WFTW Body: 

ಯೆಹೆಜ್ಕೇಲ 36:25-37 ರಲ್ಲಿ ಹೊಸ ಒಡಂಬಡಿಕೆಯ ಪ್ರವಾದನೆಯನ್ನು ಸುಂದರವಾಗಿ ಹೇಳಲ್ಪಟ್ಟಿದೆ. ದೇವರು ಬಯಸುವಂತ ಕ್ರೈಸ್ತ ಜೀವಿತವು ಹೇಗಿರಬೇಕು ಎಂಬುದರ ವಿವರಣೆ ಇದಾಗಿದೆ. ಮೊದಲನೆಯದಾಗಿ ದೇವರು ನಮ್ಮನ್ನು ಸಂಪೂರ್ಣವಾಗಿ ತೊಳೆದು, ನಮ್ಮ ಹೃದಯದಲ್ಲಿನ ಎಲ್ಲಾ ವಿಗ್ರಹಗಳನ್ನು ತೆಗೆದು ಹಾಕುತ್ತಾರೆ ಮತ್ತು ನಮ್ಮ ಕಠಿಣ ಹೃದಯವನ್ನು ತೆಗೆದು ಹಾಕಿ, ಮೃದು ಹೃದಯವನ್ನು ದಯಪಾಲಿಸುತ್ತಾರೆ. ಮತ್ತು ನಮ್ಮೊಳಗೆ ಪವಿತ್ರಾತ್ಮನನ್ನು ಕೊಟ್ಟು, ಆತನ ಮಾರ್ಗದಲ್ಲಿ ನಡೆಯುವಂತೆ ನಮ್ಮನ್ನು ಮಾಡುತ್ತಾರೆ ಮತ್ತು ಆತನ ಆಜ್ಞೆಗಳಿಗೆ ವಿಧೇಯರಾಗುವಂತೆ ಮಾಡುತ್ತಾರೆ ಹಾಗೂ ನಮ್ಮಲ್ಲಿನ ಎಲ್ಲಾ ಅಶುದ್ಧತೆಗಳಿಂದ ನಮ್ಮನ್ನು ರಕ್ಷಿಸುತ್ತಾರೆ (ಯೆಹೆಜ್ಕೇಲ 36:25-29). ಆದರೆ ಈ ಸಂಗತಿಗಳು ನಮ್ಮ ಜೀವಿತದಲ್ಲಿ ನೆರೆವೇರಬೇಕು ಎಂದಾದಲ್ಲಿ, ನಾವು ಮೊದಲು ದೇವರಿಗೆ ಪ್ರಾರ್ಥನೆ ಮಾಡಬೇಕು ಹಾಗೂ ಈ ಸಂಗತಿಗಳನ್ನು ನಮ್ಮ ಜೀವಿತದಲ್ಲಿ ನೆರೆವೇರಿಸುವಂತೆ ದೇವರಲ್ಲಿ ಕೇಳಿಕೊಳ್ಳಬೇಕು (ಯೆಹೆಜ್ಕೇಲ 36:37) . ಈ ಜೀವಿತಕ್ಕಾಗಿ ನಾವು ಕೇಳಿಕೊಳ್ಳಲಿಲ್ಲವಾದರೆ, ಇದನ್ನು ಪಡೆದುಕೊಳ್ಳಲಾಗುವುದಿಲ್ಲ. ಮತ್ತು ನಾವು ಈ ಅದ್ಭುತವಾದ ಜೀವಿತಕ್ಕೆ ಬಂದು, ನಮ್ಮ ಹಿಂದಿನ ಜೀವಿತದ ಬಗ್ಗೆ ಯೋಚಿಸುವಾಗ, ”ನಮ್ಮನ್ನ ನಾವು ನಮ್ಮ ದೃಷ್ಠಿಯಲ್ಲಿ ಹೇಸಿಕೊಳ್ಳುವವರಾಗಿರುತ್ತೇವೆ” (ಯೆಹೆಜ್ಕೇಲ 36:31) . ಆತ್ಮಭರಿತ ಮನುಷ್ಯನ ಪ್ರಾಥಮಿಕ ಗುರುತುಗಳಲ್ಲಿ - ಆತನು ತನಗೆ ಅರಿವಾಗುವ ತನ್ನ ಶರೀರದಲ್ಲಿನ ಎಲ್ಲಾ ಪಾಪಗಳನ್ನು ತಿರಸ್ಕರಿಸಿ, ”ಓ ನಾನು ಎಂಥಾ ಕೆಟ್ಟ ಮನುಷ್ಯನು, ಪಾಪಿಗಳಲ್ಲಿಯೇ ನಾನೇ ಮುಖ್ಯನು” ಎಂಬುದಾಗಿ ಕಣ್ಣೀರಿಟ್ಟು ಹೇಳುವವನಾಗಿರುತ್ತಾನೆ (ರೋಮ 7:24, 25 & 1 ತಿಮೊಥೆ 1:15) . ಆತ್ಮಭರಿತ ಮನುಷ್ಯನು ತನ್ನ ಶರೀರಭಾವದಲ್ಲಿಯ ಪಾಪವನ್ನು ನೋಡಿ ಹೇಸಿಕೊಳ್ಳುವ ಮೊದಲು, ಆ ಪಾಪವನ್ನು ಇನ್ನೊಬ್ಬರಲ್ಲಿ ನೋಡುವುದಿಲ್ಲ ಮತ್ತು ಆ ಪಾಪದ ಅರಿವಾದಾಗ ಅದರಿಂದ ಅಸಹ್ಯಗೊಳ್ಳುತ್ತಾನೆ. ನಾವು ದೇವರಿಗೆ ಹೆಚ್ಚು ಹತ್ತಿರವಾದಹಾಗೆ ನಮ್ಮ ಸ್ವಂತ ಪಾಪದ ಬಗ್ಗೆ ಹೆಚ್ಚು ಅರಿವುಳ್ಳವರಾಗುತ್ತೇವೆ.

ಯೆಹೆಜ್ಕೇಲ 37ನೇ ಅಧ್ಯಾಯದಲ್ಲಿನ ಸಾಮ್ಯವು ಪುನರುತ್ಥಾನ ಜೀವಿತದ ಬಗ್ಗೆ ಹೇಳುತ್ತದೆ. ದೇವರು ಯೆಹೆಜ್ಕೇಲನನ್ನು ಒಣಗಿಹೋದ ಎಲುಬುಗಳ ಕಣಿವೆಯ ಜಾಗಕ್ಕೆ ಕರೆದುಕೊಂಡು, ಮೊಟ್ಟಮೊದಲನೇಯದಾಗಿ ಆ ಎಲುಬುಗಳಿಗೆ ಪ್ರವಾದಿಸು ಎಂದು ಹೇಳಿದರು. ದೇವರ ಬಾಯಿಂದ ವಾಕ್ಯವು ಹೊರಡುತ್ತಿದ್ದಂತೆ, ಎಲುಬುಗಳು ಒಟ್ಟಾಗಿ ಕೂಡಿಕೊಂಡವು ಮತ್ತು ಮಾಂಸವು ಎಲುಬುಗಳನ್ನು ಮುಚ್ಚಿತು. ಆದರೆ ಇವುಗಳಿಗೆ ದೇವರ ವಾಕ್ಯಕ್ಕಿಂತ ಇನ್ನೂ ಹೆಚ್ಚಾದದ್ದು ಅಗತ್ಯವಿತ್ತು. ಅದು, ಪವಿತ್ರಾತ್ಮನ ಬಲದ ಅಗತ್ಯತೆಯೂ ಸಹ ಆಗಿತ್ತು. ಈ ಸತ್ತ ದೇಹಗಳ ಮೇಲೆ ಪವಿತ್ರಾತ್ಮನು ಬರಲು, ಆ ದೇಹಗಳು ಎದ್ದು ನಿಂತು, ತಕ್ಷಣವೇ ದೇವರಿಗಾಗಿ ಬಲಶಾಲಿ ಸೈನ್ಯದ ಸೈನಿಕರಾದರು. ದೇವರು ಇಂದು ಸಭೆಯಲ್ಲಿ ಏನು ಮಾಡಲು ಇಚ್ಛಿಸುವರು ಎಂಬುದರ ಚಿತ್ರಣ ಇದಾಗಿದೆ. ಅನೇಕ ಕ್ರೈಸ್ತರು ಪ್ರಾರಂಭದಲ್ಲಿ ತಮ್ಮ ಎಲ್ಲಾ ಸಿದ್ಧಾಂತಗಳು ಸರಿಯಾಗಿದ್ದರೂ ಈ ರೀತಿಯ ಒಣಗಿದ ಎಲುಬುಗಳಂತಿದ್ದು, ಬಾಗದೆ ಸತ್ತವರಾಗಿರುತ್ತಾರೆ. ಆದರೆ ಅವರು ದೇವರ ವಾಕ್ಯಕ್ಕೆ ಪ್ರತಿಕ್ರಿಯಿಸಲು ಪ್ರಾರಂಭಿಸುವಾಗ, ಅವರು ಕ್ರೈಸ್ತರಾಗಿ ಒಟ್ಟೊಟ್ಟಾಗಿ ಬರಲು ಪ್ರಾರಂಭಿಸುತ್ತಾರೆ (ಎಲುಬುಗಳು ಒಟ್ಟಾಗಿ ಬಂದ ಹಾಗೇ) ಮತ್ತು ಯೋಗ್ಯ ಜೀವಿತವನ್ನು ಜೀವಿಸಲು ಪ್ರಾರಂಭಿಸುತ್ತಾರೆ (ಮಾಂಸವು ಎಲುಬುಗಳನ್ನು ಮುಚ್ಚಿದಾಗ ಒಂದು ನಿಶ್ಚಿತ ಸುಂದರತೆಯು ಕಾಣಿಸಿಕೊಳ್ಳುವ ಹಾಗೇ). ಆದರೆ ಈ ಕ್ರೈಸ್ತರು ದೇವರ ಬಲಶಾಲಿ ಸೈನಿಕರುಗಳಾಗಬೇಕಾದರೆ ಒಂದು ಅಗತ್ಯತೆ ಇದೆ. ಅದು - ದೇವರು ಕೊಡುವ ಅದ್ಭುತವಾದ ಪವಿತ್ರಾತ್ಮನ ಬಲದ ಅಗತ್ಯತೆ. ಇದು ಅಧ್ಯಾಯ 37ರ ಸಂದೇಶವಾಗಿದೆ.

ಯೆಹೆಜ್ಕೇಲ 43ನೇಯ ಅಧ್ಯಾಯದಲ್ಲಿ, ಆಲಯವನ್ನು ಬಿಟ್ಟುಹೋದ ದೇವರ ಮಹಿಮೆಯು ಮತ್ತೆ ಹಿಂದಿರುಗಿ ಹೊಸ ಆಲಯಕ್ಕೆ ಅಂದರೆ - ಪಂಚಾಶತ್ತಮ ದಿನದಂದು ಸ್ಥಾಪಿತಗೊಂಡ ಹೊಸ ಒಡಂಬಡಿಕೆಯ ಸಭೆಗೆ ಹಿಂತಿರುಗುವುದನ್ನು ಓದುತ್ತೇವೆ. ದೇವರು ಸಭೆಯನ್ನು ”ನನ್ನ ಸಿಂಹಾಸನದ ಸ್ಥಳ” ಎಂಬುದಾಗಿ ಕರೆದಿದ್ದಾರೆ (ಯೆಹೆಜ್ಕೇಲ 43:7) . ಈ ಹೊಸ ಒಡಂಬಡಿಕೆ ಸಭೆ ಹೇಗಿರಬೇಕೆಂಬ ನಿಯಮವು ಈ ರೀತಿಯಾಗಿ ವಿವರಿಸಲ್ಪಟ್ಟಿದೆ - ”ಈ ಆಲಯದ ಪ್ರತಿಯೊಂದು ಕ್ಷೇತ್ರವು ಅತ್ಯಂತ ಪರಿಶುದ್ಧವಾಗಿದೆ” (ಯೆಹೆಜ್ಕೇಲ 43:12) . ಹಳೆ ಒಡಂಬಡಿಕೆಯ ಆಲಯದಲ್ಲಿ, ಪಶ್ಚಿಮ ದಿಕ್ಕಿನ ಕೊನೆಯ ಭಾಗದಲ್ಲಿ ಕೇವಲ ಸಣ್ಣ ಕೊಠಡಿ ಇತ್ತು, ಅದು ”ಅತೀ ಪರಿಶುದ್ಧ ಸ್ಥಳ” ಎಂಬುದಾಗಿ ಕರೆಯಲ್ಪಡುತ್ತಿತ್ತು - ಆ ಸ್ಥಳದಲ್ಲಿ ದೇವರು ವಾಸವಿರುತ್ತಿದ್ದರು. ಆದರೆ ಹೊಸ ಒಡಂಬಡಿಕೆಯ ಸಭೆಯಲ್ಲಿ, ಇಡೀ ಸಭೆಯು (ಆಲಯ) ಅತೀ ಪರಿಶುದ್ಧ ಸ್ಥಳವಾಗಿದೆ. ಸಭೆಯೆಂಬ ದೇವರ ಆಲಯವನ್ನು ಇಂದು ಕಟ್ಟಬೇಕಾದರೆ, ನಾವು ಈ ಒಂದು ಮೂಲಭೂತ ನಿಯಮವನ್ನು ಪಾಲಿಸಲೇಬೇಕು - ಆ ಸಭೆಯಲ್ಲಿನ ಪ್ರತಿಯೊಬ್ಬ ಸದಸ್ಯನು ಸಂಪೂರ್ಣವಾಗಿ ಪರಿಶುದ್ಧನಾಗಿರಬೇಕು. ಪಾಪವು ಯಾರಲ್ಲಿಯೇ ಅಥವಾ ಯಾವುದೇ ರೀತಿಯಲ್ಲಿಯೇ ಇರುವುದನ್ನು ಸಹಿಸಿಕೊಳ್ಳಬಾರದು.

ಇಂತಹ ಪರಿಶುದ್ಧ ಆಲಯದಿಂದ(ಆತ್ಮಭರಿತ ಸಭೆ ಅಥವಾ ಆತ್ಮಭರಿತ ವ್ಯಕ್ತಿಯೇ ಆಗಿರಬಹುದು) ನೀರು ಹನಿಹನಿಯಾಗಿ ಹರಿಯಲು ಪ್ರಾರಂಭಿಸಿ, ಹೊಳೆಯಾಗಿ ಮಾರ್ಪಟ್ಟು ಅನೇಕ ಹೊಳೆಗಳಾಗಿ ಹರಿಯಲು ಪ್ರಾರಂಭಿಸುತ್ತದೆ (ಯೆಹೆಜ್ಕೇಲ 47). ಯೋಹಾನ 7:37-39ರಲ್ಲಿ ಈ ಸಂದೇಶವನ್ನೇ ಯೇಸು ಉಲ್ಲೇಖಿಸುತ್ತಾರೆ- ಪವಿತ್ರಾತ್ಮನಿಂದ ತುಂಬಲ್ಪಟ್ಟ ಮನುಷ್ಯನಿಂದ ”ಜೀವಿಕರವಾದ ನೀರಿನ ಹೊಳೆಗಳು ಹರಿಯುವವು.” ಈ ಜೀವಿಕರವಾದ ನೀರಿನ ಹರಿಯುವಿಕೆ ಪಂಚಾಶತ್ತಮ ದಿನದಿಂದ ಪ್ರಾರಂಭವಾಗಿ ಇಲ್ಲಿಯವರೆಗೂ, ದೈವಿಕ ಪುರುಷ ಮತ್ತು ಸ್ತ್ರೀಯರ ಮೂಲಕ ಈಗಲೂ ಹರಿಯುತ್ತಿದೆ. ದೊಡ್ಡ ಹೊಳೆ ಮತ್ತು ಅನೇಕ ಹೊಳೆಗಳು ಆಗುವ ಮುನ್ನ ಈ ಜೀವಿತವು ಹನಿಹನಿಯಾಗಿ ಪ್ರಾರಂಭವಾಗುತ್ತದೆ.

ದೇವರು, ಯೆಹೆಜ್ಕೇಲ 47:3-6 ರಲ್ಲಿ ಯೆಹೆಜ್ಕೇಲನಿಗೆ ಆತ್ಮಭರಿತ ಜೀವಿತದ ಸ್ವಲ್ಪ ರುಚಿಯನ್ನು ತೋರಿಸುತ್ತಾರೆ. ದೇವರು ಯೆಹೆಜ್ಕೇಲನನ್ನು ಹಂತ ಹಂತವಾಗಿ ಈ ಹೊಳೆಯೊಳಗೆ ನಡೆಸುತ್ತಾರೆ. ಹೊಳೆಯೊಳಗೆ 500 ಮೀಟರ್ ನಡೆದ ನಂತರ, ನೀರು ಪಾದದ ಮಟ್ಟಕ್ಕೆ ತಲುಪಿತು. ತಿರುಗಿ 500 ಮೀಟರ್ ಒಳಗೆ ನಡೆದ ಮೇಲೆ ನೀರು ಮೊಣಕಾಲೂರಿನ ತನಕ ತಲುಪಿತು, ಮತ್ತೇ 500 ಮೀಟರ್ ನಡೆದ ನಂತರ ನೀರು ಆತನ ಸೊಂಟದ ಭಾಗಕ್ಕೆ ಬಂದಿತು. ಇನ್ನೂ ಮುಂದೆ 500 ಮೀಟರ್ ದಾಟಿದ ನಂತರ, ನೀರಿನ ಆಳ ಎಷ್ಟು ಹೆಚ್ಚಾಯಿತೆಂದರೆ ಆತನ ಕಾಲು ನೆಲದಿಂದ ಎತ್ತಲ್ಪಡಬೇಕಾಯಿತು ಮತ್ತು ಹೊಳೆಯ ನೀರಿನ ಸೆಳೆತಕ್ಕೆ ತೇಲಿಹೋಗಬೇಕಾಯಿತು. ಯೆಹೆಜ್ಕೇಲನು ನಡೆದಂತೆ ಸತತವಾಗಿ ನಾವೂ ಸಹ ದೇವರೊಟ್ಟಿಗೆ ನಡೆಯಬಹುದು, ಇಲ್ಲವೇ ಒಂದು ಹಂತಕ್ಕೆ ತಲುಪಿ ಅಲ್ಲಿಯೇ ನಡಿಗೆಯನ್ನು ನಿಲ್ಲಿಸಬಹುದು. ನಾವು ಎಲ್ಲಿಯ ತನಕ ಹೋಗಬೇಕೆಂದು ಮನಸ್ಸು ಮಾಡಿರುತ್ತೇವೋ ಅದಕ್ಕಿಂತ ಹೆಚ್ಚಾಗಿ ಮುಂದೆಹೋಗಲು ದೇವರು ನಮ್ಮನ್ನು ಒತ್ತಾಯ ಪಡಿಸುವವನಲ್ಲ. ಎಲಿಷನು ಎಲಿಯನನ್ನು ಹಿಂಬಾಲಿಸಲು ಪ್ರಾರಂಭಿಸಿದಾಗ (2ಅರಸು 2ನೇ ಅಧ್ಯಾಯ) , ಎಲಿಯನು ತಾನು ಪಡೆದುಕೊಂಡದ್ದರಲ್ಲಿ ತ್ರುಪ್ತನಾಗುತ್ತಾನಾ ಅಥವಾ ಇನ್ನೂ ಹೆಚ್ಚಿನದಕ್ಕೆ ತವಕಪಡುತ್ತಾನೋ ಎಂದು ಎಲಿಷನನ್ನು ಸತತವಾಗಿ ಪರೀಕ್ಷೆ ಮಾಡಿದನು. ಏಕೆಂದರೆ ಎಲಿಷನು ದೇವರ ಉತ್ತಮವಾದದ್ದನ್ನು ಪಡೆದುಕೊಳ್ಳುವವರೆಗೂ ತೃಪ್ತನಾಗುತ್ತಾ ಇರಲಿಲ್ಲ, ಹಾಗಾಗಿ ಆತನ ಜೀವಿತದಲ್ಲಿ ಇನ್ನೂ ಎರಡರಷ್ಟು ಹೆಚ್ಚು ಭಾಗ ಅಭಿಷೇಕವನ್ನು ಹೊಂದಿಕೊಂಡನು. ಇಲ್ಲಿ ಯೆಹೆಜ್ಕೇಲನು ಸಹ ಇದೇ ರೀತಿಯಾಗಿ ಪರೀಕ್ಷೆಗೆ ಒಳಗಾಗುವುದನ್ನು ನಾವು ನೋಡುತ್ತೇವೆ. ಆತನೂ ಸಹ ಹೊಳೆಯನ್ನು ಹೆಚ್ಚುಹೆಚ್ಚಾಗಿ ಪ್ರವೇಶಿಸಲು ಮನಸ್ಸು ಮಾಡಿದನು, ಎಲ್ಲಿಯ ತನಕ ಆತನು ಮುನ್ನಡಿದನೆಂದರೆ ಆತನು ನೀರಿನಲ್ಲಿ ಈಜಲು ಸಾಧ್ಯವಾಗುವಷ್ಟರ ಮಟ್ಟಿಗೆ ಮುನ್ನಡೆದನು. ಪವಿತ್ರಾತ್ಮನ ಕಾರ್ಯವನ್ನು ನಿಮ್ಮ ಜೀವಿತದಲ್ಲಿ ಒಂದು ಹಂತದವರೆಗೆ ಅನುಭವಿಸಿ ತ್ರುಪ್ತರಾಗಬಹುದು, ಆದರೆ ಆ ಅನುಭವದ ಪ್ರಮಾಣವು ದೇವರು ಕೊಡುವ ಶ್ರೇಷ್ಠವಾದ ಪ್ರಮಾಣಕ್ಕಿಂತ ಕಡಿಮೆಯಾಗಿರುತ್ತದೆ.

ಇದನ್ನೂ ಸಹ ಗಮನಿಸಿ : ಯೆಹೆಜ್ಕೇಲನ ಪಾದದ ಮಟ್ಟಕ್ಕೆ ನೀರು ಬಂದಾಗ, ಅಥವಾ ಮೊಣಕಾಲಿನ ಮಟ್ಟಕ್ಕೆ ನೀರು ಬಂದಾಗ ಅಥವಾ ನೀರು ಸೊಂಟದ ಭಾಗಕ್ಕು ಬಂದರೂ ಸಹ, ಆತನ ಪಾದವು ನೆಲದ ಮೇಲೆಯೇ ನಿಂತುಕೊಂಡಿದ್ದವು. ಆದರೆ ನಮ್ಮ ಪಾದಗಳು ಈ ಭೂಲೋಕದ ಆಕರ್ಷಣೆಯಿಂದ ಎತ್ತಲ್ಪಡುವಾಗ, ನಾವು ನಿಜವಾಗಿಯೂ ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಿದ್ದೇವೆಂದು ತಿಳಿಯಲ್ಪಡುತ್ತದೆ. ಈ ಹಂತದಲ್ಲಿ ನಾವು, ”ಭೂಲೋಕದ ನಂಟನ್ನು ಬಿಟ್ಟಿರುತ್ತೇವೆ ಮತ್ತು ಲೋಕದಲ್ಲಿರುವುಗಳ ಮೇಲೆಯ ಆಸಕ್ತಿಯನ್ನು ಕಳೆದುಕೊಂಡಿರುತ್ತೇವೆ ಮತ್ತು ಭೌತಿಕ ವಸ್ತುಗಳ ಬಗೆಗಿನ ನಂಟಿನಿಂದ ಹೊರಬಂದಿರುತ್ತೇವೆ" ಮತ್ತು ಇನ್ನು ಮುಂದೆ ಪವಿತ್ರಾತ್ಮನಿಂದ, ನಮ್ಮ ಸ್ವಂತ ಚಿತ್ತದಂತೆ ನಡೆಯದೇ ದೇವರ ಚಿತ್ತದಂತೆ ನಡೆಯುವುದಕ್ಕೆ ಪ್ರಾರಂಭಿಸುತ್ತೇವೆ.”

ಯೆಹೆಜ್ಕೇಲ ಪುಸ್ತಕದ ಕೊನೆಯ ವಚನದಲ್ಲಿ (ಯೆಹೆಜ್ಕೇಲ 48:35) ಹೊಸ ಒಡಂಬಡಿಕೆ ಸಭೆಯ ಹೆಸರು ಈ ರೀತಿಯಾಗಿ ನಮೂದಿಸಲ್ಪಟ್ಟಿದೆ, ”ಕರ್ತನು ಅಲ್ಲಿ ನೆಲೆಯಾಗಿದ್ದಾನೆ” - ”ಯೆಹೋವ ಶಮ್ಮಹ್.” ಇಂತಹ ಸಭೆಯನ್ನು ನಾವು ಮತ್ತು ನೀವು ಕಟ್ಟಲು ಕರೆಯಲ್ಪಟ್ಟಿದ್ದೇವೆ - ದೇವರು ತನ್ನ ಎಲ್ಲಾ ಮಹಿಮೆಯೊಂದಿಗೆ ನಮ್ಮ ಮಧ್ಯದಲ್ಲಿ ನೆಲೆಸಿದ್ದಾನೆ ಎಂಬುದನ್ನು ಅಲ್ಲಿಗೆ ಬರುವ ಜನರು ಗ್ರಹಿಸಿಕೊಳ್ಳುತ್ತಾರೆ. ಆದರೆ ಇಂತಹ ಸಭೆಯನ್ನು ಕಟ್ಟಲು, ಯೆಹೆಜ್ಕೇಲನ ಹಾಗೇ ದೇವರಿಗೆ ಸಂಪೂರ್ಣವಾಗಿ ವಿಧೇಯರಾಗುವಂತ ಜನರ ಅಗತ್ಯತೆಯು ಕರ್ತನಿಗೆ ಇದೆ.