WFTW Body: 

’ರೋಮಾಪುರದ ಪತ್ರಿಕೆಯ 8ನೇ ಅಧ್ಯಾಯ’ ಆತ್ಮನಲ್ಲಿ ಜೀವಿಸುವುದರ ಕುರಿತಾಗಿದೆ. ನಾವು ಪವಿತ್ರಾತ್ಮನಿಗೆ ಅಧೀನರಾಗಿ ಇಂತಹ ಜೀವಿತವನ್ನು ಜೀವಿಸುವಾಗ, ನಮ್ಮ ಪರಲೋಕದ ತಂದೆಯು ನಮ್ಮ ನಿತ್ಯತ್ವದ ಒಳಿತಿಗಾಗಿ, ನಮ್ಮ ಜೀವಿತದ ಪ್ರತಿಯೊಂದು ಸನ್ನಿವೇಶವೂ ಕಾರ್ಯಗತಗೊಳ್ಳಲು ಅನುಕೂಲವಾಗುವಂತೆ ತಮ್ಮ ಕಾರ್ಯವನ್ನು ಆರಂಭಿಸುತ್ತಾರೆ. ಇತರರು ನಮಗೆ ಕೇಡು ಮಾಡಲು ಪ್ರಯತ್ನಿಸಿದರೂ ಸಹ, ದೇವರು ಅದನ್ನು ನಮ್ಮ ಒಳಿತಿಗಾಗಿ ಕೆಲಸ ಮಾಡುವಂತೆ ಮಾಡುತ್ತಾರೆ ಮತ್ತು ತನ್ನ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು, ತನ್ನನ್ನು ಪ್ರೀತಿಸುವವರ ಒಳ್ಳೇಯದಕ್ಕಾಗಿಯೇ, ಎಲ್ಲಾ ಕಾರ್ಯಗಳನ್ನು ಒಟ್ಟಾಗಿ ಮಾಡುತ್ತಾರೆ ಎಂಬುದು ನಮಗೆ ತಿಳಿದಿದೆ (ರೋಮಾ.8:28). ದೇವರು ಯಾರನ್ನು ತನ್ನವರೆಂದು ಮೊದಲು ತಿಳಿದುಕೊಂಡರೋ, ಅವರು ತನ್ನ ಮಗನ ಸಾರೂಪ್ಯಕ್ಕೆ ಬರುವಂತೆ ಮೊದಲೇ ನೇಮಿಸಿದರು ಮತ್ತು ಹೀಗೆ ತನ್ನ ಚೊಚ್ಚಲು ಮಗನಾದ ಯೇಸು ಕ್ರಿಸ್ತರನ್ನು ಅನೇಕ ಮಂದಿ ಸಹೋದರ-ಸಹೋದರಿಯರಲ್ಲಿ ಹಿರಿಯರಾಗುವಂತೆ ಮಾಡಿದರು (ರೋಮಾ.8:29). ಇದು ನಿಜವಾಗಿಯೂ ಒಂದು ಅದ್ಭುತವಾದ ಸುವಾರ್ತೆಯಾಗಿದೆ! ರೋಮಾಪುರದವರ ಪತ್ರಿಕೆಯ 8:28ರ ವಚನವು ಹೊಸ ಒಡಂಬಡಿಕೆಯ ಅತ್ಯಂತ ಅದ್ಭುತ ವಾಗ್ದಾನಗಳಲ್ಲಿ ಒಂದಾಗಿದೆ ಮತ್ತು ಈ ವಾಗ್ದಾನವು, ನಾವು ಎದುರಿಸುವ ಪ್ರತಿಯೊಂದು ಸನ್ನಿವೇಶವನ್ನು ಸಂಪೂರ್ಣವಾಗಿ ಮತ್ತು ನಿಶ್ಚಯವಾಗಿ ಆವರಿಸುತ್ತದೆ. ಹಾಗಾಗಿ ಕರ್ತನಿಗೆ ಹೀಗೆ ಹೇಳಿರಿ, "ಕರ್ತನೇ, ನನಗೆ ಈ ಲೋಕದಲ್ಲಿ ನಿನ್ನ ಚಿತ್ತವನ್ನು ಪೂರೈಸಿ, ಸ್ವತಃ ನೀನು ಜೀವಿಸಿದಂತೆ ಜೀವಿಸುವುದರ ಹೊರತಾಗಿ ಇನ್ಯಾವ ಅಭಿಲಾಷೆಯೂ ಇಲ್ಲ. ನಾನು ಹೆಚ್ಚು ಹಣ ಸಂಪಾದಿಸುವುದನ್ನು, ಅಥವಾ ಮಾನ್ಯತೆಯನ್ನು, ಅಥವಾ ಪ್ರಖ್ಯಾತಿಯನ್ನು ಅಥವಾ ಸೌಕರ್ಯವನ್ನು ಆಶಿಸುವುದಿಲ್ಲ. ನಾನು ಈ ಲೋಕದಲ್ಲಿ ಸ್ವಂತಕ್ಕಾಗಿ ಯಾವುದನ್ನೂ ಬಯಸುವುದಿಲ್ಲ. ನಾನು ಪ್ರತಿದಿನವೂ ನಿನ್ನನ್ನು ಮೆಚ್ಚಿಸಲು ಬಯಸುತ್ತೇನೆ. ಇದಕ್ಕಾಗಿ ಈ ಎಲ್ಲಾ ವಿಷಯಗಳಲ್ಲಿ ನಾನು ದಿನನಿತ್ಯವೂ ನನ್ನನ್ನು ನ್ಯಾಯತೀರ್ಪು ಮಾಡಿಕೊಳ್ಳುತ್ತೇನೆ." ಈ ರೀತಿ ನೀವು ಹೇಳುವಾಗ, ಎಲ್ಲಾ ಸಂಗತಿಗಳು ನಿಮ್ಮ ಒಳ್ಳೆಯದಕ್ಕಾಗಿಯೇ ಕೆಲಸ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಮತ್ತು ಆ "ಒಳ್ಳೆಯದು" ಏನೆಂದು ಮುಂದಿನ ವಚನದಲ್ಲಿ ಉಲ್ಲೇಖಿಸಲಾಗಿದೆ - ರೋಮಾಪುರದವರ ಪತ್ರಿಕೆಯ 8:29 - ನೀವು ಸ್ವತಃ ಯೇಸುವಿನ ಸಾರೂಪ್ಯವನ್ನು ಹೆಚ್ಚು ಹೆಚ್ಚಾಗಿ ಹೊಂದುತ್ತೀರಿ. ಇದಕ್ಕಿಂತ ಉತ್ತಮವಾದ ಒಳ್ಳೆಯ ಕಾರ್ಯವನ್ನು ಮಹಾ ಪರಾಕ್ರಮಿಯಾದ ದೇವರು ಮಾಡಲಾರರು.

ನಾವು ಎಫೆಸದ ಪತ್ರಿಕೆಯ 1:4,5ರಲ್ಲಿ, "ದೇವರು ತನ್ನ ಪ್ರೀತಿಯಲ್ಲಿ ನಮ್ಮನ್ನು ಮೊದಲೇ ಕ್ರಿಸ್ತನಲ್ಲಿ ಆರಿಸಿಕೊಂಡರು," ಎಂದು ಓದಿಕೊಳ್ಳುತ್ತೇವೆ. "ಮುಂಚಿತವಾಗಿ ಆರಿಸಿಕೊಳ್ಳುವುದು" ಎನ್ನುವ ಪದವು ಬಹಳ ಹೆಚ್ಚಾಗಿ ಅಪಾರ್ಥ ಮಾಡಿಕೊಳ್ಳಲಾದ ಇನ್ನೊಂದು ಪದವಾಗಿದೆ. ದೇವರು ನಮ್ಮನ್ನು ಮುಂಚಿತವಾಗಿ ಯಾವುದಕ್ಕಾಗಿ ಆರಿಸಿಕೊಂಡರು? ಅದು ಪರಲೋಕಕ್ಕೆ ಅಥವಾ ನರಕಕ್ಕೆ ಹೋಗುವದಕ್ಕಾಗಿಯೇ? ಇಲ್ಲ. ಅವರು ಯಾರನ್ನೂ ಪರಲೋಕಕ್ಕೆ ಅಥವಾ ನರಕಕ್ಕೆ ಹೋಗುವಂತೆ ಮುಂಚಿತವಾಗಿ ನೇಮಿಸುವುದಿಲ್ಲ. ಮೇಲಿನ ವಚನದಲ್ಲಿ ಹೇಳಿರುವಂತೆ, "ಅವರು ತಮ್ಮ ದಯಾಪೂರ್ವಕವಾದ ಚಿತ್ತಾನುಸಾರ ಮೊದಲೇ ಸಂಕಲ್ಪ ಮಾಡಿದ್ದಂತೆ, ನಮ್ಮನ್ನು ಕ್ರಿಸ್ತನಲ್ಲಿ ತನ್ನ ಪುತ್ರರನ್ನಾಗಿ ಸ್ವೀಕರಿಸಿದರು." ಅವರು ನಮ್ಮನ್ನು ಕ್ರಿಸ್ತನಲ್ಲಿ ಮೊದಲೇ ಸ್ವೀಕರಿಸಿದ್ದು ಬೆಳವಣಿಗೆ ಹೊಂದಿದ ಪುತ್ರರನ್ನಾಗಿಯೇ ಹೊರತು ಕೂಸುಗಳಾಗಿರುವ ಕ್ರೈಸ್ತರಾಗಿ ಅಲ್ಲ. ನೀವು ಪರಲೋಕದ ತಂದೆಯ ಕೆಲಸಗಳಲ್ಲಿ ಆಸಕ್ತನಾದ, ಜವಾಬ್ದಾರನಾದ ಒಬ್ಬ ಮಗನಾಗಿರಬೇಕು. ಹಾಗಾಗಿ ತಂದೆಯ ಕೆಲಸಗಳ ವಿಷಯವಾಗಿ ಜವಾಬ್ದಾರಿಯುತ ಮನೋಭಾವವಿರುವ ಒಬ್ಬ ಮಗನಂತೆ ನೀವು ನಡೆದುಕೊಳ್ಳಿರಿ.

ಕೊಲೊಸ್ಸೆಯವರ ಪತ್ರಿಕೆಯ 1:28ರಲ್ಲಿ, ಅಪೊಸ್ತಲ ಪೌಲನು, "ನಾವು ಕ್ರಿಸ್ತನನ್ನು ಪ್ರಸಿದ್ಧಿ ಪಡಿಸುವವರಾಗಿ, ಸಕಲರಿಗೂ ಬುದ್ಧಿ ಹೇಳುತ್ತಾ ಸರ್ವರಿಗೂ ಪೂರ್ಣಜ್ಞಾನವನ್ನು ಉಪದೇಶಿಸುತ್ತಾ, ದೇವರ ಮುಂದೆ ಎಲ್ಲರನ್ನು ಕ್ರಿಸ್ತನಲ್ಲಿ ಪ್ರವೀಣರನ್ನಾಗಿ ನಿಲ್ಲಿಸುವದಕ್ಕೆ ಪ್ರಯತ್ನಿಸುತ್ತಿದ್ದೇವೆ," ಎಂದು ಹೇಳುತ್ತಾನೆ. ಇದು ಸಕಲ ಜ್ಞಾನದೊಂದಿಗೆ ಕೂಡಿದ ಪ್ರವಾದನೆ ಮತ್ತು ಬೋಧನೆಯಾಗಿದೆ. ಒಟ್ಟಾರೆ ಪೌಲನ ಆತ್ಮಿಕ ಗುರಿ ಏನಾಗಿತ್ತೆಂದರೆ, ಪ್ರತಿಯೊಬ್ಬರನ್ನು ಕ್ರಿಸ್ತನಲ್ಲಿ ಪ್ರವೀಣರನ್ನಾಗಿ ಒಪ್ಪಿಸಿಕೊಡುವುದಾಗಿತ್ತು. ಒಂದು ವೇಳೆ ಪೌಲನ ಸಭೆಯಲ್ಲಿ 100 ಜನರಿದ್ದರೆ, ಪೌಲನು ಆ ಎಲ್ಲಾ 100 ಮಂದಿ - ಪ್ರತಿಯೊಬ್ಬ ಸಹೋದರ ಮತ್ತು ಸಹೋದರಿಯು - ಕ್ರಿಸ್ತನಲ್ಲಿ ಪ್ರವೀಣರಾಗುತ್ತರೆಂದು ಖಚಿತ ಪಡಿಸುವದಕ್ಕೆ ತಾನು ಕೈಗೊಳ್ಳ ಬಹುದಾದ ಸಕಲ ಪ್ರಯತ್ನವನ್ನು ಮಾಡಲಿದ್ದನು. ಆತನು ಅವರನ್ನು ಎಚ್ಚರಿಸುತ್ತಾ, ಅವರಿಗೆ ಬುದ್ಧಿ ಹೇಳುತ್ತಾ ಮತ್ತು ಅವರಿಗೆ ಪೂರ್ಣಜ್ಞಾನವನ್ನು ಉಪದೇಶಿಸುತ್ತಿದ್ದನು, ಏಕೆಂದರೆ ಮುಂದೆ ಒಂದು ದಿನ ಆತನು ಅವರೆಲ್ಲರನ್ನು ದೇವರ ಮುಂದೆ ಒಪ್ಪಿಸಿ ಕೊಡಬೇಕಾಗಿತ್ತು. ಇಂತಹ ಭಾರವನ್ನು ಹೊಂದಿರುವ ಪಾಸ್ಟರ್‌ಗಳು ಮತ್ತು ಕುರುಬರು ಕೇವಲ ಕೆಲವು ಮಂದಿ ಇದ್ದಾರೆ. ಹೆಚ್ಚಿನವರು ಕೇವಲ ಪ್ರಸಂಗ ಮಾಡುತ್ತಾರೆ ಅಷ್ಟೇ. ಆದರೆ ಪೌಲನು ತನ್ನ ಸಭೆಯ ಒಬ್ಬೊಬ್ಬ ವ್ಯಕ್ತಿಯೂ ಆತ್ಮಿಕ ಬೆಳವಣಿಗೆಗೆ ಬರುವಂತೆ ಎಲ್ಲರನ್ನು ನಡೆಸುವ ಒಂದು ಭಾರವನ್ನು ಹೊಂದಿದ್ದನು. ಒಂದು ಕ್ರೈಸ್ತಸಭೆಯ ಒಬ್ಬ ಹಿರಿಯನಾಗಿರುವ ಜವಾಬ್ದಾರಿಯನ್ನು ನೀವು ಹಗುರವಾಗಿ ತೆಗೆದುಕೊಳ್ಳಬಾರದು. ನಾನು 25 ವರ್ಷಗಳ ಕಾಲ ಬೆಂಗಳೂರಿನ ನಮ್ಮ ಸಭೆಯಲ್ಲಿ ಸಭಾಹಿರಿಯನಾಗಿದ್ದಾಗ, ಸಭೆಯ ಪ್ರತಿಯೊಬ್ಬ ವಯಸ್ಕನ ಆತ್ಮಿಕ ಸ್ಥಿತಿಯನ್ನು ತಿಳಿದುಕೊಳ್ಳಲು ಪ್ರಯತ್ನಿಸಿದೆನು, ಮತ್ತು ನಾನು ಅವರನ್ನು ತಿದ್ದಿ, ಗದರಿಸಿ, ಅವರಿಗೆ ಬುದ್ಧಿವಾದವನ್ನು, ಪ್ರೋತ್ಸಾಹದ ಮತ್ತು ಕಠಿಣವಾದ ಮಾತುಗಳನ್ನು ಹೇಳಿ, ಆ ಮೂಲಕ ಅವರನ್ನು ಒಂದು ದಿನ ಕ್ರಿಸ್ತನಲ್ಲಿ ಪರಿಪೂರ್ಣರನ್ನಾಗಿ ದೇವರ ಮುಂದೆ ಒಪ್ಪಿಸಬೇಕೆಂಬ ಉದ್ದೇಶ ನನ್ನದಾಗಿತ್ತು. ನಾನು ಅವರಿಂದ ನನ್ನ ಸ್ವಂತಕ್ಕಾಗಿ ಏನನ್ನೂ ಬಯಸಲಿಲ್ಲ. ಅವರಿಗಾಗಿ, ಅಂದರೆ ಕ್ರಿಸ್ತನ ದೇಹದ ಸಲುವಾಗಿ, ನಾನು ನನ್ನ ಖಾಸಗಿ ಜೀವಿತದಲ್ಲಿ ಬಹಳಷ್ಟು ಜಜ್ಜಲ್ಪಟ್ಟೆನು. ದೇವರು ನನ್ನೊಂದಿಗೆ ಎಷ್ಟೋ ವಿಧವಾಗಿ ವ್ಯವಹರಿಸಿದರು ಮತ್ತು ಆ ಮೂಲಕವಾಗಿ ಇತರರು ನನ್ನಿಂದ ಕ್ರಿಸ್ತನ ಸುವಾಸನೆಯನ್ನು ಪಡೆದು, ಆಶೀರ್ವಾದ ಹೊಂದುವಂತೆ ಮಾಡಿದರು. ಇದು ನಿಜವಾದ ಕ್ರೈಸ್ತ ಸೇವೆಯಾಗಿದೆ. ಕೊಲೊಸ್ಸೆಯವರ ಪತ್ರಿಕೆಯ 1:29ರಲ್ಲಿ, ಅಪೊಸ್ತಲ ಪೌಲನು ಮುಂದುವರಿದು, "ಇದಕ್ಕೋಸ್ಕರವೇ ನಾನು ಹೋರಾಡುತ್ತೇನೆ, ಪ್ರಯಾಸಪಟ್ಟು ಶ್ರಮಿಸುತ್ತೇನೆ," ಎನ್ನುತ್ತಾನೆ. ಆತನು ಹೇಗೆ ಪ್ರಯಾಸಪಟ್ಟನು? "ಪವಿತ್ರಾತ್ಮನ ಮಹಾಶಕ್ತಿಯಿಂದ - ದೇವರು ಮೊದಲು ನನ್ನಲ್ಲಿ ತನ್ನ ಅಪಾರ ಬಲವನ್ನು ಪ್ರಯೋಗಿಸಿ ಕಾರ್ಯ ಸಾಧಿಸುತ್ತಾರೆ." ಯಾವಾಗಲೂ ದೇವರು ತನ್ನ ಪವಿತ್ರಾತ್ಮನ ಮೂಲಕ ಕಾರ್ಯವನ್ನು ಮೊದಲು ನಮ್ಮೊಳಗೆ ಸಾಧಿಸಬೇಕು ಮತ್ತು ಇದರ ನಂತರವೇ ಅವರು ನಮ್ಮ ಮೂಲಕ ಇತರರನ್ನು ಆಶೀರ್ವದಿಸಲು ಕೆಲಸ ಮಾಡುತ್ತಾರೆ. ನಿಮ್ಮಲ್ಲಿ ಸಭೆಯ ಸೇವೆಯನ್ನು ಮಾಡುವಂಥವರು, ಮೇಲಿನ ಎರಡು ವಚನಗಳನ್ನು ನಿಮ್ಮ ಗುರಿಯಾಗಿ ಇರಿಸಿಕೊಳ್ಳಿರಿ, ದೇವರ ಮುಂದೆ ಪ್ರತಿಯೊಬ್ಬ ವ್ಯಕ್ತಿಯನ್ನು ಕ್ರಿಸ್ತನಲ್ಲಿ ಪ್ರವೀಣನಾಗಿ ನಿಲ್ಲಿಸುವುದು (ಕೊಲೊ.1:28) ಮತ್ತು ಈ ಗುರಿಯನ್ನು ಸಾಧಿಸುವುದಕ್ಕಾಗಿ ಪವಿತ್ರಾತ್ಮನಿಂದ ತುಂಬಲ್ಪಡುವುದು (ಕೊಲೊ.1:29).

ಎಫೆಸದ ಪತ್ರಿಕೆ 4:13ರಲ್ಲಿ, ಅಪೊಸ್ತಲ ಪೌಲನು ಹೇಳುವಂತೆ ನಾವು ಕ್ರಮಬದ್ಧವಾಗಿ ಬೆಳೆಯುತ್ತಾ, "ಪ್ರವೀಣತೆಗೆ ಬಂದವರಾಗಿ, ಕ್ರಿಸ್ತನ ಪರಿಪೂರ್ಣತೆಯೆಂಬ ಪ್ರಮಾಣವನ್ನು ಮುಟ್ಟುತ್ತೇವೆ". ನಮ್ಮ ಗುರಿ ಏನಾಗಿರಬೇಕು ಎಂದರೆ, ನಾವು ಸ್ವತಃ ಬೆಳೆಯುವುದು ಮತ್ತು ಇತರರು ಈ ಪರಿಪೂರ್ಣತೆಗೆ ಬರುವದಕ್ಕೆ ಸಹಾಯವನ್ನು ಒದಗಿಸುವುದು. ನಾವು ಚಿಕ್ಕ ಕೂಸುಗಳಂತೆ ಮುಂದುವರಿಯಬಾರದು ಮತ್ತು "ದುರ್ಜನರ ವಂಚನೆಗೂ ದುರ್ಬೋಧಕರ ಕುಯುಕ್ತಿಗೂ ಒಳಬಿದ್ದು, ನಾನಾ ಉಪದೇಶಗಳಿಂದ ಕಂಗೆಟ್ಟು, ಗಾಳಿಯಿಂದ ಅತ್ತಿತ್ತ ನೂಕಿಸಿಕೊಂಡು ಹೋಗುವವರ ಹಾಗಿರಬಾರದು" (ಎಫೆಸ. 4:14).

ಎಫೆಸದ ಪತ್ರಿಕೆ 4:15ನೇ ವಚನ ನಮ್ಮನ್ನು ಕೇಳಿಕೊಳ್ಳುವಂತೆ, "ಪ್ರೀತಿಯಿಂದ ಸತ್ಯವನ್ನು ನುಡಿಯುತ್ತಾ ಬೆಳೆಯಿರಿ." ಈ ವಚನದಲ್ಲಿ ಸತ್ಯ ಮತ್ತು ಪ್ರೀತಿಯ ನಡುವೆ ಇರುವ ಸಮತೋಲನವನ್ನು ಗಮನಿಸಿರಿ. ನಾವು ಸತ್ಯವನ್ನು ನುಡಿಯಬೇಕೇ? ಹೌದು. ಯಾವಾಗಲೂ. ಆದರೆ ನಾವು ಇಷ್ಟ ಬಂದಂತೆ ಮಾತನಾಡುವುದಕ್ಕೆ ಅನುಮತಿ ಇದೆಯೇ? ಇಲ್ಲ. ನಾವು ಸತ್ಯವನ್ನು ನುಡಿಯುವಾಗ ಪ್ರೀತಿಯಿಂದ ನುಡಿಯಬೇಕು. ನೀವು ಪ್ರೀತಿಯಿಂದ ಸತ್ಯವನ್ನು ನುಡಿಯಲು ಸಾಧ್ಯವಾಗದಿದ್ದರೆ, ಜನರಿಗಾಗಿ ಸಾಕಷ್ಟು ಪ್ರೀತಿ ನಿಮ್ಮಲ್ಲಿ ಉಂಟಾಗುವ ತನಕ ನೀವು ತಡೆದು, ಆ ಮೇಲೆ ಅವರಿಗೆ ಸತ್ಯವನ್ನು ತಿಳಿಸಬೇಕು. ಪ್ರೀತಿಯೆಂಬ ಕಪ್ಪು ಹಲಗೆಯ ಮೇಲೆ ನೀವು ಸತ್ಯವೆಂಬ ಬಳಪದಿಂದ ಬರೆಯಬಹುದು. ಕಪ್ಪು ಹಲಗೆ ಇಲ್ಲದೇ ನೀವು ಬರೆಯಲು ಪ್ರಯತ್ನಿಸಿದರೆ, ಆಗ ನೀವು ಗಾಳಿಯಲ್ಲಿ ಬರೆದಂತೆ ಆಗುತ್ತದೆ. ನೀವು ಏನು ಬರೆಯುತ್ತಿದ್ದೀರೆಂದು ಯಾರಿಗೂ ಅರ್ಥವಾಗುವುದಿಲ್ಲ. ಯಾವಾಗಲೂ ಸತ್ಯವನ್ನು ಪ್ರೀತಿಯಿಂದ ನುಡಿಯುವ ಮೂಲಕ - ಸಭೆಯ ವೇದಿಕೆಯ ಮೇಲೆ ಮತ್ತು ಖಾಸಗಿ ಸಂಭಾಷಣೆಯಲ್ಲಿ - ನಾವು "ಎಲ್ಲಾ ವಿಷಯಗಳಲ್ಲಿ ಬೆಳೆಯುತ್ತಾ, ಶಿರಸ್ಸಾಗಿರುವ ಕ್ರಿಸ್ತನಲ್ಲಿ ಐಕ್ಯತೆಯನ್ನು ಹೊಂದುತ್ತೇವೆ."

ಇಬ್ರಿಯರ ಪತ್ರಿಕೆಯ 6:1ರಲ್ಲಿ, ಪರಿಪೂರ್ಣತೆಯ ಕಡೆಗೆ ಸಾಗುತ್ತಾ ಹೋಗುವಂತೆ ಪ್ರೇರೆಪಿಸಲಾಗಿದೆ. ನಾವು ಇಬ್ರಿಯರ ಪತ್ರಿಕೆಯ 5ನೇ ಅಧ್ಯಾಯದಲ್ಲಿ, ಹಾಲು ಕುಡಿಯುವುದು ಮತ್ತು ಗಟ್ಟಿಯಾದ ಆಹಾರ ತಿನ್ನುವ ಒಂದು ಚಿತ್ರಣವನ್ನು ನೋಡುತ್ತೇವೆ. ಅನಂತರ ಉಲ್ಲೇಖಿಸಿರುವ ಈ ವಚನದಲ್ಲಿ ಇನ್ನೂ ಎರಡು ದೃಷ್ಟಾಂತಗಳು ಇವೆ. ಮೊದಲನೆಯದು, ಪ್ರಾಥಮಿಕ ಬೋಧನೆ ಮತ್ತು ಪ್ರೌಢ ಬೋಧನೆಯ ದೃಷ್ಟಾಂತವಾಗಿದೆ; ಅದರ ನಂತರ ಒಂದು ಕಟ್ಟಡದ ಅಸ್ತಿವಾರ ಹಾಗೂ ಅದರ ಮೇಲೆ ಕಟ್ಟಿರುವ ಕಟ್ಟಡದ ದೃಷ್ಟಾಂತವಿದೆ. ಇವೆಲ್ಲಾ ಉದಾಹರಣೆಗಳು, ಚಿಕ್ಕ ಕೂಸುಗಳು ಹಾಗೂ ಬೆಳೆದಿರುವಂತ ಕ್ರೈಸ್ತರ ನಡುವಿನ ವ್ಯತ್ಯಾಸವನ್ನು ತೋರಿಸುವುದಕ್ಕಾಗಿ ಕೊಡಲ್ಪಟ್ಟಿವೆ. ಶೋಧನೆಯ ಸಂದರ್ಭಗಳಲ್ಲಿ ಇವೆರಡರ ನಡುವಿನ ಅಂತರ ಪ್ರಕಟವಾಗುತ್ತದೆ. ಬೆಳೆದು ಪ್ರವೀಣನಾಗಿರುವ ದೇವಭಕ್ತನು ಶೋಧನೆಗೆ ಕ್ರಿಸ್ತನಂತೆ ಪ್ರತಿಕ್ರಿಯೆ ತೋರಿಸುತ್ತಾನೆ, ಅದೇ ವೇಳೆ ಕೂಸುಗಳು ಮಾನವ ಪ್ರತಿಕ್ರಿಯೆಯನ್ನು ತೋರಿಸುತ್ತವೆ. ಇನ್ನೊಂದು ನಿದರ್ಶನವನ್ನು ಕೊಡುವುದಾದರೆ: ಪ್ರವೀಣತೆ ಅಥವಾ ಪರಿಪೂರ್ಣತೆಗಾಗಿ ಶ್ರಮಿಸುವುದನ್ನು ಒಂದು ಪರ್ವತವನ್ನು ಏರುವುದಕ್ಕೆ ಹೋಲಿಸಿ ನೋಡಿರಿ (ಉದಾಹರಣೆಗೆ, 10,000 ಮೀಟರ್ ಎತ್ತರ). ಯೇಸುವು ಈಗಾಗಲೇ ಪರ್ವತದ ಶಿಖರವನ್ನು ಏರಿದ್ದಾರೆ. ನಾವು ಹೊಸದಾಗಿ ಹುಟ್ಟಿದಾಗ ಈ ಪರ್ವತದ ತಳದಿಂದ ಮೇಲೇರಲು ಆರಂಭಿಸುತ್ತೇವೆ. ನಮ್ಮ ಗುರಿ ಯೇಸುವನ್ನು ಹಿಂಬಾಲಿಸುವುದು ಮತ್ತು ಶಿಖರದ ಕಡೆಗೆ ಸಾಗುವುದು, ಅದಕ್ಕೆ ಎಷ್ಟು ಸಮಯ ತಗಲಿದರೂ ಪರವಾಗಿಲ್ಲ. ಈ ರೀತಿಯಾಗಿ ನಾವು ಕೇವಲ 100 ಮೀಟರ್ ಮೇಲೇರಿದ್ದರೂ, ನಾವು ನಮ್ಮ ಕಿರಿಯ ಸಹೋದರ-ಸಹೋದರಿಯರಿಗೆ, "ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ" (1 ಕೊರಿ. 11:1), ಎಂದು ಹೇಳಬಹುದು.