ಬರೆದಿರುವವರು :   ಝ್ಯಾಕ್ ಪೂನನ್
WFTW Body: 

2 ಕೊರಿ. 10:5 ರಲ್ಲಿ ಅಪೊಸ್ತಲ ಪೌಲನು, "ನಮ್ಮ ಯೋಚನೆಗಳ ಪ್ರಪಂಚದಲ್ಲಿರುವ ಕೋಟೆ ಕೊತ್ತಲಗಳ" ವಿಚಾರವಾಗಿ ಮಾತನಾಡುತ್ತಾನೆ. ನಮ್ಮ ಮಾಂಸಭಾವದ ಕಾಮನೆಗಳು ಹೊಲಸು ವಿಚಾರಧಾರೆಗಳನ್ನು ಮತ್ತು ಸ್ವಾರ್ಥದ ಮನೋಭಾವಗಳನ್ನು ನಮ್ಮಲ್ಲಿ ಬೆಳೆಸಿ, ಅವುಗಳನ್ನು ಭದ್ರವಾದ ಕೋಟೆಗಳಂತೆ ಕಟ್ಟಿವೆ. ನಾವು ದಿನವಿಡೀ ದುರಾಸೆಯ ಸ್ವಾರ್ಥ ಜೀವಿತವನ್ನು ಜೀವಿಸುವಂತೆ ಇವು ನಮ್ಮನ್ನು ಒತ್ತಾಯಿಸುತ್ತವೆ. ಮತ್ತು ನಾವು ರಾತ್ರಿಯ ವೇಳೆ ನಿದ್ರಿಸುವಾಗ, ಹೊಲಸು ಆಲೋಚನೆಗಳು ಈ ಕೋಟೆಗಳಿಂದ ಕನಸುಗಳ ರೂಪದಲ್ಲಿ ಹೊರಬೀಳುತ್ತವೆ. ನಾವು ಇಂತಹ ಜೀವನವನ್ನು ಕೊನೆಯ ವರೆಗೂ ಜೀವಿಸುವುದು ದೇವರ ಚಿತ್ತವಾಗಿದೆಯೇ? ಇಲ್ಲ. ನಾವು ನಮ್ಮ ಪ್ರತಿಯೊಂದು ಯೋಚನೆಯನ್ನು ಕ್ರಿಸ್ತನಿಗೆ ವಿಧೇಯವಾಗಿ ಒಪ್ಪಿಸುವುದು ದೇವರ ಚಿತ್ತವಾಗಿದೆ. ನಾವು ದೇವರಿಂದ ನಮಗೆ ಕೊಡಲ್ಪಟ್ಟಿರುವ ಆತ್ಮಿಕ ಆಯುಧಗಳಿಂದ ಈ ಕೋಟೆಗಳನ್ನು ಕೆಡವಬಹುದು. ದೇವರ ವಾಕ್ಯವು ಇಂತಹ ಬಲವಾದ ಆಯುಧಗಳಲ್ಲಿ ಒಂದಾಗಿದೆ, ಮತ್ತು ಇದು ಈ ಕೋಟೆಗಳನ್ನು ನಾಶಗೊಳಿಸುತ್ತದೆ (2 ಕೊರಿ. 10:4). ಹೀಗೆ ನಾವು "ಪ್ರತಿಯೊಂದು ಯೋಚನೆಯನ್ನು ಕ್ರಿಸ್ತನಿಗೆ ಅಧೀನವಾಗಿ ಇರುವಂತೆ" ಒಪ್ಪಿಸಿಕೊಡಲು ಸಾಧ್ಯವಾಗುತ್ತದೆ.

ನಾವು ನಮ್ಮ ಮನಸ್ಸುಗಳನ್ನು ದೇವರ ವಾಕ್ಯದಿಂದ ಹೆಚ್ಚು ಹೆಚ್ಚಾಗಿ ತುಂಬಿಸುತ್ತಿದ್ದಂತೆ, ಈ ಕೋಟೆ ಕೊತ್ತಲಗಳು ಒಂದೊಂದಾಗಿ ಉರುಳಿಸಲ್ಪಡುವ ಅನುಭವವನ್ನು ನಾವು ಪಡೆಯುವೆವು - ಮತ್ತು ಆ ಕೋಟೆಗಳ ಸೈನಿಕರು (ಯೋಚನೆಗಳು) ಸಹ ಸಾಯಿಸಲ್ಪಡುವರು. ನಾನು ಯೌವನ ಪ್ರಾಯದಲ್ಲಿ, ನಿಮ್ಮೆಲ್ಲರಂತೆಯೇ, ಹೊಲಸು ಯೋಚನೆಗಳೊಂದಿಗೆ ಪ್ರಯಾಸ ಪಟ್ಟಿದ್ದೇನೆ. ಇದಕ್ಕೆ ಯೌವನದಲ್ಲಿ ನಾನು ಕಂಡುಕೊಂಡ ಪರಿಹಾರ ಮಾರ್ಗ ಇದು - ನಾನು ದೇವರ ವಾಕ್ಯವನ್ನು ಓದುವುದು, ಧ್ಯಾನಿಸುವುದರ ಮೂಲಕ ನನ್ನ ಮನಸ್ಸನ್ನು ತುಂಬಿಸಿದೆನು. ನಮ್ಮ ಮನಸ್ಸು ಕೊಳೆ ನೀರು ತುಂಬಿರುವ ಒಂದು ಬಟ್ಟಲಿನಂತಿದೆ, ಏಕೆಂದರೆ ಕರ್ತನ ಕಡೆಗೆ ತಿರುಗಿಕೊಳ್ಳುವದಕ್ಕೆ ಮೊದಲಿನ ದಿನಗಳಲ್ಲಿ ನಾವು ಅದರಲ್ಲಿ ಸಾಕಷ್ಟು ಗಲೀಜು ಮತ್ತು ಹೊಲಸನ್ನು ತುಂಬಿದ್ದೇವೆ. ನಾವು ಆ ಬಟ್ಟಲಿಗೆ ಒಂದು ಶುದ್ಧ ನೀರಿನ ಪಾತ್ರೆಯಿಂದ ನೀರನ್ನು ನಿಧಾನವಾಗಿ ಹೊಯ್ಯುತ್ತಾ ಹೋದರೆ, ಅದು ಸ್ವಲ್ಪ ಸ್ವಲ್ಪವಾಗಿ ತುಂಬಿ ಹರಿಯುತ್ತದೆ, ಮತ್ತು ಆ ನೀರು ತೆಳುವಾಗುತ್ತದೆ. ಈ ರೀತಿಯಾಗಿ ಬಟ್ಟಲಿನ ನೀರು ಸ್ವಚ್ಛವಾಗುತ್ತಾ ಹೋಗುತ್ತದೆ. ಇದಕ್ಕೆ ಬಹಳ ಸಮಯ ಬೇಕಾಗುತ್ತದೆ. ಆದರೂ ಹಲವು ವರ್ಷಗಳ ಅವಧಿಯಲ್ಲಿ, ನಮ್ಮ ಮನಸ್ಸನ್ನು ದೇವರ ವಾಕ್ಯದ ಮೂಲಕ ನಿಧಾನವಾಗಿ ಸ್ವಚ್ಛಗೊಳಿಸಲು ಸಾಧ್ಯವಿದೆ. ಆದರೆ ನಾವು ಆಗಾಗ ಒಂದಿಷ್ಟು ಗಲೀಜನ್ನು ಮತ್ತೊಮ್ಮೆ ನಮ್ಮ ಬಟ್ಟಲಿಗೆ ಹಾಕುತ್ತಿದ್ದರೆ, ಅದನ್ನು ಸ್ವಚ್ಛಗೊಳಿಸುವದು ನಿಧಾನವಾಗುತ್ತದೆ. ನಾವು ಎಲ್ಲಾ ಯೋಚನೆಗಳನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ ಸೆರೆ ಹಿಡಿಯಲು ನಮಗೆ ಕೃಪೆ ಕೊಡುವಂತೆ ದೇವರನ್ನು ಬೇಡಿಕೊಳ್ಳಬಹುದು.

2 ಕೊರಿ. 11:2,3 ರಲ್ಲಿ ಅಪೊಸ್ತಲ ಪೌಲನು, ಕೊರಿಂಥದ ಈ ಕ್ರೈಸ್ತರನ್ನು "ಯಜ್ಞದ ಕುರಿಯಾದಾತನ ವಿವಾಹದ ದಿನದಲ್ಲಿ" ಕ್ರಿಸ್ತನೆಂಬ ಒಬ್ಬನೇ ಪುರುಷನಿಗೆ ಪರಿಶುದ್ಧ ಕನ್ಯೆಯಂತೆ ಒಪ್ಪಿಸಬೇಕೆಂದು ತಾನು ನಿಶ್ಚಯ ಮಾಡಿರುವದಾಗಿ ತಿಳಿಸುತ್ತಾನೆ. ಹಾಗಿರುವಾಗ, ಅವರು ಇದಕ್ಕೆ ಮೊದಲೇ ಯಾವನೋ ಬೇರೊಬ್ಬನನ್ನು ಪ್ರೀತಿಸಲು ಹೊರಡುತ್ತಾರೋ ಎಂದು ಅವನು ತೀಕ್ಷ್ಣವಾಗಿ ಪರೀಕ್ಷಿಸುತ್ತಾ, ಅವರನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದನು. ಅಬ್ರಹಾಮನ ಸೇವಕನಾದ ಎಲೀಯೆಜರನು ರೆಬೆಕ್ಕಳನ್ನು ಇಸಾಕನಿಗೆ ಒಪ್ಪಿಸಿಕೊಡುವದಕ್ಕಾಗಿ, ಆಕೆಯನ್ನು ಕರೆದುಕೊಂಡು ಬಹಳ ದೂರ (’ಊರ್’ ಪಟ್ಟಣದಿಂದ ಕಾನಾನ್ ದೇಶಕ್ಕೆ, ಸುಮಾರು 1,500 ಕಿಲೋಮೀಟರುಗಳು) ಪ್ರಯಾಣಿಸಿದ್ದನ್ನು ಆಲೋಚಿಸಿ ನೋಡಿರಿ. ಆ ಪ್ರಯಾಣದ ನಡುವೆ, ಯಾರಾದರೂ ಸುಂದರ ಯುವಕರು ರೆಬೆಕ್ಕಳನ್ನು ಮೆಚ್ಚಿಸಿ ಆಕರ್ಷಿಸಲು ಪ್ರಯತ್ನಿಸಿದ್ದರೆ, ಎಲೀಯೆಜರನು ರೆಬೆಕ್ಕಳಿಗೆ, "ಈ ಯುವಕರ ಕಡೆಗೆ ಆಕರ್ಷಿಸಲ್ಪಡಬೇಡ. ನಾನು ನಿನ್ನನ್ನು ಇಸಾಕನಿಗೆ ಪರಿಶುದ್ಧ ಕನ್ಯೆಯಾಗಿ ಒಪ್ಪಿಸಿ ಕೊಡಬೇಕು," ಎಂದು ಎಚ್ಚರಿಸುತ್ತಿದ್ದನು. ಪೌಲನು ಕೊರಿಂಥದ ಸಭೆಯನ್ನು ಇದೇ ರೀತಿಯಾಗಿ ಯೇಸುವಿಗಾಗಿ ಉಳಿಸಿಕೊಳ್ಳಲು ಬಯಸಿದನು. ದೇವರ ಪ್ರತಿಯೊಬ್ಬ ಸೇವಕನಲ್ಲೂ ತನ್ನ ಕುರಿಮಂದೆಯ ಬಗ್ಗೆ ಇಂತಹ ದೈವಿಕ ಹೊಟ್ಟೆಕಿಚ್ಚು ಇರಬೇಕು. ಆತನು ಅವರಿಗೆ, "ನೀವು ಯೇಸುವಿಗಾಗಿ ಕಾದಿರಿಸಲ್ಪಟ್ಟವರು. ಹಣದಾಸೆ, ಅಥವಾ ಲೈಂಗಿಕ ಜಾರತ್ವ ಅಥವಾ ಲೋಕದ ಮಾನ್ಯತೆ ಇವುಗಳ ಸೆಳೆತಕ್ಕೆ ಒಳಗಾಗದಿರಿ. ಇವುಗಳು ನಿಮ್ಮನ್ನು ಆಕರ್ಷಿಸಿ ಸೆಳೆಯಲು ಪ್ರಯತ್ನಿಸುತ್ತವೆ. ಆದರೆ ಅವುಗಳ ಪ್ರಚೋದನೆಯನ್ನು ನೀವು ವಿರೋಧಿಸಿರಿ ಮತ್ತು ನಿಮ್ಮನ್ನು ನಿಷ್ಕಳಂಕರಾಗಿ ಉಳಿಸಿಕೊಳ್ಳಿರಿ," ಎಂದು ಬೋಧಿಸಬೇಕು. ಇದರ ನಂತರ ಪೌಲನು ಅವರಿಗೆ, "ಸೈತಾನನು ಏದೆನ್ ತೋಟಕ್ಕೆ ಬಂದು ಹವ್ವಳನ್ನು ಮೋಸಗೊಳಿಸಿದಂತೆ, ನಿಮ್ಮನ್ನೂ ಸಹ ನಿಮ್ಮ ಕ್ರಿಸ್ತನ ಕುರಿತಾದ ಯಥಾರ್ಥ ಅನುರಾಗವನ್ನು ಬಿಡುವಂತೆ ಮಾಡಲು ಪ್ರಯತ್ನಿಸುತ್ತಾನೆಂದು ನನಗೆ ಭಯವುಂಟು," ಎಂದು ಹೇಳುತ್ತಾನೆ.

ಒಬ್ಬ ವಿಶ್ವಾಸಿಯು ಯಾವಾಗ ಹಿಂಜಾರುತ್ತಾನೆ ಅಥವಾ ದಾರಿ ತಪ್ಪಿ ಹೋಗುತ್ತಾನೆ? ಅದು ತಪ್ಪಾದ ಆತ್ಮಿಕ ಬೋಧನೆಯನ್ನು ನಂಬಿದಾಗಲೋ ಅಥವಾ ಯಾವುದೋ ಒಂದು ಭ್ರಷ್ಟ ಧಾರ್ಮಿಕ ಪಂಗಡವನ್ನು ಸೇರಿದಾಗಲೋ? 2 ಕೊರಿ. 11:3 ರಲ್ಲಿ ಹೇಳಿರುವಂತೆ, ನಾವು ಕ್ರಿಸ್ತನ ಮೇಲಿನ ಅನುರಾಗವನ್ನು ಕಳಕೊಂಡ ಕ್ಷಣವೇ ದಾರಿ ತಪ್ಪುತ್ತೇವೆ. ಕ್ರಿಸ್ತನ ಮೇಲಿನ ಸಮರ್ಪಣಾಭಾವವನ್ನು ಕಳಕೊಂಡಿರುವ ಪ್ರತಿಯೊಬ್ಬ ವಿಶ್ವಾಸಿಯು ಆಗಲೇ ದಾರಿ ತಪ್ಪಿದ್ದಾನೆ.

ದೇವರ ಕುರಿಮಂದೆಯ ಕುರುಬರಾದ ನಮ್ಮ ಜವಾಬ್ದಾರಿ ಏನೆಂದರೆ, ಹಿಂಡಿನ ಕುರಿಗಳಲ್ಲಿ ಯೇಸು ಕ್ರಿಸ್ತನ ಭಯಭಕ್ತಿಯನ್ನು ಸಂರಕ್ಷಿಸುವುದು. ಕ್ರಿಸ್ತೀಯ ಜೀವಿತದ ಅತ್ಯಂತ ಮಹತ್ವಪೂರ್ಣ ಸಂಗತಿ ಇದೇ ಆಗಿದೆ. ವಿಶ್ವಾಸಿಗಳು ಯೇಸುವಿನ ಹುಮ್ಮಸ್ಸಿನ ಪ್ರೀತಿಯಿಂದ ದೂರ ಸರಿದು ತಪ್ಪಿಹೋಗುವಂತೆ ಪಿಶಾಚನು ನಿರಂತರವಾಗಿ ಪ್ರಯತ್ನಿಸುತ್ತಾನೆ. ಕರ್ತನು ಎಫೆಸದ ದೂತನು ಮತ್ತು ಎಫೆಸದ ಸಭೆಯ ವಿಚಾರವಾಗಿ ಎತ್ತಿ ತೋರಿಸಿದ ಒಂದೇ ಒಂದು ದೂರು ಇದೇ ಆಗಿತ್ತು (ಪ್ರಕ. 2:4).