WFTW Body: 

ನಾವು ಲೂಕ. 1:34,35 ರಲ್ಲಿ ಓದುವಂತೆ, ದೇವದೂತನಾದ ಗಬ್ರಿಯೇಲನು ಕನ್ಯೆ ಮರಿಯಳ ಬಳಿಗೆ ಬಂದಾಗ, ಆಕೆಯು ಬಹಳ ಸಹಜವಾಗಿ ಆತನನ್ನು ಹೀಗೆ ಪ್ರಶ್ನಿಸುತ್ತಾಳೆ, "ಇದು ಹೇಗಾದೀತು? ನಾನು ಪುರುಷನನ್ನು ಅರಿತವಳಲ್ಲಾ. ಹಾಗಿರುವಾಗ ನಾನು ಒಬ್ಬ ಮಗನನ್ನು ಹೆರುವುದು ಹೇಗೆ ಸಾಧ್ಯ?" ಇದಕ್ಕೆ ಉತ್ತರವಾಗಿ ದೂತನು, "ನಿನ್ನ ಮೇಲೆ ಪವಿತ್ರಾತ್ಮನು ಬರುವನು; ಪರಾತ್ಪರನ ಶಕ್ತಿಯ ನೆರಳು ನಿನ್ನ ಮೇಲೆ ಬೀಳುವದು," ಅಂದನು. ಪವಿತ್ರಾತ್ಮನು ಯಾವಾಗಲೂ ನಮಗೆ ದೇವರ ಬಲವನ್ನು ತರುತ್ತಾನೆ (ಅ.ಕೃ. 1:8, ಅ.ಕೃ. 10:38). ಪವಿತ್ರಾತ್ಮನು ಮರಿಯಳ ಮೇಲೆ ಬಂದು ಆಕೆಯಲ್ಲಿ ಯೇಸುವನ್ನು ಸೃಷ್ಟಿಸಿದಂತೆ, ಆತ್ಮನು ಮುಖ್ಯವಾಗಿ ನಮ್ಮಲ್ಲಿ ಕ್ರಿಸ್ತನನ್ನು ಉಂಟುಮಾಡುವುದಕ್ಕಾಗಿ ನಮ್ಮ ಮೇಲೆ ಬರುತ್ತಾನೆ. ನಮ್ಮ ಜೀವನದಲ್ಲಿ ಪವಿತ್ರಾತ್ಮನು ಮಾಡುವ ಸೇವಾಕಾರ್ಯ ಮತ್ತು ನಾವು ಮಾಡುವ ಕರ್ತನ ಸೇವೆ ಇವೆರಡನ್ನೂ ಅರ್ಥ ಮಾಡಿಕೊಳ್ಳಲು ನೀಡಲಾದ ಬಹಳ ಸ್ಪಷ್ಟ ಮಾರ್ಗದರ್ಶನ ಇದಾಗಿದೆ. ಮರಿಯಳ ಗರ್ಭದಲ್ಲಿ ಆ ದೇಹವು ಬೆಳೆಯಲು ನಿರ್ದಿಷ್ಟ ಸಮಯ ಬೇಕಾದಂತೆ, ನಮ್ಮ ಜೀವಿತಗಳಲ್ಲೂ ಕ್ರಿಸ್ತನು ಕಾಣಿಸಲು ಸಮಯ ಹಿಡಿಯುತ್ತದೆ.

ಲೂಕ. 1:37ರಲ್ಲಿ ನಾವು ಒಂದು ಸುಂದರವಾದ ವಾಗ್ದಾನವನ್ನು ನೋಡುತ್ತೇವೆ, "ದೇವರಿಗೆ ಯಾವುದೂ ಅಸಾಧ್ಯವಲ್ಲ;" ("ದೇವರಿಂದ ಬರುವ ಯಾವ ಮಾತಾದರೂ ನಿಷ್ಫಲವಾಗುವದಿಲ್ಲ.") ದೇವರು ಒಂದು ಮಾತನ್ನು ಆಡಿದರೆ, ಆ ಮಾತಿನಲ್ಲಿ ಸರ್ವಶಕ್ತನ ಬಲವಿದೆಯೆಂದು ನಿಮಗೆ ಖಾತ್ರಿಯಾಗಬೇಕು. "ಬೆಳಕಾಗಲಿ," ಎಂದು ದೇವರು ನುಡಿದಾಗ ಅದು ನೆರವೇರಿತು. ನಾವು ಆದಿಕಾಂಡ 1ನೇ ಅಧ್ಯಾಯದ ಉದ್ದಕ್ಕೂ ಇದನ್ನು ನೋಡುತ್ತೇವೆ. ದೇವರಿಂದ ಬರುವ ಯಾವುದೇ ಪದವೂ ಬಲಹೀನವಾದದ್ದಲ್ಲ. ಈ ಕಾರಣಕ್ಕಾಗಿ ನಾವು ದೇವರ ವಾಕ್ಯವನ್ನು ಅಭ್ಯಾಸ ಮಾಡಿ, ಅದರ ವಾಗ್ದಾನಗಳನ್ನು ಹಿಡಿದುಕೊಳ್ಳುವದು ಬಹಳ ಅವಶ್ಯವಾಗಿದೆ. ಒಂದು ಶಕ್ತಿಶಾಲಿಯಾದ ವಾಗ್ದಾನ ಇಲ್ಲಿದೆ: "ಪಾಪವು ನಿಮ್ಮ ಮೇಲೆ ಅಧಿಕಾರ ನಡಿಸದು" (ರೋಮಾ. 6:14) . ನೀವು ಇದನ್ನು ನಂಬಿದರೆ, ಇದು ನಿಮ್ಮ ಜೀವನದಲ್ಲಿ ನಿಜವಾಗುತ್ತದೆ, ಏಕೆಂದರೆ ದೇವರ ಯಾವ ವಾಕ್ಯವೂ ಫಲಹೀನವಾಗಲಾರದು.

ದೇವರು ಎಲ್ಲವನ್ನೂ ಮಾಡಬಲ್ಲರು, ಎಂಬುದನ್ನು ನಾವು ನಂಬಬೇಕೆಂದು ಅವರು ಬಯಸುತ್ತಾರೆ. ಈ ಕಾರಣಕ್ಕಾಗಿ ಅವರು ಈ ವಿಷಯವನ್ನು ಹಳೆಯ ಮತ್ತು ಹೊಸ ಒಡಂಬಡಿಕೆಗಳ ಆರಂಭದಲ್ಲಿ ಬರೆದಿದ್ದಾರೆ (ಆದಿಕಾಂಡ 18:14 ಮತ್ತು ಲೂಕ. 1:37 ನೋಡಿರಿ). ನಮ್ಮ ಕ್ರಿಸ್ತೀಯ ಜೀವನದ ಆರಂಭದಲ್ಲಿ, ಸತ್ಯವೇದವು ದೇವರ ವಾಕ್ಯವಾಗಿದೆ ಎಂಬ ನಮ್ಮ ನಂಬಿಕೆಯು ಕೇವಲ ಕುರುಡು ನಂಬಿಕೆ ಆಗಿರಬಹುದು. ಆದರೆ ಅದು ಹೀಗೆ ಅಂಧಶೃದ್ಧೆಯಾಗಿಯೇ ಉಳಿಯಬಾರದು. ನಾವು ದೇವರ ವಾಕ್ಯದ ವಾಗ್ದಾನಗಳನ್ನು ನಮ್ಮ ಹಕ್ಕುಗಳಾಗಿ ಕೇಳಲು ಆರಂಭಿಸಿದರೆ, ನಮ್ಮ ಜೀವಿತದಲ್ಲಿ ದೇವರಿಗೆ ಯಾವುದೂ ಅಸಾಧ್ಯವಲ್ಲವೆಂದು ನಾವು ಸಿದ್ಧಪಡಿಸುತ್ತೇವೆ. ಆಗ ಸತ್ಯವೇದವು ದೇವರ ವಾಕ್ಯವಾಗಿದೆಯೆಂಬ ನಮ್ಮ ನಂಬಿಕೆಯು ಸಾಬೀತು ಪಡಿಸಿದ ನಂಬಿಕೆ ಆಗುತ್ತದೆ, ಏಕೆಂದರೆ ಆಗ ದೇವರು ನುಡಿದ ಯಾವ ವಾಕ್ಯವೂ ಶಕ್ತಿಹೀನವಾಗಿಲ್ಲ, ಎನ್ನುವದನ್ನು ನಾವು ಅನುಭವಿಸಿ ರುಚಿಸಿ ನೋಡಿರುತ್ತೇವೆ. ಯೇಸುವು ಹಳೆಯ ಒಡಂಬಡಿಕೆಯನ್ನು ಯಾವತ್ತೂ ಪ್ರಶ್ನಿಸಲಿಲ್ಲ. ಅವರು ಸುತ್ತಮುತ್ತಲಿನ ಎಲ್ಲಾ ವಿಮರ್ಶಕರು ಮತ್ತು ಆಧ್ಯಾತ್ಮಿಕ ಪಂಡಿತರ ಮಾತುಗಳಿಂದ ವಿಚಲಿತರಾಗಲಿಲ್ಲ. ಯೇಸುವು ದೇವವಾಕ್ಯವನ್ನು ನಂಬಿದರು ಮತ್ತು ಅದರ ಬಲವನ್ನು ಅನುಭವಿಸಿ ನೋಡಿದರು. ಇಂದು, ಸೈತಾನನು ಅನೇಕ ಜನರನ್ನು ಇಂತಹ ಸರಳ ನಂಬಿಕೆಯಿಂದ ದೂರಕ್ಕೆ ಸೆಳೆಯುತ್ತಿದ್ದಾನೆ. ದೇವರ ವಾಕ್ಯವನ್ನು ನಂಬಿ ಅದರ ಬಲವನ್ನು ಅನುಭವಿಸುವದಕ್ಕೆ ಬದಲಾಗಿ, ಅವರು ದೇವರ ವಾಕ್ಯವನ್ನು ವಿವೇಚಿಸಿ ನೋಡುತ್ತಾ, ಒಂದು ಬಾರಿಯೂ ದೇವರ ಪ್ರಭಾವವನ್ನು ಅನುಭವಿಸದೆ ತಮ್ಮ ಸಂಪೂರ್ಣ ಜೀವನವನ್ನು ವ್ಯರ್ಥಗೊಳಿಸುತ್ತಾರೆ. ನೀವು ಹೇಗೆ ಜೀವಿಸಲು ಬಯಸುತ್ತೀರಿ? ದೇವರ ವಾಕ್ಯವನ್ನು ವಿಶ್ಲೇಷಿಸುತ್ತಾ ಜೀವಿಸುತ್ತೀರಾ ಅಥವಾ ವಾಕ್ಯದ ಮೂಲಕ ದೇವರ ಪ್ರಭಾವವನ್ನು ಅನುಭವಿಸುತ್ತಾ ಜೀವಿಸುತ್ತೀರಾ? ಆ ಆಯ್ಕೆಯು ನಿಮ್ಮ ಕೈಯಲ್ಲಿದೆ.

ಮರಿಯಳು ದೇವರ ವಾಕ್ಯಕ್ಕೆ ತಲೆಬಾಗಿಸಿ, "ಇಗೋ, ನಾನು ಕರ್ತನ ದಾಸಿ; ನಿನ್ನ ಮಾತಿನಂತೆ ನನಗಾಗಲಿ," ಅಂದಳು (ಲೂಕ. 1:38) . ನಾನು ಮರಿಯಳನ್ನು ಬಹಳ ಮೆಚ್ಚುತ್ತೇನೆ (ನಾನು ರೋಮನ್ ಕ್ಯಾಥೋಲಿಕ್ ಪಂಗಡದವನು ಅಲ್ಲವಾದರೂ ಸಹ), ಏಕೆಂದರೆ ಆಕೆಯು ದೇವರಲ್ಲಿ ಭಯಭಕ್ತಿಯುಳ್ಳ ಒಬ್ಬ ಕನ್ಯೆಯಾಗಿದ್ದಳು. ದೇವರು ನಿಜವಾಗಿಯೂ ದೈವಿಕಳಾದ ಒಬ್ಬ ಯುವತಿಗಾಗಿ ಇಡೀ ಇಸ್ರಾಯೇಲನ್ನು ಹುಡುಕಿ ನೋಡಿದರು; ಮತ್ತು ಅವರು ಬಹುಶಃ ಕೇವಲ 18 ವಯಸ್ಸಿನ ಹುಡುಗಿಯಾಗಿದ್ದ ಮರಿಯಳನ್ನು ಕಂಡುಕೊಂಡರು! ಲೂಕ. 1:46-55ನ್ನು ಓದಿ ನೋಡಿರಿ ಮತ್ತು ಆಕೆಯಲ್ಲಿ ಎಷ್ಟು ಪರಿಪಕ್ವತೆ ಇತ್ತು ಮತ್ತು ಆಕೆ ದೇವರನ್ನು ಕೊಂಡಾಡಿ ಹಾಡಿದ ಗೀತೆಯು ದೇವರ ವಾಕ್ಯದ ಎಂಥಾ ಆಳವಾದ ಅರ್ಥವನ್ನು ಹೊರಸೂಸುತ್ತದೆ ಎಂದು ಗಮನಿಸಿರಿ. ಒಬ್ಬಾಕೆಯು ದೇವಭಯದಿಂದ ಕೂಡಿದ್ದರೆ, ಆಕೆ ಕೇವಲ 18ರ ವಯಸ್ಸಿನಲ್ಲಿ ಎಷ್ಟು ಪರಿಪಕ್ವಳು ಆಗಬಹುದು ಎನ್ನುವದು ವಿಸ್ಮಯಕರವಾಗಿದೆ.

ದೇವರು ವ್ಯಕ್ತಿಗಳನ್ನು ಆರಿಸಿಕೊಳ್ಳುವಾಗ ಯಾವ ತಪ್ಪನ್ನೂ ಮಾಡುವುದಿಲ್ಲ. ನಜರೇತಿನ ಎಲ್ಲಾ ಜನರು ಮರಿಯಳು ಗರ್ಭಿಣಿಯಾದ ಸುದ್ದಿಯನ್ನು ಕೇಳಿ, ಆಕೆಯ ಬಗ್ಗೆ ಅಪನಿಂದೆಯ ಸುಳ್ಳು ಕಥೆಗಳನ್ನು ಹರಡಿಸಲಿದ್ದಾರೆ ಎಂದು ಆಕೆ ಅರಿತಿದ್ದಳು. ಇದು ಪವಿತ್ರಾತ್ಮನ ಕಾರ್ಯವೆಂದು ಒಬ್ಬರಾದರೂ ನಂಬುವುದು ಅಸಾಧ್ಯವಾಗಿತ್ತು. ಅದಾಗ್ಯೂ ಆಕೆಯು ಆ ಅಪನಿಂದೆಯನ್ನು ಸ್ವೀಕರಿಸಿದಳು - ತನ್ನ ದೇಹದಿಂದ ಯೇಸುವಿನ ದೇಹಕ್ಕೆ ಜನ್ಮನೀಡಲು ಒಪ್ಪಿಕೊಂಡಳು. ಈಗ ಇದೇ ಸನ್ನಿವೇಷ ನಿಮ್ಮ ಜೀವನದಲ್ಲಿ ನಡೆದರೆ ಹೇಗಿರುತ್ತದೆಂದು ಯೋಚಿಸಿರಿ. ನೀವು ನಿಮ್ಮ ಊರಿನಲ್ಲಿ ಕ್ರಿಸ್ತನ ದೇಹವನ್ನು ಕಟ್ಟಲು ಇಚ್ಛಿಸುತ್ತೀರಾ? ನಿಮಗೆ ಇದರ ಮೂಲಕ ಬರುವ ಮಾನ್ಯತೆ ಬೇಕೇ ಅಥವಾ ನೀವು "ಕ್ರಿಸ್ತನ ನಿಮಿತ್ತ ಉಂಟಾಗುವ ನಿಂದೆಯನ್ನು" ತಾಳಿಕೊಳ್ಳಲು ಸಿದ್ಧರಾಗಿದ್ದೀರಾ? ದೇವರ ಕಾರ್ಯದಲ್ಲಿ ಮಾನ್ಯತೆಗಾಗಿ ತವಕಿಸುವವರನ್ನು ದೇವರು ಬೆಂಬಲಿಸುವುದಿಲ್ಲ. ಇಂತಹ ಜನ ಒಂದು ಸಮೂಹವನ್ನು ನಿರ್ಮಿಸುತ್ತಾರೆ, ಕ್ರಿಸ್ತನ ದೇಹವನ್ನಲ್ಲ. ಯಾವಾಗಲೂ ಕ್ರಿಸ್ತನ ದೇಹವನ್ನು ಕಟ್ಟುವ ಕಾರ್ಯವು ನಿಮ್ಮನ್ನು ನಿಂದೆ, ತಪ್ಪು ತಿಳಿವಳಿಕೆ, ಅಪಹಾಸ್ಯ ಮತ್ತು ಹರಟೆ ಮಾತುಗಳಿಗೆ ಈಡು ಮಾಡುತ್ತದೆ - ಇದನ್ನು ಮರಿಯಳು ನಜರೇತಿನಲ್ಲಿ ಅನುಭವಿಸಿದಳು. ಆದರೆ ಇವೆಲ್ಲವೂ ಆಕೆಯ ಮನಸ್ಸನ್ನು ವಿಚಲಿತಗೊಳಿಸಲಿಲ್ಲ. ಇವೆಲ್ಲವುಗಳ ನಡುವೆಯೂ ಆಕೆ ಕ್ರಿಸ್ತನ ದೇಹಕ್ಕೆ ಜನ್ಮವಿತ್ತಳು. ಇಂದಿನ ದಿನವೂ ಸಹ ಇದೇ ಪರಿಸ್ಥಿತಿ ಇದೆ. ಜನರು "ಸಾಂಪ್ರದಾಯಿಕ ಕ್ರೈಸ್ತತ್ವದ ಪಂಗಡಗಳ ’ಪಾಳೆಯದಿಂದ’ ಆಚೆ ಹೋಗಿ ನಿಂದೆಯನ್ನು ತಾಳಿಕೊಳ್ಳಲು" ಸಿದ್ಧರಾಗಿದ್ದರೆ, ಆಗ ಕ್ರಿಸ್ತನ ದೇಹವು ಕಟ್ಟಲ್ಪಡುತ್ತದೆ.