WFTW Body: 

ನೀವು ನಿಮ್ಮ ಜನಪ್ರಿಯತೆಯ ಆಧಾರದ ಮೇಲೆ ನಿಮ್ಮ ಕಾರ್ಯಗಳ ಯಶಸ್ಸನ್ನು ಎಂದಿಗೂ ನಿರ್ಣಯಿಸಬಾರದು. "ಜನಪ್ರಿಯತೆ" ಗಳಿಸಿರುವ ಪ್ರತಿಯೊಬ್ಬರೂ ಗೋಳಿಟ್ಟು ದುಃಖಿಸುತ್ತಾರೆ. ಏಕೆಂದರೆ ಜನಪ್ರಿಯತೆಯು ಒಬ್ಬ ಸುಳ್ಳುಪ್ರವಾದಿಯ ಗುರುತಾಗಿದೆ, ಎಂದು ಯೇಸುವು ತೋರಿಸಿಕೊಟ್ಟರು (ಲೂಕ. 6:26). ಹಾಗಾಗಿ ನೀವು ಜನಪ್ರಿಯ ಬೋಧಕರಾಗಿದ್ದರೆ, ನೀವೊಬ್ಬ ಸುಳ್ಳುಪ್ರವಾದಿ ಆಗಿರಬಹುದು! ಇದಲ್ಲದೆ, ಎಲ್ಲಾ ಜನರು ಶಿಷ್ಯರ ವಿರುದ್ಧವಾಗಿ ಮಾತನಾಡಿದಾಗ ಅವರು ಸಂತೋಷಿಸಬೇಕೆಂದು ಯೇಸುವು ಹೇಳಿದರು, ಏಕೆಂದರೆ ಅದು ನಿಜವಾದ ಪ್ರವಾದಿಗಳ ಒಂದು ಗುರುತಾಗಿತ್ತು (ಲೂಕ. 6:22,23).

ಇಲ್ಲಿ ಯೇಸುವು ಹೇಳಿದ್ದನ್ನು ನೀವು ನಿಜವಾಗಿ ನಂಬುತ್ತೀರಾ?

ಇಸ್ರಾಯೇಲ್ ದೇಶದ ಇತಿಹಾಸದಲ್ಲಿ ಮತ್ತು ಕ್ರೈಸ್ತಸಭೆಯ ಇತಿಹಾಸದಲ್ಲಿ ಪ್ರತಿಯೊಬ್ಬ ನಿಜವಾದ ಪ್ರವಾದಿಯು ತನ್ನ ಕಾಲದ ಧಾರ್ಮಿಕ ಮುಖಂಡರಿಂದ ಆಪಾದಿಸಲ್ಪಟ್ಟನು, ಮತ್ತು ಜನರಿಂದ ಬಹಿಷ್ಕರಿಸಲ್ಪಟ್ಟನು ಮತ್ತು ದ್ವೇಷಿಸಲ್ಪಟ್ಟನು ಮತ್ತು ಅಟ್ಟಿಸಲ್ಪಟ್ಟನು, ಎಂಬುದನ್ನು ನೆನಪಿರಿಸಿಕೊಳ್ಳಿರಿ.

ಈ ಪರಿಸ್ಥಿತಿಯು ಪ್ರತಿಯೊಬ್ಬ ಪ್ರವಾದಿಯನ್ನೂ ತಪ್ಪದೆ ಎದುರಿಸಿತು. ಅದು ಹಳೆಯ ಒಡಂಬಡಿಕೆಯ ಕಾಲದಲ್ಲಿ ಎಲೀಯ ಅಥವಾ ಯೆರೆಮೀಯನಾಗಲೀ, ಅಥವಾ ಮೊದಲನೆಯ ಶತಮಾನದಲ್ಲಿ ಸ್ನಾನಿಕನಾದ ಯೋಹಾನ ಮತ್ತು ಪೌಲನಾಗಲೀ, ಅಥವಾ ಆಧುನಿಕ ಕಾಲದ ಜಾನ್ ವೆಸ್ಲಿ ಮತ್ತು ವಾಚ್‌ಮನ್ ನೀ‌ ಆಗಿರಬಹುದು. ಯಾರೂ ಇದರಿಂದ ಪಾರಾಗಲಿಲ್ಲ.

ಹಾಗಾಗಿ ನಾವು ದೇವರಿಗಾಗಿ ಮಾಡುವ ಕಾರ್ಯಗಳ ನಿತ್ಯತ್ವದ ಸಫಲತೆಯನ್ನು ನಾವು ನಮ್ಮ ಜನಪ್ರಿಯತೆಯ ಆಧಾರದ ಮೇಲೆ ಎಂದಿಗೂ ಅಳೆಯಬಾರದು!

ನಾವು ದೇವರಿಗಾಗಿ ಮಾಡುವ ಸೇವೆಗಳ ಯಶಸ್ಸನ್ನು ಅಂಕಿ-ಅಂಶಗಳ ಮೂಲಕ ಅಳೆಯುವುದು ಸಹ ಸರಿಯಲ್ಲ. ನಮ್ಮ ಕೂಟಗಳಲ್ಲಿ ಎಷ್ಟು ಮಂದಿ ಕೈಯೆತ್ತಿದರು ಅಥವಾ ಸಭೆಗಳಲ್ಲಿ ಎಷ್ಟು ಜನರು ಹಾಜರಿದ್ದರು, ಮುಂತಾದ ಅಂಶಗಳ ಮೂಲಕ.

ಅಂಕಿ-ಅಂಶಗಳ ಆಧಾರದ ಮೇಲೆ ನೋಡುವುದಾದರೆ, ಯೇಸುವು ಮಾಡಿದ ಸೇವೆಯು ಸಂಪೂರ್ಣವಾಗಿ ನಿಷ್ಫಲವಾಯಿತೆಂದು ನಾವು ಹೇಳಬೇಕಾಗುತ್ತದೆ. ಏಕೆಂದರೆ ಅವರ ಸೇವೆಯ ಅಂತ್ಯದಲ್ಲಿ ತಂದೆಯಾದ ದೇವರ ಮುಂದೆ ಒಪ್ಪಿಸಿಕೊಡುವುದಕ್ಕೆ ಅವರ ಬಳಿ ಕೇವಲ 11 ಮಂದಿ ಶಿಷ್ಯರಿದ್ದರು (ಯೋಹಾ. 17). ಆದರೆ ಅವರ ಸೇವೆಯ ಸಫಲತೆಯು ಆ 11 ಮಂದಿ ಎಂತಹ ವ್ಯಕ್ತಿಗಳಾಗಿದ್ದರು ಎಂಬುದರಲ್ಲಿ ಕಂಡುಬಂದಿತು! ಇಂದಿನ ದಿನದ ಹನ್ನೊಂದು ಲಕ್ಷ ಅರೆಮನಸ್ಸಿನ, ಹಣವನ್ನು ಪ್ರೀತಿಸುವ, ಲೋಕದೊಂದಿಗೆ ಬೆರೆಯುವ, ಲೌಕಿಕ "ವಿಶ್ವಾಸಿ"ಗಳಿಗಿಂತ, ದೇವರ ದೃಷ್ಟಿಯಲ್ಲಿ ಆ 11 ಮಂದಿ ಶಿಷ್ಯರು ಬಹಳ ಹೆಚ್ಚು ಬೆಲೆಬಾಳುವವರಾಗಿದ್ದರು, ಮತ್ತು ದೇವರಿಗಾಗಿ ಹೆಚ್ಚಿನದ್ದನ್ನು ಸಾಧಿಸಿದರು.

"ಹಾಗಾಗಿ ನಾವು ಖಚಿತಪಡಿಸಬೇಕಾದ ಒಂದೇ ಒಂದು ಅಂಶವೆಂದರೆ, ದೇವರು ನಮಗೆ ವಹಿಸಿಕೊಟ್ಟಿರುವ ಕಾರ್ಯವನ್ನು ನಾವು ನಂಬಿಗಸ್ತಿಕೆಯಿಂದ ಪೂರೈಸುವುದು."

ಆ ಮೊದಲ ಅಪೊಸ್ತಲರ ಗುಣಮಟ್ಟವುಳ್ಳ ಹನ್ನೊಂದು ಮಂದಿಯನ್ನು ನಾನು ನನ್ನ ಇಡೀ ಜೀವಿತದಲ್ಲಿ ತಯಾರು ಮಾಡಲು ಸಾಧ್ಯವಾದರೆ, ನನ್ನ ಸೇವೆಯು ಮಹಿಮೆಯುಳ್ಳ ಯಶಸ್ಸನ್ನು ಕಂಡಿದೆಯೆಂದು ನಾನು ಭಾವಿಸುತ್ತೇನೆ. ಆದರೆ ಅಂತಹ ಕೇವಲ ಇಬ್ಬರು ಅಥವಾ ಮೂವರನ್ನು ಸಿದ್ಧಗೊಳಿಸುವುದು ಸಹ ಸುಲಭದ ಕಾರ್ಯವಲ್ಲ. ಲೋಕದೊಂದಿಗೆ ಬೆರೆಯುತ್ತಾ ತಾವು "ಯೇಸುವನ್ನು ನಂಬುತ್ತೇವೆ" ಎಂದು ಹೇಳುವಂತ, ಮತ್ತು ಯೇಸುವನ್ನು ತಮ್ಮ ಸಂಪೂರ್ಣ ಹೃದಯದಿಂದ ಪ್ರೀತಿಸದಿರುವ ಜನರ ಒಂದು ದೊಡ್ಡ ಗುಂಪನ್ನು ಒಂದುಗೂಡಿಸುವ ಕಾರ್ಯವು ಇದಕ್ಕಿಂತ ಬಹಳ ಸುಲಭವಾಗಿದೆ.

ಕ್ರೈಸ್ತಧರ್ಮದ ಇತಿಹಾಸದಲ್ಲಿ, ದೇವರು ಈ ಹಿಂದಿನ 20 ಶತಮಾನಗಳಲ್ಲಿ ಆರಂಭಿಸಿದ ಪ್ರತಿಯೊಂದು ಕ್ರೈಸ್ತ ಆಂದೋಲನವೂ ತನ್ನ ಎರಡನೆಯ ತಲೆಮಾರನ್ನು ತಲುಪುವಷ್ಟರಲ್ಲಿ ಕೆಳಕ್ಕೆ ಹೋಗಲು ಆರಂಭಿಸಿತು ಮತ್ತು ಅದರ ಸ್ಥಾಪಕರ ಕಾಲದ ಹುರುಪು ಮತ್ತು ದೇವರಿಗಾಗಿ ಪ್ರಜ್ವಲ ಉರಿಯುವಿಕೆಯು ಆ ಆಂದೋಲನದಲ್ಲಿ ಉಳಿಯಲಿಲ್ಲ. ಏಕೆ ಹೀಗಾಯಿತು?

ಇದಕ್ಕೆ ಒಂದು ಕಾರಣವೇನೆಂದರೆ ಎರಡನೆಯ ಪೀಳಿಗೆಯು ಅಂಕೆ-ಸಂಖ್ಯೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಆರಂಭಿಸಿತು. ಅವರು ತಮ್ಮ ನಡುವೆ ಹೆಚ್ಚುತ್ತಿದ್ದ ಸಂಖ್ಯೆಯು ದೇವರ ಆಶೀರ್ವಾದದ ರುಜುವಾತು, ಎಂದು ಯೋಚಿಸಿದರು.

ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರಪಂಚದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಪಂಗಡಗಳು ಯಾವುವೆಂದರೆ, ದೇವರ ವಾಕ್ಯಕ್ಕೆ ತದ್ವಿರುದ್ದವಾದ ಮೂಲತತ್ವಗಳನ್ನು ಹೊಂದಿರುವ ಕ್ರೈಸ್ತ ಪಂಗಡಗಳು ಮತ್ತು ಅನ್ಯಧರ್ಮಗಳಿಗೆ ಸೇರಿದ ತೀವ್ರವಾದಿಗಳ ಗುಂಪುಗಳು. ಇದು ಏನನ್ನು ಸಾಬೀತು ಪಡಿಸುತ್ತದೆ? ಇಷ್ಟನ್ನು ಮಾತ್ರ. ಸಂಖ್ಯೆಯ ಹೆಚ್ಚಳವು ದೇವರ ಆಶೀರ್ವಾದದ ಗುರುತಲ್ಲ.

ಈಗ ದೇವರು ನಮಗೆ ನೀಡುತ್ತಿರುವ ಕರೆ ಏನೆಂದರೆ, ಅವರು ಕ್ರಿಸ್ತನ ದೇಹದಲ್ಲಿ ನಮಗೆ ಕೊಟ್ಟಿರುವಂತ ಸೇವೆಯನ್ನು ಸಂಪೂರ್ಣ ಲಕ್ಷ್ಯವಿಟ್ಟು ಮಾಡುವುದು ಮತ್ತು ಅದೇ ವೇಳೆ, ನಮಗಿಂತ ವಿಭಿನ್ನವಾದ ಸೇವೆಗಳಿಗಾಗಿ ಕರೆಯಲ್ಪಟ್ಟಿರುವ ಇತರರೊಂದಿಗೆ ಸಹಕರಿಸುವುದು. ನಮ್ಮ ಸೇವೆಯ ಫಲಿತಾಂಶಗಳನ್ನು ನಿಖರವಾಗಿ ಅಳೆಯಲು ಸಾಧ್ಯವೇ ಇಲ್ಲ. ಏಕೆಂದರೆ ನಾವು ಒಂದು ದೊಡ್ಡ ತಂಡದ ಸದಸ್ಯರಾಗಿದ್ದೇವೆ, ಅಂದರೆ, ಕ್ರಿಸ್ತನ ದೇಹದ ಸದಸ್ಯರು.

ನಾವು ಗಮನ ನೀಡಬೇಕಾದ ಒಂದು ವಿಷಯ ಮಾತ್ರ ಯಾವುದೆಂದರೆ, ದೇವರು ನಮಗೆ ಕೊಟ್ಟಿರುವ ಕಾರ್ಯವನ್ನು ನಂಬಿಗಸ್ತಿಕೆಯಿಂದ ಮಾಡುವುದು.