ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಯೌವನಸ್ಥರಿಗೆ Struggling
WFTW Body: 

ಯೇಸುವಿನ ಬಗ್ಗೆ ಸತ್ಯವೇದದಲ್ಲಿ, "ಆತನು ವಿಧೇಯತೆಯನ್ನು ಕಲಿತುಕೊಂಡನು ಮತ್ತು ಸಿದ್ಧಿಗೆ ಬಂದನು" (ಇಬ್ರಿಯ 5:8-9) ಎಂಬುದಾಗಿ ಹೇಳಲ್ಪಟ್ಟಿದೆ. "ಕಲಿಯುವುದು" ಎಂಬ ಪದ ವಿದ್ಯಾಭ್ಯಾಸಕ್ಕೆ ಸಂಬಂಧಪಡುತ್ತದೆ. ಯೇಸುವು ’ವಿಧೇಯತೆಯ’ ವಿದ್ಯಾಭ್ಯಾಸವನ್ನು ಒಬ್ಬ ಮನುಷ್ಯನಾಗಿದ್ದುಕೊಂಡು ಸ್ವೀಕರಿಸಿಕೊಂಡನು ಎಂಬುದಾಗಿ ಈ ವಚನ ತಿಳಿಸುತ್ತದೆ. ಯೇಸುವು ಪ್ರತಿಯೊಂದು ಸನ್ನಿವೇಶದಲ್ಲಿ ತನ್ನ ತಂದೆಗೆ ವಿಧೇಯನಾದನು ಮತ್ತು ಈ ಮೂಲಕವಾಗಿ ತನ್ನ ಮಾನವ ವಿದ್ಯಾಭ್ಯಾಸವನ್ನು ಪೂರೈಸಿದನು. ನಮ್ಮ ಮುಂದಾಳಾಗಿ ಯೇಸುವು ಹೋಗಿದ್ದರಿಂದಾಗಿ, ನಾವೂ ಸಹ ಶೋಧನೆಯನ್ನು ಜಯಿಸಿ ಮತ್ತು ದೇವರಿಗೆ ವಿಧೇಯರಾಗುವ ಮೂಲಕ, ಆತನ ಹೆಜ್ಜೆ ಜಾಡಿನಲ್ಲಿ ನಡೆಯುವವರು ಆಗಬಹುದು (ಇಬ್ರಿಯ 6:20). ಶೋಧನೆಯ ವಿರುದ್ಧವಾಗಿ ನಮ್ಮ ಪ್ರತಿಯೊಂದು ಹೋರಾಟದಲ್ಲಿಯೂ ಸಹ, ನಮ್ಮ ಕರ್ತನು ನಮ್ಮ ವಿಷಯವಾಗಿ ಅನುಕಂಪವನ್ನು ಹೊಂದಿದವನಾಗಿದ್ದಾನೆ, ಏಕೆಂದರೆ ಆತನು ಸಹ ನಮ್ಮ ಹಾಗೇ ಶೋಧನೆಗೆ ಒಳಗಾದನು (ಇಬ್ರಿಯ 2:18; 4:15; 12:2-4). ಯೇಸುವು ತನ್ನ ಮಾನವ ಜೀವನದಲ್ಲಿ ಶುದ್ಧತೆಯನ್ನು ಪಡೆದದ್ದು, ಸುಲಭವಾಗಿ, ಮೊದಲೇ ನಿಶ್ಚಿತಪಡಿಸಿ ಸಿದ್ಧಪಡಿಸಿದ್ದ ಬಹುಮಾನವನ್ನು ತೆಗೆದುಕೊಂಡ ರೀತಿಯಲ್ಲಿ ಅಲ್ಲ, ಶುದ್ಧತೆಯನ್ನು ಹೋರಾಟದ ಮೂಲಕ ಪಡೆದುಕೊಂಡನು. ಆದರೆ ಯೇಸುವಿನ ಈ ಹೋರಾಟಗಳು ಕೊನೆಯೇ ಇಲ್ಲದ ಹೋರಾಟಗಳು ಆಗಿರಲಿಲ್ಲ. ಯೇಸು ಪ್ರತಿಯೊಂದು ಶೋಧನೆಯನ್ನು ಒಂದೊಂದಾಗಿ - ಒಂದರ ನಂತರ ಇನ್ನೊಂದನ್ನು - ಜಯಿಸುತ್ತಾ ಹೋದರು. ಈ ರೀತಿಯಾಗಿ ಯೇಸುವು ತನ್ನ ಜೀವಿತ ಕಾಲದಲ್ಲಿ, ನಾವು ಎದುರಿಸುವ ಪ್ರತಿಯೊಂದು ವಿಧವಾದ ಶೋಧನೆಯನ್ನೂ ಎದುರಿಸಿದರು - ಮತ್ತು ಪ್ರತಿಯೊಂದನ್ನೂ ಜಯಿಸಿದರು.

ನಾವೆಲ್ಲರೂ ಅನೇಕ ವರ್ಷಗಳ ಕಾಲ ಪಾಪದಲ್ಲಿ ಜೀವಿಸಿದ್ದೇವೆ ಮತ್ತು ನಮ್ಮ ಪಾಪವುಳ್ಳಂತ ಸ್ವಭಾವ ಒಂದು ರೀತಿ ವಿಷಕಾರಿ ಹಾವುಗಳನ್ನು ತುಂಬಿಕೊಂಡಂತ ಒಂದು ಡಬ್ಬದ ಹಾಗಿದೆ, ಮತ್ತು ನಾವು ಆ ಹಾವುಗಳನ್ನು ಪುಷ್ಟಿಯಾಗಿ ಬೆಳೆಸಿದ್ದೇವೆ!! ಈ ಹಾವುಗಳ ಹೆಸರುಗಳು ಈ ರೀತಿಯಾಗಿವೆ, ಅಶುದ್ಧತೆ, ಕೋಪ, ಹಗೆತನ, ಜಗಳ, ದ್ವೇಷ, ಕಹಿ ಮನಸ್ಸು, ಹಣದ ಮೇಲಿನ ಪ್ರೀತಿ, ಸ್ವಾರ್ಥತೆ, ಜಂಬ, ಇತ್ಯಾದಿ. ಪ್ರತೀ ಸಾರಿ ನಾವು ಶೋಧಿಸಲ್ಪಟ್ಟಾಗ ಈ ಡಬ್ಬಗಳು ತೆರೆಯಲ್ಪಟ್ಟು, ಹಾವುಗಳು ತಲೆ ಎತ್ತುತ್ತವೆ. ನಾವು ನಮ್ಮ ಮಾನಸಾಂತರದ ಮೊದಲು ಈ ಹಾವುಗಳನ್ನು ಪೋಷಿಸಿ ಬಲಗೊಳಿಸಿದ್ದೇವೆ. ಅದರ ಫಲಿತಾಂಶವಾಗಿ, ಅವು ಇಂದು ಚೆನ್ನಾಗಿ ಬಲಿಷ್ಠವಾಗಿ, ಆರೋಗ್ಯವಾಗಿ ಬೆಳೆದಿವೆ. ಈ ಹಾವುಗಳಂತೆ ನಮ್ಮ ಕೆಲವೊಂದು ಇಚ್ಛೆಗಳು ಬೇರೆಯವುಗಳಿಗಿಂತ ಹೆಚ್ಚಾಗಿ ಪೋಷಿಸಲ್ಪಟ್ಟಿವೆ, ಹಾಗಾಗಿ ಆ ಇಚ್ಛೆಗಳು ನಮ್ಮ ಮೇಲೆ ಬೇರೆಯವುಗಳಿಗಿಂತ ಬಲವಾದ ಹಿಡಿತವನ್ನು ಸಾಧಿಸಿವೆ. ನಾವು ಈಗ ಕ್ರಿಸ್ತನ ಜೊತೆಗೆ ಪಾಪಕ್ಕೆ ಸತ್ತಿದ್ದೇವೆ, ಹಾಗಾಗಿ ಈ ಹಾವುಗಳು ಇನ್ನೂ ಗಟ್ಟಿಮುಟ್ಟಾಗಿ ಇದ್ದರೂ ಸಹ, ಈ ಹಾವುಗಳ ವಿಷಯವಾಗಿ ನಮ್ಮ ನಡವಳಿಕೆಯು ಬದಲಾಗಿರುತ್ತದೆ! ನಾವು ಪ್ರಸ್ತುತ ದೈವಿಕ ಸ್ವಭಾವದಲ್ಲಿ ಪಾಲ್ಗೊಂಡಿದ್ದೇವೆ ಮತ್ತು "ಕ್ರಿಸ್ತ ಯೇಸುವಿನವರು ತಮ್ಮ ಶರೀರಭಾವವನ್ನು ಅದರ ವಿಷಯಾಭಿಲಾಷೆ ಸ್ವೇಚ್ಚಾಭಿಲಾಷೆ ಸಹಿತ ಶಿಲುಬೆಗೆ ಹಾಕಿದ್ದಾರೆ" (ಗಲಾತ್ಯ 5:24).

ಈಗ ನಾವು ಹಿಂದಿನಂತೆ ಇಲ್ಲ, ಡಬ್ಬಿ ತೆರೆದು ಹಾವು ತಲೆ ಎತ್ತಿದಾಗ (ಅಂದರೆ, ನಾವು ಶೋಧನೆಗೆ ಒಳಗಾದಾಗ), ನಾವು ಕೋಲಿನಿಂದ ಹಾವಿನ ತಲೆಯನ್ನು ಹೊಡೆಯುತ್ತೇವೆ. ನಂತರ ಹಾವು ಡಬ್ಬಿಯೊಳಗೆ ಮುದುಡಿಕೊಳ್ಳುತ್ತದೆ. ನಾವು ಮತ್ತೊಮ್ಮೆ ಶೋಧಿಸಲ್ಪಡುವಾಗ, ಆ ಹಾವು ಮತ್ತೊಮ್ಮೆ ತಲೆ ಎತ್ತುತ್ತದೆ, ಮತ್ತೊಮ್ಮೆ ನಾವು ಹೊಡೆಯುತ್ತೇವೆ. ಕ್ರಮೇಣವಾಗಿ ಹಾವು ಬಲಹೀನಗೊಳ್ಳುತ್ತದೆ. ಪ್ರತಿಯೊಂದು ಶೋಧನೆಯಲ್ಲಿ ನಾವು ನಂಬಿಗಸ್ತರಾಗಿ ಇದ್ದುಕೊಂಡು, ಹಾವನ್ನು ಪೋಷಿಸುವ ಬದಲು, ಅದನ್ನು ಹೊಡೆದಾಗ, ಶೋಧನೆಯ ಸೆಳೆತವು ಬಲಹೀನವಾಗುವುದನ್ನು ನಾವು ಬೇಗನೆ ಕಂಡುಕೊಳ್ಳುತ್ತೇವೆ. ಶರೀರಭಾವವು ಒಂದೇ ಕ್ಷಣದಲ್ಲಿ "ನಾಶಗೊಳ್ಳುವುದಿಲ್ಲ" ಮತ್ತು "ಗಲ್ಲಿಗೇರಿಸಲ್ಪಡುವುದಿಲ್ಲ". ಅದನ್ನು ನಾಶಗೊಳಿಸಲು ಶಿಲುಬೆಯ ಮೂಲಕ ಮಾತ್ರ ಸಾಧ್ಯವಾಗುತ್ತದೆ. ಶಿಲುಬೆಯ ಮರಣ ನಿಧಾನವಾದ ಮರಣವಾಗಿದೆ. ಆದರೆ ಅದು ನಿಶ್ಚಿತ ಮರಣವಾಗಿದೆ. ಹಾಗಾಗಿ ನಾವು ನಾನಾ ವಿಧವಾದ ಶೋಧನೆಗಳಲ್ಲಿ ಬೀಳುವುದು ಆನಂದಕರವಾದದ್ದು ಎಂದು ಎಣಿಸಬೇಕು (ಯಾಕೋಬ 1:2) - ಏಕೆಂದರೆ ಆ ಶೋಧನೆ ಹಾವನ್ನು ಹೊಡೆಯುವ ಮತ್ತು ಅದನ್ನು ಬಲಹೀನ ಮಾಡುವ ಅವಕಾಶವನ್ನು ಕೊಡುತ್ತದೆ. ಇಲ್ಲವಾದಲ್ಲಿ ಅದು ಸಾಧ್ಯವಾಗುವುದಿಲ್ಲ.

ಹೊಲಸು ಆಲೋಚನೆಗಳನ್ನೇ ಪರಿಗಣಿಸಿರಿ. ನಾವು ಈ ಕ್ಷೇತ್ರದಲ್ಲಿ ನಂಬಿಗಸ್ತರಾಗಿದ್ದರೆ, ಸ್ವಲ್ಪ ಸಮಯದ ನಂತರ ಆ ಹೊಲಸು ಆಲೋಚನೆಗಳು ಸಾಯುವುದನ್ನು ನಾವು ಕಂಡುಕೊಳ್ಳುತ್ತೇವೆ. ನಾವು ನಮ್ಮ ಪರಿವರ್ತನೆಯ ಪೂರ್ವ ದಿನಮಾನಗಳಲ್ಲಿ ಅನೇಕ ವರ್ಷಗಳ ಕಾಲ ಈ ಹೊಲಸು ಆಲೋಚನೆಗಳೆಂಬ ಹಾವುಗಳನ್ನು ಚೆನ್ನಾಗಿ ಪೋಷಿಸಿದ್ದಲ್ಲಿ, ಅವುಗಳು ಸಾಯಲು ಅನೇಕ ವರ್ಷಗಳ ಸಮಯ ಹಿಡಿಯಬಹುದು. ಆದರೆ ನಾವು ನಂಬಿಗಸ್ತರಾಗಿದ್ದರೆ, ಈ ಹಾವುಗಳಿಗೆ ಸಾವು ನಿಶ್ಚಿತ. ಇದರ ಫಲಿತಾಂಶ ಏನೆಂದರೆ, ನಮ್ಮ ಕನಸುಗಳು ಹೆಚ್ಚು ಶುದ್ಧತೆಯಿಂದ ಕೂಡಿರುತ್ತವೆ. ಹೊಲಸು ಕನಸುಗಳು ನಮಗೆ ಬಹಳ ವಿರಳವಾಗಿರುತ್ತವೆ. ಒಂದು ವೇಳೆ ಹೊಲಸು ಕನಸುಗಳು ಹೆಚ್ಚಾಗುತ್ತಿದ್ದರೆ, ಮತ್ತೊಮ್ಮೆ ನಮ್ಮ ಆಲೋಚನಾ ಜೀವಿತದಲ್ಲಿ ನಾವು ಅಪನಂಬಿಗಸ್ತರಾಗಿದ್ದೇವೆ, ಎಂದು ಇದು ತೋರಿಸುತ್ತದೆ. ಇದು ನಮ್ಮ ಆಲೋಚನಾ ಜೀವಿತದ ನಂಬಿಗಸ್ತಿಕೆಯ ಒಳ್ಳೆಯ ಪರೀಕ್ಷೆಯಾಗಿದೆ. ಹೊಲಸು ಕನಸುಗಳು ತಿಳಿಯದೇ ಮಾಡುವ ಪಾಪಗಳಾಗಿವೆ ಮತ್ತು ನಾವು ಅವುಗಳ ವಿಷಯವಾಗಿ ಖಂಡನೆಗೆ ಒಳಗಾಗಬಾರದು (ರೋಮ 7:25, 8:1). ನಮಗೆ 1 ಯೋಹಾನ 1:7 ತಿಳಿಸುವುದೇನೆಂದರೆ, ನಾವು ಬೆಳಕಿನಲ್ಲಿ ನಡೆದರೆ, ಯೇಸುವಿನ ರಕ್ತವು ನಮ್ಮ ಇಂತಹ ಸಕಲ ಪಾಪಗಳನ್ನು ನಿವಾರಿಸುತ್ತದೆ.

ಸಂಪೂರ್ಣ ನಂಬಿಗಸ್ತಿಕೆಯು ಸಂಪೂರ್ಣ ಜಯವನ್ನು ತರುತ್ತದೆ. ಆದರೆ ಉದಾಹರಣೆಗೆ, ಲೈಂಗಿಕ ಕ್ಷೇತ್ರದಲ್ಲಿ ಸಂಪೂರ್ಣ ನಂಬಿಗಸ್ತಿಕೆ ಹೇಗಿರಬೇಕು ಎಂದರೆ, ವಿರುದ್ಧ ಲಿಂಗದವರ ಸುಂದರ ಮುಖವನ್ನು ನೋಡಿ ಮೆಚ್ಚುವುದರಲ್ಲಿ ಯಾವುದೇ ಲೈಂಗಿಕ ಆಲೋಚನೆಗಳು ಇಲ್ಲದಿದ್ದರೂ, ಅಂತಹ ಮೆಚ್ಚುಗೆಯಿಂದ ದೂರವಿರುವಂಥದ್ದು. ಜ್ಞಾನೋಕ್ತಿಗಳು 6:25ರಲ್ಲಿ ಸತ್ಯವೇದವು, "ನಿನ್ನ ಹೃದಯವು ಆಕೆಯ ಬೆಡಗನ್ನು ಮೋಹಿಸದಿರಲಿ," ಎಂದು ಈ ವಿಷಯದಲ್ಲಿ ನಂಬಿಗಸ್ತಿಕೆಯ ಮಟ್ಟ ಎಂಥದ್ದೆಂದು ನಮಗೆ ತಿಳಿಸುತ್ತದೆ. ಈ ಕ್ಷೇತ್ರದಲ್ಲಿ ಕೆಲವೇ ಜನ ನಂಬಿಗಸ್ತರಾಗಿದ್ದಾರೆ, ಹಾಗಾಗಿ ಕೆಲವೇ ಜನರು ಕನಸಿನ ಶುದ್ಧತೆಯ ಮಟ್ಟವನ್ನು ತಲುಪುತ್ತಾರೆ.

ನಾವು ಎಚ್ಚರವಾಗಿರುವ ಸಮಯದಲ್ಲಿ ಉದ್ದೇಶಪೂರ್ವಕವಾಗಿ ಏನು ಯೋಚಿಸುತ್ತೇವೋ ಅದು ನಮ್ಮ ಉಪಪ್ರಜ್ಞೆಯ ಮೇಲೆ (ಅಂದರೆ ಒಳಮನಸ್ಸಿನ ಮೇಲೆ) ಬಹಳ ಪರಿಣಾಮ ಬೀರುತ್ತದೆ - ಮನಸ್ಸಿನೊಳಗೆ ತಲೆ ಎತ್ತುವ ಶೋಧನೆಗಳಲ್ಲ, ಆದರೆ ಆ ಶೋಧನೆಗಳಿಗೆ ನಾವು ನೀಡುವ ಪ್ರತಿಕ್ರಿಯೆಯು ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ನಾವು ನಮ್ಮ ಯೋಚನೆಗಳಲ್ಲಿ ಮತ್ತು ಮನೋಭಾವಗಳಲ್ಲಿ ಪಾಪವನ್ನು ದ್ವೇಷ ಮಾಡುತ್ತೇವೆ ಹಾಗೂ ನಾವು ದೇವರ ಸಮ್ಮುಖದಲ್ಲಿ ಜೀವಿಸುತ್ತೇವೆ ಎಂಬಂತ ಸಂದೇಶ ನಮ್ಮ ಉಪಪ್ರಜ್ಞೆಗೆ (ಅಥವಾ ನಮ್ಮ ಒಳಮನಸ್ಸಿಗೆ) ತಲುಪಿದರೆ, ಆಗ ಆ ಒಳಭಾಗವೂ ಸಹ ನಮ್ಮಲ್ಲಿರುವ ಶುದ್ಧತೆಯ ಅಪೇಕ್ಷೆಗೆ ತಕ್ಕಂತೆ ’ಹೊಂದಿಕೊಳ್ಳುತ್ತದೆ’ (ಕೀರ್ತನೆಗಳು 51:6ನ್ನು ನೋಡಿ). ಮುಖ್ಯವಾದ ಪ್ರಶ್ನೆ, "ನನ್ನ ಸಹ ವಿಶ್ವಾಸಿಗಳು ನನ್ನ ಶುದ್ಧತೆಯ ಬಗ್ಗೆ ಏನು ಯೋಚಿಸುತ್ತಾರೆ?" ಎಂಬುದಲ್ಲ, ಆದರೆ "ನನ್ನ ಒಳಮನಸ್ಸಿಗೆ ನನ್ನಿಂದ ಸಿಕ್ಕಿರುವ ಸಂದೇಶ ಏನು?" ಎಂಬುದು. ಸಾಮಾನ್ಯವಾಗಿ ನಿಮ್ಮ ಕನಸುಗಳು ಈ ಪ್ರಶ್ನೆಗೆ ಉತ್ತರ ನೀಡುತ್ತವೆ. ಯಾರಿಗೆ ಯಥಾರ್ಥ ಚಿತ್ತದಲ್ಲಿ ಆಸಕ್ತಿ ಇಲ್ಲವೋ, ಅವರಿಗೆ ನಾವು ಇಲ್ಲಿ ಹೇಳುತ್ತಿರುವ ವಿಷಯ ಅರ್ಥ ಆಗಲಾರದು. ಯಾರು ಹೊಲಸು ಕನಸುಗಳನ್ನು ಬಹಳ ಲಘುವಾಗಿ ತೆಗೆದುಕೊಳ್ಳುತ್ತಾರೋ, ಅವರು ಎಚ್ಚರದ ಜೀವಿತದ ಯೋಚನೆಗಳಲ್ಲಿ ನಮ್ಮ ಅಪನಂಬಿಗಸ್ತಿಕೆಯ ಗುರುತು ಈ ಕೆಟ್ಟ ಕನಸುಗಳಾಗಿವೆ ಎಂಬುದನ್ನು ಗ್ರಹಿಸಿಕೊಳ್ಳುವುದಿಲ್ಲ. ಇಂತಹ ವಿಶ್ವಾಸಿಗಳು ನಾವು ಹೇಳುವ ಮಾತು ಬಹಳ ತೀಕ್ಷ್ಣವಾದದ್ದು ಮತ್ತು ವಾಸ್ತವಿಕತೆಗೆ ದೂರವಾದದ್ದು ಎಂದು ಯೋಚಿಸುತ್ತಾರೆ, ಏಕೆಂದರೆ ಸ್ವಾಭಾವಿಕ ಮನಸ್ಸನ್ನು ಹೊಂದಿರುವವನಿಗೆ ಆತ್ಮಿಕ ವಿಷಯಗಳು ಮೂಢತನವಾಗಿ ಕಾಣುತ್ತವೆ.

ಹಾಗಿದ್ದರೂ ಒಂದು ಶುಭ ವಾರ್ತೆ ಏನೆಂದರೆ, ನೀವು ಯಥಾರ್ಥರಾಗಿ ಯೇಸುವು ಜೀವಿಸಿದ ರೀತಿಯಲ್ಲಿ ಜೀವಿಸಲು ಬಯಸಿದರೆ, ನಿಮ್ಮ ಯೋಚನಾ ಜೀವಿತವು ಎಷ್ಟೇ ಕೆಟ್ಟದ್ದಾಗಿದ್ದರೂ ಸಹ, ಅದು ಸಂಪೂರ್ಣವಾಗಿ ಶುದ್ಧಗೊಳ್ಳಲು ಸಾಧ್ಯವಿದೆ. ಈ ರೀತಿ ಆದಾಗ, ಅದು ನಿಮ್ಮ ಕನಸುಗಳನ್ನೂ ಸಹ ಶುದ್ಧೀಕರಿಸುತ್ತದೆ - ಆದರೂ ಇದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ; ನೀವು ಪರಿವರ್ತನೆ ಹೊಂದದೇ ಇದ್ದ ದಿನಮಾನಗಳಲ್ಲಿ ನೀವು ನಿಮ್ಮ ಶರೀರದ ಇಚ್ಛೆಗಳನ್ನು ಎಷ್ಟು ಪೋಷಿಸಿ ಬೆಳೆಸಿದ್ದೀರಿ ಎನ್ನುವುದರ ಮೇಲೆ ಇದು ಅವಲಂಬಿಸಿದೆ. ಆದರೆ ಸಂಪೂರ್ಣ ನಂಬಿಗಸ್ತಿಕೆಯ ಮೂಲಕ ಅತೀ ಬಲಿಷ್ಠ ಹಾವನ್ನೂ ಸಹ ಕೊಲ್ಲಬಹುದು.

ಯೇಸುವು ತನ್ನ ಬಳಿಗೆ ಆಹ್ವಾನಿಸಿದ್ದು ಕಷ್ಟಪಡುವವರನ್ನು ಮತ್ತು ಹೊರೆ ಹೊರುವವರನ್ನು ಮಾತ್ರ. ನೀವು ಯೇಸುವಿನ ಬಳಿಗೆ ಬರುವ ಅರ್ಹತೆಯನ್ನು ಪಡೆಯುವುದು ಸ್ವತಃ ನಿಮ್ಮ ಜೀವನದ ಬಗ್ಗೆ ಸೋತುಹೋಗಿ, ಜಿಗುಪ್ಸೆಗೊಂಡು, ಬೇಸರಪಟ್ಟಾಗ ಮಾತ್ರ. ಈ ಲೋಕದ ಜನರಲ್ಲಿ ಇತರರ ಕುರಿತಾಗಿ ಮತ್ತು ಇತರರು ತಮ್ಮ ಜೊತೆಗೆ ನಡೆದುಕೊಳ್ಳುವ ಬಗ್ಗೆ ಜಿಗುಪ್ಸೆ ಮತ್ತು ಬೇಸರಗಳು ಕಾಣಿಸುತ್ತವೆ. ಇನ್ನು ಕೆಲವು ಕ್ರೈಸ್ತರು ತಮ್ಮ ಕ್ರೈಸ್ತ ಪಂಗಡಗಳಲ್ಲಿ ನಡೆಯುವಂತ ರಾಜಿಯ ವಿಷಯವಾಗಿ ಮತ್ತು ಲೌಕಿಕತೆಯ ವಿಷಯವಾಗಿ ಬೇಸರಗೊಂಡಿರುತ್ತಾರೆ. ಆದರೆ ಇವುಗಳು ಜಯಕ್ಕೆ ಅರ್ಹತೆಗಳಲ್ಲ. ಯಾರು ತಮ್ಮ ಸ್ವಂತ ಜೀವಿತವನ್ನು ನೋಡಿ ಬೇಸರಗೊಂಡು ಜಿಗುಪ್ಸೆಗೊಂಡಿರುತ್ತಾರೋ, ಅಂಥವರನ್ನು ಯೇಸುವು ನೋಡಿ ತನ್ನ ಬಳಿಗೆ ಬರುವಂತೆ ಆಹ್ವಾನಿಸುತ್ತಾರೆ. ಜಯಕ್ಕಾಗಿ ಹಂಬಲಿಸುವವರು ಮಾತ್ರ ಯೇಸುವಿನ ಬಳಿಗೆ ಬರಬಹುದು (ಮತ್ತಾಯ 11:28; ಯೋಹಾನ 7:37). ಯಾರು ತಮ್ಮ ಯೋಚನಾ ಜೀವಿತದಲ್ಲಿ ಜಾರಿದಾಗ ಅಳುತ್ತಾರೋ ಮತ್ತು ರಹಸ್ಯ ಪಾಪಗಳಿಗಾಗಿ ದು:ಖಿಸುತ್ತಾರೋ, ಅಂಥವರು ದೇವರ ಸತ್ಯತೆಗಳನ್ನು ಬಹಳ ಬೇಗನೆ ಅರ್ಥ ಮಾಡಿಕೊಳ್ಳುತ್ತಾರೆ; ಮಿಕ್ಕವರು ಅದೇ ಸತ್ಯಾಂಶಗಳನ್ನು ಮತವಿರೋಧಿ ಸಿದ್ಧಾಂತಗಳು ಎಂದು ಎಣಿಸುತ್ತಾರೆ - ಆತ್ಮಿಕ ಸತ್ಯತೆಗಳನ್ನು ಪ್ರಾಪಂಚಿಕ ವಿವೇಕದ ಮೂಲಕ ತಿಳಿದುಕೊಳ್ಳಲು ಆಗುವುದಿಲ್ಲ, ಯಾರು ತಮ್ಮ ರಹಸ್ಯ ಪಾಪಗಳ ಕುರಿತಾಗಿ ದು:ಖಿಸುತ್ತಾರೋ ಅವರಿಗೆ ದೇವರು ಕೊಡುವಂತ ಪ್ರಕಟಣೆಯ ಮೂಲಕ ಇವು ಪ್ರಕಟಗೊಳ್ಳುತ್ತವೆ. ದೇವರ ಭಯಭಕ್ತಿ ಹೊಂದಿರುವಂಥವರಿಗೆ ಮಾತ್ರ ದೇವರು ತನ್ನ ರಹಸ್ಯಗಳನ್ನು (ದೈವಿಕ ಜೀವಿತದ ರಹಸ್ಯವೂ ಸೇರಿದಂತೆ) ತಿಳಿಸಿಕೊಡುತ್ತಾರೆ (ಕೀರ್ತನೆಗಳು 25:14). ಯಾರು ತಮ್ಮ ಸೋಲಿನ ಜೀವಿತದ ವಿಷಯವಾಗಿ ಜಿಗುಪ್ಸೆಗೊಂಡು ಸುಸ್ತಾಗಿದ್ದಾರೋ, ಅಂಥವರಿಗೆ ಯೇಸು ಕೊಡುವುದಾಗಿ ವಾಗ್ದಾನ ಮಾಡಿದ "ವಿಶ್ರಾಂತಿ" ಯಾವುದೆಂದರೆ, ಪಾಪದ ಮೇಲಿನ ಸಂಪೂರ್ಣ ಜಯದ ವಿಶ್ರಾಂತಿಯಾಗಿದೆ.