ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ತಿಳಿಯುವುದು
WFTW Body: 

ಹೊಸ ಒಡಂಬಡಿಕೆಯ ಸೇವೆಯು ಜೀವಿತದ ಮೂಲಕ ಪ್ರಕಟವಾಗಬೇಕೇ ಹೊರತು ಬುದ್ಧಿವಂತಿಕೆಯಿಂದ ಅಲ್ಲ.

ಹಳೆ ಒಡಂಬಡಿಕೆಯ ಕೆಳಗೆ, ಜನರ ಖಾಸಗಿ ಜೀವಿತವು ಜಾರತ್ವದಿಂದ ಕೂಡಿದ್ದರೂ ಸಹ ದೇವರು ಅವರನ್ನು ಉಪಯೋಗಿಸಿದರು. ಸಂಸೋನನು ಪಾಪದಲ್ಲಿ ಜೀವಿಸುತ್ತಿದ್ದರೂ ಸಹ ಇಸ್ರೇಯೇಲ್ಯರನ್ನು ಬಿಡುಗಡೆಗೊಳಿಸಿದನು. ಆತನು ವ್ಯಭಿಚಾರವನ್ನು ಮಾಡಿದಾಗಲೂ ಸಹ ದೇವರ ಆತ್ಮನು ಆತನನ್ನು ಬಿಡಲಿಲ್ಲ. ಆತನು ತನ್ನ ಕೂದಲನ್ನು ಕತ್ತರಿಸಿದಾಗ ಮತ್ತು ದೇವರೊಟ್ಟಿಗೆ ಒಡಂಬಡಿಕೆಯನ್ನು ಮುರಿದುಕೊಂಡಾಗ ಮಾತ್ರ ದೇವರ ಅಭಿಷೇಕವು ಆತನನ್ನು ಬಿಟ್ಟು ಹೋಯಿತು. ದಾವೀದನು ಅನೇಕ ಹೆಂಡತಿಯರನ್ನು ಹೊಂದಿದ್ದನು. ಹಾಗಿದ್ದರೂ ದೇವರ ಅಭಿಷೇಕವು ಆತನ ಮೇಲೆ ಹಾಗೇ ಉಳಿದುಕೊಂಡಿತು ಮತ್ತು ಆತನು ವಚನಗಳನ್ನು ಬರೆದನು.

ಆದರೆ ಹೊಸ ಒಡಂಬಡಿಕೆಯಲ್ಲಿನ ಸೇವೆಯು ಸಂಪೂರ್ಣವಾಗಿ ವಿಭಿನ್ನವಾದದ್ದಾಗಿದೆ. 2 ಕೊರಿಂಥದವರಿಗೆ 3 ರಲ್ಲಿ ಹೇಳಿರುವಂತೆ, ಹಳೆಯ ಒಡಂಬಡಿಕೆಯ ಅಡಿಯಲ್ಲಿ ಇರುವಂತ ಸೇವೆಯೊಟ್ಟಿಗೆ ಹೋಲಿಸುವಾಗ ಹೊಸ ಒಡಂಬಡಿಕೆಯ ಅಡಿಯಲ್ಲಿ ಇರುವ ಸೇವೆಯು ತದ್ವಿರುದ್ಧವಾಗಿದೆ. ಈ ವ್ಯತ್ಯಾಸವು ಪ್ರಾಥಮಿಕವಾಗಿ ಹೀಗಿದೆ: ಹಳೆಯ ಒಡಂಬಡಿಕೆಯ ಕೆಳಗೆ, ಯಾಜಕರು ಧರ್ಮಶಾಸ್ತ್ರವನ್ನು ಜಾಗರೂಕತೆಯಿಂದ ಓದಿದರು ಮತ್ತು ದೇವರು ತನ್ನ ವಾಕ್ಯದಲ್ಲಿ ಹೇಳಿರುವುದನ್ನು ಜನರಿಗೆ ತಿಳಿಸಿದರು. ಆದರೆ ಹೊಸ ಒಡಂಬಡಿಕೆಯಲ್ಲಿ, ಒಳಜೀವಿತದಲ್ಲಿ ಮತ್ತು ನಡೆಯಲ್ಲಿ ತಂದೆಯೊಟ್ಟಿಗೆ ನಡೆದಂತ ಯೇಸುವಿನಿಂದ ನಾವು ದೇವರ ವಾಕ್ಯವನ್ನು ಕೇಳಿಸಿಕೊಂಡು ಆತನನ್ನು ಹಿಂಬಾಲಿಸುತ್ತೇವೆ. ಜೀವಿತದಿಂದ ಸೇವೆ ಮಾಡುವುದಕ್ಕೂ ಮತ್ತು ತಿಳುವಳಿಕೆಯಿಂದ ಬೋಧನೆ ಮಾಡುವುದರ ಮಧ್ಯೆ ಬಹಳ ವ್ಯತ್ಯಾಸವಿದೆ.

ಯಾವುದೇ ಪ್ರಸಂಗಿಯು ಕೇವಲ ಮಾಹಿತಿಯನ್ನು ಹಂಚಿಕೊಳ್ಳುತ್ತಾನೆ ಎಂದಾದಲ್ಲಿ, ಆತನು ಹಳೆ ಒಡಂಬಡಿಕೆಯ ಬೋಧಕನಾಗಿದ್ದಾನೆ. ಆತನು ಕೊಡುವಂತ ಎಲ್ಲಾ ಮಾಹಿತಿಯು ಸರಿಯಾಗಿಯೇ ಇರಬಹುದು. ಆದರೆ ಆತನು ಜೀವಿತವನ್ನು ಹಂಚಿಕೊಳ್ಳುತ್ತಿಲ್ಲ ಎಂದಾದಲ್ಲಿ ಆತನು ಹೊಸ ಒಡಂಬಡಿಕೆಯ ಸೇವಕನಲ್ಲ. ಹಳೆ ಒಡಂಬಡಿಕೆಯು ಅಕ್ಷರದ ಒಡಂಬಡಿಕೆಯಾಗಿದೆ, ಅದರಂತೆ ಹೊಸ ಒಡಂಬಡಿಕೆಯು ಜೀವದ ಒಡಂಬಡಿಕೆಯಾಗಿದೆ. ಅಕ್ಷರವು ಮರಣವನ್ನು ಉಂಟು ಮಾಡುತ್ತದೆ, ಆತ್ಮವು ಜೀವವನ್ನುಂಟು ಮಾಡುತ್ತದೆ.

ಈ ದಿನ ಈ ಬೆಳಕು ಒಂದು ಸಿದ್ಧಾಂತ ಅಥವಾ ಬೋಧನೆಯಲ್ಲ, ಆದರೆ ನಮ್ಮ ಮೂಲಕ ಪ್ರಕಟವಾಗುವ ಯೇಸುವಿನ ಸ್ವಂತ ಜೀವಿತವೇ ಬೆಳಕಾಗಿದೆ. ಇದನ್ನು ಹೊರತು ಪಡಿಸಿ, ಮಿಕ್ಕಿದ್ದೆಲ್ಲವು ಕತ್ತಲೆಯಾಗಿದೆ

ಹಳೆ ಒಡಂಬಡಿಕೆಯಲ್ಲಿ ದೇವರು ಇಸ್ರಾಯೇಲ್ಯರಿಗೆ ಧರ್ಮಶಾಸ್ತ್ರವನ್ನು ಪಾಲಿಸುವುದಕ್ಕಾಗಿ ಕೊಟ್ಟರು. ಆದರೆ ಹೊಸ ಒಡಂಬಡಿಕೆಯಲ್ಲಿ, ದೇವರು ನಮಗೆ ಯೇಸುವೆಂಬ ವ್ಯಕ್ತಿಯಲ್ಲಿ ಒಂದು ಮಾದರಿಯನ್ನು ಕೊಟ್ಟಿದ್ದಾರೆ. ಆತನ ಜೀವಿತವು ಮನುಷ್ಯರಿಗೆ ಬೆಳಕಾಗಿದೆ. ಈ ದಿನ ಈ ಬೆಳಕು ಒಂದು ಸಿದ್ಧಾಂತ ಅಥವಾ ಬೋಧನೆಯಲ್ಲ, ಆದರೆ ನಮ್ಮ ಮೂಲಕ ಪ್ರಕಟವಾಗುವ ಯೇಸುವಿನ ಸ್ವಂತ ಜೀವಿತವೇ ಬೆಳಕಾಗಿದೆ. ಇದನ್ನು ಹೊರತು ಪಡಿಸಿ, ಮಿಕ್ಕಿದ್ದೆಲ್ಲವು ಕತ್ತಲೆಯಾಗಿದೆ - ಅದು ಸುವಾರ್ತೆಯನ್ನು ಒಳಗೊಂಡಿರುವ ಸಿದ್ಧಾಂತವಾಗಿದ್ದರೂ ಸಹ.

ನಾವು ಕೀರ್ತನೆಗಳು 119:105 ರಲ್ಲಿ ಓದುವ ಪ್ರಕಾರ, ಹಳೆ ಒಡಂಬಡಿಕೆಯಲ್ಲಿ ದೇವರು ಬರೆದಂತ ಧರ್ಮಶಾಸ್ತ್ರವು ಬೆಳಕಾಗಿತ್ತು. ಆದರೆ ಇದರ ನಂತರ ವಾಕ್ಯವೆಂಬಾತನು ಅಂದರೆ ಯೇಸುವು ಶರೀರಧಾರಿಯಾಗಿ ಬಂದನು, ಮತ್ತು ಸ್ವತ: ಯೇಸುವೇ ಲೋಕದ ಬೆಳಕಾದನು (ಯೋಹಾನ 8:12). ಆತನ ಜೀವವು ಮನುಷ್ಯರಿಗೆ ಬೆಳಕಾಗಿತ್ತು (ಯೋಹಾನ 1:4). ಆದರೆ ಯೇಸು ತನ್ನ ಶಿಷ್ಯಂದಿರಿಗೆ, ತಾನು ಈ ಲೋಕದಲ್ಲಿ ಇರುವಷ್ಟು ದಿವಸ ಮಾತ್ರ ಲೋಕಕ್ಕೆ ನಾನು ಬೆಳಕಾಗಿರುತ್ತೇನೆ ಎಂದು ಹೇಳಿದರು (ಯೋಹಾನ 9:5). ಈಗ ಆತನು ಪರಲೋಕಕ್ಕೆ ಹೋಗಿದ್ದಾನೆ, ಆತನು ನಮ್ಮನ್ನು ಲೋಕದ ಬೆಳಕಾಗಿ ಇಟ್ಟಿದ್ದಾನೆ (ಮತ್ತಾಯ 5:14). ಹಾಗಾಗಿ ನಮ್ಮ ಜವಾಬ್ದಾರಿಯು ಬಹಳ ದೊಡ್ಡದಾಗಿದೆ ನಾವು ನಮ್ಮ ಜೀವಿತದ ಮೂಲಕ ಬೆಳಕನ್ನು ತೋರಿಸುವವರಾಗಿರಬೇಕು.

ಹಳೆಯ ಒಡಂಬಡಿಕೆಯಲ್ಲಿನ ಗುಡಾರವು ಕ್ರೈಸ್ತ ಸಭೆಯ ಒಂದು ಚಿತ್ರಣವಾಗಿತ್ತು. ನಿಮಗೆ ತಿಳಿದಿರುವಂತೆ ಆ ಗುಡಾರವು ಮೂರು ಭಾಗಗಳನ್ನು ಹೊಂದಿತ್ತು —ಒಂದು ಹೊರಾಂಗಣ, ಒಂದು ಪವಿತ್ರ ಸ್ಥಳ ಮತ್ತು ಅತ್ಯಂತ ಪವಿತ್ರ ಸ್ಥಳ (ದೇವರು ವಾಸಿಸುತ್ತಿದ್ದ ಸ್ಥಳ). ಹೊರಾಂಗಣದಲ್ಲಿರುವ ಜನರು ಕೇವಲ ತಮ್ಮ ಪಾಪಗಳು ಕ್ಷಮಿಸಲ್ಪಟ್ಟಿರುವ ವಿಶ್ವಾಸಿಗಳ ಸಂಕೇತವಾಗಿದ್ದಾರೆ. ಅವರು ತಮ್ಮ ಸ್ಥಳೀಯ ಸಭೆಗಳಲ್ಲಿ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ಅವರು ಸಭೆಗೆ ಬಂದು ಸಂದೇಶವನ್ನು ಕೇಳುತ್ತಾರೆ, ಕಾಣಿಕೆ ನೀಡುತ್ತಾರೆ, ರೊಟ್ಟಿಯನ್ನು ಮುರಿಯುತ್ತಾರೆ, ಮತ್ತು ಮನೆಗೆ ಹೋಗುತ್ತಾರೆ. ಪವಿತ್ರ ಸ್ಥಳದಲ್ಲಿರುವ ಜನರು ಸಭೆಯಲ್ಲಿ ಸೇವೆ ಸಲ್ಲಿಸಲು ಪ್ರಯತ್ನಿಸುತ್ತಾರೆ - ದೀಪಸ್ತಂಭವನ್ನು ಬೆಳಗಿಸಿ, ಬಲಿಪೀಠದ ಮೇಲೆ ಧೂಪವನ್ನು ಹಾಕುವ ಲೇವಿಯರಂತೆ ಇರುತ್ತಾರೆ. ಆದರೆ ಅತ್ಯಂತ ಪವಿತ್ರ ಸ್ಥಳದಲ್ಲಿರುವವರು ಹೊಸ ಒಡಂಬಡಿಕೆಯನ್ನು ಪ್ರವೇಶಿಸುತ್ತಾರೆ, ದೇವರೊಂದಿಗೆ ಅನ್ಯೋನ್ಯತೆಯನ್ನು ಹುಡುಕುತ್ತಾರೆ ಮತ್ತು ಹೊಸ ಒಡಂಬಡಿಕೆಯನ್ನು ಪ್ರವೇಶಿಸಿದಂತ ಇತರ ಶಿಷ್ಯರೊಂದಿಗೆ ಒಂದೇ ದೇಹದಂತೆ ಐಕ್ಯತೆಯಿಂದಿರುತ್ತಾರೆ. ತಮ್ಮ ಜೀವಿತದಿಂದ ಸೇವೆ ಸಲ್ಲಿಸುತ್ತಾರೆ ಮತ್ತು ನಿಜವಾದ ಸಭೆಯನ್ನು ಕಟ್ಟುತ್ತಾರೆ. ವಾಸ್ತವವಾಗಿ ಇವರೇ ಕಾರ್ಯನಿರತವಾಗಿರುವ ಕ್ರೈಸ್ತಸಭೆಯಾಗಿದ್ದಾರೆ, ಅವರು ಸೈತಾನನ ವಿರುದ್ಧ ಹೊರಾಡುತ್ತಾರೆ ಮತ್ತು ಕ್ರಿಸ್ತನ ದೇಹವನ್ನು ಪರಿಶುದ್ಧವಾಗಿಡುತ್ತಾರೆ. ಆದರೆ ಅನೇಕ ಸಭೆಗಳ ಮಧ್ಯದಲ್ಲಿ ಇಂತಹ ಯಾವುದೇ ಪ್ರಧಾನ ಗುಂಪು ಇರುವುದಿಲ್ಲ.

ಪ್ರತಿಯೊಂದು ಸಭೆಯಲ್ಲಿ—ಉತ್ತಮವಾದದ್ದರಲ್ಲಿ ಮತ್ತು ಕೆಟ್ಟದ್ದರಲ್ಲಿ — ಹೊರಾಂಗಣದಲ್ಲಿ ಕುಳಿತುಕೊಳ್ಳುವವರು ಒಂದೇ ರೀತಿ ಇರುತ್ತಾರೆ - ಅಂದರೆ, ಅರೆ ಮನಸ್ಸಿನವರು, ಪ್ರಾಪಂಚಿಕರು, ಸ್ವಾರ್ಥವನ್ನು ಹುಡುಕುವವರು, ಹಣವನ್ನು ಪ್ರೀತಿಸುವವರು ಮತ್ತು ತಮ್ಮ ನೆಮ್ಮದಿ, ಸ್ವ-ಇಚ್ಚೆಯನ್ನು ಪೂರೈಸಿಕೊಳ್ಳುವವರು ಆಗಿರುತ್ತಾರೆ. ಆದರೆ ಒಂದು ಒಳ್ಳೆಯ ಸಭೆಯಲ್ಲಿ ಬಲವಾದ ದೈವಿಕ ನಾಯಕರ ಗುಂಪು ಇರುತ್ತದೆ. ಸಭೆ ಯಾವ ರೀತಿ ಹೋಗಬೇಕೆಂದು ಈ ಪ್ರಮುಖ ಭಾಗವು ನಿರ್ಧರಿಸುತ್ತದೆ.

ಸಾಮಾನ್ಯವಾಗಿ ಪ್ರಮುಖ ಭಾಗದ ಹಾಗಿರುವ ಈ ಗುಂಪು ಪರಸ್ಪರ ಜೊತೆಗೂಡಿದಂತ ಇಬ್ಬರು ಪುರುಷರಿಂದ ಪ್ರಾರಂಭವಾಗುತ್ತದೆ. ದೇವರು ಅವರೊಂದಿಗೆ ಇರುತ್ತಾರೆ ಹಾಗೂ ಆ ಪ್ರಮುಖ ಭಾಗ ಗುಂಪು ಗಾತ್ರ ಮತ್ತು ಐಕ್ಯತೆಯಲ್ಲಿ ಬೆಳೆಯುತ್ತದೆ. ಮಾನವ ದೇಹವು ಸಹ ತಾಯಿಯ ಗರ್ಭದಲ್ಲಿ ಎರಡು ವಿಭಿನ್ನ ಅಂಶಗಳು ಒಂದಾಗುವುದರೊಂದಿಗೆ ಪ್ರಾರಂಭವಾಗುತ್ತದೆ. ಆ ಪುಟ್ಟ ಭ್ರೂಣವು ದೊಡ್ಡದಾಗಿ ಬೆಳೆಯಲು ಆರಂಭಿಸಿದಾಗ ಜೀವಕೋಶಗಳೆಲ್ಲವೂ ಒಂದಾಗಿ ಉಳಿಯುತ್ತದೆ. ಆದರೆ ಯಾವುದೇ ಸಮಯದಲ್ಲಿ ಆ ಜೀವಕೋಶಗಳು ಪರಸ್ವರ ದೂರವಾದರೆ, ಅದು ಆ ಹಸುಗೂಸಿನ ಅಂತ್ಯವಾಗಿರುತ್ತದೆ!

ಇದೇ ರೀತಿಯಾಗಿ ಕ್ರಿಸ್ತನ ದೇಹವನ್ನು ತೋರಿಸುವಂತ ಸ್ಥಳೀಯ ಸಭೆಯೂ ಸಹ ಕಟ್ಟಲ್ಪಡುತ್ತದೆ. ಒಂದು ವೇಳೆ ಅದರ ಪ್ರಧಾನ ಗುಂಪು ಎರಡು ಭಾಗವಾದರೆ, ವಾಸ್ತವವಾದ ಸಭೆಯು ಅಲ್ಲಿಗೆ ಅಂತ್ಯಗೊಳ್ಳುತ್ತದೆ; ಆದಾಗ್ಯೂ ಹೊರಗಿನ ನಿರ್ಮಾಣವು ಒಂದು ಸಂಸ್ಥೆಯಾಗಿ ಮುಂದುವರಿಯಬಹುದು!

(ಮುಂದಿನ ವಾರ ಮುಂದುವರೆಯುತ್ತದೆ)