WFTW Body: 

ನಾವು ಯೇಸು ಕ್ರಿಸ್ತನ ರಕ್ತದಿಂದ ನೀತಿಕರಿಸಲ್ಪಟ್ಟಿದ್ದೇವೆ ಎಂದು ಸತ್ಯವೇದ ಹೇಳುತ್ತದೆ (ರೋಮ 5:9). ದೇವರು ನಮ್ಮನ್ನು ತನ್ನ ರಕ್ತದಿಂದ ತೊಳೆದಾಗ, ನಮ್ಮನ್ನು ನೀತಿಕರಿಸುತ್ತಾನೆ ಸಹ. ”ನೀತಿಕರಿಸಲ್ಪಡುವುದು” ಎಂಬ ಪದದ ಅರ್ಥವೇನೆಂದರೆ, ನಾನು ನನ್ನ ಜೀವಿತದಲ್ಲಿ ಪಾಪವನ್ನೇ ಮಾಡಿಲ್ಲ ಮತ್ತು ನಾನು ಈಗ ಪರಿಪೂರ್ಣ ನೀತಿವಂತನು ಎಂಬುದಾಗಿ. ಎಂಥಹ ಅದ್ಬುತ! ನಾವು ಈ ರೀತಿಯಾಗಿ ಚಿತ್ರಣ ಮಾಡಿಕೊಳ್ಳೋಣ, ನಮ್ಮ ಪಾಪಗಳು, ಕಪ್ಪು ಹಲಗೆಯ ಮೇಲೆ ಅನೇಕ ಪದಗಳನ್ನು ಬರೆದ ಹಾಗೆ. ಈಗ ಈ ಹಲಗೆಯು ಒದ್ದೆ ಬಟ್ಟೆಯಿಂದ ಸ್ವಚ್ಚವಾಗಿ ಅಳಿಸಲ್ಪಟ್ಟಿದೆ. ನೀವು ಈಗ ಕಪ್ಪು ಹಲಗೆಯನ್ನು ನೋಡುವಾಗ, ನೀವು ನೋಡುವುದಾದರೂ ಏನು? ಏನು ಇಲ್ಲ. ಇದು ಯಾವ ರೀತಿ ಎಂದರೆ ಆ ಕಪ್ಪು ಹಲಗೆಯ ಮೇಲೆ ಯಾವ ಸಮಯದಲ್ಲಿಯೂ ಏನು ಬರೆದಿಲ್ಲ ಎಂಬುದಾಗಿ. ಅದೇ ರೀತಿಯಾಗಿ ಯೇಸು ಕ್ರಿಸ್ತನ ರಕ್ತವು ನಮ್ಮನ್ನು ಸಂಪೂರ್ಣವಾಗಿ ಹಾಗೂ ಶಾಶ್ವತವಾಗಿ ತೊಳೆಯಲ್ಪಟ್ಟಿದೆ.

ನಾವು ನಿಜವಾಗಿಯೂ ನಮ್ಮ ಪಾಪವನ್ನು ದೇವರಿಗೆ ಅರಿಕೆ ಮಾಡಿದ್ದರೆ, ಒಂದು ಸಲ ಮಾತ್ರ ಆ ಪಾಪವನ್ನು ಅರಿಕೆ ಮಾಡಿದರೆ ಸಾಕು. ದೇವರು ಅವುಗಳನ್ನು ತಕ್ಷಣವೇ ಅಳಿಸಿ ಹಾಕುತ್ತಾನೆ ಮತ್ತು ಆತನ ವಾಗ್ದಾನವು ಹೀಗಿದೆ, ”ನಾನು ಅವರ ಪಾಪಗಳನ್ನು ಎಂದಿಗೂ ನೆನಪಿಗೆ ತರುವುದಿಲ್ಲ” (ಇಬ್ರಿಯ 8:12). ನಾವು ನಿಜವಾಗಿಯೂ ಕ್ಷಮಿಸಲ್ಪಟ್ಟಿದ್ದೇವೆ ಎಂಬುದನ್ನು ನಾವು ಗ್ರಹಿಸುವಾಗ ನಮ್ಮ ಹೃದಯದ ಒಳಗಡೆ ಎಂತಹ ವಿಶ್ರಾಂತಿ ಬರುತ್ತದೆ ಅಲ್ಲವೇ. ಅದರಂತೆ ನಾವು ಕರ್ತನಿಗೆ ಪದೇ ಪದೇ ನಮ್ಮ ಪಾಪಗಳನ್ನು ಅರಿಕೆ ಮಾಡುವ ಅವಶ್ಯಕತೆ ಇಲ್ಲ. ಒಂದು ವಿಷಯ ಹೇಳಲು ಇಷ್ಟಪಡುತ್ತೇನೆ, ”ನಮ್ಮ ಪಾಪಗಳನ್ನು ಕ್ಷಮಿಸು” ಎಂದು ಪ್ರಾರ್ಥಿಸುವಾಗ, ಸ್ಪಷ್ಟವಾಗಿರುವುದು ಉತ್ತಮ. ಅನೇಕ ಜನರು ಸಾಮಾನ್ಯ ವಿಧದಲ್ಲಿ ಪ್ರಾರ್ಥಿಸುತ್ತಾರೆ, ”ಕರ್ತನೇ, ನಾನು ಅನೇಕ ಪಾಪಗಳನ್ನು ಮಾಡಿದ್ದೇನೆ” ಎಂಬುದಾಗಿ. ಅದರ ಅರ್ಥ ಅವರು ನಿಶ್ಚಿತಥೆಯಿಂದ ಇರುವುದಿಲ್ಲ. ಈ ರೀತಿ ಅರಿಕೆ ಮಾಡುವುದರಿಂದ ಉಪಯೋಗವೇನಿಲ್ಲ; ಏಕೆಂದರೆ ನೀವು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದೀರಿ ಎಂದರೆ, ನೀವು ಪಾಪವನ್ನೇ ಮಾಡಿಲ್ಲ ಎಂಬುದಾಗಿ!! ಇದು ಸ್ಪಷ್ಟವಾಗಿರುವುದು ಉತ್ತಮ ಮತ್ತು ಈ ರೀತಿ ಹೇಳಬೇಕು, ”ಕರ್ತನೇ, ಆ ವ್ಯಕ್ತಿಯ ವಿರುದ್ಧವಾಗಿ ನಾನು ದ್ವೇಷವುಳ್ಳವನಾಗಿದ್ದೇನೆ. ನಾನು ಆ ವ್ಯಕ್ತಿಯನ್ನು ಕ್ಷಮಿಸೇ ಇಲ್ಲ. ನಾನು ಆ ವ್ಯಕ್ತಿಯ ವಿಚಾರವಾಗಿ ಹೊಟ್ಟೆಕಿಚ್ಚುವುಳ್ಳವನಾಗಿದ್ದೇನೆ. ನಾನು ಮಾಡುತ್ತಿರುವುದರ ಹಿಂದಿನ ಉದ್ದೇಶ ನಿಶ್ಚಯವಾಗಿ ಸ್ವಾರ್ಥವುಳ್ಳದ್ದಾಗಿದೆ. ನಾನು ನನ್ನ ಸ್ವಂತ ಮಹಿಮೆಗಾಗಿ ಅದನ್ನು ಮಾಡಿದ್ದೇನೆ, ಇದು ಪಾಪ”. ನೀವು ಪ್ರಾಮಾಣಿಕತೆಯಿಂದ ಇರಬೇಕು ಮತ್ತು ನಮಗೆ ಗೊತ್ತಿರುವಂತ ಎಲ್ಲಾ ಪಾಪವನ್ನು ಅರಿಕೆ ಮಾಡಿದ ನಂತರ, ನಾವು ದಾವೀದನ ರೀತಿಯಾಗಿ ಪ್ರಾರ್ಥನೆ ಮಾಡಬೇಕು, ”ಗುಪ್ತವಾದ ತಪ್ಪುಗಳಿಂದ ನನ್ನನ್ನು ನಿರ್ಮಲಮಾಡು” - ಅಂದರೆ ನಮ್ಮ ಅರಿವಿಗೆ ಬಾರದಂತೆ ಮಾಡಿರುವ ಎಲ್ಲಾ ಪಾಪಗಳನ್ನು ನಿರ್ಮಲ ಮಾಡು ಎಂಬುದಾಗಿ (ಕೀರ್ತನೆಗಳು 19:12).

ಕ್ಷಮಾಪಣೆಗಾಗಿ ನಾವು ಮಾಡುವ ಕೋರಿಕೆಯು ಕರ್ತನ ಪ್ರಾರ್ಥನೆಯಲ್ಲಿ ಬಹು ಮುಖ್ಯವಾದ ಕೋರಿಕೆಯಾಗಿದೆ, ಏಕೆಂದರೆ ಇದೊಂದೇ ಪ್ರಾರ್ಥನೆಯನ್ನು ಯೇಸು ತನ್ನ ಕೊನೆಯ ಪ್ರಾರ್ಥನೆಯಲ್ಲಿ ಪುನರುಚ್ಛಿಸಿದನು. ನೀವು ಅದನ್ನು ಗುರುತಿಸಿದ್ದೀರಾ? ಈ ಪ್ರಾರ್ಥನೆಯಲ್ಲಿನ ಆರು ಕೋರಿಕೆಗಳಲ್ಲಿ, ಯೇಸು ಒಂದನ್ನು ವಿಶೇಷವಾಗಿ ಒತ್ತಿ ಹೇಳಿದನು. ಆತನು ಹೀಗೆ ಹೇಳಿದನು, ”ನೀವು ಜನರ ತಪ್ಪುಗಳನ್ನು ಕ್ಷಮಿಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷಮಿಸುವನು. ಆದರೆ ನೀವು ಜನರ ತಪ್ಪುಗಳನ್ನು ಕ್ಷಮಿಸದೆ ಹೋದರೆ ನಿಮ್ಮ ತಂದೆ ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವುದಿಲ್ಲ” (ಮತ್ತಾಯ 6:14, 15). ಅನೇಕ ಕ್ರೈಸ್ತರು ದೇವರೊಟ್ಟಿಗಿನ ಅನ್ಯೋನ್ಯತೆಯನ್ನು ಪೂರ್ತಿಯಾಗಿ ಮತ್ತು ಉಚಿತವಾಗಿ ಅನುಭವಿಸುವುದಿಲ್ಲ, ಏಕೆಂದರೆ ಈ ಕೋರಿಕೆಯನ್ನು ಅವರು ಗಂಭೀರವಾಗಿ ತೆಗೆದುಕೊಂಡಿರುವುದಿಲ್ಲ.

ಯೇಸು ಒಂದು ಸಾಮ್ಯವನ್ನು ಈ ರೀತಿಯಾಗಿ ಹೇಳಿದ್ದಾರೆ, ಒಬ್ಬ ರಾಜನು ಒಂದು ದಿನ ತನ್ನ ಸೇವಕರ ಲೆಕ್ಕವನ್ನು ಪರೀಕ್ಷಿಸಿದನು ಮತ್ತು ಆತನಿಗೆ ಗೊತ್ತಾಗಿದ್ದೇನೆಂದರೆ, ಸೇವಕನಾದ ಒಬ್ಬಾತನು 40 ಮಿಲಿಯನ್ ರೂ.ಗಳನ್ನು ಸಾಲವಾಗಿ ತೆಗೆದುಕೊಂಡಿದ್ದಾನೆ ಎಂಬುದಾಗಿ ಮತ್ತು ಆ ಸೇವಕನು ಈ ರೀತಿಯಾಗಿ ಹೇಳುತ್ತಾನೆ, ”ಯಜಮಾನನೇ, ನನ್ನ ಬಳಿ ಹಣವಿಲ್ಲ, ದಯಮಾಡಿ ನನ್ನನ್ನು ಕ್ಷಮಿಸು” ಎಂಬುದಾಗಿ, ಆಗ ರಾಜನು ಆತನನ್ನು ಸಂಪೂರ್ಣವಾಗಿ ಕ್ಷಮಿಸಿದನು. ಆಗ ಆ ಕ್ಷಮಿಸಲ್ಪಟ್ಟ ಸೇವಕನು ಹೊರಗೆ ಹೋಗಿ, ಕೇವಲ 40 ರೂ.ಗಳನ್ನು ಸಾಲವಾಗಿ ತನ್ನಿಂದ ತಕ್ಕೊಂಡಂತ ಮತ್ತೊಬ್ಬ ಸೇವಕನನ್ನು ಕಂಡುಕೊಂಡು; ಆತನ ಕೊರಳನ್ನು ಹಿಡಿದುಕೊಂಡು ಹೋಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಆತನನ್ನು ಸೆರೆಮನೆಗೆ ಹಾಕಿಸುತ್ತಾನೆ. ರಾಜನು ಇದನ್ನು ಕೇಳಿದಾಗ, ಆತನು ಕರುಣೆ ಇಲ್ಲದಂತ ಆ ಸೇವಕನನ್ನು ಕರೆದು, ಈ ರೀತಿಯಾಗಿ ಹೇಳಿದನು, ”ನಾನು ನಿನ್ನ 40 ಮಿಲಿಯನ್ ರೂ.ಗಳನ್ನು ಉಚಿತವಾಗಿ ಕ್ಷಮಿಸಿದ್ದೇನೆ. ಆದರೆ ನೀನು ಆ ಮನುಷ್ಯನನ್ನು ಕೇವಲ 40 ರೂ.ಗೆ ಕ್ಷಮಿಸಲಾರದೇ ಹೋದೆಯಾ?” ನಂತರ ರಾಜನು ಆ ಸೇವಕನನ್ನು ಪೀಡಿಸುವಂತವರ ಕೈಗೆ ಒಪ್ಪಿಸಿದನು. ನಂತರ ಯೇಸು ಹೀಗೆ ಹೇಳಿದನು, ”ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಸಹೋದರನನ್ನು ಮನ:ಪೂರ್ವಕವಾಗಿ ಕ್ಷಮಿಸದೆ ಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು ಅಂದನು” (ಮತ್ತಾಯ 18:35). ಆ ಪೀಡಿಸುವಂತವರು ಕೆಟ್ಟ ಆತ್ಮವನ್ನು ಹೊಂದಿರುವಂತವರು, ನಾವು ಮತ್ತೊಬ್ಬರ ವಿಷಯವಾಗಿ ಕರುಣೆ ತೋರಿಸುವುದನ್ನು ಕಲಿಯುವ ತನಕ ಅವರು ನಮ್ಮನ್ನು ಪೀಡಿಸುತ್ತಾರೆ. ಯೇಸು ಈ ಸಾಮ್ಯದ ಉದಾಹರಣೆಯನ್ನು ಉಪಯೋಗಿಸಿದ್ದು ಏಕೆಂದರೆ, ಎಷ್ಟು ದೊಡ್ಡ ಸಾಲಕ್ಕಾಗಿ ದೇವರು ನಮ್ಮನ್ನು ಹೇಗೆ ಕ್ಷಮಿಸಿದ್ದಾನೆ ಎಂದು ತಿಳಿದುಕೊಳ್ಳುವುದಕ್ಕಾಗಿ ಮತ್ತು ನಮಗೆ ನೋವು ಮಾಡಿದವರನ್ನು ನಾವು ಕ್ಷಮಿಸದೇ ಇರುವಂತದ್ದು ಕರುಣೆ ಇಲ್ಲದ್ದಾಗಿದೆ ಹಾಗೂ ಕೆಟ್ಟದ್ದಾಗಿದೆ.

ಯಾರಾದರೂ ನಿಮಗೆ ನೋವನ್ನು ಮಾಡಿದ್ದಾರಾ? ಯಾರೋ ಒಬ್ಬರು ನಿಮ್ಮ ಬಗ್ಗೆ ತಪ್ಪಾದ ಕಥೆಗಳನ್ನು ಹರಡಿರಬಹುದು. ನಿಮ್ಮ ನೆರೆಹೊರೆಯವರಿರಬಹುದು, ಅಥವಾ ನಿಮ್ಮ ಹೆಂಡತಿ ಇರಬಹುದು, ಅಥವಾ ನಿಮ್ಮ ತಂದೆ ಇರಬಹುದು ಅಥವಾ ನಿಮ್ಮ ಅತ್ತೆ ಇರಬಹುದು, ಇವರುಗಳು ನಿಮಗೆ ನೋವನ್ನು ಅಥವಾ ತೊಂದರೆಯನ್ನು ಮಾಡಿರಬಹುದು. ಅವರು ಒಂದು ಹಂತದಲ್ಲಿ ನಿಮ್ಮ ಜೀವಿತವನ್ನು ಹಾಳು ಮಾಡಿರಬಹುದು. ಒಬ್ಬ ವೈದ್ಯ ತಪ್ಪಾಗಿ ಶಸ್ತ್ರಚಿಕಿತ್ಸೆ ಮಾಡಿ, ನೀವು ಬಹು ಕಾಲ ನರಳುವಂತೆ ಮಾಡಿರಬಹುದು. ಆದರೆ ಕರ್ತನು ಹೀಗೆ ಹೇಳುತ್ತಾನೆ, ಈ ಎಲ್ಲಾ ಪಾಪಗಳನ್ನು ಒಟ್ಟಾಗಿ ಸೇರಿಸಿದರೆ, ನೀವು ದೇವರಿಗೆ ಕೊಡುವಂತ ಸಾಲಕ್ಕೆ ಮತ್ತು ದೇವರು ಅದನ್ನು ಕ್ಷಮಿಸಿದ್ದಕ್ಕೆ ಹೋಲಿಸುವುದಾದರೆ ಇದು ತುಂಬಾ ಚಿಕ್ಕದ್ದಾಗಿದೆ. ಹಾಗಾಗಿ, ನಿಮ್ಮ ಹೃದಯದಿಂದ ಎಲ್ಲಾ ಜನರನ್ನು ಉಚಿತವಾಗಿ ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳುವಂತದ್ದಕ್ಕೆ ಯಾವುದೇ ಕಾರಣವಿಲ್ಲ, ಮತಾಯ 18:35 ರ ಭಾಗದ ಪ್ರಾಮುಖ್ಯತೆ ಏನೆಂದರೆ, ”ನಿಮ್ಮ ಹೃದಯದಿಂದ” ಎಂಬುದಾಗಿ. ನಿಮಗೆ ಗೊತ್ತಿರುವಂತ ಮನುಷ್ಯನನ್ನು ನಿಮ್ಮ ಹೃದಯದಿಂದ ಕ್ಷಮಿಸಲು ನಿವು ಮನಸ್ಸು ಮಾಡದಿದ್ದರೆ, ದೇವರ ಬಳಿಗೆ ಬಂದು, ”ನಮ್ಮ ತಪ್ಪುಗಳನ್ನು ಕ್ಷಮಿಸು” ಎಂಬುದಾಗಿ ಹೇಳಿ, ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ, ದೇವರು ನಿಮ್ಮ ಪ್ರಾರ್ಥನೆಯನ್ನು ಕೇಳುವುದಿಲ್ಲ. ಈ ಇಡೀ ಜಗತ್ತಿನಲ್ಲಿ ನೀವು ಒಂದೇ ಒಂದು ಆತ್ಮವನ್ನು ಕ್ಷಮಿಸಿಲ್ಲವಾದರೆ, ನೀವು ಸಹ ಕ್ಷಮಿಸಲ್ಪಡುವುದಿಲ್ಲ; ಮತ್ತು ನೀವು ನಿತ್ಯತ್ವವನ್ನು ಕಳೆದುಕೊಳ್ಳುತ್ತೀರಿ - ಕ್ಷಮಿಸಲಾರದೇ ಇರುವಂತ ಆತ್ಮವು ದೇವರ ಸಮ್ಮುಖವನ್ನು ಪ್ರವೇಶಿಸಲಾರದು. ನಾವು ಗ್ರಹಿಸಿಕೊಳ್ಳುವುದಕ್ಕಿಂತ ಇದು ತುಂಬಾ ಗಂಭೀರವಾದ ವಿಷಯ.

”ನಾವು ಮತ್ತೊಬ್ಬರನ್ನು ಕ್ಷಮಿಸಿದಂತೆ ನಮ್ಮನ್ನು ಕ್ಷಮಿಸು” ಎಂಬುವುದು ಪ್ರಾರ್ಥನೆಯಾಗಿದೆ. ನಾವು ಮತ್ತೊಬ್ಬರನ್ನು ಹೇಗೆ ಕ್ಷಮಿಸಿದ್ದೇವೋ, ದೇವರು ಅದೇ ರೀತಿಯಾಗಿ ನಮ್ಮನ್ನು ನೋಡುತ್ತಾನೆ. ಯೇಸು ತಿಳಿಸಿಕೊಟ್ಟಿದ್ದೇನೆಂದರೆ, ನಾವು ಮತ್ತೊಬ್ಬರಿಗೆ ಕೊಡುವಂತ ಅಳತೆ ಮೇರೆಗೆ ನಮಗೂ ಸಹ ಕೊಡುತ್ತಾನೆ. ಆತನು ಹೀಗೆ ಹೇಳಿದ್ದಾನೆ, ”ಕೊಡಿರಿ, ಮತ್ತು ನಿಮಗೂ ಸಹ ಕೊಡಲ್ಪಡುವುದು; ಜಡಿದು ಅಲ್ಲಾಡಿಸಿ ಹೊರಚೆಲ್ಲುವ ಹಾಗೆ ತುಂಬಾ ಅಳತೆಯನ್ನು ಅಳೆದು ನಿಮ್ಮ ಸೆರಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು ಅಂದನು”. (ಲೂಕ 6:38). ಅದರ ಅರ್ಥ, ನೀವು ಸಣ್ಣ ಚಮಚವನ್ನು ಮತ್ತೊಬ್ಬರಿಗೆ ಕೊಡಲು ಉಪಯೋಗಿಸಿದರೆ, ದೇವರು ಸಹ ನೀವು ಪ್ರಾರ್ಥನೆ ಮಾಡುವಾಗ ಅದೇ ಚಮಚವನ್ನು ಉಪಯೋಗಿಸುತ್ತಾನೆ. ನಾವು ದೊಡ್ಡದಕ್ಕಾಗಿ ಪ್ರಾರ್ಥನೆ ಮಾಡುವಾಗ ಮತ್ತು ದೇವರಿಂದ ಮಹತ್ ಕಾರ್ಯಕ್ಕಾಗಿ ಪ್ರಾರ್ಥನೆ ಮಾಡುವಾಗ, ದೇವರು ಅದೇ ಸಣ್ಣ ಚಮಚವನ್ನೇ ತೆಗೆದುಕೊಂಡು ಅದರಲ್ಲಿ ಸ್ವಲ್ಪವನ್ನೇ ನಮಗೆ ಕೊಡುತ್ತಾನೆ. ನಾವು ದೊಡ್ಡದಾದ ಚಮಚವನ್ನು ಮತ್ತೊಬ್ಬರಿಗೆ ಕೊಡಲು ಉಪಯೋಗಿಸಿದರೆ, ದೇವರು ಸಹ ಅದೇ ದೊಡ್ಡ ಚಮಚವನ್ನು ನಮಗೆ ಕೊಡಲು ಉಪಯೋಗಿಸುತ್ತಾರೆ. ದೇವರು ನಮ್ಮೊಟ್ಟಿಗೆ ವ್ಯವಹರಿಸುವ ಸಮಯದಲ್ಲಿ ಇದು ಬದಲಾಗದೆ ಇರುವಂತ ದೇವರ ತತ್ವವಾಗಿದೆ.

ಕರುಣೆಯುಳ್ಳವರು ಧನ್ಯರು; ಅವರು ಕರುಣೆ ಹೊಂದುವರು (ಮತ್ತಾಯ 5:7). ನೀವು ಮತ್ತೊಬ್ಬರಿಗೆ ಹೆಚ್ಚು ಕರುಣೆಯುಳ್ಳವರಾಗಿದ್ದರೆ, ನ್ಯಾಯತೀರ್ಪಿನ ದಿನದಲ್ಲಿ ದೇವರು ಸಹ ನಿಮ್ಮ ವಿಷಯವಾಗಿ ಕರುಣೆಯುಳ್ಳವನಾಗಿದ್ದಾನೆ. ಆದರೆ ”ಕರುಣೆ ತೋರಿಸದೆ ಇರುವವನಿಗೆ ನ್ಯಾಯತೀರ್ಮಾನದಲ್ಲಿ ಕರುಣೆಯು ತೋರಿಸಲ್ಪಡುವುದಿಲ್ಲ” (ಯಾಕೋಬ 2:13). ಅದರಂತೆ, ನೀವು ಮತ್ತೊಬ್ಬರನ್ನು ಕ್ಷಮಿಸುವುದರ ಅರ್ಥ, ಜುಗ್ಗುತನದಿಂದ ನೀವು ಮತ್ತೊಬ್ಬರನ್ನು ಕ್ಷಮಿಸಿದರೆ, ದೇವರು ಸಹ ಅದೇ ರೀತಿ ನಿಮ್ಮನ್ನೂ ಕ್ಷಮಿಸುತ್ತಾನೆ. ಆದರೆ ನಿಮಗೆ ನೋವು ಮಾಡಿದವರಿಗೆ ನೀವು ಹರ್ಷಭರಿತ ಕ್ಷಮಾಪಣೆಯ ನೋಟವನ್ನು ಕೊಟ್ಟರೆ, ದೇವರು ಸಹ ಅದರಂತೆ ನಿಮಗೂ ಹರ್ಷಭರಿತ ಕ್ಷಮಾಪಣೆಯ ನೋಟವನ್ನು ಕೋಡುತ್ತಾನೆ. ನೀವು ಇನ್ನೊಬ್ಬರನ್ನು ನೋಡಿಕೊಳ್ಳುವ ಮೇರೆಗೆ ದೇವರು ನಿಮ್ಮನ್ನು ಸಹ ನೋಡುತ್ತಾನೆ.

ಅನೇಕ ಕ್ರೈಸ್ತರು ಹೊಸ ಒಡಂಬಡಿಕೆಯ ಬಲವನ್ನು ಆಹ್ಲಾದಿಸುವುದಿಲ್ಲ. ಏಕೆಂದರೆ, ಅವರು ಹಳೆ ಒಡಂಬಡಿಕೆಯ ಗುಣಮಟ್ಟದ ಕೆಳಗಡೆ ಜೀವಿಸುತ್ತಿರುತ್ತಾರೆ

ಯೇಸು ಈ ರೀತಿಯಾಗಿ ಹೇಳಿದ್ದಾರೆ, ಯಜ್ಞವೇದಿಗೆ ನೀವು ಕಾಣಿಕೆಯನ್ನು ತಂದಾಗ, ನೀವು ಪ್ರಾರ್ಥನೆ ಮಾಡಲು ದೇವರ ಬಳಿ ಬಂದಾಗ, ಅಥವಾ ಕಾಣಿಕೆ ಡಬ್ಬಕ್ಕೆ ಹಣವನ್ನು ಹಾಕಲು ಬಂದಾಗ, ”ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವದೆ ಎಂಬುದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟುಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು; ಆ ಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು” (ಮತ್ತಾಯ 5 : 22-24). ಇಲ್ಲವಾದಲ್ಲಿ ದೇವರು ನಿಮ್ಮ ಹಣವನ್ನಾಗಲಿ ಅಥವಾ ನಿಮ್ಮ ಪ್ರಾರ್ಥನೆಯನ್ನಾಗಲಿ ಸ್ವೀಕರಿಸಿಕೊಳ್ಳುವುದಿಲ್ಲ. ಹಳೆ ಒಡಂಬಡಿಕೆಯ ಗುಣಮಟ್ಟ ಈ ರೀತಿ ಮಾತ್ರ ಇತ್ತು : ”ನಿಮ್ಮ ಸ್ವಜನರಲ್ಲಿ ಯಾರಿಗಾದರೂ ಕೇಡಿಗೆ ಕೇಡನ್ನು ಮಾಡದೆ ಮನಸ್ಸಿನಲ್ಲಿ ಮತ್ಸರವನ್ನು ಇಟ್ಟುಕೊಳ್ಳಬಾರದು” (ಯಾಜಕಕಾಂಡ 19:18). ಇದನ್ನು ಪಾಲಿಸುವುದು ತುಂಬಾ ಸುಲಭ. ಆದರೆ ಹೊಸ ಒಡಂಬಡಿಕೆಯ ಗುಣಮಟ್ಟವು ಉನ್ನತವಾದದ್ದು. ಯೇಸು ಹೀಗೆ ಹೇಳಿದ್ದಾರೆ, ”ನಿಮ್ಮ ಸಹೋದರನು ನಿಮ್ಮ ವಿರುದ್ಧವಾಗಿ ಮತ್ಸರ ಇಟ್ಟುಕೊಂಡಿದ್ದರೆ, ಹೋಗಿ ಅದನ್ನು ಸರಿಪಡಿಸಿಕೋ”. ನಿಶ್ಚಯವಾಗಿ, ನಮ್ಮ ತಪ್ಪಲ್ಲದಿದ್ದರೂ ಯಾವಾಗಲೂ ಸಹೋದರರು ನಮ್ಮ ವಿರುದ್ದವಾಗಿ ಹೃದಯದಲ್ಲಿ ಏನನ್ನೋ ಹಿಡಿದಿಟ್ಟುಕೊಂಡಿರುತ್ತಾರೆ. ಯೇಸು ಮತ್ತು ಅಪೋಸ್ತಲರು ಅನೇಕ ಶತ್ರುಗಳನ್ನು ಹೊಂದಿದ್ದರು, ಏಕೆಂದರೆ ಅವರು ಸತ್ಯಕ್ಕಾಗಿ ನಿಂತಿದ್ದರು. ಆದರೆ ಇಲ್ಲಿ, ಇದಕ್ಕೆ ವ್ಯತ್ಯಾಸವಾಗಿ, ಯೇಸು ಉಲ್ಲೇಖಿಸುವುದೇನೆಂದರೆ, ಸಹೋದರನು ನಮ್ಮ ವಿರುದ್ದವಾಗಿ ತನ್ನ ಮನಸ್ಸಿನಲ್ಲಿ ಮತ್ಸರವನ್ನು ಇಟ್ಟುಕೊಂಡಿರುತ್ತಾನೆ, ಏಕೆಂದರೆ ನಾವು ಆತನೊಟ್ಟಿಗೆ ಕಠಿಣವಾಗಿ ಮಾತನಾಡಿರುತ್ತೀವಿ (ಮತ್ತಾಯ 5:22). ನಮ್ಮ ವಿರುದ್ಧವಾದ ಮತ್ಸರಕ್ಕೆ ಕಾರಣ, ನಾವು ಪಾಪವುಳ್ಳಂತದ್ದನ್ನು ಏನೋ ಒಂದನ್ನು ಮಾಡಿರುತ್ತೀವಿ. ಇಂಥಹ ಪ್ರಕರಣಗಳಲ್ಲಿ, ನಾವು ಮೊದಲು ಆತನ ಬಳಿಗೆ ಹೋಗಿ, ನಮ್ಮ ಪಾಪವನ್ನು ಅರಿಕೆ ಮಾಡಿ, ಕ್ಷಮಾಪಣೆಯನ್ನು ಕೇಳಿಕೊಳ್ಳಬೇಕು. ನಂತರ ಮಾತ್ರವೇ ನಾವು ನಮ್ಮ ಕಾಣಿಕೆಯನ್ನು ದೇವರ ಬಳಿ ತರಬೇಕು.

ನಾವು ದೇವರ ಬಳಿ ಹೋಗಿ, ”ಕರ್ತನೇ, ನನ್ನ ಜೀವಿತದಲ್ಲಿ ಪೂರ್ಣವಾದಂತ ಹೊಸ ಒಡಂಬಡಿಕೆಯ ಬಲ ನನಗೆ ಬೇಕು” ಎಂದು ಹೇಳಿದರೆ; ಕರ್ತನು ಹೀಗೆ ಹೇಳುತ್ತಾನೆ, ನಾನು ನಿಮಗೆ ಹೊಸ ಒಡಂಬಡಿಕೆಯ ಬಲವನ್ನು ಕೊಡುವಾಗ, ಹೊಸ ಒಡಂಬಡಿಕೆಯ ಜವಾಬ್ದಾರಿಗಳನ್ನು ಈ ಬಲವು ತರುತ್ತದೆ”. ಅನೇಕ ಕ್ರೈಸ್ತರು ಹೊಸ ಒಡಂಬಡಿಕೆಯ ಬಲವನ್ನು ಆಹ್ಲಾದಿಸುವುದಿಲ್ಲ. ಏಕೆಂದರೆ, ಅವರು ಹಳೆ ಒಡಂಬಡಿಕೆಯ ಗುಣಮಟ್ಟದ ಕೆಳಗಡೆ ಜೀವಿಸುತ್ತಿರುತ್ತಾರೆ. ಅವರು ಬಲ ರಹಿತವಾಗಿಯೇ ಉಳಿಯುತ್ತಾರೆ, ಏಕೆಂದರೆ ಅವರು ಮತ್ತೊಬ್ಬರ ಬಳಿ ಹೋಗಿ ಕ್ಷಮಾಪಣೆಯನ್ನು ಕೇಳುವುದರಲ್ಲಿ ಮನಸ್ಸು ಇಲ್ಲದೇ ಇರುವವರಾಗಿರುತ್ತಾರೆ. ನಾವೆಲ್ಲರೂ ಶರೀರವನ್ನು ಹೊಂದಿದ್ದೇವೆ ಮತ್ತು ಯಾರು ಶರೀರವನ್ನು ಹೊಂದಿದ್ದಾರೋ ಅವರ ಮಧ್ಯದಲ್ಲಿ ಜೀವಿಸುತ್ತಿದ್ದೇವೆ ಹಾಗೂ ನಾವು ಸತತವಾಗಿ ಒಬ್ಬರಿಗೆ ಗೊತ್ತಿದ್ದು ಮತ್ತು ಗೊತ್ತಿಲ್ಲದ ಹಾಗೇ ನೋವನ್ನು ಮಾಡುತ್ತಿರುತ್ತೇವೆ. ನಾವು ಯಾರಿಂದಲೂ ನೋವಿಗೆ ಒಳಗಾಗದೇ ಇರುವಂತ ಸ್ಥಳವಿದ್ದರೆ, ಅದು ಕೇವಲ ಪರಲೋಕ ಮಾತ್ರ ಮತ್ತು ನಾವು ಇಹಲೋಕದಲ್ಲಿ ಇರುವಷ್ಟು ದಿನ ನಾವು ಮತ್ತೊಬ್ಬರನ್ನು ಕ್ಷಮಿಸಬೇಕಾದ ಅಗತ್ಯತೆ ಇದೆ. ತಪ್ಪು ಮಾಡುವಂತದ್ದು ಮಾನವನ ಸ್ವಭಾವ, ಕ್ಷಮಿಸುವಂತದ್ದು ದೈವಿಕತೆಯಾಗಿದೆ.

ನರಕದ ಲಕ್ಷಣವೇನೆಂದರೆ, ಅಲ್ಲಿ ಕರುಣೆ ಎನ್ನುವುದೇ ಇರುವುದಿಲ್ಲ ಮತ್ತು ಮತ್ತೊಬ್ಬರ ವಿಷಯವಾಗಿ ನಿಮ್ಮ ಹೃದಯದಲ್ಲಿ ಕರುಣೆಯ ಕೊರತೆಯೆಂಬ ಅಳತೆಯನ್ನು ಹೊಂದಿದ್ದರೆ, ನಿಮ್ಮ ಹೃದಯದಲ್ಲಿನ ಆ ಆಳತೆಯಲ್ಲಿಯೇ, ಸ್ವಲ್ಪ ನರಕದ ಪಾಲನ್ನು ಹೊಂದಿರುತ್ತೀರಿ. ನೀವು ಮತ್ತೊಬ್ಬರನ್ನು ಕ್ಷಮಿಸಲು ಮನಸ್ಸಿಲ್ಲದೇ ಇದ್ದರೆ, ನಿಮ್ಮೊಳಗೆ ಸ್ವಲ್ಪ ನರಕವನ್ನು ಪಡೆದುಕೊಂಡಿದ್ದೀರಿ. ನಿಮ್ಮ ಎಲ್ಲಾ ಧಾರ್ಮಿಕ ಚಟುವಟಿಕೆಯಿಂದ, ನೀವು ಮತ್ತೊಬ್ಬರಿಂದ ಸಾಧುವೆಂದು ಪರಿಗಣಿಸಲ್ಪಟ್ಟಿರಬಹುದು. ಆದರೆ ಎಲ್ಲಾ ಸಮಯದಲ್ಲಿಯೂ ನೀವು ನಿಮ್ಮೊಳಗೆ ಸಣ್ಣ ನರಕವನ್ನು ಪಡೆದುಕೊಂಡಿರುತ್ತೀರಿ ಮತ್ತು ಇಂತಹ ಸ್ಥಿತಿಯಲ್ಲಿ ಪರಲೋಕಕ್ಕೆ ಹೋಗಲು ಸಾಧ್ಯವಾಗುವುದಿಲ್ಲ, ಏಕೆಂದರೆ ನೀವು ನರಕವನ್ನು ಪರಲೋಕದೊಳಗೆ ತೆಗೆದುಕೊಂಡು ಹೋಗಲು ಆಗುವುದಿಲ್ಲ. ನೀವು ಇಹಲೋಕ ಬಿಡುವುದರೊಳಗಾಗಿ ಇದರಿಂದ ನೀವು ಹೊರಗೆ ಬರಬೇಕು. ಅದಕ್ಕಾಗಿ ದೇವರು ಈ ರೀತಿ ಪ್ರಾರ್ಥನೆ ಮಾಡುವಂತೆ ನಮಗೆ ತಿಳಿಸಿದ್ದಾರೆ, ”ನಾವು ಮತ್ತೊಬ್ಬರನ್ನು ಕ್ಷಮಿಸಿದ ರೀತಿಯಲ್ಲಿಯೇ ನಮ್ಮನ್ನು ಕ್ಷಮಿಸು” ಎಂಬುದಾಗಿ. ನಾವು ಮತ್ತೊಬ್ಬರನ್ನು ಕ್ಷಮಿಸದೇ ಇದ್ದಲ್ಲಿ, ಇದು ನಮ್ಮ ದೇಹಕ್ಕೂ ಸಹ ಪರಿಣಾಮ ಬೀರುತ್ತದೆ. ದೇವರ ನಿಯಮಕ್ಕೆ ಅವಿಧಯರಾಗುವುದು ದೈಹಿಕ ಬಾಧೆಯನ್ನು ತರುತ್ತದೆ.

ನಿಮ್ಮ ಹೃದಯದಲ್ಲಿ ಮತ್ತೊಬ್ಬರ ವಿರುದ್ಧ ಮತ್ಸರವನ್ನು ಮತ್ತು ಮತ್ತೊಬ್ಬರ ಬಗ್ಗೆ ಹೊಟ್ಟೆಕಿಚ್ಚು ಹೊಂದಿರುವುದನ್ನು ನೀವು ಸಹಿಸಿಕೊಂಡರೆ, ನೀವು ದೇವರ ಪ್ರೀತಿಯೆಂಬ ನಿಯಮವನ್ನು ಮೀರಿದಂತಾಗುತ್ತದೆ, ಇದು ಕೊನೆಯದಾಗಿ ನಿಮ್ಮ ದೇಹಕ್ಕೆ ಪರಿಣಾಮ ಬೀರುತ್ತದೆ. ಇಂದು ಅನೇಕ ಕ್ರೈಸ್ತರು ಸಂಧಿವಾತ, ತೀವ್ರ ತಲೆ ನೋವು, ಸ್ನಾಯುಗಳಲ್ಲಿನ ನೋವು, ಅಸ್ತಮಾ ಹಾಗೂ ಇನ್ನೂ ಅನೇಕ ಖಾಯಿಲೆಗಳಿಂದ ಬಾಧೆ ಪಡುತ್ತಿದ್ದಾರೆ. ಅವರು ಸ್ವಸ್ಥವನ್ನೇ ಹೊಂದಿಲ್ಲ - ಏನಿಕ್ಕಾಗಿ ಎಂದರೆ, ಅವರು ಮತ್ತೊಬ್ಬರ ವಿರುದ್ಧವಾಗಿ ಮತ್ಸರವನ್ನು ಹೊಂದಿರುವ ಕಾರಣ. ಅವರು ಅನೇಕ ಮಾತ್ರೆಗಳನ್ನು, ಚಿಕಿತ್ಸೆಗಳನ್ನು ತೆಗೆದುಕೊಳ್ಳಬಹುದು, ಆದರೆ ಅವರು ಕ್ಷಮಿಸುವುದನ್ನು ಕಲಿಯುವ ತನಕ, ಅವರು ಸ್ವಸ್ಥವನ್ನೇ ಹೊಂದುವುದಿಲ್ಲ. ಇಂತಹ ಖಾಯಿಲೆಗಳಿಗೆ ಕಾರಣ ದೇಹವಲ್ಲ, ದೇಹದಲ್ಲಿರುವಂತದ್ದು ಅಲ್ಲ. ಅದು ಅವರ ಆತ್ಮದಲ್ಲಿನ ನಡವಳಿಕೆಯಾಗಿದೆ.

ನೀವು ನಿಮ್ಮ ಸಹೋದರ ಅಥವಾ ಸಹೋದರಿಯನ್ನು ಕ್ಷಮಿಸದೇ ಹೋದಲ್ಲಿ, ದೇವರು ನಿಮ್ಮ ಪ್ರಾರ್ಥನೆಯನ್ನು ಕೇಳಿಸಿಕೊಳ್ಳುವುದಿಲ್ಲ. ಕೀರ್ತನೆಗಳು 66:18 ರಲ್ಲಿ ಸತ್ಯವೇದ ಹೀಗೆ ಹೇಳುತ್ತದೆ - ”ಅಪರಾಧವನ್ನು ನಾನು ನನ್ನ ಹೃದಯದಲ್ಲಿ ಆಶಿಸಿದ್ದರೆ ಕರ್ತನು ನನ್ನ ಪ್ರಾರ್ಥನೆಯನ್ನು ಕೇಳುವುದಿಲ್ಲ” (ಕೆ.ಜೆ.ವಿ ಭಾಷಾಂತರ). ಆತನು ಉತ್ತರಿಸದೇ ಇರುವಂತದ್ದು ಮಾತ್ರವಲ್ಲ, ಆತನು ಕೇಳಿಸಿಕೊಳ್ಳುವುದಿಲ್ಲ ಸಹ. ನಮ್ಮನ್ನು ನಾವು ಮೂರ್ಖರನ್ನಾಗಿಸಿಕೊಳ್ಳುವುದು ಬೇಡ. ನಿಜವಾದ ಕ್ಷಮಾಪಣೆಯು ಮುರಿಯಲ್ಪಡುವಿಕೆಯನ್ನು ಮತ್ತು ಅರಿಕೆಯನ್ನು ಹಿಂಬಾಲಿಸುತ್ತದೆ ಮತ್ತು ನಮ್ಮ ಶರೀರದಲ್ಲಿನ ಬೇರನ್ನು ಗ್ರಹಿಸಿಕೊಳ್ಳುವುದು ಒಳಗೊಂಡಿರುತ್ತದೆ. ಹಿಂದಕ್ಕೆ ಕೊಡುವುದರಲ್ಲಿನ ಮನಸ್ಸು (ಮತ್ತೊಬ್ಬರೊಟ್ಟಿಗೆ ವಿಷಯ ಸರಿಪಡಿಸುವಿಕೆ) ಮತ್ತು ಮತ್ತೊಬ್ಬರ ಬಳಿ ಕೇಳಿಕೊಳ್ಳುವ ಕ್ಷಮಾಪಣೆಯು ಅವಶ್ಯವಿದ್ದಲ್ಲಿ, ದೇವರೊಟ್ಟಿಗಿನ ನಮ್ಮ ಸಂಬಂಧವು ನೆಟ್ಟಗಾಗುತ್ತದೆ.

ಕೊನೆಯದಾಗಿ, ''ನಮ್ಮನ್ನು ಕ್ಷಮಿಸು” ಎಂಬ ಕೋರಿಕೆಯನ್ನು ನೆನಪಿಡಿ. ನಮ್ಮ ಸಹೋದರರು ಸಹ ಕ್ಷಮಿಸಲ್ಲಟ್ಟವರಾಗಬೇಕು. ಕೆಲವೊಮ್ಮೆ, ರಹಸ್ಯವಾಗಿರುವ ನಿರೀಕ್ಷೆ ಏನೆಂದರೆ, ಸಹೋದರನು ನಮ್ಮನ್ನು ತಪ್ಪಾಗಿ ನಡೆಸಿಕೊಂಡದ್ದಕ್ಕಾಗಿ ದೇವರಿಂದ ತೀರ್ಪಿಗೆ ಒಳಗಾಗುವ ಸಾಧ್ಯತೆ ಇದೆ. ಇಂಥಹ ನಡವಳಿಕೆಯು ಸೈತಾನನ ಸ್ವಭಾವವಾಗಿದೆ - ಜನರು ದೇವರಿಂದ ಶಿಕ್ಷೆಗೊಳಪಡಬೇಕು ಎಂಬುದನ್ನು ಮಾತ್ರ ಸೈತಾನನು ಬಯಸುತ್ತಾನೆ. ಯೇಸು ಹೀಗೆ ಹೇಳಿದ್ದಾರೆ, ”ನಾನು ನಿಮ್ಮ ಕಾಲುಗಳನ್ನು ತೊಳೆದಿರಲಾಗಿ ನೀವು ಸಹ ಒಬ್ಬರ ಕಾಲನ್ನು ಒಬ್ಬರು ತೊಳೆಯುವ ಹಂಗಿನವರಾಗಿದ್ದೀರಿ” (ಯೋಹಾನ 13:14). ಇದರ ಅರ್ಥ, ನೀವು ನಿಮ್ಮ ಸಹೋದರರ ಪಾದದಲ್ಲಿ ಕೊಳಕನ್ನು ನೋಡುವಾಗ (ಆತ್ಮೀಕವಾಗಿ ಮಾತನಾಡುತ್ತಿರುವುದು), ಅದು ತೊಳೆಯಲ್ಪಡಬೇಕು ಎಂಬುದನ್ನು ನೀವು ಬಯಸಬೇಕು.

”ನಮ್ಮನ್ನು ಕ್ಷಮಿಸು” ಎಂಬುದರ ಅರ್ಥ, ”ತಂದೆಯೇ, ನೀನು ಕೇವಲ ನನ್ನ ಪಾಪಗಳನ್ನು ಕ್ಷಮಿಸಿದರೆ ನಾನು ತೃಪ್ತಿಹೊಂದುವುದಿಲ್ಲ. ನನ್ನ ಸುತ್ತಲು ಸಹೋದರ, ಸಹೋದರಿಯರು ಇದ್ದಾರೆ. ಅವರ ಪಾಪಗಳನ್ನು ನೀನು ಕ್ಷಮಿಸಬೇಕು ಎಂದು ನಾನು ಇಚ್ಛೆಪಡುತ್ತೇನೆ”. ಆಮೆನ್.