"ದುಃಖಪಡುವವರು ಧನ್ಯರು, ಅವರು ಸಮಾಧಾನವನ್ನು (ಆದರಣೆಯನ್ನು) ಹೊಂದುವರು"(ಮತ್ತಾ. 5:4).ಇಲ್ಲಿ "ಸಮಾಧಾನ"ವೆಂದು ಉಲ್ಲೇಖಿಸಿರುವ ಪದದ ಮೂಲಾರ್ಥ "ಬಲಪಡಿಸುವಿಕೆ" ಎಂದಾಗಿದೆ. ಆಂಗ್ಲ ಭಾಷೆಯ ಸತ್ಯವೇದದಲ್ಲಿ 'comfort' ಎಂಬ ಪದವನ್ನು ಉಪಯೋಗಿಸಲಾಗಿದ್ದು, ಈ ಪದದ ನಡುವಿನ ಭಾಗ 'f-o-r-t' ಎಂಬುದಾಗಿದೆ. "fort" ಎಂದರೆ ಸೈನಿಕರಿಂದ ಕಾಯಲಾಗುವ ಭದ್ರವಾದ ಸ್ಥಳವಾಗಿದೆ - ಕೋಟೆ, ಬಲಿಷ್ಠವಾದದ್ದು. "ದುಃಖಿಸುವವರು ಧನ್ಯರು, ಅವರು ಬಲಗೊಳ್ಳುವರು." ಲೋಕದ ಜನರು ಹಲವಾರು ಸಂಗತಿಗಳಿಗಾಗಿ ದುಃಖಿಸುತ್ತಾರೆ. ಹೆಚ್ಚಿನ ಜನರು ಸ್ವಂತದ ಯಾವುದನ್ನೋ ಕಳೆದುಕೊಂಡಾಗ ಶೋಕಿಸುತ್ತಾರೆ. ಹಣವನ್ನು, ಅಥವಾ ತಮ್ಮ ಪ್ರೀತಿಪಾತ್ರರನ್ನು, ತಮ್ಮ ಘನತೆ ಅಥವಾ ಸ್ಥಾನ-ಮಾನವನ್ನು, ತಮ್ಮ ನೌಕರಿ, ಇತ್ಯಾದಿಗಳನ್ನು ಕಳೆದುಕೊಂಡದ್ದಕ್ಕಾಗಿ ದುಃಖಿಸುತ್ತಾರೆ. ಆದರೆ ಇಲ್ಲಿ ಯೇಸುವು ಅಂತಹ ದುಃಖದ ಬಗ್ಗೆ ಮಾತನಾಡುತ್ತಿಲ್ಲ. ದುಃಖಿ ಸುವುದು ಅಂದರೆ ಯಾರೋ ನನ್ನನ್ನು ನೋಯಿಸಿದಕ್ಕಾಗಿ ಅಥವಾ ನನ್ನ ಸ್ವಂತ ದುಃಖಗಳಿಗಾಗಿ ಅಳುವುದು ಅಲ್ಲ.
ಯೇಸುವು ತನ್ನ ಸ್ವಂತ ದುಃಖಗಳಿಗಾಗಿ ಎಂದಿಗೂ ಅಳಲಿಲ್ಲ. ಆದರೆ ಆತನು ಇತರರಿಗಾಗಿ ಅತ್ತನು. ನಾವು ಏನು ಓದುತ್ತೇವೆ ಎಂದರೆ, ಆತನು ಯೆರೂಸಲೇಮಿಗಾಗಿ ಅತ್ತನು (ಲೂಕ. 19:41) ಮತ್ತು ಲಾಜರನ ಸಮಾಧಿಯ ಬಳಿ ಅತ್ತನು (ಯೋಹಾ. 11:35), ಆದರೆ ತನಗೆ ಜನರು ಮಾಡಿದ ದೌರ್ಜನ್ಯಕ್ಕಾಗಿ ಆತನು ಒಂದು ಸಾರಿಯೂ ಸಹ ಅಳಲಿಲ್ಲ. ಅವರು ತನ್ನನ್ನು ದೆವ್ವವೆಂದು ಕರೆದರೂ ಅಥವಾ ತನ್ನ ಮುಖದ ಮೇಲೆ ಉಗುಳಿದರೂ ಆತನು ಅಳಲಿಲ್ಲ. ಆತನು ತನಗೋಸ್ಕರ ಎಂದೂ ಅಳಲಿಲ್ಲ. ಅದು ಮಾತ್ರವಲ್ಲ, ಆತನು ಆ ಶಿಲುಬೆಯನ್ನು ಹೊತ್ತುಕೊಂಡು ನಡೆಯುತ್ತಿರುವಾಗ ಶಿಲುಬೆಯಿಂದಾಗಿ ಆತನು ರಸ್ತೆಯಲ್ಲಿ ಮುಗ್ಗರಿಸಿ ಬಿದ್ದಾಗ ಬಹಳ ಜನರು ಗುಂಪಾಗಿ ಆತನನ್ನು ಹಿಂಬಾಲಿಸುತ್ತಿದ್ದರು ಎಂಬುದಾಗಿ ನಾವು ಲೂಕ. 23:27ರಲ್ಲಿ ಓದುತ್ತೇವೆ. ಅವನು ಕೊರಡೆಗಳಿಂದ ಹೊಡೆಸಿಕೊಂಡಾಗ, ಆತನ ತಲೆಯ ಮೇಲಿನಿಂದ ಹಾಗೂ ಬೆನ್ನಿನ ಗಾಯಗಳಿಂದ ರಕ್ತವು ಹರಿಯುತ್ತಿದ್ದಾಗ, ಆತನು ಭಾರವಾದ ಶಿಲುಬೆಯನ್ನು ಹೊತ್ತುಕೊಂಡು ನಡೆಯುತ್ತಿದ್ದುದನ್ನು ನೋಡಿದ ಕೆಲವು ಸ್ತ್ರೀಯರು ಜೋರಾಗಿ ಗೋಳಾಡುತ್ತಿದ್ದರು. ಅವನು ತಲೆಯ ಮೇಲೆ ಮುಳ್ಳಿನ ಕಿರೀಟವನ್ನು ಇರಿಸಿಕೊಂಡು ಆ ಮಾರ್ಗವಾಗಿ ನಡೆಯುತ್ತಿದ್ದನು. ಯೇಸುವು ಅವರ ಕಡೆಗೆ ತಿರುಗಿ ಅವರಿಗೆ ಏನು ಹೇಳಿದನೆಂದು ನಿಮಗೆ ತಿಳಿದಿದೆಯೇ? "ಯೆರೂಸಲೇಮಿನ ಸ್ತ್ರೀಯರೇ, ನನಗೋಸ್ಕರ ಅಳಬೇಡಿರಿ! ನನಗೆ ಪರವಾಗಿಲ್ಲ, ಹೌದು ನನ್ನ ಬೆನ್ನು ಹರಿದಿದೆ, ತಲೆಯ ಮೇಲೆ ಮುಳ್ಳಿನ ಕಿರೀಟವಿದೆ, ನಾನು ಭಾರವಾದ ಶಿಲುಬೆಯನ್ನು ಹೊತ್ತುಕೊಂಡಿದ್ದೇನೆ, ಆದರೆ ನಾನು ಚೆನ್ನಾಗಿದ್ದೇನೆ. ನಾನು ಇನ್ನು ಸ್ವಲ್ಪ ಸಮಯದಲ್ಲಿ ಕೊಲ್ಲಲ್ಪಡುತ್ತೇನೆ, ಅವೆಲ್ಲವೂ ಪರವಾಗಿಲ್ಲ, ಏಕೆಂದರೆ ನಾನು ದೇವರ ಚಿತ್ತದ ಕೇಂದ್ರದಲ್ಲಿದ್ದೇನೆ"(ಲೂಕ. 23:28)!
ನೀವು ಇಂತಹ ಅತಿಯಾದ ಸಂಕಟದ ಸಮಯದಲ್ಲಿ ಇದೇ ಮನೋಭಾವವನ್ನು ಇರಿಸಿಕೊಳ್ಳಬಲ್ಲಿರಾ? "ನನಗೋಸ್ಕರ ಅಳಬೇಡಿರಿ, ಇವೆಲ್ಲವೂ ನನಗೆ ಪರವಾಗಿಲ್ಲ, ಆದರೆ ನೀವು ಅಳುವುದಾದರೆ, ನಿಮಗೋಸ್ಕರವೂ ನಿಮ್ಮ ಮಕ್ಕಳಿಗೋಸ್ಕರವೂ ಅಳಿರಿ - ಅವರ ಆತ್ಮಿಕ ಪರಿಸ್ಥಿತಿಯನ್ನು ನೋಡಿರಿ." ಅವರು ಫರಿಸಾಯರು, ಆಡಂಬರದ ನಿಲುವಂಗಿಗಳನ್ನು ಧರಿಸಿಕೊಂಡು ಬಹಳ ಭವ್ಯವಾಗಿ ಕಾಣಿಸುತ್ತಾರೆ. ಆದರೆ ಅವರ ಆತ್ಮಿಕ ಸ್ಥಿತಿಯನ್ನು ಗಮನಿಸಿರಿ. ಕ್ರಿಸ್ತನು ಹಿಂದಿರುಗಿ ಬರುವ ದಿನದಲ್ಲಿ ಅವರು ಬೆಟ್ಟಗಳನ್ನು ನೋಡಿ, "ಬೆಟ್ಟಗಳೇ, ನಮ್ಮ ಮೇಲೆ ಬೀಳಿರಿ; ಗುಡ್ಡಗಳೇ, ನಮ್ಮನ್ನು ಮುಚ್ಚಿಕೊಳ್ಳಿರಿ"(ಲೂಕ. 23:30), ಎಂದು ಗೋಳಾಡುವಾಗ ಏನು ನಡೆಯುತ್ತದೆ? ಇದು ಯೇಸುವಿನ ಮನೋಭಾವವಾಗಿದೆ. ನಾವು ಒಂದು ಹಾಡಿನಲ್ಲಿ ಹಾಡುವ ಹಾಗೆ, ಆತನು ತನ್ನ ಸ್ವಂತ ಸಂಕಟಗಳಿಗಾಗಿ ಕಣ್ಣೀರು ಸುರಿಸಲಿಲ್ಲ, ಆದರೆ ನನ್ನ ದುಃಸ್ಥಿತಿಗಾಗಿ ಮನೋವ್ಯಥೆಯಿಂದ ಭೂಮಿಗೆ ಬೀಳುವ ರಕ್ತದ ಹನಿಗಳೋಪಾದಿಯಲ್ಲಿ ಆತನ ಬೆವರು ಸುರಿಯಿತು.
ಯೇಸುವಿನ ಯಥಾರ್ಥ ಶಿಷ್ಯನು ತಾನು ಕ್ರಿಸ್ತನಂತೆ ಇಲ್ಲದಿರುವುದಕ್ಕಾಗಿ ದುಃಖಿಸುತ್ತಾನೆ; ಆತನು ಪಾಪ ಮಾಡಿದಾಗ ಮತ್ತು ಜಾರಿ ಬಿದ್ದಾಗ ದುಃಖಿಸುತ್ತಾನೆ. ಆತನು ಜನರು ತನ್ನೊಂದಿಗೆ ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದಕ್ಕಾಗಿ ದುಃಖಿಸುವುದಿಲ್ಲ. ಈ ಭೂಲೋಕದಲ್ಲಿ ಕ್ರಿಸ್ತನ ಹೆಸರಿಗಾಗಿ ಅವಮಾನಿಸಲ್ಪಡುವುದು ತನ್ನ ಕಟ್ಟಿಟ್ಟ ಬುತ್ತಿಯೆಂದು ಅವನು ನಂಬಿದ್ದಾನೆ. ಆದರೆ ತಾನು ಪಾಪದ ಮೂಲಕ ಅಥವಾ ಸೋಲಿನ ಮೂಲಕ ಕರ್ತನ ಹೆಸರನ್ನು ಅವಮಾನಗೊಳಿಸಿದಾಗ ಅವನು ಶೋಕಿಸುತ್ತಾನೆ. ಆ ಶಿಷ್ಯನು ಇನ್ನೂ ಉನ್ನತ ಆತ್ಮಿಕ ಮಟ್ಟವನ್ನು ತಲುಪಿದಾಗ, ಯೇಸುವು ಯೆರೂಸಲೇಮಿಗಾಗಿ ಅತ್ತಂತೆ, ಆತನು ಇತರರ ಪಾಪಗಳಿಗಾಗಿ, ಇತರರ ಸೋಲುಗಳಿಗಾಗಿ ದುಃಖಿಸುತ್ತಾನೆ. ಮೇಲಿನ ವಚನದಲ್ಲಿ ಯೇಸುವು ಪ್ರಸ್ತಾಪಿಸಿದ ದುಃಖ ಇದೇ ಆಗಿದೆ. "ದುಃಖಪಡುವವರು ಧನ್ಯರು, ಅವರು ಬಲಗೊಳ್ಳುವರು." ನಮ್ಮಲ್ಲಿ ಕೆಲವರು ಬಲವನ್ನು ಹೊಂದದೇ ಇರುವುದಕ್ಕೆ ಕಾರಣವೇನೆಂದರೆ, ಬಹುಶಃ ನಾವು ನಮ್ಮ ಪಾಪಕ್ಕಾಗಿ ದುಃಖಿಸುತ್ತಿಲ್ಲ.
"ಯೇಸುವಿನ ನಿಜವಾದ ಶಿಷ್ಯನು ತಾನು ಕ್ರಿಸ್ತನಂತೆ ಇಲ್ಲದಿರುವುದಕ್ಕಾಗಿ ದುಃಖಿಸುತ್ತಾನೆ"
ನಾವು ಆತ್ಮಿಕವಾಗಿ ಮುಂದುವರಿದು, ಇತರರ ಪಾಪಗಳಿಗಾಗಿ ದುಃಖಿಸುವುದು ಇದಕ್ಕಿಂತ ಉನ್ನತ ಮಟ್ಟವಾಗಿದೆ. ಅಪೊಸ್ತಲ ಪೌಲನು ಆ ಉನ್ನತ ಮಟ್ಟವನ್ನು ತಲುಪಿದ್ದನು. ಅವನು ಅತಿಯಾಗಿ ಸೋಲನ್ನು ಅನುಭವಿಸಿದ್ದ ಕೊರಿಂಥದ ವಿಶ್ವಾಸಿಗಳಿಗೆ ಹೀಗೆ ಹೇಳುತ್ತಾನೆ, "ನಾನು ನಿಮ್ಮ ಬಳಿಗೆ ಬಂದು ತಲುಪುವಾಗ ನನ್ನ ದೇವರು ನನ್ನನ್ನು ನಿಮ್ಮ ಮುಂದೆ ತಗ್ಗಿಸುವನೆಂದು ನಾನು ಭಯಪಡುತ್ತೇನೆ (2 ಕೊರಿ. 12:21). ದೇವರು ಪೌಲನನ್ನು ಏಕೆ ತಗ್ಗಿಸಬೇಕು? ಅವನು ಬಹಳ ಯಥಾರ್ಥ ಜೀವನವನ್ನು ಜೀವಿಸಿದ್ದನು ಮತ್ತು ಆತನಿಗೆ ತಿಳಿದಂತೆ ಆತನಲ್ಲಿ ಯಾವುದೇ ಪಾಪ ಇರಲಿಲ್ಲ. ಆದರೆ ಅವನು ಹೇಳುತ್ತಾನೆ, "ನಿಮ್ಮ ಹಿಂದಿನ ಪಾಪ ಮತ್ತು ಅಶುದ್ಧತೆ, ಅನೈತಿಕತೆ ಮತ್ತು ಕಾಮುಕತೆಯ ಬಗ್ಗೆ ಪಶ್ಚಾತಾಪ ಪಡದಿರುವ ನೀವು ಅನೇಕರ ಕುರಿತಾಗಿ ನಾನು ದುಃಖಿಸುತ್ತೇನೆ." ಆ ಸಭೆಯ ಕೆಲವು ಪಾಪಗಳನ್ನು ಆತನು ಪಟ್ಟಿ ಮಾಡುತ್ತಾನೆ (2 ಕೊರಿ. 12:20): ಅಸೂಯೆ, ಕೋಪ, ಸಿಟ್ಟಿನ ವಾಗ್ವಾದಗಳು, ನಿಂದನೆಗಳು, ಚಾಡಿ ಹೇಳುವುದು, ದುರಹಂಕಾರ, ಕಲಹ ಇತ್ಯಾದಿ. ತಮ್ಮನ್ನು ದೇವಜನರು ಎಂದು ಹೇಳಿಕೊಳ್ಳುತ್ತಿದ್ದ ಈ ಜನರ ಎಲ್ಲಾ ಪಾಪಗಳ ಬಗ್ಗೆ ಯೋಚಿಸಿದಾಗ ಅವನು ಅತ್ತನು, ಏಕೆಂದರೆ ಅವನು ಅವರ ಆತ್ಮಿಕ ತಂದೆಯಾಗಿದ್ದನು. ಇದು ಲೋಕದಲ್ಲಿ ಒಬ್ಬ ತಂದೆಯು ತನ್ನ ಮಗನು ತುಂಬಾ ಅಸ್ವಸ್ಥನಾದಾಗ ಅಳುವಂತೆಯೇ ಆಗಿತ್ತು. ತಂದೆಯು ಆತ್ಮಿಕನಾಗಿದ್ದರೆ, ತನ್ನ ಮಗನು ಮಾದಕ ವಸ್ತುಗಳಿಗೆ ಅಥವಾ ದುಷ್ಚಟಗಳಿಗೆ ಬಲಿಯಾಗುವಾಗ ಬಹಳ ದುಃಖಿಸುತ್ತಾನೆ.
ಪೌಲನು ಕೊರಿಂಥದ ವಿಶ್ವಾಸಿಗಳಿಗೆ ಒಬ್ಬ ಆತ್ಮಿಕ ತಂದೆಯಾಗಿದ್ದನು, ಮತ್ತು ಪ್ರತಿಯೊಬ್ಬ ನಿಜವಾದ ಕ್ರೈಸ್ತ ಕುರುಬನು ಅಥವಾ ಸಭಾಪಾಲಕನು ತನ್ನ ಹಿಂಡಿಗೆ ಆತ್ಮಿಕ ತಂದೆಯಾಗಿರಬೇಕು. ಆತ್ಮಿಕ ತಂದೆಯ ಒಂದು ಲಕ್ಷಣವೆಂದರೆ, ಆತನು ಅವರ ತಪ್ಪುಗಳನ್ನು ತೋರಿಸುವುದು ಮಾತ್ರವೇ ಅಲ್ಲ, ಆದರೆ ಪೌಲನು ಕೊರಿಂಥದವರಿಗಾಗಿ ಕಣ್ಣೀರಿಟ್ಟು ದುಃಖಿಸಿದಂತೆ, ಅವನು ತನ್ನ ಜನರ ಕುರಿತಾಗಿ ದುಃಖವನ್ನೂ ಸಹ ಹೊಂದಿರುತ್ತಾನೆ. ಇಂಥವನೇ ನಿಜವಾದ ಆತ್ಮಿಕ ನಾಯಕನ ಸ್ಥಾನಕ್ಕೆ ಯೋಗ್ಯನು. ಯೆಶಾ. 49:10ರಲ್ಲಿ (ಯೆಶಾಯ 49ನೇ ಅಧ್ಯಾಯವು ಆತ್ಮಿಕ ನಾಯತ್ವದ ಬಗ್ಗೆ ಬಹಳ ಮಹತ್ವದ್ದು), "ಜನರನ್ನು ಕರುಣಿಸುವಾತನು ಅವರನ್ನು ಮುನ್ನಡೆಸುವನು” ಎಂದು ಬರೆಯಲಾಗಿದೆ.
ಆತ್ಮಿಕ ನಾಯಕನಾಗಲು ಯಾರು ಯೋಗ್ಯನು? ಜನರ ಮೇಲೆ ಕರುಣೆ ಉಳ್ಳವನೇ ಅದಕ್ಕೆ ಯೋಗ್ಯನು. ಹಾಗಾಗಿ, ಮತ್ತಾ. 5:4ರಲ್ಲಿ, ಹೇಳಿರುವ "ದುಃಖಿಸುವವನು ಧನ್ಯನು" ಎಂಬ ವಾಕ್ಯದಲ್ಲಿ ಇವೆರಡು ಒಳಗೊಂಡಿವೆ - ತನ್ನ ಸ್ವಂತ ಪಾಪಕ್ಕಾಗಿ ಮತ್ತು ಕ್ರಿಸ್ತನ ಸಾರೂಪ್ಯ ಇಲ್ಲದಿರುವ ತನ್ನ ಸ್ಥಿತಿಗಾಗಿ ಕಣ್ಣೀರು ಸುರಿಸುವುದು; ಮತ್ತು ಇತರರಿಗಾಗಿ ದುಃಖಿಸುವುದು. ನಾವು ಈ ಮಾರ್ಗದಲ್ಲಿ ನಡೆದರೆ, ದೇವರು ನಮಗೆ ಶಕ್ತಿಯನ್ನು ನೀಡುತ್ತಾರೆ, ಮತ್ತು ಇದಲ್ಲದೆ ನಾವು ಇತರರನ್ನು ಬಲಪಡಿಸುವ ಸಾಮರ್ಥ್ಯವನ್ನು ಸಹ ಪಡೆಯುತ್ತೇವೆ.