WFTW Body: 

ಯೇಸುವು ತನ್ನ ಬಾಲ್ಯದಿಂದ ಜ್ಞಾನವನ್ನು ವೃದ್ಧಿಸಿಕೊಂಡರು, ಎಂದು ನಾವು ಓದುತ್ತೇವೆ (ಲೂಕ. 2:40,52) . ಯುವಜನರು ತಮ್ಮ ವಯಸ್ಸಿನ ನಿಮಿತ್ತ ಮೂರ್ಖತನದ ಕೆಲಸಗಳನ್ನು ಮಾಡುವಂಥದ್ದು ಸಾಮಾನ್ಯ ಸಂಗತಿಯಾಗಿದ್ದರೂ, ಯೇಸುವು ತನ್ನ ಬಾಲ್ಯದ ದಿನಗಳಲ್ಲಿ ಅಂತಹ ಯಾವುದೇ ಅವಿವೇಕದ ಕೆಲಸಗಳನ್ನು ಮಾಡಲಿಲ್ಲ. ಹಾಗಾಗಿ ನೀವು ಅವರನ್ನು ನಿಮ್ಮ ಮಾದರಿಯಾಗಿ ಇರಿಸಿಕೊಂಡರೆ, ಯೌವನದ ದಿನಗಳಲ್ಲಿ ಮಾಡಬಹುದಾದ ಅನೇಕ ಅವಿವೇಕದ ಕಾರ್ಯಗಳಿಂದ ನೀವು ಪಾರಾಗುವಿರಿ.

ಕರ್ತರ ಭಯವೇ ಜ್ಞಾನಕ್ಕೆ ಮೂಲವಾಗಿದೆ. ಯೇಸುವು ಆತ್ಮಿಕ ಮರಣದಿಂದ ರಕ್ಷಿಸಲ್ಪಡುವುದಕ್ಕೆ ಸಹಾಯ ಬೇಕೆಂದು ಪ್ರಾರ್ಥಿಸಿದರು - ಮತ್ತು "ದೇವರ ಮೇಲಣ ಭಯಭಕ್ತಿಯ ನಿಮಿತ್ತ" ಉತ್ತರವನ್ನು ಪಡೆದರು (ಇಬ್ರಿ. 5:7) . ದೇವರು ಯೇಸುವನ್ನು ಪ್ರೀತಿಸಿದಂತೆ ನಮ್ಮನ್ನೂ ಪ್ರೀತಿಸುತ್ತಾರೆ. ಹಾಗಾಗಿ ನಿಮ್ಮಲ್ಲಿ ಯೇಸುವಿನಲ್ಲಿದ್ದ ದೇವರ ಭಯವಿದ್ದರೆ, ನಿಮ್ಮ ಪ್ರಾರ್ಥನೆಗಳು ಸಹ ಕೇಳಲ್ಪಡುತ್ತವೆ.

* ಅಬ್ರಹಾಮನು ತನ್ನ ಒಬ್ಬನೇ ಮಗನನ್ನು ಬಲಿಕೊಡುವುದಕ್ಕೆ ಸಿದ್ಧನಾದಾಗ, ದೇವರು ಆತನಿಗೆ (ಆದಿ. 22:12 ರಲ್ಲಿ), "ಈಗ ನೀನು ದೇವರಲ್ಲಿ ಭಯಭಕ್ತಿಯುಳ್ಳವನು ಎಂದು ತೋರಿಬಂತು," ಎಂದು ಒಂದು ಪ್ರಮಾಣಪತ್ರವನ್ನು ಕೊಟ್ಟರು. ಆ ದಿನ ಅಬ್ರಹಾಮನು ಯಾರ ಸಹಾಯವೂ ಇಲ್ಲದೆ ಆ ಬೆಟ್ಟದ ಮೇಲೆ ದೇವರಿಗೆ ವಿಧೇಯನಾದನು. ಆತನು ತನ್ನ ವಿಧೇಯತೆಯನ್ನು ದೇವರೊಬ್ಬನೇ ನೋಡಬೇಕೆಂದು ಬಯಸಿದನು. ಒಂದು ರಾತ್ರಿ ಅಬ್ರಹಾಮನು ಒಂಟಿಯಾಗಿದ್ದ ಸಮಯದಲ್ಲಿ, ದೇವರು ಆತನೊಂದಿಗೆ ಮಾತನಾಡಿದ್ದರು (ಆದಿ. 22:1) . ದೇವರು ಆತನಿಗೆ ಏನು ಹೇಳಿದರೆಂದು ಬೇರೆ ಯಾರಿಗೂ ತಿಳಿದಿರಲಿಲ್ಲ. ದೇವರ ಮಾತನ್ನು ಅಬ್ರಹಾಮನು ರಹಸ್ಯವಾಗಿಯೇ ಪಾಲಿಸಿದನು. ನೀವು ರಹಸ್ಯವಾಗಿ ಮಾಡುವ ಕಾರ್ಯಗಳ ಮೂಲಕ (ಬೇರೆ ಯಾರಿಗೂ ತಿಳಿಯದ ರೀತಿಯಲ್ಲಿ ಮಾಡುವ ಸಂಗತಿಗಳಲ್ಲಿ), ನಿಮ್ಮಲ್ಲಿ ದೇವರ ಭಯ ಇದೆಯೋ, ಇಲ್ಲವೋ ಎಂಬುದನ್ನು ನೀವು ಕಂಡುಕೊಳ್ಳುತ್ತೀರಿ.

* "ಯೋಬನು ದೇವರಿಗೆ ಭಯ ಪಡುವವನು" ಎಂಬ ಪ್ರಮಾಣಪತ್ರವನ್ನು ದೇವರು ಯೋಬನಿಗೆ ಸೈತಾನನ ಸಮ್ಮುಖದಲ್ಲಿ ಕೊಟ್ಟರು (ಯೋಬ. 1:8) . ದೇವರು ನಿಮ್ಮ ಕುರಿತಾಗಿಯೂ ಸೈತಾನನ ಮುಂದೆ ಈ ರೀತಿಯಾಗಿ ಹೆಮ್ಮೆ ಪಡಲು ಸಾಧ್ಯವಾದರೆ ಅದು ಒಳ್ಳೆಯದು, ಏಕೆಂದರೆ ಈ ದಿನದಲ್ಲೂ ಸೈತಾನನು ಭೂಲೋಕವನ್ನೆಲ್ಲಾ ಸಂಚರಿಸುತ್ತಾ ಅಲ್ಲಿಲ್ಲಿ ತಿರುಗಾಡುತ್ತಿರುತ್ತಾನೆ ಮತ್ತು ಆತನಿಗೆ ಎಲ್ಲರ ಖಾಸಗಿ ಜೀವನದ ಬಗ್ಗೆ ತಿಳಿದಿರುತ್ತದೆ. ಯೋಬನು ತನ್ನ ಕಣ್ಣುಗಳಿಗೆ, ಯಾವ ಸ್ತ್ರೀಯನ್ನೂ ಮೋಹಕ ದೃಷ್ಟಿಯಿಂದ ನೋಡದಂತೆ ನಿರ್ಬಂಧವನ್ನು ಹಾಕಿದ್ದನು (ಯೋಬ. 31:1) . ಹೀಗೆ ಒಬ್ಬ ವ್ಯಕ್ತಿ ಧರ್ಮಶಾಸ್ತ್ರ ಕೊಡಲ್ಪಡುವ ಮುನ್ನ ಮತ್ತು ಹೊಸ ಒಡಂಬಡಿಕೆಯ ಕಾಲದ ಅನೇಕ ಶತಮಾನಗಳ ಹಿಂದೆ, ಸತ್ಯವೇದದ ಮಾರ್ಗದರ್ಶನವಿಲ್ಲದೆ, ಪವಿತ್ರಾತ್ಮನ ಶಕ್ತಿಯಿಲ್ಲದೆ, ಸಹೋದರರ ಅನ್ಯೋನ್ಯತೆಯೂ ಪ್ರೋತ್ಸಾಹವೂ ಇಲ್ಲದೆ, ಈ ರೀತಿಯ ನಿರ್ಧಾರವನ್ನು ಕೈಗೊಂಡದ್ದು ನಿಜಕ್ಕೂ ಶ್ಲಾಘನೀಯವಲ್ಲವೇ? ಯೋಬನು ನ್ಯಾಯತೀರ್ಪಿನ ದಿನದಲ್ಲಿ ಎದ್ದು ಬಂದು, ಈ ಜನಾಂಗದ ಕಾಮುಕತೆಯನ್ನು ಮತ್ತು ಅದರ ಪಾಪವನ್ನು ಖಂಡಿಸಲಿದ್ದಾನೆ.

ಯೋಸೇಫನ ಜೀವನವು ನೀವು ಅನುಸರಿಸಲು ಯೋಗ್ಯವಾದ ಇನ್ನೊಂದು ಶ್ರೇಷ್ಠ ಮಾದರಿಯಾಗಿರುತ್ತದೆ. ಆತನು ತನ್ನ ಹೆತ್ತವರಿಂದ ಅಗಲಿಸಲ್ಪಟ್ಟು ಬಹಳ ದೂರದಲ್ಲಿ ಜೀವಿಸುತ್ತಿದ್ದ ಒಬ್ಬ ಯೌವನಸ್ಥನಾಗಿದ್ದನು. ಹಾಗಿದ್ದರೂ ಒಬ್ಬ ಅಧರ್ಮಿ ಸ್ತ್ರೀಯು ತನ್ನನ್ನು ಹಗಲಿರುಳು ಶೋಧಿಸಿದಾಗ, ಆತನು ನಿರಂತರವಾಗಿ ಆಕೆಯನ್ನು ದೂರ ಇರಿಸಿದನು ಮತ್ತು ಆಕೆಯ ಬಳಿಯಿಂದ ಓಡಿಹೋದನು, ಏಕೆಂದರೆ ದೇವರ ವಿರುದ್ಧವಾಗಿ ಪಾಪಮಾಡೆನು, ಎಂಬ ಭಯ ಅವನಲ್ಲಿ ಇತ್ತು (ಆದಿ. 39:9) .

ಯೋಬ ಮತ್ತು ಯೋಸೇಫರ ಉದಾಹರಣೆಗಳು ನಮಗೆ ತೋರಿಸುವುದು ಏನೆಂದರೆ, ದೇವರ ಭಯ ನಮ್ಮಲ್ಲಿದ್ದರೆ, ನಮ್ಮನ್ನು ಈ ಲೈಂಗಿಕ ಕಾಮ ಮತ್ತು ವ್ಯಭಿಚಾರದ ಘೋರ ಪಾಪದಿಂದ ದೂರವಿರಿಸಲು ಅದೊಂದೇ ಸಾಕಾಗುತ್ತದೆ. "ಕರ್ತರ ಭಯ" ಎಂಬುದು ಜ್ಞಾನವೆಂಬ ಪಾಠಶಾಲೆಯ ಮೊದಲನೆಯ ಪಾಠವಾಗಿದೆ.

ನೀವು "ಈ ಕಾರ್ಯಗಳನ್ನು ಸಾಧಿಸಿಕೊಳ್ಳುವುದರಲ್ಲಿ ಆಸಕ್ತಿವಹಿಸಿ ಕಾರ್ಯನಿರತರಾಗಿದ್ದರೆ, ಆಗ ಅದರ ಮೂಲಕ ನಿಮ್ಮ ಅಭಿವೃದ್ಧಿ ಎಲ್ಲರಿಗೂ ವ್ಯಕ್ತವಾಗುತ್ತದೆ" (1 ತಿಮೊ. 4:15,16).