WFTW Body: 

ದೇವರು ಯಾವಾಗಲೂ ಪ್ರತಿಯೊಂದು ಪ್ರದೇಶದಲ್ಲಿ ತನಗೋಸ್ಕರ ಎದ್ದು ನಿಲ್ಲುವಂತ ಒಬ್ಬನಾದರೂ ವ್ಯಕ್ತಿ ಸಿಗುತ್ತಾನೋ, ಎಂದು ಹುಡುಕುತ್ತಿದ್ದಾರೆ (ನಾವು ಯೆಹೆಜೇಲ್ಕನು 22:30' ರಲ್ಲಿ ಇದನ್ನು ಓದುತ್ತೇವೆ). ಅವರಿಗೆ ಒಂದು ಸಂದರ್ಭದಲ್ಲಿ ಒಬ್ಬ ಹನೋಕನು ಸಿಕ್ಕಿದನು, ಮತ್ತೊಮ್ಮೆ ಒಬ್ಬ ನೋಹನು, ಅನಂತರ ಒಬ್ಬ ಅಬ್ರಹಾಮನು, ಮತ್ತು ಇದರ ನಂತರ ಒಬ್ಬ ಎಲೀಯನು ಮತ್ತು ಒಬ್ಬ ಸ್ನಾನಿಕನಾದ ಯೋಹಾನನು, ಹೀಗೆ ಕೆಲವರು ಸಿಕ್ಕಿದರು.

ಬಾಬೆಲಿನಲ್ಲಿ ಅವರು ಒಬ್ಬ ದಾನಿಯೇಲನನ್ನು ಕಂಡುಕೊಂಡರು. ಸತ್ಯವೇದವು ’ದಾನಿಯೇಲನು 1:7'ರಲ್ಲಿ ದಾನಿಯೇಲನ ಮೂವರು ಸ್ನೇಹಿತರಾದ ಹನನ್ಯ, ಮೀಶಾಯೇಲ ಮತ್ತು ಅಜರ್ಯರ ಹೆಸರುಗಳನ್ನು ಉಲ್ಲೇಖಿಸುತ್ತದೆ (ಮುಂದೆ ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ ಎಂಬ ಹೊಸ ಹೆಸರುಗಳನ್ನು ಇವರಿಗೆ ಕೊಡಲಾಯಿತು), ಆದಾಗ್ಯೂ ’ದಾನಿಯೇಲನು 1:8'ರ ವಚನವು ಹೇಳುವಂತೆ, ದಾನಿಯೇಲನೊಬ್ಬನೇ "ತಾನು ತನ್ನನ್ನು ಅಶುದ್ಧ ಪಡಿಸಿಕೊಳ್ಳಬಾರದೆಂದು ತನ್ನ ಹೃದಯದಲ್ಲಿ ನಿಶ್ಚಯಿಸಿಕೊಂಡನು". ಇದರ ನಂತರವೇ ಆ ಉಳಿದ ಮೂವರು ಯುವಕರಿಗೂ ಸಹ ದೃಢವಾಗಿ ನಿಲ್ಲುವ ಧೈರ್ಯ ಬಂತು. ಹನನ್ಯ, ಮೀಶಾಯೇಲ ಮತ್ತು ಅಜರ್ಯ ಇವರುಗಳಂತೆಯೇ, ಜಗತ್ತಿನ ಹಲವೆಡೆ ಇರುವ ವಿಶ್ವಾಸಿಗಳಲ್ಲಿ ಅನೇಕರು ಕರ್ತನಿಗಾಗಿ ತಾವಾಗಿಯೇ ದೃಢವಾಗಿ ನಿಲ್ಲುವ ಧೈರ್ಯವಿಲ್ಲದವರು ಆಗಿದ್ದಾರೆ; ಆದರೆ ತಮ್ಮ ಮಧ್ಯದಲ್ಲಿ ಒಬ್ಬ ದಾನಿಯೇಲನು ಮೇಲೆದ್ದು ಕರ್ತನಿಗಾಗಿ ಒಂದು ದೃಢ ನಿಲುವನ್ನು ತೆಗೆದುಕೊಂಡಾಗ, ಇವರೂ ಸಹ ಮೇಲೆದ್ದು ಗಟ್ಟಿಯಾಗಿ ನಿಲ್ಲಲು ಸಿದ್ಧರಾಗುತ್ತಾರೆ. ಹಾಗಾಗಿ ನೀವು ಯಾವುದೇ ಸ್ಥಳದಲ್ಲಿ ಇದ್ದರೂ ಸಹ, ಕರ್ತನಿಗಾಗಿ ಒಬ್ಬ ’ದಾನಿಯೇಲ’ನಾಗಲು ನಿರ್ಧರಿಸಿರಿ.

ಇದೇ ವಿಧವಾದ, ಆದರೆ ಇದಕ್ಕೆ ವ್ಯತಿರಿಕ್ತವಾದ ಘಟನೆಯೊಂದು ಬೇರೊಂದು ಸಂದರ್ಭದಲ್ಲಿ - ಅಂದರೆ ಒಂದು ದುಷ್ಟತನದ ವಾತಾವರಣದಲ್ಲಿ - ನಡೆದದ್ದನ್ನು ನಾವು ಕಾಣುತ್ತೇವೆ. ಪರಲೋಕದ ಸಮಸ್ತ ದೇವದೂತರ ನಡುವೆ, ಆರಂಭದಲ್ಲಿ ಅನೇಕ ದೇವದೂತರಲ್ಲಿ ಒಳಗೊಳಗೇ ಬಹುಶಃ ಯಾವುದೋ ಅಸಮಾಧಾನ ಇದ್ದಿರಬೇಕು. ಆದರೆ ತಮ್ಮ ನಡುವೆ ಒಬ್ಬ ’ಲೂಸಿಫರನು’ ಎದ್ದು ನಿಲ್ಲುವದಕ್ಕೆ ಮೊದಲು, ತಾವಾಗಿಯೇ ಎದ್ದು ನಿಂತು ಒಂದು ದಂಗೆಯನ್ನು ಆರಂಭಿಸುವಷ್ಟು ಧೈರ್ಯ ಅವರಲ್ಲಿ ಇರಲಿಲ್ಲ. ಲೂಸಿಫರನು (ದೇವದೂತರ ಮುಖ್ಯಸ್ಥನು) ತನ್ನ ಬಂಡಾಯವನ್ನು ಪ್ರಕಟಪಡಿಸಿದ ಕೂಡಲೇ, ದೇವದೂತರಲ್ಲಿ ಮೂರನೇ ಒಂದು ಭಾಗವು ಆತನೊಂದಿಗೆ ಸೇರಿಕೊಂಡಿತು (ಪ್ರಕಟನೆ 12:4). ದೇವರು ಲೂಸಿಫರನೊಂದಿಗೆ ಈ ಕೋಟ್ಯಾಂತರ ದೇವದೂತರನ್ನೂ ಹೊರಹಾಕಿದರು - ಮತ್ತು ಈ ದೆವ್ವಗಳು ಇಂದು ಜನರನ್ನು ಸ್ವಾಧೀನಪಡಿಸಿಕೊಳ್ಳುತ್ತವೆ (ಪೀಡಿಸುತ್ತವೆ). ನಿತ್ಯತ್ವದಿಂದ ಸ್ಥಾಪಿಸಲ್ಪಟ್ಟ ದೇವರ ಮೂಲಸಿದ್ಧಾಂತದ ಪ್ರಕಾರ ದೇವರು "ಎಲ್ಲೆಲ್ಲೂ ಅತಿಗರ್ವದಿಂದ ಮೆರೆಯುವವರನ್ನು ತೊಲಗಿಸುತ್ತಾರೆ ಮತ್ತು ದೀನ ದರಿದ್ರ ಜನರನ್ನು ಉಳಿಸುತ್ತಾರೆ" (ಚೆಫನ್ಯನು 3:11,12). ಈ ರೀತಿಯಾಗಿ ಅವರು ಪುರಾತನ ಕಾಲದಲ್ಲಿ ಪರಲೋಕವನ್ನು ಶುದ್ಧೀಕರಿಸಿದರು - ಮತ್ತು ಈ ದಿನ ಅವರು ದೇವಸಭೆಯನ್ನೂ ಸಹ ಇದೇ ರೀತಿಯಾಗಿ ಶುಚಿಗೊಳಿಸುತ್ತಾರೆ.

ಜಗತ್ತಿನಲ್ಲಿ ಈಗ ಒಂದೇ ಸಮಯದಲ್ಲಿ ಎರಡು ಚಳುವಳಿಗಳು ನಡೆಯುತ್ತಿವೆ: ’ದಾನಿಯೇಲನಂತವರು’ ಕರ್ತನಿಗಾಗಿ ಎದ್ದು ನಿಲ್ಲಲು ಸಿದ್ಧರಾಗಿರುವ ಇಬ್ಬರು ಅಥವ ಮೂವರನ್ನು ಒಟ್ಟುಗೂಡಿಸುತ್ತಿದ್ದಾರೆ; ಮತ್ತು ’ಲೂಸಿಫರನಂತವರು’ ಕೋಟ್ಯಾಂತರ ಜನರನ್ನು ಅಶುದ್ಧತೆಗೆ, ಮೇಲಧಿಕಾರಿಗಳ ವಿರುದ್ಧ ದಂಗೆ ಏಳುವುದಕ್ಕೆ ಮತ್ತು ದೇವರ ಆಜ್ಞೆಗಳಿಗೆ ಅವಿಧೇಯರಾಗುವುದಕ್ಕೆ ಒಟ್ಟುಗೂಡಿಸುತ್ತಿದ್ದಾರೆ. ಆದರೂ ’ದಾನಿಯೇಲರು’ಗಳ ಜೊತೆಗೂಡಿದ ಇಬ್ಬರು ಅಥವಾ ಮೂರು ಮಂದಿಯೇ ಅಂತ್ಯದಲ್ಲಿ ಜಯಶಾಲಿಗಳಾಗುತ್ತಾರೆ - ಏಕೆಂದರೆ ಯಾವಾಗಲೂ ಕೇವಲ ಒಬ್ಬ ವ್ಯಕ್ತಿಯು ದೇವರೊಟ್ಟಿಗೆ ಸೇರಿಕೊಂಡಾಗ, ಆತನದ್ದೇ ಬಹುಮತವಾಗಿರುತ್ತದೆ. ದೇವರಿಗೆ ಒಂದು ಸ್ಥಳದಲ್ಲಿ ಒಬ್ಬ ’ದಾನಿಯೇಲನು’ ಸಿಗದೇ ಹೋದರೆ, ಆಗ ಪಿಶಾಚನು ಅಲ್ಲಿರುವ ಜನರನ್ನು ತನ್ನ ಮಾರ್ಗಕ್ಕೆ ತಿರುಗಿಸಲಿಕ್ಕಾಗಿ ಯಾರನ್ನಾದರೂ ಆರಿಸಿಕೊಳ್ಳುವನು. ಆದುದರಿಂದ ನೀನಿರುವ ಸ್ಥಳದಲ್ಲಿ ನೀನು ದೇವರಿಗಾಗಿ ಒಬ್ಬ ದಾನಿಯೇಲನಾಗುವುದು ಅತೀ ಅವಶ್ಯವಾಗಿದೆ - ಇದನ್ನು ನೀನು ಆರಂಭಿಸುವುದು ಹೇಗೆಂದರೆ, ದೇವರ ಅತಿ ಸಣ್ಣ ಆಜ್ಞೆಗೂ ಅವಿಧೇಯನಾಗಿ ನಿನ್ನನ್ನು ಅಶುದ್ಧ ಪಡಿಸಿಕೊಳ್ಳುವುದಿಲ್ಲವೆಂದೂ, ಮತ್ತು ಸಿಂಹದ ಗುಹೆಗೆ ಹಾಕಲ್ಪಟ್ಟರೂ ಸಹ ನೀನು ದೇವರಿಗಾಗಿ ಒಂದು ನಿಲುವನ್ನು ತೆಗೆದುಕೊಳ್ಳುವುದಾಗಿಯೂ ನಿನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೊಳ್ಳುವುದರ ಮೂಲಕ.

ಕರ್ತನು ನಿನಗೆ ಕೃಪೆಯನ್ನೂ, ಶಕ್ತಿಯನ್ನೂ ಮತ್ತು ಜ್ಞಾನವನ್ನೂ ಕೊಡಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಬಹುಶಃ ನಿನಗೆ ಪರಿಚಿತವಾಗಿರುವ ಒಂದು ಪ್ರಾರ್ಥನೆಯನ್ನು ಸ್ವಲ್ಪ ಬದಲಾಯಿಸಿ ನೀನು ಈ ರೀತಿ ಪ್ರಾರ್ಥಿಸಬೇಕು: "ಕರ್ತನೇ, ನೀನು ಇಷ್ಟಪಡದಂತ ಸಂಗತಿಗಳನ್ನು ನಿರಾಕರಿಸಲು ನನಗೆ ಧೈರ್ಯವನ್ನೂ, ನಾನು ಮಾಡಬೇಕೆಂದು ನೀನು ಬಯಸುವಂತ ಸಂಗತಿಗಳನ್ನು ಮಾಡಲು ನನಗೆ ಶಕ್ತಿಯನ್ನೂ, ಮತ್ತು ಇವೆರಡರ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವ ಜ್ಞಾನವನ್ನೂ ನನಗೆ ದಯಪಾಲಿಸು."