WFTW Body: 

ಮತ್ತಾಯನು 11:28-30' ವಚನಗಳಲ್ಲಿ, ಯೇಸುವು ವಿಶ್ರಾಂತಿಯಿಂದ ಇರುವುದು ಹಾಗೂ ಹೊರೆಯನ್ನು ಹೊರುವುದರ ಬಗ್ಗೆ ಮಾತನಾಡಿದರು. ಅಲ್ಲಿ ಯೇಸುವಿನ ಮಾತಿನ ಭಾವಾರ್ಥ ಏನಾಗಿತ್ತೆಂದರೆ, ಈ ಪ್ರಪಂಚದ ಎಲ್ಲಾ ಹೊರೆಗಳ ಬಗ್ಗೆ ನಾವು ಚಿಂತಿಸದೆ ವಿಶ್ರಾಂತಿಯಿಂದ ಇರಬೇಕೆಂದು ಮತ್ತು ತಾನು ಕೊಡುವಂತ ಹೊರೆಯನ್ನು ("ನೊಗ") ನಮ್ಮ ಹೃದಯದಲ್ಲಿ ಇರಿಸಿಕೊಳ್ಳಬೇಕೆಂದು ಅವರು ಹೇಳಿದರು. ನಾವು ನಮ್ಮ ಎಲ್ಲಾ ಲೌಕಿಕ ಹೊರೆಗಳನ್ನು ಅವರಿಗೆ ವಹಿಸಿಕೊಡದೆ, ಕರ್ತರ ಹೊರೆಗಳನ್ನು ಹೊರಲು ಆಗುವುದಿಲ್ಲ. "ನಿನ್ನ ಚಿಂತಾಭಾರವನ್ನು ಕರ್ತನ ಮೇಲೆ ಹಾಕು; ನಿನ್ನ ಎಲ್ಲಾ ತೊಡಕುಗಳನ್ನು ಆತನೇ ನಿರ್ವಹಿಸಲಿ"ಕೀರ್ತನೆಗಳು 55:22'; "ನಿನ್ನ ಹೊಟ್ಟೆ-ಬಟ್ಟೆಯ ಬಗ್ಗೆ ಚಿಂತಿಸಬೇಡ. ನೀನು ಚಿಂತಿಸುವುದೇ ಆದರೆ, ದೇವರ ರಾಜ್ಯಕ್ಕಾಗಿಯೂ, ದೇವರ ನೀತಿಗಾಗಿಯೂ ತವಕಿಸು" (ಮತ್ತಾ. 6:31,33 - ಭಾವಾನುವಾದ).

ನಿಮ್ಮ ಮನಸ್ಸಿನಲ್ಲಿ ಇಹಲೋಕದ ಸಂಗತಿಗಳ ಚಿಂತೆ ಮತ್ತು ಕಳವಳಗಳೇ ತುಂಬಿದ್ದರೆ, ನೀವು ಕರ್ತನಿಗಾಗಿ ಏನನ್ನೂ ಮಾಡಲಾರಿರಿ. ಹೌದು, ಪ್ರಪಂಚದ ವಿಚಾರಗಳ ಬಗ್ಗೆ ನೀವು ಯೋಚಿಸಬೇಕು ಎಂಬುದರಲ್ಲಿ ಅನುಮಾನವಿಲ್ಲ, ಆದರೆ ಇಂತಹ ಯಾವುದೇ ಸಂಗತಿಯ ಬಗ್ಗೆ ನೀವು ಚಿಂತಿಸಬಾರದು. ನಿಮ್ಮ ಹೃದಯದಲ್ಲಿ ನಿತ್ಯತ್ವದ ಸಂಗತಿಗಳಿಗಾಗಿ ಮಾತ್ರ ಕಾಳಜಿ ಇರಬೇಕು. ಈ ಸಂಬಂಧದಲ್ಲಿ ನಾವು ಪ್ರಪಂಚದ ಜನರಿಂದ ವಿಭಿನ್ನವಾಗಿದ್ದೇವೆ. ನೀವು ಬರೆಯುವ ಈ ಲೋಕದ ಪರೀಕ್ಷೆಗಳ ಫಲಿತಾಂಶವೂ ಸಹ ಪರಲೋಕದ ದೃಷ್ಟಿಯಲ್ಲಿ ಯಾವ ಮೌಲ್ಯವನ್ನೂ ಹೊಂದಿಲ್ಲ. ನಿಜ, ನೀವು ನಿಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡಬೇಕು. ಆದರೆ ಫಲಿತಾಂಶದ ಬಗ್ಗೆ ನೀವು ಎಂದಿಗೂ ಚಿಂತಿಸಬಾರದು.

ನೀವು ಮೊದಲನೆಯದಾಗಿ ದೇವರ ರಾಜ್ಯಕ್ಕಾಗಿ ತವಕಿಸುವುದರಲ್ಲೂ, ದೇವರ ನೀತಿಗಾಗಿ ಹಂಬಲಿಸುವುದರಲ್ಲೂ ನೂರಕ್ಕೆ ನೂರರಷ್ಟು ಪ್ರಯತ್ನವನ್ನು ಮಾಡಿದರೆ, ಆಗ ನೀವು ನಿತ್ಯತ್ವದಲ್ಲಿ ಮೊದಲಿಗರು ಆಗಿರುತ್ತೀರಿ. ಸ್ವತಃ ನಾನು ಹಲವು ವರ್ಷಗಳ ಹಿಂದೆ ಇದನ್ನೇ ಆರಿಸಿಕೊಂಡೆನು.

ಚೆಫನ್ಯನು 3:17' ವಚನದ ಭಾವಾನುವಾದ ಹೀಗಿದೆ - ನಿಮ್ಮ ಜೀವನದ ಪ್ರತಿಯೊಂದು ವಿಷಯದ ಬಗ್ಗೆ ನಮ್ಮನ್ನು ಪ್ರೀತಿಸುವ "ದೇವರು ಯಾರಿಗೂ ತಿಳಿಯದಂತೆ ಯೋಜನೆಗಳನ್ನು ತಯಾರಿಸುತ್ತಿದ್ದಾರೆ". ಅದಲ್ಲದೆ ಕರ್ತರು ನಮಗೆ ನೆನಪಿಸುತ್ತಿರುವುದು ಏನೆಂದರೆ, "ನಾನು ಮಾಡುತ್ತಿರುವುದು ಏನೆಂದು ಈಗ ನಿನಗೆ ತಿಳಿಯುವುದಿಲ್ಲ, ಆದರೆ ಮುಂದಕ್ಕೆ ನೀನು ತಿಳಿದುಕೊಳ್ಳುವೆ" (ಯೋಹಾ. 13:7).

ಕೊನೆಯದಾಗಿ, ನಾನು ನಿನ್ನನ್ನು ಮತ್ತೊಮ್ಮೆ ಪ್ರೋತ್ಸಾಹಿಸುವುದು (ಲೋಕದಾದ್ಯಂತ ನಾನು ಎಲ್ಲಾ ಜನರನ್ನು ಪ್ರೋತ್ಸಾಹಿಸುವಂತೆ) ಏನೆಂದರೆ, ’ನೀನು ದೀನನಾಗಿರಲು ಮತ್ತು ನಿನ್ನ ಮನಸ್ಸಿನ ಯೋಚನೆಗಳಲ್ಲಿ ನಿನ್ನನ್ನು ತಗ್ಗಿಸಿಕೊಳ್ಳಲು ಪ್ರಯತ್ನಿಸು’. ಇದರ ಅರ್ಥ ನೀನು ನಿನ್ನ ಆತ್ಮಗೌರವವನ್ನು ಕಳಕೊಳ್ಳುವುದು ಅಥವಾ ನೀನು ದೇವರ ಒಬ್ಬ ಮಗುವಾಗಿದ್ದರೂ ಅಥವಾ ದೇವರು ನಿನಗೆ ವರಗಳನ್ನು ಮತ್ತು ವಿಶೇಷ ಸಾಮರ್ಥ್ಯಗಳನ್ನು ದಯಪಾಲಿಸಿದ್ದರೂ ಅವರಿಗೆ ನಿನ್ನಿಂದ ಉಪಯೋಗವಿಲ್ಲ, ಎಂಬುದಾಗಿ ಭಾವಿಸುವುದಲ್ಲ. ನೀವು ದೇವರ ಮಕ್ಕಳಾಗಿದ್ದೀರಿ - ಹಾಗಿರುವಾಗ ನಿಮ್ಮ ಆತ್ಮ-ಗೌರವವು ಕುಂದಿಹೋಗಬಾರದು. ಆದರೆ ದೇವರ ಮುಂದೆ ನೀವು ಏನೂ ಇಲ್ಲವೆಂಬ ತಿಳುವಳಿಕೆ ನಿಮಗೆ ಬಂದಾಗ, ನಿಮ್ಮ ಜೀವನದ ಪ್ರತಿಯೊಂದು ವಿಷಯದಲ್ಲಿ ದೇವರು ಮಹತ್ವವನ್ನು ಪಡೆಯುತ್ತಾರೆ. ನಿಮಗೆ ಪರಿಚಯವಿರುವವರು ನಿಮ್ಮನ್ನು ನೋಡಿ ದೇವರಿಗೆ ಮಹಿಮೆ ಸಲ್ಲಿಸುವಂತೆ ಆಗಬೇಕು. ಇದಕ್ಕಾಗಿ ನೀವು ನಿಮ್ಮ ಸ್ವೇಚ್ಛಾ ಜೀವನವನ್ನು ಬಿಟ್ಟುಕೊಟ್ಟು ದೇವರ ಚಿತ್ತವನ್ನು ಮಾತ್ರ ಪೂರೈಸಬೇಕು. ಇದರ ಅರ್ಥವೇನೆಂದರೆ, ದೇವರು ನಿಮಗೆ ಕೊಟ್ಟಿರುವ ಪ್ರತಿಯೊಂದು ಸಂಗತಿಗಾಗಿ ಎಲ್ಲಾ ವೇಳೆಯಲ್ಲಿ ಅವರಿಗೆ ಮಹಿಮೆ ಸಲ್ಲಿಸುವುದು ಮತ್ತು ಅವರ ಪ್ರತಿಯೊಂದು ಕೊಡುಗೆಯನ್ನು ಅವರ ಮಹಿಮೆಗಾಗಿ ಮಾತ್ರ ಉಪಯೋಗಿಸುವುದಾಗಿ ನಿರ್ಧರಿಸುವುದು.

ಒಬ್ಬ ವ್ಯಕ್ತಿಯ ದೋಷಗಳು ಅಥವಾ ನ್ಯೂನ್ಯತೆಗಳು ಎಂಥದ್ದೇ ಆಗಿರಲಿ, ಯಾವ ಕಾರಣಕ್ಕೂ ಆತನನ್ನು ಕೀಳಾಗಿ ನೋಡುವುದು ಅಥವಾ ಅಣಕಿಸುವುದನ್ನು ಎಂದಿಗೂ ಮಾಡಬೇಡಿರಿ. ದೇವರು ದೀನರಿಗೆ ಅಪಾರವಾದ ಕೃಪೆಯನ್ನು ದಯಪಾಲಿಸುವರು - ಮತ್ತು ಅವರು ಸಮೃದ್ಧಿಯಾದ ಆತ್ಮಿಕ ಬೆಳವಣಿಗೆಯನ್ನು ಅನುಭವಿಸುವರು. ನೀವೂ ಸಹ ನಿಮ್ಮ ಜೀವಿತವಿಡೀ ಯೇಸುವಿನಂತೆ ದೀನತೆಯಿಂದ ನಡೆಯುವಂತಾಗಲಿ.