ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಶಿಷ್ಯಂದಿರಿಗೆ
WFTW Body: 

2 ಕೊರಿಂಥದವರಿಗೆ 11:23-33'ರಲ್ಲಿ, ಪೌಲನು ತನ್ನ ಕರ್ತನ ಸೇವೆಯಲ್ಲಿ ತಾನು ಅನುಭವಿಸಿದ ವಿವಿಧ ಶೋಧನೆಗಳ ಬಗ್ಗೆ ಮಾತನಾಡಿದ್ದಾನೆ - ಆತನ ಸೆರೆಮನೆಯ ವಾಸಗಳು, ಚಾಟಿಗಳಿಂದ ಮತ್ತು ದೊಣ್ಣೆಗಳಿಂದ ಆತನು ಏಟುಗಳನ್ನು ತಿಂದದ್ದು, ನಿದ್ದೆಗೆಟ್ಟು ರಾತ್ರಿಗಳನ್ನು ಕಳೆದದ್ದು, ಹಸಿವು ಬಾಯಾರಿಕೆಗಳನ್ನು ಅನುಭವಿಸಿದ್ದು, ಚಳಿ, ಬಿಸಿಲು, ಮಳೆ ಮುಂತಾದ ವಿಪರೀತ ಹವಾಮಾನವನ್ನು ಎದುರಿಸಿದ್ದು, ಕಳ್ಳರಿಂದ ಅಪಾಯಕ್ಕೆ ಒಳಗಾದದ್ದು, ಇತ್ಯಾದಿ. ಎಷ್ಟೋ ಸಲ ಆತನಿಗೆ ಹೊದ್ದುಕೊಂಡು ಮಲಗುವುದಕ್ಕೆ ಕಂಬಳಿ ಅಥವಾ ಚಾದರ ಇರಲಿಲ್ಲ, ಕೆಲವೊಮ್ಮೆ ಊಟ ತಿಂಡಿ ಇಲ್ಲದೆ ಇರುತ್ತಿದ್ದನು; ಆ ಸಮಯದಲ್ಲಿ ಬಟ್ಟೆಬರೆಗಳಿಗಾಗಿ ಮತ್ತು ಊಟ ತಿಂಡಿಗಾಗಿ ಆತನ ಬಳಿ ಹಣ ಇರಲಿಲ್ಲ. ದೇವರು, ಕಷ್ಟಗಳನ್ನು ಎದುರಿಸುತ್ತಿದ್ದ ಇತರ ಕ್ರೈಸ್ತ ವಿಶ್ವಾಸಿಗಳಿಗೆ ಒಂದು ಚಿಕ್ಕ ಮಾದರಿಯಾಗಿ ತೋರಿಸುವ ಉದ್ದೇಶದಿಂದ, ಆತನನ್ನು ಇವೆಲ್ಲಾ ಕಷ್ಟ ಸಂಕಟಗಳ ಮೂಲಕ ನಡೆಸಿದರು. ಪೌಲನು ಈ ಪ್ರತಿಯೊಂದು ಶೋಧನೆಯಲ್ಲೂ ತನ್ನನ್ನು ತಗ್ಗಿಸಿಕೊಂಡನು.

ಪೌಲನು ಹೀಗೆ ಹೇಳಿದ್ದಾನೆ, "ಒಂದು ಸಲ ದಮಸ್ಕದ ಅಧಿಪತಿಯು ನನ್ನನ್ನು ಹಿಡಿಯಬೇಕೆಂದು ಕಾಯುತ್ತಿದ್ದಾಗ, ನಾನು ಒಂದು ಬೆತ್ತದ ಬುಟ್ಟಿಯಲ್ಲಿ ಕೂರಿಸಲ್ಪಟ್ಟು ಕಿಟಿಕಿಯೊಳಗಿಂದ ಇಳಿಸಲ್ಪಟ್ಟು ಅವನ ಕೈಯಿಂದ ತಪ್ಪಿಸಿಕೊಂಡೆನು"(2 ಕೊರಿ. 11:32,33). ಒಂದು ವೇಳೆ ನೀವು ಒಬ್ಬ ಅಪೊಸ್ತಲನಾಗಿದ್ದರೆ, ಮತ್ತು ನೀವು ಇಂತಹ ಅವಮಾನವನ್ನು ಅನುಭವಿಸಿದ್ದರೆ, ನೀವು ಅದನ್ನು ಯಾರಿಗೂ ತಿಳಿಸದೆ ಸುಮ್ಮನಿರಬಹುದು. ಆದರೆ ಪೌಲನು ತಾನೊಬ್ಬ ದೊಡ್ಡ ಮನುಷ್ಯನು ಮತ್ತು ದೇವರು ತನ್ನನ್ನು ರಕ್ಷಿಸಲು ಕೆಲವು ದೇವದೂತರನ್ನು ಕಳುಹಿಸುತ್ತಾರೆ, ಎಂಬುದಾಗಿ ಕೊರಿಂಥದ ಕ್ರೈಸ್ತ ವಿಶ್ವಾಸಿಗಳು ಯೋಚಿಸಲಿ, ಎಂದು ಇಚ್ಛಿಸಲಿಲ್ಲ. ಆತನು ಒಬ್ಬ ಸಾಮಾನ್ಯ ಮನುಷ್ಯನಾಗಿದ್ದನು ಮತ್ತು ಇತರರು ತನ್ನನ್ನು ಆ ರೀತಿಯಾಗಿ ತಿಳಿಯಬೇಕೆಂದು ಅವನ ಇಚ್ಛೆಯಾಗಿತ್ತು. "ಯಾವನೂ ನನ್ನಲ್ಲಿ ಕಾಣುವುದಕ್ಕಿಂತಲೂ, ನನ್ನಿಂದ ಕೇಳುವುದಕ್ಕಿಂತಲೂ ಹೆಚ್ಚಾಗಿ ನನ್ನ ಕುರಿತು ಎಣಿಸಬಾರದು," ಎಂದು ಅವನು ಹೇಳಿದನು (2 ಕೊರಿ. 12:6 - Living Bible). ಇತರರ ಮುಂದೆ ತಮ್ಮನ್ನು ತೋರಿಸಿಕೊಳ್ಳುವಾಗ ತಮ್ಮ ಕುರಿತಾಗಿ ಒಂದು ಶ್ರೇಷ್ಠವಾದ ಅಭಿಪ್ರಾಯವನ್ನು ಅವರಲ್ಲಿ ಉಂಟುಮಾಡಲು ಪ್ರಯತ್ನಿಸುವ ಇಂದಿನ ಹೆಚ್ಚಿನ ದೇವರ ಸೇವಕರಿಗಿಂತ ಪೌಲನು ಎಷ್ಟು ವಿಭಿನ್ನನಾಗಿದ್ದನು.

ಪೌಲನು 2 ಕೊರಿಂಥದವರಿಗೆ 12:1'ರಲ್ಲಿ, ಕರ್ತನು ತನ್ನನ್ನು ಮೂರನೆಯ ಆಕಾಶಕ್ಕೆ ಕರೆದೊಯ್ದ ಘಟನೆಯನ್ನು ಪ್ರಸ್ತಾಪಿಸುತ್ತಾನೆ. ಅವನು 14 ವರ್ಷಗಳ ವರೆಗೆ ಇದನ್ನು ಯಾರಿಗೂ ತಿಳಿಸಲಿಲ್ಲ. ಅವನು ಎಂಥಾ ಮನುಷ್ಯನು! ಅವನು 14 ವರ್ಷಗಳ ಕಾಲ ಈ ಅನುಭವದ ಬಗ್ಗೆ ಮೌನವಾಗಿದ್ದನು - ಮತ್ತು ಅದನ್ನು ಪ್ರಸ್ತಾಪಿಸಿದಾಗಲೂ, ಆತನು ಅದರ ಬಗ್ಗೆ ಒಂದೇ ಒಂದು ವಿವರವನ್ನೂ ನೀಡಲಿಲ್ಲ. ಹೆಚ್ಚಿನ ವಿಶ್ವಾಸಿಗಳು ಅಂತಹ ದಿವ್ಯದರ್ಶನವನ್ನು ಒಡನೆಯೇ ಮುಂದಿನ ಸಭಾಕೂಟದಲ್ಲಿ ಪ್ರಸ್ತಾಪಿಸುತ್ತಾರೆ - ಮತ್ತು ಅದರ ಪ್ರತಿಯೊಂದು ವಿವರವನ್ನೂ ಬಿಡಿಸಿ ಹೇಳುತ್ತಾರೆ! ಈ ಕಾರಣಕ್ಕಾಗಿ ಪೌಲನ ಅನುಭವವು ನಿಜವಾದದ್ದೆಂದು ನಾನು ನಂಬುತ್ತೇನೆ. ಈ ದಿನಗಳಲ್ಲಿ ಕೆಲವು ವಿಶ್ವಾಸಿಗಳು ತಮಗೆ ಪರಲೋಕದ ದರ್ಶನಗಳಾದವು ಎಂದು ಕೊಚ್ಚಿಕೊಳ್ಳುವುದು ಅವರ ಮನಸ್ಸಿನ ಫಲವತ್ತಾದ ಕಲ್ಪನೆಗಳಾಗಿವೆ - ಇದರ ಉದ್ದೇಶ ಇತರರಿಂದ ಗೌರವವನ್ನು ಪಡೆಯುವುದು ಆಗಿರುತ್ತದೆ! ನಾನು ಏಕೆ ಹೀಗೆ ಹೇಳುತ್ತೇನೆ? ಏಕೆಂದರೆ ನಿಜವಾದ ದಿವ್ಯದರ್ಶನಗಳನ್ನು ಹೊಂದಿರುವವರು (ಪೌಲನು ತಿಳಿಸಿದಂತೆ), ಅವುಗಳು "ಎಷ್ಟು ದಿವ್ಯವಾದವುಗಳು ಎಂದರೆ ಮನುಷ್ಯರು ನುಡಿಯಲು ಅಶಕ್ಯವಾದವು, ವಿವರಿಸಲಾಗದ ಮಾತುಗಳು" ಮತ್ತು "ಅದನ್ನು ಇತರರಿಗೆ ಹೇಳುವದಕ್ಕೆ ಅವರಿಗೆ ಅನುಮತಿ ಕೊಡಲ್ಪಟ್ಟಿಲ್ಲ"ಎಂದು ತಿಳಕೊಳ್ಳುತ್ತಾರೆ (2 ಕೊರಿ. 12:3-4).

ಇದರ ನಂತರ, ಪೌಲನು ತಾನು ಪಡೆದುಕೊಂಡ ಒಂದು ಕಷ್ಟಕರವಾದ ಶೋಧನೆಯ ಬಗ್ಗೆ ಮಾತನಾಡಿ, ತಾನು ನಿರಂತರವಾಗಿ ಪ್ರಾರ್ಥನೆ ಮಾಡಿದರೂ ದೇವರು ಅದನ್ನು ತೆಗೆದು ಹಾಕಲಿಲ್ಲವೆಂದು ತಿಳಿಸುತ್ತಾನೆ. ಪೌಲನು ಆ ಶೋಧನೆಯನ್ನು "ತನಗೆ ನಾಟಿದ ಶೂಲ" ಮತ್ತು "ಸೈತಾನನ ದೂತನು" ಎಂದು ಕರೆದನು - ಆದರೂ ಅದು "ದೇವರಿಂದ ಕಳುಹಿಸಲ್ಪಟ್ಟಿತ್ತು"(2 ಕೊರಿ. 12:7).ದೇವರು ಪೌಲನಿಗೆ ಕೊಟ್ಟ ಉಡುಗೊರೆ ಒಂದು ಮುಳ್ಳಾಗಿತ್ತು!! ದೇವರು ಅದನ್ನು ಪೌಲನಿಗೆ ಕೊಡುವುದಕ್ಕೆ ಕಾರಣ, ಆತನು ತನ್ನನ್ನು ಬಹಳವಾಗಿ ಹೆಚ್ಚಿಸಿಕೊಳ್ಳುವ ಅಪಾಯದಲ್ಲಿ ಇದ್ದಾನೆಂದು ಅವರು ನೋಡಿದರು. ದೇವರು ಎಲ್ಲಾ ಅಹಂಕಾರಿಗಳನ್ನು ವಿರೋಧಿಸುತ್ತಾರೆ, ಆದರೆ ಅವರು ಪೌಲನನ್ನು ಎದುರಿಸಲು ಬಯಸಲಿಲ್ಲ. ಅವರು ಆತನಿಗೆ ಕೃಪೆಯನ್ನು ಅನುಗ್ರಹಿಸಲು ಬಯಸಿದರು. ಆದರೆ ಪೌಲನು ದೀನನಾಗಿದ್ದರೆ ಮಾತ್ರ ದೇವರು ಆತನಿಗೆ ಕೃಪೆಯನ್ನು ನೀಡಬಹುದಾಗಿತ್ತು (1 ಪೇತ್ರ. 5:5). ಹಾಗಾಗಿ ಸೈತಾನನ ದೂತನು ಪೌಲನನ್ನು ಶೋಷಿಸಲು ದೇವರು ಅನುಮತಿ ಕೊಟ್ಟರು ಮತ್ತು ಅದರ ಮೂಲಕವಾಗಿ ಆತನು ಸದಾ ದೇವರನ್ನೇ ಆತುಕೊಂಡು ದೀನನಾಗಿರುವಂತೆ ಮಾಡಿದರು. ಹಾಗಾಗಿ ಕೆಲವೊಮ್ಮೆ, ಒಂದು ಉತ್ತಮ ಅಂತಿಮ ಫಲಿತಾಂಶಕ್ಕಾಗಿ, ಸೈತಾನನ ದೂತನೇ ನಮ್ಮನ್ನು ಪೀಡಿಸುವುದನ್ನು ದೇವರು ಅನುಮತಿಸಬಹುದು. ಉದಾಹರಣೆಗೆ, ಅನಾರೋಗ್ಯವು ಸೈತಾನನ ಒಬ್ಬ ದೂತನಾಗಿದ್ದಾನೆ. ನಾವು ಹೀಗೆ ಹೇಳಲು ಕಾರಣವೇನು? ಏಕೆಂದರೆ ಯೇಸುವಿನ ಹೇಳಿಕೆಯ ಪ್ರಕಾರ, "ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಉಡುಗೊರೆಗಳನ್ನು ಕೊಡಬಲ್ಲವರಾದರೆ, ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ (ಕೇವಲ) ಒಳ್ಳೆಯ ವರಗಳನ್ನು ಕೊಡುವನಲ್ಲವೇ?"(ಮತ್ತಾ. 7:11). ಸಂಪೂರ್ಣ ಒಳ್ಳೆಯತನವನ್ನು ಹೊಂದಿರುವ ದೇವರಿಗೆ ಹೋಲಿಸಿದರೆ, ನಾವೆಲ್ಲರೂ ಕೆಟ್ಟ ತಂದೆಗಳಾಗಿದ್ದೇವೆ . ಆದಾಗ್ಯೂ ನಮ್ಮಲ್ಲಿ ಯಾರೂ ಸಹ ನಮ್ಮ ಮಕ್ಕಳಿಗೆ ರೋಗಗಳನ್ನು ಕೊಡುವುದಿಲ್ಲ. ಹಾಗಾದರೆ, ಪ್ರೀತಿಯುಳ್ಳ ಪರಲೋಕದಲ್ಲಿರುವ ತಂದೆಯು ತನ್ನ ಮಕ್ಕಳಿಗೆ ಕಾಯಿಲೆಯನ್ನು ಕೊಡಲು ಹೇಗೆ ಸಾಧ್ಯವಿದೆ? ಲೋಕದಲ್ಲಿ ಹೆಚ್ಚಿನ ಕಾಯಿಲೆಗಳು ತಗಲುವುದಕ್ಕೆ ಕಾರಣ ಭೂಮಿಯು ಶಾಪಗ್ರಸ್ತವಾಗಿದೆ (ಆದಿಕಾಂಡ 3:17).ಇತರ ಕೆಲವು ಕಾಯಿಲೆಗಳು ಸೈತಾನನಿಂದ ಉಂಟಾಗುತ್ತವೆ (ಯೋಬನು 2:7).

"ಒಬ್ಬ ನಿಜವಾದ ಶಿಷ್ಯನು ಸ್ವತಃ ಬಲಹೀನನಾಗಿದ್ದು, ದೇವರ ಬಲದಿಂದಲೇ ಜೀವಿಸುವವನಾಗಿರುತ್ತಾನೆ"

ನಾವು ಆರೋಗ್ಯವಾಗಿ ಇರಬೇಕೆಂಬುದೇ ದೇವರ ಪರಿಪೂರ್ಣ ಚಿತ್ತವಾಗಿದ್ದರೂ, ಕೆಲವೊಮ್ಮೆ ಯಾವುದೋ ಉದ್ದೇಶಕ್ಕಾಗಿ, ನಾವು ಕಾಯಿಲೆಗೆ ಒಳಗಾಗುವುದನ್ನು ಅವರು ಅನುಮತಿಸಬಹುದು. ಪೌಲನು ಶೂಲದಂತಿದ್ದ ತನ್ನ ಸಂಕಟದಿಂದ ಬಿಡುಗಡೆಗಾಗಿ ಪ್ರಾರ್ಥಿಸಿದಾಗ, ದೇವರು ಅವನಿಗೆ ಬಿಡುಗಡೆಯನ್ನು ಕೊಡಲಿಲ್ಲ, ಆದರೆ ಅದಕ್ಕೆ ಬದಲಾಗಿ ಕೃಪೆಯನ್ನು ಕೊಟ್ಟು, ಆ ಸಂಕಟದಲ್ಲಿಯೂ ಆತನು ಜಯಶಾಲಿಯಾಗುವಂತೆ ಮಾಡಿದರು. ನಾವು ಸಹ ಅದೇ ಕೃಪೆಯನ್ನು ಹೊಂದಿ ಜಯಶಾಲಿಗಳಾಗಬಹುದು. 2 ಕೊರಿಂಥದವರಿಗೆ 13:4,5'ರಲ್ಲಿ ನಾವು ಈ ರೀತಿಯಾಗಿ ಓದುತ್ತೇವೆ, "ಯೇಸುವು ಬಲಹೀನಾವಸ್ಥೆಯಲ್ಲಿ ಶಿಲುಬೆಗೆ ಹಾಕಲ್ಪಟ್ಟನು ನಿಜ; ಆದರೂ ದೇವರ ಬಲದಿಂದ ಆತನು ಜೀವಿಸುವವನಾಗಿದ್ದಾನೆ. ನಾವು ಸಹ ಆತನ ಬಲಹೀನಾವಸ್ಥೆಯಲ್ಲಿ ಪಾಲುಗಾರರಾಗಿದ್ದೇವೆ; ಆದರೂ ನಾವು ಆತನೊಂದಿಗೆ ದೇವರ ಬಲದಿಂದ ಬದುಕುವವರಾಗಿದ್ದೇವೆ."

ಒಬ್ಬ ನಿಜವಾದ ಶಿಷ್ಯನು ಸ್ವತಃ ಬಲಹೀನನಾಗಿದ್ದು, ದೇವರ ಬಲದಿಂದಲೇ ಜೀವಿಸುವವನಾಗಿದ್ದಾನೆ. ಪೌಲನು ಈ ಟಿಪ್ಪಣಿಯೊಂದಿಗೆ ತನ್ನ ಪತ್ರವನ್ನು ಮುಕ್ತಾಯಗೊಳಿಸುತ್ತಾನೆ.