ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಯೌವನಸ್ಥರಿಗೆ ಮನೆ ಸಭೆ
WFTW Body: 

ನಾವು ಯಾವುದಾದರೂ ವಿಷಯದ ಕುರಿತು ದೇವರ ಚಿತ್ತವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುವಾಗ ಅನಿಶ್ಚಿತತೆಯಿಂದಾಗಿ ದಿಕ್ಕು ತೋಚದಂತೆ ಆಗುವುದು ಬಹಳ ಸಾಮಾನ್ಯ ಸಂಗತಿಯೆಂದು ನಿಮಗೆ ತಿಳಿದಿರಬೇಕೆಂದು ನಾನು ಬಯಸುತ್ತೇನೆ. ಇದು ದೇವರು ನಮಗೆ ನಂಬಿಕೆಯಿಂದ ನಡೆಯಲು ತರಬೇತಿ ನೀಡುವ ಮಾರ್ಗವಾಗಿದೆ - ಏಕೆಂದರೆ ನಿಶ್ಚಿತತೆಯು ಕಣ್ಣಿಗೆ ಕಾಣಿಸುವ ಮಾರ್ಗದಲ್ಲಿ ನಡೆಯುವುದಕ್ಕೆ ಸಮನಾಗಿದೆ.

ಅಪೊಸ್ತಲನಾದ ಪೌಲನೂ ಸಹ ಅನೇಕ ಬಾರಿ ದೇವರ ಚಿತ್ತವನ್ನು ಅರಿಯದೆ ಗೊಂದಲಕ್ಕೆ ಒಳಗಾಗಿದ್ದನು. ಆತನು ಹೀಗೆ ಹೇಳುತ್ತಾನೆ, "ನಡೆದ ಸಂಗತಿಗಳನ್ನು ನೋಡಿ, ಏಕೆ ಹಾಗಾಯಿತೆಂದು ತಿಳಿಯದೆ ದಿಕ್ಕೆಟ್ಟೆವು. ಆದರೂ ನಾವು ಬಿಟ್ಟುಕೊಡುವುದಿಲ್ಲ ಹಾಗೂ ಮನಗುಂದುವುದಿಲ್ಲ"(2 ಕೊರಿಂಥದವರಿಗೆ 4:8 - Living Bible).

"ದೈವಿಕ ಜ್ಞಾನವು ಒಂದು ಮಹಾ ಭಾಗ್ಯವಾಗಿದೆ."

ನಾವು ಗೊಂದಲಕ್ಕೆ ಒಳಗಾಗಿ ತಪ್ಪುಗಳನ್ನು ಮಾಡುವ ಅವಕಾಶವನ್ನು ದೇವರು ನಮಗೆ ಒದಗಿಸುವುದಕ್ಕೆ ಒಂದು ಕಾರಣವೇನೆಂದರೆ, ಆಗ "ಯಾವ ಮನುಷ್ಯನೂ ದೇವರ ಮುಂದೆ ಹೊಗಳಿಕೊಳ್ಳುವುದಕ್ಕೆ ಆಸ್ಪದವಿರುವುದಿಲ್ಲ" (1 ಕೊರಿಂಥದವರಿಗೆ 1:29). ನಿತ್ಯತ್ವದಲ್ಲಿ ಯಾರೂ ತನ್ನನ್ನೇ ಹೊಗಳಿಕೊಳ್ಳುತ್ತಾ, ತಾನು ಕಾರ್ಯಗಳನ್ನು ಸರಿಯಾಗಿ ಮಾಡಿ ದೇವರ ಪರಿಪೂರ್ಣ ಚಿತ್ತವನ್ನು ನೆರವೇರಿಸಿದೆನೆಂದು ಹೇಳಲು ಸಾಧ್ಯವಾಗುವುದಿಲ್ಲ. ನಾವು ಅನೇಕ ತಪ್ಪು ಕೆಲಸಗಳನ್ನು ಮಾಡಿದ್ದರೂ ಮತ್ತು ಎಷ್ಟೋ ದೊಡ್ಡ ಪ್ರಮಾದಗಳನ್ನು ಮಾಡಿದ್ದರೂ, ನಮ್ಮ ಜೀವಿತದಲ್ಲಿ ದೇವರು ತನ್ನ ಚಿತ್ತವನ್ನು ಪೂರೈಸಿದರು, ಎಂಬುದರ ಬಗ್ಗೆ ಮಾತ್ರ ನಾವು ನಿತ್ಯತ್ವದಲ್ಲಿ ಹೆಚ್ಚಳ ಪಡಬಹುದು. ಇದು ಖಂಡಿತವಾಗಿ ನನ್ನ ಸಾಕ್ಷಿಯಾಗಿದೆ. ಈ ರೀತಿಯಾಗಿ ಎಲ್ಲಾ ಮಹಿಮೆ ದೇವರಿಗೆ ಮಾತ್ರ ಸಲ್ಲುತ್ತದೆ, ಮತ್ತು ನಾವು ಏನನ್ನೂ ಪಡೆಯುವುದಿಲ್ಲ. ಅನೇಕ ವಿಶ್ವಾಸಿಗಳು ಸೋಲನ್ನು ಅನುಭವಿಸಿದಾಗ ಅಥವಾ ದೇವರ ಮಾರ್ಗಗಳ ಬಗ್ಗೆ ಮತ್ತು ದೇವರ ಚಿತ್ತದ ಬಗ್ಗೆ ಗೊಂದಲಕ್ಕೆ ಒಳಗಾದಾಗ ನಿರಾಶೆಗೊಳ್ಳುವುದಕ್ಕೆ ಕಾರಣ, ಅವರು ದೇವರ ಈ ಅಂತಿಮ ಉದ್ದೇಶವನ್ನು ಕಂಡಿಲ್ಲ. ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ, ದೇವರ ಮಾರ್ಗಗಳು ನಮ್ಮ ಮಾರ್ಗಗಳಿಗಿಂತ ಅಷ್ಟು ಉನ್ನತವಾಗಿವೆ (ಯೆಶಾಯನು 55:8,9).

ದೈವಿಕ ಜ್ಞಾನವು ಒಂದು ಮಹಾ ಭಾಗ್ಯವಾಗಿದೆ. ಎಲ್ಲಾ ಸಂಗತಿಗಳಿಗೆ ಸೂಕ್ತವಾದ ಆದ್ಯತೆಯನ್ನು ನೀಡುವ ಸಾಮರ್ಥ್ಯವು ಈ ಜ್ಞಾನದ ಒಂದು ಅಂಶವಾಗಿದೆ - ಅಂದರೆ ಶಾಲೆಯ ವಿದ್ಯಾಭ್ಯಾಸಕ್ಕೆ, ದೇವರ ವಾಕ್ಯವನ್ನು ಓದಿಕೊಳ್ಳುವುದಕ್ಕೆ, ಮತ್ತು ಕೆಲಸ, ನಿದ್ರೆ ಹಾಗೂ ವಿಶ್ರಾಂತಿ, ಇತ್ಯಾದಿ ವಿಷಯಗಳಿಗೆ ಎಷ್ಟು ಸಮಯವನ್ನು ಉಪಯೋಗಿಸಿಕೊಳ್ಳಬೇಕು, ಎಂಬುದನ್ನು ತಿಳಿದಿರುವುದು. ಹೆಚ್ಚಿನ ವಿಶ್ವಾಸಿಗಳು, ಮುಖ್ಯವಾಗಿ ತಾವು ಮದುವೆಯಾದ ನಂತರ ಮತ್ತು ಕುಟುಂಬದ ಹೊಣೆಗಾರಿಕೆ ಬಂದಾಗ, ಬೇರೆ ಬೇರೆ ಕೆಲಸಗಳಿಗೆ ಎಷ್ಟು ಪ್ರಾಮುಖ್ಯತೆ ನೀಡಬೇಕೆಂದು ತಿಳಿಯದೆ ಸೋತುಹೋಗುತ್ತಾರೆ. ಹಾಗಾಗಿ ಈಗ ನಿಮ್ಮ ಯೌವನದಲ್ಲಿ ಮತ್ತು ಮದುವೆ ಮಾಡಿಕೊಳ್ಳುವುದಕ್ಕೆ ಮೊದಲು ಆದಷ್ಟು ಮಟ್ಟಿಗೆ ಈ ಜ್ಞಾನವನ್ನು ಪಡೆಯುವುದು ಒಳ್ಳೆಯದು. ನಿಮಗೆ ಜ್ಞಾನದ ಕೊರತೆಯಿದ್ದರೆ (ನಮಗೆಲ್ಲರಿಗೂ ಅದರ ಕೊರತೆಯಿದೆ), ನೀವು ಅದಕ್ಕಾಗಿ ದೇವರನ್ನು ಕೇಳಿಕೊಳ್ಳಬಹುದು, ಮತ್ತು ಅವರು ಅದನ್ನು ಉದಾರವಾಗಿ ಕೊಡುತ್ತಾರೆ, ಎಂದು ಯಾಕೋಬನು ಹೇಳುತ್ತಾನೆ. ಹಾಗಾಗಿ ಕೇಳಿಕೊಳ್ಳಿರಿ!

ನಾನು ಬರೆದಿರುವ "ದೇವರ ಚಿತ್ತವನ್ನು ಕಂಡುಕೊಳ್ಳುವುದು" ಎಂಬ ಪುಸ್ತಕದ ಆರನೇ ಅಧ್ಯಾಯವನ್ನು ನೀವೆಲ್ಲರೂ ಓದಿಕೊಳ್ಳಬೇಕೆಂದು ನಾನು ನಿಮ್ಮನ್ನು ಪ್ರೋತ್ಸಾಹಿಸಲು ಬಯಸುತ್ತೇನೆ. ಅದರಲ್ಲಿ ನಿರ್ಧಾರಗಳ ಅನಿಶ್ಚಿತತೆಯಿಂದ ಬಿಡುಗಡೆ, ಹಿಂದಿನ ನಿರ್ಧಾರಗಳ ಬಗ್ಗೆ ಖಿನ್ನತೆಯಿಂದ ಬಿಡುಗಡೆ ಮತ್ತು ತಪ್ಪು ನಿರ್ಧಾರಗಳ ಭಯದಿಂದ ಬಿಡುಗಡೆ ಇವುಗಳ ಕುರಿತಾಗಿ ನಾನು ಹೇಳಿದ್ದೇನೆ.

ಒಂದು ತಪ್ಪನ್ನೂ ಮಾಡದ ಮನುಷ್ಯನು ಏನನ್ನೂ ಸಾಧಿಸುವುದಿಲ್ಲ. ಸ್ವತಃ ಯೇಸುವನ್ನು ಹೊರತು ಪಡಿಸಿದರೆ, ಯಾವ ಮನುಷ್ಯನೂ ತಪ್ಪುಗಳನ್ನು ಮಾಡದೆ ದೇವರ ಪರಿಪೂರ್ಣ ಚಿತ್ತದ ಪ್ರಕಾರ ನಡೆಯುವುದನ್ನು ಎಂದಿಗೂ ಕಲಿತುಕೊಂಡಿಲ್ಲ. "ಒಳ್ಳೆಯ ಮಾರ್ಗದಲ್ಲಿ ನಡೆಯುವ ಮನುಷ್ಯರಿಗೆ ಕರ್ತನು ಮಾರ್ಗವನ್ನು ತೋರಿಸುತ್ತಾನೆ .... ಅವರ ಕೈಗಳನ್ನು ಕರ್ತನು ಹಿಡಿದಿರುವುದರಿಂದ, ಅವರು ಎಡವಿದರೂ ಬಿದ್ದು ಸಾಯುವುದಿಲ್ಲ" (ಕೀರ್ತನೆಗಳು 37:23,24 - Living Bible). ಹಾಗಾಗಿ ತಪ್ಪು ಮಾಡುತ್ತೇವೆಂದು ಭಯ ಪಡಬೇಡಿರಿ. ನೀವು ಗಂಭೀರವಾದ ತಪ್ಪು ಮಾಡದಂತೆ ದೇವರು ಕಾಪಾಡುತ್ತಾರೆ.