WFTW Body: 

ನೀವು ಯಾವಾಗಲೂ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾದ ಮುಖ್ಯವಾದ ಒಂದು ಸತ್ಯಾಂಶ ಇಲ್ಲಿದೆ: ’ಹಳೆಯ ಒಡಂಬಡಿಕೆಯಲ್ಲಿ ಉಲ್ಲೇಖಗೊಂಡ ಎಲ್ಲಾ ಭಾಗಗಳನ್ನು ಅಥವಾ ವಿಷಯಗಳನ್ನು, ಹೊಸ ಒಡಂಬಡಿಕೆಯ ಕೆಲವು ಸತ್ಯಾಂಶವು ಅಳಿಸಿದೆಯೆ ಎಂದು ಪರೀಕ್ಷಿಸಿ ನೋಡಬೇಕು.’ ಉದಾಹರಣೆಗಾಗಿ, ದೇವರ ಕುರಿಮರಿಯು ಈಗಾಗಲೇ ನಮಗಾಗಿ ವಧಿಸಲ್ಪಟ್ಟಿರುವುದರಿಂದ, ಕುರಿಗಳನ್ನು ಯಜ್ಞವಾಗಿ ಸಮರ್ಪಿಸುವಂತ ವಿಷಯವನ್ನು ಅಳಿಸಲಾಗಿದೆ. ಅದೇ ರೀತಿ ನಾವು ಜ್ಞಾಪಿಸಿಕೊಳ್ಳಬೇಕಾದದ್ದು ಏನೆಂದರೆ, ದಾನಿಯೇಲನು ಪ್ರಾರ್ಥಿಸಿದ ಕಾಲಘಟ್ಟ ಯಾವ ರೀತಿಯಾಗಿತ್ತು ಎಂದರೆ, ಆಗ ಕಲ್ವಾರಿಯಲ್ಲಿ ಸೈತಾನ ಹಾಗೂ ಆತನ ಸೇನೆಯು ಇನ್ನೂ ಸಹ ಸೋತಿರಲಿಲ್ಲ. ಹಾಗಾಗಿ ಆಗ ಮೂರು ವಾರಗಳ ಕಾಲ (ಉನ್ನತಲೋಕದಲ್ಲಿ) ಸೈತಾನನೊಂದಿಗೆ ಒಂದು ಸಂಘರ್ಷ ಏರ್ಪಟ್ಟಿತ್ತು (ದಾನಿಯೇಲನು 10:12,13). ಆದರೆ ಈಗ ನಾವು ಶಿಲುಬೆಯ ನಂತರ, ಅಂದರೆ ಸೈತಾನನು ಸೋಲಿಸಲ್ಪಟ್ಟ ನಂತರದ ಸಮಯದಲ್ಲಿ ಜೀವಿಸುತ್ತಿದ್ದೇವೆ. ಹಾಗಿರುವಾಗ ಈಗ ನಾವು ಆತನೊಂದಿಗೆ ಮೂರು ವಾರಗಳ ಕಾಲ ಹೋರಾಡಬೇಕಾದ ಅವಶ್ಯಕತೆ ಇಲ್ಲ. ನಾವು ಕ್ರಿಸ್ತನ ಜಯದ ಮೇಲೆ ನಿಂತಿದ್ದೇವೆ. ಈ ಸತ್ಯವನ್ನು ಇಂದು ಬೋಧಿಸುತ್ತಿರುವವರು ಕೆಲವರು ಮಾತ್ರ.

ನಾವು ’ಕೊಲೊಸ್ಸೆಯವರಿಗೆ 2:14,15' ಮತ್ತು ’ಇಬ್ರಿಯರಿಗೆ 2:14' ಈ ವಚನಗಳಲ್ಲಿ ಸ್ಪಷ್ಟವಾಗಿ ಓದಿಕೊಳ್ಳುತ್ತೇವೆ - ಸೈತಾನನು ಶಿಲುಬೆಯ ಮೇಲೆ ಸೋಲಿಸಲ್ಪಟ್ಟನು ಎಂಬುದಾಗಿ (ನಾಶಗೊಂಡಿಲ್ಲ, ಆದರೆ ನಿಷ್ಕ್ರಿಯಗೊಂಡಿದ್ದಾನೆ). ಹಾಗಾಗಿ ಈ ದಿನ, ಮೊದಲು ನಾವು ದೇವರಿಗೆ ಸಂಪೂರ್ಣವಾಗಿ ಅಧೀನರಾಗುತ್ತೇವೆ (ನಮ್ಮನ್ನುನಾವು ಒಪ್ಪಿಸಿಕೊಡುತ್ತೇವೆ) ಮತ್ತು ಅನಂತರ ಕ್ರಿಸ್ತನ ಜಯದ ಮೇಲೆ ನಿಲ್ಲುತ್ತೇವೆ ಮತ್ತು ಯೇಸುವಿನ ನಾಮದಲ್ಲಿ ಸೈತಾನನನ್ನು ಎದುರಿಸುತ್ತೇವೆ. ಆಗ ಸೈತಾನನು ತಕ್ಷಣವೇ ನಮ್ಮನ್ನು ಬಿಟ್ಟು ಓಡಿಹೋಗುವನು (ಯಾಕೋಬನು 4:7). ಆತನು ನಮ್ಮಿಂದ ಮಿಂಚಿನ ವೇಗದಲ್ಲಿ ಓಡಿಹೋಗುತ್ತಾನೆ, ಆ ವೇಗ ಎಷ್ಟೆಂದರೆ ಒಂದು ಸೆಕಂಡಿಗೆ 1,86,000 ಮೈಲಿ (ಅಥವಾ ಸೆಕಂಡಿಗೆ 3,00,000 ಕಿಲೋಮೀಟರ್). ಏಕೆಂದರೆ, ’ಸೈತಾನನು ಮಿಂಚಿನ ಹಾಗೆ ಆಕಾಶದಿಂದ ಬೀಳುವುದನ್ನು ನಾನು ನೋಡಿದೆನು’ ಎಂದು ಯೇಸು ಹೇಳಿದರು (ಲೂಕನು 10:18). (ಬೈಬಲ್ ಕ್ವಿಜ್ ಸ್ಪರ್ಧೆಯಲ್ಲಿ, ’ಯಾಕೋಬನು 4:7'ನ್ನು ಆಧರಿಸಿ ಕೇಳಬಹುದಾದ ಒಂದು ಒಳ್ಳೆಯ ಪ್ರಶ್ನೆ: "ನಾವು ಸೈತಾನನನ್ನು ಎದುರಿಸುವಾಗ ಆತನು ಎಷ್ಟು ವೇಗವಾಗಿ ಓಡಿಹೋಗುವನು?" ಎಂಬುದಾಗಿ.

ಆದಾಗ್ಯೂ ನೀವು ಸತತವಾಗಿ ನಿಮ್ಮ ಪಾಪಗಳನ್ನು ಅರಿಕೆ ಮಾಡಿಕೊಳ್ಳುವುದರ ಮೂಲಕ (ಮನಸ್ಸಾಕ್ಷಿಯು ನಿಮ್ಮನ್ನು ಚುಚ್ಚಿ ಎಚ್ಚರಿಸಿದ ಕೂಡಲೇ), ನಿರಂತರವಾಗಿ ನಿಮ್ಮ ಜೀವಿತವನ್ನು ಕ್ರಿಸ್ತನ ರಕ್ತದ ಮೂಲಕ ಶುದ್ಧ ಮಾಡಿಕೊಳ್ಳದೇ ಹೋದರೆ, ಆಗ ಸೈತಾನನ ವಿರುದ್ಧವಾಗಿ ನಿಲ್ಲುವಂತ ಬಲ ನಿಮ್ಮಲ್ಲಿ ಇರುವುದಿಲ್ಲ. ಆದ್ದರಿಂದ ನೀವು ನಿಮ್ಮ ಪಾಪಗಳನ್ನು ಕರ್ತನಿಗೆ ಅರಿಕೆ ಮಾಡಿಕೊಳ್ಳುವುದರಿಂದ ನಿಮ್ಮ ಮನಸ್ಸಾಕ್ಷಿಯನ್ನು ಶುದ್ಧವಾಗಿ ಇಟ್ಟುಕೊಳ್ಳಿರಿ.

ದೇವರು ಪ್ರೀತಿಯುಳ್ಳಂತ ತಂದೆಯಾಗಿದ್ದಾರೆ. ನೀವು ಯಾವಾಗಲೂ ಅವರಲ್ಲಿ ನಿಮ್ಮ ಭದ್ರತೆಯನ್ನು ಕಂಡುಕೊಳ್ಳಬೇಕು. ಈ ಲೋಕದಲ್ಲಿ ಒಬ್ಬನು ಅತ್ಯುತ್ತಮ ತಂದೆಯಾದರೂ, ದೇವರಿಗೆ ಹೋಲಿಸಿದರೆ, ಆತನು ಮಂಕಾಗಿ ಕಾಣಬರುತ್ತಾನೆ. ಹಾಗಿರುವಾಗ, ದೇವರು ನಿಮ್ಮನ್ನು ಎಷ್ಟು ವಿಶೇಷವಾಗಿ ಪ್ರೀತಿಸುತ್ತಾರೆಂದು ಕಲ್ಪಿಸಿಕೊಳ್ಳಿರಿ. ನೀವು ದೇವರ ಪ್ರೀತಿಯಲ್ಲಿ ಭದ್ರತೆಯನ್ನು ಕಂಡುಕೊಳ್ಳಬೇಕು ಮತ್ತು ಅದಕ್ಕೆ ಪ್ರತಿಯಾಗಿ ನೀವು ದೇವರನ್ನು ಆಳವಾಗಿ ಪ್ರೀತಿಸಬೇಕು. ನೀವು ಅವರಿಗೆ ಮೆಚ್ಚುಗೆಯಾಗದ ಯಾವುದೇ ಕಾರ್ಯವನ್ನು ಮಾಡಬಾರದು. ಒಂದು ವೇಳೆ ನೀವು ಪಾಪದಲ್ಲಿ ಬಿದ್ದರೆ (ಒಮ್ಮೊಮ್ಮೆ ಈ ರೀತಿ ನಡೆಯುತ್ತದೆ) ತಕ್ಷಣವೇ ಮಾನಸಾಂತರ ಪಡಿರಿ ಮತ್ತು ದುಃಖದೊಂದಿಗೆ ದೇವರ ಬಳಿಗೆ ಹಿಂದಿರುಗಿರಿ, ಮತ್ತು ನಿಮ್ಮ ಹೃದಯವನ್ನು ಎಲ್ಲಾ ಸಮಯದಲ್ಲಿ ಯೇಸುವಿನ ರಕ್ತದ ಮೂಲಕ ಶುದ್ಧವಾಗಿ ಇಟ್ಟುಕೊಳ್ಳಿರಿ.

"ದೇವರು ನಮಗೆ ಭಯದ ಆತ್ಮವನ್ನು ಕೊಡುವುದಿಲ್ಲ. ಆದರೆ ಯಾವಾಗಲೂ ಭಯವು ಸೈತಾನನ ಒಂದು ಆಯುಧವಾಗಿದೆ."

ಅನೇಕ ಕ್ಯಾರಿಸ್ಮೆಟಿಕ್ (charistmatic) ಬೋಧಕರು ತಮ್ಮ ಬೋಧನೆಯಲ್ಲಿ, ಭೌತಿಕ ಸಂಗತಿಗಳನ್ನು ಪಡೆಯುವುದಕ್ಕೆ ಮತ್ತು ರೋಗಗಳನ್ನು ಗುಣಪಡಿಸುವುದಕ್ಕೆ ಮತ್ತು ದೆವ್ವಗಳನ್ನು ಬಿಡಿಸುವಂತ ವಿಷಯವಾಗಿ ನಂಬಿಕೆಯು ಬೇಕಿದೆ ಎಂದು ಒತ್ತಿ ಹೇಳುತ್ತಾರೆ, ಮತ್ತು ಇದರ ನಂತರ ತಮಗೆ ಹಣವನ್ನು ಕೊಡುವಂತೆ ಜನರನ್ನು ಒತ್ತಾಯಿಸುತ್ತಾರೆ. ಇನ್ನು ಕೆಲವು ಬೋಧಕರು ದೇವರ ವಾಗ್ದಾನಗಳಲ್ಲಿ ನಂಬಿಕೆ ಇಡುವಂತೆ ಜನರನ್ನು ನಡೆಸುವುದರ ಬದಲಾಗಿ, ಕ್ರೈಸ್ತರನ್ನು ಸಂತೈಸುವುದಕ್ಕಾಗಿ ತಮ್ಮ ಬೋಧನೆಯಲ್ಲಿ ಮನೋವಿಜ್ಞಾನದ ವಿಧಾನಗಳಿಗೆ ಬಹಳ ಮಹತ್ವ ನೀಡುತ್ತಾರೆ. ಹಾಗಾಗಿ ಇಂದಿನ ದಿನಗಳಲ್ಲಿ ಹೆಚ್ಚಾಗಿ ಪ್ರಚಲಿತವಾಗಿರುವ "ಆಂತರಿಕ ಗುಣಪಡಿಸುವಿಕೆ," "ಸಕಾರಾತ್ಮಕ ಚಿಂತನೆ" ಮತ್ತು "ವಂಶಾವಳಿಯ ಶಾಪ", ಇಂತಹ ಮುಂತಾದ ಸುಳ್ಳು ಬೋಧನೆಗಳಿಂದ ದೂರವಿರಿ. ಆತ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ಹೊಸ ಒಡಂಬಡಿಕೆಯ ಮಾತುಗಳನ್ನು ಹಿಡಿದುಕೊಳ್ಳುವುದು ಬಹಳ ಉತ್ತಮ. ದೇವರ ವಾಕ್ಯವನ್ನು ಅಧ್ಯಯನ ಮಾಡಿರಿ. ಅಗ ನೀವು ಮೋಸ ಹೋಗುವುದಿಲ್ಲ.

"ಭಯ"ವು ಸೈತಾನನ ಮುಖ್ಯ ಆಯುಧಗಳಲ್ಲಿ ಒಂದಾಗಿದೆ. ಆತನು ಪದೇ ಪದೇ ಇದನ್ನು ಉಪಯೋಗಿಸುತ್ತಾನೆ. ವಿಶ್ವಾಸಿಗಳು ಇತರರನ್ನು ಭಯಪಡಿಸಲು ಅಥವಾ ಅವರಿಗೆ ಬೆದರಿಕೆ ಹಾಕಲು ಪ್ರಯತ್ನಿಸುವಾಗ, ಅವರು (ತಮಗೆ ತಿಳಿಯದೇ) ಸೈತಾನನೊಂದಿಗೆ ಅನ್ಯೋನ್ಯತೆಯಲ್ಲಿರುತ್ತಾರೆ, ಏಕೆಂದರೆ ಅವರು ಸೈತಾನನ ಅಸ್ತ್ರಗಳಲ್ಲಿ ಒಂದು ಆಯುಧವನ್ನು ಉಪಯೋಗಿಸುತ್ತಿದ್ದಾರೆ. "ದೇವರು ನಮಗೆ ಕೊಟ್ಟಿರುವ ಆತ್ಮವು ಹೇಡಿತನದ (ಭಯದ) ಆತ್ಮವಲ್ಲ" (2ತಿಮೊಥೆಯನಿಗೆ 1:7). ’ಭಯವು ಯಾವಾಗಲೂ ಸೈತಾನನ ಒಂದು ಅಸ್ತ್ರವಾಗಿದೆ’. ಆದ್ದರಿಂದ ಜನರು ನಮ್ಮ ವಿರುದ್ಧವಾಗಿ ಬಳಸುವ ಬೆದರಿಕೆ ಹಾಗೂ ಒತ್ತಡ ಹೇರುವ ಕುಯುಕ್ತಿಗಳಿಗೆ ನಾವು ಹೆದರಬಾರದು. ಅಂತಹ ಜನರು ತಮ್ಮನ್ನು "ಕ್ರೈಸ್ತ ವಿಶ್ವಾಸಿಗಳು" ಎಂದು ಹೇಳಿಕೊಂಡರೂ, ಅವರೆಲ್ಲರೂ ಸೈತಾನನ ಮಧ್ಯವರ್ತಿಗಳು (ಅಥವಾ ದಲ್ಲಾಳಿಗಳು) ಆಗಿದ್ದಾರೆ. ನಮ್ಮ ಇಡೀ ಜೀವಿತಕ್ಕೆ ನಮಗಾಗಿ ಇರುವಂತ ಈ ಪಾಠವನ್ನು ಕಲಿತುಕೊಳ್ಳುವುದು ಅವಶ್ಯವಾಗಿದೆ.