WFTW Body: 

ದೇವರು ಒಂದು ಹೊಸ ಮಡಕೆಗಾಗಿ ಹುಡುಕುತ್ತಿದ್ದಾರೆ ಎಂದು '2ಅರಸುಗಳು 2:20'ರಲ್ಲಿ ನಮಗೆ ತೋರಿಸಲಾಗಿದೆ.

ಸುವಾರ್ತೆಯನ್ನು ಪ್ರಚಾರ ಮಾಡುವುದಕ್ಕಾಗಿ ದೇವರು ಈ ಲೋಕದಲ್ಲಿ ಹೊಸ ವಿಧಾನಗಳನ್ನು, ಅಥವಾ ಹೊಸ ಸಂಸ್ಥೆಗಳನ್ನು ಹುಡುಕುತ್ತಿಲ್ಲ. ಕರ್ತರು ಅವರ ಉದ್ದೇಶಗಳನ್ನು ಪೂರೈಸಲು ಉಪ್ಪು ತುಂಬಿರುವ ಹೊಸ ಮಡಕೆಗಳಿಗಾಗಿ ಹುಡುಕುತ್ತಿದ್ದಾರೆ. ದೇವರು ಲೋಕಕ್ಕೆ ಸುವಾರ್ತೆಯನ್ನು ತಾವೇ ಖುದ್ದಾಗಿ ನೀಡುವುದಿಲ್ಲ. ದೇವರು ಬಯಸಿದ್ದರೆ, ಅದನ್ನು ಅವರು ಸ್ವತಃ ಪರಲೋಕದಿಂದ ಈ ಜಗತ್ತಿಗೆ ಘೋಷಿಸಲು ಸಾಧ್ಯವಿತ್ತು. ಆದರೆ ಇದು ಅವರ ವಿಧಾನವಲ್ಲ. ಅವರು ಮಾನವನೆಂಬ ಮಡಕೆಯ ಒಳಗೆ ಉಪ್ಪನ್ನು ತುಂಬಿಸಿ, ಅನಂತರ ಅದನ್ನು ಭೂಮಿಯ ಮೇಲೆ ಸುರಿಯಲು ಬಯಸುತ್ತಾರೆ.

ಎಲೀಷನು ಉಪ್ಪನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಅದನ್ನು ಸುರಿಯಬಹುದಾಗಿತ್ತು. ಆದರೆ ಆತನು ಹೀಗೆ ಮಾಡಲಿಲ್ಲ. ಅವನು ಒಂದು ಹೊಸ ಮಡಕೆಯನ್ನು ತೆಗೆದುಕೊಂಡನು, ಅದರಲ್ಲಿ ಉಪ್ಪನ್ನು ತುಂಬಿದನು, ಮತ್ತು ಅದನ್ನು ನೀರಿನಲ್ಲಿ ಸುರಿದನು. ಒಡನೆಯೇ ಭೂಮಿಯಲ್ಲಿ ಮತ್ತು ನೀರಿನಲ್ಲಿ ಇದ್ದ ದೋಷವು ಪರಿಹಾರವಾಯಿತು. ನಾವು ನಮ್ಮ ಯಜಮಾನನ ಬಳಕೆಗೆ ಯೋಗ್ಯವಾದ ಮಡಕೆಗಳಾಗಿ ನಮ್ಮೊಳಗಿನಿಂದ ಲೋಕದ ಸಂಗತಿಗಳನ್ನೆಲ್ಲಾ ಖಾಲಿ ಮಾಡಿಸಿಕೊಳ್ಳುವ ಮನಸ್ಸು ಹೊಂದುವಂತೆ ಮತ್ತು ಕ್ರಿಸ್ತನಿಂದ ತುಂಬಲ್ಪಡುವಂತೆ ದೇವರು ನಮ್ಮನ್ನು ಅನುಗ್ರಹಿಸಲಿ.

ಇಲ್ಲಿ ಒಂದು ವಿಷಯವನ್ನು ನೀವು ಗಮನಿಸಬೇಕೆಂದು ನಾನು ಬಯಸುತ್ತೇನೆ: ಎಲೀಷನು ಮಡಕೆಯಲ್ಲಿ ಉಪ್ಪನ್ನು ತುಂಬಿದ ಮೇಲೆ ಅದನ್ನು ಹಾಗೆಯೇ ಇರಿಸಲಿಲ್ಲ - ಆತನು ಅದನ್ನು ಸುರಿದುಬಿಟ್ಟನು.

ದೇವರು ನಿಮ್ಮ ಮತ್ತು ನನ್ನ ಜೀವಿತದಲ್ಲಿ ನಮ್ಮನ್ನು (ವರಗಳಿಂದ) ತುಂಬಿಸುವುದರ ಕಾರಣವೇನೆಂದರೆ, ನಾವು ಇವೆಲ್ಲವನ್ನು ಇತರರ ಸೇವೆಗಾಗಿ ಸುರಿಯಬೇಕು ಎನ್ನುವ ಒಂದೇ ಉದ್ದೇಶದಿಂದ. ನಾವು ಬಹಳ ಸಮಯದಿಂದ ದೇವರು ನಮ್ಮನ್ನು ಪವಿತ್ರಾತ್ಮನಿಂದ ತುಂಬಿಸಬೇಕೆಂದು, ಮತ್ತು ಒಂದಲ್ಲ ಒಂದು ಆತ್ಮಿಕ ಆಶೀರ್ವಾದವನ್ನು ನಮಗೆ ನೀಡಬೇಕೆಂದು ಕೇಳುತ್ತಿರಬಹುದು. ಆದರೆ ಒಂದು ವೇಳೆ, ನಾವು ಇವೆಲ್ಲವನ್ನು ಬಹಳ ಸ್ವಾರ್ಥದ ಉದ್ದೇಶದಿಂದ ಕೇಳಿರಬಹುದು. ಇತರರ ಮುಂದೆ ನಾವು ನಮ್ಮ ಆತ್ಮಿಕ ಹೆಚ್ಚಳವನ್ನು ತೋರಿಸಿಕೊಳ್ಳಬೇಕೆಂದು ದೇವರು ತಮ್ಮ ಪರಲೋಕದ ಉಪ್ಪಿನಿಂದ ನಮ್ಮನ್ನು ತುಂಬಿಸುವುದಿಲ್ಲ.

ಕರ್ತನಾದ ಯೇಸುವಿನ ಕುರಿತಾಗಿ ನಾವು ’ ಯೆಶಾಯನು 53:12'ರಲ್ಲಿ ಓದುವುದು ಏನೆಂದರೆ, ಅವರು ತನ್ನ ಪ್ರಾಣವನ್ನು ಧಾರೆಯೆರೆದು ಮರಣ ಹೊಂದಿದರು, ಎಂಬುದಾಗಿ. ಇದರ ಮೂಲಕವಾಗಿ ಈ ದಿನ ನಿಮ್ಮ ಮತ್ತು ನನ್ನ ಪಾಪಗಳು ಮನ್ನಿಸಲ್ಪಡಲು ಸಾಧ್ಯವಾಗಿದೆ. ಇತರರ ಸೇವೆಗಾಗಿ ಸುರಿಯಲ್ಪಡುವ ಮನಸ್ಸು ನಮ್ಮಲ್ಲೂಇರಬೇಕು. ಇಲ್ಲವಾದರೆ, ಭೂಮಿಯು ಎಂದಿಗೂ ದೋಷ ಪರಿಹಾರವನ್ನು ಪಡೆಯಲಾರದು. ನಾವು ನೀರು ತುಂಬಿರುವ ದೊಡ್ಡ ಕೊಳಗಳು ಆಗಿರಬೇಕೆಂದು ಕರ್ತನು ಇಚ್ಛಿಸುವುದಿಲ್ಲ. ನಾವು ನೀರು ಹರಿಯುವ ಕಾಲುವೆಗಳಾಗಿ, ನಮ್ಮ ಮೂಲಕ ಜೀವಕರ ನೀರಿನ ಹೊಳೆಗಳು ಇತರರಿಗೆ ಹರಿಯುವಂತಾಗಲಿ, ಎಂದು ಅವರು ಬಯಸುತ್ತಾರೆ. ದೇವರು ಇಂತಹ ಮಡಕೆಗಳಿಗಾಗಿ ಹುಡುಕುತ್ತಿದ್ದಾರೆ - ತಮ್ಮನ್ನು ಖಾಲಿ ಮಾಡಿಕೊಳ್ಳಲು ಬಯಸುವಂತ ಮಡಕೆಗಳು.

ಕರ್ತರ ದೃಷ್ಟಿಯು ಭೂಲೋಕದ ಎಲ್ಲಾ ಕಡೆ ಪ್ರಸರಿಸಿ, ಇಂತಹ ಮಡಕೆಗಳನ್ನು ಹುಡುಕುತ್ತಿದೆ. ನೀವು ವಿಧ್ಯಾಭ್ಯಾಸ ಪಡೆದಿಲ್ಲವಾದರೂ ಪರವಾಗಿಲ್ಲ. ನಾವು '2 ಪೂರ್ವಕಾಲವೃತ್ತಾಂತ 7:14'ರಲ್ಲಿ ವಿಧ್ಯಾಭ್ಯಾಸದ ವಿಚಾರವಾಗಿ ಏನನ್ನೂ ಓದುವುದಿಲ್ಲ. ನಿಮ್ಮ ಜೀವನದಲ್ಲಿ ನೀವು ಒಂದು ದಿನವೂ ಪಾಠಶಾಲೆಯ ಮೆಟ್ಟಲನ್ನು ಹತ್ತಿರದಿದ್ದರೂ ಪರವಾಗಿಲ್ಲ. ಇಡೀ ಲೋಕದಲ್ಲಿನ ಅತೀ ಬಡ ಮನುಷ್ಯ ನೀನಾಗಿದ್ದರೂ, ಅಥವಾ ಅತ್ಯಂತ ತಿಳಿಗೇಡಿ ಮನುಷ್ಯನಾಗಿದ್ದರೂ ಪರವಾಗಿಲ್ಲ. ದೇವರು ಇಂತಹ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಅವರು ಸತ್ಯವೇದ ಜ್ಞಾನ ಎಷ್ಟಿದೆಯೆಂದು, ಅಥವಾ ನೀವು ಸತ್ಯವೇದ ಸಂಸ್ಥೆಗಳಿಂದ "ಡಿಪ್ಲೊಮಾ" ಪಡೆದಿದ್ದೀರೋ ಎಂದು ಪರೀಕ್ಷಿಸುವುದಿಲ್ಲ. ಅವರಿಗೆ ಬೇಕಾಗಿರುವುದು ಯಾವುದೋ ಬೇರೆ ಸಂಗತಿ.

"ನನ್ನವರೆಂದು ಹೆಸರುಗೊಂಡ ನನ್ನ ಪ್ರಜೆಗಳು ತಮ್ಮನ್ನು ತಗ್ಗಿಸಿಕೊಂಡು, ತಮ್ಮ ಕೆಟ್ಟ ನಡತೆಯನ್ನು ಬಿಟ್ಟು ತಿರುಗಿಕೊಂಡು, ನನ್ನನ್ನು ಪ್ರಾರ್ಥಿಸಿ ನನ್ನ ದರ್ಶನವನ್ನು ಬಯಸುವುದಾದರೆ, ನಾನು ಪರಲೋಕದಿಂದ ಲಾಲಿಸಿ ಅವರ ಪಾಪಗಳನ್ನು ಕ್ಷಮಿಸಿ, ಅವರ ದೇಶದಲ್ಲಿ ಆರೋಗ್ಯವನ್ನು ದಯಪಾಲಿಸುವೆನು," ಎಂದು ಅವರು ಹೇಳಿದ್ದಾರೆ.

ನೀವು ಯಾರು ಎಂಬ ವಿಷಯ ಮುಖ್ಯವಲ್ಲ. ದೇವರು ಮನುಷ್ಯರ ನಡುವೆ ಭೇದ ಮಾಡುವುದಿಲ್ಲ. ನೀವು ಮೇಲೆ ಹೇಳಿರುವ ಷರತ್ತುಗಳನ್ನು ಪಾಲಿಸಲು ಸಿದ್ಧರಾಗಿದ್ದು, ಇತರರಿಗಾಗಿ ಸುರಿಯಲ್ಪಡಲು ಒಪ್ಪಿಕೊಂಡರೆ, ನೀವು ಯಾರೇ ಆಗಿದ್ದರೂ ದೇವರು ನಿಮ್ಮನ್ನು ಉಪಯೋಗಿಸಿಕೊಳ್ಳುವರು.