WFTW Body: 

ಆದಿಕಾಂಡ 13:7 ರಲ್ಲಿ, ಅಬ್ರಹಾಮನ ಸೇವಕರು ಮತ್ತು ಲೋಟನ ಸೇವಕರ ನಡುವೆ ಜಗಳವಿತ್ತು ಎಂದು ನಾವು ಓದುತ್ತೇವೆ. ಅಬ್ರಹಾಮ ಮತ್ತು ಲೋಟ ಇವರಿಬ್ಬರೂ ಐಗುಪ್ತ ದೇಶಕ್ಕೆ ಹೋಗಿ ಅಪಾರ ಸಂಪತ್ತನ್ನು ಗಳಿಸಿದರು ಮತ್ತು ಆ ಸಂಪತ್ತಿನಿಂದಾಗಿ ಸಮಸ್ಯೆಗಳು ತಲೆದೋರಿದವು. ಸಂಪತ್ತು ಯಾವಾಗಲೂ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಲೋಟನು ಮತ್ತು ಅವನ ಹೆಂಡತಿಯು ಐಗುಪ್ತ ದೇಶದಲ್ಲಿ ನೋಡಿದವುಗಳಿಂದ ಪ್ರಭಾವಿತರಾದರು. ಅವರು ಹೆಚ್ಚಿನ ಸಂಪತ್ತಿಗಾಗಿ ತವಕಿಸಿದರು. ಆದರೆ ಅಬ್ರಹಾಮನು ಯಾರೊಂದಿಗೂ ಜಗಳವಾಡುವ ವ್ಯಕ್ತಿಯಾಗಿರಲಿಲ್ಲ. ಆದಾಗ್ಯೂ ಅವನ ಸೇವಕರು ಜಗಳವಾಡಿದರು.

"ಅಬ್ರಹಾಮನ ದನಕಾಯುವವರು ಮತ್ತು ಲೋಟನ ದನಕಾಯುವವರ ನಡುವೆ ಜಗಳಗಳು ನಡೆಯುತ್ತಿದ್ದವು. ಆ ಪ್ರದೇಶದಲ್ಲಿ ಕಾನಾನ್ಯರು ಮತ್ತು ಪೆರಿಜೀಯರು ವಾಸವಾಗಿದ್ದರು." ಈ ವಚನದಲ್ಲಿ ಈ ಕೊನೆಯ ವಾಕ್ಯವು ಏಕೆ ಸೇರಿಸಲ್ಪಟ್ಟಿದೆ? ಏಕೆಂದರೆ ಇವರು ಜಗಳಾಡುತ್ತಿದ್ದುದನ್ನು ಈ ಅನ್ಯಜನರು ಗಮನಿಸುತ್ತಿದ್ದರು. ಇದು ಇಂದು ಕ್ರೈಸ್ತರ ಮಧ್ಯೆ ಇರುವ ಪರಿಸ್ಥಿತಿಗೆ ಸರಿಯಾಗಿ ಅನ್ವಯಿಸುತ್ತದೆ. ನಮ್ಮ ಸುತ್ತಲೂ ಅನ್ಯಜನರು ವಾಸವಾಗಿದ್ದಾರೆ ಮತ್ತು ಅವರು ನಮ್ಮಲ್ಲಿ ಏನನ್ನು ಕಾಣುತ್ತಾರೆ? ಕ್ರೈಸ್ತರ ಪಂಗಡಗಳ ನಡುವೆ ವಿವಾದಗಳು ನಡೆಯುತ್ತಿರುತ್ತವೆ. ಹಾಗಿರುವಾಗ, ಇವರೆಲ್ಲರ ನಡುವೆ ಅಬ್ರಹಾಮನಂತಹ ಒಬ್ಬ ದೇವಭಯವುಳ್ಳ ವ್ಯಕ್ತಿಯು ಲೋಟನನ್ನು (ಹಣದಾಶೆಯುಳ್ಳ ಒಬ್ಬ ಲೌಕಿಕ ವ್ಯಕ್ತಿ) ಉದ್ದೇಶಿಸಿ, "ನಮ್ಮಿಬ್ಬರ ನಡುವೆ ಜಗಳ ಬೇಡ, ನಾವು ಸಹೋದರರಲ್ಲವೇ?"(ಆದಿಕಾಂಡ 13:8) ಎಂದು ಹೇಳುವುದನ್ನು ನಾವು ಇಂದು ಕಾಣತ್ತೇವೆಯೇ? ವಾಸ್ತವವಾಗಿ ಅವರು ಸಹೋದರರಾಗಿರಲಿಲ್ಲ. ಅಬ್ರಹಾಮನು ಚಿಕ್ಕಪ್ಪನಾಗಿದ್ದನು ಮತ್ತು ಲೋಟನು ಅವನ ಸೋದರಳಿಯನಾಗಿದ್ದನು. 75ರ ವಯಸ್ಸಿನ ಈ ವ್ಯಕ್ತಿಯು ತನ್ನ 35 ವಯಸ್ಸಿನ ಸೋದರಳಿಯನಿಗೆ ತೋರಿಸಿದ ಸೌಜನ್ಯತೆಯನ್ನು ನೋಡಿರಿ. "ನಾವು ಸಹೋದರರು!" ಒಬ್ಬ ದೈವಿಕ ಮನುಷ್ಯನು ದೀನ ಮನುಷ್ಯನಾಗಿರುತ್ತಾನೆ. ಅವನಿಗೆ 75 ವರ್ಷ ವಯಸ್ಸಾಗಿತ್ತು, ಆದರೆ ಅವನು ತನ್ನ ಯುವ ಸೋದರಳಿಯನನ್ನು ಉದ್ದೇಶಿಸಿ, "ನಾವು ಸಹೋದರರು. ನೀನು ನನಗೆ ಸಮಾನನು. ನಾನು ನಿನಗೆ ಮೊದಲು ಆಯ್ಕೆ ಮಾಡುವ ಅವಕಾಶವನ್ನು ನೀಡುತ್ತೇನೆ. ನಿನಗೆ ಬೇಕಾದುದನ್ನು ಆಯ್ಕೆ ಮಾಡಿಕೋ," ಎಂದು ಹೇಳುವಂತ ಮನಸ್ಸಿತ್ತು. ಯೆರೂಸಲೇಮ್ ಕಟ್ಟಲ್ಪಡುವುದು ಇಂತಹ ಮನುಷ್ಯರಿಂದ. ಕ್ರೈಸ್ತರಲ್ಲಿ ಇಂತಹ ನಾಯಕರ ಅವಶ್ಯಕತೆಯಿದೆ; ಇಂಥವರನ್ನು ಕಂಡುಕೊಳ್ಳುವುದು ಸುಲಭವಲ್ಲ.

"ನಾನು 75 ವರ್ಷ ವಯಸ್ಸಿನವನು, ನಾನು ನಿನ್ನ ಚಿಕ್ಕಪ್ಪ. ದೇವರು ನನ್ನನ್ನು ಕರೆದಿದ್ದಾರೆ, ನಿನ್ನನ್ನಲ್ಲ. ನೀನು ಕೇವಲ ನನ್ನೊಂದಿಗೆ ಬಂದವನು, ಅಷ್ಟೆ,"ಎಂದು ಹೇಳಿ ತಮ್ಮ ಅಧಿಕಾರವನ್ನು ಪ್ರತಿಪಾದಿಸುವ ಅನೇಕ ನಾಯಕರನ್ನು ಇಂದು ನಾವು ಕಾಣುತ್ತೇವೆ . ಆದರೆ ಅಬ್ರಹಾಮನು ಲೋಟನಿಗೆ ಇಂತಹ ಮಾತನ್ನು ಹೇಳಲಿಲ್ಲ. ಅವನು ಲೋಟನಿಗೆ, "ನೀನು ಬಲಕ್ಕೆ ಹೋದರೆ, ನಾನು ಎಡಕ್ಕೆ ಹೋಗುತ್ತೇನೆ ಮತ್ತು ನೀನು ಎಡಕ್ಕೆ ಹೋದರೆ, ನಾನು ಬಲಕ್ಕೆ ಹೋಗುತ್ತೇನೆ. ನಿನಗೆ ಬೇಕಾದುದನ್ನು ಮೊದಲು ತೆಗೆದುಕೋ" ಎಂದನು. ಒಡನೆಯೇ ದುರಾಸೆಯುಳ್ಳಾತನೂ, ಬಾಬಿಲಿನ ಆತ್ಮವನ್ನು ಹೊಂದಿದವನೂ ಆಗಿದ್ದ ಲೋಟನು ತನಗೆ ಬೇಕಾದುದನ್ನು ಆರಿಸಿಕೊಂಡನು. ಅವನು ಸೊದೋಮಿನ ಫಲವತ್ತಾದ ಹೊಲಗಳನ್ನು ಮತ್ತು ಅಲ್ಲಿ ವಾಸಿಸುತ್ತಿದ್ದ ಶ್ರೀಮಂತರನ್ನು ಕಂಡನು ಮತ್ತು ಅಲ್ಲಿ ಸಂಪತ್ತನ್ನು ಗಳಿಸುವ ಅವಕಾಶವನ್ನು ಗಮನಿಸಿ, "ನಾನು ಅಲ್ಲಿಗೆ ಹೋಗುತ್ತೇನೆ ಮತ್ತು ಅಲ್ಲಿಯೇ ದೇವರ ಸೇವೆಯನ್ನೂ ಸಹ ಮಾಡುತ್ತೇನೆ," ಎಂದನು.

"ಜನರ ನಡುವೆ ನಡೆಯುವ ಪ್ರತಿಯೊಂದು ವ್ಯವಹಾರವನ್ನು ದೇವರು ಗಮನಿಸುತ್ತಾರೆಂದು ನಿಮಗೆ ತಿಳಿದಿದೆಯೇ? ನಮ್ಮ ಹೃದಯದ ಭಾವನೆಗಳನ್ನು ಅವರು ಗಮನಿಸುತ್ತಾರೆ"

ಅನೇಕ ಕೈಸ್ತರು ಮತ್ತು ಕೈಸ್ತ ನಾಯಕರು ಶ್ರೀಮಂತ ದೇಶಗಳಿಗೆ ವಲಸೆ ಹೋಗಲು ಇಷ್ಟಪಡುತ್ತಾರೆ. ಆದರೆ ನಿಶ್ಚಯವಾಗಿ ಅವರು ಆತ್ಮಿಕ ನಷ್ಟವನ್ನು ಅನುಭವಿಸುತ್ತಾರೆ. ಅಬ್ರಹಾಮನು ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಾಗ, ಇವರಿಬ್ಬರ ನಡವಳಿಕೆಯನ್ನು ನೋಡಲು ಕರ್ತರು ಇಳಿದು ಬಂದಿದ್ದರು (ಹಿಂದೆ ಬಾಬೆಲ್‌ನಲ್ಲಿ ನಡೆದಂತೆ). ಆಗ ಅಬ್ರಹಾಮನು ದೇವಭಕ್ತಿಯಿಂದ ನಡೆದುಕೊಂಡ ರೀತಿಯನ್ನು ಕರ್ತರು ನೋಡಿದರು. ಲೋಟನು ಅಬ್ರಹಾಮನನ್ನು ಬಿಟ್ಟುಹೋದ ತಕ್ಷಣ ಕರ್ತರು ಅಬ್ರಹಾಮನಿಗೆ ಒಂದು ಬಹಳ ಮುಖ್ಯವಾದ ವಿಷಯವನ್ನು ತಿಳಿಸಿದರು (ಆದಿಕಾಂಡ 13:14).

ದೇವರು ಅಬ್ರಹಾಮನನ್ನು ಮೊದಲು ಆತನ ತಂದೆಯಿಂದ (ಮರಣದ ಮೂಲಕ) ಪ್ರತ್ಯೇಕಿಸಿದರು, ಮತ್ತು ಅನಂತರ ಮತ್ತೊಬ್ಬ (ತನ್ನ ದುರಾಸೆಯ ಮೂಲಕ ಅಡ್ಡಿಯಾಗುತ್ತಿದ್ದ) ಸಂಬಂಧಿಕನಿಂದ ಆತನನ್ನು ಬೇರ್ಪಡಿಸಿದರು. ಆಗ ಕರ್ತರು ಆತನಿಗೆ, "ಈಗ ನೀನು ಒಬ್ಬಂಟಿಯಾಗಿದ್ದೀಯ ಮತ್ತು ಈಗ ನೀನು ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗುವಂತೆ ಮತ್ತು ನೀನು ಏನು ಮಾಡಬೇಕೋ ಅದನ್ನು ಮಾಡುವಂತೆ ನಾನು ನಿನ್ನನ್ನು ನಡೆಸಬಲ್ಲೆನು. ನಡೆದ ಎಲ್ಲಾ ಸಂಗತಿಗಳನ್ನು ನಾನು ನಿಖರವಾಗಿ ನೋಡಿದೆನು," ಎಂದರು. ಜನರ ನಡುವೆ ನಡೆಯುವ ಪ್ರತಿಯೊಂದು ವ್ಯವಹಾರವನ್ನು ದೇವರು ನೋಡುತ್ತಾರೆಂದು ನಿಮಗೆ ತಿಳಿದಿದೆಯೇ? ಅವರು ನಮ್ಮ ಹೃದಯದ ಆಲೋಚನೆಗಳನ್ನು ಗಮನಿಸುತ್ತಾರೆ. ಕೈಸ್ತರಾಗಿರುವ ನೀವು ನಿಮ್ಮ ಯಾವುದೋ ಹಕ್ಕನ್ನು ಬಿಟ್ಟುಕೊಟ್ಟಿದ್ದೀರಾ? ದೇವರು ನಿಮಗೆ, "ನಾನು ಅದನ್ನು ಗಮನಿಸಿದ್ದೇನೆ" ಎಂದು ಹೇಳುತ್ತಾರೆ.

ನಂತರ ದೇವರು ಅಬ್ರಹಾಮನಿಗೆ, "ನೀನು ನಿಂತುಕೊಂಡು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮಗಳನ್ನು ನೋಡು. ನಿನ್ನ ಕಣ್ಣಿಗೆ ಕಾಣಿಸುವ ಸಮಸ್ತ ಭೂಮಿಯು ಒಂದು ದಿನ ನಿನ್ನ ಮಕ್ಕಳ ಪಾಲಿಗೆ ಸೇರುತ್ತದೆ. ನಾನು ನಿನಗೆ ಈ ವಾಗ್ದಾನವನ್ನು ನೀಡುತ್ತೇನೆ. ಲೋಟನ ವಂಶಸ್ಥರಿಗೆ ಅದು ಸೇರುವುದಿಲ್ಲ," ಎಂದು ಹೇಳಿದರು. 4000 ವರ್ಷಗಳ ಹಿಂದೆ ದೇವರು ಅಬ್ರಹಾಮನಿಗೆ ಈ ಮಾತನ್ನು ಹೇಳಿದರು. ಇಂದು 4000 ವರ್ಷಗಳ ನಂತರ ಆ ಪ್ರದೇಶವನ್ನು ನೋಡಿ ಮತ್ತು ಅಲ್ಲಿ ಯಾರು ವಾಸಿಸುತ್ತಿದ್ದಾರೆ, ಎಂದು ನಿಮ್ಮನ್ನೇ ಪ್ರಶ್ನಿಸಿಕೊಳ್ಳಿರಿ. ಅಲ್ಲಿರುವವರು ಅಬ್ರಹಾಮನ ವಂಶಸ್ಥರು, ಲೋಟನ ವಂಶಸ್ಥರಲ್ಲ. ದೇವರು ತನ್ನ ಮಾತನ್ನು ಉಳಿಸಿಕೊಳ್ಳುತ್ತಾರೆ. ದೇವರು ಅಬ್ರಹಾಮನಿಗೆ, "ನಾನು ಈ ದೇಶವನ್ನೆಲ್ಲಾ ನಿನ್ನ ಸಂತತಿಗೆ ಶಾಶ್ವತವಾಗಿ ಕೊಡುವೆನು,"(ಆದಿಕಾಂಡ 13:15) ಎಂದು ಹೇಳಿದ್ದರೆ, ಸಾವಿರಾರು ವರ್ಷಗಳು ನಂತರವೂ ನಿಖರವಾಗಿ ಹಾಗೆಯೇ ನಡೆದಿರುತ್ತದೆ.

ಅನಂತರ ನಾವು ಆದಿಕಾಂಡ 14ನೇ ಅಧ್ಯಾಯದಲ್ಲಿ, ಲೋಟನು ಹೇಗೆ ಕಷ್ಟಗಳಲ್ಲಿ ಸಿಕ್ಕಿಕೊಂಡನು ಎಂಬುದಾಗಿ ನೋಡುತ್ತೇವೆ. ನಾವು ದೇವರ ಚಿತ್ತಕ್ಕೆ ಹೊರತಾಗಿ ನಡೆದರೆ, ನಿಶ್ಚಯವಾಗಿ ಕಷ್ಟಗಳಿಗೆ ಒಳಗಾಗುತ್ತೇವೆ. ಲೋಟನು ಅವನ ಶತ್ರುಗಳ ಕೈಯಲ್ಲಿ ಸಿಕ್ಕಿಬಿದ್ದನು. ಅದನ್ನು ನೋಡಿ ಅಬ್ರಹಾಮನು, "ಅವನು ನನ್ನಿಂದ ಕಸಿದುಕೊಂಡನು, ಅವನಿಗೆ ಸರಿಯಾಗಿಯೇ ಆಯಿತು," ಎಂದು ಹೇಳಬಹುದಾಗಿತ್ತು. ಆದರೆ ಅಬ್ರಹಾಮನು ಈ ರೀತಿಯಾಗಿ ಯೋಚಿಸಲಿಲ್ಲ. ಅಲ್ಲಿ ಅಬ್ರಹಾಮನು ಇನ್ನೊಂದು ಸಾರಿ ಶೋಧಿಸಲ್ಪಟ್ಟದ್ದನ್ನು ನಾವು ನೋಡುತ್ತೇವೆ: ತನ್ನನ್ನು ವಂಚಿಸಿದ ವ್ಯಕ್ತಿಯು ತೊಂದರೆಗೆ ಸಿಲುಕಿದ ವಿಷಯವನ್ನು ಅರಿತಾಗ ಅಬ್ರಹಾಮನ ಮನಸ್ಸಿನ ಆಲೋಚನೆ ಏನಾಗಿತ್ತು? ಒಂದು ವೇಳೆ ನಿಮ್ಮನ್ನು ವಂಚಿಸಿದ ಒಬ್ಬ ವ್ಯಕ್ತಿಯು ಸ್ವತಃ ತೊಂದರೆಯಲ್ಲಿ ಸಿಕ್ಕಿಕೊಂಡಾಗ, ನಿಮ್ಮ ಪ್ರತಿಕ್ರಿಯೆಯ ಮೂಲಕ ನೀವು ದೇವಮನುಷ್ಯನೋ, ಅಲ್ಲವೋ, ಎಂಬುದನ್ನು ಒಡನೆಯೇ ಕಂಡುಕೊಳ್ಳುತ್ತೀರಿ.

ಅಬ್ರಹಾಮನ ಪ್ರತಿಕ್ರಿಯೆ ಏನಾಗಿತ್ತೆಂದರೆ, "ನಾನು ಹೋಗಿ ಲೋಟನಿಗೆ ಸಹಾಯ ಮಾಡುತ್ತೇನೆ. ಲೋಟನು ನನ್ನನ್ನು ವಂಚಿಸಿದ್ದು ನಿಜ. ಆದರೆ ಅವನು ನನ್ನಿಂದ ಏನನ್ನು ಕಿತ್ತುಕೊಂಡನು? ಲೌಕಿಕ ಸಂಪತ್ತೆಂಬ ಕಸವನ್ನು ಮಾತ್ರ. ಅದು ಶೂನ್ಯಕ್ಕೆ ಸಮನಾದದ್ದು. ನಾನು ಪರಲೋಕದ ಐಶ್ವರ್ಯವನ್ನು ಹೊಂದಿದ್ದೇನೆ. ಲೋಟನು ಲೌಕಿಕ ಸಂಗತಿಗಳಿಗಾಗಿ ತವಕಿಸಿದ್ದಕ್ಕಾಗಿ ನಾನು ದುಃಖಿಸುತ್ತೇನೆ, ಮತ್ತು ಈಗ ಅವನು ಕಷ್ಟದಲ್ಲಿ ಸಿಕ್ಕಿಕೊಂಡಿದ್ದಾನೆ. ಈಗ ನಾನು ಅವನ ಸಹಾಯಕ್ಕಾಗಿ ಹೋಗುತ್ತೇನೆ." ಇದರ ನಂತರ ಅಬ್ರಹಾಮನು ಹೋಗಿ ಸ್ವತಃ ತಾನೇ ಲೋಟನನ್ನು ಬಿಡಿಸಿದನು. ಅದು ದೇವಭಕ್ತಿಯುಳ್ಳ ಮನುಷ್ಯನ ಆಲೋಚನೆಯಾಗಿರುತ್ತದೆ. ಕೇವಲ ಇಂತಹ ಜನರು ಮಾತ್ರ ಯೆರೂಸಲೇಮನ್ನು ಕಟ್ಟಬಹುದು.