WFTW Body: 

ಮುಂದಿನ ದಿನಗಳಲ್ಲಿ ದೇವರು ನಿಮಗಾಗಿ ಒಂದು ಸೇವೆಯನ್ನು ಇರಿಸಿದ್ದಾರೆ, ಆದ್ದರಿಂದ ನೀವು ಇದಕ್ಕಾಗಿ ನಿಮ್ಮನ್ನು ಸಿದ್ಧಪಡಿಸಿಕೊಳ್ಳುವುದಕ್ಕಾಗಿ, ನಿಮ್ಮಲ್ಲಿ ದೀನತೆಯನ್ನು ಕಾಪಾಡಿಕೊಳ್ಳಿರಿ, ಯಾವುದೇ ಪರಿಸ್ಥಿತಿಯಲ್ಲಿ ನೀವೇ ಸರಿಯೆಂದು ಹಠ ಹಿಡಿಯಬೇಡಿರಿ, ನಿರಂತರವಾಗಿ ದೇವರ ಸಹಾಯಕ್ಕಾಗಿ ಮೊರೆಯಿಡಿರಿ, ಮತ್ತು ನಿಮ್ಮ ಜೀವನದ ಎಲ್ಲಾ ಕಪಟತನವನ್ನು ದ್ವೇಷಿಸಿರಿ.

ಪರಿಶುದ್ಧತೆ ಅಥವಾ ಶುದ್ಧೀಕರಣವನ್ನು ಹಂಬಲಿಸುವ ಪ್ರತಿಯೊಬ್ಬ ವ್ಯಕ್ತಿಗೆ ಫರಿಸಾಯಿತನ ಮತ್ತು ಆತ್ಮಿಕ ಗರ್ವ ಬಹಳ ಹತ್ತಿರವಿರುತ್ತದೆ. ಈ ಅವಳಿ ಕೆಡುಕುಗಳು ಯಾವುದೇ ಒಂದು ರೀತಿಯ ಜನರ ಗುಂಪಿನಲ್ಲಿ ಮಾತ್ರ ಇರುತ್ತವೆಂದು ಹೇಳಲು ಆಗುವುದಿಲ್ಲ. ಈ ಕೆಡುಕುಗಳು ನಮ್ಮಲ್ಲಿ ಯಾರಿಂದಲೂ ಹೆಚ್ಚು ದೂರವಿರುವುದಿಲ್ಲ. ಇವುಗಳನ್ನು ಇತರರಲ್ಲಿ ನೋಡುವುದು ಸುಲಭ, ಆದರೆ ಸ್ವತಃ ನಮ್ಮಲ್ಲೇ ಇವನ್ನು ಕಾಣುವುದು ಬಹಳ ಕಷ್ಟವೆಂದು ನಾನು ಕಂಡುಕೊಂಡಿದ್ದೇನೆ. ಧಾರ್ಮಿಕ ಸ್ವಭಾವದ ಯುವಜನರಲ್ಲಿ ಹೊರತೋರಿಕೆಯ ನಡವಳಿಕೆ ಹೆಚ್ಚಾಗಿ ಕಂಡುಬರುತ್ತದೆ, ಮತ್ತು ಇದು ಆತ್ಮಿಕ ಬೆಳವಣಿಗೆಯನ್ನು ಸಾಯಿಸುತ್ತದೆ.

ನೀವು ವಿವಿಧ ಕ್ಷೇತ್ರಗಳಲ್ಲಿ ನೀತಿವಂತಿಕೆಗಾಗಿ ಶ್ರಮಿಸುತ್ತಿರುವಾಗ ಪಾಪವನ್ನು "ಸಂಪೂರ್ಣವಾಗಿ" ಸಾಯಿಸುವ ಪ್ರಯತ್ನವನ್ನು ನಿಲ್ಲಿಸಬಾರದು. ನೀವು ಮೇಲ್ನೋಟದ ಜಯದಲ್ಲಿ ಸಂತೋಷಪಡಬಾರದು. ಎಲ್ಲಾ ರೀತಿಯ ಆಸೆಗಳನ್ನು ಒಂದು ಈರುಳ್ಳಿಗೆ ಹೋಲಿಸಬಹುದು. ನಿಮ್ಮ ಮೇಲ್ನೋಟಕ್ಕೆ ಕಾಣಿಸುವ ಹೊರಪದರಿನ ಕೆಳಗೆ ಇನ್ನೂ ಅನೇಕ ಪದರುಗಳಿವೆ. ಮೇಲೆ ಕಾಣಿಸುವ ಪದರವನ್ನು ತೆಗೆದುಹಾಕಲು ನೀವು ಉಗ್ರ ಪ್ರಯತ್ನ ಮಾಡದಿದ್ದರೆ, ನಿಮಗೆ ಅದರ ಕೆಳಗಿನ ಪದರ ಕಣ್ಣಿಗೆ ಬೀಳುವುದೇ ಇಲ್ಲ.

ಪರಿಶುದ್ಧತೆಯು ಜೀವನಪರ್ಯಂತ ನಡೆಯುವಂತ ಹಾಗೂ ನಾವು ಯೇಸುವಿನ ಸಾರೂಪ್ಯಕ್ಕೆ ಬದಲಾಗುವಂತ ಪ್ರಕ್ರಿಯೆಯಾಗಿದೆ. ಉದಾಹರಣೆಗೆ, ಹೆಣ್ಣುಮಕ್ಕಳನ್ನು ಯೇಸುವು ನೋಡಿದ ರೀತಿಯಲ್ಲಿ ನೋಡುವುದು, ಹಣವನ್ನು ಮತ್ತು ಲೌಕಿಕ ವಸ್ತುಗಳನ್ನು ಯೇಸುವು ನಿರ್ವಹಿಸಿದ ರೀತಿಯಲ್ಲಿ ನಿರ್ವಹಿಸುವುದು, ಶತ್ರುಗಳ ಬಗ್ಗೆ ಯೇಸುವಿನಲ್ಲಿದ್ದ ಮನೋಭಾವವನ್ನು ನಾವು ಸಹ ಇರಿಸಿಕೊಳ್ಳುವುದು, ಇತ್ಯಾದಿ. ಈ ಗುರಿಯನ್ನು ಸಾಧಿಸುವುದಕ್ಕೆ ಇಡೀ ಜೀವಿತ ಬೇಕಾಗುತ್ತದೆ. ಆದರೆ ನೀವು ಇದಕ್ಕಾಗಿ ಶ್ರಮಿಸಬೇಕು. ನಾವು ಈ ಕೆಳಗಿನ ವಚನಗಳಲ್ಲಿ ಇದನ್ನೇ ನೋಡುತ್ತೇವೆ: "ನಾವು ಪರಿಪೂರ್ಣವಾದ ತಿಳುವಳಿಕೆಗೆ ಸಾಗುತ್ತಾ ಹೋಗೋಣ" (ಇಬ್ರಿ. 6:2), ಮತ್ತು "ಯೇಸುವಿನ ಸ್ವರೂಪವನ್ನು ಹೊಂದುವ ನಿರೀಕ್ಷೆ ಹೊಂದಿರುವಾತನು, ಕ್ರಿಸ್ತನು ಶುದ್ಧನಾಗಿರುವಂತೆಯೇ ತನ್ನನ್ನು ಶುದ್ಧ ಮಾಡಿಕೊಳ್ಳುತ್ತಾನೆ"(1 ಯೋಹಾ 3:3), ಮತ್ತು "ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು, ದೇವರು ಕ್ರಿಸ್ತನ ಮೂಲಕವಾಗಿ ನಮ್ಮ ಮುಂದೆ ಇಟ್ಟಿರುವ ಉನ್ನತ ಕರೆಯ ಬಹುಮಾನವನ್ನು ಗುರಿ ಮಾಡಿಕೊಂಡು ಓಡುತ್ತಿದ್ದೇನೆ" (ಫಿಲಿ. 3:13,14). ನೀವು ಈ ಹೋರಾಟವನ್ನು ಕೈಬಿಟ್ಟರೆ, ಆಗ ವೈರಿಯಾದ ಸೈತಾನನು ಮೇಲುಗೈ ಸಾಧಿಸುತ್ತಾನೆ. ಇದಕ್ಕೆ ಬದಲಾಗಿ, ನೀವು ನಿರಂತರವಾಗಿ ಮತ್ತು ರಹಸ್ಯವಾಗಿ "ಶರೀರದಲ್ಲಿ ಬಾಧೆಪಡುವುದನ್ನು ಅಭ್ಯಾಸಿಸಿದರೆ" (ಅಂದರೆ, ನಿಮ್ಮ ಸ್ವಚಿತ್ತವನ್ನು ಮರಣಕ್ಕೆ ಒಳಪಡಿಸಿದರೆ), ಆಗ ನೀವು ಪಾಪ ಮಾಡುವುದನ್ನು ನಿಲ್ಲಿಸುವಿರಿ, ಎಂದು '1 ಪೇತ್ರ 4:1,2'ರ ವಚನಗಳು ಹೇಳುತ್ತವೆ.

ನಿಮ್ಮ ಶೋಧನೆಗಳು ಬೇರೆ ಯಾರಿಗೂ ಬಂದಿಲ್ಲ ಎಂಬುದಾಗಿ ಎಂದಿಗೂ ಭಾವಿಸದಿರಿ. ಸೈತಾನನ ಈ ಸುಳ್ಳನ್ನು ನಂಬಬೇಡಿರಿ, ಏಕೆಂದರೆ ನೀವು ಹಾಗೆ ಮಾಡಿದರೆ ನಿರಾಶೆಗೆ ಒಳಗಾಗುತ್ತೀರಿ.

'1ಕೊರಿಂಥದವರಿಗೆ 10:13'ಈ ವಚನದಲ್ಲಿ (Good News Bible ಮತ್ತು Living Bible ಆವೃತ್ತಿಗಳಲ್ಲಿ) ಹೀಗೆ ಹೇಳಲಾಗಿದೆ: "ನೀನು ಎದುರಿಸುವ ಪ್ರತಿಯೊಂದು ಶೋಧನೆಯೂ ಎಲ್ಲಾ ಮನುಷ್ಯರಿಗೆ ಸಂಭವಿಸುವ ಶೋಧನೆಯೇ ಹೊರತು ಬೇರೇನೂ ಅಲ್ಲ. ಆದರೆ ದೇವರು ನಂಬಿಗಸ್ತರು; ಅವರು ನಿನಗೆ ಸಹಿಸಲು ಅಸಾಧ್ಯವಾದ ಶೋಧನೆಯನ್ನು ಬರಗೊಡಿಸದೆ, ನಿನ್ನ ಶೋಧನೆಯ ಕ್ಷಣದಲ್ಲಿ ಅದನ್ನು ಗೆಲ್ಲುವಂತ ಬಲವನ್ನು (ಕೃಪೆಯನ್ನು) ನಿನಗೆ ದಯಪಾಲಿಸುವರು ಮತ್ತು ಈ ರೀತಿಯಾಗಿ ಅದರ ಹಿಡಿತದಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ನಿನಗೆ ತೋರಿಸುವರು. ಯಾವ ಶೋಧನೆಯೂ ಮಿತಿಮೀರಿದ್ದಲ್ಲ."

ಸಕಲ ಮಾನವ ಜನಾಂಗವೂ ಮೂಲತಃ ಒಂದೇ ವಿಧವಾದ ಶೋಧನೆಗೆ ಒಳಪಡುತ್ತದೆ - ಅದು ಸ್ವಚಿತ್ತದ ಪ್ರಕಾರ ನಡೆಯುವಂತದ್ದು. ಪಾಪವು ಒಂದು ದೊಡ್ಡ ವೃತ್ತವಾಗಿದೆ, ಮತ್ತು ಅದರಲ್ಲಿ ಹಲವಾರು ಕ್ಷೇತ್ರಗಳು ಇರುತ್ತವೆ. ಆದರೆ ಪ್ರತಿಯೊಂದು ಶೋಧನೆಯಲ್ಲೂ ಮೂಲತಃ ಒಂದು ಸಾಮಾನ್ಯ ಅಂಶವಿದೆ - ಸ್ವಚಿತ್ತವನ್ನು ಅನುಸರಿಸುವುದು ಮತ್ತು ದೇವರ ಚಿತ್ತವನ್ನು ಕಡೆಗಣಿಸುವುದು - ಅದು ಸುಳ್ಳು ಹೇಳುವುದು ಆಗಿರಬಹುದು, ಕೋಪಗೊಳ್ಳುವುದು ಇರಬಹುದು, ಯಾರನ್ನೋ ಹಗೆ ಮಾಡುವುದು, ಅಥವಾ ಗೊಣಗುಟ್ಟುವುದು, ಜಾರತ್ವ, ಅಥವಾ ಇನ್ಯಾವುದೋ ಪಾಪ ಇರಬಹುದು. ಯೇಸುವು ಸಹ ತನ್ನ ಸ್ವ-ಚಿತ್ತವನ್ನು ಮಾಡುವಂತೆ ಶೊಧಿಸಲ್ಪಟ್ಟರು. ಆದರೆ ಆತನು ದೇವರ ಸಹಾಯವನ್ನು ಯಾಚಿಸುವುದರ ಮೂಲಕ ಆ ಶೋಧನೆಯನ್ನು ವಿರೋಧಿಸಿದನು (ಇಬ್ರಿ. 5:7), ಮತ್ತು ಆತನು ಪಾಪವನ್ನು ಮಾತ್ರ ಮಾಡಲೇ ಇಲ್ಲ (ಯೋಹಾ. 6:38). ಈಗ ನಾವೆಲ್ಲರೂ ಆತನ ಉದಾಹರಣೆಯನ್ನು ಅನುಸರಿಸಬಹುದು.

ಆದುದರಿಂದ ವಿವಿಧ ಪಾಪಗಳು ಒಂದಕ್ಕಿಂತ ಒಂದು ವಿಭಿನ್ನವೆಂದೂ, ಅವುಗಳು ಪರಸ್ಪರ ಸಂಬಂಧಿಸಿಲ್ಲವೆಂದೂ ಅಂದುಕೊಳ್ಳಬೇಡಿ. ಕೆಲವರು ಒಂದು ರೀತಿಯಲ್ಲಿ ಶೋಧಿಸಲ್ಪಟ್ಟರೆ, ಇನ್ನು ಕೆಲವರು ಬೇರೊಂದು ಪಾಪದ ಮೂಲಕ ಶೋಧಿಸಲ್ಪಡುತ್ತಾರೆ. ಆದರೆ ಎಲ್ಲಾ ಸಂದರ್ಭದಲ್ಲೂ, ಪಾಪ ಮಾಡುವುದೆಂದರೆ ಸ್ವೇಚ್ಛೆ ಅಥವಾ ಸ್ವಚಿತ್ತವನ್ನು ಅನುಸರಿಸುವುದಾಗಿದೆ. ಇಂತಹ ಸಮಯದಲ್ಲಿ ನೀನು ದೇವರ ಸಹಾಯವನ್ನು ಕೇಳಿಕೊಳ್ಳಬೇಕು - ಆಗ ಪವಿತ್ರಾತ್ಮನು ನಿನ್ನ ಶರೀರಭಾವವನ್ನು (ಸ್ವೇಚ್ಛೆಯನ್ನು) ಮರಣಕ್ಕೆ ಒಪ್ಪಿಸಲು ನಿನಗೆ ಸಹಾಯ ಮಾಡುತ್ತಾರೆ (ರೋಮಾ. 8:13 ಮತ್ತು ಗಲಾ. 5:24 ನೋಡಿರಿ).

ನೀನು ಪಾಪದ ಮೇಲೆ ಜಯ ಸಾಧಿಸುವುದಕ್ಕೆ ಮತ್ತು ಯಾವಾಗಲೂ ಸರಿಯಾದ ದಾರಿಯಲ್ಲಿ ಸಂರಕ್ಷಿಸಲ್ಪಡುವುದಕ್ಕೆ ನಿನಗೆ ಯೇಸುವಿನಲ್ಲಿ ಸಂಪೂರ್ಣ ಸಮರ್ಪಣೆಯ ಭಕ್ತಿ ಇರಬೇಕು. "ನಾನು ಇಹಲೋಕದಲ್ಲಿ ನಿನ್ನನ್ನಲ್ಲದೆ ಇವ್ಯಾವುದನ್ನೂ (ಮತ್ತು ಇನ್ಯಾರನ್ನೂ) ಬಯಸುವುದಿಲ್ಲ" ಎಂಬ ಮಾತನ್ನು ನಾವು ಸದಾಕಾಲವೂ ಹೇಳಲು ಸಾಧ್ಯವಾಗಬೇಕು (ಕೀರ್ತ. 73:25). ಯೇಸುವಿನ ಮೇಲಿನ ಪ್ರೀತಿಯಲ್ಲಿ ಇತರ ಯಾವುದೇ ಪ್ರೀತಿಯನ್ನು (ಯಾವುದೇ ಆಸೆಗಳನ್ನು) ನಿಮ್ಮ ಹೃದಯದಿಂದ ಹೊರಹಾಕುವಂತ ಶಕ್ತಿಯಿದೆ. ನೀವು ಈ ಮಾತನ್ನು ಹೇಳಬೇಕು, "ನಾನು ಕರ್ತನನ್ನು ಯಾವಾಗಲೂ ನನ್ನೆದುರು ಇಟ್ಟುಕೊಂಡಿದ್ದೇನೆ (ಹಾಗಿರುವಾಗ ನಾನು ದೇವರ ವಿರುದ್ಧವಾಗಿ ಹೇಗೆ ಪಾಪಮಾಡಲಿ - ಎಂದು ಯೋಸೇಫನು ಹೇಳಿದ ಮಾತಿನಂತೆ); ಮತ್ತು ಆತನು ನನ್ನ ಬಲಗಡೆಯಲ್ಲಿ ಇರುವನು (ನಾನು ಪಾಪ ಮಾಡದಿರುವಂತೆ ಕೃಪೆ ನೀಡುವುದಕ್ಕೆ)"(ಕೀರ್ತ. 16:8). ಇದುವೇ ನಿತ್ಯವೂ ಪಾಪದ ಮೇಲೆ ಜಯ ಸಾಧಿಸುವ ರಹಸ್ಯವಾಗಿದೆ.