WFTW Body: 

ಪವಿತ್ರಾತ್ಮನು ನಮ್ಮ ಹೃದಯದೊಳಗೆ ಪರಲೋಕದ ವಾತಾವರಣವನ್ನು ತರುವುದಕ್ಕಾಗಿ ಬಂದಿದ್ದಾನೆ. ಹಳೆಯ ಒಡಂಬಡಿಕೆಯ ಕಾಲಾವಧಿಯಲ್ಲಿ, ಇಸ್ರಾಯೇಲ್ಯರನ್ನು ಇತರ ಜನಾಂಗಳೊಂದಿಗೆ ಹೋಲಿಸಿ ನೋಡಿದಾಗ, ಧರ್ಮಶಾಸ್ತ್ರದ ಮೂಲಕ ಅವರು ಇತರರಿಗಿಂತ ಬಹಳ ಹೆಚ್ಚು ನೀತಿವಂತರಾಗಿ ಜೀವಿಸಲು ಸಾಧ್ಯವಾಯಿತು. ಆದರೆ ಈಗ, ನಮ್ಮ ಜೀವನವನ್ನು ನಿರ್ದೇಶಿಸಲು ದೈವಿಕ ನಿಯಮಗಳಿಗಿಂತ ಹೆಚ್ಚಿನದ್ದು ನಮ್ಮಲ್ಲಿದೆ - ಸ್ವತಃ ದೇವರ ಜೀವವು ನಮ್ಮ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡುತ್ತದೆ. ಪರಲೋಕದಲ್ಲಿ ದೇವರು ಇರುವುದರಿಂದ ಅದು ಸ್ವರ್ಗವಾಗಿದೆ. ದೇವರು ಎಲ್ಲಿದ್ದಾರೋ, ಆ ಜಾಗವು ಸ್ವರ್ಗವಾಗುತ್ತದೆ.

ಪರಲೋಕದಲ್ಲಿ, ಶ್ರೇಷ್ಠವಾದ ಅನ್ಯೋನ್ಯತೆ ಇದೆ. ಅಲ್ಲಿ ಯಾವುದೇ ತರದ ದಬ್ಬಾಳಿಕೆ ಇರುವುದಿಲ್ಲ. ಎಲ್ಲರೂ ಇತರರ ಸೇವೆ ಮಾಡುತ್ತಾರೆ. ಪರಲೋಕದಲ್ಲಿ ಒಂದು ಅಪೂರ್ವವಾದ ವಾತಾವರಣ ಇರುವುದಕ್ಕೆ ಕಾರಣ, ಅಲ್ಲಿ ದೇವರು ನಮ್ಮ ತಂದೆಯಾಗಿದ್ದಾರೆ. ಅವರು ಜನರನ್ನು ನಿಯಂತ್ರಿಸುವುದಿಲ್ಲ, ಆದರೆ ಅವರಿಗೆ ಪ್ರೀತಿಪೂರ್ವಕವಾಗಿ ಮಾರ್ಗದರ್ಶನ ಮಾಡಿ ಸಹಾಯ ಮಾಡುತ್ತಾರೆ. ನಮ್ಮ ಮನಸ್ಸಿನಲ್ಲೂ ಈ ಸ್ವಭಾವ ಬೇರೂರಬೇಕು. ನಾವು ಈಗ ಯಥಾರ್ಥರಾಗಿ ಜೀವಿಸಿದರೆ, ಪರಲೋಕದಲ್ಲಿ ನಮಗೆ ಜಯಮಾಲೆಯ ಸೌಭಾಗ್ಯ ವಾಗ್ದಾನ ಮಾಡಲಾಗಿದೆ. ಅದು ಹೇಗೆ? ನಾವು ಪರಲೋಕದಲ್ಲಿ ಜನರ ಮೇಲೆ ಅಧಿಕಾರ ಚಲಾಯಿಸುತ್ತೇವೋ? ಇಲ್ಲ, ನಿಶ್ಚಯವಾಗಿ ಹಾಗೆ ಆಗುವುದಿಲ್ಲ. ಇದರ ಅರ್ಥವೇನೆಂದರೆ, ಈ ಜಗತ್ತಿನಲ್ಲಿ ನಮ್ಮ ಸಹೋದರರ ಸೇವೆ ಮಾಡಲು ಹಂಬಲಿಸುವ ನಾವು, ಹಲವಾರು ಇತಿಮಿತಿಗಳ ಪ್ರಯುಕ್ತ ಇದನ್ನು ಉತ್ತಮ ರೀತಿಯಲ್ಲಿ ಪೂರೈಸಲು ಸಾಧ್ಯವಾಗದೇ ಇದ್ದರೂ, ಪರಲೋಕದಲ್ಲಿ ಅಂತಹ ಎಲ್ಲಾ ಇತಿಮಿತಿಗಳು ತೆಗೆದುಹಾಕಲ್ಪಟ್ಟಾಗ, ನಾವು ಇತರರ ಸೇವೆಯನ್ನು ಬಹಳ ಉತ್ತಮವಾಗಿ ಮಾಡಬಹುದು. ಈ ರೀತಿಯಾಗಿ ನಮ್ಮ ಮನಸ್ಸಿನ ಹಾರೈಕೆಯು ಈಡೇರುತ್ತದೆ.

ಪರಲೋಕದಲ್ಲಿ ಅತಿ ಶ್ರೇಷ್ಠ ವ್ಯಕ್ತಿ ಸ್ವತಃ ಯೇಸುವೇ ಆಗಿರುತ್ತಾರೆ, ಅದು ಮಾತ್ರವಲ್ಲ, ಆತನು ಎಲ್ಲಾ ಸೇವಕರಲ್ಲಿ ಅತಿ ಶ್ರೇಷ್ಠನಾಗಿರುತ್ತಾನೆ. ಆತನ ಆತ್ಮವು ಸದಾಕಾಲಕ್ಕೂ ಸೇವಾಭಾವದ ಆತ್ಮವಾಗಿದೆ. ದೇವರು ತನ್ನ ಸಭೆಯನ್ನು ಈ ಲೋಕದಲ್ಲಿ ಇರಿಸಿರುವ ಉದ್ದೇಶ, ಎಲ್ಲರೂ ಪರಲೋಕದ ಒಂದು ಚಿಕ್ಕ ಮಾದರಿಯನ್ನು ರುಚಿಸಿ ನೋಡುವುದಕ್ಕಾಗಿ. ಅದು ಹೇಗೆಂದರೆ, ಒಂದು ಬಿಸ್ಕತ್ತು ತಯಾರಿಸುವ ಸಂಸ್ಥೆಯು ನಿಮಗೆ ಬಿಸ್ಕತ್ತಿನ ಒಂದು ಚಿಕ್ಕ ಪೊಟ್ಟಣವನ್ನು ಕಳುಹಿಸಿ, ಅದರ ರುಚಿ ನೋಡಿದ ನಂತರ ನಿಮಗೆ ಇನ್ನೂ ಬೇಕೇ ಎಂದು ಕೇಳುವ ಹಾಗೆ. ದೇವರೂ ಸಹ ನಮ್ಮನ್ನು ಭೂಲೋಕಕ್ಕೆ ಕಳುಹಿಸಿರುವುದು, ನಾವು ಆತನ ರಾಜ್ಯದ ಜೀವನ ಮೌಲ್ಯಗಳನ್ನು ಇತರರಿಗೆ ತೋರಿಸಿ, ಅವರು ದೇವರ ಕಡೆಗೆ ಆಕರ್ಷಿತರಾಗಲಿ ಎಂಬ ಉದ್ದೇಶದಿಂದ. ಜನರು ನಮ್ಮಿಂದ ಎಂತಹ ಸವಿ ಅನುಭವವನ್ನು ಪಡೆಯುತ್ತಾರೆ? ಯೇಸುವು ಈ ಭೂಮಿಯ ಮೇಲೆ ಓಡಾಡಿದಾಗ, ಜನರು ಪರಲೋಕ ಜೀವನದ ಒಂದು ಚಿಕ್ಕ ತುಣುಕನ್ನು ನೋಡಿ ಆನಂದಿಸಲು ಸಾಧ್ಯವಾಯಿತು. ಅವರು ಆತನಲ್ಲಿ ಅನುಕಂಪ, ಇತರರಿಗಾಗಿ ಕಾಳಜಿ, ಪರಿಶುದ್ಧತೆ ಮತ್ತು ನಿಸ್ವಾರ್ಥ ಪ್ರೇಮ ಹಾಗೂ ದೀನತೆಯನ್ನು ಕಂಡರು. ಪರಲೋಕವು ಹೀಗೆಯೇ ಇರುತ್ತದೆ. ದೇವರ ಸ್ವರೂಪವು ಇದೇ ಆಗಿದೆ - ಅವರಲ್ಲಿ ಪಾಪಿಗಳಿಗಾಗಿ ಹಾಗೂ ಜೀವನದಲ್ಲಿ ಸೋತಿರುವ ಜನರಿಗಾಗಿ ಹೆಚ್ಚಿನ ಅನುಕಂಪ ಇದೆ.

ಯಾವುದೇ ಒಂದು ಸಭೆಯಲ್ಲಿ ಅತೀ ಅಮೂಲ್ಯ ಸಹೋದರ ಮತ್ತು ಸಹೋದರಿ ಯಾರೆಂದರೆ, ಆ ಸಭೆಗೆ ಪರಲೋಕದ ವಾತಾವರಣವನ್ನು ತಂದು, ಅಲ್ಲಿ ಅನ್ಯೋನ್ಯತೆ, ಐಕ್ಯತೆಗಳನ್ನು ಹೆಚ್ಚಿಸುವಂಥವರು. ಇಂತಹ ವ್ಯಕ್ತಿ ಆ ಸಭೆಯ ಹಿರಿಯರಲ್ಲಿ ಒಬ್ಬರು ಮಾತ್ರ ಆಗಿರಬೇಕೆಂದು ಏನೂ ಇಲ್ಲ. ನಮ್ಮಲ್ಲಿ ಪ್ರತಿಯೊಬ್ಬರು ಅಂತಹ ಸಹೋದರ ಮತ್ತು ಸಹೋದರಿ ಆಗುವ ಅವಕಾಶವನ್ನು ಹೊಂದಿದ್ದೇವೆ. ಒಂದು ಸಭೆಯ ಒಬ್ಬ ಸೋದರ/ ಸೋದರಿಯ ಬಗ್ಗೆ ಯೋಚಿಸಿರಿ: ಅವರು ಸಭಾಕೂಟಕ್ಕೆ ಅಥವಾ ಒಂದು ಮನೆಗೆ ಪ್ರವೇಶಿಸುವಾಗ ಅಲ್ಲಿ ತಣ್ಣನೆಯ ಗಾಳಿ ಬೀಸುವ ಅನುಭವ ಸಿಗುತ್ತದೆ. ಅಂತಹ ಒಬ್ಬ ವ್ಯಕ್ತಿ ಎಷ್ಟು ಅಮೂಲ್ಯ ಸೋದರ/ ಸೋದರಿ ಆಗಿದ್ದಾರೆ! ಅವರು ನಿಮ್ಮನ್ನು ಭೇಟಿ ಮಾಡಿ ನಿಮ್ಮೊಂದಿಗೆ ಕೇವಲ ಐದು ನಿಮಿಷದ ಸಮಯವನ್ನು ಕಳೆದರೂ ಸಹ, ನೀವು ಉಲ್ಲಾಸಗೊಳ್ಳುತ್ತೀರಿ. ಆ ಐದು ನಿಮಿಷಗಳಲ್ಲಿ ಪರಲೋಕವೇ ನಿಮ್ಮ ಮನೆಗೆ ಬಂದ ಅನುಭವ ನಿಮಗೆ ಆಗುತ್ತದೆ! ಅವರು ನಿಮಗೆ ಪ್ರಸಂಗ ಮಾಡದಿರಬಹುದು ಅಥವಾ ದೇವರ ವಾಕ್ಯದಿಂದ ಒಂದು ಹೊಸ ಪ್ರಕಟನೆಯನ್ನು ನಿಮಗೆ ಕೊಡದಿರಬಹುದು. ಆದರೆ ನಿಮಗೆ ಆತನಲ್ಲಿ/ ಆಕೆಯಲ್ಲಿ ನಿಜವಾದ ಪರಿಶುದ್ಧತೆ ಕಾಣಿಸಿತು. ಆತ/ ಆಕೆ ಯಾರನ್ನೂ ದೂಷಿಸಲಿಲ್ಲ ಮತ್ತು ನಿಮಗೆ ಅವರಲ್ಲಿ ಬೇಸರ ಅಥವಾ ದುಃಖದ ಸುಳಿವು ಸಿಗುವುದಿಲ್ಲ.

ಇಂತಹ ಒಬ್ಬ ಸೋದರ/ ಸೋದರಿ ಒಂದು ಕೂಟದ ಶುರುವಿನಲ್ಲಿ ವಾಕ್ಯವನ್ನು ಹಂಚಿಕೊಳ್ಳದೆ ಇರಬಹುದು. ಬಹುಶಃ ಪ್ರತಿಯೊಂದು ಸಭಾಕೂಟದಲ್ಲೂ ಹಂಚಿಕೊಳ್ಳುವವರಲ್ಲಿ 15ನೆಯವರು ಆತ/ ಆಕೆ ಆಗಿರಬಹುದು ಮತ್ತು ಅವರು ಕೇವಲ 3 ನಿಮಿಷ ಹಂಚಿಕೊಳ್ಳಬಹುದು. ಆದರೆ ಕೂಟದಲ್ಲಿ ಅವರು ಹಂಚಿಕೊಂಡ ಮೂರು ನಿಮಿಷಗಳು ಎಲ್ಲರಿಗೂ ಪರಲೋಕದ ಅನುಭವವನ್ನು ಒದಗಿಸಬಹುದು - ಅದು ಕಾದು ನಿಂತು ಕೇಳುವದಕ್ಕೆ ಯೋಗ್ಯವಾದಂಥದ್ದು ಆಗಿರುತ್ತದೆ!