಲದವರು," ಎಂದು ಹೇಳುತ್ತಾನೆ (1 ಕೊರಿ. 3:7) . ಹಾಗಾಗಿ ಅವರು ಪರಸ್ಪರ ಹೊಂದಿಕೊಂಡು ಸೌಹಾರ್ದದಿಂದ ಕೆಲಸ ಮಾಡಲು ಸಾಧ್ಯವಾಯಿತು. ಗಣನೆಗೆ ಬಾರದ ಇಬ್ಬರು ಮನುಷ್ಯರು ಸುಲಭವಾಗಿ ಒಟ್ಟಿಗೆ ಕೆಲಸ ಮಾಡುತ್ತಾರೆ. ಅವರಲ್ಲೊಬ್ಬನು ತಾನು ದೊಡ್ಡ ಮನುಷ್ಯನು ಎಂದು ಯೋಚಿಸಿದಾಗ, ಸಮಸ್ಯೆಗಳು ಶುರುವಾಗುತ್ತವೆ.

ನೀವು ಯಾವಾಗಲಾದರೂ ಯಾವುದೋ ಸ್ಥಳದಲ್ಲಿ ಒಂದು ಸ್ಥಳೀಯ ಸಭೆಯನ್ನು ಕಟ್ಟುವುದಾದರೆ, ಕರ್ತನು ಹಿಂದಿನ 40 ವರ್ಷಗಳಿಂದ ಭಾರತ ಮತ್ತು ಇತರ ದೇಶಗಳಲ್ಲಿ ಸಭೆಗಳನ್ನು ನೆಡುವುದನ್ನು ನೋಡಿರುವ ನನ್ನ ಅನುಭವದಿಂದ ನಿಮಗೆ ಒಂದು ಸಲಹೆಯನ್ನು ನೀಡಲು ನಾನು ಬಯಸುತ್ತೇನೆ: ಮೊದಲು ಸ್ವತಃ ನೀವು "ಏನೂ ಅಲ್ಲದವನು" ಆಗಬೇಕು ಮತ್ತು ನೀವು ಮಾನಾಸಾಂತರಕ್ಕೆ ನಡೆಸುವ ಎಲ್ಲರನ್ನು "ಏನೂ ಅಲ್ಲದವರಾಗಿ" ಮಾಡಿರಿ. ಆಗ ನೀವು ಒಂದು ಅದ್ಭುತವಾದ ಸಭೆಯನ್ನು ಕಟ್ಟುವಿರಿ - ಅಲ್ಲಿ ಸಹಕಾರ ಇರುತ್ತದೆ ಮತ್ತು ಪೈಪೋಟಿ ಇರುವುದಿಲ್ಲ. ಒಂದು ಸಭೆಯಲ್ಲಿ ಸಭಾ ಹಿರಿಯನಿಂದ ಹಿಡಿದು ಇತ್ತೀಚೆಗೆ ಮತಾಂತರ ಹೊಂದಿದ ಕ್ರೈಸ್ತನ ವರೆಗೆ ಪ್ರತಿಯೊಬ್ಬನೂ ’ಸೊನ್ನೆಗಳು’ ಆಗಿದ್ದಲ್ಲಿ, ಅದು ಇಡೀ ಲೋಕದಲ್ಲೇ ಅತ್ಯುತ್ತಮವಾದ ಸಭೆ ಆಗಿರುತ್ತದೆ. ಅವರೆಲ್ಲರೂ ಸೊನ್ನೆಗಳು (0's) ಆಗಿರಬಹುದು, ಆದರೆ ಅವರೆಲ್ಲರೂ ಯೇಸುವಿನ ಮುಂದೆ ಸಾಲಾಗಿ ನಿಂತಾಗ - ಆತನು ಸಂಖ್ಯೆ "1" ಆಗಿರುವುದರಿಂದ, ಆತನು ಕೇವಲ 9 ಜನ ಸದಸ್ಯರ ಒಂದು ಸಭೆಯ ಮೌಲ್ಯವನ್ನು 1,000,000,000 - ಅಂದರೆ 100 ಕೋಟಿಯಾಗಿ ಮಾಡುತ್ತಾನೆ!! ಈ ಕಾರಣಕ್ಕಾಗಿ ನೀವು ಎಂದಿಗೂ ಒಬ್ಬ "ದೊಡ್ಡ ಮನುಷ್ಯ"ನಾಗದಿರಲು ನಿಶ್ಚಯಿಸಿರಿ, ಮತ್ತು ಪೌಲ ಹಾಗೂ ಅಪೊಲ್ಲೋಸರಂತೆ "ಏನೂ ಅಲ್ಲದವನು" ಆಗಿರಿ.

ಮುಂದೆ ಪೌಲನು ಅಸ್ತಿವಾರವನ್ನು ಹಾಕುವುದು ಮತ್ತು ಅದರ ಮೇಲೆ ಕಟ್ಟುವುದರ ಕುರಿತಾಗಿ ಹೇಳುತ್ತಾನೆ. ಅಸ್ತಿವಾರ ಮತ್ತು ಮೇಲಿನ ಕಟ್ಟಡ ಇವೆರಡೂ ಸಮಾನ ಪ್ರಾಮುಖ್ಯತೆಯನ್ನು ಹೊಂದಿವೆ. ಪೌಲನು ಮೊದಲು ಒಂದು ಗಿಡವನ್ನು ಬೆಳೆಸುವ ಉದಾಹರಣೆಯನ್ನು ತೆಗೆದುಕೊಂಡನು - ನೆಡುವುದು ಮತ್ತು ನೀರು ಹೊಯ್ಯುವುದು. ಈಗ ಆತನು ಒಂದು ಕಟ್ಟಡದ ಚಿತ್ರಣವನ್ನು ಬಳಸುತ್ತಾನೆ - ಅಸ್ತಿವಾರ ಮತ್ತು ಮೇಲಣ ಕಟ್ಟಡ (1 ಕೊರಿ. 3:10-12) . ಕೇವಲ ಯೇಸು ಕ್ತಿಸ್ತನೊಬ್ಬನೇ ಸಭೆಯ ಅಸ್ತಿವಾರ ಆಗಿದ್ದಾನೆ - ಆತನು ಶಿಲುಬೆಯ ಮೇಲೆ ಮಾಡಿದ ಪರಿಪೂರ್ಣ ಪಾಪ ಪರಿಹಾರದ ಕಾರ್ಯ - ನಮ್ಮ ಯಾವುದೇ ಕಾರ್ಯಗಳು ಅದರ ಜೊತೆಗೆ ಸೇರುವುದಿಲ್ಲ. ಆದರೆ ಈ ಅಸ್ತಿವಾರದ ಮೇಲೆ ನಿತ್ಯತ್ವಕ್ಕೂ ಉಳಿಯುವ ಕಟ್ಟಡವನ್ನು ಹೇಗೆ ಕಟ್ಟುವುದು ಎಂದು ನಮಗೆ ತಿಳಿದಿರಬೇಕು. ನೀವು ಎಂತಹ ಸಭೆಯನ್ನು ಕಟ್ಟುತ್ತಿದ್ದೀರಿ? ಅದರಲ್ಲಿ ಎದ್ದು ಕಾಣಿಸುವಂಥದ್ದು ’ಗಾತ್ರವೋ’ ಅಥವಾ ’ಗುಣಮಟ್ಟವೋ’?

ಪ್ರತಿಯೊಬ್ಬ ಕ್ರೈಸ್ತ ಕಾರ್ಯಕರ್ತನು ಉತ್ತರಿಸಬೇಕಾದ ಪ್ರಶ್ನೆ ಯಾವುದೆಂದರೆ, "ನಾನು ಶ್ರಮಿಸ ಬೇಕಾದದ್ದು ’ಗಾತ್ರಕ್ಕಾಗಿಯೋ’ ಅಥವಾ ’ಗುಣಮಟ್ಟಕ್ಕಾಗಿಯೋ’?" ನಾವು ಒಂದು ಕಟ್ಟಡವನ್ನು ಚಿನ್ನ, ಬೆಳ್ಳಿ ಮತ್ತು ರತ್ನಗಳಿಂದ ನಿರ್ಮಿಸಬಹುದು, ಅಥವಾ ಮರ, ಹುಲ್ಲು ಮತ್ತು ಕಸಕಡ್ಡಿಯಿಂದಲೂ ಕಟ್ಟಬಹುದು (1 ಕೊರಿ. 3:12) . ಕೊನೆಯ ದಿನದಲ್ಲಿ, ಪ್ರಾಧಾನ್ಯತೆ ಸಲ್ಲುವುದು ’ಗುಣಮಟ್ಟಕ್ಕೆ’, ’ಗಾತ್ರಕ್ಕೆ’ ಅಲ್ಲ (1 ಕೊರಿ. 3:13,14).

ಸರಿಸಮ ಮೊತ್ತದ ಹಣದಿಂದ, ನಾವು ಎಷ್ಟು ಚಿನ್ನ, ಬೆಳ್ಳಿ ಮತ್ತು ರತ್ನವನ್ನು ಖರೀದಿಸಲು ಸಾಧ್ಯವಿದೆಯೋ, ಅದಕ್ಕಿಂತ ಬಹಳ ಹೆಚ್ಚು ಪ್ರಮಾಣದ ಮರ, ಹುಲ್ಲು ಮತ್ತು ಕಸಕಡ್ಡಿಯನ್ನು ಖರೀದಿಸಬಹುದು. ಹಾಗಿರುವಾಗ, ನೀವು ಬಹು ದೊಡ್ಡ ಕಟ್ಟಡದ ಮೂಲಕ ಈಗಲೇ ಜನರ ಮೆಚ್ಚುಗೆಯನ್ನು ಗಳಿಸಲು ಬಯಸಿದರೆ, ನೀವು ಮರ, ಹುಲ್ಲು ಮತ್ತು ಕಸಕಡ್ಡಿಯಿಂದ ನಿರ್ಮಾಣ ಮಾಡುತ್ತೀರಿ. ಆದರೆ ನಿಮ್ಮ ಕಟ್ಟಡ ಪೂರ್ತಿಯಾದ ಕೂಡಲೆ ಅದು ಬೆಂಕಿಯ ಪರೀಕ್ಷೆಗೆ ಒಳಗಾಗುತ್ತದೆಂದು ನಿಮಗೆ ಗೊತ್ತಾದರೆ, ನೀವು ಬೆಂಕಿಯನ್ನು ತಾಳಿಕೊಳ್ಳುವ ಚಿನ್ನ, ಬೆಳ್ಳಿ ಮತ್ತು ರತ್ನಗಳಂತ ವಸ್ತುಗಳಿಂದ ಕಟ್ಟಡವನ್ನು ರಚಿಸಲು ನಿಶ್ಚಯಿಸುವಿರಿ - ಆ ಕಟ್ಟಡ ನೀವು ಹಿಂದೆ ನಿರ್ಮಿಸಿದ್ದರ ಕೇವಲ ಶೇಕಡಾ 1% ಗಾತ್ರದಷ್ಟೇ ಇದ್ದರೂ ಸಹ.

ನಮ್ಮೆಲ್ಲರ ಬಳಿ ಕೇವಲ ನಿರ್ದಿಷ್ಟ ಪ್ರಮಾಣದ ಸಮಯ ಇದೆ. ನಾವು ಸಾವಿರಾರು ವರ್ಷಗಳ ಜೀವಿತವನ್ನು ಜೀವಿಸುವುದಿಲ್ಲ. ನಾವು ಕ್ರಿಸ್ತನಲ್ಲಿ ಮರುಜನ್ಮ ಹೊಂದಿದ ಮೇಲೆ, ಕರ್ತನಿಗಾಗಿ 60 ವರ್ಷಗಳ ಕಾಲ ಜೀವಿಸಬಹುದು. ಆ 60 ವರ್ಷಗಳನ್ನು ನೀವು ಹೇಗೆ ಕಳೆಯುತ್ತೀರಿ? ನೀವು ಆ ಸಮಯವನ್ನು ಯಾವುದೋ ದೊಡ್ಡ ಗಾತ್ರದ, ಆದರೆ ಕಳಪೆ ಗುಣಮಟ್ಟದ, ಕೊನೆಯ ದಿನದಲ್ಲಿ ಸುಟ್ಟು ನಾಶವಾಗುವಂತ, ಒಂದು ಕಟ್ಟಡವನ್ನು ನಿರ್ಮಿಸುವುದರಲ್ಲಿ ಕಳೆಯುತ್ತೀರಾ? ಅಥವಾ ಅತಿ ತೀಕ್ಷ್ಣವಾದ ಬೆಂಕಿಯ ಪರೀಕ್ಷೆಯನ್ನು ತಾಳಿಕೊಳ್ಳುವ ಒಂದು ಕಟ್ಟಡವನ್ನು - ಅದು ಚಿಕ್ಕ ಗಾತ್ರದ್ದು ಆಗಿದ್ದರೂ - ಕಟ್ಟುವಿರಾ?

ಅನೇಕ ವಿಶ್ವಾಸಿಗಳು ನಿರ್ಮಿಸುವ ಸಭೆಗಳು ಗಾತ್ರದಲ್ಲಿ ದೊಡ್ಡವು, ಆದರೆ ಗುಣಮಟ್ಟದಲ್ಲಿ ಕಳಪೆಯಾಗಿರುತ್ತವೆ. ಆದರೆ ಕೆಲವರು ಜಾಣತನದಿಂದ ನಿರ್ಮಾಣ ಮಾಡುತ್ತಾರೆ - ಮಾನಸಾಂತರ ಮತ್ತು ಶಿಷ್ಯತ್ವವನ್ನು ಬೋಧಿಸುವುದರ ಮೂಲಕ - ಉತ್ತಮ ಗುಣಮಟ್ಟವುಳ್ಳ ಚಿಕ್ಕ ಸಭೆಗಳನ್ನು ಒಂದುಗೂಡಿಸುತ್ತಾರೆ. ಇಂತಹ ಸಭೆಗಳ ಅಂಕಿ ಸಂಖ್ಯೆಗಳು ಮೊದಲು ಉಲ್ಲೇಖಿಸಿದವುಗಳಂತೆ ಭಾರಿ ಪ್ರಮಾಣದ್ದು ಆಗಿರುವುದಿಲ್ಲ. ಆದರೆ ಬರಲಿರುವ ದಿನದಲ್ಲಿ ಕರ್ತನು ಎಲ್ಲವನ್ನೂ ಬೆಂಕಿಯ ಪರೀಕ್ಷೆಗೆ ಒಳಪಡಿಸುವಾಗ, ಮರ, ಹುಲ್ಲು ಮತ್ತು ಕಸಕಡ್ಡಿಯಿಂದ ಕಟ್ಟಲಾದ ಬೃಹತ್ ನಿರ್ಮಾಣಗಳು ಸಂಪೂರ್ಣವಾಗಿ ಸುಟ್ಟುಹೋಗಿ ಏನೂ ಉಳಕೊಳ್ಳುವುದಿಲ್ಲ. ಆದರೆ ಕೆಲವರು ಶಿಷ್ಯರನ್ನು ಸಿದ್ಧಗೊಳಿಸುವುದಕ್ಕಾಗಿ ಇಡೀ ಜೀವಮಾನವನ್ನು ಬಳಸಿಕೊಂಡು, ಅವರು ಕಟ್ಟಿದ ಚಿಕ್ಕ ಸಭೆಗಳು ಇತರ ಕ್ತೈಸ್ತರ ದೃಷ್ಟಿಯಲ್ಲಿ ಬಹಳ ದೊಡ್ಡದಾಗಿ ಕಾಣಿಸದೆ ಹೀನೈಸಲ್ಪಟ್ಟರೂ, ತಮ್ಮ ನಿರ್ಮಾಣವು ಬೆಂಕಿಯಿಂದ ಸುಡದೆ ನಿತ್ಯತ್ವಕ್ಕೂ ಉಳಿಯುವುದನ್ನು ಕಾಣುತ್ತಾರೆ.

ಹಾಗಾದರೆ ನೀವು ನಿಮ್ಮ ಜೀವನವನ್ನು ಹೇಗೆ ಕಳೆಯುವಿರಿ? "ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ," ಎಂದು ಯೇಸುವು ಹೇಳಿದನು. ನೀವು ಇಡೀ ನಿತ್ಯತ್ವದಲ್ಲಿ ಉಳಕೊಳ್ಳುವಂತದ್ದನ್ನು ಸಿದ್ಧಗೊಳಿಸುತ್ತಿದ್ದೀರಾ? ನಮ್ಮ ಮನಸ್ಸಿನಲ್ಲಿ ಯಾವಾಗಲೂ ಈ ಪ್ರಶ್ನೆ ಇರಬೇಕು. ನಾನು ಹೇಗೆ ಕಟ್ಟಬೇಕೆಂದು ದೇವರು ಬಯಸುವ ರೀತಿಯಲ್ಲಿ - ಯೇಸುವು ಕಲಿಸಿಕೊಟ್ಟ ಮೂಲತತ್ವಗಳನ್ನು ಬಳಸಿಕೊಂಡು - ನಾನು ನಿರ್ಮಿಸುತ್ತಿದ್ದೇನೆಯೇ? ನಾನು ಯೇಸುವನ್ನು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುವ ಶಿಷ್ಯಂದಿರನ್ನು ಸಿದ್ಧಗೊಳಿಸುತ್ತಿದ್ದೇನೆಯೇ ಅಥವಾ ಕೇವಲ ಮಾನಾಸಾಂತರ ಪಡೆದು, "ಕರ್ತ ಯೇಸುವೇ, ನಾನು ನಿನ್ನನ್ನು ನಂಬಿದ್ದೇನೆ," ಎಂದು ಹೇಳಿದರೂ ಶಿಷ್ಯರಾಗುವ ಇಚ್ಛೆ ಇಲ್ಲದಂತ ಮಾನಾಸಾಂತರಿಗಳನ್ನು ಒಟ್ಟು ಸೇರಿಸುತ್ತಿದ್ದೇನೆಯೇ? ಕರ್ತನ ಮುಂದೆ ನೀವು ನಿಲ್ಲಬೇಕಾದ ದಿನದಲ್ಲಿ, ನಿಮ್ಮ ಇಡೀ ಜೀವಿತದ ಸಾಧನೆಯು ಸುಟ್ಟು ಹೋಗುವುದಾದರೆ, ನಿಮ್ಮೊಳಗೆ ಎಂತಹ ವ್ಯಥೆ ಮತ್ತು ಬೇಸರ ಇರುತ್ತದೆ ಎಂದು ಯೋಚಿಸಿರಿ. ಒಂದು ವೇಳೆ ನೀವು ರಕ್ಷಿಸಲ್ಪಟ್ಟು ಪರಲೋಕವನ್ನು ಸೇರಬಹುದು, ಆದರೆ ದೇವರು ನಿಮಗೆ ಕೊಟ್ಟ ಭೂಲೋಕದ ಒಂದು ಜೀವಿತವನ್ನು ವ್ಯರ್ಥವಾಗಿ ಕಳೆದ ಬಗ್ಗೆ ಬಹಳ ಬೇಸರದಿಂದ ಪರಲೋಕದ ನಿತ್ಯಜೀವಿತವನ್ನು ಕಳೆಯುವಿರಿ. ನನಗೆ ಇಂತಹ ಬೇಸರ ಬೇಕಿಲ್ಲ. ನಾನು ಚಿನ್ನ, ಬೆಳ್ಳಿ ಮತ್ತು ರತ್ನಗಳಿಂದ ಕಟ್ಟಡವನ್ನು ನಿರ್ಮಿಸಲು ಬಯಸುತ್ತೇನೆ. ನಾನು ಈಗ ಕರ್ತನಿಗಾಗಿ ಉತ್ತಮ ಗುಣಮಟ್ಟದ ಕಾರ್ಯವನ್ನು ಮಾಡಲು ಬಯಸುತ್ತೇನೆ.