WFTW Body: 

"ಇಹಲೋಕದ ನಡವಳಿಕೆಯನ್ನು ಅನುಸರಿಸದೆ, ನೂತನ ಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕೆ ಅನುಸಾರವಾದದ್ದು, ಅಂದರೆ ಉತ್ತಮವಾದದ್ದೂ ಅವರಿಗೆ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವುದೆಂದು ವಿವೇಚಿಸಿ ತಿಳಕೊಳ್ಳುವಿರಿ" (ರೋಮಾ. 12:2).

"ನಿಮ್ಮೊಳಗೆ ಯಾವನು ಕರ್ತನಲ್ಲಿ ಭಯಭಕ್ತಿಯಿಟ್ಟು, ಆತನ ಸೇವಕನ (ಅಂದರೆ, ಕರ್ತನಾದ ಯೇಸುವಿನ) ಮಾತನ್ನು ಕೇಳುವನು? ಇಂತಹ ಮನುಷ್ಯರು ಬೆಳಕಿನ ಕಿರಣವಿಲ್ಲದ ಕತ್ತಲಲ್ಲಿ ನಡೆಯುವಾಗಲೂ ಕರ್ತನ ನಾಮದಲ್ಲಿ ಭರವಸವಿಟ್ಟು, ತಮ್ಮ ದೇವರನ್ನು ಆಧಾರ ಮಾಡಿಕೊಳ್ಳಲಿ" (ಯೆಶಾಯನು 50:10 - Living Bible).

ಹಳೆಯ ಒಡಂಬಡಿಕೆಯ ಅಡಿಯಲ್ಲಿ, ದೇವರು ಪರಲೋಕದಿಂದ ಒಂದು ವಾಣಿಯ ಮೂಲಕ ತನ್ನ ಚಿತ್ತವನ್ನು ತನ್ನ ಸೇವಕರಿಗೆ ಆಗಾಗ ತಿಳಿಸುತ್ತಿದ್ದರು. ಆದರೆ ಹೊಸ ಒಡಂಬಡಿಕೆಯಲ್ಲಿ ದೇವರು ನಮಗೆ ಮಾರ್ಗದರ್ಶನ ನೀಡುವ ವಿಧಾನ, ನಮ್ಮ ಹೃದಯಗಳಲ್ಲಿ ಪವಿತ್ರಾತ್ಮನ ಆಂತರಿಕ ಸಾಕ್ಷಿಯ ಮೂಲಕವಾಗಿದೆ. ಇದು ನಂಬಿಕೆಯ ಮಾರ್ಗವಾಗಿದೆ ಮತ್ತು ಇದು ಹಳೆಯ ಒಡಂಬಡಿಕೆಯ "ದೃಷ್ಟಿಯ ಮೂಲಕ ನಡೆಯುವ" ವಿಧಾನಕ್ಕಿಂತ ಶ್ರೇಷ್ಠವಾಗಿದೆ.

ಆದ್ದರಿಂದ ನಾವು ಒಂದು ವಿಷಯದಲ್ಲಿ ದೇವರ ಚಿತ್ತವನ್ನು ತಿಳಿದುಕೊಳ್ಳಲು ಪ್ರಯತ್ನಿಸುವಾಗ ಕೆಲವೊಮ್ಮೆ ಗೊಂದಲಕ್ಕೆ ಒಳಗಾಗಬಹುದು. ನಮ್ಮ ನಂಬಿಕೆಯನ್ನು ಬಲಪಡಿಸುವುದಕ್ಕಾಗಿ ದೇವರು ಇದನ್ನು ಅನುಮತಿಸುತ್ತಾರೆ. ನಾವು ಅವರ ಹತ್ತಿರಕ್ಕೆ ಹೋಗಲು ಇನ್ನೂ ಹೆಚ್ಚಾಗಿ ಪ್ರಯತ್ನಿಸಿ, ಆ ಮೂಲಕ ಅವರನ್ನು ಇನ್ನೂ ಚೆನ್ನಾಗಿ ತಿಳಿದುಕೊಳ್ಳಬೇಕು, ಎಂದು ಅವರು ಬಯಸುತ್ತಾರೆ. ನಮ್ಮ ಹೃದಯದ ಉದ್ದೇಶಗಳನ್ನು ಶೋಧಿಸಿ ಶುದ್ಧಗೊಳಿಸಲೂ ಸಹ ದೇವರು ಇಂತಹ ಅನಿಶ್ಚಿತತೆಯ ಪರಿಸ್ಥಿತಿಗಳನ್ನು ಬಳಸಿಕೊಳ್ಳುತ್ತಾರೆ.

ಹಾಗಾಗಿ ನಮ್ಮ ಮುಂದೆ ಕಳವಳದ ಪರಿಸ್ಥಿತಿಯು ಉಂಟಾದಾಗ ನಾವು ಆಶ್ಚರ್ಯಪಡಬಾರದು ಅಥವಾ ನಿರುತ್ಸಾಹಗೊಳ್ಳಬಾರದು. ಅಪೊಸ್ತಲನಾದ ಪೌಲನು ಕೂಡ ಆಗಾಗ್ಗೆ ಕಳವಳಕ್ಕೆ ಒಳಗಾಗಿದ್ದನು, ಆದರೆ ಅವನು ಎಂದಿಗೂ ಹತಾಶನಾಗಿ ಬಿಟ್ಟುಕೊಡಲಿಲ್ಲ (2 ಕೊರಿ. 4:8 ನೋಡಿರಿ). ದೇವರು ಕೆಲವೊಮ್ಮೆ ನಾವು ನಿರ್ಧಾರ ಕೈಗೊಳ್ಳಬೇಕಾದ ಸಮಯಕ್ಕೆ ಬಹಳ ಹತ್ತಿರ ಬಂದಾಗ ಮಾತ್ರ ನಮಗೆ ಅವರ ಚಿತ್ತವನ್ನು ತೋರಿಸಬಹುದು ಮತ್ತು ಅದಕ್ಕೆ ಮುಂಚೆ ನಮ್ಮನ್ನು ಬಹಳ ಸಮಯ ಕಾಯಿಸಬಹುದು.

ಅದಲ್ಲದೆ, ಪ್ರತಿಯೊಂದು ಹಂತದಲ್ಲೂ ಅವರು ನಮಗೆ ನಮ್ಮ ಮುಂದಿನ ಹೆಜ್ಜೆಯನ್ನು ಮಾತ್ರ ತೋರಿಸುತ್ತಾರೆ. ಅವರು ನಮ್ಮನ್ನು ಹೆಜ್ಜೆ ಹೆಜ್ಜೆಯಾಗಿ ನಡೆಸುತ್ತಾರೆ, ಏಕೆಂದರೆ ನಾವು ದಿನದಿಂದ ದಿನಕ್ಕೆ ಅವರನ್ನು ಅವಲಂಬಿಸಬೇಕೆಂದು ಅವರು ಇಚ್ಛಿಸುತ್ತಾರೆ, ಮತ್ತು ನಾವು ಕಣ್ಣಿಗೆ ಗೋಚರಿಸುವ ಸಂಗತಿಗಳ ಪ್ರಕಾರ ನಡೆಯದೆ, ನಂಬಿಕೆಯಿಂದ ನಡೆಯಬೇಕೆಂದು ಅವರು ಬಯಸುತ್ತಾರೆ. ಅವರು ನಮಗೆ ಪ್ರತಿ ಸಲ ಒಂದು ಹೆಜ್ಜೆಯನ್ನು ಮಾತ್ರ ತೋರಿಸುವಾಗ, ನಾವು ಅವರನ್ನು ಆತುಕೊಳ್ಳಲೇಬೇಕಾಗುತ್ತದೆ. ಹಾಗಾಗಿ ನಮ್ಮ ಜೀವಿತದಲ್ಲಿ ದೇವರ ಚಿತ್ತವೇನೆಂದು ಕಂಡುಕೊಳ್ಳಲು ನಾವು ಮಾಡಬೇಕಾದದ್ದು ಇಷ್ಟು ಮಾತ್ರ, ಎಲ್ಲಾ ವೇಳೆಯಲ್ಲಿ ದೇವರು ನಮಗೆ ತೋರಿಸುವ ಮುಂದಿನ ಹೆಜ್ಜೆ ಇಡುವುದು. ನಾವು ಹಾಗೆ ಮಾಡಿದರೆ, ಕ್ರಮೇಣವಾಗಿ ದೇವರ ಯೋಜನೆಯು ಹೊರಹೊಮ್ಮುವುದನ್ನು ನಾವು ನೋಡುತ್ತೇವೆ.

ಕರ್ತನು ಕೊಟ್ಟಿರುವ ವಾಗ್ದಾನವೇನೆಂದರೆ, "ನೀನು ಮುಂದಕ್ಕೆ ಹೆಜ್ಜೆ ಇರಿಸುವಾಗ, ನಾನು ಹಂತ ಹಂತವಾಗಿ ನೀನು ಹೋಗಬೇಕಾದ ದಾರಿಯನ್ನು ತೆರೆದು ತೋರಿಸುತ್ತೇನೆ" (ಜ್ಞಾನೋಕ್ತಿಗಳು 4:12 - ಭಾವಾನುವಾದ)

ನಮಗೆ ಯಾವುದೋ ಒಂದು ವಿಷಯದಲ್ಲಿ ದೇವರ ಚಿತ್ತವು ಖಚಿತವಾಗಿ ತಿಳಿದಿರದಿದ್ದರೆ, ನಾವು ನಮಗೇ ಹನ್ನೆರಡು ಪ್ರಶ್ನೆಗಳನ್ನು ಕೇಳುವುದು ಒಳ್ಳೆಯದು. ಈ ಪ್ರಶ್ನೆಗಳಿಗೆ ನಾವು ಪ್ರಾಮಾಣಿಕವಾಗಿ ಉತ್ತರಿಸುತ್ತಾ ಹೋಗುವಾಗ, ದೇವರ ಚಿತ್ತವೇನೆಂದು ನಮಗೆ ಹೆಚ್ಚು ಹೆಚ್ಚಾಗಿ ಸ್ಪಷ್ಟವಾಗುತ್ತದೆ.

  • ನನಗೆ ತಿಳಿದಿರುವಂತೆ, ಈ ವಿಷಯವು ಯೇಸುವು ಮತ್ತು ಅಪೊಸ್ತಲರ ಯಾವುದೇ ಬೋಧನೆಗಳಿಗೆ ವಿರುದ್ಧವಾಗಿದೆಯೇ, ಅಥವಾ ಹೊಸ ಒಡಂಬಡಿಕೆಯ ಆತ್ಮಕ್ಕೆ ವಿರುದ್ಧವಾಗಿದೆಯೇ?
  • ಇದನ್ನು ನಾನು ಸ್ಪಷ್ಟವಾದ ಮನಸ್ಸಾಕ್ಷಿಯಿಂದ ಮಾಡಬಹುದೇ?
  • ನಾನು ಈ ವಿಷಯವನ್ನು ದೇವರ ಮಹಿಮೆಗಾಗಿ ಮಾಡಬಹುದೇ?
  • ಇದು ಯೇಸುವಿನೊಂದಿಗೆ ಸೇರಿಕೊಂಡು ನಾನು ಮಾಡಬಹುದಾದ ವಿಷಯವೇ?
  • ಇದನ್ನು ಮಾಡುವುದಕ್ಕಾಗಿ ನನ್ನನ್ನು ಆಶೀರ್ವದಿಸುವಂತೆ ನಾನು ದೇವರನ್ನು ಕೇಳಬಹುದೇ?
  • ನಾನು ಇದನ್ನು ಮಾಡಿದರೆ ನನ್ನ ಆತ್ಮಿಕ ಸಾಮರ್ಥ್ಯವು ಮೊಂಡಾಗಿ, ಅದು ಕ್ಷೀಣಿಸಬಹುದೇ?
  • ನನಗೆ ತಿಳಿದ ಮಟ್ಟಿಗೆ, ಇದು ಆತ್ಮಿಕವಾಗಿ ಲಾಭದಾಯಕ ಮತ್ತು ಪ್ರೋತ್ಸಾಹಕರವಾದ ಕಾರ್ಯವೇ?
  • ನಾನು ಇದನ್ನು ಮಾಡುತ್ತಿರುವ ಕ್ಷಣದಲ್ಲಿ ಯೇಸುವು ಭೂಲೋಕಕ್ಕೆ ಹಿಂದಿರುಗಿದರೆ, ಆಗ ನಾನು ಸಂತೋಷಿಸಬಹುದೇ?
  • ನನಗಿಂತ ಹೆಚ್ಚು ಜ್ಞಾನಿಗಳು ಮತ್ತು ಪ್ರೌಢರಾದ ಸಹೋದರರು ಇದರ ಬಗ್ಗೆ ಏನು ಯೋಚಿಸುತ್ತಾರೆ?
  • ನಾನು ಈ ಕೆಲಸ ಮಾಡಿದ್ದು ಇತರರಿಗೆ ತಿಳಿದುಬಂದರೆ, ಅದು ದೇವರ ಹೆಸರಿಗೆ ಅವಮಾನ ಉಂಟುಮಾಡುವುದೇ ಅಥವಾ ನನ್ನ ಸಾಕ್ಷಿಯನ್ನು ಕೆಡಿಸುವುದೇ?
  • ನಾನು ಇದನ್ನು ಮಾಡಿದ್ದನ್ನು ಇತರರು ತಿಳಿದುಕೊಂಡರೆ, ಅದರಿಂದ ಅವರು ಎಡವಿ ಬೀಳುವರೇ?
  • ನಾನು ನನ್ನ ಆತ್ಮದಲ್ಲಿ ಮುಕ್ತವಾದ ಭಾವನೆಯೊಂದಿಗೆ ಇದನ್ನು ಮಾಡಬಹುದೇ?
  • ಅನೇಕ ಸಂದರ್ಭಗಳಲ್ಲಿ, ನಮಗೆ ದೇವರ ಚಿತ್ತದ ಬಗ್ಗೆ ಸಂಪೂರ್ಣ ಖಚಿತವಾದ ತಿಳುವಳಿಕೆ ಇಲ್ಲದಿದ್ದರೂ ಸಹ, ನಾವು ಒಂದು ಹೆಜ್ಜೆ ಮುಂದಿಡಬೇಕಾಗುತ್ತದೆ. ಇದು ಕೂಡ ನಂಬಿಕೆಯಿಂದ ನಡೆಯುವ ಶಿಸ್ತಿನ ಒಂದು ಭಾಗವಾಗಿದೆ - ಏಕೆಂದರೆ ಕೆಲವೊಮ್ಮೆ ’ನಿಶ್ಚಿತತೆಯು’ "ನೋಡಿದ್ದರಿಂದ ನಡೆ" ಎಂಬುದಕ್ಕೆ ಸಮನಾಗಿರುತ್ತದೆ. ಕೆಲವೊಮ್ಮೆ ದೇವರು ನಮಗೆ ತನ್ನ ಚಿತ್ತದ ಸ್ಪಷ್ಟ ಭರವಸೆಯನ್ನು ನೀಡುತ್ತಾರೆ. ಆದರೆ ಇತರ ಸಂದರ್ಭಗಳಲ್ಲಿ, ಅವರ ಚಿತ್ತದ ಸ್ಪಷ್ಟ ಜ್ಞಾನವಿಲ್ಲದೆ ನಾವು ಮುಂದುವರಿಯಬೇಕೆಂದು ಅವರು ನಿರೀಕ್ಷಿಸುತ್ತಾರೆ. ನಾವು ಪ್ರಾರ್ಥನೆಯೊಂದಿಗೆ ಕರ್ತನ ಮಾರ್ಗದರ್ಶನಕ್ಕಾಗಿ ಕಾದು ನಿಂತಿದ್ದರೆ ಮತ್ತು ಪವಿತ್ರಾತ್ಮನ ಮನಸ್ಸನ್ನು ಖಚಿತಪಡಿಸಿಕೊಂಡ ನಂತರ, ನಮಗೆ ತೋಚಿದ ಅತ್ಯುತ್ತಮವಾದುದನ್ನು ಆರಿಸಿಕೊಂಡು, ’ನಾವು ಅನಿರ್ದಿಷ್ಟವಾಗಿ ಕಾಯದೆ ಮುಂದುವರಿಯಬೇಕು’.

    ಸತ್ಯವೇದವು ಹೇಳುವ ಪ್ರಕಾರ, "ನಾವು ಯೋಜನೆ ಮಾಡುವಾಗ, ದೇವರೇ ಮಾರ್ಗದರ್ಶನ ಮಾಡುತ್ತಾರೆಂದು ನಂಬಬೇಕು" (ಜ್ಞಾನೋಕ್ತಿಗಳು 16:9 - TLB). ನಮ್ಮ ಹಿಂದಿನ ನಿರ್ಣಯಗಳನ್ನು ನಾವು ತಿರುಗಿ ನೋಡುವಾಗ, ನಾವು ಮಂದ ದೃಷ್ಟಿಯ ನಿರ್ಧಾರಗಳನ್ನು ಕೈಗೊಂಡಿದ್ದರೂ ಸಹ, ದೇವರು ನಮ್ಮನ್ನು ದಾರಿ ತಪ್ಪಲು ಬಿಡಲಿಲ್ಲ, ಎಂದು ನಮಗೆ ಮನವರಿಕೆಯಾಗುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಪ್ರಾರಂಭದಲ್ಲಿ ಬಹಳ ಅನಿಶ್ಚಿತತೆ ಇದ್ದರೂ, ಕೊನೆಯಲ್ಲಿ ಸಂಪೂರ್ಣ ನಿಶ್ಚಿತತೆ ಮತ್ತು ಸಂತೋಷ ಇರುತ್ತವೆ.

    ಹಾಗಾಗಿ, ನಾವು ಅನಿಶ್ಚಿತತೆಯಲ್ಲೂ ಪ್ರಾಮಾಣಿಕತೆಯಿಂದ ತೆಗೆದುಕೊಳ್ಳುವ ನಿರ್ಧಾರಗಳು ಒಂದು ವೇಳೆ ದೇವರ ಪರಿಪೂರ್ಣ ಚಿತ್ತಕ್ಕೆ ವಿಭಿನ್ನವಾಗಿದ್ದಾಗ, ದೇವರು ನಮ್ಮನ್ನು ಮತ್ತೆ ಸರಿಯಾದ ಮಾರ್ಗಕ್ಕೆ ನಡೆಸುತ್ತಾರೆಂದು ನಾವು ದೇವರನ್ನು ನಂಬಬಹುದು. ’ಯೆಶಾಯನು 30:21' - (Living Bible)ರಲ್ಲಿರುವ ವಾಗ್ದಾನ ಹೀಗಿದೆ: "ನೀವು ಬಲಕ್ಕಾಗಲೀ ಎಡಕ್ಕಾಗಲೀ ತಿರುಗಿಕೊಂಡರೆ, ’ಇದೇ ಮಾರ್ಗ, ಇದರಲ್ಲೇ ನಡೆಯಿರಿ,’ ಎಂದು ನಿಮ್ಮ ಕಿವಿಯ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವುದು".

    ನಾವು ದೇವರ ಚಿತ್ತವನ್ನು ತಪ್ಪಿಸಿಕೊಳ್ಳುವಾಗ, ನಮ್ಮ ದಾರಿಯನ್ನು ಮಾರ್ಪಡಿಸುವಂತ ಸಂದರ್ಭಗಳನ್ನು ದೇವರು ತಯಾರು ಮಾಡುತ್ತಾರೆ. ಆದರೆ ನಾವು ಪ್ರತಿಯೊಂದು ಚಲನೆಗೂ ದೇವರ ಅದ್ಭುತ ಮಾರ್ಗದರ್ಶನಕ್ಕಾಗಿ ನಿರಂತರವಾಗಿ ಕಾಯುತ್ತಾ, ಏನನ್ನೂ ಮಾಡದೆ ಸುಮ್ಮನಿರಬಾರದು. ಒಂದು ದೊಡ್ಡ ಹಡಗು ಚಲಿಸುತ್ತಿದ್ದರೆ ಅದನ್ನು ಹೆಚ್ಚು ಶೀಘ್ರವಾಗಿ ತಿರುಗಿಸಲು ಸಾಧ್ಯವಾಗುತ್ತದೆ, ಆದರೆ ಅದು ನಿಂತಲ್ಲೇ ಇದ್ದರೆ, ಆಗ ಅದನ್ನು ತಿರುಗಿಸುವುದು ಅಷ್ಟು ಸುಲಭವಲ್ಲ. ನಾವೂ ಸಹ ಹಾಗೆಯೇ.

    ಅಪೋಸ್ತಲರ ಕೃತ್ಯಗಳು 16:6-10' ರಲ್ಲಿ ನಾವು ಓದುವ ಪ್ರಕಾರ, ಪೌಲ ಮತ್ತು ಸೀಲರು ಆಸ್ಯ ಸೀಮೆಗೆ ಹೋಗಲು ಪ್ರಯತ್ನಿಸಿದರು - ಇದು ಕರ್ತನ ಸ್ಪಷ್ಟವಾದ ನಡೆಸುವಿಕೆಯ ಮೂಲಕವಾಗಿ ಆಗಿರದಿದ್ದರೂ, ಕರ್ತನ ಚಿತ್ತವನ್ನು ಅನುಸರಿಸುವುದೇ ಅವರ ಉದ್ದೇಶವಾಗಿತ್ತು. ಅವರು ಇದನ್ನು ಮಾಡದಂತೆ ತಡೆಯಲ್ಪಟ್ಟರು - ಬಹುಶಃ ದೇವರು ಆಜ್ಞಾಪಿಸಿದ ಸಂದರ್ಭಗಳ ಮೂಲಕ ಇರಬಹುದು. ಇದರ ನಂತರ, ಅವರು ಬಿಥೂನ್ಯಕ್ಕೆ ಹೋಗಲು ಪ್ರಯತ್ನಿಸಿದಾಗಲೂ ಸಹ ಅವರ ಮಾರ್ಗವು ಮುಚ್ಚಲ್ಪಟ್ಟಿತ್ತು. ಆದರೆ ಅವರು ದೇವರ ಚಿತ್ತವನ್ನು ಹುಡುಕುತ್ತಲೇ ಇದ್ದರು ಮತ್ತು ಮಾರ್ಗದರ್ಶನಕ್ಕಾಗಿ ಸುಮ್ಮನೆ ಕಾಯಲಿಲ್ಲ, ಹಾಗಾಗಿ ಅಂತ್ಯದಲ್ಲಿ ದೇವರು ತಾನು ಆರಿಸಿದ ಸ್ಥಳಕ್ಕೆ - ಮಕೆದೋನ್ಯ ಪ್ರಾಂತ್ಯಕ್ಕೆ - ಅವರನ್ನು ಕರೆತಂದರು.

    ನಮ್ಮ ದೈನಂದಿನ ಜೀವನದ ಸಣ್ಣಪುಟ್ಟ ವಿವರಗಳಲ್ಲಿ ದೇವರ ಮಾರ್ಗದರ್ಶನ ಪಡೆಯುವುದು ಎಂದರೆ, ದೇವರಿಂದ ನಿರಂತರ ಮತ್ತು ಪ್ರಜ್ಞಾಪೂರ್ವಕ ವಿಚಾರಣೆ ಮಾಡುವ ಪ್ರಶ್ನೆಯಲ್ಲ. ಇದರಲ್ಲಿ ಆತ್ಮನಲ್ಲಿ ನಡೆಯುವುದು ಪ್ರಮುಖ ವಿಷಯವಾಗಿದೆ. "ಕರ್ತನೊಂದಿಗಿನ ಸಂಬಂಧ ಸರಿಯಾಗಿದ್ದರೆ ಅದು ಸರಿಯಾದ ನಡತೆಯನ್ನು ತೋರಿಸಿಕೊಡುತ್ತದೆ". ಇಂತಹ ಸೂಕ್ಷ್ಮ ವಿಚಾರಗಳಲ್ಲಿ, ನಮಗೆ ಎಲ್ಲಾ ವೇಳೆ ದೇವರ ಮಾರ್ಗದರ್ಶನದ ಸ್ಪಷ್ಟವಾದ ಅರಿವು ಇರಬೇಕಾಗಿಲ್ಲ. ನಮಗೆ ಅದರ ಅರಿವಿಲ್ಲದೆಯೂ ಇರಬಹುದು. ಕರ್ತನೊಂದಿಗಿನ ನಮ್ಮ ಮೂಲಭೂತ ಸಂಬಂಧವೇ ಮುಖ್ಯ ವಿಷಯವಾಗಿದೆ, ಏಕೆಂದರೆ "ಮಾರ್ಗದರ್ಶನವು ಆತ್ಮಿಕ ವಿಷಯವಾಗಿದೆ ಮತ್ತು ಒಂದು ಯಾಂತ್ರಿಕ ಕಾರ್ಯಯೋಜನೆಯಲ್ಲ".