ದೇವರು ನಮ್ಮಲ್ಲಿ ವ್ಯಕ್ತಪಡಿಸಬೇಕೆಂದು ಸಂಕಲ್ಪಿಸಿರುವ ಅವರ ಬಲವು ಎಷ್ಟು ಅತಿಶಯವಾದದ್ದು ಎಂಬುದನ್ನು ನೀನು ಕಂಡುಕೊಂಡಿದ್ದೀಯಾ? ಭೂಮ್ಯಾಕಾಶಗಳ ಸೃಷ್ಟಿಯಲ್ಲಿ ಪ್ರದರ್ಶಿಸಲ್ಪಟ್ಟ ದೇವರ ಮಹಾ ಶಕ್ತಿಯು ಈ ವಿಶ್ವದಲ್ಲಿ ಕಂಡುಬರಲಿಲ್ಲ, ಬದಲಾಗಿ ಅದು ಯೇಸುವಿನ ಪುನರುತ್ಥಾನದಲ್ಲಿ ಪ್ರದರ್ಶಿಸಲ್ಪಟ್ಟಿತು (ಎಫೆ. 1:20).
ನಮ್ಮ ಸುತ್ತಲಿನ ವಿಶ್ವದಲ್ಲಿ ನಮಗೆ ಕಾಣಿಸುವಂತದ್ದು ಮೊದಲನೆಯ ಸೃಷ್ಟಿಯಾಗಿದೆ. ಎರಡನೇ ಸೃಷ್ಟಿಯು ಯೇಸುವಿನ ಪುನರುತ್ಥಾನದಲ್ಲಿ ಪ್ರಾರಂಭವಾಯಿತು; ಅದು ನೂತನ ಸೃಷ್ಟಿಯಾಗಿತ್ತು. ಈ ಹೊಸ ಸೃಷ್ಟಿಯು ಹಳೆಯದಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಯೋಹಾ. 20'ರಲ್ಲಿ ನೀವು ಓದಿಕೊಳ್ಳುವಂತದ್ದು, ಆದಿಕಾಂಡ 1'ರಲ್ಲಿ ನೀವು ಓದಿಕೊಳ್ಳುವುದಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಕ್ರಿಸ್ತನ ಪುನರುತ್ಥಾನವು ಸಮಸ್ತ ವಿಶ್ವದಲ್ಲಿ ಅಲ್ಲಿಯವರೆಗೆ ಕಂಡುಬಂದಂತ ಅತ್ಯಂತ ಶ್ರೇಷ್ಠ ಬಲ ಪ್ರದರ್ಶನವಾಗಿತ್ತು. ದೈಹಿಕ ಶಕ್ತಿಗಿಂತ ನೈತಿಕ ಶಕ್ತಿಯು ಪ್ರಬಲವಾಗಿದೆ.
ಆ ಬಲವನ್ನು ನಾವು ಅನುಭವಿಸಬೇಕೆಂದು ದೇವರು ಬಯಸುತ್ತಾರೆ, ಎಂಬ ಸತ್ಯಾಂಶದ ಪ್ರಕಟಣೆಯನ್ನು ನಾವು ಪಡೆಯಬೇಕೆಂದು ಪೌಲನು ಪ್ರಾರ್ಥಿಸುತ್ತಾನೆ. ನಾವು ಮೊದಲು ನಮ್ಮ ಆಂತರಿಕ ಜೀವಿತದಲ್ಲಿ ಆ ಬಲವನ್ನು ಅನುಭವಿಸಬೇಕೆಂದು ದೇವರು ಬಯಸುತ್ತಾರೆ. ನಂತರ ಒಂದು ದಿನ, ನಾವು ಅದನ್ನು ನಮ್ಮ ದೇಹಗಳಲ್ಲೂ ಅನುಭವಿಸುತ್ತೇವೆ. ದೇವರ ಕಾರ್ಯವು ಯಾವಾಗಲೂ ಒಳಗಿನಿಂದ ಪ್ರಾರಂಭವಾಗುತ್ತದೆ. ಮುಂದೆ ಒಂದು ದಿನ ನಾವು ಕ್ರಿಸ್ತನ ಪುನರುತ್ಥಾನದ ಬಲವನ್ನು ನಮ್ಮ ಶರೀರಗಳಲ್ಲಿ ಅನುಭವಿಸಲಿದ್ದೇವೆ. ಇಂದು, ನಾವು ನಮ್ಮ ಆತ್ಮದಲ್ಲಿ ಆ ಪುನರುತ್ಥಾನದ ಬಲವನ್ನು ಅನುಭವಿಸಬೇಕು ಎಂಬುದು ದೇವರ ಇಚ್ಛೆಯಾಗಿದೆ. ಪುನರುತ್ಥಾನದ ಬಲವು ನಮ್ಮನ್ನು ಆತ್ಮಿಕ ಮರಣದಿಂದ ಮೇಲೆತ್ತುವ ಬಲವಾಗಿದೆ. ಪಾಪದ ನಿಯಮವು ನಮ್ಮನ್ನು ಆತ್ಮಿಕ ಮರಣದ ಕಡೆಗೆ ಎಳೆಯುತ್ತದೆ. ಪುನರುತ್ಥಾನದ ಬಲವು ನಮ್ಮನ್ನು ಅದಕ್ಕೆ ವಿರುದ್ಧವಾಗಿ ಮೇಲಕ್ಕೆ ಎಳೆಯುತ್ತದೆ.
ಪುನರುತ್ಥಾನದ ಬಲವು ನಮ್ಮನ್ನು ಪಾಪದ ನಿಯಮದ ಸೆಳೆತದಿಂದ ಬಿಡಿಸಿ ಹೇಗೆ ಮೇಲಕ್ಕೆ ಎಳೆಯುತ್ತದೆ ಎಂದರೆ, ಒಂದು ಪುಸ್ತಕವನ್ನು ನನ್ನ ಕೈಯು ಗುರುತ್ವಾಕರ್ಷಣೆಯ ನಿಯಮದ ವಿರುದ್ಧವಾಗಿ ಮೇಲಕ್ಕೆತ್ತುವ ಹಾಗೆ (ಗುರುತ್ವಾಕರ್ಷಣೆಯು ಪುಸ್ತಕವನ್ನು ಕೆಳಕ್ಕೆ ಎಳೆಯುತ್ತದೆ). ಪುನರುತ್ಥಾನದ ಬಲವು ನಮ್ಮನ್ನು ಸ್ವರ್ಗೀಯ ಸ್ಥಾನಕ್ಕೆ ಏರಿಸುತ್ತದೆ. ಎಫೆಸ. 2:1-7'ರಲ್ಲಿ ನಾವು ಓದುವ ಹಾಗೆ, ಈ ಬಲವೇ ಪಾಪದ ದೆಸೆಯಿಂದ ಸತ್ತವರಾಗಿದ್ದ ನಮ್ಮನ್ನು ಮೇಲಕ್ಕೆ ಏರಿಸಿ, ಕ್ರಿಸ್ತನೊಂದಿಗೆ ಸ್ವರ್ಗೀಯ ಸ್ಥಳಗಳಲ್ಲಿ ಕೂರಿಸಿದೆ (ಎಫೆ. 2:7). ಕೆಲವರು ಇದು ಒಂದು ಕಾಲ್ಪನಿಕ ಭಾಷೆಯ ವರ್ಣನೆಯಾಗಿದೆ, ಎಂದು ಅಂದುಕೊಳ್ಳಬಹುದು. ಆದರೆ ಅದು ಹಾಗಲ್ಲ, ಇದು ಖಂಡಿತವಾಗಿಯೂ ಸತ್ಯವಾದ ವಿಷಯವಾಗಿದೆ. ನೀವು ಇದನ್ನು ಸತ್ಯವೆಂದು ನಂಬದಿದ್ದರೆ ನೀವು ಅದರ ಯಾವುದೇ ಉಪಯೋಗವನ್ನು ಪಡೆದುಕೊಳ್ಳಲಾರಿರಿ. ಯಾಕೆಂದರೆ ನಾವು ನಮ್ಮ ನಂಬಿಕೆಗೆ ತಕ್ಕಂತೆ ಪಡೆದುಕೊಳ್ಳುತ್ತೇವೆ. ದೇವರು ಎಂದೆಂದಿಗೂ ನಿಜವಾಗಿರಲಿ; ಮತ್ತು ಎಲ್ಲಾ ಮಾನವರು ಸುಳ್ಳುಗಾರರಾಗಲಿ. ನಮ್ಮ ಎಲ್ಲಾ ಭಾವನೆಗಳು ನಮ್ಮನ್ನು ವಂಚಿಸುತ್ತವೆ. ನಾವು ಕಣ್ಣಿನಿಂದ ನೋಡಿರುವಂತದ್ದು ಸಹ ನಮ್ಮನ್ನು ಮೋಸಗೊಳಿಸಬಹುದು.
"ಪುನರುತ್ಥಾನದ ಬಲವು ನಮ್ಮನ್ನು ಆತ್ಮಿಕ ಮರಣದಿಂದ ಮೇಲೆತ್ತುವ ಬಲವಾಗಿದೆ"
ಇಬ್ಬರು ಚಿಕ್ಕ ಹುಡುಗರು ಸೂರ್ಯಾಸ್ತಮಾನವನ್ನು ನೋಡುತ್ತಿರುವ ಒಂದು ಕಾಲ್ಪನಿಕ ದೃಷ್ಟಾಂತವಿದೆ. ಅವರಲ್ಲಿ 12 ವರ್ಷದ ದೊಡ್ಡ ಹುಡುಗನು ಹೀಗೆನ್ನುತ್ತಾನೆ, "ಹೇ, ನೋಡು! ಸೂರ್ಯನು ಚಲಿಸುತ್ತಿದ್ದಾನೆ! ಬೆಳಗ್ಗೆ ಅವನು ಪೂರ್ವದಲ್ಲಿದ್ದನು. ಈಗ ಅವನು ಪಶ್ಚಿಮದಲ್ಲಿದ್ದಾನೆ." ಸುಮಾರು 6 ವರ್ಷದ ಆ ಇನ್ನೊಬ್ಬ ಚಿಕ್ಕ ಹುಡುಗನು ಹೀಗೆನ್ನುತ್ತಾನೆ, "ಇಲ್ಲ, ನಮ್ಮ ಅಪ್ಪನು ನಮಗೆ ಹೇಳಿದ್ದು ನಿನಗೆ ನೆನಪಿದೆಯೇ? ಚಲಿಸುತ್ತಿರುವುದು ಸೂರ್ಯನಲ್ಲ, ಭೂಮಿಯು ತನ್ನ ಕಕ್ಷೆಯಲ್ಲಿ ಸುತ್ತುತ್ತಿದೆ." ಆಗ ದೊಡ್ಡ ಹುಡುಗನು ಹೇಳುತ್ತಾನೆ, "ನಾನು ಕಣ್ಣಾರೆ ಕಂಡಿರುವುದನ್ನು ಮತ್ತು ನಾನು ಅನುಭವಿಸಿರುವುದನ್ನು ನಾನು ನಂಬುತ್ತೇನೆ. ನಾನು ನೋಡಿರುವಂತೆ, ಸೂರ್ಯನು ಪೂರ್ವದಲ್ಲಿ ಇದ್ದನು, ಈಗ ಪಶ್ಚಿಮದಲ್ಲಿದ್ದಾನೆ. ಮತ್ತು ನಾನು ನಿಂತಿರುವ ಜಾಗದಲ್ಲಿ ಭೂಮಿಯು ಚಲಿಸುತ್ತಿಲ್ಲ. ಅದು ಇದ್ದಲ್ಲೇ ಇದೆ. " ಇದಕ್ಕೆ ಚಿಕ್ಕ ಹುಡುಗನು ಹೀಗೆ ಉತ್ತರಿಸುತ್ತಾನೆ, "ನಾನು ಅಪ್ಪನ ಮಾತನ್ನು ನಂಬುತ್ತೇನೆ."
ಈ ಇಬ್ಬರಲ್ಲಿ ಯಾರು ಸರಿ - ತನ್ನ ತಂದೆಯನ್ನು ನಂಬಿದವನೋ ಅಥವಾ ತಾನು ನೋಡಿದ್ದನ್ನು ಮತ್ತು ಅನುಭವಿಸಿದ್ದನ್ನು ನಂಬಿದವನೋ? ಇಂದು ಅನೇಕ ಕ್ರೈಸ್ತರು ಸಹ ತಾವು ನೋಡುವ ಮತ್ತು ಅನುಭವಿಸುವ ವಿಷಯಗಳ ಮೂಲಕ ಬದುಕುತ್ತಾರೆ. ಆದರೆ ನಮ್ಮ ಇಂದ್ರಿಯಗಳೂ ನಮ್ಮನ್ನು ಮೋಸಗೊಳಿಸಬಹುದು. ಆದ್ದರಿಂದ ನಾನು ನನ್ನ ಪರಲೋಕದ ತಂದೆಯನ್ನು ನಂಬುತ್ತೇನೆ; ನಾನು ನೋಡಲು ಅಥವಾ ಅನುಭವಿಸಲು ಸಾಧ್ಯವಾಗದಿದ್ದರೂ ಸಹ, ತಂದೆಯ ಮಾತು ಯಾವಾಗಲೂ ಸರಿಯಾಗಿರುತ್ತದೆ.
ಆದ್ದರಿಂದ ದೇವರು ಹೇಳುವುದನ್ನು ನಾನು ನಂಬುತ್ತೇನೆ, ಅಂದರೆ, ಕ್ರಿಸ್ತ ಯೇಸುವಿನಲ್ಲಿರುವ ನನ್ನನ್ನು ಆತನೊಂದಿಗೆ ಎಬ್ಬಿಸಿ ಪರಲೋಕದಲ್ಲಿ ಆತನೊಂದಿಗೆ ಕೂಡ್ರಿಸಿದ್ದಾರೆ. ನನ್ನ ಭಾವನೆಗಳು ನನಗೆ ಏನು ಹೇಳುತ್ತವೆ ಎಂಬುದನ್ನು ನಾನು ಲೆಕ್ಕಿಸುವುದಿಲ್ಲ. ನನ್ನ ಭಾವನೆಗಳು ನನ್ನ ದೃಷ್ಟಿಯಂತೆಯೇ ನನ್ನನ್ನು ಮೋಸಗೊಳಿಸುತ್ತವೆ ಎಂಬುದು ನನಗೆ ತಿಳಿದಿದೆ. ನನ್ನ ಪರಲೋಕದ ತಂದೆ ಹೇಳುವುದನ್ನು ನಾನು ನಂಬಿದಾಗ, ನನ್ನ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗಿ ನಡೆಯುತ್ತವೆ, ಎಂಬುದನ್ನು ನಾನು ಕಂಡುಕೊಂಡಿದ್ದೇನೆ. ನಾವು ನಮ್ಮ ಪರಲೋಕದ ತಂದೆಯ ಮಾತನ್ನು ನಂಬದಿದ್ದಾಗ, ನಮಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಈ ಅದ್ಭುತವಾದ ಪುನರುತ್ಥಾನದ ಬಲವು ಎಲ್ಲಾ ಮನುಷ್ಯರಿಗೆ ಲಭ್ಯವಿಲ್ಲ, ಆದರೆ ನಂಬುವವರಿಗೆ ಮಾತ್ರ, ಎಂದು ಇಲ್ಲಿ ನಮಗೆ ತಿಳಿಸಲಾಗಿದೆ. ನೀವು ಇದನ್ನು ನಂಬದಿದ್ದರೆ, ನೀವು ಈ ಬಲವನ್ನು ಅನುಭವಿಸಲು ಸಾಧ್ಯವಿಲ್ಲ. ಯೇಸು ಸ್ವಾಮಿ ತೋಮನಿಗೆ, "ನೋಡದೆ ನಂಬಿದವರು ಧನ್ಯರು" (ಯೋಹಾ. 20:29). ಎಂದು ಹೇಳಿದರು. ನಾನೂ ಅವರಲ್ಲಿ ಒಬ್ಬನು.