ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಸಭೆ ತಿಳಿಯುವುದು
WFTW Body: 

"ಒಬ್ಬನಿಗಿಂತ ಇಬ್ಬರು ಲೇಸು; ಅವರ ಪ್ರಯಾಸಕ್ಕೆ ಎರಡು ಪಟ್ಟಿಗಿಂತ ಅಧಿಕ ಒಳ್ಳೆಯ ಲಾಭ. ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು; ಬಿದ್ದಾಗ ಎತ್ತುವವನು ಇನ್ನೊಬ್ಬನು ಇಲ್ಲದಿದ್ದರೆ ಅವನ ಗತಿ ದುರ್ಗತಿಯೇ..... ಒಬ್ಬಂಟಿಗನನ್ನು ಜಯಿಸಬಲ್ಲವನನ್ನು ಇಬ್ಬರು ಎದುರಿಸಿ ಗೆಲ್ಲಬಹುದು; ಮೂರು ಹುರಿಯ ಹಗ್ಗ ಇನ್ನೂ ಒಳ್ಳೆಯದು, ಅದು ಬೇಗ ಕಿತ್ತು ಹೋಗುವದಿಲ್ಲವಷ್ಟೇ" (ಪ್ರಸಂಗಿ. 4:9-12- 'TLB' ಭಾಷಾಂತರ). ನೀವು ಏಸೋಫನ ಕಥೆಗಳನ್ನು ನೆನಪಿಸಿಕೊಳ್ಳಬಹುದು; ಅದರಲ್ಲಿ ಮುದಿ ವಯಸ್ಸಿನ ಒಬ್ಬ ರೈತನು, ತನ್ನ ಮೂವರು ಗಂಡು ಮಕ್ಕಳು ಯಾವಾಗಲೂ ತಮ್ಮೊಳಗೆ ಜಗಳಾಡುತ್ತಿದ್ದುದನ್ನು ನೋಡಿ, ಅವರಿಗೆ ಒಂದು ಪ್ರಾಯೋಗಿಕ ಪಾಠವನ್ನು ಕಲಿಸಿಕೊಡುತ್ತಾನೆ. ಆತನು ಕೆಲವು ಸಣ್ಣ ಕಡ್ಡಿಗಳನ್ನು ಕೈಗೆತ್ತಿಕೊಂಡು, ಅವುಗಳನ್ನು ಒಂದೊಂದಾಗಿ ತುಂಡು ಮಾಡುವುದು ಬಹಳ ಸುಲಭ, ಆದರೆ ಕಡ್ಡಿಗಳನ್ನು ಒಂದಾಗಿ ಸೇರಿಸಿ ಒಂದು ಕಂತೆಯನ್ನು ಮಾಡಿದಾಗ, ಅದನ್ನು ತುಂಡು ಮಾಡುವುದು ಹೆಚ್ಚು ಕಡಿಮೆ ಅಸಾಧ್ಯವೇ, ಎಂಬುದನ್ನು ಅವರಿಗೆ ತೋರಿಸಿ ಕೊಡುತ್ತಾನೆ. ಈ ಲೋಕದ ಪ್ರಜೆಗಳೂ ಸಹ ಐಕ್ಯತೆ ಮತ್ತು ಅನ್ಯೋನ್ಯತೆಯಲ್ಲಿ ಬಲವಿದೆ ಎಂಬುದನ್ನು ಅರಿತುಕೊಂಡಿದ್ದಾರೆ. ಸತ್ಯವೇದವು ಇನ್ನೊಂದು ಕಡೆ, "ಮಿಡತೆಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಅಸಾಧಾರಣ ಜಾಣ್ಮೆಯನ್ನು ಹೊಂದಿವೆ; ಅವುಗಳಿಗೆ ಅರಸ ಅಥವಾ ನಾಯಕನಿಲ್ಲ; ಆದರೂ ಅವೆಲ್ಲಾ ದಂಡುದಂಡಾಗಿ ಹೊರಡುವವು," (ಜ್ಞಾ. 30:27- 'TLB' ಭಾಷಾಂತರ) ಎಂದು ಹೇಳುತ್ತದೆ. ಅವುಗಳು ಈ ರೀತಿಯಾಗಿ ತಮ್ಮ ರಕ್ಷಣೆ ಮತ್ತು ಬಲವನ್ನು ಹೊಂದುತ್ತವೆ. ಯೇಸು ಕ್ರಿಸ್ತನ ಸಭೆಯಲ್ಲಿ ನಾವು ಈ ಪಾಠವನ್ನು ಅವಶ್ಯವಾಗಿ ಕಲಿತುಕೊಳ್ಳಬೇಕು.

ಸತ್ಯವೇದವು ಉಲ್ಲೇಖಿಸುವ ಐಕ್ಯತೆಯು, ಕ್ರಿಸ್ತನ ನಾಯಕತ್ವದಲ್ಲಿ, ಕ್ರಿಸ್ತನ ದೇಹದ ಸದಸ್ಯರು ತಮ್ಮೊಳಗೆ ಹೊಂದಿರುವ ಐಕ್ಯತೆಯಾಗಿದೆ - ಇದು ’ಜೈವಿಕ’ ಐಕ್ಯತೆಯಾಗಿದೆ, ’ಸಂಘಟನೆಯ’ ಐಕ್ಯತೆಯಲ್ಲ. ಕ್ರಿಸ್ತನ ದೇಹಕ್ಕೆ ಸೇರದಂತ ಜನರು ತಮ್ಮನ್ನು ’ಕ್ರೈಸ್ತ’ರೆಂದು ತೋರಿಸಿಕೊಂಡರೂ ಸಹ, ಅವರು ಇದರಲ್ಲಿ ಸೇರಿಕೊಳ್ಳಲಾರರು. ಜೀವಂತವಾದದ್ದು ಸತ್ತವರೊಂದಿಗೆ ಸೇರಿಕೊಳ್ಳಲು ಸಾಧ್ಯವಿಲ್ಲ. ಹೊಸದಾಗಿ ಹುಟ್ಟಿ ಕ್ರಿಸ್ತನಲ್ಲಿ ಜೀವವನ್ನು ಪಡೆದಿರುವವರು ತಮ್ಮಂತೆಯೇ ದೇವರಿಂದ ಹೊಸ ಹುಟ್ಟನ್ನು ಪಡೆದಿರುವ ಇತರರೊಂದಿಗೆ ಮಾತ್ರ ಆತ್ಮಿಕ ಐಕ್ಯತೆಯನ್ನು ಕಂಡುಕೊಳ್ಳುತ್ತಾರೆ. ಕ್ರೈಸ್ತರ ಐಕ್ಯತೆಯು ಪವಿತ್ರಾತ್ಮನು ಜರಗಿಸುವ ಕಾರ್ಯವಾಗಿದೆ, ಏಕೆಂದರೆ ಕೇವಲ ಪವಿತ್ರಾತ್ಮನು ನಮ್ಮನ್ನು ಕ್ರಿಸ್ತನ ದೇಹದ ಅಂಗಗಳಾಗಿ ಮಾಡುತ್ತಾನೆ. ಸತ್ಯವೇದವು ನಮಗೆ, "ಪವಿತ್ರಾತ್ಮನಿಂದ ಉಂಟಾಗುವ ಐಕ್ಯತೆಯನ್ನು ಕಾಪಾಡಲು ಆಸಕ್ತಿಯಿಂದ ಶ್ರಮಿಸಿರಿ" (ಎಫೆ. 4:3 - 'Amplified' ಭಾಷಾಂತರ), ಎಂದು ಪ್ರೋತ್ಸಾಹಿಸುತ್ತದೆ. ಮನುಷ್ಯನಿಂದ ಉಂಟಾಗುವ ಯಾವುದೇ ಐಕ್ಯತೆಯು ಕೆಲಸಕ್ಕೆ ಬರುವುದಿಲ್ಲ.

ಸೈತಾನನು ಒಬ್ಬ ವಂಚಿಸುವಂತ ಶತ್ರುವಾಗಿದ್ದಾನೆ ಮತ್ತು ಕ್ರಿಸ್ತ ಮತ್ತು ಆತನ ವಾಕ್ಯದ ಅಧಿಕಾರಕ್ಕೆ ಒಳಪಟ್ಟು ಐಕ್ಯತೆಯಲ್ಲಿ ಜೀವಿಸುತ್ತಿರುವ ಒಂದು ಕ್ರೈಸ್ತ ಸಭೆಯನ್ನು ತಾನು ಸೋಲಿಸಲಾರೆನೆಂದು ಆತನಿಗೆ ತಿಳಿದಿದೆ. ಹಾಗಾಗಿ ಹೋರಾಟದಲ್ಲಿ ಆತನು ಬಳಸುವ ತಂತ್ರವೇನೆಂದರೆ, ಒಂದು ಕ್ರೈಸ್ತ ಸಭೆಯ ಸದಸ್ಯರ ನಡುವೆ ಮನಸ್ತಾಪ, ಸಂದೇಹ ಮತ್ತು ತಪ್ಪು ತಿಳುವಳಿಕೆಯ ಬೀಜವನ್ನು ಬಿತ್ತಲು ಆರಂಭಿಸಿ, ಆ ಮೇಲೆ ಅವರನ್ನು ಒಬ್ಬೊಬ್ಬರನ್ನಾಗಿ ದುರ್ಬಲಗೊಳಿಸುವುದು. ಯೇಸುವು ಹೇಳಿದಂತೆ, ಪಾತಾಳಲೋಕದ ಬಲವು ಯೇಸುವಿನ ಸಭೆಯನ್ನು ಸೋಲಿಸಲಾರದು (ಮತ್ತಾ. 16:18). ಸಭೆಗೆ, ಅಂದರೆ ಕ್ರಿಸ್ತನ ದೇಹಕ್ಕೆ, ಸೈತಾನನ ವಿರುದ್ಧ ಜಯ ಗಳಿಸುವ ವಾಗ್ದಾನ ಕೊಡಲ್ಪಟ್ಟಿದೆ. ಇತರ ವಿಶ್ವಾಸಿಗಳಿಂದ ದೂರ ಸರಿದು ಒಬ್ಬಂಟಿಗನಾಗಿ ನಿಂತಿರುವ ಒಬ್ಬ ವಿಶ್ವಾಸಿಯು ಸೋತುಹೋಗುವ ಸಾಧ್ಯತೆ ಇದೆ. ಕ್ರಿಸ್ತನ ಭೂಲೋಕದ ಜೀವಿತಕಾಲದಲ್ಲಿ, ಸೈತಾನನು ಆತನ ಮೇಲೆ ನಿರಂತರವಾಗಿ ದಾಳಿಮಾಡಿದನು, ಆದರೆ ಆತನಿಗೆ ಜಯ ಲಭಿಸಲಿಲ್ಲ. ಕೊನೆಯಲ್ಲಿ ಕ್ರಿಸ್ತನು ಶಿಲುಬೆಯ ಮೇಲೆ, ಸೈತಾನನು ಮಾನವನ ಮೇಲೆ ಚಲಾಯಿಸುತ್ತಿದ್ದ ಅಧಿಕಾರವನ್ನು ಆತನಿಂದ ಕಸಿದುಕೊಂಡನು (ಇಬ್ರಿ. 2:14; ಕೊಲೋ. 2:15). ಇಂದು ಸೈತಾನನು ಮೇಲಕ್ಕೆದ್ದಿರುವ ಕ್ರಿಸ್ತನ ಮೇಲೆ ದಾಳಿ ಮಾಡಲಾರನು. ಹಾಗಾಗಿ ಆತನ ದಾಳಿಗಳು ಕ್ರಿಸ್ತನ ದೇಹವಾದ ಕ್ರೈಸ್ತಸಭೆಯ ಮೇಲೆ ಕೇಂದ್ರೀಕೃತವಾಗಿವೆ. ನಾವು ಕರ್ತನನ್ನು ಶಿರಸ್ಸಾಗಿ ಇರಿಸಿಕೊಂಡಿರುವ ಒಂದೇ ದೇಹವಾಗಿ, ಒಗ್ಗಟ್ಟಿನಿಂದ ಸೈತಾನನನ್ನು ಎದುರಿಸಿ ನಿಂತಾಗ ಮಾತ್ರ ಜಯ ಗಳಿಸುತ್ತೇವೆ. ಅನ್ಯೋನ್ಯತೆಯುಳ್ಳ ಕ್ರೈಸ್ತರ ಒಂದು ತಂಡದಲ್ಲಿ, ಕೇವಲ ಒಬ್ಬ ಸದಸ್ಯನು ತನ್ನ ಕಾರ್ಯವನ್ನು ಸರಿಯಾಗಿ ಮಾಡದಿದ್ದರೆ, ಆ ದೇಹದ ಬಲವು ಅದೇ ಪ್ರಮಾಣಕ್ಕೆ ತಕ್ಕಂತೆ ಕುಗ್ಗುತ್ತದೆ. ಇದನ್ನು ಅರಿತಿರುವ ಸೈತಾನನು, ಒಂದು ಅನ್ಯೋನ್ಯ ಪಂಗಡದ ಸದಸ್ಯರನ್ನು ವೈಯಕ್ತಿಕವಾಗಿ ಬೇರ್ಪಡಿಸುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾನೆ, ಮತ್ತು ಅದು ಸಾಧ್ಯವಾಗದಿದ್ದರೆ, ಆ ಪಂಗಡವನ್ನು (ಅಥವಾ ಸಭೆಯನ್ನು) ಒಳಪಂಗಡಗಳಾಗಿ ವಿಭಜಿಸಲು ಪ್ರಯತ್ನಿಸುತ್ತಾನೆ. ಇವೆರಡೂ ರೀತಿಯಲ್ಲಿ, ಆತನ ಗುರಿ ಸಾಧಿಸಲ್ಪಡುತ್ತದೆ. ಇದೇ ಕಾರಣಕ್ಕಾಗಿ ನಾವು ಯಾವಾಗಲೂ ಸೈತಾನನ ಕುತಂತ್ರಗಳ ವಿರುದ್ಧವಾಗಿ ಹುಷಾರಾಗಿರಬೇಕು; ಇಲ್ಲವಾದರೆ ಆತನು ನಮ್ಮ ಮತ್ತು ಕ್ರಿಸ್ತನ ದೇಹದ ಇತರ ಸದಸ್ಯರ ನಡುವಿನ ಬಾಂಧವ್ಯವನ್ನು ದುರ್ಬಲಗೊಳಿಸುತ್ತಾನೆ.

ವಿಶ್ವಾಸಿಗಳು ವೈಯಕ್ತಿಕವಾಗಿ ದೇವರಿಗೆ ಮಾಡುವ ಪ್ರಾರ್ಥನೆಗೆ ಸಂಬಂಧಿಸಿದಂತ ಹಲವು ವಾಗ್ದಾನಗಳನ್ನು ಯೇಸುವು ಮಾಡಿದ್ದಾರೆ. ಆದರೆ ಮತ್ತಾಯ 18:18,19ರಲ್ಲಿ ನಮಗೆ ಕೊಡಲ್ಪಟ್ಟಿರುವ ವಾಗ್ದಾನವು, ಕ್ರಿಸ್ತನ ದೇಹದ ಒಂದು ಅಂಶವು ಐಕ್ಯತೆಯಿಂದ ಮಾಡುವ ಪ್ರಾರ್ಥನೆಗೆ ಸಂಬಂಧಿಸಿದೆ: ಯೇಸುವು ಹೀಗೆ ಹೇಳಿದರು, "ಭೂಲೋಕದಲ್ಲಿ ನೀವು ಏನೇನು ಕಟ್ಟುತ್ತೀರೋ, ಅದು ಪರಲೋಕದಲ್ಲಿಯೂ ಕಟ್ಟಿರುವುದು; ಮತ್ತು ಭೂಲೋಕದಲ್ಲಿ ನೀವು ಏನೇನು ಬಿಚ್ಚುತ್ತೀರೋ, ಅದು ಪರಲೋಕದಲ್ಲಿಯೂ ಬಿಚ್ಚಿರುತ್ತದೆ. ಇದಲ್ಲದೆ ನಿಮ್ಮಲ್ಲಿ ಇಬ್ಬರು ತಾವು ಬೇಡಿಕೊಳ್ಳತಕ್ಕ ಯಾವುದಾದರೂ ಒಂದು ಕಾರ್ಯದ ವಿಷಯವಾಗಿ ಭೂಲೋಕದಲ್ಲಿ ಒಂದೇ ಮನಸ್ಸು ಉಳ್ಳವರಾಗಿದ್ದರೆ, ಅದು ಪರಲೋಕದಲ್ಲಿರುವ ನನ್ನ ತಂದೆಯಿಂದ ಅವರಿಗೆ ಆಗುವದೆಂದು ನಿಮಗೆ ಹೇಳುತ್ತೇನೆ" ('TLB ಭಾಷಾಂತರ’). "ಒಂದೇ ಮನಸ್ಸು" ಎಂದು 19ನೇ ವಚನದಲ್ಲಿ ಭಾಷಾಂತರಿಸಿದ ಶಬ್ದವು, ಗ್ರೀಕ್ ಭಾಷೆಯ "ಸಂಫೋನ್ಯೋ" ಎಂಬ ಮೂಲಪದದಿಂದ ಬಂದಿದೆ, ಮತ್ತು ಈ ಪದವು ಆಂಗ್ಲ ಭಾಷೆಯ "ಸಿಂಫೊನಿ" (’ಸ್ವರಮೇಳ’) ಎಂಬುದರ ಮೂಲಪದವಾಗಿದೆ. ಈ ವಚನಗಳಲ್ಲಿ ಯೇಸುವು ತನ್ನ ಮಕ್ಕಳಲ್ಲಿ ಕೇವಲ ಇಬ್ಬರು ಒಮ್ಮತವನ್ನು ಹೊಂದಿದ್ದರೂ, ಅದು ಸಂಗೀತದ ಸ್ವರಮೇಳದಂತೆ ಇರುತ್ತದೆಂದು ತೋರಿಸಿದರು. ಇತರರು ಪ್ರಾರ್ಥನೆಯನ್ನು ಮುಗಿಸಿದಾಗ, ನಾವು ಸಾಮಾನ್ಯವಾಗಿ "ಆಮೆನ್" ಅಥವಾ "ಹಾಗೆಯೇ ಆಗಲಿ" ಎಂದು ಸೇರಿಸುವುದಕ್ಕಿಂತ ಹೆಚ್ಚಿನ ವಿಷಯ ಇದಾಗಿದೆ. "ಸ್ವರಮೇಳ" ಎಂಬ ಪದವು, ಒಂದಾಗಿ ಪ್ರಾರ್ಥಿಸುತ್ತಿರುವ ಜನರ ನಡುವೆ ಒಂದು ಆಳವಾದ ಆತ್ಮಿಕ ಹೊಂದಾಣಿಕೆ ಇರುವುದನ್ನು ಸೂಚಿಸುತ್ತದೆ. ಕ್ರೈಸ್ತರ ಒಂದು ತಂಡವು ಚಿಕ್ಕದೇ ಆಗಿದ್ದರೂ, ಅದರಲ್ಲಿ ಅನ್ಯೋನ್ಯತೆಯಿದ್ದಾಗ ಅದು ನುರಿತ ಸಂಗೀತಕಾರರ ತಂಡದ ಸುಂದರ ವಾದ್ಯಮೇಳದಂತೆ ಆಗುತ್ತದೆ, ಮತ್ತು (ಯೇಸುವು ಹೇಳಿದಂತೆ) ಅವರ ಪ್ರಾರ್ಥನೆಯಲ್ಲಿ ಎಂತಹ ಅಧಿಕಾರ ಇರುತ್ತದೆಂದರೆ, ಅವರು ಏನನ್ನು ಕೇಳಿದರೂ ಅದು ಕೊಡಲ್ಪಡುತ್ತದೆ. ಕ್ರೈಸ್ತರ ಇಂತಹ ಒಂದು ತಂಡವು ಸೈತಾನನ ಬಲವನ್ನು ತಡೆಯುವುದಕ್ಕೂ ಮತ್ತು ಸೈತಾನನ ಸೆರೆಯಲ್ಲಿ ಇರುವವರನ್ನು ಬಿಡುಗಡೆ ಗೊಳಿಸುವುದಕ್ಕೂ ಅಧಿಕಾರವನ್ನು ಹೊಂದಿರುತ್ತದೆ. ಇಂತಹ ಅನ್ಯೋನ್ಯತೆಯಲ್ಲಿ ಇಷ್ಟೊಂದು ಅಧಿಕಾರ ಇರುವುದಕ್ಕೆ ಕಾರಣವೇನೆಂದು ಯೇಸುವು ವಿವರಿಸಿದರು: "ಯಾಕಂದರೆ ಇಬ್ಬರು ಮೂವರು ನನ್ನ ಹೆಸರಿನೊಂದಿಗೆ ಕೂಡಿಬಂದಾಗ, ಅಲ್ಲಿ ಅವರ ಮಧ್ಯದಲ್ಲಿ ನಾನು ಇದ್ದೇನೆ" (ಮತ್ತಾಯ 18:20 - 'Amplified' ಭಾಷಾಂತರ). ಸಭೆಯ ಶಿರಸ್ಸಾದ ಕ್ರಿಸ್ತನು ತನ್ನ ಸಂಪೂರ್ಣ ಅಧಿಕಾರದೊಂದಿಗೆ ಇಂತಹ ಅನ್ಯೋನ್ಯ ಕೂಟದಲ್ಲಿ ಸೇರಿದ್ದಾರೆ, ಮತ್ತು ಈ ಕಾರಣದಿಂದಾಗಿ ಅದನ್ನು ಪಾತಾಳಲೋಕದ ಬಲವು ಎದುರಿಸಿ ನಿಲ್ಲಲು ಸಾಧ್ಯವೇ ಇಲ್ಲ. "ಅಪೊಸ್ತಲರ ಕೃತ್ಯಗಳಲ್ಲಿ" ಕಂಡುಬರುವ ಕ್ರೈಸ್ತಸಭೆಗೆ ಇಂತಹ ಅಧಿಕಾರದ ನಿಜವಾದ ಅನುಭವ ದೊರಕುವುದಕ್ಕೆ ಒಂದು ಕಾರಣ, ಇಂತಹ ಐಕ್ಯತೆಯುಳ್ಳ ಅನ್ಯೋನ್ಯತೆ ಅವರಲ್ಲಿತ್ತು. "ಇವರೆಲ್ಲರು (11 ಮಂದಿ ಅಪೊಸ್ತಲರು) ಸಂಪೂರ್ಣ ಸಹಮತದಿಂದ ದೇವರ ಪ್ರಾರ್ಥನೆಯಲ್ಲಿ ನಿರತರಾದರು ... "ನಂಬಿದವರೆಲ್ಲರು ಒಗ್ಗಟ್ಟಿನಿಂದ ಒಂದಾಗಿ ... ದಿನಾಲು ಏಕಮನಸ್ಸಿನಿಂದ ದೇವಾಲಯದಲ್ಲಿ ಕೂಡುತ್ತಾ ... "ಮತ್ತು ಅವರು (ಅಪೊಸ್ತಲರು ಮತ್ತು ಇತರ ವಿಶ್ವಾಸಿಗಳು) ... ಏಕಮನಸ್ಸಾಗಿ ದೇವರನ್ನು ಗಟ್ಟಿಯಾದ ಧ್ವನಿಯಿಂದ ಪ್ರಾರ್ಥಿಸಿದರು ...."(ಅ.ಕೃ. 1:14;2:44,46;4:24 - 'Amplified' ಭಾಷಾಂತರ). ಅವರು ಕ್ರಿಸ್ತನ ಅಧಿಕಾರದ ಅಡಿಯಲ್ಲಿ ಒಂದೇ ಸಮಗ್ರ ದೇಹವಾಗಿ ಸೇರಿಕೊಂಡು, ಕರ್ತನ ಅಧಿಕಾರವನ್ನು ಪ್ರಾರ್ಥನೆಯ ಮೂಲಕ ಚಲಾಯಿಸಲು ಸಾಧ್ಯವಾಯಿತು. ಅವರು ಹೆಚ್ಚಿನ ಶಿಕ್ಷಣವನ್ನು ಪಡೆದಿರಲಿಲ್ಲ, ಅವರಲ್ಲಿ ಸಾಮಾಜಿಕ ಸ್ಥಾನಮಾನ ಇರಲಿಲ್ಲ ಮತ್ತು ಅವರಿಗೆ ಯಾರ ಹಣಕಾಸಿನ ಬೆಂಬಲವೂ ಇರಲಿಲ್ಲ; ಹಾಗಿದ್ದರೂ ಅವರು ಕ್ರಿಸ್ತನಿಗಾಗಿ ಆಗಿನ ಕಾಲದ ನಾಗರಿಕ ಜಗತ್ತನ್ನು ಬುಡಮೇಲು ಮಾಡಿದರು. ಅಪೊಸ್ತಲ ಪೇತ್ರನು ಸೆರೆಮನೆಗೆ ಹಾಕಲ್ಪಟ್ಟಾಗ, ಅಲ್ಲಿ ದೇವರ ಮುಂದೆ ಮೊಣಕಾಲೂರಿ ಪ್ರಾರ್ಥಿಸುತ್ತಿದ್ದ ಆದಿ ಸಭೆಯ ಬಲವನ್ನು ವಿರೋಧಿಸಿ ನಿಲ್ಲುವ ಸಾಮರ್ಥ್ಯ ಹೆರೋದನ ಇಡೀ ಕಾವಲುಪಡೆಗೆ ಇರಲಿಲ್ಲ (ಅ.ಕೃ. 12:5-11). ಆ ಸಭೆಯು ಒಂದು ದೇಹವಾಗಿ ಮುಂದುವರಿದಾಗ, ಸೈತಾನನ ಸಾಮ್ರಾಜ್ಯವು ಅಸ್ತಿವಾರದ ವರೆಗೂ ಅಲುಗಾಡಿಸಲ್ಪಟ್ಟು, ಇಡೀ ರೋಮ್ ಸಾಮ್ರಾಜ್ಯದ ಉದ್ದಗಲಕ್ಕೆ ಜನರ ಜೀವಿತಗಳಲ್ಲಿ ಕ್ರಿಸ್ತನ ಅಧಿಕಾರ ಮತ್ತು ಜಯವು ಸ್ಥಾಪಿಸಲ್ಪಟ್ಟಿತು (ಅ.ಕೃ. 19:11-20ರಲ್ಲಿ ಇದರ ಒಂದು ಉದಾಹರಣೆ ಕಂಡುಬರುತ್ತದೆ).

ಈ ದಿನ ಐಕ್ಯತೆಯಿಲ್ಲದ ಸಭೆಯು ಕುಶಲ ತಂತ್ರಗಳು, ಯಂತ್ರ ಸಾಧನಗಳು, ಸಮ್ಮೇಳನಗಳು, ಧರ್ಮಶಾಸ್ತ್ರದ ತಿಳುವಳಿಕೆ, ವಾಕ್ಚಾತುರ್ಯ ಮತ್ತು ತರಬೇತಿ ಹೊಂದಿದ ಭಜನಾ ಮಂಡಳಿಗಳನ್ನು ಉಪಯೋಗಿಸಿಕೊಂಡು ಸೈತಾನನನ್ನು ಆತನ ಭದ್ರವಾದ ಕೋಟೆಗಳಿಂದ ಹೊರಹಾಕಲು ಮಾಡುತ್ತಿರುವ ಪ್ರಯತ್ನಗಳನ್ನು ಸೈತಾನನು ನೋಡಿ ಗೇಲಿ ಮಾಡುತ್ತಿದ್ದಾನೆ. ಇವ್ಯಾವವೂ ಸೈತಾನನ ವಿರುದ್ಧ ಉಪಯೋಗಕ್ಕೆ ಬರುವುದಿಲ್ಲ. ಕ್ರೈಸ್ತಸಭೆಯು ಮತ್ತೊಮ್ಮೆ ಕ್ರಿಸ್ತನ ನಾಯಕತ್ವಕ್ಕೆ ಒಳಗಾಗಿರುವ ಐಕ್ಯತೆಯುಳ್ಳ ಒಂದು ದೇಹವಾಗಿ ಇರುವುದನ್ನು ನಿಜವಾಗಿ ಅನುಭವಿಸಿ ತಿಳಕೊಳ್ಳಬೇಕು. ಕ್ರೈಸ್ತರ ಒಂದು ಅನ್ಯೋನ್ಯ ಪಂಗಡವು ಪರಸ್ಪರ ಸರಿಯಾದ ಸಂಬಂಧವನ್ನು ಇರಿಸಿಕೊಂಡು, ಒಬ್ಬರನ್ನೊಬ್ಬರು ಪ್ರೀತಿಸುವುದರಲ್ಲಿ ಬೆಳೆಯುತ್ತಾ, ಕ್ರಿಸ್ತನಿಗೂ ಮತ್ತು ಆತನ ವಾಕ್ಯಕ್ಕೂ ವಿಧೇಯರಾಗಿ ಜೀವಿಸುತ್ತಾ ಇರುವುದು, ಭೂಲೋಕದಲ್ಲಿರುವ ಸೈತಾನನ ಸಾಮ್ತ್ರಾಜ್ಯಕ್ಕೆ ಅತಿ ದೊಡ್ಡ ಅಪಾಯವಾಗಿದೆ. ಸೈತಾನನು ಇದಕ್ಕೆ ಭಯ ಪಡುವಷ್ಟು ಇನ್ಯಾವುದಕ್ಕೂ ಭಯ ಪಡುವುದಿಲ್ಲ. ನಾವು ಪ್ರತಿ ದಿನವೂ ’ಕ್ರಿಸ್ತನಲ್ಲಿ ಒಂದು ದೇಹವಾಗಿ’ ಇರುವಂತ ಅದ್ಭುತ ಸತ್ಯಾಂಶದ ಬೆಳಕಲ್ಲಿ ಜೀವಿಸುವುದಕ್ಕೆ ಬೇಕಾದ ಸಹಾಯವನ್ನು ನಮಗೆ ಕರ್ತನು ಒದಗಿಸುವಂತೆ ಪ್ರಾರ್ಥಿಸೋಣ. ಜಗತ್ತಿನಾದ್ಯಂತ ಕ್ರೈಸ್ತರು ಈ ಸತ್ಯಾಂಶವನ್ನು ಹೆಚ್ಚು ಹೆಚ್ಚಾಗಿ ಅರಿತುಕೊಂಡು ಅದಕ್ಕೆ ಅನುಸಾರವಾಗಿ ಜೀವಿಸಲು ಆರಂಭಿಸುವಾಗ, ಸಭೆಯು ಸಂಖ್ಯೆಯಲ್ಲಿ ಚಿಕ್ಕದಾಗಿದ್ದರೂ, ಆದಿ ಸಭೆಯಲ್ಲಿ ಕಂಡುಬಂದಂತ ಮಹಿಮೆಯನ್ನು ಅದು ಮತ್ತೊಮ್ಮೆ ಪಡೆದುಕೊಂಡು, ಅಂಧಕಾರದ ದುರಾತ್ಮ ಸೇನೆಗಳನ್ನು ಸದೆಬಡಿಯುವಂತ ಮತ್ತು ಕೊರತೆಯಲ್ಲಿರುವ ಲೋಕಕ್ಕೆ ಒಂದು ಆಶೀರ್ವಾದ ನಿಧಿಯಾಗುವಂತ ಒಂದು ಸಾಧನವಾಗಿ ದೇವರ ಕೈಗಳಲ್ಲಿ ಉಪಯೋಗಿಸಲ್ಪಡುವುದನ್ನು ನಾವು ಖಚಿತವಾಗಿ ನೋಡುತ್ತೇವೆ.