ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಕ್ರಿಸ್ತನಲ್ಲಿ ಭಕ್ತಿ
WFTW Body: 

ಅಪೊಸ್ತಲನಾದ ಪೌಲನು ಎಫೆಸ ಪಟ್ಟಣದಲ್ಲಿ ಹಗಲು ರಾತ್ರಿ ಬೋಧಿಸುತ್ತಾ ಮೂರು ವರ್ಷಗಳ ಕಾಲ ವಾಸವಾಗಿದ್ದನು (ಅ.ಕೃತ್ಯಗಳು 20:31). ಅಂದರೆ, ಎಫೆಸ ಪಟ್ಟಣದ ಕ್ರೈಸ್ತರು ಪೌಲನು ಮಾಡಿದ ಸಾವಿರಾರು ಪ್ರಸಂಗಗಳನ್ನು ಕೇಳಿದರು. ಕರ್ತನು ಅವರ ಮಧ್ಯದಲ್ಲಿ ಪೌಲನ ಕೈಯಿಂದ ನಡೆಸಿದ ವಿಶೇಷವಾದ ಮಹತ್ಕಾರ್ಯಗಳನ್ನು ಎಫೆಸದವರು ನೋಡಿದ್ದರು (ಅ.ಕೃತ್ಯಗಳು 19:11) . ಎರಡು ವರುಷಗಳ ಕಡಿಮೆ ಅವಧಿಯಲ್ಲಿಯೇ ಅವರ ಮಧ್ಯದೊಳಗಿಂದ, ದೇವರ ವಾಕ್ಯವು ಸುತ್ತಲಿನ ಆಸ್ಯ ಸೀಮೆಯಲ್ಲಿ ಹರಡಿತ್ತು. ಅವರು ಉಜ್ಜೀವನವನ್ನು ಅನುಭವಿಸಿದ್ದರು (ಅ.ಕೃತ್ಯಗಳು 19:10,19). ಅಪೋಸ್ತಲರ ಸಮಯದ ಎಲ್ಲಾ ಸಭೆಗಳಲ್ಲಿ ಎಫೆಸ ಪಟ್ಟಣದ ಸಭೆಯು ಹೆಚ್ಚಿನ ಸೌಭಾಗ್ಯವನ್ನು ಹೊಂದಿತ್ತು. ಅ ಸಮಯದಲ್ಲಿ ಎಫೆಸ ಸಭೆಯು ಆಸ್ಯ ಸೀಮೆಯಲ್ಲಿಯೇ ಹೆಚ್ಚಿನ ಆತ್ಮಿಕತೆಯುಳ್ಳ ಸಭೆಯಾಗಿತ್ತು ಎನ್ನುವುದರಲ್ಲಿ ಅನುಮಾನವೇ ಇಲ್ಲ. (ಪೌಲನು ಎಫೆಸದವರಿಗೆ ಬರೆದ ಪತ್ರವನ್ನು ನಾವು ನೋಡುವುದಾದರೆ, ಎಫೆಸದವರಲ್ಲಿ ಪೌಲನಿಗೆ ಸರಿಪಡಿಸಬೇಕಾದ ಯಾವ ತಪ್ಪುಗಳೂ ಕಾಣಸಿಗಲಿಲ್ಲ. ಆದರೆ ಆತನು ಬೇರೆ ಸಭೆಗಳಿಗೆ ಬರೆದ ಪತ್ರಗಳು ಈ ರೀತಿಯಾಗಿ ಇರಲಿಲ್ಲ). ಆದರೆ ಪೌಲನು ಎಫೆಸವನ್ನು ಬಿಟ್ಟು ಹೊರಡುವಾಗ, ಸಭೆಯ ಹೊಸ ನಾಯಕತ್ವದ ಅಡಿಯಲ್ಲಿ ಸಂಗತಿಗಳು ಬದಲಾಗಲಿವೆ, ಮುಂದಿನ ಜನಾಂಗವು ಕೆಟ್ಟ ಮಾರ್ಗಕ್ಕೆ ಹೋಗಲಿದೆ, ಎಂಬುದಾಗಿ ಎಫೆಸ ಸಭೆಯ ಹಿರಿಯರನ್ನು ಎಚ್ಚರಿಸಿದನು. ಅವರ ಮಧ್ಯದಲ್ಲಿ ಕ್ರೂರವಾದ ತೋಳಗಳು ಬರಲಿವೆಯೆಂದೂ, ಅವರ ನಡುವೆ ವ್ಯತ್ಯಾಸ ಬೋಧನೆಯನ್ನು ಬೋಧಿಸುವಂತವರು ಬಂದು, ಜನರನ್ನು ದೇವರ ಕಡೆಗೆ ನಡೆಸುವ ಬದಲು ತಮ್ಮ ಕಡೆಗೆ ಸೆಳೆದುಕೊಳ್ಳಲಿದ್ದಾರೆ ಎಂಬುದಾಗಿ ಪೌಲನು ಎಫೆಸದ ಸಭೆಯ ಹಿರಿಯರನ್ನು ಎಚ್ಚರಿಸಿದನು (ಅ.ಕೃತ್ಯಗಳು 20:29, 30).

ಅಲ್ಲಿ ಪೌಲನು ಇದ್ದಷ್ಟು ದಿನ ತೋಳಗಳಿಗೆ ಎಫೆಸದ ಸಭೆಯೊಳಗೆ ಪ್ರವೇಶಿಸುವ ಧೈರ್ಯ ಬರಲಿಲ್ಲ. ಪೌಲನು ಒಬ್ಬ ನಂಬಿಗಸ್ಥನಾದ ಕಾವಲುಗಾರನಾಗಿದ್ದನು (ಮಾರ್ಕ 13:34 ನೋಡಿ), ದೇವರಿಂದ ಆತ್ಮಿಕ ಅಧಿಕಾರವನ್ನು ಹೊಂದಿದ್ದನು, ಏಕೆಂದರೆ ಆತನು ಅಭಿಷೇಕಿಸಲ್ಪಟ್ಟು, ದೇವರಿಗೆ ಭಯ ಪಡುವವನಾಗಿದ್ದನು ಮತ್ತು ತನ್ನ ಆಸಕ್ತಿಯನ್ನು ನೋಡದೆ ಕರ್ತನ ಆಸಕ್ತಿಯನ್ನು ಹುಡುಕುವವನಾಗಿದ್ದನು. ಆದರೆ ಆತನ ಆತ್ಮಿಕ ಸೂಕ್ಷ್ಮಗ್ರಹಿಕೆಯ ಕಾರಣ ಎಫೆಸ ಸಭೆಯ ಹಿರಿಯರ ಆತ್ಮಿಕ ಸ್ಥಿತಿಯು ಕೆಟ್ಟಿದ್ದುದನ್ನು ಅರಿತಿದ್ದನು - ಅವರು ಸಭೆಯ ನಾಯಕತ್ವವನ್ನು ವಹಿಸಿಕೊಂಡ ನಂತರ ಸಭೆಯ ಪರಿಸ್ಥಿತಿಯು ಹದಗೆಡುವದು ಎಂಬುದನ್ನು ಅರಿತವನಾಗಿದ್ದನು. ಪೌಲನು ಸಭಾ ಹಿರಿಯರಿಗೆ ಎಫೆಸದಲ್ಲಿ ನಿಜವಾಗಿಯೂ ಏನು ಸಂಭವಿಸಲಿದೆ ಎಂಬ ಪ್ರವಾದನೆಯನ್ನು ಕೊಡಲಿಲ್ಲ. ಇಲ್ಲ. ಅದು ಕೇವಲ ಎಚ್ಚರಿಕೆಯ ಮಾತಾಗಿತ್ತು. ಸಭಾ ಹಿರಿಯರು ತಮ್ಮನ್ನು ತಾವು ತೀರ್ಪು ಮಾಡಿಕೊಂಡು ಮಾನಸಾಂತರ ಪಟ್ಟದ್ದೇ ಆದರೆ - ಪೌಲನು ಕೊಟ್ಟ ಎಚ್ಚರಿಕೆ ವಾಸ್ತವಿಕವಾಗಿ ಸಂಭವಿಸುತ್ತಿರಲಿಲ್ಲ.

ಒಂದು ಸಲ ಯೋನನು ನಿನೆವೆ ಪಟ್ಟಣವು ನಾಶವಾಗುವದು ಎಂಬ ಪ್ರವಾದನೆಯನ್ನು ನೀಡಿದನು. ಆದರೆ ಆತನು ಪ್ರವಾದಿಸಿದ ರೀತಿ ಏನೂ ಸಂಭವಿಸಲಿಲ್ಲ, ಏಕೆಂದರೆ ನಿನೆವೆ ಪಟ್ಟಣದ ನಾಗರಿಕರು ಮಾನಸಾಂತರಪಟ್ಟರು. ಎಫೆಸದ ಸಭೆಯೂ ಸಹ ಪೌಲನು ಎಚ್ಚರಿಸಿದ ಪರಿಸ್ಥಿತಿಗೆ ತಲುಪುವದನ್ನು ತಪ್ಪಿಸಿಕೊಳ್ಳಬಹುದಾಗಿತ್ತು. ಆದರೆ ದುರದೃಷ್ಟವಶಾತ್, ಎಫೆಸದ ಹೊಸ ಜನಾಂಗದ ನಾಯಕರು ಪೌಲನ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳದೆ ಕರ್ತನಿಂದ ಜಾರಿ ಬಿದ್ದರು. ಮೊದಲನೇ ಶತಮಾನದ ಕೊನೆಯ ಸಮಯಕ್ಕೆ, ಮೂರನೆಯ ಕ್ರೈಸ್ತ ಪೀಳಿಗೆಯು ಅಧಿಕಾರಕ್ಕೆ ಬಂದಿತ್ತು. ಆಗ ಅಲ್ಲಿ ಸಂಪೂರ್ಣ ಹದಗೆಟ್ಟ ಪರಿಸ್ಥಿತಿ ಉಂಟಾಗಿತ್ತು. ಅವರ ಸಿದ್ಧಾಂತಗಳೆಲ್ಲವೂ ಸರಿಯಾಗಿದ್ದವು ಮತ್ತು ಕ್ರಿಸ್ತೀಯ ಕಾರ್ಯಕ್ರಮಗಳಲ್ಲಿ ಅವರಿಗೆ ಅತ್ಯಾಸಕ್ತಿಯಿತ್ತು. ಅವರು ಬಹುಶ ಅಹೋರಾತ್ರಿ ಪ್ರಾರ್ಥಾನಾ ಕೂಟಗಳನ್ನು ಮತ್ತು ಇತರ ವಿಶೇಷ ಕೂಟಗಳನ್ನು ಇನ್ನೂ ನಡೆಸುತ್ತಲೇ ಬಂದಿದ್ದರು. ಆದರೆ ಅವರ ಆತ್ಮಿಕ ಸ್ಥಿತಿ ಎಲ್ಲಿಗೆ ತಲುಪಿತ್ತು ಎಂದರೆ, ಕರ್ತನು ಸಭೆಯೆಂಬ ಗುರುತನ್ನು (ದೀಪಸ್ತಂಬ) ಅವರಿಂದ ತೆಗೆದು ಹಾಕಲಿದ್ದನು. ಹಾಗಾದರೆ ಆವರ ಅಪರಾಧ ಏನು? ಅವರು ಮೊದಲು ತಮ್ಮಲ್ಲಿದ್ದ ಕರ್ತನ ಪ್ರೀತಿಯನ್ನು ಕಳೆದುಕೊಂಡಿದ್ದರು (ಪ್ರಕಟನೆ 2:4,5).

ಎಫೆಸ ಸಭೆಯ ಇತಿಹಾಸವು ನಮಗೆ ಬೋಧಿಸುವುದಾದರೂ ಏನೂ? ಅದು ಕೇವಲ ಇದಾಗಿದೆ - ಸ್ವತಃ ಕರ್ತನನ್ನು ಯಥಾರ್ಥವಾಗಿ ಪ್ರೀತಿಸುವಕ್ಕಿಂತ ಹೆಚ್ಚು ಮುಖ್ಯವಾದ ಯಾವ ಸಿದ್ಧಾಂತವೂ ಇಲ್ಲ. ನಿಜವಾದ ಆತ್ಮಿಕತೆಯ ಗುರುತು ಕೇವಲ ಒಂದು - ನಮ್ಮ ನಡವಳಿಕೆಯು ಹೆಚ್ಚು ಹೆಚ್ಚಾಗಿ ಯೇಸುವಿನ ಮಾದರಿಯನ್ನು ಹೋಲುವಂಥದ್ದು ಮತ್ತು ಈ ಪರಿವರ್ತನೆ ಉಂಟಾಗುವದು ಪೂರ್ಣ ಹೃದಯದ ಕರ್ತನ ಪ್ರೀತಿಯ ಮೂಲಕ ಮಾತ್ರವೇ.

ಪೌಲನು ಒಬ್ಬ ದೈವಿಕ ಮನುಷ್ಯನಾಗಿದ್ದನು - ಉತ್ಸುಕತೆಯುಳ್ಳ ನಂಬಿಗಸ್ಥ ಅಪೊಸ್ತಲನಾಗಿ ತನ್ನ ಜೀವಿತದ ಕೊನೆಯ ವರೆಗೂ ಕರ್ತ ಯೇಸುವಿನ ಒಬ್ಬ ಸೇವಕನಾಗಿದ್ದನು. ಮತ್ತು ಪೌಲನು ಎಲ್ಲಾಕಡೆಯು ಎಚ್ಚರಿಸಿದ್ದೇನೆಂದರೆ - ವಿಶ್ವಾಸಿಗಳು "ಕರ್ತನಿಗೆ ತೋರುವ ಯಥಾರ್ಥತ್ವ ಮತ್ತು ಪಾತಿವ್ರತ್ಯವನ್ನು ಬಿಟ್ಟು ಕೆಟ್ಟುಹೋಗುವಂತೆ" ಸೈತಾನನು ಮಿತಿಮೀರಿ ಪ್ರಯತ್ನಿಸುತ್ತಾನೆ ಎಂಬುದಾಗಿ (2 ಕೊರಿಂಥ 11:3) . "ನೀರಿನಲ್ಲಿನ ದೀಕ್ಷಾಸ್ನಾನ" ಮತ್ತು "ಪವಿತ್ರಾತ್ಮನಲ್ಲಿ ದೀಕ್ಷಾಸ್ನಾನ", ಈ ಸಿದ್ಧಾಂತಗಳ ತಪ್ಪು ಗ್ರಹಿಕೆಗಿಂತ ಬಹಳ ಹೆಚ್ಚಿನ ಅಪಾಯ, ಕ್ರಿಸ್ತನಿಗೆ ತೋರಿಸುವಂತ ಸಮರ್ಪಿತ ಪ್ರೀತಿಯನ್ನು ಕಳೆದುಕೊಳ್ಳುವದು ಆಗಿದೆ. ಹಾಗಿದ್ದರೂ ಅನೇಕ ವಿಶ್ವಾಸಿಗಳಿಗೆ ಇದರ ಪರಿವೆಯೇ ಇದ್ದಂತಿಲ್ಲ. ಸ್ವತಃ ಪೌಲನು ಸಹ ತನ್ನ ಜನಾಂಗದಲ್ಲಿ ಮಾತ್ರ ದೇವರ ಉದ್ದೇಶಗಳನ್ನು ಪೂರೈಸಲು ಸಾಧ್ಯವಾಯಿತು ಎಂಬುದಾಗಿ ನೋಡುತ್ತೇವೆ. ಆತನ ಜೊತೆಗಾರನಾಗಿದ್ದ ತಿಮೊಥೆಯನು ಪೌಲನ ಆತ್ಮವನ್ನು ಹೊಂದಿಕೊಂಡನು ಮತ್ತು ಕ್ರಿಸ್ತನಿಗೆ ನಿಸ್ವಾರ್ಥ ಪ್ರೀತಿಯನ್ನು ತೋರಿಸುವಂತ ಜೀವಿತವನ್ನು ಜೀವಿಸಿದನು (ಪಿಲಿಪ್ಪಿ 2:19-21) . ಇದೊಂದು ಉದಾಹರಣೆಗೆ ಹೊರತಾಗಿ, ಪೌಲನು ತನ್ನ ಆತ್ಮಿಕ ಮನೋಭಾವವನ್ನು ತಾನು ಕಟ್ಟಿದ ಸಭೆಗಳಲ್ಲಿ ವಿಶ್ವಾಸಿಗಳ ಎರಡನೇ ಜನಾಂಗಕ್ಕೂ ಸಹ ವರ್ಗಾಯಿಸಲು ಆಗಲಿಲ್ಲ.