WFTW Body: 

ಸತ್ಯವೇದದ ಹೊಸ ಒಡಂಬಡಿಕೆಯಲ್ಲಿ, (2 ಕೊರಿ. 3:18) ರ ವಚನವು ಪವಿತ್ರಾತ್ಮನು ಮಾಡುವ ಸೇವೆಯನ್ನು ಬಹಳ ಯೋಗ್ಯವಾಗಿ ವಿವರಿಸುತ್ತದೆ ಎಂಬುದಾಗಿ ನಾನು ಕಂಡುಕೊಂಡಿದ್ದೇನೆ. ಜೀವನದಲ್ಲಿ ಪವಿತ್ರಾತ್ಮನು ನನ್ನ ಕರ್ತನಾದಾಗ, ಆತನು ಬಿಡುಗಡೆಯನ್ನು ತರುತ್ತಾನೆ (2 ಕೊರಿ. 3:17) . ಆತನು ನನ್ನನ್ನು ಸ್ವತಂತ್ರ ಗೊಳಿಸುತ್ತಾನೆ. "ಕರ್ತನ ಆತ್ಮನು ಯಾರಲ್ಲಿದ್ದಾನೋ, ಅವರಿಗೆ ಬಿಡುಗಡೆ ಉಂಟು." ಅದು ಎಂತಹ ಬಿಡುಗಡೆ? ಪಾಪದಿಂದ ಬಿಡುಗಡೆ, ಹಣದಾಸೆಯಿಂದ ಬಿಡುಗಡೆ, ತಂದೆತಾಯಿಗಳು, ಅಜ್ಜ-ಮುತ್ತಜ್ಜ, ಪಿತೃಗಳು ಮತ್ತು ಹಿರಿಯರಿಂದ ಬಂದಿರುವ ಕೆಟ್ಟ ಸಂಪ್ರದಾಯಗಳು, ಇತ್ಯಾದಿಗಳಿಂದ ಬಿಡುಗಡೆ, ಮತ್ತು ನನ್ನನ್ನು ಜನರು ಹೊಗಳಿದರೂ ತೆಗಳಿದರೂ ಅವರ ಅಭಿಪ್ರಾಯಗಳಿಂದ ಬಿಡುಗಡೆ. ಇದು ಒಂದು ಅದ್ಭುತವಾದ ಸ್ವಾತಂತ್ರ್ಯವಾಗಿದೆ. ಇದರಲ್ಲಿ ದೇವರನ್ನು ಸೇವೆ ಮಾಡುವ ಸ್ವಾತಂತ್ರ್ಯವಿದೆ ಮತ್ತು ಇನ್ನು ಮುಂದೆ ನಾನು ಜನರ ದಾಸನಾಗಿರುವುದಿಲ್ಲ. ಪವಿತ್ರಾತ್ಮನು ನಮಗೆ ಇದನ್ನೇ ನೀಡುತ್ತಾನೆ (2 ಕೊರಿ. 3:18) .

ಸತ್ಯವೇದದಲ್ಲಿರುವ ಯೇಸುವಿನ ಪ್ರಭಾವವನ್ನು ಪವಿತ್ರಾತ್ಮನು ನನಗೆ ತೋರಿಸುತ್ತಾನೆ. ಇಲ್ಲಿ ಸತ್ಯವೇದವು ಒಂದು ಕನ್ನಡಿಯಂತಿದೆ. ಕನ್ನಡಿಯಲ್ಲಿ ನಾನು ಯೇಸುವಿನ ಪ್ರಭಾವವನ್ನು ನೋಡುತ್ತೇನೆ. ಪವಿತ್ರಾತ್ಮನು ನಮಗೆ ಕೊಡುವಂಥದ್ದು ಕೇವಲ ದೇವರ ಮೂಲತತ್ವಗಳು ಮತ್ತು ಪ್ರಸಂಗಗಳಲ್ಲ - ಕೆಲವು ಜನರು ಭೊದನೆ ಮತ್ತು ಪ್ರಸಂಗಗಳನ್ನು ಪಡೆಯುವುದಕ್ಕಾಗಿ ಸತ್ಯವೇದವನ್ನು ಓದುತ್ತಾರೆ - ಆದರೆ ಇವುಗಳ ಜೊತೆಗೆ, ಪವಿತ್ರಾತ್ಮನು ನಮಗೆ ಸತ್ಯವೇದದ ಪುಟಗಳಲ್ಲಿ ಯೇಸುವಿನ ಮಹಿಮೆಯನ್ನು ಸಹ ತೋರಿಸುತ್ತಾನೆ. ಹೊಸ ಒಡಂಬಡಿಕೆಯಲ್ಲಿ ಬರೆಯಲ್ಪಟ್ಟಿರುವ ಪ್ರತಿಯೊಂದು ವಿಷಯವೂ ನನಗೆ ಯೇಸು ಕ್ರಿಸ್ತನ ಪ್ರಭಾವವನ್ನು ತೋರಿಸಬೇಕು. ನಾನು ಆ ಪ್ರಭಾವ ಅಥವಾ ಮಹಿಮೆಯನ್ನು ನೋಡುತ್ತಿರುವಾಗ, ಪವಿತ್ರಾತ್ಮನು ನನ್ನ ಹೃದಯದಲ್ಲಿ ಇನ್ನೊಂದು ಕಾರ್ಯವನ್ನು - ನನ್ನನ್ನು ಪ್ರಭಾವವುಳ್ಳ ಕರ್ತನ ಸಾರೂಪ್ಯಕ್ಕೆ ಬದಲಾಯಿಸುವ ಕಾರ್ಯವನ್ನು - ಮಾಡುತ್ತಾನೆ. ಇದೇ ಪವಿತ್ರಾತ್ಮನು ಮಾಡುವ ಕೆಲಸವಾಗಿದೆ.

"ದೇವರ ಸೇವೆ ಮಾಡುವುದು ಹೇಗೆ?" ಎಂದು ಜನರು ಪ್ರಶ್ನಿಸುತ್ತಾರೆ. ನಾನು ಯೇಸುವು ಮಾಡಿದ ಸೇವೆಯನ್ನು ನೋಡುತ್ತೇನೆ, ಮತ್ತು ನಾನು ಅದೇ ರೀತಿಯಾಗಿ ಸೇವೆ ಮಾಡಲು ಶುರುಮಾಡುತ್ತೇನೆ. ಯೇಸುವು ಹೇಗೆ ತ್ಯಾಗ ಮಾಡಿ, ಅಲ್ಲಿ ಇಲ್ಲಿ ಪ್ರಯಾಣಿಸಿ ಬೋಧಿಸಿದರು ಎಂದು ನಾನು ನೋಡುತ್ತೇನೆ ಮತ್ತು ನಾನು ಸಹ ತ್ಯಾಗ ಮಾಡಿ ಅಲ್ಲಿ ಇಲ್ಲಿ ಸಂಚರಿಸಿ, ಸುವಾರ್ತೆಯನ್ನು ಬೋಧಿಸುತ್ತೇನೆ. ಹೀಗೆ ಮಾಡುವುದರಿಂದ ನಿಮ್ಮ ಸೇವೆಯು ಕುಗ್ಗುತ್ತದೆಂದು ನೀವು ಭಾವಿಸಬೇಡಿರಿ. ನೀವು ಹೆಚ್ಚು ಹೆಚ್ಚು ತ್ಯಾಗಮಾಡುತ್ತಾ ಸೇವೆ ಮಾಡುತ್ತೀರಿ. (2 ಕೊರಿ. 3:17,18) ರಲ್ಲಿ ತೋರಿಸಲಾಗಿರುವ ಕೆಲಸವನ್ನು ಮಾಡಲು ನೀವು ಪವಿತ್ರಾತ್ಮನಿಗೆ ಅವಕಾಶ ಕೊಟ್ಟಾಗ, ನಿಮ್ಮ ಜೀವನ ಮತ್ತು ನಿಮ್ಮ ಸೇವೆಯು ಬದಲಾಗುತ್ತದೆ. ನೀವು ಒಬ್ಬ ಹೊಸ ಒಡಂಬಡಿಕೆಯ ಸೇವಕರು ಆಗುತ್ತೀರಿ, ಮತ್ತು ನೀವು ಇದಕ್ಕಾಗಿ ಒಬ್ಬ ಪೂರ್ಣಾವಧಿ ಕಾರ್ಯಕರ್ತರಾಗುವ ಅವಶ್ಯಕತೆಯಿಲ್ಲ. ಕರ್ತನ ಸಭೆಯ ಒಬ್ಬೊಬ್ಬ ಸಹೋದರ ಅಥವಾ ಸಹೋದರಿಯೂ ಹೊಸ ಒಡಂಬಡಿಕೆಯ ಸೇವಕ ಅಥವಾ ಸೇವಕಿ ಆಗಿರಬೇಕು.

"ಈ ಸೇವೆಗೆ ನಮ್ಮಷ್ಟಕ್ಕೆ ನಾವೇ ಸಮರ್ಥರಲ್ಲ" (2 ಕೊರಿ. 3:5). ಈ ಸುವಾರ್ತಾ ಸೇವೆಗೆ ಬೇಕಾಗಿರುವ ಎಲ್ಲವೂ ನಮ್ಮಲ್ಲಿದೆಯೆಂದು ನಾವು ಹೇಳಲಾರೆವು, ಆದರೆ ನಮ್ಮ ಸಾಮರ್ಥ್ಯವು ದೇವರಿಂದಲೇ ಬರುತ್ತದೆ. ಹೊಸ ಒಡಂಬಡಿಕೆಯ ಒಬ್ಬ ಸೇವಕನು ದೇವರ ಸೇವೆ ಮಾಡಲು ಯಾವುದೇ ಸ್ವಂತ ಸಾಮರ್ಥ್ಯವನ್ನು ಅವಲಂಬಿಸಿಲ್ಲ. ಅದು ಸಂಪೂರ್ಣವಾಗಿ ದೇವರಿಂದ ಬರುವಂಥದ್ದಾಗಿದೆ. "ದೇವರೇ, ನೀವು ನನಗೆ ಕೊಡಿರಿ. ಅದನ್ನು ಹಂಚುವುದು ನನ್ನ ಕೆಲಸ." ಇದು ಕೆಲಸದ ಆಳುಗಳು ದ್ರಾಕ್ಷಾರಸವನ್ನು ತೆಕ್ಕೊಂಡು ಹೋಗಿ ಹಂಚಿದ ಹಾಗಿದೆ. ಕೆಲಸದವರು ನೀರನ್ನು ಯೇಸುವಿನ ಬಳಿಗೆ ತಂದರು; ಆತನು ಅದನ್ನು ದ್ರಾಕ್ಷಾರಸವಾಗಿ ಬದಲಾಯಿಸಿದನು ಮತ್ತು ಅವರು ಅದನ್ನು ಹಂಚಿದರು. ಶಿಷ್ಯರು ಜವೆಗೋದಿಯ ಐದು ರೊಟ್ಟಿಗಳನ್ನು ಯೇಸುವಿನ ಬಳಿಗೆ ತೆಗೆದುಕೊಂಡು ಹೋದರು, ಯೇಸುವು ಅವನ್ನು ಹೆಚ್ಚಿಸಿದರು ಮತ್ತು ಅವರು ಜನರಿಗೆ ಹಂಚಿಕೊಟ್ಟರು. ನಾವು ಇದೇ ರೀತಿಯಾಗಿ ನಮ್ಮ ಅಲ್ಪ ಸ್ವತ್ತನ್ನು ದೇವರ ಬಳಿಗೆ ತರುತ್ತೇವೆ ಮತ್ತು ದೇವರು ಅದನ್ನು ಅಭಿಷೇಕಿಸುತ್ತಾರೆ, ಆಶೀರ್ವದಿಸುತ್ತಾರೆ, ಹೆಚ್ಚಿಸುತ್ತಾರೆ. ಈ ರೀತಿಯಾಗಿ ನಾವು ಸೇವೆ ಮಾಡುತ್ತೇವೆ.

ದೇವರ ಅನೇಕ ಸೇವಕರು ಹಲವಾರು ವರ್ಷಗಳ ಸೇವೆಯ ನಂತರ ನಿರುತ್ಸಾಹಗೊಳ್ಳುತ್ತಾರೆ, ಮಂಕಾಗುತ್ತಾರೆ ಮತ್ತು ಮನಗುಂದುತ್ತಾರೆ. ಅವರು ದಣಿದು ಬಳಲುವುದಕ್ಕೆ ಕಾರಣ, ಅವರು ತಮ್ಮ ಸ್ವಂತ ಸಾಮರ್ಥ್ಯದಿಂದ ಸೇವೆ ಮಾಡಲು ಪ್ರಯತ್ನಿಸುತ್ತಾರೆ. ದೇವರ ಸೇವೆಗಾಗಿ ದೈಹಿಕ ಆರೋಗ್ಯವನ್ನೂ ಸಹ ನಾವು ದೇವರಿಂದಲೇ ಪಡೆಯಬೇಕೆಂದು ನಾನು ನಂಬುತ್ತೇನೆ. ನೀವು ಯಾವುದೋ ಒಂದು ಕಷ್ಟಕರವಾದ ಕ್ಷೇತ್ರದಲ್ಲಿ ದೇವರ ಸೇವೆ ಮಾಡುತ್ತಿರಬಹುದು ಮತ್ತು ಇದಕ್ಕಾಗಿ ನಿಮಗೆ ದೈಹಿಕ ಆರೋಗ್ಯ ಅವಶ್ಯವಾಗಿರುತ್ತದೆ. ಈ ವಾಗ್ದಾನವನ್ನು ನೆನಪಿಸಿಕೊಳ್ಳಿರಿ, "ಕರ್ತನ ಸಹಾಯವನ್ನು ನಿರೀಕ್ಷಿಸುವವರು ಹೊಸ ಬಲವನ್ನು ಹೊಂದುವರು. ತರುಣರೂ ಬಳಲಿ ಮುಗ್ಗರಿಸುವರು, ಆದರೆ ನಾವಾದರೋ ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು ಏರುವೆವು." ನಮ್ಮ ಸಾಮರ್ಥ್ಯವು ದೇವರಿಂದ ಬರುತ್ತದೆ. ನಿಮಗೆ ಹಣಕಾಸಿನ ತೊಂದರೆ ಇದ್ದರೆ, ನಿಮ್ಮ ಸಹಾಯಕ್ಕಾಗಿ "ದೇವರು ನಮಗೆ ಸಾಮರ್ಥ್ಯವನ್ನು ಅನುಗ್ರಹಿಸಿದ್ದಾನೆ," ಎಂಬ ಈ ವಚನವಿದೆ. ನಿಮ್ಮ ಹೊಸ ಒಡಂಬಡಿಕೆಯ ಸೇವೆಯಲ್ಲಿ ಯಾವ ಕೊರತೆಯಿದ್ದರೂ, ನಮಗೆ ಬೇಕಾದ ಬಲವು ದೇವರಿಂದ ಬರುತ್ತದೆ.

ದೇವರು ನಮ್ಮನ್ನು ಹೊಸ ಒಡಂಬಡಿಕೆಯ ಸೇವಕರನ್ನಾಗಿ ನೇಮಿಸಿದ್ದಾರೆ. ಹೊಸ ಒಡಂಬಡಿಕೆಯ ಅಡಿಯಲ್ಲಿ ನಮ್ಮ ಸೇವೆ ಲಿಖಿತ ರೂಪದ್ದಲ್ಲ, ಅದು ದೇವರಾತ್ಮ ಸಂಬಂಧದ್ದು ಆಗಿದೆ (2 ಕೊರಿ. 3:6). ಇಲ್ಲಿ ಎರಡು ವಿಧವಾದ ಸೇವೆಗಳು ನಮೂದಿಸಲ್ಪಟ್ಟಿವೆ, ಒಂದು ಅಪರಾಧ ನಿರ್ಣಯದ ಸೇವೆ, ಮತ್ತೊಂದು ನೀತಿಗೆ ನಡೆಸುವ ಸೇವೆ (2 ಕೊರಿ. 3:9). ಅಪರಾಧ ನಿರ್ಣಯದ ಸೇವೆ ಅಂದರೇನು? ಸಭಾಕೂಟದಲ್ಲಿ ನೀವು ಪ್ರಸಂಗಿಸುವಾಗ, ಜನರಲ್ಲಿ ತಪ್ಪಿತಸ್ಥ ಭಾವನೆ ಉಂಟಾಗಿ ಅವರು ಕೂಟದಿಂದ ಹಿಂದಿರುಗಿದರೆ, ಅದು ಅಪರಾಧ ನಿರ್ಣಯದ ಸೇವೆಯಾಗಿದೆ. ಇದೊಂದು ಅದ್ಭುತವಾದ ಸೇವೆಯೆಂದು ನೀವು ಭಾವಿಸಬಹುದು, ಏಕೆಂದರೆ ಎಲ್ಲರಲ್ಲೂ ಅಪರಾಧಿಗಳ ಭಾವನೆಯನ್ನು ನೀವು ಮೂಡಿಸಿದಿರಿ. ಈ ಸೇವೆ ಹಳೆಯ ಒಡಂಬಡಿಕೆಗೆ ಸೇರಿದ್ದಾಗಿದೆ. ಧರ್ಮಶಾಸ್ತ್ರವು ಜನರನ್ನು ದೂಷಿಸುತ್ತದೆ - "ನೀನು ಅನರ್ಹನು, ಮೊದಲಿನಿಂದಲೂ ನೀನು ಅಸಮರ್ಪಕವಾಗಿದ್ದೀ." ಈ ದಿನ ಕ್ರೈಸ್ತ ವರ್ತುಲಗಳಲ್ಲಿ ’ಉಜ್ಜೀವನ ಕೂಟಗಳು’ ಎಂದು ಕರೆಯಲ್ಪಡುವ ಅನೇಕ ಸಮ್ಮೇಳನಗಳಲ್ಲಿ ಜನರಿಗೆ ಹೇಳುವುದು ಇಷ್ಟು ಮಾತ್ರ, "ನೀನು ಅಯೋಗ್ಯನು, ದೇವರನ್ನು ಮೆಚ್ಚಿಸುವ ಸಾಮರ್ಥ್ಯ ನಿನಗಿಲ್ಲ. ನೀನು ಹೀಗಿದ್ದೀ, ಹಾಗಿದ್ದೀ." ಜನರು ತಪ್ಪಿತಸ್ಥ ಭಾವನೆಯೊಂದಿಗೆ ಅಲ್ಲಿ ಕೂತಿರುತ್ತಾರೆ.

ಕ್ರೈಸ್ತ ಬೋಧನೆಯು ಹೀಗಿರುವುದಿಲ್ಲ. ಕ್ರೈಸ್ತ ಬೋಧನೆಯು ಜನರನ್ನು ನೀತಿಗೂ, ಮಹಿಮೆಗೂ ನಡೆಸುತ್ತದೆ. ಅವರು ಅಪರಾಧ ಮಾಡಿರುವುದನ್ನು ಒಪ್ಪಿಕೊಳ್ಳುತ್ತಾರೆ, ಆದರೆ ಕೂಟದ ಅಂತ್ಯದಲ್ಲಿ ತಾವು ಬಿದ್ದಲ್ಲಿಂದ ಮೇಲಕ್ಕೆ ಎಬ್ಬಿಸಲ್ಪಡುವ ಅನುಭವವನ್ನು ಹೊಂದುತ್ತಾರೆ, ಗುಣಹೊಂದಿದ ಮತ್ತು ವಿಮೋಚಿಸಲ್ಪಟ್ಟ ಭಾವನೆಯನ್ನು ಪಡೆದುಕೊಂಡು, ನಿರೀಕ್ಷೆಯೊಂದಿಗೆ ಹಿಂದಿರುಗಿ ಹೋಗುತ್ತಾರೆ. ನಿಮ್ಮ ಬೋಧನೆಯು ಜನರನ್ನು ಎಂದಾದರೂ ಗುಲಾಮತನಕ್ಕೆ ನಡೆಸಿದರೆ, ನೀವು ಹೊಸ ಒಡಂಬಡಿಕೆಯ ಸೇವಕರಲ್ಲವೆಂದು ಖಚಿತವಾಗುತ್ತದೆ. ನಿಮ್ಮ ಬೋಧನೆಯು ಜನರಲ್ಲಿ ಮೇಲಕ್ಕೆ ಎತ್ತಲ್ಪಡುವ ಭಾವನೆಯ ಬದಲಾಗಿ ನಿಂದಿಸಲ್ಪಡುವ ಭಾವನೆಯನ್ನು ತಂದರೆ, ಅದು ಹಳೆಯ ಒಡಂಬಡಿಕೆಯ ಬೋಧನೆಯಾಗಿದೆ. ನೀವು ಜನರನ್ನು ಮೇಲಕ್ಕೆತ್ತದೆ ಕೆಳಕ್ಕೆ ದಬ್ಬುವುದಾದರೆ, ಅದು ಹಳೆಯ ಒಡಂಬಡಿಕೆಯ ಬೋಧನೆಯಾಗಿದೆ. ಹೊಸ ಒಡಂಬಡಿಕೆಯ ಬೋಧನೆಯು ಜನರನ್ನು ಮೇಲೆತ್ತಿ, ಅವರಿಗೆ ನಿರೀಕ್ಷೆಯನ್ನು ಕೊಡುತ್ತದೆ. 2 ಕೊರಿ. 4:1 ರಲ್ಲಿ, ಅಪೊಸ್ತಲ ಪೌಲನು ತನ್ನ ಸೇವೆಯನ್ನು ವಿವರಿಸುತ್ತಾ ಮುಂದುವರಿಯುತ್ತಾನೆ. "ನಾವು ದೇವರ ಕರುಣೆಯಿಂದ ಈ ಸೇವೆಯ ಅವಕಾಶವನ್ನು ಹೊಂದಿರುವುದರಿಂದ, ನಾವು ಧೈರ್ಯಗೆಡುವುದಿಲ್ಲ." ’ಧೈರ್ಯಗೆಡುವುದು’ ಎಂದರೆ ನಿರುತ್ಸಾಹಗೊಳ್ಳುವುದು. ಸ್ವತಃ ಪೌಲನೇ ನಿರುತ್ಸಾಹಗೊಳ್ಳುವಂತೆ ಶೋಧಿಸಲ್ಪಟ್ಟನು. ಹಾಗಿರುವಾಗ, ನೀವು ಸುವಾರ್ತಾ ಸೇವೆಯಲ್ಲಿ ನಿರಾಸೆಯನ್ನು ಎದುರಿಸಿದರೆ, ಅದರಲ್ಲಿ ಆಶ್ಚರ್ಯವೇನೂ ಇಲ್ಲ. ನಾನು ಅನೇಕ ಸಲ ನಿರಾಸೆಗೊಳ್ಳುವಂತೆ ಶೋಧಿಸಲ್ಪಟ್ಟಿದ್ದೇನೆ. ಆದರೆ ಪೌಲನು ಹೇಳುವಂತೆ, "ನಾವು ನಿರಾಶರಾಗುವುದಿಲ್ಲ. ನಾವು ಯೇಸುವಿನ ಮೇಲೆ ದೃಷ್ಟಿಯನ್ನು ಇರಿಸುವುದರಿಂದ, ನಿರುತ್ಸಾಹವನ್ನು ದೂರವಿರಿಸುತ್ತೇವೆ ಮತ್ತು ದೇವರು ನಮಗೆ ಕೊಟ್ಟಿರುವ ಅದ್ಭುತ ಸೇವೆಯನ್ನು ನೆನೆಸಿಕೊಳ್ಳುತ್ತೇವೆ" (2 ಕೊರಿ. 4:2).