WFTW Body: 

ನಾವೆಲ್ಲರೂ ಎಲ್ಲಾ ಸಮಯದಲ್ಲೂ ಎದುರಿಸುವ ಒಂದು ದೊಡ್ಡ ಅಪಾಯ, ಆತ್ಮಿಕ ಜಂಬ ಅಥವಾ ಆತ್ಮಿಕ ಅಹಂಕಾರವಾಗಿದೆ. ಕರ್ತರು ನಮ್ಮ ಕಾರ್ಯಗಳನ್ನು ಆಶೀರ್ವದಿಸಿದ ಸಂದರ್ಭದಲ್ಲಿ ಇದು ವಿಶೇಷವಾಗಿ ಅನ್ವಯಿಸುತ್ತದೆ. ಯಾವಾಗಲೂ "ಗಣನೆಗೆ ಬಾರದವರಾದ" ನಮ್ಮನ್ನು ಕರ್ತರು ಆಶೀರ್ವದಿಸಿದಾಗ, ನಾವು "ಪ್ರಮುಖ ವ್ಯಕ್ತಿಗಳಾದೆವು" ಎಂಬ ಭಾವನೆ ನಮ್ಮಲ್ಲಿ ಬಹಳ ಸುಲಭವಾಗಿ ಉಂಟಾಗುತ್ತದೆ. ಆಗ ಸ್ವತಃ ದೇವರು ನಮ್ಮನ್ನು ಎದುರಿಸುತ್ತಾರೆ ಮತ್ತು ನಮ್ಮ ವಿರುದ್ಧ ಹೋರಾಡುತ್ತಾರೆ - ಏಕೆಂದರೆ, ವ್ಯಕ್ತಿ ಯಾರೇ ಆಗಿದ್ದರೂ, ದೇವರು ಎಲ್ಲಾ ಅಹಂಕಾರಿಗಳನ್ನು ಎದುರಿಸುತ್ತಾರೆ. ನಾವು ಪ್ರತಿಭಾವಂತರಾಗಿದ್ದರೆ, ಇಲ್ಲವೇ ನಮ್ಮ ವೈಯಕ್ತಿಕ ಜೀವನ ಅಥವಾ ನಮ್ಮ ಕುಟುಂಬ ಜೀವನದಲ್ಲಿ ವಿವಿದ ಸಂಗತಿಗಳು ಚೆನ್ನಾಗಿ ನಡೆದಾಗ, ಅಥವಾ ನಮ್ಮ ಸಭೆಯು ಬೆಳೆಯುತ್ತಿರುವಾಗ, ಅಥವಾ ನಾವು ಲೋಕದಲ್ಲಿ ಶ್ರೀಮಂತರಾದಾಗ, ಹೆಮ್ಮೆಯಿಂದ ಉಬ್ಬಿಕೊಳ್ಳುವುದು ತುಂಬಾ ಸುಲಭ. ಬೇರೆ ಯಾವುದೇ ಪಾಪಕ್ಕಿಂತ ಹೆಚ್ಚಾಗಿ, ನಾವು ನಮ್ಮ ಆತ್ಮಿಕ ಅಹಂಕಾರ ಮತ್ತು ಸ್ವಾರ್ಥತೆಯ ಕುರಿತು ಬೆಳಕನ್ನು ಪಡೆಯಬೇಕಿದೆ. ಈ ವಿಷಯಗಳಲ್ಲಿ ನಮ್ಮನ್ನು ನಾವೇ ಮರುಳುಮಾಡಿಕೊಳ್ಳುವುದು ತುಂಬಾ ಸುಲಭ. ನಾವು ನಿಜವಾಗಿ ಬಹಳ ಅಹಂಕಾರಿಗಳು ಮತ್ತು ಸ್ವಾರ್ಥಿಗಳು ಆಗಿದ್ದರೂ, ನಾವು ಬಹಳ ದೀನರು ಮತ್ತು ನಿಸ್ವಾರ್ಥಿಗಳೆಂದು ನಾವು ಯೋಚಿಸಬಹುದು. ಸೈತಾನನು ಒಬ್ಬ ದೊಡ್ಡ ಮೋಸಗಾರನಾಗಿದ್ದಾನೆ.

ನಮ್ಮ ನಿಜಸ್ಥಿತಿಯನ್ನು ಗುರುತಿಸಲು ಇಲ್ಲಿ ಕೊಟ್ಟಿರುವ ಆತ್ಮಿಕ ಅಹಂಕಾರದ ಕೆಲವು ಚಿಹ್ನೆಗಳು ನಮಗೆ ಸಹಾಯ ಮಾಡಬಹುದು: ನೊಂದುಕೊಳ್ಳುವುದು, ಕೋಪಗೊಳ್ಳುವುದು, ಅಶುದ್ಧವಾದ ಲೈಂಗಿಕ ಆಲೋಚನೆ ಮಾಡುವ ಹವ್ಯಾಸ, ತಪ್ಪನ್ನು ಒಪ್ಪಿಕೊಳ್ಳಲು ಇಷ್ಟಪಡದಿರುವುದು, ಕ್ಷಮೆ ಯಾಚಿಸಲು ತಡಮಾಡುವುದು, ಸಭೆಯಲ್ಲಿ ಸಹ-ವಿಶ್ವಾಸಿಗಳೊಂದಿಗೆ ಅನ್ಯೋನ್ಯತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸದಿರುವುದು, ಇತ್ಯಾದಿ.

ಒಬ್ಬ ಗರ್ವಿಷ್ಟನಾದ ನಾಯಕನು ತನ್ನ ಸಭೆಯಲ್ಲಿ ಒಬ್ಬ ಸರ್ವಾಧಿಕಾರಿಯಂತೆ ವರ್ತಿಸುತ್ತಾನೆ ಮತ್ತು ಒಂದು ಕಂಪೆನಿಯ ಮುಖ್ಯಸ್ಥನು ತನ್ನ ಕಂಪೆನಿಯನ್ನು ನಡೆಸುವಂತೆ ಸಭೆಯನ್ನು ನಡೆಸುತ್ತಾನೆ. ಇಂತಹ ಮನುಷ್ಯನು ಎಂದಿಗೂ ಸಭೆಯನ್ನು ಕ್ರಿಸ್ತನ ದೇಹವಾಗಿ ನಿರ್ಮಿಸಲಾರನು.

ಆತ್ಮಿಕ ಅಹಂಕಾರವು ದೇಹದ ವಾಸನೆ ಮತ್ತು ಬಾಯಿಯ ವಾಸನೆಯಂತಿದೆ. ನಮಗೆ ನಮ್ಮ ಸ್ವಂತ ದೇಹದ ವಾಸನೆಯ ಅರಿವಿರುವುದಿಲ್ಲ. ಆದರೆ ಇತರರಿಗೆ ಆ ವಾಸನೆ ಬರುತ್ತದೆ. ಉದಾಹರಣೆಗೆ, ಒಬ್ಬ ಸಭಾಹಿರಿಯನು ತನ್ನ ದೇವರ ಸೇವೆಯ ಬಗ್ಗೆ ಹೆಮ್ಮೆಪಡುವಾಗ, ಅವನಿಂದ ಆತ್ಮಿಕ ಜಂಬದ ಗಬ್ಬುನಾತ ಹೊರಹೊಮ್ಮುತ್ತಿದೆಯೆಂದು ಅವನು ಗ್ರಹಿಸುವುದಿಲ್ಲ. ಆದರೆ ಆತನ ಆತ್ಮಿಕ ಅಹಂಕಾರವನ್ನು ಒಬ್ಬ ದೇವಭಕ್ತನು ತಕ್ಷಣವೇ ಗುರುತಿಸುತ್ತಾನೆ.

ಒಬ್ಬ ನಾಯಕನ ಅಹಂಕಾರವು ಅವನ ಸಭೆಯನ್ನು ಬಾಬೆಲಿನ ಸಭೆಯಾಗಿ ಮಾರ್ಪಡಿಸುತ್ತದೆ; ನಾವು ಇದನ್ನು ನೆಬೂಕದ್ನೆಚ್ಚರನ ಮನೋಭಾವದಲ್ಲಿ ಕಾಣುತ್ತೇವೆ (ದಾನಿ. 4:30). ದೇವರು ಅವನನ್ನು ತಕ್ಷಣವೇ ತಗ್ಗಿಸಿದರು ಮತ್ತು ತಿರಸ್ಕರಿಸಿದರು.

ವಯಸ್ಸಿನಲ್ಲಿ ಹಿರಿಯರಾದ ಸಹೋದರರ ಕುರಿತು ಹಾಗೂ ಸ್ವತಃ ದೇವರು ಸಾಕ್ಷಿ ನೀಡಿ ತೋರಿಸಿಕೊಟ್ಟಂತ ಜನರನ್ನು ಕುರಿತು ಇರಬೇಕಾದ ಗೌರವಭಾವವನ್ನು ಆತ್ಮಿಕ ಅಹಂಕಾರವು ಅಳಿಸಿಹಾಕುತ್ತದೆ. ಇಂತಹ ನಾಯಕನು ತನ್ನ ಸಭೆಯ ಜನರು ತನಗೆ ಅಧೀನರಾಗಬೇಕೆಂದು ಬಯಸುತ್ತಾನೆ, ಆದರೆ ದೇವರು ಅವನ ಮೇಲೆ ಇರಿಸಿರುವ ಯಾವುದೇ ಆತ್ಮಿಕ ಅಧಿಕಾರಿಗೆ ಅವನು ತಲೆಬಾಗಿಸಲು ಬಯಸುವುದಿಲ್ಲ. ಕ್ರೈಸ್ತರಲ್ಲಿ ಈ ಗೌರವಭಾವದ ಕೊರತೆಯು ಕೊನೆಯ ಕಾಲದಲ್ಲಿ ಹೆಚ್ಚು ಹೆಚ್ಚಾಗಿ ಕಂಡುಬರಲಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತಲಿನ ಅನೇಕ ಮಕ್ಕಳಲ್ಲಿ ಮತ್ತು ಯುವಜನರಲ್ಲಿ ನಾವು ಇದನ್ನು ನೋಡುತ್ತೇವೆ. ಅವರು ಹಿರಿಯರೊಂದಿಗೆ ಮತ್ತು ದೇವಭಕ್ತರಾದ ಸಹೋದರರೊಂದಿಗೆ ಮಾತನಾಡುವ ರೀತಿಯಲ್ಲಿ ಇದು ಕಂಡುಬರುತ್ತದೆ.

ದಿಯೋತ್ರೇಫನ ಉದಾಹರಣೆ (3 ಯೋಹಾ. 1:9) ಮತ್ತು ಅಪೊಸ್ತಲ ಯೋಹಾನನು ಪ್ರಕಟನೆ ಗ್ರಂಥದಲ್ಲಿ ಪ್ರಸ್ತಾಪಿಸಿದ ಐದು ಸಭೆಗಳ ಹಿಂಜಾರಿದ ಹಿರಿಯರ ಉದಾಹರಣೆಗಳು (ಪ್ರಕ. 2,3) ನಮ್ಮೆಲ್ಲರಿಗೆ ಎಚ್ಚರಿಕೆಯಾಗಿವೆ. ನಾವು ಈಗಾಗಲೇ ನೋಡಿದ ಹಾಗೆ, ಆ ನಾಯಕರು ತಮ್ಮನ್ನು ತಾವೇ ತೀರ್ಪುಮಾಡಿಕೊಂಡಿದ್ದರೆ, ಅವರ ತಪ್ಪುಗಳನ್ನು ಸ್ವತಃ ದೇವರು ಅವರಿಗೆ ನೇರವಾಗಿ ತೋರಿಸುತ್ತಿದ್ದರು. ಆಗ ದೇವರು ಇವರ ಸೋಲುಗಳನ್ನು ಅಪೊಸ್ತಲ ಯೋಹಾನನ ಮೂಲಕ ತೋರಿಸುವ ಅವಶ್ಯಕತೆ ಇರುತ್ತಿರಲಿಲ್ಲ.

ನಾವು ನಮ್ಮನ್ನೇ ತೀರ್ಪುಮಾಡುವುದನ್ನು ನಿಲ್ಲಿಸಿದಾಗ, ನಾವು ’ತಜ್ಞರೆಂದು’ ಭಾವಿಸಿ, ಇತರರಿಗೆ ಪ್ರಸಂಗ ಮಾಡುವುದಕ್ಕೆ ಪ್ರಾರಂಭಿಸುತ್ತೇವೆ. ಆಗ ಕರ್ತರು ನಮ್ಮ ಸಂಗಡ ಇರುವುದಿಲ್ಲ. ಆದ್ದರಿಂದ, ನಾವು ನಮ್ಮನ್ನು ಪ್ರತಿದಿನ ತೀರ್ಪುಮಾಡಿಕೊಂಡು, ಯಾವಾಗಲೂ ನಮ್ಮ ಕುರಿತು ಮತ್ತು ನಮ್ಮ ಸೇವೆಯ ಕುರಿತು ಅಲ್ಪವಾದ ಯೋಚನೆಯುಳ್ಳವರಾಗಿ ಜೀವಿಸಬೇಕು. ನಮ್ಮ ಜೀವನ ಮತ್ತು ನಮ್ಮ ಸೇವೆಯ ಕುರಿತು ’ದೇವರು ಸಾಕ್ಷಿ ಕೊಡುತ್ತಿದ್ದಾರೆಯೇ?’ ಎಂಬುದಾಗಿ ನಾವು ನಿರಂತರವಾಗಿ ನಮ್ಮನ್ನು ಪರಿಶೀಲಿಸಬೇಕು (ಗಲಾ. 6:4). ಅಂತಹ ಸಾಕ್ಷಿ ಇಲ್ಲವಾದರೆ, ನಮ್ಮ ಜೀವನದಲ್ಲಿ ಯಾವುದೋ ದೊಡ್ಡ ತಪ್ಪು ನಡೆಯುತ್ತಿದೆ.

ನಾನು ಎಲ್ಲಾ ನಾಯಕರಿಗೆ ಮೂರು ಅಂಶಗಳನ್ನು ಒಳಗೊಂಡ ಈ ಸಲಹೆಯನ್ನು ಕೊಡುತ್ತೇನೆ:

  • 1. ಯಾವಾಗಲೂ ನಿಮ್ಮ ಮುಖವನ್ನು ಧೂಳಿನಲ್ಲಿ ಇಟ್ಟುಕೊಂಡು ದೇವರನ್ನು ಆರಾಧಿಸುವವರಾಗಿರಿ.
  • 2. ನೀವು ಕೇವಲ ಸಾಮಾನ್ಯ ಸಹೋದರರೆಂದು ಯಾವಾಗಲೂ ನೆನಪಿರಲಿ.
  • 3. ನೀವು ಕರ್ತರನ್ನು ಬಹಳ ಪ್ರೀತಿ ಮಾಡುತ್ತೀರೆಂದು ಯೋಚಿಸದೆ, ಕರ್ತರು ನಿಮ್ಮ ಮೇಲೆ ಇಟ್ಟಿರುವ ಪ್ರೀತಿಯ ಕುರಿತು ಯಾವಾಗಲೂ ಧ್ಯಾನಿಸಿರಿ.
  • "ಆತ್ಮದಲ್ಲಿ ಬಡವರು" ಎಂದರೆ, ನಮ್ಮನ್ನು ಅತ್ಯಲ್ಪವೆಂದು ಭಾವಿಸುವುದು (ಮತ್ತಾ. 5:3 - Amplified Bible) ಮತ್ತು ನಿರಂತರವಾಗಿ ವೈಯಕ್ತಿಕ ಹಾಗೂ ಆತ್ಮಿಕ ಕೊರತೆಯುಳ್ಳವರಾಗಿ ಜೀವಿಸುವುದು.