ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಸಭೆ
WFTW Body: 

(ಹಿಂದಿನ ವಾರದಿಂದ ಮುಂದುವರಿಸಲ್ಪಟ್ಟಿದೆ)

"ಇಬ್ರಿಯರಿಗೆ ಬರೆದ ಪತ್ರಿಕೆಯ" ಮೊಟ್ಟಮೊದಲ ವಾಕ್ಯದಲ್ಲಿ ಹೇಳಿರುವುದು ಏನೆಂದರೆ, ಪುರಾತನ ಕಾಲದಲ್ಲಿ ದೇವರು ಪ್ರವಾದಿಗಳ ಮೂಲಕ ಮಾತನಾಡಿದರು, ಆದರೆ ಈಗ ಅವರು ತಮ್ಮ ಮಗನ ಮೂಲಕ ಮಾತನಾಡಿದ್ದಾರೆ. ಹಳೆಯ ಒಡಂಬಡಿಕೆಯು ಹೆಚ್ಚಾಗಿ ದೇವರು ನೀಡಿದ ಆಜ್ಞೆಗಳನ್ನು ಒಳಗೊಂಡಿತ್ತು, ಮತ್ತು "ನೀನು ಮಾಡಬೇಕು" ಮತ್ತು "ನೀನು ಮಾಡಬಾರದು" ಎಂಬುದನ್ನು ತೋರಿಸಿಕೊಟ್ಟಿತು. ಆದರೆ ಹೊಸ ಒಡಂಬಡಿಕೆಯು ದೇವರ ಜೀವಿತವನ್ನು ಅವರ ಮಗನ ಮೂಲಕ ನೀಡುವಂತ ಒಂದು ಸಂದೇಶವಾಗಿದೆ.

ಇದಕ್ಕಾಗಿಯೇ ತಂದೆಯು ಯೇಸುವನ್ನು ಒಂದು ಎಳೆಯ ಕೂಸಾಗಿ ಭೂಲೋಕಕ್ಕೆ ಕಳುಹಿಸಿದರು. ದೇವರು ಯೇಸುವನ್ನು ಒಬ್ಬ ಪ್ರಾಯಸ್ಥ ಮನುಷ್ಯನಾಗಿ ಕಳುಹಿಸುವುದಕ್ಕೆ ಯಾವುದೇ ಅಡಚಣೆ ಇರಲಿಲ್ಲ. ಆದರೆ ಯೇಸುವು ಒಂದು ಎಳೆಯ ಕೂಸಾಗಿ ಬಂದದ್ದು ಏಕೆಂದರೆ, ಅವರು ಬಾಲ್ಯದಿಂದಲೇ ನಮ್ಮ ಅನುಭವಗಳನ್ನು ಪಡೆದು, ನಾವು ಎದುರಿಸುವಂತ ಶೋಧನೆಗಳನ್ನೇ ತಾನು ಸಹ ಎದುರಿಸುವ ಅವಕಾಶವನ್ನು ಪಡೆಯುವುದಕ್ಕಾಗಿ ಆಗಿತ್ತು.

ಆದರೆ ಹೆಚ್ಚಿನ ಕ್ರೈಸ್ತರು ಯೇಸುವಿನ ಬಗ್ಗೆ ಯೋಚಿಸುವಾಗ, ಅವರು ಮಾಡಿದ ಮೂರುವರೆ ವರ್ಷಗಳ ಸೇವೆ ಮತ್ತು ಅವರ ಕಲ್ವಾರಿಯ ಮರಣವನ್ನು ಮಾತ್ರ ನೆನಪಿಸಿಕೊಳ್ಳುತ್ತಾರೆ. ವಿಶ್ವಾಸಿಗಳಲ್ಲಿ 99% ಮಂದಿ, ಯೇಸುವು ನಜರೇತಿನಲ್ಲಿ 30 ವರ್ಷಗಳ ಕಾಲ ಹೇಗೆ ಜೀವಿಸಿದರು ಎಂಬುದರ ಬಗ್ಗೆ ಯಾವತ್ತೂ ಯೋಚಿಸುವುದಿಲ್ಲವೆಂದು ನನ್ನ ನಂಬಿಕೆಯಾಗಿದೆ. ಅವರು ಆತನ ಜನನದ ಬಗ್ಗೆ ಯೋಚಿಸುತ್ತಾರೆ. ಇದನ್ನು ಪ್ರತಿ ವರ್ಷವೂ ಆಚರಿಸಲಾಗುತ್ತದೆ. ಅವರು ಆತನ ಮರಣ ಮತ್ತು ಪುನರುತ್ಥಾನದ ಬಗ್ಗೆ ಯೋಚಿಸುತ್ತಾರೆ. ಇದನ್ನೂ ಸಹ ಪ್ರತಿ ವರ್ಷ ಆಚರಿಸಲಾಗುತ್ತದೆ. ಇದಲ್ಲದೆ ಅವರು ಆತನು ಮಾಡಿದ ಅದ್ಭುತ ಕಾರ್ಯಗಳ ಕುರಿತಾಗಿ ಯೋಚಿಸುತ್ತಾರೆ. ಅವರು ಇವನ್ನು ಹೊರತಾಗಿ ಯೇಸುವಿನ ಕುರಿತು ಬೇರೆ ಯಾವುದನ್ನೂ ಯೋಚಿಸುವುದಿಲ್ಲ.

ಸಾಮಾನ್ಯವಾಗಿ ಯಾರೂ ಸಹ ಯೇಸುವಿನ ಜೀವಿತದ ಬಹು ದೊಡ್ಡ ಭಾಗದ ಬಗ್ಗೆ ಯೋಚಿಸುವುದೇ ಇಲ್ಲ. ಆತನ ಭೂಲೋಕದ ಜೀವಿತದ ಕೇವಲ 10% ಮಾತ್ರವೇ ಆತನ ಸೇವೆಯ ಅವಧಿಯಾಗಿತ್ತು - 33 1/2 ವರ್ಷಗಳಲ್ಲಿ 3 1/2 ವರ್ಷಗಳು. ಮತ್ತು ಆತನ ಜನನ ಮತ್ತು ಮರಣ ಕೇವಲ ಒಂದು ದಿನದ ಘಟನೆಗಳಾಗಿದ್ದವು. ಆತನ ಜೀವಿತದ ದೊಡ್ಡ ಭಾಗವು ನಜರೇತಿನಲ್ಲಿ ಆತನು ಕಳೆದ 30 ವರ್ಷಗಳಾಗಿದ್ದವು. ಆತನ ಸಂಪೂರ್ಣ ಸೇವೆಯು ಆ 30 ವರ್ಷಗಳ ಅನುಭವವನ್ನು ಆಧರಿಸಿತ್ತು. ಆತನು ತನ್ನ ಸೇವೆಯಲ್ಲಿ ಬೋಧಿಸಿದ ಪ್ರಸಂಗಗಳ ಸಿದ್ಧತೆಗೆ ಆತನಿಗೆ 30 ವರ್ಷಗಳು ಹಿಡಿದವು. ಇಂದಿನ ಬೋಧಕರು ತಮ್ಮ ಪ್ರಸಂಗಗಳನ್ನು ಸಿದ್ಧಪಡಿಸಿ ಬೋಧಿಸುವ ಹಾಗೆ - ಅಂದರೆ, ತಮ್ಮ ಅಧ್ಯಯನ ಕೊಠಡಿಯಲ್ಲಿ ಕುಳಿತುಕೊಂಡು, ಸತ್ಯವೇದ ವ್ಯಾಖ್ಯಾನಗಳು ಹಾಗೂ ಅನೇಕ ಪುಸ್ತಕಗಳಿಂದ ಟಿಪ್ಪಣಿಗಳನ್ನು ಮಾಡಿಕೊಂಡು, ಅವುಗಳಿಂದ ಕೆಲವು ಪ್ರಮುಖ ಅಂಶಗಳನ್ನು ಆರಿಸಿಕೊಂಡು, ನಂತರ ಅವುಗಳನ್ನು ಅನುಕ್ರಮವಾಗಿ ಮೂರು ಚುಟುಕಾದ ಮತ್ತು ಆಕರ್ಷಕವಾದ ಅಂಶಗಳ ಮೂಲಕ ಪ್ರಸ್ತುತಪಡಿಸುವುದು. ಆದರೆ ಯೇಸುವು ಈ ರೀತಿಯಾಗಿ "ಪರ್ವತ ಪ್ರಸಂಗವನ್ನು" ಬೋಧಿಸಲಿಲ್ಲ!! ಹಾಗಲ್ಲ. ಆ ಪ್ರಸಂಗವು ಆತನ ಜೀವಿತದ ಅನುಭವದಿಂದ ಹೊರಹೊಮ್ಮಿತು. ಅದನ್ನು ಸಿದ್ಧಪಡಿಸಲು ಆತನು 30 ವರ್ಷಗಳನ್ನು ತೆಗೆದುಕೊಂಡನು. ಈ ಕಾರಣಕ್ಕಾಗಿ ಅದು ಅಷ್ಟು ಪ್ರಭಾವಶಾಲಿಯಾಗಿತ್ತು ಮತ್ತು ಆತನು ಅಧಿಕಾರದೊಂದಿಗೆ ನೀಡಿದ ಬೋಧನೆಯನ್ನು ಕೇಳಿ ಜನರು ಅತ್ಯಾಶ್ಚರ್ಯಪಟ್ಟರು (ಮತ್ತಾ. 7:28,29).

ಹಳೆಯ ಒಡಂಬಡಿಕೆಯಲ್ಲಿ, ದೇವರು ಯೆರೆಮೀಯನೊಂದಿಗೆ ಕೆಲವು ನಿರ್ದಿಷ್ಟ ದಿನಗಳಲ್ಲಿ ಮಾತ್ರ ಮಾತನಾಡಿದರೆಂದು ನಾವು ಓದುತ್ತೇವೆ. ಯೆರೆಮೀಯನು ದೇವರು ತನಗೆ ತಿಳಿಸಿದ ಮಾತನ್ನು ತನ್ನ ಬರಹಗಾರ ಬಾರೂಕನಿಗೆ ತಿಳಿಸಿದನು ಮತ್ತು ಆತನು ಆ ಮಾತುಗಳನ್ನು ನಿಖರವಾಗಿ ತಾನು ಕೇಳಿಸಿಕೊಂಡ ಹಾಗೆಯೇ ಬರೆದನು. ಇದೇ ರೀತಿ, ದೇವರು ಯೆಹೆಜ್ಕೇಲನೊಂದಿಗೆ ಕೆಲವು ನಿರ್ದಿಷ್ಟ ಸಮಯಗಳಲ್ಲಿ ಮಾತ್ರ ಮಾತನಾಡಿದರು ಮತ್ತು ಯೆಹೂದದ ಜನರಿಗೆ ಏನು ಹೇಳಬೇಕೆಂದು ಆತನಿಗೆ ತಿಳಿಸಿದರು. ಯೆಹೆಜ್ಕೇಲನು ಹೋಗಿ ಜನರಿಗೆ ಆ ಮಾತನ್ನು ನಿಖರವಾಗಿ ತಿಳಿಸಿದನು. ಅದೊಂದು ಒಳ್ಳೆಯ ವಿಧಾನವಾಗಿತ್ತು. ಈ ದಿನ ನಾವು ಸಹ ಇಂತಹ ಬೋಧನೆಯನ್ನು ಪಡೆಯುವುದಾದರೆ, ಅದು ಬಹಳ ಉತ್ತಮವಾಗಿರುತ್ತದೆ!

"ಹೊಸ ಒಡಂಬಡಿಕೆಯಲ್ಲಿ, ನಮಗೆ ನಮ್ಮೊಳಗಿನಿಂದ ಉಕ್ಕಿ ಹರಿಯುವಂತ ನೀರಿನ ಒರತೆಯು (ಅದು ಸ್ವತಃ ಯೇಸುವಿನ ಜೀವಿತವಾಗಿದೆ) ಕೊಡಲ್ಪಟ್ಟಿದೆ. ಮತ್ತು ಅದು ನಮ್ಮೊಳಗಿನಿಂದ ನಿರಂತರವಾಗಿ ಹರಿಯುತ್ತಾ ಇರುತ್ತದೆ."

ಆದರೆ ಹೊಸ ಒಡಂಬಡಿಕೆಯ ಸೇವೆಯು ಇದಕ್ಕಿಂತಲೂ ಶ್ರೇಷ್ಠವಾದದ್ದಾಗಿದೆ! ದೇವರು ಯೇಸುವಿನೊಂದಿಗೆ ಮಾತನಾಡುವಾಗ, ಅವರು ಆ ಹಳೆಯ ಒಡಂಬಡಿಕೆಯ ಪದ್ಧತಿಯಂತೆ ಪ್ರವಾದಿಗಳೊಂದಿಗೆ ಕೆಲವು ನಿರ್ದಿಷ್ಟ ದಿನಗಳಲ್ಲಿ ಮಾತ್ರ ಮಾತನಾಡಿದ ವಿಧಾನವನ್ನು ಅನುಸರಿಸಲಿಲ್ಲ. ದೇವರು ಯೇಸುವಿನೊಂದಿಗೆ ಪ್ರತಿದಿನವೂ ಮಾತನಾಡಿದರು ಮತ್ತು ಯೇಸುವು ಜನರೊಂದಿಗೆ ಪ್ರತಿದಿನವೂ ತನ್ನ ಜೀವಿತದಿಂದ ಮಾತನಾಡಿದರು. ಆತನ ಜೀವಿತದಿಂದ ಆತನ ಸೇವೆಯು ಹರಿಯಿತು. "ನಮ್ಮ ಹೊಟ್ಟೆಯೊಳಗಿಂದ ಜೀವಕರವಾದ ನೀರಿನ ಹೊಳೆಗಳು ಹರಿಯುವವು" ಎಂಬ ವಾಕ್ಯದ ಅರ್ಥ ಇದೇ ಆಗಿದೆ (ಯೋಹಾ. 7:38).

ಹಳೆಯ ಒಡಂಬಡಿಕೆಯ ಪದ್ಧತಿಯ ಪ್ರವಾದಿಯು ಕೇವಲ ಸಂದೇಶವನ್ನು ತಲುಪಿಸುವ ಒಬ್ಬ ದೂತನಾಗಿದ್ದನು. ಒಂದು ಸಂದೇಶವನ್ನು ತಲುಪಿಸಲು ನಿಮ್ಮ ನೆನಪಿನ ಶಕ್ತಿ ಉತ್ತಮವಾಗಿದ್ದರೆ ಸಾಕಾಗುತ್ತದೆ. ಆದರೆ ಹೊಸ ಒಡಂಬಡಿಕೆಯಲ್ಲಿ, ದೇವರು ನಮಗೆ ಕೊಡುವುದು ಇತರರಿಗೆ ತಲುಪಿಸಬೇಕಾದ ಸಂದೇಶಗಳನ್ನಲ್ಲ, ಅವರ ಜೀವಿತವನ್ನೇ ನಮಗೆ ಕೊಡುತ್ತಾರೆ! ಹಾಗಾಗಿ ನಿಮಗೆ ಅವಶ್ಯವಾಗಿ ಬೇಕಾದದ್ದು ಒಳ್ಳೆಯ ಜ್ಞಾಪಕ ಶಕ್ತಿಯಲ್ಲ, ಆದರೆ ಒಳ್ಳೆಯ ಜೀವಿತ - ದೇವರ ಜೀವಿತ.

ಇವೆರಡರ ನಡುವಿನ ವ್ಯತ್ಯಾಸವನ್ನು ತೋರಿಸಲು ನಾನು ಒಂದು ಉದಾಹರಣೆಯನ್ನು ಕೊಡುತ್ತೇನೆ: ನೀವು ಒಂದು ನಲ್ಲಿ ಅಥವಾ ಕೊಳಾಯಿಯಿಂದ ಸ್ವಲ್ಪ ನೀರನ್ನು ಹಿಡಿದು (ದೇವರಿಂದ ಒಂದು ಸಂದೇಶವನ್ನು ಪಡೆಯುವುದು), ಅದನ್ನು ತಂದು ಚೆಲ್ಲಿದರೆ - ಅದು ಹಳೆಯ ಒಡಂಬಡಿಕೆಯ ಸೇವೆಯ ಒಂದು ಚಿತ್ರಣವಾಗಿರುತ್ತದೆ. ನೀವು ಮತ್ತೆ ಹಿಂದಿರುಗಿ ಹೋಗಬಹುದು ಮತ್ತು ಕೊಳಾಯಿಯಿಂದ ಇನ್ನಷ್ಟು ನೀರನ್ನು ತುಂಬಿಕೊಂಡು (ಅಂದರೆ, ದೇವರಿಂದ ಇನ್ನೊಂದು ಸಂದೇಶವನ್ನು ಪಡೆದುಕೊಂಡು), ಅದನ್ನು ಸಹ ತಂದು ಸುರಿಯಬಹುದು.

ಆದರೆ ಹೊಸ ಒಡಂಬಡಿಕೆಯಲ್ಲಿ, ನಮಗೆ ನಮ್ಮೊಳಗಿನಿಂದ ಹರಿದು ಬರುವಂತ ನೀರಿನ ಒರತೆಯನ್ನು (ಸ್ವತಃ ಯೇಸುವಿನ ಜೀವಿತ) ಕೊಡಲಾಗಿದೆ. ಮತ್ತು ಅದು ನಮ್ಮೊಳಗಿನಿಂದ ನಿರಂತರವಾಗಿ ಹರಿಯುತ್ತಿರುತ್ತದೆ. ಹಾಗಾಗಿ ನಾವು ಸಂದೇಶವನ್ನು ಪಡೆಯಲಿಕ್ಕಾಗಿ ಪ್ರತೀ ಸಲ ದೇವರ ಬಳಿಗೆ ಹೋಗಬೇಕಿಲ್ಲ. ಅವರು ನಮ್ಮನ್ನೇ ಒಂದು ಸಂದೇಶವಾಗಿ ಮಾಡುತ್ತಾರೆ. ನಮ್ಮ ಜೀವನವೇ ಒಂದು ಸಂದೇಶವಾಗಿರುತ್ತದೆ ಮತ್ತು ನಾವು ಆ ಅನುಭವವನ್ನೇ ಇತರರಿಗೆ ಹಂಚುತ್ತೇವೆ!

ಹೆಚ್ಚಿನ ಜನರು ತಂದು ಸುರಿಯುವ ಸೇವೆಯನ್ನು ಹೊಂದಿರುತ್ತಾರೆ. ಹಾಗೆ ಸುರಿಯುವುದಕ್ಕೆ ಕೆಲವರ ಬಳಿ ಏನೂ ಇರುವುದಿಲ್ಲ, ಇನ್ನು ಕೆಲವರ ಬಳಿ ಏನಾದರೂ ಸ್ವಲ್ಪ ಇರುತ್ತದೆ. ಆದರೆ ಇಬ್ಬರೂ ಸುರಿಯುತ್ತಾರೆ. ಮತ್ತು ಆ ಮೇಲೆ ಕೊಡುವುದಕ್ಕೆ ಏನೂ ಇಲ್ಲದೆ ಅವರು ಒಣಗಿ ಹೋಗುತ್ತಾರೆ.

ಆದರೆ ಯೇಸುವು ಸಮಾರ್ಯ ಸೀಮೆಯ ಹೆಂಗಸಿಗೆ, ತಾನು ನಿರಂತರವಾಗಿ ಹರಿಯುವ ನಿತ್ಯಜೀವದ ಒಂದು ಬುಗ್ಗೆಯನ್ನು ಆಕೆಯಲ್ಲಿ ಇರಿಸುವುದಾಗಿ ಹೇಳಿದನು. (ನಿತ್ಯಜೀವ ಎಂದರೆ ಸ್ವತಃ ದೇವರ ಜೀವಿತವಾಗಿದೆ.)

ನಮ್ಮೊಳಗಿನಿಂದಲೂ ಇದೇ ಜೀವಿತವು ಹರಿಯುತ್ತಿರಬೇಕೆಂದು ಕರ್ತರ ಇಚ್ಛೆಯಾಗಿದೆ - ಕೇವಲ ಒಂದು ಸಂದೇಶವಲ್ಲ. ಇದುವೇ ಹೊಸ ಒಡಂಬಡಿಕೆಯ ಸೇವೆಯಾಗಿದೆ.