ನಾವು ನಿರ್ಬಲರಾದಾಗಲೇ ನಿಜವಾಗಿ ಬಲಶಾಲಿಗಳಾಗುತ್ತೇವೆ (2 ಕೊರಿ. 12:10).
ಅಬ್ರಹಾಮನು ತನ್ನ ಶಾರೀರಿಕ ಬಲದಿಂದ ಇಷ್ಮಾಯೇಲನನ್ನು ಹುಟ್ಟಿಸಿದನು, ಆದರೆ ದೇವರು ಇಷ್ಮಾಯೇಲನನ್ನು ಸ್ವೀಕರಿಸಲು ಒಪ್ಪಿಕೊಳ್ಳಲಿಲ್ಲ, ಮತ್ತು ಅವನನ್ನು ಹೊರಗೆ ಹಾಕಲು ಅಬ್ರಾಹಾಮನಿಗೆ ಆಜ್ಞಾಪಿಸಿದರು (ಆದಿಕಾಂಡ 17:18-21, 21:10-14). ನಾವೂ ಸಹ ದೇವರನ್ನು ಅವಲಂಬಿಸದೇ ಒಳ್ಳೆಯ ಭಾವನೆಯಿಂದ ಮತ್ತು ಮಾನವ ಸಾಮರ್ಥ್ಯದ ಮೂಲಕ ಮಾಡಿರುವ ಕಾರ್ಯಗಳನ್ನು ಕ್ರಿಸ್ತನ ನ್ಯಾಯಾಸನದ ಮುಂದೆ ಪ್ರಸ್ತುತಪಡಿಸಿದಾಗ, ಯೇಸುವೂ ಸಹ ಅವನ್ನು ತಾನು ಸ್ವೀಕರಿಸಲಾರೆನೆಂದು ನಮಗೆ ತಿಳಿಸುತ್ತಾರೆ. ಆ ಕಾರ್ಯಗಳು ಕಟ್ಟಿಗೆ, ಹುಲ್ಲು ಮತ್ತು ಒಣ ಕಸದಂತೆ ಸುಟ್ಟು ಬೂದಿಯಾಗುತ್ತವೆ.
ಆದರೆ ನಾವು "ದೇವರ ಮೂಲಕ" ಮಾಡಿರುವ ಕಾರ್ಯಗಳು ಮಾತ್ರ ಉಳಿಯುತ್ತವೆ.
ಅಬ್ರಹಾಮನು ಮಕ್ಕಳನ್ನು ಹುಟ್ಟಿಸಲಾಗದ ಷಂಡನಂತಾದಾಗ - ಮಕ್ಕಳನ್ನು ಹುಟ್ಟಿಸುವ ಅವನ ನೈಸರ್ಗಿಕ ಸಾಮರ್ಥ್ಯ ನಷ್ಟವಾದ ನಂತರ - ದೈವಿಕ ಶಕ್ತಿಯ ಮೂಲಕ ಇಸಾಕನು ಜನಿಸಿದನು, ಮತ್ತು ದೇವರು ಈ ಮಗನನ್ನು ಅಂಗೀಕರಿಸಿದರು.
ಒಬ್ಬ ಇಸಾಕನು ದೇವರ ದೃಷ್ಟಿಯಲ್ಲಿ ಸಾವಿರ ಇಷ್ಮಾಯೇಲರಿಗಿಂತ ಹೆಚ್ಚು ಬೆಲೆಯನ್ನು ಅಥವಾ ಯೋಗ್ಯತೆಯನ್ನು ಹೊಂದಿರುತ್ತಾನೆ. ಎರಡನ್ನೂ ಬೆಂಕಿಗೆ ಹಾಕಿ ಪರೀಕ್ಷಿಸಿದ ನಂತರ, ಕೇವಲ ಒಂದು ಗ್ರಾಂ ಚಿನ್ನದ ಬೆಲೆಯು ಒಂದು ಕಿಲೋಗ್ರಾಂ ಕಟ್ಟಿಗೆಗಿಂತ ಹೆಚ್ಚಾಗಿರುತ್ತದೆ. ಪವಿತ್ರಾತ್ಮನ ಬಲದಿಂದ ಮಾಡಲ್ಪಟ್ಟ ಒಂದು ಚಿಕ್ಕ ಕಾರ್ಯವು ನಮ್ಮ ಸ್ವಂತ ಸಾಮರ್ಥ್ಯದಿಂದ ಮಾಡಿದ ದೊಡ್ಡ ಕಾರ್ಯಗಳಿಗಿಂತ ಹೆಚ್ಚು ಬೆಲೆಯುಳ್ಳದ್ದಾಗಿದೆ.
ಮಾನಸಾಂತರದ ಮೊದಲು ಮತ್ತು ಮಾನಸಾಂತರದ ನಂತರ ನಾವು ಮಾಡುವ ಸತ್ಕಾರ್ಯಗಳು ಮತ್ತು ಕರ್ತನ ಸೇವೆಗಾಗಿ ನಮ್ಮ ಸ್ವಪ್ರಯತ್ನಗಳು ಯಾವಾಗಲೂ ಹೊಲಸು ಚಿಂದಿ ಬಟ್ಟೆಗಳಾಗಿರುತ್ತವೆ. ಆದರೆ ನಂಬಿಕೆಯ ಮೂಲಕ ಉಂಟಾಗುವ ನೀತಿವಂತಿಕೆ, ಹಾಗೂ ಪವಿತ್ರಾತ್ಮನ ಮೇಲೆ ಭರವಸೆಯಿಟ್ಟು ಮಾಡಲಾದ ಸೇವೆ - ಇವು ನಾವು ಯಜ್ಞದ ಕುರಿಯ ವಿವಾಹದ ದಿನದಲ್ಲಿ ಧರಿಸತಕ್ಕಂತ ನಾರುಮಡಿ ಅಥವಾ ವಿವಾಹದ ಉಡುಪು ಆಗಿರುತ್ತದೆ (ಪ್ರಕಟನೆ 19:8). ಎಷ್ಟು ದೊಡ್ಡ ವ್ಯತ್ಯಾಸ - ಕೊಳೆಚಿಂದಿ ಅಥವಾ ಸುಂದರವಾದ ವಿವಾಹದ ಉಡುಪು! ಇವೆಲ್ಲವೂ ನಾವು ನಮ್ಮ ಜೀವನವನ್ನು ಸ್ವಂತ ಭಾವಾತ್ಮಕ ಶಕ್ತಿಯ ಮೂಲಕ ಜೀವಿಸುತ್ತೇವೋ ಅಥವಾ ದೇವಬಲದಿಂದ ಜೀವಿಸುತ್ತೇವೋ ಎಂಬುದರ ಮೇಲೆ ಅವಲಂಬಿತವಾಗಿದೆ.
ಯೇಸುವು ತನ್ನ ಸೇವೆಯಲ್ಲೂ ಕೂಡ ಪವಿತ್ರಾತ್ಮನ ಶಕ್ತಿಯನ್ನು ಅವಲಂಬಿಸಿದ್ದರು. ಅವರು ಪವಿತ್ರಾತ್ಮನ ಅಭಿಷೇಕವನ್ನು ಹೊಂದುವದಕ್ಕೆ ಮೊದಲೇ ಸುವಾರ್ತೆಯನ್ನು ಸಾರುವ ಸೇವೆಗೆ ಕೈಹಾಕಲಿಲ್ಲ. ಅವರು ಆಗಲೇ ಮೂವತ್ತು ವರ್ಷಗಳ ಕಾಲ ಪವಿತ್ರಾತ್ಮನ ಶಕ್ತಿಯ ಮೂಲಕ ಪರಿಪೂರ್ಣ ಪವಿತ್ರತೆಯಲ್ಲಿ ಜೀವಿಸಿದ್ದರು, ಹೀಗಾಗಿ ಪರಲೋಕದ ತಂದೆಯು ಅವರ ಬಗ್ಗೆ "ಈತನು ನನ್ನ ಪ್ರಿಯನಾದ ಮಗನು, ನಾನು ಈತನನ್ನು ಮೆಚ್ಚಿದ್ದೇನೆ" ಎಂದು ಸಾಕ್ಷಿ ನೀಡಿದರು (ಮತ್ತಾಯನು 3:17). ಆದಾಗ್ಯೂ, ಸೇವೆ ಮಾಡುವುದಕ್ಕಾಗಿ ಅವರಿಗೆ ಪವಿತ್ರಾತ್ಮನ ಅಭಿಷೇಕ ಅವಶ್ಯವಾಗಿತ್ತು. ಅವರು ಅಭಿಷೇಕಕ್ಕಾಗಿ ಪ್ರಾರ್ಥಿಸಿದರು ಮತ್ತು ಅಭಿಷೇಕವನ್ನು ಹೊಂದಿದರು (ಲೂಕನು 3:21-22). ಅದಲ್ಲದೆ ಅವರು ಇತರ ಎಲ್ಲಾ ಮಾನವರಿಗಿಂತ ಹೆಚ್ಚಾಗಿ ದೇವರ ನೀತಿಯನ್ನು ಪ್ರೀತಿಸಿದರು ಮತ್ತು ಪಾಪವನ್ನು ದ್ವೇಷಿಸಿದರು, ಆದ್ದರಿಂದ ಅವರು ಬೇರೆಲ್ಲಾ ಮನುಷ್ಯರಿಗಿಂತ ಹೇರಳವಾಗಿ ಅಭಿಷೇಕಿಸಲ್ಪಟ್ಟರು (ಇಬ್ರಿಯರಿಗೆ 1:9). ಇದರ ಫಲವಾಗಿ, ಅವರ ಸೇವೆಯ ಮೂಲಕ ಜನರು ಸೈತಾನನ ಸೆರೆಯಿಂದ ಬಿಡುಗಡೆ ಹೊಂದಿದರು. ಅಭಿಷೇಕದ ಮುಖ್ಯ ಉದ್ದೇಶ ಮತ್ತು ಪ್ರಾಥಮಿಕ ಪ್ರದರ್ಶನ ಇದೇ ಆಗಿತ್ತು (ಲೂಕನು 4:18 ಮತ್ತು ಅ.ಕೃ. 10:38 - ಈ ವಚನಗಳನ್ನು ಓದಿಕೊಳ್ಳಿರಿ).
"ಯೇಸುವು ತನ್ನ ಆಲೋಚನಾ ಮಾದರಿಯನ್ನು ಇತರರು ಅನುಸರಿಸುವಂತೆ ಮಾಡಲಿಕ್ಕೆ ತನ್ನ ಭಾವಾತ್ಮಕ ಬಲದ ಕುಶಲತೆಯನ್ನು ಬಳಸಿಕೊಳ್ಳಲಿಲ್ಲ. ಅವರು ಎಂದಿಗೂ ತನ್ನನ್ನು ಇತರರ ಮೇಲೆ ಹೇರಲಿಲ್ಲ. ಅವರು ಯಾವಾಗಲೂ ತನ್ನನ್ನು ನಿರಾಕರಿಸುವ ಸ್ವಾತಂತ್ರ್ಯವನ್ನು ಇತರರಿಗೆ ನೀಡಿದ್ದರಿಂದ, ಅವರು ತಮಗೆ ಬೇಕಾದ ಆಯ್ಕೆಯನ್ನು ಮಾಡಬಹುದಾಗಿತ್ತು."
ದೇವರ ಕೆಲಸವು ಮಾನವ ಪ್ರತಿಭೆ ಮತ್ತು ಸಾಮರ್ಥ್ಯಗಳ ಮೂಲಕ ನಡೆಯುವುದಿಲ್ಲ. ಅನೇಕ ಸಲ ಸ್ವಾಭಾವಿಕವಾಗಿ ಹೆಚ್ಚು ಪ್ರತಿಭಾವಂತರಾದ ಜನರು ದೇವರ ಕಡೆಗೆ ತಿರುಗಿಕೊಂಡ ನಂತರ, ತಮ್ಮ ಬುದ್ಧಿಶಕ್ತಿ ಮತ್ತು ಭಾವಾತ್ಮಕ ಶಕ್ತಿಯ ಪ್ರಭಾವದ ಮೂಲಕ ಈಗ ತಾವು ಇತರರನ್ನು ದೇವರ ಕಡೆಗೆ ತಿರುಗಿಸಬಹುದೆಂದು ಯೋಚಿಸುತ್ತಾರೆ.
ಕ್ರೈಸ್ತರಲ್ಲಿ ಅನೇಕರು ತಮ್ಮ ವಾಕ್ಚಾತುರ್ಯ, ಚುರುಕು ಮನಸ್ಸು ಮತ್ತು ಮಾತಿನ ಮೇಲಿನ ಉತ್ತಮ ನಿಯಂತ್ರಣವನ್ನು ಪವಿತ್ರಾತ್ಮನ ಶಕ್ತಿಯೆಂದು ತಪ್ಪಾಗಿ ಭಾವಿಸುವುದೂ ಇದೆ. ಆದರೆ ಇವು ಕೇವಲ ಭಾವಾತ್ಮಕ ಸಾಮರ್ಥ್ಯಗಳಾಗಿವೆ ಮತ್ತು ಇವುಗಳನ್ನು ಆಧಾರವಾಗಿ ಇರಿಸಿಕೊಂಡು ಮಾಡಿದ ಯಾವುದೇ ಕಾರ್ಯದಿಂದ ದೇವರ ಸೇವೆಗೆ ಅಡಚಣೆಯಾಗುತ್ತದೆ. ಮಾನವನ ಭಾವಾತ್ಮಕ ಸಾಮರ್ಥ್ಯದಿಂದ ಮಾಡಲಾದ ಕೆಲಸವು ಎಂದಿಗೂ ನಿತ್ಯತ್ವದಲ್ಲಿ ಉಳಿಯುವುದಿಲ್ಲ. ಅದು ಕಾಲಾಂತರದಲ್ಲಿ ನಾಶವಾಗುತ್ತದೆ ಅಥವಾ ಕ್ರಿಸ್ತನ ನ್ಯಾಯತೀರ್ಪಿನ ದಿನದಲ್ಲಿ ತಳ್ಳಿಹಾಕಲ್ಪಡುತ್ತದೆ.
ಯೇಸುವು ಜನರನ್ನು ದೇವರ ಕಡೆಗೆ ನಡೆಸಲು ವಾಕ್ಚಾತುರ್ಯದ ಬಲವನ್ನಾಗಲೀ ಅಥವಾ ಭಾವಾತ್ಮಕ ಉದ್ವೇಗವನ್ನಾಗಲೀ ಆಧರಿಸಿಕೊಳ್ಳಲಿಲ್ಲ. ಭಾವಾತ್ಮಕ ಬಲದ ಮೂಲಕ ಮಾಡಿದ ಯಾವುದೇ ಕಾರ್ಯವು ಜನರ ಬುದ್ಧಿಶಕ್ತಿಯವರೆಗೆ ಮಾತ್ರ ತಲುಪುತ್ತದೆ, ಮತ್ತು ಅದರಿಂದ ಅವರಿಗೆ ಯಾವುದೇ ಆತ್ಮಿಕ ಸಹಾಯ ಸಿಗುವುದಿಲ್ಲ ಎಂಬ ವಿಷಯವು ಅವರಿಗೆ ತಿಳಿದಿತ್ತು. ಇದೇ ಕಾರಣಕ್ಕಾಗಿ ಅವರು ಜನರನ್ನು ದೇವರ ಕಡೆಗೆ ಆಕರ್ಷಿಸುವದಕ್ಕೆ ಯಾವುದೇ ರೀತಿಯ ಹಾಡುಗಳ ಮನೋರಂಜನೆಯನ್ನು ಬಳಸಿಕೊಳ್ಳಲಿಲ್ಲ.
ಅವರು ತನ್ನ ಬಳಿಗೆ ಬಂದ ಪ್ರೇಕ್ಷಕರ ಭಾವನೆಗಳನ್ನು ಪ್ರಚೋದಿಸಿ, ಅವರ ಉತ್ಸಾಹವನ್ನು ಹೆಚ್ಚಿಸಿ ಅವರು ಮೈಮರೆಯುವಂತೆ ಮಾಡಿ, ಆ ಮೂಲಕ ಅವರು ತಮ್ಮನ್ನು ದೇವರಿಗೆ ಸಮರ್ಪಿಸಿಕೊಳ್ಳುವಂತೆ ಮಾಡಲಿಲ್ಲ. ವಾಸ್ತವವಾಗಿ, ಇಂದು ಅನೇಕ ಸುವಾರ್ತಿಕರು ಮತ್ತು ಬೋಧಕರು ಬಹಳ ಸಾಮಾನ್ಯವಾಗಿ ಉಪಯೋಗಿಸುವ ಇಂತಹ ಯಾವುದೇ ಭಾವಾತ್ಮಕ ವಿಧಾನಗಳನ್ನು ಯೇಸುವು ಬಳಸಲಿಲ್ಲ. ಜನರನ್ನು ಪ್ರಭಾವಿತಗೊಳಿಸಲು ಭಾವನೆಗಳ ಉದ್ರೇಕವನ್ನಾಗಲೀ, ಭಾವಾತ್ಮಕ ಉದ್ವೇಗದ ಪ್ರದರ್ಶನವನ್ನಾಗಲೀ ಅವರು ಮಾಡಲಿಲ್ಲ. ಇವು ರಾಜಕೀಯ ಪುಡಾರಿಗಳು ಮತ್ತು ವ್ಯಾಪಾರಸ್ತ ಮಾರಾಟಗಾರರು ಬಳಸುವ ಸಾಧನಗಳಾಗಿವೆ, ಮತ್ತು ಯೇಸುವು ಇವರಂತೆ ಮಾಡಲಿಲ್ಲ.
ಯೆಹೋವ ಅಂದರೆ ದೇವರ ಸೇವಕರಾಗಿದ್ದ ಯೇಸುವು ತನ್ನ ಸೇವಾಕಾರ್ಯದಲ್ಲಿ ಪವಿತ್ರಾತ್ಮನನ್ನು ಸಂಪೂರ್ಣವಾಗಿ ಆತುಕೊಂಡಿದ್ದರು. ಇದರ ಪರಿಣಾಮವಾಗಿ ಅವರನ್ನು ಅನುಸರಿಸಿದ ಶಿಷ್ಯರು ತಾವೂ ಸಹ ದೇವರಲ್ಲಿ ಆಳವಾಗಿ ನೆಲೆಗೊಂಡ ಜೀವಿತಕ್ಕೆ ಬಂದರು.
ಯೇಸುವು ತನ್ನ ಆಲೋಚನಾ ಮಾದರಿಯನ್ನು ಇತರರು ಅನುಸರಿಸುವಂತೆ ಮಾಡಲಿಕ್ಕೆ ತನ್ನ ಭಾವಾತ್ಮಕ ಬಲದ ಕುಶಲತೆಯನ್ನು ಬಳಸಿಕೊಳ್ಳಲಿಲ್ಲ. ಅವರು ಎಂದಿಗೂ ತನ್ನನ್ನು ಇತರರ ಮೇಲೆ ಹೇರಲಿಲ್ಲ. ಯೇಸುವು ಯಾವಾಗಲೂ ಇತರರಿಗೆ ತನ್ನನ್ನು ನಿರಾಕರಿಸುವ ಸ್ವಾತಂತ್ರ್ಯವನ್ನು ನೀಡಿದ್ದರು ಮತ್ತು ಅವರು ತಮಗೆ ಬೇಕಾದ ಆಯ್ಕೆಯನ್ನು ಮಾಡಬಹುದಾಗಿತ್ತು. ಕ್ರೈಸ್ತ ಸಮುದಾಯದಲ್ಲಿ, ಭಾವಾತ್ಮಕತೆಯಿಂದ ನಡೆಸಲ್ಪಡುವ ನಾಯಕರು ತಮ್ಮ ಬಲವಾದ ವ್ಯಕ್ತಿತ್ವದ ಮೂಲಕ ತಮ್ಮ ಹಿಂಡನ್ನು ಮತ್ತು ತಮ್ಮ ಜೊತೆಯ ಸೇವಕರನ್ನು ವಶದಲ್ಲಿ ಇರಿಸಿಕೊಳ್ಳುತ್ತಾರೆ. ಜನರು ಇಂತಹ ನಾಯಕರನ್ನು ನೋಡಿ ವಿಸ್ಮಯಗೊಂಡು ಅವರಿಗೆ ಅಧೀನರಾಗುತ್ತಾರೆ ಮತ್ತು ಅವರನ್ನು ಬಹಳವಾಗಿ ಮೆಚ್ಚಿಕೊಂಡು ಅವರ ಪ್ರತಿಯೊಂದು ಮಾತನ್ನೂ ಪಾಲಿಸುತ್ತಾರೆ.
ಅಂತಹ ನಾಯಕನ ಸುತ್ತಲೂ ಬಹುಸಂಖ್ಯೆಯಲ್ಲಿ ಜನರು ಸೇರಬಹುದು ಮತ್ತು ಅವರು ಒಗ್ಗಟ್ಟಾಗಿಯೂ ಇರಬಹುದು. ಆದರೆ ಅವರ ಈ ಐಕ್ಯತೆಯು ಕೇವಲ ಆ ನಾಯಕನ ಮೇಲಿನ ಭಕ್ತಿಯನ್ನು ಆಧರಿಸಿದೆ. ಅಂತಹ ನಾಯಕರು ತಮ್ಮಲ್ಲಿ ಪವಿತ್ರಾತ್ಮನ ಶಕ್ತಿಯಿದೆಯೆಂದು ಭಾವಿಸಿ ತಮ್ಮನ್ನು ಮರುಳು ಮಾಡಿಕೊಳ್ಳಬಹುದು, ಏಕೆಂದರೆ ಅವರಿಗೆ ಆತ್ಮ ಮತ್ತು ಪ್ರಾಣದ ನಡುವಿನ ವ್ಯತ್ಯಾಸವನ್ನು ಕಂಡುಕೊಳ್ಳುವುದು ಹೇಗೆಂದು ತಿಳಿದಿರುವುದಿಲ್ಲ. ಅವರನ್ನು ಹಿಂಬಾಲಿಸುವವರು ಸಹ ಇದೇ ರೀತಿ ಮೋಸ ಹೋಗುತ್ತಾರೆ. ಆದರೆ ದೇವರ ನ್ಯಾಯ ತೀರ್ಪಿನ ಆಸನದ ಶುಭ್ರವಾದ ಬೆಳಕು ಇದು ಕೇವಲ ಮಾನವನ ಭಾವಾತ್ಮಕ ಬಲವೆಂಬುದನ್ನು ಮತ್ತು ಇದು ದೇವರ ಕೆಲಸಕ್ಕೆ ಅಡ್ಡಿಯಾಗಿದೆ ಎಂಬುದನ್ನು ಬಹಿರಂಗಪಡಿಸುತ್ತದೆ.
ಯೇಸುವು ಈ ರೀತಿಯ ನಾಯಕರಾಗಿರಲಿಲ್ಲ. ಯಾವ ಕ್ರೈಸ್ತನೂ ಸಹ ಈ ರೀತಿ ಇರಬಾರದು. ನಾವು ನಮ್ಮ ಸ್ವಂತ ಭಾವಾತ್ಮಕ-ಶಕ್ತಿಯನ್ನು ಬಳಸಲು ಭಯಪಡಬೇಕು. ಏಕೆಂದರೆ ಇದು ಮನುಷ್ಯನಿಗೆ ದೇವರು ಕೊಟ್ಟಿರುವ ನಿಯಮಗಳ ಉಲ್ಲಂಘನೆಯಾಗಿದೆ ಮತ್ತು ಇದರಿಂದ ನಿಶ್ಚಯವಾಗಿ ದೇವರ ಸೇವೆಗೆ ಅಡ್ಡಿಯಾಗುತ್ತದೆ.
ನಿಜವಾದ ಆತ್ಮಿಕ ಕೆಲಸವನ್ನು ಮಾನವನ ಭಾವಾತ್ಮಕ ಸಾಮರ್ಥ್ಯದಿಂದ ಎಂದಿಗೂ ಮಾಡಲು ಸಾಧ್ಯವಿಲ್ಲ, ಆದರೆ ಅದನ್ನು ಪವಿತ್ರಾತ್ಮನ ಬಲದಿಂದ ಮಾತ್ರ ಮಾಡಬಹುದು. ಯೇಸುವಿಗೆ ಇದು ತಿಳಿದಿತ್ತು; ಮತ್ತು ಆದ್ದರಿಂದ ಅವರು ನಿರಂತರವಾಗಿ ತನ್ನ ಭಾವಾತ್ಮಕ ಶಕ್ತಿಯನ್ನು ಸಾಯಿಸಿದರು. ಆ ಮೂಲಕವಾಗಿ ಅವರು ತನ್ನನ್ನು ಹಿಂಬಾಲಿಸಿದ ಶಿಷ್ಯರಲ್ಲಿ ಆಳವಾದ ಮತ್ತು ಸ್ಥಿರವಾದ ಕಾರ್ಯವನ್ನು ಅತ್ಯಂತ ಕಡಿಮೆ ಸಮಯದಲ್ಲಿ ಮಾಡಲು ಸಾಧ್ಯವಾಯಿತು.