ಬರೆದಿರುವವರು :   ಝ್ಯಾಕ್ ಪೂನನ್
WFTW Body: 

ಹೊಸ ಒಡಂಬಡಿಕೆಯಲ್ಲಿ, ಎಲ್ಲಾ ವಿಶ್ವಾಸಿಗಳು "ಪ್ರವಾದಿಗಳು" ಆಗಬೇಕೆಂಬ ಕರೆ ಕೊಡಲ್ಪಟ್ಟಿಲ್ಲ. ಆದರೆ ಎಲ್ಲಾ ವಿಶ್ವಾಸಿಗಳು "ಪ್ರವಾದಿಸುವ ವರವನ್ನು" ಆಸಕ್ತಿಯಿಂದ ಅಪೇಕ್ಷಿಸಬೇಕೆಂದು ಆಜ್ಞಾಪಿಸಲಾಗಿದೆ (1 ಕೊರಿ. 14:1). ಹೊಸ ಒಡಂಬಡಿಕೆಯ ಕಾಲಾವಧಿಯಲ್ಲಿ "ಪವಿತ್ರಾತ್ಮನು ಸುರಿಸಲ್ಪಟ್ಟಾಗ ಉಂಟಾಗುವ ಒಂದು ಫಲಿತಾಂಶ ಇದಾಗಿದೆ" (ಅ.ಕೃ. 2:17-18). ’ಪ್ರವಾದಿಸುವುದು’ ಅಂದರೆ (ಅದರ ಹೊಸ ಒಡಂಬಡಿಕೆಯ ಅರ್ಥ), ಮನುಷ್ಯರ ಸಂಗಡ ಮಾತನಾಡಿ, "ಅವರನ್ನು ಪ್ರೋತ್ಸಾಹಿಸುವುದು, ಪ್ರೇರಿಸುವುದು ಮತ್ತು ಅವರ ಭಕ್ತಿವೃದ್ಧಿ ಪಡಿಸುವುದು" (1 ಕೊರಿ. 14:3). ಕ್ರಿಸ್ತ ಸಭೆಯ ಕೂಟಗಳಲ್ಲಿ ಎಲ್ಲಾ ಪವಿತ್ರಾತ್ಮ-ಪ್ರೇರಿತ ವಿಶ್ವಾಸಿಗಳು "ಸಂಕ್ಷಿಪ್ತವಾಗಿ" ಪ್ರವಾದಿಸುವದಕ್ಕೆ ಅಡ್ಡಿಯಿಲ್ಲ (1 ಕೊರಿ. 14:31). ಮಿಕ್ಕ ವಿಶ್ವಾಸಿಗಳು ಪ್ರವಾದನೆಯನ್ನು ಆಲಿಸಿ, ತಾವು ಆಲಿಸಿದ ಎಷ್ಟು ಭಾಗ ದೇವರಿಂದ ಬಂತು ಮತ್ತು ಎಷ್ಟು ಭಾಗ ಮನುಷ್ಯ ಮೂಲದಿಂದ ಬಂತೆಂದು "ವಿವೇಚಿಸಿ ನಿಶ್ಚಯಿಸಿಕೊಳ್ಳಬೇಕು" - ಎಲ್ಲವನ್ನೂ ಸತ್ಯವೇದದ ಆಧಾರದ ಮೇಲೆ ಪರೀಕ್ಷಿಸಿ ನೋಡಬೇಕು (1 ಕೊರಿ. 14:29).

ಸಭೆಯಲ್ಲಿ ಕೆಲವು "ಪ್ರವಾದಿಗಳನ್ನು" ಸಹ ದೇವರು ನೇಮಿಸಿದ್ದಾರೆ. ಈ ಪುರುಷರು ಸಭೆಯನ್ನು "ಕ್ರಿಸ್ತನ ದೇಹವಾಗಿ ಬೆಳೆಸುವುದಕ್ಕಾಗಿ" ದೇವರಿಂದ ವರವಾಗಿ ಕೊಡಲ್ಪಟ್ಟವರು. ಪ್ರವಾದಿಗಳು ವಿಶ್ವಾಸಿಗಳನ್ನು ಪ್ರೇರೇಪಿಸಿ ಬಲಪಡಿಸುವ ಉದ್ದೇಶದಿಂದ, "ಉದ್ದವಾದ ಸಂದೇಶಗಳನ್ನು" ನೀಡುತ್ತಾರೆ. ನಾವು ಓದುವುದು ಏನೆಂದರೆ, "ಯೂದನೂ ಸೀಲನೂ ತಾವೇ ’ಪ್ರವಾದಿಗಳಾಗಿ ಇದ್ದದರಿಂದ’, ಸಹೋದರರನ್ನು ’ಅನೇಕ ಮಾತುಗಳಿಂದ’ ಪ್ರಬೋಧಿಸಿ ದೃಢಪಡಿಸಿದರು" (ಅ.ಕೃ. 15:32). ಆದರೆ ಎಲ್ಲರೂ ನೆನಪಿರಿಸಿಕೊಳ್ಳಬೇಕಾದ ವಿಷಯ - ಸಭೆಯಲ್ಲಿ "ಪ್ರವಾದಿಗಳಾಗಿ" ಕೆಲವು ವಿಶ್ವಾಸಿಗಳು ಮಾತ್ರ ಕರೆಯಲ್ಪಟ್ಟಿರುತ್ತಾರೆ (1 ಕೊರಿ. 12:28; ಎಫೆಸ 4:11).

ಒಂದು ಸಭಾಕೂಟದಲ್ಲಿ ಯಾರೋ ಒಬ್ಬನು ಪ್ರವಾದಿಸುವದನ್ನು ಕೇಳುವುದು ಒಂದು ಬಾಳೆಹಣ್ಣನ್ನು ತಿಂದಂತೆ ಇರುತ್ತದೆ. ನಾವು ಸಿಪ್ಪೆಯನ್ನು (ಮಾನವನಿಂದ ಬಂದಂತದ್ದು) ಬಿಸಾಕಬೇಕು ಮತ್ತು ಸಿಪ್ಪೆಯ ಒಳಗಿರುವ ಹಣ್ಣನ್ನು ಮಾತ್ರ (ದೇವರಿಂದ ಬಂದಂತದ್ದು) ತಿನ್ನಬೇಕು. ಪ್ರವಾದಿಸುವ ವಿಶ್ವಾಸಿ ಒಬ್ಬ ಯೌವನಸ್ಥನಾಗಿದ್ದರೆ ಸಿಪ್ಪೆಯು ಬಹಳ ದಪ್ಪವಾಗಿರುತ್ತದೆ, ಮತ್ತು ದೇವರಿಂದ ಬಂದಂತ ಒಳಗಿನ ಹಣ್ಣು ಬಹಳ ಕಡಿಮೆ ಇರುತ್ತದೆ. ಆದರೆ ನಾವು ಆ ಸ್ವಲ್ಪವನ್ನು ಸಹ ಸಂತೋಷವಾಗಿ ಸ್ವೀಕರಿಸುತ್ತೇವೆ. ಒಬ್ಬ ಹೆಚ್ಚು ಪ್ರೌಢ ವಿಶ್ವಾಸಿಯು ಪ್ರವಾದಿಸುವಾಗ, ಸಿಪ್ಪೆ ತೆಳ್ಳಗಾಗಿದ್ದು, ದೇವರಿಂದ ಬಂದಂತ ಅಂಶವು ಹೆಚ್ಚಾಗಿರುತ್ತದೆ. ಸಹೋದರಿಯರಿಗೂ ಸಹ "ಪ್ರವಾದಿಸುವ ಅವಕಾಶ ಇರುತ್ತದೆ" (ಅ.ಕೃ. 2:17-18). ಆದರೆ ಪಂಚಾಶತ್ತಮ ದಿನದಂದು ಹೊಸ ಒಡಂಬಡಿಕೆಯು ಆರಂಭಿಸಲ್ಪಟ್ಟ ಮೇಲೆ, ನಾವು "ಪ್ರವಾದಿನಿಯರಾದ ಯಾವುದೇ ಸ್ತ್ರೀಯರನ್ನು ಕಾಣುವುದಿಲ್ಲ". ಹಾಗೆಯೇ "ಅಪೊಸ್ತಲರಾದ ಸ್ತ್ರೀಯರು ಸಹ ಇರುವುದಿಲ್ಲ".

ಪ್ರವಾದಿಸುವ ಪ್ರತಿಯೊಬ್ಬನೂ ’ಆತನ ನಂಬಿಕೆಗೆ ತಕ್ಕಂತೆ’ ಮಾತ್ರ ಪ್ರವಾದನೆ ಮಾಡಬೇಕು (ರೋಮಾ. 12:6). ಈ ಕಾರಣಕ್ಕಾಗಿ ಪೌಲನು ಪ್ರವಾದಿಸುವಾಗ, "ಕರ್ತನು ಹೀಗೆ ಹೇಳಿದ್ದಾನೆ" ಎಂಬ ಪದಗಳನ್ನು ಉಪಯೋಗಿಸಲು ಹಿಂಜರಿದನು. ಅದಕ್ಕೆ ಬದಲಾಗಿ ಆತನು, "ನನಗೂ ’ದೇವರ ಆತ್ಮ ಉಂಟೆಂದು ನೆನೆಸುತ್ತೇನೆ’" (1 ಕೊರಿ. 7:40) , ಎಂದು ಮಾತ್ರ ಹೇಳಿದನು. ನಾವು ಪ್ರವಾದಿಸುವಾಗ, ಸತ್ಯವೇದದ ಯಾವುದೋ ವಚನವನ್ನು ನೇರವಾಗಿ ಹೇಳುವ ಸಂದರ್ಭಕ್ಕೆ ಹೊರತಾಗಿ, "ಕರ್ತನು ಹೀಗೆ ಹೇಳಿದ್ದಾನೆ" ಎಂಬ ಪದಗಳನ್ನು ’ಯಾವತ್ತೂ ಉಪಯೋಗಿಸಬಾರದು’. ಇಂತಹ ಪದಗಳ ಉಪಯೋಗವನ್ನು ಪ್ರವಾದಿಯಾದ ಯೆರೆಮೀಯನು ವಿರೋಧಿಸಿದನು (ಯೆರೆ. 23:21). ಇದಲ್ಲದೆ, ನಾವು ಪ್ರವಾದಿಸುವ ಯಾವುದೇ ಸಂದರ್ಭದಲ್ಲಿ, ಇತರ ವಿಶ್ವಾಸಿಗಳು ನಮ್ಮ ಸಂದೇಶವನ್ನು ’ವಿವೇಚಿಸಿ ಅದು ಕರ್ತನಿಂದ ಬಂದದ್ದೋ, ಅಲ್ಲವೋ ಎಂದು ನಿರ್ಣಯಿಸುವ ಅವಕಾಶವನ್ನು’ ಅವರಿಗೆ ಕೊಡಬೇಕು.

ನಾವು ಮನಸ್ಸಿನಲ್ಲಿ ಇರಿಸಿಕೊಳ್ಳಬೇಕಾದ ಇನ್ನೊಂದು ವಿಷಯ, ಯಾವ ಹೊಸ-ಒಡಂಬಡಿಕೆಯ ಪ್ರವಾದಿಯೂ, ಇತರರು ಯಾವುದೇ ಸಂದರ್ಭದಲ್ಲಿ ಯಾವ ನಿರ್ಧಾರವನ್ನು ಕೈಗೊಳ್ಳಬೇಕೆಂದು (ಹಳೆ-ಒಡಂಬಡಿಕೆಯ ಪ್ರವಾದಿಗಳು ಮಾಡಿದಂತೆ) ನಿರ್ದೇಶಿಸಲಿಲ್ಲ. ಅ.ಕೃ. 11:28ರಲ್ಲಿ, "ಅಗಬ"ನೆಂಬ ಒಬ್ಬ ಪ್ರವಾದಿಯು, ದೊಡ್ಡ ಕ್ಷಾಮ ಬರಲಿದೆ ಎಂದು "ಸೂಚಿಸಿದನು", ಆದರೆ ಅದರ ಕುರಿತಾಗಿ "ಯಾರು ಏನು ಮಾಡಬೇಕೆಂದು ಆತನು ಒಂದು ಮಾತನ್ನೂ ನುಡಿಯಲಿಲ್ಲ". ಹಾಗೆಯೇ ಅ.ಕೃ. 21:10-11ರಲ್ಲಿ, ಆತನು ಪೌಲನು ಯೆರೂಸಲೇಮಿಗೆ ಹೋದರೆ ಅಲ್ಲಿ ಸೆರೆಯಾಗಲಿದ್ದಾನೆಂದು ಹೇಳಿದನು, ಆದರೆ ಆತನು ಪೌಲನು ’ಹೋಗಬೇಕೋ ಹೋಗಬಾರದೋ ಎಂದು ತಿಳಿಸಲಿಲ್ಲ’. ಇದಕ್ಕೆ ಕಾರಣವೇನೆಂದರೆ ಈಗ ಪ್ರತೀ ವಿಶ್ವಾಸಿಯಲ್ಲೂ ಪವಿತ್ರಾತ್ಮನು ಇದ್ದಾನೆ - ಮತ್ತು "ಪ್ರತೀ ವಿಶ್ವಾಸಿಗೂ ಏನು ಮಾಡಬೇಕೆಂದು ಹೇಳುವಾತನು ಪವಿತ್ರಾತ್ಮನು ಆಗಿದ್ದಾನೆ". ಆದರೆ ಹಳೆಯ ಒಡಂಬಡಿಕೆಯ ಸಮಯದಲ್ಲಿ, ಜನರಿಗೆ ದಾರಿ ತೋರಿಸಲು ’ತಮ್ಮೊಳಗೆ ವಾಸಿಸುವ ಪವಿತ್ರಾತ್ಮನು ಇರಲಿಲ್ಲ’. ಹಾಗಾಗಿ ಪವಿತ್ರಾತ್ಮನನ್ನು ಹೊಂದಿದ್ದ ಪ್ರವಾದಿಯು "ಕರ್ತನ ಚಿತ್ತವೇನೆಂದು ಜನರಿಗೆ ತಿಳಿಸಬೇಕಾಗಿತ್ತು".

ಆದರೆ ಇಷ್ಟೆಲ್ಲಾ ಎಚ್ಚರಿಕೆಗಳು ಇದ್ದರೂ, ಅನೇಕ ಅಪ್ರಬುದ್ಧ ವಿಶ್ವಾಸಿಗಳು "ಹಳೆಯ ಒಡಂಬಡಿಕೆಯ ಪ್ರವಾದಿಗಳಂತೆ" ನಡೆದುಕೊಂಡು, ಈಗಲೂ ವಿಶ್ವಾಸಿಗಳಿಗೆ ’ಏನು ಮಾಡಬೇಕೆಂದು ಹೇಳುತ್ತಾರೆ’. ತೂರ್ ಪಟ್ಟಣದಲ್ಲಿಯೂ ಸಹ ಕೆಲವು ಅಹಂಕಾರಿಗಳು ಮತ್ತು ಅಪ್ರಬುದ್ಧರಾದ ವಿಶ್ವಾಸಿಗಳು ಇದ್ದರು, ಮತ್ತು ಅವರು ಅಪೊಸ್ತಲನಾದ ಪೌಲನಿಗೂ ಸಹ, "ನೀನು ಯೆರೂಸಲೇಮಿಗೆ ಕಾಲಿಡಬೇಡ" ಎಂದು "ತಮ್ಮ ಸ್ವಂತ ಆತ್ಮನ ಪ್ರೇರಣೆಯಿಂದ ಪ್ರವಾದನೆ ಮಾಡಿದರು" (ಅ.ಕೃ. 21:4). ಆದರೆ ಅವರ ಬಗ್ಗೆ ತಿಳಿದಿದ್ದ ಪೌಲನು, ಆ ಮಾತನ್ನು ಕಡೆಗಣಿಸಿ ಅಲ್ಲಿಗೆ ಹೋದನು (ಅ.ಕೃ. 21:13). ಮುಂದೆ, ಕರ್ತನು ಪೌಲನು ಯೆರೂಸಲೇಮಿಗೆ ಹೋಗುವುದೇ ತನ್ನ ಚಿತ್ತವಾಗಿತ್ತೆಂದು ಆತನಿಗೆ ಸ್ಪಷ್ಟಪಡಿಸಿದನು (ಅ.ಕೃ. 23:11). ಹಾಗಿರುವಾಗ ಆ ತೂರ್ ಪಟ್ಟಣದ ವಿಶ್ವಾಸಿಗಳು "ಪ್ರವಾದನೆ" ಎಂದು ಪೌಲನಿಗೆ ನುಡಿದದ್ದು ಸಂಪೂರ್ಣ ತಪ್ಪು ಮಾತಾಗಿತ್ತು. ಅದು ’ಕರ್ತನಿಂದ ಬಂದಿರಲಿಲ್ಲ’. ನಾವು ನಮ್ಮ ಸಭೆಗಳಲ್ಲಿ ವಿಶ್ವಾಸಿಗಳನ್ನು ಎಚ್ಚರಿಸ ಬೇಕಾದದ್ದು ಏನೆಂದರೆ, ಯಾರಿಂದಲೂ ’ಏನು ಮಾಡಬೇಕು ಅಥವಾ ಮಾಡಬಾರದು’ ಎನ್ನುವ "ಮಾರ್ಗದರ್ಶಕ ಪ್ರವಾದನೆಯನ್ನು" (ಅದನ್ನು ಹಾಗೆ ಕರೆಯಲಾಗುತ್ತದೆ) ಆಲಿಸಬಾರದು, ಎಂದು - ಇಲ್ಲವಾದಲ್ಲಿ ಅವರು ಮೋಸಹೋಗುವರು.

ಹೊಸ ಒಡಂಬಡಿಕೆಯ "ಪ್ರವಾದನೆಯ ಮುಖ್ಯ ಉದ್ದೇಶ" ಏನೆಂದರೆ, (1) ದೇವಜನರನ್ನು ಅವರ ಪಾಪಗಳಿಂದ ಬಿಡಿಸುವುದು ಮತ್ತು (2) ಸಭೆಯನ್ನು ಕಟ್ಟುವುದು. ಇದನ್ನೇ ನಾವು ನಮ್ಮ ಸಭೆಗಳ ಎಲ್ಲಾ ಕೂಟಗಳಲ್ಲಿ ಘೋಷಿಸಬೇಕು - ಏಕೆಂದರೆ ಯೇಸುವು ಇವೆರಡು ಉದ್ದೇಶಗಳಿಗಾಗಿ ಬಂದನು: (1) ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಲಿಕ್ಕಾಗಿ (ಇದು ಹೊಸ ಒಡಂಬಡಿಕೆಯ ಮೊದಲ ವಾಗ್ದಾನವಾಗಿದೆ - ಮತ್ತಾ. 1:21); ಮತ್ತು (2) ಆತನ ಸಭೆಯನ್ನು ಕಟ್ಟುವುದಕ್ಕಾಗಿ (ಮತ್ತಾ. 16:18).

ಮತ್ತೊಂದು ಕಡೆ, ನಿಮ್ಮ ಬೋಧನೆ "ಕ್ರಿಸ್ತನ ದೇಹವನ್ನು ಪಾಪದಿಂದ ಬಿಡಿಸುವುದು ಮತ್ತು ವಿಶ್ವಾಸಿಗಳ ನಡುವಿನ ಸಂಬಂಧಗಳನ್ನು ದೃಢಪಡಿಸುವ ಕುರಿತಾಗಿ" ಇರುವುದಕ್ಕೂ ಹೆಚ್ಚಾಗಿ, ’ಪವಿತ್ರಾತ್ಮನ ವರಗಳನ್ನು ಅಭ್ಯಾಸಿಸುವ ಕುರಿತಾಗಿ’ ಇದ್ದರೆ, ಆಗ ನಿಮ್ಮ ಸಭೆಯು ಬೇಗನೆ ಕೊರಿಂಥದ ಸಭೆಯಂತೆ ಆಗುವದು - ಅವರು ’ಪ್ರತಿಯೊಂದು ಕೃಪಾವರದಲ್ಲಿ ಕೊರತೆ ಇಲ್ಲದವರು’ ಆಗಿದ್ದರೂ (1 ಕೊರಿ. 1:7), ವಾಸ್ತವಿಕವಾಗಿ ’ಪ್ರಾಪಂಚಿಕರು ಮತ್ತು ಆತ್ಮಿಕವಾಗಿ ಎಳೆಗೂಸುಗಳಂತೆ ಇರುವವರು ಮತ್ತು ತಮ್ಮ ನಡುವೆ ಜಗಳಾಡುವಂಥವರು’ ಆಗಿದ್ದರು. ನಿಮ್ಮ ಸಭೆಯು ಹಾಗೆಯೇ ಮುಂದುವರಿದು, ಅಂತಿಮವಾಗಿ ಲವೊದಿಕೀಯದ ಸಭೆಯ ಸ್ಥಿತಿಯನ್ನು ತಲುಪುವ ಸಾಧ್ಯತೆಯೂ ಇದೆ - ದುರವಸ್ಥೆಗೆ ಬಿದ್ದವರು, ದೌರ್ಭಾಗ್ಯರು, ದರಿದ್ರರು, ಕುರುಡರು ಮತ್ತು ಬಟ್ಟೆಯಿಲ್ಲದವರು ಆಗಿರುವುದನ್ನು ತಿಳಿಯದೆ ಇರುವಂಥವರು (ಪ್ರಕಟನೆ 3:17). ಅದೊಂದು ದೊಡ್ಡ ಅನಾಹುತವೇ ಆಗಿರುತ್ತದೆ.

ನಿಮಗೆ ಒಂದು ಹೊಸ ಒಡಂಬಡಿಕೆಯ ಸಭೆಯ ನಿರ್ಮಾಣದಲ್ಲಿ ಆಸಕ್ತಿ ಇದ್ದರೆ, ನಿಮ್ಮ "ಬೋಧನೆಯು" ಯಾವಾಗಲೂ ’ಯೇಸು ಮತ್ತು ಅಪೊಸ್ತಲರು ಕಲಿಸುತ್ತಿದ್ದ ಮಾದರಿಗೆ’ ಒತ್ತು ನೀಡುವಂಥದ್ದು ಆಗಿರಬೇಕು - ಮತ್ತು ಇಂದು ನಾವು ’ಹೆಚ್ಚಿನ ಕ್ರೈಸ್ತ ಸಭೆಗಳಲ್ಲಿ ಕೇಳಿಸಿಕೊಳ್ಳುವಂಥದ್ದು ಆಗಿರಬಾರದು’.