ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಶಿಷ್ಯಂದಿರಿಗೆ
WFTW Body: 

ನಾವು ದಾನಿಯೇಲನ ಗ್ರಂಥದಲ್ಲಿ ದೇವಜನರು ಬಾಬೆಲ್‍ನಿಂದ  ಯೆರೂಸಲೇಮ್‍ ಹೋಗಲು ಆರಂಭಿಸುವುದನ್ನು ನೋಡುತ್ತೇವೆ. ಇದು ಇಂದು ನಡೆಯುತ್ತಿರುವ ಒಂದು ಚಳುವಳಿಯ ಮೂಲರೂಪವೆಂದು ನಾವು ಹೇಳಬಹುದು. ಇಂದು ದೇವಭಯವುಳ್ಳ ಜನರು "ನನ್ನ ಪ್ರಜೆಗಳೇ, ಬಾಬೆಲ್ ಪಟ್ಟಣನ್ನು ಬಿಟ್ಟು ಬನ್ನಿರಿ," (ಪ್ರಕಟನೆ 18:4) ಎಂಬುದಾಗಿ ದೇವರು ನೀಡುವ ಕರೆಗೆ ಓಗೊಟ್ಟು, ’ಪಾಪದೊಂದಿಗೆ ರಾಜಿ ಮಾಡಿಕೊಂಡು ನಡೆಯುವ ಕ್ರೈಸ್ತ ಸಮುದಾಯದಿಂದ’ ದೂರಸರಿದು, ’ದೇವರು ಸ್ಥಾಪಿಸಿರುವ ಹೊಸ ಒಡಂಬಡಿಕೆಯ ಸಭೆಗೆ’ ನಡೆಯುವುದನ್ನು ಇದು ಸೂಚಿಸುತ್ತದೆ.

ಬಾಬೆಲನ್ನು ಬಿಟ್ಟು ಹೊರಡುವ ಪ್ರಕ್ರಿಯೆ ಆ ಕಾಲದಲ್ಲಿ ಆರಂಭವಾದದ್ದು ದೇವರಿಗೆ ನಿಷ್ಠಾವಂತನಾಗಿದ್ದ ಒಬ್ಬ ವ್ಯಕ್ತಿ - ಅಂದರೆ ದಾನಿಯೇಲನ - ಮೂಲಕ. ಆತನು ದೇವರ ಸಂಕಲ್ಪದ ಬಗ್ಗೆ ಕಾಳಜಿಯನ್ನು ಹೊಂದ್ದಿದ್ದನು ಮತ್ತು ಅದು ಕೈಗೂಡಲಿ ಎಂದು ಆತನು ಉಪವಾಸ, ಪ್ರಾರ್ಥನೆಗಳನ್ನು ಮಾಡಿದನು. ಯಾವುದೇ ಒಂದು ಜಾಗದಲ್ಲಿ ದೇವರ ಪರಿಶುದ್ಧ ಸಭೆಯು ಕಟ್ಟಲು ಆರಂಭಗೊಳ್ಳುವದು ಸಾಮಾನ್ಯವಾಗಿ ಅದರ ಕುರಿತಾಗಿ ಪ್ರಾರ್ಥನೆಯ ಮೂಲಕ ಭಾರವನ್ನು ಹೊತ್ತಿರುವ ಒಬ್ಬ ವ್ಯಕ್ತಿಯ ಮೂಲಕವಾಗಿ; ಮತ್ತು ಆತನು ದೇವರನ್ನು ಈ ರೀತಿಯಾಗಿ ಬೇಡಿಕೊಳ್ಳುತ್ತಾನೆ, "ಕರ್ತನೇ, ಈ ಜಾಗದಲ್ಲಿ ನಿಮಗಾಗಿ ಒಂದು ಪರಿಶುದ್ಧ ಸಭೆ ಇರಬೇಕೆಂದು ನಾನು ಬಯಸುತ್ತೇನೆ, ಮತ್ತು ಅದಕ್ಕಾಗಿ ಎಷ್ಟೇ ದೊಡ್ಡ ಬೆಲೆಯನ್ನಾದರೂ ತೆರಲು ನಾನು ಸಿದ್ಧನಿದ್ದೇನೆ." ಇದು ನೆರವೇರಲು ನೀವು ಇಂತಹ ಭಾರವನ್ನು ಬಹಳ ಸಮಯದವರೆಗೆ ಹೊರಬೇಕಾಗಬಹುದು. ಒಬ್ಬ ತಾಯಿಯು ಮಗುವನ್ನು ತನ್ನ ಗರ್ಭದೊಳಗೆ ಹೊರುವಂತೆ, ನಾವು ಇಂತಹ ಭಾರವನ್ನು ಹೃದಯದಲ್ಲಿ ಹೊರಬೇಕಾಗುತ್ತದೆ. ದಾನಿಯೇಲನು ಇದೇ ರೀತಿಯಾಗಿ ತನ್ನ ಹೃದಯದಲ್ಲಿ ಭಾರವನ್ನು ಹೊತ್ತಿದ್ದನು.

ದಾನಿಯೇಲನ ಜೀವನದಲ್ಲಿ ಕಂಡುಬರುವ ಒಂದು ವಿಶಿಷ್ಟ ಗುಣ ಇದಾಗಿದೆ: "ದಾನಿಯೇಲನು ತನ್ನನ್ನು ಅಶುದ್ಧ ಮಾಡಿಕೊಳ್ಳಬಾರದು ಎಂದು ನಿಶ್ಚಯಿಸಿದನು" (ದಾನಿಯೇಲ 1:8). ದೇವರ ವಚನವು ತೋರಿಸಿಕೊಟ್ಟ ಅತಿ ಚಿಕ್ಕ ಆಜ್ಞೆಗೂ ಸಹ ವಿಧೇಯನಾಗುವುದರಲ್ಲಿ ಆತನು ಚಾಚೂ ತಪ್ಪಲಿಲ್ಲ. ಯೇಸುವು ಹೇಳಿದಂತೆ,"ಈ ಸಣ್ಣಸಣ್ಣ ಆಜ್ಞೆಗಳಲ್ಲೇ ಆದರೂ ಒಂದನ್ನು ಮೀರಿ, ಜನರಿಗೂ ಹಾಗೆ ಮೀರುವುದಕ್ಕೆ ಬೋಧಿಸುವವನು ಪರಲೋಕ ರಾಜ್ಯದಲ್ಲಿ ಬಹಳ ಚಿಕ್ಕವನು ಎನಿಸಿಕೊಳ್ಳುವನು; ಆದರೆ ತಾನೇ ಆ ಆಜ್ಞೆಗಳಂತೆ ನಡೆದುಕೊಂಡು, ಜನರಿಗೂ ಹಾಗೆ (ಆ ಆಜ್ಞೆಗಳಂತೆ) ನಡೆಯಬೇಕೆಂದು ಬೋಧಿಸುವವನು ಪರಲೋಕ ರಾಜ್ಯದಲ್ಲಿ ದೊಡ್ಡವನು ಎನಿಸಿಕೊಳ್ಳುವನು" (ಮತ್ತಾಯ 5:19). ಹೊಸ ಒಡಂಬಡಿಕೆಯ ಸಭೆಗಳನ್ನು ಕಟ್ಟಲು ದೇವರು ಉಪಯೋಗಿಸುವ ವ್ಯಕ್ತಿಗಳು ಯಾರೆಂದರೆ, ಯಾರು ಕೋಪ ಮತ್ತು ಕಾಮವನ್ನು ಜಯಿಸುವುದು (ಮತ್ತಾಯ 5:22, 28)ಇವೇ ಮುಂತಾದ ದೊಡ್ಡ  ಆಜ್ಞೆಗಳನ್ನು ಮತ್ತು ಸ್ತ್ರೀಯರು ಸಭೆಯಲ್ಲಿ ಪ್ರಾರ್ಥಿಸುವಾಗ ಮತ್ತು ಪ್ರವಾದಿಸುವಾಗ ತಮ್ಮ ತಲೆಗಳನ್ನು ಮುಚ್ಚಬೇಕೆಂಬ ಸಣ್ಣ ಆಜ್ಞೆಗಳನ್ನು ಕಲಿಸುತ್ತಾರೋ ಅಂಥವರನ್ನು (1ಕೊರಿಂಥ 11:1-16).

ಇತರ ಎಲ್ಲಾ ಯೆಹೂದ್ಯರು ರಾಜಿ ಮಾಡಿಕೊಳ್ಳುವಾಗ, ಮೊದಲು, ದಾನಿಯೇಲನೊಬ್ಬನೇ (ಸತ್ಯಕ್ಕಾಗಿ) ನಿಲ್ಲಬೇಕಾಯಿತು. ಆದರೆ, ಹನನ್ಯ, ಮೀಶಾಯೇಲ ಮತ್ತು ಅಜರ್ಯ ಬಾಬೇಲಿನಲ್ಲಿ ಅವರ ಹೆಸರುಗಳು - ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ) ದಾನಿಯೇಲನು ದೇವರಿಗಾಗಿ ನಿಲ್ಲುವುದನ್ನು ನೋಡಿದಾಗ, ಅವರು ಧೈರ್ಯವಾಗಿ ಅವನೊಡನೆ ಸೇರಿದರು (ದಾನಿಯೇಲ1:11).

ಹನನ್ಯ, ಮೀಶಾಯೇಲ ಮತ್ತು ಅಜರ್ಯನಂತಿದ್ದು ತಮ್ಮ ಸ್ಥಳದಲ್ಲಿ ದೇವರಿಗಾಗಿ ಒಂದು ಪರಿಶುದ್ಧವಾದ ಸಾಕ್ಷಿಯನ್ನು ಕಟ್ಟಬೇಕೆಂದಿರುವ ಅನೇಕರು ಇಂದು ಇದ್ದಾರೆಂದು ನಾನು ನಂಬುತ್ತೇನೆ. ಆದರೆ ತಾವಾಗಿಯೇ ದೇವರಿಗೆ ನಿಲ್ಲಲು ಅವರಿಗೆ ಧೈರ್ಯವಿಲ್ಲ. ತಮ್ಮನ್ನು ಮುನ್ನಡೆಸಲು ಅವರಿಗೊಬ್ಬ ದಾನಿಯೇಲನು ಬೇಕು. ಅವರ ಊರಿನಲ್ಲಿ ಒಬ್ಬ ದಾನಿಯೇಲನು ಎದ್ದಾಗ, ಅವರು ಹೊರಬಂದು ಅವನನ್ನು ಸೇರುತ್ತಾರೆ.

ಅರಸನನ್ನು ಸಂತೋಷಪಡಿಸಲು ರಾಜಿ ಮಾಡಿಕೊಂಡ ಸಾವಿರಾರು ಯೆಹೂದ್ಯರಿಗಿಂಥ ಬಾಬೆಲ್ನಲ್ಲಿ ಸಂಪೂರ್ಣ ಹೃದಯವುಳ್ಳ ನಾಲ್ಕು ಯುವಕರು ದೇವರಿಗೆ ಬಲವಾದ ಸಾಕ್ಷಿಯನ್ನು ಹೊಂದಿದ್ದರು. ದೇವರಿಗಾಗಿ ನಿಂತ ದಾನಿಯೇಲ ಮತ್ತು ಆತನ ನಾಲ್ಕು ಮಿತ್ರರು ಆ ಕಾಲದ ಬಹಳ ಬಲಶಾಲಿಯಾದ ರಾಷ್ಟ್ರದ ಮೇಲೆ ಮತ್ತು ಅದರ ಆಳ್ವಿಕೆಗಾರರ ಮೇಲೆ  ಬಹಳವಾದ ಪ್ರಭಾವವನ್ನು ಹೊಂದಿದ್ದರು.

ಅರೆ-ಹೃದಯದ (ಅರ್ಧ-ಮನಸ್ಸಿನ) ಕ್ರೈಸ್ತರು ಸಾವಿರಾದಷ್ಟಿದ್ದರೂ, ಯಾವುದೇ ಊರಿನಲ್ಲಿ ಅಥವಾ ರಾಷ್ಟ್ರದಲ್ಲಿ ದೇವರಿಗಾಗಿ ಬೆಳಕಾಗಲಾರರು. ದೇವರಿಗೆ  ಸಂಪೂರ್ಣ ಹೃದಯದ ವಿಶ್ವಾಸಿಗಳು ಬೇಕು. ಏಕೆಂದರೆ, "ದೇವರು ಕಾರ್ಯ ಮಾಡುವುದು ಮಾನವೀಯ ಶಕ್ತಿಯಿಂದ ಅಥವಾ ಸಂಖ್ಯಾಬಲದಿಂದಲ್ಲ. ಬದಲಾಗಿ ತನ್ನ ಆತ್ಮನಿಂದ"  (ಯೆಹೆಜ಼್ಕೇಲ. 4:6.).

ಯಾವುದೇ ಬೆಲೆಯನ್ನು ತೆರಬೇಕಾಗಿ ಬಂದರೂ, ಎಂದಿಗೂ ರಾಜಿ ಮಾಡಿಕೊಳ್ಳದೆ ತಮ್ಮ ಸ್ಥಳದಲ್ಲಿ ಹೊಸ ಒಡಂಬಡಿಕೆಯ ಸಭೆಯನ್ನು ಕಟ್ಟಲು ಭಾರ ಹೊಂದಿರುವ ವ್ಯಕ್ತಿಗಳಿಗಾಗಿ ದೇವರಿಂದು ಎದುರು ನೋಡುತ್ತಿದ್ದಾರೆ.