WFTW Body: 

ದೇವರ ಸಭೆಯಲ್ಲಿ ಎಲ್ಲಾ ಸೇವೆಗಳಿಗಿಂತ ಪವಿತ್ರಾತ್ಮನ ಸೇವೆಯು ಹೆಚ್ಚು ಕಾಣದೆ ಇರುವಂತದ್ದಾಗಿದೆ. ಪವಿತ್ರಾತ್ಮನು ಕಾಣದ ರೀತಿಯಲ್ಲಿದ್ದುಕೊಂಡು ತನ್ನ ಕಾರ್ಯಕ್ಕಾಗಿ ಯಾವುದೇ ಗುರುತಿಸುವಿಕೆ ಅಥವಾ ಮನ್ನಣೆಯನ್ನು ಬಯಸದೆ ಮೌನವಾಗಿ ಪ್ರೋತ್ಸಾಹಿಸಿ, ಸಹಾಯಿಸುತ್ತಿರುತ್ತಾನೆ. ಜನರು ತಂದೆಗೆ ಮತ್ತು ಯೇಸುವಿಗೆ ಮಾತ್ರ ಸ್ತೋತ್ರ ಸಲ್ಲಿಸುವಾಗ ಪವಿತ್ರಾತ್ಮನು ಅದರಲ್ಲಿಯೇ ತೃಪ್ತನಾಗಿರುತ್ತಾನೆ ಮತ್ತು ತನ್ನ ಕಾರ್ಯದ ಚಿತ್ರಣವನ್ನು ಯಾರಿಗೂ ತೋರಿಸಿಕೊಳ್ಳುವುದಿಲ್ಲ. ಎಂಥಹ ಸುಂದರವಾದ ಸೇವೆ ಇದು. ಹಾಗಾದರೆ ಇಂತಹ ಆತ್ಮನಿಂದ ನಾವು ತುಂಬಿಸಲ್ಪಡಬೇಕು ಎಂಬುದರ ಅರ್ಥ ಏನು? ಇದರ ಅರ್ಥ ನಾವು ಸಹ ಪವಿತ್ರಾತ್ಮನ ರೀತಿಯಲ್ಲಿರಬೇಕು, ಆತನ ಸೇವೆಯ ರೀತಿಯಲ್ಲಿ ನಾವು ಸಹ ಮೌನವಾಗಿ, ಯಾರಿಗೂ ಕಾಣದ ಹಾಗೇ, ಯಾವುದೇ ಮನ್ನಣೆ ಸ್ವೀಕರಿಸಿಕೊಳ್ಳದ ಹಾಗೇ ಮತ್ತು ಆ ಮನ್ನಣೆ ಬೇರೆಯವರಿಗೆ ದೊರೆತರೆ ಅದರಲ್ಲಿಯೇ ತೃಪ್ತಿಯನ್ನು ಕಾಣುತ್ತಾ ಸೇವೆ ಮಾಡುವವರಾಗಿ ಅದರಲ್ಲಿ ಸಂತೋಷಿಸುವವರಾಗಿರಬೇಕು. ಹಾಗಿದ್ದಲ್ಲಿ, ನಾವು ನಿಜವಾಗಿಯೂ ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಿದ್ದೇವಾ? ತಾವು ”ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಿದ್ದೀವಿ” ಎಂದು ಅಂದುಕೊಳ್ಳುವ ಬಹಳಷ್ಟು ಜನರು ಕ್ರೈಸ್ತ ವೇದಿಕೆಗಳಲ್ಲಿ ತಮಗಿರುವ ವರಗಳನ್ನು ಉಪಯೋಗಿಸಿಕೊಂಡು, ತಮ್ಮನ್ನು ಪ್ರಮುಖರನ್ನಾಗಿಸಿಕೊಳ್ಳುತ್ತಿರುತ್ತಾರೆ, ತಮ್ಮನ್ನು ತಾವು ಪ್ರಚಾರ ಪಡಿಸಿಕೊಳ್ಳುತ್ತಾ, ತಮಗಾಗಿ ಹಣವನ್ನು ಮಾಡಿಕೊಳ್ಳುತ್ತಿರುತ್ತಾರೆ. ಇದೆಲ್ಲವೂ ಪವಿತ್ರಾತ್ಮನ ಕಾರ್ಯಕ್ಕೆ ಬಹಳ ದೂರವಾದವುಗಳಾಗಿವೆ , ಹೌದು ಪವಿತ್ರಾತ್ಮನನ್ನು ನಕಲು ಮಾಡಿದಂತ ಬೇರೆ ಆತ್ಮನ ಕಾರ್ಯ ಇದಾಗಿದೆ ಮತ್ತು ಇಂತಹ ನಕಲುತನವನ್ನು ಹಾಗೂ ವಂಚನೆಯನ್ನು ನಾವು ಸಭೆಯಲ್ಲಿ ಬಯಲಿಗೆ ಎಳೆಯುವುದು ನಮ್ಮ ಕರ್ತವ್ಯವಾಗಿದೆ.

ಪ್ರಕಟನೆ 4:10 ರಲ್ಲಿ ಪರಲೋಕದ ಒಂದು ರೂಪವನ್ನು ನೋಡುತ್ತೇವೆ. ಅಲ್ಲಿ ನಾವು ಈ ರೀತಿಯಾಗಿ ಓದುತ್ತೇವೆ - ”ಹಿರಿಯರು ಸಿಂಹಾಸನದ ಮೇಲೆ ಕೂತಾತನ ಪಾದಕ್ಕೆ ಬಿದ್ದು ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿದರು”. ಪರಲೋಕದಲ್ಲಿ ಯೇಸು ಮಾತ್ರ ತನ್ನ ತಲೆಯ ಮೇಲೆ ಕಿರೀಟವನ್ನು ಹೊಂದಿರುವಾತನಾಗಿದ್ದಾನೆ, ಆತನನ್ನು ಹೊರತು ಪಡಿಸಿ ಮತ್ತಾರೂ ಕಿರೀಟವನ್ನು ಹೊಂದಿರುವುದಿಲ್ಲ. ಮಿಕ್ಕ ನಾವೆಲ್ಲರೂ ಸಾಮಾನ್ಯ ಸಹೋದರ ಮತ್ತು ಸಹೋದರಿಯರಾಗಿರುತ್ತೇವೆ. ಪರಲೋಕದಲ್ಲಿ ವಿಶೇಷ ಸಹೋದರರು ಮತ್ತು ಸಹೋದರಿಯರು ಎಂಬುದಾಗಿ ಯಾರು ಇರುವುದಿಲ್ಲ. ಯಾರು ಸಭೆಯಲ್ಲಿ ವಿಶೇಷ ಸಹೋದರ ಮತ್ತು ಸಹೋದರಿ ಯಾಗಬೇಕು ಎಂಬುದನ್ನು ಹುಡುಕುತ್ತಿರುತ್ತಾರೋ, ಅಂಥವರು ಸಭೆಯಲ್ಲಿ ನರಕದ ವಾತಾವರಣವನ್ನು ತರುತ್ತಾರೆ. ನಾವು ತಂದೆಯ ಎದುರು ನಿಂತಾಗ ಯಾವ ವಿಷಯವಾಗಿಯೂ ಹೆಮ್ಮೆ ಪಟ್ಟುಕೊಳ್ಳಬಾರದು. ನಾವು ಹೊಂದಿರುವಂತ ಪ್ರತಿಯೊಂದನ್ನು ಆತನ ಎದುರಿಗೆ ಹಾಕಬೇಕು. ಪರಲೋಕದಲ್ಲಿ ಯಾರು ಏನನ್ನೇ ಪಡೆದಿದ್ದರೂ ಸಹ ”ಇದು ನನ್ನದು” ಎಂಬುದಾಗಿ ಹೇಳುವುದಿಲ್ಲ (ತಾನು ಸ್ವೀಕರಿಸಿದ ಕಿರೀಟವನ್ನು ಸಹ).

ನಮ್ಮ ಸಭೆಗಳಲ್ಲಿ ಪರಲೋಕದ ವಾತಾವರಣವು ಹರಡುವಾಗ, ನಾವು ಸಹ ಹೊಂದಿರುವಂತ ಯಾವುದನ್ನೂ ”ಇದು ನನ್ನದು” ಎಂಬುದಾಗಿ ಹೇಳುವುದಿಲ್ಲ. ಎಲ್ಲವೂ ದೇವರಿಗೆ ಸಂಬಂಧಪಟ್ಟದ್ದಾಗಿದೆ, ಹಾಗಾಗಿ ಭೂ ಲೋಕದಲ್ಲಿ ದೇವರ ರಾಜ್ಯವನ್ನು ಹರಡಲು ಎಲ್ಲವೂ ಉಚಿತವಾಗಿ ಲಭ್ಯವಿದೆ.

ಪ್ರತಿಯೊಬ್ಬ ಜಿಪುಣ ಮತ್ತು ಸ್ವಾರ್ಥ ವ್ಯಕ್ತಿಯು ತನಗಾಗಿ ಮತ್ತು ತನ್ನ ಸ್ವಂತ ಲಾಭಕ್ಕಾಗಿ ಮಾತ್ರ ಜೀವಿಸುವವನಾಗಿದ್ದುಕ್ಕೊಂಡು, ಸೈತಾನನ ಹಿಡಿತದಲ್ಲಿರುತ್ತಾನೆ. ಈ ಭೂಲೋಕದಲ್ಲಿ ಲಕ್ಷಾಂತರ ದೇವರ ಮಕ್ಕಳ ನಡುವೆ ಅನ್ಯೋನ್ಯತೆ ಇಲ್ಲದಿರುವುದು ದೇವರ ಹೃದಯಕ್ಕೆ ದುಃಖ ತರುವಂತಹ ಸಂಗತಿಯಾಗಿದೆ. ಅನೇಕರು ಮತ್ತೊಬ್ಬರ ವಿಷಯವಾಗಿ ಹಗೆತನವನ್ನು ಹೊಂದಿದ್ದಾರೆ. ಮತ್ತೆ ಬೇರೆಯವರು ಸ್ವ-ನೀತಿಕರಿಸಿಕೊಳ್ಳುವ ಫರಿಸಾಯರಾಗಿದ್ದಾರೆ, ಇಂತವರು ದೇವರು ಬೇರೆಯವರನ್ನು ಆರಿಸದೇ, ನಮ್ಮನ್ನು ಮಾತ್ರ ಆರಿಸಿಕೊಂಡಿದ್ದಾನೆ ಎಂಬುದಾಗಿ ಯೋಚಿಸುವವರಾಗಿರುತ್ತಾರೆ. ದೇವರು ತನ್ನ ಮಕ್ಕಳ ಈ ಎರಡು ಗುಂಪುಗಳನ್ನು ನೋಡಿ ದು:ಖ ಪಡುತ್ತಿದ್ದಾರೆ - ಇವರೆಲ್ಲರೂ ಸಭೆಗಾಗಿ ದೇವರ ಉದ್ದೇಶವನ್ನು ಹಾಳು ಮಾಡುತ್ತಿದ್ದಾರೆ.

ಯಾವುದೇ ಸಭೆಯಲ್ಲಿ ಪರಲೋಕದ ವಾತಾವರಣವನ್ನು ತರುವಂತವರು ಮತ್ತು ಸಭೆಯಲ್ಲಿ ಸಹೋದರ ಮತ್ತು ಸಹೋದರಿಯರ ನಡುವೆ ಅನ್ಯೋನ್ಯತೆಯನ್ನು ಕಟ್ಟುವಂತವರು ಅತ್ಯಮೂಲ್ಯವಾದ ಸಹೋದರ ಮತ್ತು ಸಹೋದರಿಯರಾಗಿದ್ದಾರೆ. ಇವರುಗಳು ಸಭೆಯ ಹಿರಿಯರಾಗಿರಲೇಬೇಕು ಎಂದೇನಿಲ್ಲ. ನಾವೆಲ್ಲರೂ ಅತ್ಯಮೂಲ್ಯವಾದ ಸಹೋದರ ಮತ್ತು ಸಹೋದರಿಯರು ಆಗುವಂತ ಅವಕಾಶವನ್ನು ಹೊಂದಿದ್ದೇವೆ.

ಇದನ್ನು ಯೋಚಿಸಿ, ಒಂದು ವೇಳೆ ಸಭೆಯಲ್ಲಿ ಇಂತಹ ಒಬ್ಬ ಸಹೋದರ ಅಥವಾ ಸಹೋದರಿ ಇರುವದಾದರೆ, ಯಾವುದೇ ಸಮಯ ಇವರು ಒಂದು ಕೂಟ ಅಥವಾ ಒಂದು ಮನೆಯೊಳಗೆ ಬಂದಾಗ, ಆ ಕೊಠಡಿಗೆ ಪರಲೋಕದ ತಂಗಾಳಿಯನ್ನು ತರುತ್ತಾರೆ. ಈ ರೀತಿಯ ವ್ಯಕ್ತಿಗಳು ಎಂಥಹ ಅಮೂಲ್ಯ ಸಹೋದರ/ಸಹೋದರಿ ಆಗಿದ್ದಾರೆ ಅಲ್ಲವೇ! ಇಂತವರು ಒಂದು ಕಡೆ ನಿಂತರೂ ಮತ್ತು ನಿಮ್ಮನ್ನು ಐದು ನಿಮಿಷಗಳ ಕಾಲ ಸಂಧಿಸಿದರೂ ಸಹ, ನೀವು ತಾಜಾತನವನ್ನು ಅನುಭವಿಸುತ್ತೀರಿ. ಆ ಐದು ನಿಮಿಷಗಳ ಕಾಲ ನಿಮ್ಮ ಮನೆಯೊಳಗೆ ಪರಲೋಕವು ಬಂದಿತೆಂದು ನಿಮಗೆ ಭಾಸವಾಗುತ್ತದೆ! ಒಂದು ವೇಳೆ ಆತನು ನಿಮಗೆ ಯಾವುದೇ ಪ್ರಸಂಗ ಅಥವಾ ಸತ್ಯವೇದ ದಿಂದ ಪ್ರಕಟಣೆಗೊಂಡಂತ ವಾಕ್ಯವನ್ನು ಕೊಡದೇ ಇರಬಹುದು. ಆದರೆ ಆತನು ಅತಿ ಶುದ್ಧನಾಗಿರುತ್ತಾನೆ. ಆತನು ಮಂಕು ಕವಿದ ರೀತಿಯಲ್ಲಿ ಅಥವಾ ಬೇಸರದಿಂದ ಇರದೇ ಮತ್ತು ಯಾರ ವಿರುದ್ಧವೂ ದೂರನ್ನು ಹೊಂದದೇ ಇರುವಂತವನಾಗಿರುತ್ತಾನೆ. ಆಂತಹ ಸಹೋದರನು ಕೂಟದ ಪ್ರಾರಂಭದಲ್ಲಿ ಮಾತನಾಡದೇ ಇರಬಹುದು (ಅನೇಕರು ಪ್ರಾರಂಭದಲ್ಲಿ ಮಾತನಾಡಲು ಆಸೆಯನ್ನು ಹೊಂದಿರುತ್ತಾರೆ), ಆತನು ಕೂಟದಲ್ಲಿ ಹದಿನೈದನೇಯವನಾಗಿ ಮಾತನಾಡಬಹುದು ಮತ್ತು ಅದು ಮೂರು ನಿಮಿಷಗಳು ಮಾತ್ರವೇ ಇರಬಹುದು. ಆದರೆ ಆ ಮೂರು ನಿಮಿಷಗಳು ಕೂಟದಲ್ಲಿ ಪರಲೋಕದ ವಾತಾವರಣವನ್ನು ತಂದಿರುತ್ತಾನೆ.

ಈ ಲೋಕದಲ್ಲಿ ದೂರು ಹೇಳುವವರು ಮತ್ತು ಗುಣಗುಟ್ಟುವವರು ಭರ್ತಿಯಾಗಿ ತುಂಬಿದ್ದಾರೆ, ಮೇಲೆ ತಿಳಿಸಿದಂತ ಸಹೋದರನನ್ನು ಸಂಧಿಸುವಂತದ್ದು ಎಷ್ಟೋ ತಾಜಾತನವಾಗಿರುತ್ತದೆ. ಅದು ಯಾವ ರೀತಿ ಎಂದರೆ, ಬಿಸಿಲಿನ ಸಮಯದಲ್ಲಿ, ದೇಹವು ಅಂಟುಮಯವಾಗಿರುವಂತ ಸಮಯದಲ್ಲಿ ಸ್ನಾನ ಮಾಡಿದ ಹಾಗಿರುತ್ತದೆ! ನಾವು ಸಹ ಈ ರೀತಿಯ ಸಹೋದರ ಮತ್ತು ಸಹೋದರಿಯರುಗಳಾಗಲು ತವಕ ಪಡಬೇಕು. ಯೇಸು ಅದೇ ರೀತಿಯಾಗಿದ್ದರು ಮತ್ತು ನಮ್ಮನ್ನು ಸಹ ಅದೇ ರೀತಿ ಮಾಡಲು ಯೇಸು ಬಯಸುತ್ತಾರೆ.