WFTW Body: 

ಧರ್ಮೋಪದೇಶಕಾಂಡ 6:4-5ರಲ್ಲಿ ನಾವು ಹೀಗೆ ಓದುತ್ತೇವೆ. "ನಮ್ಮ ದೇವರಾದ ಕರ್ತನು ಒಬ್ಬನೇ ದೇವರು. ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣ ಹೃದಯದಿಂದಲೂ, ಪೂರ್ಣ ಪ್ರಾಣದಿಂದಲೂ ಮತ್ತು ನಿನ್ನ ಪೂರ್ಣ ಬಲದಿಂದಲೂ ಪ್ರೀತಿಸಬೇಕು".

ನಾವು ಮೂರು ದೇವರುಗಳನ್ನು ಆರಾಧಿಸುವುದಿಲ್ಲ. ದೇವರು ಮೂರು ವ್ಯಕ್ತಿಗಳಲ್ಲಿ ಇರುವ ಒಬ್ಬರೇ ದೇವರು ಆಗಿದ್ದಾರೆ. ಧರ್ಮೋಪದೇಶ ಕಾಂಡ 6: 5ರಲ್ಲಿ, ಮೊದಲನೆಯ ಆಜ್ಞೆ ಇನ್ನೊಂದು ರೀತಿಯಲ್ಲಿ ವಿವರಿಸಲ್ಪಟ್ಟಿದೆ. ಯೇಸುವು ಮತ್ತಾಯ 22:37ರಲ್ಲಿ ಇದನ್ನೇ ಉಲ್ಲೇಖಿಸಿದ್ದು. "ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣ ಹೃದಯದಿಂದಲೂ, ನಿನ್ನ ಪೂರ್ಣ ಪ್ರಾಣದಿಂದಲೂ ಮತ್ತು ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು." ಇದೇ ಮೊದಲನೆಯ ಆಜ್ಞೆಯಾಗಿದೆ.

ಹಾಗಿದ್ದಲ್ಲಿ, ನಮ್ಮ ಹೃದಯದಲ್ಲಿ ಕುಟುಂಬಕ್ಕೆ, ಆಸ್ತಿಗೆ, ಉದ್ಯೋಗಕ್ಕೆ ಅಥವಾ ಹಣಕ್ಕೆ ಯಾವುದೇ ಜಾಗವಿಲ್ಲ - ಏಕೆಂದರೆ, ನಮ್ಮ ಹೃದಯವು ಸಂಪೂರ್ಣವಾಗಿ ದೇವರಿಗೆ ಕೊಡಲ್ಪಟ್ಟಿದೆ. ಇದು "ತಯಾರಕನ ಸೂಚನೆಗಳು" ಪುಸ್ತಕದಲ್ಲಿನ ಮೊದಲನೇ ಸೂಚನೆಯಾಗಿದೆ. ಈ ಆಜ್ಞೆಗೆ ವಿಧೇಯರಾಗುವ ಮುನ್ನ ಮಾನವ-ಯಂತ್ರವನ್ನು ಚಲಾಯಿಸಬೇಡಿ.

ನೀನು ಕರ್ತನನ್ನು ನಿನ್ನ ಸಂಪೂರ್ಣ ಹೃದಯದಿಂದ ಪ್ರೀತಿಸಿದಾಗ ಏನಾಗುವುದು?

• ನೀನು ನಿನ್ನ ಹೆಂಡತಿಯನ್ನು ಇನ್ನೂ ಉತ್ತಮವಾಗಿ ಪ್ರೀತಿಸುವೆ!
• ನೀನು ನಿನ್ನ ನೆರೆಯವನನ್ನು ಇನ್ನೂ ಉತ್ತಮವಾಗಿ ಪ್ರೀತಿಸುವೆ.
• ನಿನ್ನ ಹೃದಯದಲ್ಲಿ ಈಗ ಯಾವುದೇ ದ್ವೇಷ ಇಲ್ಲದಿರುವುದರಿಂದ, ನೀನು ನಿನ್ನ ವೈರಿಗಳನ್ನೂ ಪ್ರೀತಿಸುವೆ.

ಹೊಟ್ಟೆಕಿಚ್ಚು, ವೈರತ್ವ ಮತ್ತು ಇತರರ ವಿರುದ್ಧವಾದ ಎಲ್ಲಾ ಪಾಪಗಳಿಗೆ ಕಾರಣ ನಾವು ದೇವರನ್ನು ನಮ್ಮ ಪೂರ್ಣ ಹೃದಯದಿಂದ ಪ್ರೀತಿಸದಿರುವುದು. ದೇವರನ್ನು ನೀನು ಪ್ರೀತಿಸಬೇಕಾದ ನಿನ್ನ ಹೃದಯದ ಒಂದು ಭಾಗವು ಹೊಟ್ಟೆಕಿಚ್ಚಿನಿಂದ ತುಂಬಿದೆ. ನಾವು ಪಾಪವನ್ನು ಜಯಿಸುವುದು ಪ್ರಾಥಮಿಕವಾಗಿ ಪಾಪದ ವಿರುದ್ಧವಾಗಿ ಹೋರಾಡುವುದರಿಂದಲ್ಲ, ಬದಲಾಗಿ ದೇವರನ್ನು ನಮ್ಮ ಪೂರ್ಣ ಹೃದಯದಿಂದ ಪ್ರೀತಿಸುವುದರಿಂದಾಗಿದೆ. ನಾವು ದೇವರನ್ನು ಪೂರ್ಣ ಹೃದಯದಿಂದ ಪ್ರೀತಿಸಿದಾಗ, ಹಣದ ಮತ್ತು ಆಸ್ತಿಯ ಆಸೆ ಹಾಗು ಕೆಟ್ಟ ಮೋಹಗಳು ಎಲ್ಲವೂ ನಮ್ಮಿಂದ ದೂರ ಸರಿಯುತ್ತವೆ.

ಉದಾಹರಣೆಗಾಗಿ, ಅಷ್ಟೊಂದು ಒಳ್ಳೆಯ ಮನುಷ್ಯನಾಗಿರದ ’ಅ’ ಎಂಬಾತನ್ನು ಪ್ರೀತಿಸುತ್ತಿರುವ ಒಬ್ಬ ಹುಡುಗಿಯನ್ನು ಪರಿಗಣಿಸಿರಿ. ಆಕೆಯು ಆತನನ್ನು ಪ್ರೀತಿಸುವುದನ್ನು ತಡೆಯಲು ಆಕೆಯ ತಂದೆ-ತಾಯಿಗಳು ಸರ್ವ ಪ್ರಯತ್ನ ಮಾಡಿದರೂ ಅವರು ಸಫಲರಾಗುವುದಿಲ್ಲ. ಮುಂದೆ ಒಂದು ದಿನ ಆಕೆಯು ಬಹಳ ಸುರೂಪಿಯೂ, ಶ್ರೀಮಂತನೂ ಮತ್ತು ಬಹಳ ಹಿತವಾದ ಇನ್ನೊಬ್ಬ ಮನುಷ್ಯ ’ಇ’ ಎಂಬವನನ್ನು ಸಂಧಿಸುತ್ತಾಳೆ. ತಕ್ಷಣವೇ, ಆಕೆಯಲ್ಲಿ ಮೊದಲನೆಯವನಿಗೆ ಇದ್ದ ಪ್ರೀತಿಯೆಲ್ಲಾ ಮಾಯವಾಗುತ್ತದೆ. ಅದು ಹೇಗಾಯಿತು? ಅದನ್ನು "ಒಂದು ಹೊಸ ಪ್ರೀತಿಯ ಹೊರದೂಡುವ ಬಲ" ಎಂದು ನಾವು ಕರೆಯಬಹುದು. ಒಂದು ಹೊಸ ಪ್ರೀತಿಯು ಮೊದಲಿನ ಪ್ರೀತಿಯನ್ನು ದೂರ ಓಡಿಸಿತು.

ಇದನ್ನು ಕ್ರೈಸ್ತ ಜೀವನಕ್ಕೆ ಅಳವಡಿಸಿ. ಇಲ್ಲಿ ನೀವು ದೇವರು ನಿಷೇಧಿಸುವ ಅನೇಕ ಕೆಟ್ಟ ಸಂಗತಿಗಳನ್ನು ಬಹಳ ಇಷ್ಟಪಡಬಹುದು. ನೀನು ಈ ಅಭಿಲಾಷೆಗಳ ಹಿಡಿತದಲ್ಲಿ ಇರುವುದರಿಂದ, ಎಷ್ಟೇ ಪ್ರಯತ್ನಪಟ್ಟರೂ ಈ ದುರಭ್ಯಾಸಗಳನ್ನು ಬಿಡಲು ನಿನಗೆ ಸಾಧ್ಯವಾಗುವುದಿಲ್ಲ. ಆದರೆ ಒಂದು ದಿನ ನೀನು ಯೇಸುವಿನ ಮಹಿಮೆಯನ್ನು ಕಾಣುತ್ತೀಯ ಮತ್ತು ನಿನ್ನ ಪೂರ್ಣ ಹೃದಯದಿಂದ ಆತನನ್ನು ಪ್ರೀತಿಸಲು ಆರಂಭಿಸುತ್ತೀಯ. ಆಗ ಏನಾಗುತ್ತದೆ? ಈ ಹೊಸ ಪ್ರೀತಿಯು ಹಳೆಯ ಅಭಿಲಾಷೆಗಳನ್ನು ದೂರ ಓಡಿಸುತ್ತದೆ. ಆಗ ನಮಗೆ ಈ ಲೋಕದ ವಸ್ತುಗಳಲ್ಲಿ ಯಾವುದೇ ಆಸಕ್ತಿಯಿರುವುದಿಲ್ಲ. ಇದು "ಒಂದು ಹೊಸ ಪ್ರೀತಿಯ ಹೊರದೂಡುವ ಬಲವಾಗಿದೆ". ಪಾಪದ ಮೇಲಿನ ಜಯದ ರಹಸ್ಯ ಇದೇ ಆಗಿದೆ. ನಿನ್ನ ಪೂರ್ಣ ಹೃದಯದಿಂದ ಮತ್ತು ನಿನ್ನ ಪೂರ್ಣ ಆತ್ಮದಿಂದ ದೇವರನ್ನು ಪ್ರೀತಿಸು. ಇದರ ಅರ್ಥ, ನೀನು ಸಂಪೂರ್ಣ ಬುದ್ಧಿ-ಬಲದಿಂದ ದೇವರನ್ನು ಪ್ರೀತಿಸು.