WFTW Body: 

ದೇವರು ಒಪ್ಪುವಂತ ಯೋಗ್ಯತೆ ನಿಮ್ಮಲ್ಲಿಲ್ಲ ಎಂಬ ಭಾವನೆಯು ನಿಮ್ಮನ್ನು ಯಾವಾಗಲೂ ಕಾಡಿಸುತ್ತಿದ್ದರೆ, ಆಗ ನೀವು ಬಹಳ ನಿರಾಶೆಯ ಜೀವನವನ್ನು ಜೀವಿಸುತ್ತೀರಿ. ನೀವು ಹೀಗೆ ದುಃಖಿಸುವದು ಸರಿಯಲ್ಲ, ಆದರೆ ಅದಕ್ಕೆ ಬದಲಾಗಿ ದೇವರು - ಕ್ರಿಸ್ತನಲ್ಲಿ - ನಿಮ್ಮನ್ನು ನೀವಿರುವ ಸ್ಥಿತಿಯಲ್ಲೇ ಸ್ವೀಕರಿಸಿರುವದಕ್ಕಾಗಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ.

ದೇವರು ನಿಮ್ಮನ್ನು ಎಂತೆಂಥ ಪರಿಸ್ಥಿತಿಗಳ ಮೂಲಕ ನಡೆಸಿದ್ದಾರೆ ಎಂಬುದನ್ನು ನೆನಪಿಸಿಕೊಂಡಾಗ, ನೀವು ಪ್ರತಿಯೊಂದಕ್ಕಾಗಿ ಕರ್ತನಿಗೆ ಧನ್ಯವಾದವನ್ನು ಅರ್ಪಿಸಿರಿ ಮತ್ತು ಆತನನ್ನು ಕೊಂಡಾಡಿರಿ. ದೂರುವಿಕೆ ಹಾಗೂ ಗೊಣಗುಟ್ಟುವಿಕೆಯ ಆಲೋಚನೆಗಳು, ಅಸಹ್ಯವಾದ ಲೈಂಗಿಕ ಯೋಚನೆಗಳಷ್ಟೇ ನೀಚವಾಗಿವೆ ಎಂದು ತಿಳಿದು - ಅವುಗಳನ್ನು ಮನಸ್ಸಿನಿಂದ ಸಂಪೂರ್ಣವಾಗಿ ಹೊರಕ್ಕೆ ಹಾಕಬೇಕು.

ನಿಮ್ಮಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುವ ’ತಿರಸ್ಕರಿಸುವ ವ್ಯವಸ್ಥೆಯು’ ಇದ್ದರೆ, ಹೊರಗಿನಿಂದ ಬರುವ ಯಾವುದೇ ಸಂಗತಿಯು ನಿಮ್ಮನ್ನು ಕಲ್ಮಷಗೊಳಿಸಲಾರದು (ಮಾರ್ಕ. 7:18-23) . ನೀವು ಹೊರಗಿನ ಅನೇಕ ವಿಷಯಗಳಿಗೆ ಕುರುಡರು ಮತ್ತು ಕಿವುಡರು ಆಗುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು (ಯೆಶಾ. 42:19,20) . ನಿಮಗೆ ಕಾಣಿಸುವ ಮತ್ತು ಕೇಳಿಸುವ ಪ್ರತಿಯೊಂದು ವಿಷಯವನ್ನು ಮೊದಲು ನಿಮ್ಮ ಮನಸ್ಸಿನಲ್ಲಿ ವರ್ಗೀಕರಿಸಬೇಕು. ಅವುಗಳಲ್ಲಿ ಅನೇಕ ವಿಷಯಗಳನ್ನು ಒಡನೆಯೇ ಮನಸ್ಸಿನಿಂದ ತೆಗೆದು ಹಾಕಬೇಕು - ಉದಾಹರಣೆಗೆ, ಇತರರು ನಿಮಗೆ ಮಾಡಿರುವ ಕೇಡು, ಭವಿಷ್ಯದ ಕುರಿತಾದ ಯೋಚನೆಗಳು, ಇತ್ಯಾದಿ. ನೀವು ಹೀಗೆ ಮಾಡಿದಾಗ ಮಾತ್ರ, ಎಲ್ಲಾ ಪರಿಸ್ಥಿತಿಯಲ್ಲಿ ಸಮಾಧಾನವಾಗಿ ಇದ್ದುಕೊಂಡು, ಕರ್ತನನ್ನು ಸ್ತುತಿಸಲು ಸಾಧ್ಯವಾಗುತ್ತದೆ.

ಯೇಸುವು ನಮಗೆ ಉತ್ಸಾಹಸ್ತೋತ್ರದ ಆತ್ಮವನ್ನು ಮತ್ತು ಆನಂದ ತೈಲವನ್ನು ಕೊಡಲು ಬಂದಿದ್ದಾನೆ (ಯೆಶಾ. 61:1-3). ಆತನು ಸ್ವತಃ ಕಲ್ವಾರಿ ಶಿಲುಬೆಗೆ ಹೋಗುವದಕ್ಕೆ ಮೊದಲು ಒಂದು ಕೀರ್ತನೆಯನ್ನು ಹಾಡಿದನು (ಮತ್ತಾ. 26:30) . ಮತ್ತು ಈಗ ಆತನು ಸಭೆಯಲ್ಲಿ ಗಾನವೃಂದದ ಮುಖ್ಯಸ್ಥನು ಆಗಿದ್ದಾನೆ (ಇಬ್ರಿ. 2:12) .

ನಮ್ಮ ದೇವರ ಸ್ತೋತ್ರವು, ಆತನಿಗಾಗಿ ನಮ್ಮ ಹೃದಯಗಳಲ್ಲಿ ಒಂದು ಸಿಂಹಾಸನವನ್ನು ಇರಿಸಿದಂತಿದೆ (ಕೀರ್ತ. 22:3) . ನಾವು ದೇವರನ್ನು ಕೀರ್ತಿಸುವದು ನಮ್ಮ ನಂಬಿಕೆಯ ಪ್ರಮಾಣವಾಗಿದೆ (ಕೀರ್ತ. 106:12) . ಹೀಗೆ ಸಮಸ್ತ ಸೃಷ್ಟಿಯ ದೊರೆತನವು ದೇವರಿಗೆ ಸೇರಿದೆಯೆಂದು ಮತ್ತು ನಿಮ್ಮ ಜೀವನದ ಎಲ್ಲಾ ಸಂಗತಿಗಳು ಆತನ ನಿರ್ದಿಷ್ಟ ಅನುಮತಿಯಿಂದ ನಡೆಯುತ್ತವೆಂದು ನೀವು ನಂಬಿರುವದನ್ನು ನೀವು ರುಜುವಾತು ಮಾಡುತ್ತೀರಿ. ("ಆತನಿಗೆ ನನ್ನ ಜೀವನದ ಪ್ರತಿಯೊಂದು ಸಂಗತಿಯೂ ವಿವರವಾಗಿ ತಿಳಿದಿದೆ" - ಯೋಬ 23:10, Living Bible).

ಸತ್ಯವೇದದಲ್ಲಿ ದೇವರ ಸಾರ್ವಭೌಮತ್ವವನ್ನು ತೋರಿಸುವ ಅತಿ ಸ್ಪಷ್ಟವಾದ ಹೇಳಿಕೆಯನ್ನು, ನೆಬೂಕದ್ನೆಚ್ಚರನು ದೇವರಿಂದ ಶಿಕ್ಷಿಸಲ್ಪಟ್ಟ ನಂತರ ನುಡಿದನು. ಆತನು ಹೀಗೆಂದನು, "ಭೂನಿವಾಸಿಗಳೆಲ್ಲರೂ ಆತನ ದೃಷ್ಟಿಯಲ್ಲಿ ಏನೂ ಅಲ್ಲದಂತಿದ್ದಾರೆ. ಪರಲೋಕದ ದೇವದೂತರೂ, ಭೂಲೋಕದ ಜನರೂ ಆತನ ಅಧೀನರಾಗಿದ್ದಾರೆ. ಯಾರೂ ಆತನ ಚಿತ್ತವನ್ನು ತಳ್ಳಿಹಾಕಲಾರರು, ಅಥವಾ ’ನೀನು ಏನು ಮಾಡುತ್ತೀ’ ಎಂದು ಕೇಳಲಾರರು" - (ದಾನಿ. 4:35, Good News Bible). ಈ ಮಾತನ್ನು ನೆಬೂಕದ್ನೆಚ್ಚರನು ಹೇಳಿದೊಡನೆ ಸ್ವಸ್ಥ ಚಿತ್ತನಾದನು (ದಾನಿ. 4:36) . ಇದೇ ಮಾತನ್ನು ಪ್ರತಿಯೊಬ್ಬ ಸ್ವಸ್ಥ ಚಿತ್ತನಾದ ವಿಶ್ವಾಸಿಯೂ ನಂಬುತ್ತಾನೆ. ನಮ್ಮಲ್ಲಿ ಇಂತಹ ನಂಬಿಕೆಯನ್ನು ದೇವರು ಕಾಣಬಯಸುತ್ತಾರೆ. ಹಾಗಿನ ವಿಶ್ವಾಸಿಗಳು ಎಲ್ಲಾ ವೇಳೆಯಲ್ಲೂ ಮತ್ತು ಪ್ರತಿಯೊಂದು ಪರಿಸ್ಥಿತಿಯಲ್ಲೂ ದೇವರನ್ನು ಸ್ತುತಿಸುತ್ತಾ ಇರುತ್ತಾರೆ.

ದೇವಾಲಯದಲ್ಲಿ ಚಿಕ್ಕ ಮಕ್ಕಳು ಗಟ್ಟಿಯಾದ ಧ್ವನಿಯಿಂದ ಯೇಸುವನ್ನು ಹೊಗಳುತ್ತಿದ್ದುದನ್ನು ಶಾಸ್ತ್ರಿಗಳು ಮತ್ತು ಯೆಹೂದ್ಯರ ಅಧಿಕಾರಿಗಳು ನಿಂದಿಸಿದಾಗ, ಯೇಸುವು ಕೊಟ್ಟ ಉತ್ತರವೇನೆಂದರೆ, ’ಮೊಲೆಕೂಸುಗಳ ಬಾಯಿಯಿಂದ ಬರುವ ಸ್ತೋತ್ರವೇ ಅತಿ ಶ್ರೇಷ್ಠವಾದದ್ದು’, ಎಂಬುದಾಗಿ (ಮತ್ತಾ. 21:16, ಇಲ್ಲಿ ಕೀರ್ತ. 8:2ವನ್ನು ಉಲ್ಲೇಖಿಸಲಾಗಿದೆ - "ನೀನು ಬಾಲಕರಿಗೆ ನಿನ್ನ ಶ್ರೇಷ್ಠವಾದ ಸ್ತೋತ್ರವನ್ನು ಕಲಿಸಿದ್ದೀ" - Living Bible). ಇದು ನಮಗೆ ಕಲಿಸುವದು ಏನೆಂದರೆ, ದೇವರಿಗೆ ನಮ್ಮ ಸ್ತೋತ್ರವು ಹಿತವಾಗುವದು ನಾವು ಉಪಯೋಗಿಸಿದ ಶಬ್ದಗಳಿಂದಾಗಿ ಅಲ್ಲ, ಆದರೆ ಅದರಲ್ಲಿ ದೀನತೆ ಮತ್ತು ಹೃದಯದ ಪರಿಶುದ್ಧತೆ ಇದ್ದಾಗ (ಮೊಲೆಕೂಸುಗಳಲ್ಲಿ ಅದು ಇರುತ್ತದೆ).

ಕೂಸುಗಳಲ್ಲಿರುವ ಇನ್ನೊಂದು ವಿಷಯ, ಅವು ಯಾವತ್ತೂ ಗೊಣಗುಟ್ಟುವುದಿಲ್ಲ ಅಥವಾ ದೂರುವುದಿಲ್ಲ - ನಮ್ಮ ಸ್ತೋತ್ರವು ದೇವರಿಗೆ ಹಿತವಾಗುವಂತೆ ಮಾಡುವ ಇನ್ನೊಂದು ಸಂಗತಿ ಇದಾಗಿದೆ. ನಮ್ಮ ಜೀವಿತದಲ್ಲಿ ಬೆಳಗ್ಗಿನಿಂದ ರಾತ್ರಿಯ ವರೆಗೆ, ವಾರದ ಏಳು ದಿನಗಳು, ವಾರ ವಾರವೂ ವರ್ಷದ ಉದ್ದಕ್ಕೆ, ಗೊಣಗುಟ್ಟುವಿಕೆ ಅಥವಾ ದೂರುವಿಕೆಯ ವಾಸನೆಯೂ ಇಲ್ಲದಿರುವಾಗ, ದೇವರ ಹೊಗಳುವಿಕೆ ನಮಗೆ ಕೇವಲ ಭಾನುವಾರ ಬೆಳಗ್ಗಿನ ಒಂದು ಪರಿಪಾಠವಾಗಿ ಇರುವುದಿಲ್ಲ, ಆದರೆ ಅದು ನಮ್ಮ ದಿನನಿತ್ಯದ ಸ್ವಭಾವವಾಗುತ್ತದೆ. ಮತ್ತು ಇಂತಹ ಸ್ತುತಿಯು ದೇವರನ್ನು ಹರ್ಷಗೊಳಿಸುತ್ತದೆ - ಅದನ್ನು ಹಾಡುವಾಗ ನಮ್ಮ ಧ್ವನಿಯು ರಾಗ ತಪ್ಪಿದರೂ ಪರವಾಗಿಲ್ಲ!!