ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಶಿಷ್ಯಂದಿರಿಗೆ
WFTW Body: 

ಯೇಸುವು ಹೇಳಿದ ಸಾಮ್ಯಗಳಲ್ಲಿ ಏಳು ಸಾಮ್ಯಗಳನ್ನು ನಾವು ಮತ್ತಾ. 13:1-52 ರಲ್ಲಿ ಓದುತ್ತೇವೆ. ಇವುಗಳು ಪರಲೋಕ ರಾಜ್ಯದ ಸಾಮ್ಯಗಳೆಂದು ಕರೆಯಲ್ಪಡುತ್ತವೆ. ಬಿತ್ತನೆಗಾರನ ಸಾಮ್ಯವು ಮೊದಲನೆಯದಾಗಿತ್ತು. ಯೇಸುವು ಈ ಅಧ್ಯಾಯದ ಉದ್ದಕ್ಕೂ ತೋರಿಸಿದ್ದು ಪರಲೋಕ ರಾಜ್ಯದ ’ಹೊರನೋಟ’ವನ್ನು - ಅಂದರೆ ಈ ಲೋಕದ ಜನರ ದೃಷ್ಟಿಯಲ್ಲಿ "ಸಭೆ"ಯು ಹೇಗೆ ಕಂಡುಬರುತ್ತಿತ್ತು ಎಂಬುದರ ಬಗ್ಗೆ - ಎಂದು ಗಮನಿಸಿರಿ. ಪರಲೋಕ ರಾಜ್ಯದ ಜನರ ಹೃದಯದಲ್ಲಿ ’ಒಳ್ಳೆಯ ನೆಲ’ ಮತ್ತು ’ಕೆಟ್ಟ ನೆಲ’ ಇರುತ್ತದೆ, ಎಂದು ಆತನು ಹೇಳಲು ಇದೇ ಕಾರಣವಾಗಿತ್ತು.

ಪರಲೋಕ ರಾಜ್ಯವು ’ಗೋಧಿ’ ಮತ್ತು ’ಹಣಜಿ’ ಎರಡೂ ಇರುವ ಹೊಲದ ಹಾಗೆ ಇದೆ, ಎಂದೂ ಸಹ ಯೇಸುವು ಹೇಳಿದರು. ಆ ಮೇಲೆ ಇದನ್ನು ವಿವರಿಸಿ, ಹೊಲವೆಂದರೆ ’ಈ ಲೋಕವು, ಕ್ರೈಸ್ತಸಭೆಯಲ್ಲ,’ ಎಂದು ಅವರು ತಿಳಿಸಿದರು(ಮತ್ತಾ. 13:38). ಕೆಲವು ಕ್ರೈಸ್ತರು ಈ ಸಾಮ್ಯವನ್ನು ತಪ್ಪಾಗಿ ಉಲ್ಲೇಖಿಸಿ, "ಸಭೆಯಲ್ಲಿ ಗೋಧಿ ಮತ್ತು ಹಣಜಿ ಎರಡೂ ಬೆಳೆಯುವದಕ್ಕೆ ಅವಕಾಶ ನೀಡಬೇಕೆಂದು ಯೇಸುವು ಹೇಳಿದ್ದರಿಂದ, ನಾವು ಅವುಗಳನ್ನು ವಿಂಗಡಿಸಬಾರದು," ಎಂದು ಹೇಳುತ್ತಾರೆ. ಅಂದರೆ, ನಾವು ಸಭೆಯಲ್ಲಿ ಮಾನಸಾಂತರ ಹೊಂದದೇ ಇರುವವರು ಮತ್ತು ಮಾನಸಾಂತರ ಹೊಂದಿದವರು ಇಬ್ಬರಿಗೂ ಅವಕಾಶ ನೀಡಬೇಕು, ಎಂಬುದಾಗಿ. ಇವರು ಹೀಗೆ ಹೇಳಲು ಕಾರಣ, ಇವರು ವಾಕ್ಯವನ್ನು ಸರಿಯಾಗಿ ಓದಿಲ್ಲ. ’ಲೋಕವು’ ಹೊಲವಾಗಿದೆ - ಮತ್ತು ವಿಶ್ವಾಸಿಗಳು ಮತ್ತು ಅವಿಶ್ವಾಸಿಗಳು ಜೊತೆಯಾಗಿ ಬೆಳೆಯಲು ದೇವರು ಅವಕಾಶ ನೀಡುವುದು ಅಲ್ಲಿ - ಸಭೆಯ ಒಳಗೆ ಅಲ್ಲ. ಸ್ಥಳೀಯ ಸಭೆಯಲ್ಲಿ ಸದಸ್ಯರಾಗುವ ಅರ್ಹತೆ ಪಾಪಗಳಿಂದ ತಿರುಗಿಕೊಂಡು, ಕ್ರಿಸ್ತನಲ್ಲಿ ನಂಬಿಕೆ ಇರಿಸಿ, ಹೊಸದಾಗಿ ಹುಟ್ಟಿರುವವರಿಗೆ ಮಾತ್ರ ಇದೆ, ಎಂಬುದನ್ನು ನಾವು (ಮಾನವ ತಿಳುವಳಿಕೆಗೆ ತಕ್ಕಂತೆ) ಖಚಿತ ಪಡಿಸಬೇಕು. ಇತರರಿಗೆ ಕೂಟಗಳಲ್ಲಿ ಸಂದೇಶಗಳನ್ನು ಕೇಳಿಸಿಕೊಳ್ಳುವದಕ್ಕೆ ಸ್ವಾಗತವಿದೆ. ಆದರೆ ಅವರು ಹೊಸದಾಗಿ ಹುಟ್ಟುವದಕ್ಕೆ ಮೊದಲು, ಸ್ಥಳೀಯ ಸಭೆಯ - ಕ್ರಿಸ್ತನ ದೇಹದ - ಅಂಗವಾಗಲು ಸಾಧ್ಯವಿಲ್ಲ, ಎಂದು ಅವರಿಗೆ ಸ್ಪಷ್ಟಪಡಿಸ ಬೇಕಾಗುತ್ತದೆ.

ಮತ್ತಾ. 13:31-32, ಸ್ವಾಭಾವಿಕವಾಗಿ ಒಂದು ಸಣ್ಣ ಗಿಡವಾಗಿ ಮಾತ್ರ ಬೆಳೆಯುವ ಒಂದು ಸಾಸಿವೆಕಾಳಿನ ಕುರಿತು ಒಂದು ಸಾಮ್ಯವಾಗಿದೆ. ಆದರೆ ಈ ದೃಷ್ಟಾಂತದಲ್ಲಿ, ಆ ಸಾಸಿವೆಕಾಳು ’ಅಸ್ವಾಭಾವಿಕ’ ಬೆಳವಣಿಗೆ ಹೊಂದಿ, ಒಂದು ದೊಡ್ಡ ಮರವಾಗುತ್ತದೆ. ಸ್ಥಳೀಯ ಸಭೆಯು ದೇವರು ಉದ್ದೇಶಿಸದ ರೀತಿಯಲ್ಲಿ ಬೆಳೆದರೆ ಹೇಗಿರುತ್ತದೆ, ಎಂಬುದನ್ನು ಈ ಸಾಮ್ಯವು ತೋರಿಸುತ್ತದೆ. ಪ್ರತಿಯೊಂದು ಸ್ಥಳೀಯ ಸಭೆಯು (ಒಂದು ಸಣ್ಣ ಸಾಸಿವೆ ಗಿಡದಂತೆ), ಸಹೋದರ ಸಹೋದರಿಯರ ಒಂದು ಚಿಕ್ಕ ಗುಂಪಾಗಿದ್ದು, ಅಲ್ಲಿ ಎಲ್ಲರೂ ಒಬ್ಬರನ್ನೊಬ್ಬರು ಅರಿತುಕೊಂಡು, ಪರಸ್ಪರ ಪ್ರೀತಿ ಇರಿಸಿಕೊಂಡು, ಕ್ರಿಸ್ತನ ಜೀವವನ್ನು ತಮ್ಮ ಸ್ಥಳೀಯ ಪ್ರದೇಶದ ಜನರಿಗೆ ಪ್ರದರ್ಶಿಸಬೇಕು ಎಂಬುದು ದೇವರ ಉದ್ದೇಶವಾಗಿದೆ. ಆದರೆ ವರಗಳನ್ನು ಪಡೆದಿರುವ ಬೋಧಕರು ದೇವರ ಯೋಜನೆಗೆ ವಿರುದ್ಧವಾಗಿ, ಬೃಹತ್ ಸಭೆಗಳನ್ನು (ದೊಡ್ಡ ಮರದಂತೆ) ಕಟ್ಟಿದ್ದಾರೆ - ಅಲ್ಲಿ ಕ್ರಿಕೆಟ್ ಮ್ಯಾಚ್ಗಳಿಗೆ ಅಥವಾ ಸಿನೆಮಾ ಮಂದಿರಗಳಿಗೆ ಹೋಗುವ ಜನರ ಹಾಗೆ, ಜನರು ಕೇವಲ ಪ್ರಸಂಗಗಳನ್ನು ಕೇಳಿಸಿಕೊಳ್ಳುವುದಕ್ಕಾಗಿ ಬರುತ್ತಾರೆ.

’ಬಹಳ ಸ್ವಲ್ಪ ಜನ’ ಮಾತ್ರ ನಿತ್ಯಜೀವಕ್ಕೆ ಹೋಗುವ ದಾರಿಯನ್ನು ಕಂಡುಕೊಳ್ಳುತ್ತಾರೆ, ಎಂದು ಯೇಸುವು ಹೇಳಿದರು (ಮತ್ತಾ. 7:13-14). ಆದರೆ ನಿಪುಣ ಬೋಧಕರು ಪವಿತ್ರತೆಯ ಮಟ್ಟವನ್ನು ಕೆಳಗಿಳಿಸಿ, ತಮ್ಮ ಬೋಧನೆಯಲ್ಲಿ ಮಾನಸಾಂತರ, ಸ್ವಾರ್ಥ ಸ್ವಭಾವದ ನಿರಾಕರಣೆ ಮತ್ತು ಸ್ವಂತ ಶಿಲುಬೆಯನ್ನು ಹೊರುವದನ್ನು ಸಂಪೂರ್ಣವಾಗಿ ಕೈಬಿಟ್ಟು, ಜನರ ದೊಡ್ಡ ಗುಂಪನ್ನು ಸುಲಭವಾಗಿ ಸೆಳೆಯುತ್ತಾರೆ. ಹೀಗೆ, ಕ್ರಿಸ್ತನ ಶಿಷ್ಯರಾಗಲು ಯಾವ ಆಸಕ್ತಿಯೂ ಇಲ್ಲದ, ಆದರೆ ಭಾನುವಾರದ ದಿನ ಒಳ್ಳೆಯ ಪ್ರಸಂಗಗಳನ್ನು ಕೇಳಿಸಿಕೊಳ್ಳಲು ಇಷ್ಟಪಡುವ ಜನರ ಒಂದು ಗುಂಪನ್ನು ಅವರು ಸೇರಿಸಿಕೊಳ್ಳಬಹುದು. ನೀವು ಈ ರೀತಿಯಾಗಿ ಸಭೆಯ ಗಾತ್ರವನ್ನು ಬೆಳೆಸಿದಾಗ ಮುಂದೆ ಏನು ಸಂಭವಿಸುತ್ತದೆ ಎನ್ನುವದನ್ನು ಯೇಸುವು ಈ ಸಾಮ್ಯದಲ್ಲಿ ಹೇಳಿದ್ದಾರೆ: ಹಾರಾಡುವ ಪಕ್ಷಿಗಳು (ಹಿಂದಿನ ಸಾಮ್ಯದಲ್ಲಿ, ಹಕ್ಕಿಗಳು ಕೆಡುಕನ ಆಳುಗಳು ಎಂದು ಯೇಸು ತಿಳಿಸಿದರು - ಮತ್ತಾ. 13:4,19) ಬಂದು ಮರದ ಕೊಂಬೆಗಳಲ್ಲಿ ವಾಸ ಮಾಡುತ್ತವೆ. ಇನ್ನೊಂದು ಕಡೆ, ನೀವು ಕೇವಲ ಶಿಷ್ಯರನ್ನು ಮಾಡಲು ಶ್ರಮಿಸಿದ್ದರೆ, ನಿಮ್ಮ ಸಭೆಯು ಗಾತ್ರದಲ್ಲಿ ಚಿಕ್ಕದಾಗಿ ಇರುತ್ತಿತ್ತು, ಆದರೆ ಅದು ಹೆಚ್ಚು ಪರಿಶುದ್ಧವಾಗಿ, ಸೈತಾನನ ಪ್ರಭಾವಗಳಿಂದ ಮತ್ತು ಆ ಪ್ರಭಾವಗಳಿಂದ ಉಂಟಾಗುವ ಇತರ ಸಮಸ್ಯೆಗಳಿಂದ ಮುಕ್ತವಾಗಿ ಇರುತ್ತಿತ್ತು!

ಮತ್ತಾ. 13:33 ರಲ್ಲಿ, ಪರಲೋಕ ರಾಜ್ಯವು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ, ಎನ್ನುವದನ್ನು ಯೇಸುವು ಉಲ್ಲೇಖಿಸಿದರು. ಇದು ಸ್ಥಳೀಯ ಸಭೆಯಲ್ಲಿ ನೈತಿಕ ಭ್ರಷ್ಟಾಚಾರವು ಹೇಗೆ ಹರಡಬಹುದು ಎಂಬುದರ ಕುರಿತಾದ ಒಂದು ಪ್ರವಾದನೆಯಾಗಿದೆ. ಸಭೆಯು ಎದುರಿಸಲಿರುವ ಅನೇಕ ಅಪಾಯಗಳ ಬಗ್ಗೆ ಯೇಸುವು ಮತ್ತೆ ಮತ್ತೆ ಎಚ್ಚರಿಸುತ್ತಾರೆ - ಕೆಟ್ಟ ನೆಲ, ಹಣಜಿ, ಸಭೆಯೊಳಗೆ ದೆವ್ವಗಳು ಕೂತಿರುವುದು, ಮತ್ತು ಹುಳಿಹಿಟ್ಟು. ಈ ಸಾಮ್ಯಗಳ ಕಡೆಗೆ ಕ್ರೈಸ್ತ ಮುಖಂಡರು ಗಮನ ಹರಿಸಿದ್ದರೆ, ಅವರು ತಮ್ಮ ಸಭೆಗಳನ್ನು ಆತ್ಮಿಕ ಮರಣದಿಂದ ಪಾರುಮಾಡುತ್ತಿದ್ದರು - ಮತ್ತು ಅವರು ಶಿಷ್ಯತ್ವಕ್ಕೆ ಒತ್ತು ನೀಡುತ್ತಿದ್ದರು.

ಯೇಸುವು ಮತ್ತಾ. 13:44 ರಲ್ಲಿ, ಪರಲೋಕ ರಾಜ್ಯವು ಒಬ್ಬ ಮನುಷ್ಯನು ಒಂದು ಹೊಲದಲ್ಲಿ ಹೂಳಿಟ್ಟ ನಿಧಿಯನ್ನು ಕಂಡುಕೊಳ್ಳುವದಕ್ಕೆ ಹೋಲುತ್ತದೆ, ಎಂದು ಹೇಳಿದರು. ಆ ಮನುಷ್ಯನು ಆ ಹೊಲವನ್ನು ಕೊಂಡುಕೊಳ್ಳುವುದಕ್ಕಾಗಿ ’ತನ್ನ ಸಂಪೂರ್ಣ ಆಸ್ತಿಯನ್ನು’ ಮಾರಾಟ ಮಾಡಿದನು. ಇದು ಯೇಸುವಿನ ಶಿಷ್ಯನಾಗುವದಕ್ಕಾಗಿ - ಮತ್ತು ಆ ಮೂಲಕ ದೇವರ ರಾಜ್ಯವನ್ನು ಪಡೆಯುವುದಕ್ಕಾಗಿ - ತನಗೆ ಅಮೂಲ್ಯವಾದ ಪ್ರತಿಯೊಂದು ಸಂಗತಿಯನ್ನು ಬಿಟ್ಟುಕೊಡಲು ಸಿದ್ಧನಾಗಿರುವ ಒಬ್ಬ ವ್ಯಕ್ತಿಯ ಒಂದು ಚಿತ್ರಣವಾಗಿದೆ.

ಇದೇ ಸತ್ಯತೆಗೆ ಒತ್ತುಕೊಡುವುದಕ್ಕಾಗಿ ಯೇಸುವು ಇನ್ನೊಂದು ಸಾಮ್ಯವನ್ನು ಹೇಳಿದರು: ಒಬ್ಬ ಮನುಷ್ಯನು ತನ್ನ ಬದುಕನ್ನೆಲ್ಲಾ ಮಾರಿ ಬಹು ಬೆಲೆಯುಳ್ಳ ಒಂದು ಮುತ್ತನ್ನು ಕೊಂಡುಕೊಂಡನು (ಮತ್ತಾ. 13:45). ಇವೆರಡು ಸಾಮ್ಯಗಳಲ್ಲೂ, "ತನ್ನಲ್ಲಿದ್ದ ಎಲ್ಲವನ್ನೂ" ಎಂಬ ಹೇಳಿಕೆಯನ್ನು ಗಮನಿಸಿರಿ. "ನಿಮ್ಮಲ್ಲಿ ಯಾವನೇ ಆಗಲೀ ತನಗಿರುವದನ್ನೆಲ್ಲಾ ಬಿಟ್ಟುಬಿಡದೆ ಹೋದರೆ, ಅವನು ನನ್ನ ಶಿಷ್ಯನಾಗಲಾರನು," ಎಂದು ಯೇಸುವು ಹೇಳಿದರು (ಲೂಕ. 14:33). ಶಿಷ್ಯನಾಗುವದಕ್ಕೆ ಮತ್ತು ದೇವರ ರಾಜ್ಯವನ್ನು ಪಡೆಯುವುದಕ್ಕೆ ಇರುವ ಒಂದೇ ದಾರಿ ಇದಾಗಿದೆ.

ಮತ್ತಾ. 13:47-50 ರಲ್ಲಿ ಯೇಸುವು ನೀಡಿದ ಚಿತ್ರಣದಲ್ಲಿ, ಲೋಕದಲ್ಲಿ ದೇವರ ರಾಜ್ಯವು ಎರಡು ರೀತಿಯ ಮೀನುಗಳನ್ನು ಹೊಂದಿರುತ್ತದೆ - ಒಳ್ಳೆಯ ಮೀನು ಮತ್ತು ಕೆಟ್ಟ ಮೀನು. ಆದರೆ ಯುಗ ಸಮಾಪ್ತಿಯಾದಾಗ, ದೇವದೂತರು ಹೊರಟು ಬಂದು, ನೀತಿವಂತರೊಳಗಿಂದ ಕೆಟ್ಟವರನ್ನು ಬೇರೆ ಮಾಡುತ್ತಾರೆ.