WFTW Body: 

ಜಗತ್ತಿನ ಯಾವ ಇತಿಹಾಸದ ಪುಸ್ತಕದಲ್ಲೂ ಭೂಲೋಕದಲ್ಲಿ ನಡೆದ ಅತಿ ದೊಡ್ಡ ಯುದ್ಧದ ವಿವರಣೆಯು ಬರೆಯಲ್ಪಟ್ಟಿಲ್ಲ. ಕಲ್ವಾರಿಯಲ್ಲಿ ನಡೆದ ಆ ಯುದ್ಧದಲ್ಲಿ, ಯೇಸುವು ತನ್ನ ಮರಣದ ಮೂಲಕ ಈ ಲೋಕದ ಅಧಿಪತಿಯಾದ ಸೈತಾನನನ್ನು ಸೋಲಿಸಿದನು.

ಇಬ್ರಿ. 2:14,15ರ ವಚನ ನೀವು ಜೀವಿತವಿಡೀ ನೆನಪಿರಿಸಿಕೊಳ್ಳಬೇಕಾದ ಒಂದು ವಚನವಾಗಿದೆ. ನಿಮಗೆ ಈ ವಚನದ ಪರಿಚಯ ಇರಬಾರದೆಂದು ಸೈತಾನನು ಬಯಸುತ್ತಾನೆಂದು ನನಗೆ ನಿಶ್ಚಯವಾಗಿ ತಿಳಿದಿದೆ. ಯಾರಿಗೂ ತನ್ನ ಸ್ವಂತ ಸೋಲಿನ ವರದಿಯು ಇಷ್ಟವಾಗುವುದಿಲ್ಲ, ಮತ್ತು ಸೈತಾನನೂ ಹಾಗೆಯೇ. ಈ ವಚನ ಹೀಗಿದೆ: "ದೇವರ ಮಕ್ಕಳು ರಕ್ತ ಮಾಂಸಧಾರಿಗಳು ಆಗಿರುವುದರಿಂದ, ಸ್ವತಃ ಯೇಸುವೂ ಸಹ ಅವರಂತೆಯೇ ಆದನು. ತನ್ನ ಮರಣದಿಂದಲೇ (ಕಲ್ವಾರಿಯ ಶಿಲುಬೆಯ ಮರಣ) ಮರಣಾಧಿಕಾರಿಯನ್ನು, ಅಂದರೆ ಸೈತಾನನನ್ನು ಅಡಗಿಸಿಬಿಡುವದಕ್ಕೂ, ಮರಣಭಯದ ದೆಸೆಯಿಂದ ತಮ್ಮ ಜೀವಮಾನದಲ್ಲೆಲ್ಲಾ ದಾಸತ್ವದೊಳಗೆ ಇದ್ದವರನ್ನು ಬಿಡಿಸುವುದಕ್ಕೂ, ಅವರಂತೆ ರಕ್ತ ಮಾಂಸಧಾರಿಯಾದನು" (ಇಬ್ರಿ. 2:14,15). ಯೇಸುವು ತನ್ನ ಮರಣದ ಮೂಲಕ ಪಿಶಾಚನನ್ನು ಬಲಹೀನಗೊಳಿಸಿದರು. ಇದರಿಂದ ಏನು ಉಪಯೋಗವಾಯಿತು? ಇದರ ಮೂಲಕ ನಾವು ಸೈತಾನನಿಂದ ಹಾಗೂ ಆತನು ಜೀವಿತವಿಡೀ ನಮ್ಮನ್ನು ಕಟ್ಟಿಹಾಕಿದ್ದ ಭಯದ ದಾಸತ್ವದಿಂದ ಬಿಡುಗಡೆ ಹೊಂದಿದೆವು.

ಲೋಕದ ಜನರಲ್ಲಿ ಅನೇಕ ವಿಧವಾದ ಭಯಗಳು ಇರುತ್ತವೆ - ರೋಗದ ಭಯ, ಬಡತನದ ಭಯ, ಸೋಲಿನ ಭಯ, ಜನರ ಭಯ, ಭವಿಷ್ಯದ ಕುರಿತಾದ ಭಯ, ಇತ್ಯಾದಿ. ಆದಾಗ್ಯೂ, ಮರಣಭಯವು ಮಿಕ್ಕೆಲ್ಲವುಗಳಿಗಿಂತ ಅತಿ ದೊಡ್ಡದಾದದ್ದು. ಯಾವ ಭಯವೂ ಮರಣಭಯದಷ್ಟು ಭಯಂಕರವಾಗಿ ಇರುವುದಿಲ್ಲ. ಮರಣದ ಭಯವು ಸಾವಿನ ನಂತರ ಏನಾಗುತ್ತದೆ, ಎಂಬ ಭಯಕ್ಕೆ ನಡೆಸುತ್ತದೆ. ಸತ್ಯವೇದದ ಸ್ಪಷ್ಟ ಬೋಧನೆ ಏನೆಂದರೆ, ಪಾಪದಲ್ಲಿ ಜೀವಿಸುವವರು ನರಕಕ್ಕೆ ಹೋಗುತ್ತಾರೆ ಎಂಬುದಾಗಿದೆ - ಅದು ಪಾಪದಿಂದ ತಿರುಗಿಕೊಳ್ಳಲು ಒಪ್ಪದೇ ಇರುವವರಿಗಾಗಿ ದೇವರು ಕಾದಿರಿಸಿರುವ ಜಾಗವಾಗಿದೆ. ಸ್ವತಃ ಸೈತಾನನು ಸಹ ನಿತ್ಯತ್ವವನ್ನು ಬೆಂಕಿಯ ಕೆರೆಯಲ್ಲಿ ಕಳೆಯುವನು; ಅಲ್ಲಿ ಅವನು ಭೂಲೋಕದಲ್ಲಿ ಮರುಳುಗೊಳಿಸಿ ಪಾಪಕ್ಕೆ ನಡೆಸಿದ ಜನರು ಅವನ ಜೊತೆ ಸೇರುತ್ತಾರೆ. ನಮಗಾಗಿ ಈ ಲೋಕಕ್ಕೆ ಬಂದ ಯೇಸುವು, ನಮ್ಮನ್ನು ಆ ನಿತ್ಯ ನರಕದಿಂದ ರಕ್ಷಿಸುವುದಕ್ಕಾಗಿ ನಮ್ಮ ಪಾಪಗಳ ಶಿಕ್ಷೆಯನ್ನು ಸ್ವತಃ ಅನುಭವಿಸಿದರು. ಇದಲ್ಲದೆ ಯೇಸುವು ಸೈತಾನನು ನಮ್ಮ ಮೇಲೆ ಇರಿಸಿಕೊಂಡಿದ್ದ ಹಿಡಿತವನ್ನು ನಾಶಗೊಳಿಸಿದರು, ಹಾಗಾಗಿ ಸೈತಾನನು ನಮ್ಮನ್ನು ಇನ್ನು ಮೇಲೆ ಎಂದಿಗೂ ಬಾಧಿಸಲಾರನು.

ನೀವೆಲ್ಲರೂ ನಿಮ್ಮ ಜೀವನದ ಉದ್ದಕ್ಕೂ ಒಂದು ಸತ್ಯಾಂಶವನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ - "ದೇವರು ಯಾವಾಗಲೂ ಸೈತಾನನ ವಿರುದ್ಧವಾಗಿ ನಿಮ್ಮ ಪರವಾಗಿ ಇದ್ದಾರೆ." ಈ ಉಜ್ವಲವಾದ ಸತ್ಯಾಂಶವು ನನಗೆ ಎಷ್ಟು ಅಪಾರವಾದ ಪ್ರೋತ್ಸಾಹ ಮತ್ತು ನೆಮ್ಮದಿ ಮತ್ತು ಜಯವನ್ನು ಕೊಟ್ಟಿದೆಯೆಂದರೆ, ನಾನು ಎಲ್ಲೆಡೆಗೆ ಹೋಗಿ ಜಗತ್ತಿನ ಪ್ರತಿಯೊಬ್ಬ ವಿಶ್ವಾಸಿಗೂ ಅದನ್ನು ಸಾರಿ ಹೇಳಲು ಬಯಸುತ್ತೇನೆ. ಸತ್ಯವೇದವು ಹೇಳುವುದು ಏನೆಂದರೆ, "ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿರಿ, ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು" (ಯಾಕೋ. 4:7). ಯೇಸುವಿನ ನಾಮದ ಮುಂದೆ ಸೈತಾನನು ಯಾವಾಗಲೂ ಓಡಿಹೋಗುತ್ತಾನೆ. ಹೆಚ್ಚಿನ ಕ್ರೈಸ್ತರು ತಮ್ಮ ಮನಸ್ಸಿನಲ್ಲಿ, ಸೈತಾನನು ತಮ್ಮನ್ನು ಓಡಿಸಿಕೊಂಡು ಬರುವುದನ್ನು ಮತ್ತು ತಾವು ಜೀವ ಉಳಿಸಿಕೊಳ್ಳಲು ಓಡಿಹೋಗುವುದನ್ನು ಚಿತ್ರಿಸಿಕೊಳ್ಳುತ್ತಾರೆ. ಆದರೆ ಸತ್ಯವೇದದಲ್ಲಿ ಇದಕ್ಕೆ ಸಂಪೂರ್ಣ ವಿರುದ್ಧವಾದ ಬೋಧನೆಯಿದೆ. ನಿಮಗೇನು ಅನ್ನಿಸುತ್ತದೆ? ಸೈತಾನನು ಯೇಸುವಿಗೆ ಭಯಪಡುತ್ತಿದ್ದನೋ, ಇಲ್ಲವೋ? ಸೈತಾನನು ನಮ್ಮ ರಕ್ಷಕನ ಮುಂದೆ ನಿಲ್ಲಲು ಭಯಪಡುತ್ತಿದ್ದನೆಂದು ನಮ್ಮೆಲ್ಲರಿಗೆ ತಿಳಿದಿದೆ. ಯೇಸುವು ಲೋಕಕ್ಕೆ ಬೆಳಕಾಗಿದ್ದಾರೆ, ಮತ್ತು ಅವರ ಸಾನ್ನಿಧ್ಯದಿಂದ ಕತ್ತಲೆಯ ಅಧಿಪತಿಯು ಮರೆಯಾಗಲೇ ಬೇಕಿತ್ತು.

ನಾನು ಯುವಜನರಾದ ನಿಮಗೆ ಹೇಳಬಯಸುವುದು ಏನೆಂದರೆ, ನಿಮ್ಮ ಜೀವನದಲ್ಲಿ ಯಾವಾಗಲಾದರೂ ಒಂದು ತೊಂದರೆ ಎದುರಾದರೆ, ಅಥವಾ ನಿಮಗೆ ಪರಿಹರಿಸಲಾಗದ ಯಾವುದೋ ಸಮಸ್ಯೆ ಉಂಟಾದರೆ, ನೀವು ಎದುರಿಸುತ್ತಿರುವ ಪರಿಸ್ಥಿತಿಗೆ ಯಾವುದೇ ಮಾನವ ಪರಿಹಾರವು ಕಾಣದಿದ್ದಾಗ, ಕರ್ತನಾದ ಯೇಸುವಿನ ನಾಮವನ್ನು ಉಚ್ಛರಿಸಿರಿ. ಅವರಿಗೆ ಹೀಗೆ ಪ್ರಾರ್ಥಿಸಿರಿ: "ಕರ್ತನಾದ ಯೇಸುವೇ, ನೀವು ಪಿಶಾಚನ ವಿರುದ್ಧವಾಗಿ ನನ್ನ ಕಡೆ ಇದ್ದೀರಿ. ಈಗ ನನಗೆ ಸಹಾಯ ಮಾಡಿರಿ". ಇದರ ನಂತರ ಸೈತಾನನ ಕಡೆಗೆ ತಿರುಗಿಕೊಂಡು ಅವನಿಗೆ ಹೀಗೆ ಹೇಳಿರಿ, "ಸೈತಾನನೇ, ನಾನು ಯೇಸುವಿನ ಹೆಸರಿನಲ್ಲಿ ನಿನ್ನನ್ನು ಎದುರಿಸುತ್ತೇನೆ". ನಾನು ನಿಮಗೆ ಹೇಳಬಯಸುವುದು ಏನೆಂದರೆ, ಸೈತಾನನು ಒಡನೆಯೇ ಅಲ್ಲಿಂದ ಪರಾರಿಯಾಗುತ್ತಾನೆ, ಏಕೆಂದರೆ ಶಿಲುಬೆಯ ಮೇಲೆ ಯೇಸುವು ಆತನನ್ನು ಅಡಗಿಸಿಬಿಟ್ಟರು. ನೀವು ದೇವರ ಬೆಳಕಿನಲ್ಲಿ ನಡೆದು ಸೈತಾನನನ್ನು ಯೇಸುವಿನ ಹೆಸರಿನಲ್ಲಿ ಎದುರಿಸುವಾಗ, ಆತನಿಗೆ ನಿಮ್ಮ ವಿರುದ್ಧವಾಗಿ ಯಾವ ಸಾಮರ್ಥ್ಯವೂ ಇರುವುದಿಲ್ಲ.

ಸೈತಾನನು ತನ್ನ ಸೋಲಿನ ವಿಷಯ ನಿಮಗೆ ತಿಳಿಯದಿರಲಿ ಎಂದು ಬಯಸುವುದು ಸ್ಪಷ್ಟ ಸಂಗತಿಯಾಗಿದೆ ಮತ್ತು ಈ ಕಾರಣಕ್ಕಾಗಿ ನೀವು ಈ ವಿಷಯವನ್ನು ಕೇಳಿಸಿಕೊಳ್ಳುವುದನ್ನು ಆತನು ಇಷ್ಟು ದಿನ ತಡೆಹಿಡಿದಿದ್ದಾನೆ. ಇದಕ್ಕಾಗಿಯೇ ಹೆಚ್ಚಿನ ಬೋಧಕರು ಆತನ ಸೋಲಿನ ವಿಷಯವಾಗಿ ಸಾರಿ ಹೇಳದಂತೆ ಆತನು ಅವರನ್ನು ಸಹ ತಡೆಗಟ್ಟಿದ್ದಾನೆ.

ಸೈತಾನನು ಕರ್ತನಾದ ಯೇಸುವಿನಿಂದ ಶಿಲುಬೆಯಲ್ಲಿ ಶಾಶ್ವತವಾದ ಸೋಲನ್ನು ಅನುಭವಿಸಿದನು, ಎಂಬುದು ನಿಮ್ಮೆಲ್ಲರಿಗೂ ಸ್ಪಷ್ಟವಾಗಿ ತಿಳಿದಿರಲಿ ಎಂದು ನಾನು ಬಯಸುತ್ತೇನೆ. ನೀವು ಇನ್ನು ಮುಂದೆ ಎಂದಿಗೂ ಸೈತಾನನಿಗೆ ಹೆದರಬೇಕಿಲ್ಲ. ಆತನು ನಿಮ್ಮನ್ನು ಪೀಡಿಸಲಾರನು. ಆತನು ನಿಮಗೆ ಹಾನಿ ಮಾಡಲಾರನು. ಅವನು ನಿಮ್ಮನ್ನು ಶೋಧಿಸಬಹುದು. ಅವನು ನಿಮ್ಮ ಮೇಲೆ ದಾಳಿ ಮಾಡಬಹುದು. ಆದರೆ ನೀವು ನಿಮ್ಮನ್ನು ತಗ್ಗಿಸಿಕೊಂಡರೆ, ಮತ್ತು ಎಲ್ಲಾ ಸಮಯದಲ್ಲಿ ದೇವರಿಗೆ ವಿಧೇಯರಾಗಿ ಅವರ ಬೆಳಕಿನಲ್ಲಿ ನಡೆದರೆ, ಕ್ರಿಸ್ತನಲ್ಲಿರುವ ದೇವರ ಕೃಪೆಯು ನಿಮ್ಮನ್ನು ಆತನ ವಿರುದ್ಧವಾಗಿ ಯಾವಾಗಲೂ ಜಯಶಾಲಿಗಳನ್ನಾಗಿ ಮಾಡುತ್ತದೆ.

ಬೆಳಕಿನಲ್ಲಿ ಅಪಾರ ಶಕ್ತಿಯಿದೆ. ಸೈತಾನನು ಕತ್ತಲೆಯ ಅಧಿಪತಿಯಾಗಿದ್ದಾನೆ; ಆತನು ಬೆಳಕಿನ ಸಮೀಪಕ್ಕೆ ಎಂದಿಗೂ ಪ್ರವೇಶಿಸಲಾರನು. ಸೈತಾನನು ಕೆಲವು ವಿಶ್ವಾಸಿಗಳ ಮೇಲೆ ಪ್ರಭಾವವನ್ನು ಹೊಂದಿದ್ದರೆ, ಅದಕ್ಕೆ ಕಾರಣ ಅವರು ಕತ್ತಲೆಯಲ್ಲಿ ನಡೆಯುತ್ತಾರೆ, ಯಾವುದೋ ಗುಪ್ತವಾದ ಪಾಪದಲ್ಲಿ ಜೀವಿಸುತ್ತಾರೆ, ಇತರರನ್ನು ಕ್ಷಮಿಸದಿರುವುದು, ಅಥವಾ ಯಾರ ಮೇಲೋ ಅಸೂಯೆಗೊಳ್ಳುವುದು, ಅಥವಾ ತಮ್ಮ ಜೀವನದಲ್ಲಿ ಯಾವುದೋ ಸ್ವಾರ್ಥದ ಹಂಬಲ ಇರಿಸಿಕೊಳ್ಳುವುದು, ಇತ್ಯಾದಿ. ಹಾಗಿದ್ದಾಗ ಸೈತಾನನಿಗೆ ಅವರ ಮೇಲೆ ಅಧಿಕಾರ ಸಿಗುತ್ತದೆ. ಇಲ್ಲವಾದಲ್ಲಿ ಅವನು ಅವರನ್ನು ಮುಟ್ಟಲಾರನು.

ಪ್ರಕಟನೆ ಪುಸ್ತಕದಲ್ಲಿ ನಮಗೆ ತಿಳಿಸಿರುವಂತೆ, ಒಂದು ದಿನ ಯೇಸುವು ತಿರುಗಿ ಬರುತ್ತಾರೆ ಮತ್ತು ಸೈತಾನನನ್ನು ಬಂಧಿಸಿ ಅಧೋಲೋಕದ ಕೂಪದಲ್ಲಿ ಇರಿಸುತ್ತಾರೆ, ಮತ್ತು ಇದರ ನಂತರ ಯೇಸುವು ಈ ಭೂಮಿಯ ಮೇಲೆ ಒಂದು ಸಾವಿರ ವರ್ಷಗಳ ಆಳ್ವಿಕೆಯನ್ನು ನಡೆಸುತ್ತಾರೆ. ಆ ಸಮಯ ತೀರಿದ ಮೇಲೆ, ಸೈತಾನನು ತನ್ನ ದೀರ್ಘ ಸೆರೆವಾಸದ ನಂತರವೂ ಯಾವುದೇ ಬದಲಾವಣೆಯನ್ನು ಹೊಂದಲಿಲ್ಲವೆಂದು ಎಲ್ಲರಿಗೆ ತೋರಿಸುವುದಕ್ಕಾಗಿ, ಆತನು ಸ್ವಲ್ಪ ಸಮಯ ಸೆರೆಯಿಂದ ಬಿಡುಗಡೆ ಹೊಂದುವನು. ಅವನು ಹೊರಗೆ ಬಂದು ಭೂಮಿಯಲ್ಲಿ ವಾಸಿಸುತ್ತಿರುವ ಜನರನ್ನು ಕೊನೆಯ ಬಾರಿಗೆ ಮರುಳು ಮಾಡುವನು. ಆಗ ಒಂದು ಸಾವಿರ ವರ್ಷಗಳ ಕರ್ತನಾದ ಯೇಸುವಿನ ಶಾಂತಿಯುತವಾದ ಆಳ್ವಿಕೆಯನ್ನು ಚೆನ್ನಾಗಿ ನೋಡಿದ ಮೇಲೆಯೂ, ಆದಾಮನ ಸಂತತಿಯೂ ಸಹ ಯಾವುದೇ ರೀತಿಯಲ್ಲಿ ಬದಲಾಗಿಲ್ಲ, ಎಂಬುದು ಕಂಡುಬರುತ್ತದೆ. ಇದರ ನಂತರ ದೇವರು ಇಳಿದು ಬಂದು, ಸೈತಾನನಿಗೆ ನ್ಯಾಯತೀರ್ಪು ಮಾಡುತ್ತಾರೆ ಮತ್ತು ಅವನನ್ನು ಯುಗಯುಗಾಂತರಕ್ಕೂ ಬೆಂಕಿಯ ಕೆರೆಗೆ ದಬ್ಬುತ್ತಾರೆ. ಇದಲ್ಲದೆ, ಯಾರು ಪಾಪದಲ್ಲಿ ಜೀವಿಸಿ, ತಮ್ಮ ಮೊಣಕಾಲನ್ನು ಸೈತಾನನಿಗೆ ಬಾಗಿಸಿ, ದೇವರ ವಾಕ್ಯಕ್ಕೆ ವಿಧೇಯರಾಗದೆ ಸೈತಾನನಿಗೆ ವಿಧೇಯರಾದರೋ, ಅವರೆಲ್ಲರೂ ಸಹ ಸೈತಾನನೊಂದಿಗೆ ಅದೇ ಬೆಂಕಿಯ ಕೆರೆಗೆ ಸೇರುತ್ತಾರೆ.

ಈ ಕಾರಣಕ್ಕಾಗಿ ನಾವು ಸೈತಾನನ ಸೋಲಿನ ಈ ಸುವಾರ್ತೆಯನ್ನು ಸಾರುತ್ತೇವೆ. ಇದು ಬಹುಶಃ ವಿಶ್ವಾಸಿಗಳು ಈ ಸಮಯದಲ್ಲಿ ಕೇಳಿಸಿಕೊಳ್ಳಬೇಕಾದ ಅತಿ ಮುಖ್ಯವಾದ ಸತ್ಯಾಂಶವಾಗಿದೆ. ಆದರೆ ನೆನಪಿಡಿರಿ, ನೀವು ಪರಿಶುದ್ಧತೆಯಲ್ಲಿ ನಡೆಯದಿದ್ದರೆ ನಿಮಗೆ ಸೈತಾನನ ಮೇಲೆ ಯಾವ ಅಧಿಕಾರವೂ ಇರುವುದಿಲ್ಲ.