WFTW Body: 

ಕೀರ್ತನೆ 50 - ಕೀರ್ತನೆ 50:23ರಲ್ಲಿ ಒಂದು ಅದ್ಭುತ ವಾಗ್ದಾನವು ಯಾರು ತಮ್ಮ ನಾಲಿಗೆಗಳನ್ನು ಹರಟೆಮಾತಿಗೆ ಉಪಯೋಗಿಸದೆ ಕರ್ತನನ್ನು ಸ್ತುತಿಸಲು ಉಪಯೋಗಿಸುತ್ತಾರೋ, ಅಂಥವರಿಗಾಗಿ ಕೊಡಲ್ಪಟ್ಟಿದೆ: "ಯಾರು ಸ್ತುತಿಯಜ್ಞವನ್ನು ಸಮರ್ಪಿಸುತ್ತಾರೋ, ಅವರೇ ನನ್ನನ್ನು ಗೌರವಿಸುವರು; ಅವರು ಹೀಗೆ ಮಾಡಿದಾಗ ಅವರಿಗೆ ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸುವೆನು" (ಅಕ್ಷರಶ: ಅನುವಾದ). ನಾವು ದೇವರನ್ನು ಸ್ತುತಿಸುವಾಗ, ಅವರು ಸರ್ವಶ್ರೇಷ್ಠ ದೇವರು ಎಂಬ ನಮ್ಮ ನಂಬಿಕೆಯನ್ನು ನಾವು ವ್ಯಕ್ತಪಡಿಸುತ್ತೇವೆ ಮತ್ತು ನಮ್ಮ ನಂಬಿಕೆಗೆ ಪ್ರತಿಯಾಗಿ ದೇವರು ನಮಗೆ ತನ್ನ ರಕ್ಷಣೆಯನ್ನು ಒದಗಿಸಲು ಸಾಧ್ಯವಾಗುತ್ತದೆ.

ಕೀರ್ತನೆ 65:1 'KJV ಅನುವಾದ’ ಹೀಗಿದೆ, "ಕರ್ತನೇ, ಚೀಯೋನಿನಲ್ಲಿ (ಸಭೆಯಲ್ಲಿ) ನಿನಗೋಸ್ಕರ ಸ್ತೋತ್ರವು ಸಿದ್ಧವಾಗಿದೆ." ನಮ್ಮ ಕ್ರೈಸ್ತಸಭೆಗಳು ಸದಾಕಾಲ ದೇವರ ಸ್ತೋತ್ರವು ಸಿದ್ಧವಾಗಿ ಕಾದಿರುವ ಸ್ಥಳಗಳಾಗಿರಬೇಕು. ದೇವರು ನಮ್ಮ ನಡುವೆ ಬಂದಾಗ, ನಾವು ಅವರನ್ನು ಕೊಂಡಾಡಲು ಕಾದಿದ್ದೇವೆಂದು ಅವರಿಗೆ ಕಂಡುಬರಬೇಕು. ದೇವರು ಇಂತಹ ಜನರನ್ನು ತನ್ನ ಸಮೀಪಕ್ಕೆ ಬರಮಾಡುತ್ತಾರೆ. ಕೀರ್ತನೆ 65:4 ಹೀಗೆ ಹೇಳುತ್ತದೆ, "ಯಾರನ್ನು ನಿನ್ನ ಸನ್ನಿಧಿಯ ಸೇವೆಗಾಗಿ ನಿನ್ನ ಅಂಗಳದಲ್ಲಿ ವಾಸಿಸಲಿಕ್ಕೆ ಆರಿಸಿಕೊಳ್ಳುತ್ತೀಯೋ, ಅವರೇ ಧನ್ಯರು." ಈ ಕೀರ್ತನೆಯು ಮುಂದುವರಿದು, ಎಲ್ಲಾ ಭೂನಿವಾಸಿಗಳಿಗೆ ದೇವರಿಂದ ಉಂಟಾಗುವ ಸಮೃದ್ಧಿಯ ಕುರಿತಾಗಿ ಹೇಳುತ್ತದೆ.

ಕೀರ್ತನೆ 100 ಇದು ಕರ್ತನನ್ನು ಸ್ತುತಿಸಿ ಆತನ ಸೇವೆ ಮಾಡುವುದಕ್ಕೆ ಒಂದು ಆಹ್ವಾನವಾಗಿದೆ. ನಾವು "ಕರ್ತನ ಸೇವೆಯನ್ನು ಸಂತೋಷದಿಂದ ಮಾಡಬೇಕು" (ಕೀರ್ತನೆ 100:2). ಕರ್ತನ ಸೇವೆ ಮಾಡುತ್ತಿರುವುದಾಗಿ ಹೇಳುತ್ತಾ, ಹೆಚ್ಚಿನ ವೇಳೆ ಒಂದಲ್ಲ ಒಂದು ವಿಷಯದ ಕುರಿತು ಗೊಣಗುವ ಜನರನ್ನು ನಾನು ಕಂಡಿದ್ದೇನೆ. ಯಾರೂ ಹರ್ಷಚಿತ್ತರಾಗದೆ ತನ್ನ ಸೇವೆಗೆ ಕೈಹಾಕುವುದನ್ನು ದೇವರು ಬಯಸುವುದಿಲ್ಲ.

ಕೀರ್ತನೆ 106 ದೇವರು ಇಸ್ರಾಯೇಲಿಗೆ ಮಾಡಿದ ಉಪಕಾರವನ್ನು ವರ್ಣಿಸುತ್ತಾ ಸಾಗುತ್ತದೆ. ನಾವು ಕೀರ್ತನೆ 106:11,12ರಲ್ಲಿ ಓದುವಂತೆ, "ಜಲರಾಶಿಯು ಅವರ ವಿರೋಧಿಗಳನ್ನು ಮುಚ್ಚಿಬಿಟ್ಟಿತು; ಒಬ್ಬನೂ ಉಳಿಯಲಿಲ್ಲ. ಆಗ ಅವರು ಆತನ ಮಾತನ್ನು ನಂಬಿ ಆತನನ್ನು ಕೀರ್ತಿಸಿದರು." ಈ ವಚನಗಳಲ್ಲಿ ನಾವು ಗಮನಿಸಬಹುದಾದ ಎರಡು ವಿಷಯಗಳಿವೆ.

ಮೊದಲನೆಯದು, ಸ್ತೋತ್ರವು ನಂಬಿಕೆಯ ಋಜುವಾತು ಆಗಿದೆ. ಏಕೆಂದರೆ, ಹೃದಯದಲ್ಲಿ ತುಂಬಿರುವುದೇ ಬಾಯಲ್ಲಿ ಹೊರಡುವುದು. ಬಾಯಿಯು ಹೃದಯ ತುಂಬಿ ಹರಿಯುವ ತೂತಾಗಿದೆ. ನಮ್ಮ ಹೃದಯದಲ್ಲಿ ನಂಬಿಕೆಯು ಇದ್ದರೆ, ಅದು ದೇವರ ಸ್ತುತಿಯಾಗಿ ಬಾಯಿಂದ ಬರುತ್ತದೆ. ಅಪೊಸ್ತಲರು ಪವಿತ್ರಾತ್ಮಭರಿತರಾಗಿ, ದೇವರನ್ನು ಕೊಂಡಾಡಲು ಆರಂಭಿಸಿದರು (ಅ.ಕೃ. 2). ನಾವು ದೇವರನ್ನು ಕೊಂಡಾಡದಿದ್ದರೆ, ಅದು ನಮ್ಮಲ್ಲಿ ನಂಬಿಕೆ ಇಲ್ಲದಿರುವುದನ್ನು ತೋರಿಸುತ್ತದೆ.

ಎರಡನೆಯದು, ಹಳೆಯ ಒಡಂಬಡಿಕೆಯ ಅಡಿಯಲ್ಲಿ, ಅವರು ಜೀವಿಸಿದ್ದು ನಂಬಿಕೆಯಿಂದಲ್ಲ, ಆದರೆ ದೃಷ್ಟಿಸುವ ಮೂಲಕ. ಅವರು ಕೀರ್ತನೆಯ ಮೂಲಕ ದೇವರ ಸ್ತೋತ್ರ ಮಾಡಲು ಸಾಧ್ಯವಾದದ್ದು, ಅವರ ಶತ್ರುಗಳು ಸಮುದ್ರದಲ್ಲಿ ಮುಳುಗಿದ ನಂತರವೇ. ಇಂದು, ನಾವು ನಮ್ಮ ಶತ್ರುಗಳು ಸೋಲಿಸಲ್ಪಡುವ ಮೊದಲೂ ಸಹ, ನಾವು ದೇವರನ್ನು ಸ್ತುತಿಸಲು ಸಾಧ್ಯವಿದೆ. ಇದನ್ನೇ ನೋಡುವವರಾಗಿ ನಡೆಯದೆ ನಂಬುವವರಾಗಿ ನಡೆಯುವುದು ಎಂದು ಹೇಳುವುದು.

ಕೀರ್ತನೆ 149 ಈ ಕೀರ್ತನೆಯು ಎಲ್ಲಾ ವೇಳೆಯಲ್ಲಿ ಕರ್ತನ ಸ್ತುತಿಯನ್ನು ಹಾಡಲು ನಮ್ಮನ್ನು ಆಹ್ವಾನಿಸುತ್ತದೆ. "ಆತನು ದೀನರನ್ನು ರಕ್ಷಣೆಯಿಂದ ಭೂಷಿಸುತ್ತಾನೆ" (ಕೀರ್ತನೆ 149:4). ಕರ್ತನು ನಿಮ್ಮನ್ನು ಸಿಂಗರಿಸಬೇಕಾದರೆ, ನೀವು ದೀನರಾಗಿರಬೇಕು. ನಮ್ಮ ಮಂಚದಲ್ಲಿಯೂ ನಾವು ಹರ್ಷದಿಂದ ಹಾಡಲು, ಕರ್ತನಿಗಾಗಿ ನಾವು ನಮ್ಮ ಬಾಯಲ್ಲಿ ಉನ್ನತವಾದ ಸ್ತುತಿಯನ್ನು ಇರಿಸಲು ಸೈತಾನನ ಮತ್ತು ದೆವ್ವಗಳ ಬಲ ಮತ್ತು ಚಟುವಟಿಕೆಗಳನ್ನು ಬಂಧಿಸಲು ನಮ್ಮ ಕೈಗಳಲ್ಲಿ ದೇವರ ವಾಕ್ಯವನ್ನು ಇರಿಸಿಕೊಳ್ಳಲು ನಾವು ಕರೆಯಲ್ಪಟ್ಟಿದ್ದೇವೆ (ಕೀರ್ತನೆ 149:5-8). ದೇವರನ್ನು ಸ್ತುತಿಸುವುದು ಮತ್ತು ಸೈತನಾನ ಬಲವನ್ನು ಕಟ್ಟಿಹಾಕುವುದು ಯಾವಾಗಲೂ ಜೊತೆಯಾಗಿಯೇ ಹೋಗುತ್ತವೆ.

ಕೀರ್ತನೆ 150: ಶ್ವಾಸವಿರುವುದೆಲ್ಲವೂ ಕರ್ತನನ್ನು ಸ್ತುತಿಸಲಿ ಎಂದು ಅಂತ್ಯವಾಗುವ ಈ ಕೀರ್ತನೆಯಲ್ಲಿ ಹದಿಮೂರು ಸಲ "ಸ್ತುತಿ" ಎಂಬ ಪದವನ್ನು ನಾವು ಓದುತ್ತೇವೆ (150:6). ಒಂದು ವಿಧದ ವ್ಯಕ್ತಿಯಲ್ಲಿ ಮಾತ್ರ ದೇವರಿಗಾಗಿ ಸ್ತುತಿಯಿರುವುದಿಲ್ಲ - ಉಸಿರಾಡದವನಲ್ಲಿ - ಸತ್ತವನಲ್ಲಿ. ಉಳಿದವರೆಲ್ಲರು ಎಲ್ಲಾ ಸಮಯದಲ್ಲಿ ಕರ್ತನನ್ನು ಸ್ತುತಿಸಲೇಬೇಕು. ನಮ್ಮ ಜೀವನದಲ್ಲಿ ಇದು ಹೀಗೆಯೇ ಆಗಲಿ.