WFTW Body: 

1. ನಿಮ್ಮ ಬಲವನ್ನು ದೇವರ ಬಲದೊಂದಿಗೆ ಅದಲುಬದಲು ಮಾಡಿಕೊಳ್ಳಿರಿ

ಮಹಾ ಪರಾಕ್ರಮಿಯಾದ ದೇವರನ್ನು ಪೂಜಿಸಿ ಸೇವೆ ಮಾಡುವ ನಮಗೆ ಅವರು ನಮ್ಮ ನಿರ್ಬಲತೆಯಲ್ಲಿ ಬಲವನ್ನು ದಯಪಾಲಿಸುವರು, ಎಂಬ ವಿಷಯವನ್ನು ಯೆಶಾಯ 40:29-31ರ ದೇವರ ವಾಕ್ಯ ನಮಗೆ ಕಲಿಸುತ್ತದೆ. ನಮ್ಮ ಶಕ್ತಿಯು ಸಾಲದೇ ಹೋದಾಗ, ಅವರು ನಮಗೆ ಬಲವನ್ನು ಕೊಡುವರು. ನಮಗೆ ಅವರ ಸೇವೆ ಮಾಡುವ ಸಲುವಾಗಿ ಆರೋಗ್ಯವನ್ನೂ, ಶಕ್ತಿಯನ್ನೂ ಅವರು ನೀಡುವರು. ಕರ್ತನ ಸೇವೆಗಾಗಿ ಹೊರಟ ಯುವಕರು ದಣಿದು ಬಳಲಬಹುದು ಮತ್ತು ತರುಣರು ಸೊರಗಿ ಕುಸಿದು ಬೀಳಬಹುದು. ಆದರೆ ಕರ್ತನನ್ನು ನಿರೀಕ್ಷಿಸಿ ನಡೆಯುವವರಿಗೆ ಎಷ್ಟೇ ವಯಸ್ಸು ಆಗಿರಲಿ, ಅವರು ಹೊಸ ಬಲವನ್ನು ಹೊಂದುವರು. ಆಹಾ! ಎಷ್ಟು ಅದ್ಭುತವಾದ ವಾಗ್ದಾನ ಇದಾಗಿದೆ! ಒಂದು ಕಡೆಯಲ್ಲಿ ಯೌವನಸ್ಥರು ದಣಿವಿನಿಂದ ಕುಸಿಯುತ್ತಿರುವಾಗ, ಇನ್ನೊಂದು ಕಡೆಯಲ್ಲಿ ಈ ಪ್ರಾಯಸ್ಥರು, "ಕರ್ತನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದಿ, ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು ಏರುವರು. ಓಡಿ ದಣಿಯರು; ಬಳಲದೇ ನಡೆಯುತ್ತಲೇ ಇರುತ್ತಾರೆ".

ನಿಮ್ಮ ಪ್ರತಿಯೊಂದು ಅವಶ್ಯಕತೆಗಾಗಿ ಕರ್ತನನ್ನು ಸರಳವಾಗಿ ನಂಬುವಂತಹ ನಿರೀಕ್ಷೆ ಇರಿಸಿಕೊಳ್ಳುವುದನ್ನು ಕಲಿಯಿರಿ ಎಂದು ಎಲ್ಲರನ್ನೂ ಪ್ರೋತ್ಸಾಹಿಸಲು ನಾನು ಇಚ್ಛಿಸುತ್ತೇನೆ. ಈ ವಚನ ತಿಳಿಸುವಂತೆ, ನಿಮಗೆ ಹೊಸ ಬಲ ಪ್ರಾಪ್ತವಾಗುತ್ತದೆ. ಮತ್ತೊಂದು ಅನುವಾದವು ಈ ರೀತಿಯಾಗಿ ವಿವರಿಸುತ್ತದೆ, "ಕರ್ತನಿಗಾಗಿ ಕಾದು ನಿಲ್ಲುವವರು ಕರ್ತನೊಂದಿಗೆ ಬಲವನ್ನು ಅದಲುಬದಲು ಮಾಡಿಕೊಳ್ಳುತ್ತಾರೆ". ಇದರ ಅರ್ಥ ಹೀಗಿದೆ, ನಾವು ನಮ್ಮ ಮಾನವ ಬಲವನ್ನು ಕರ್ತನಿಗೆ ಸಮರ್ಪಿಸಿದಾಗ, ಆತನು ತನ್ನ ದೈವಿಕ ಪರಾಕ್ರಮವನ್ನು ನಮ್ಮೊಂದಿಗೆ ಅದಲುಬದಲು ಮಾಡಿಕೊಳ್ಳುತ್ತಾನೆ! ಹಲ್ಲೆಲೂಯಾ! ನಮ್ಮಲ್ಲಿರುವ ಎಲ್ಲವನ್ನೂ ಕರ್ತನೊಂದಿಗೆ ಬದಲಾಯಿಸಿಕೊಳ್ಳುವುದು ಎಷ್ಟು ಶ್ರೇಷ್ಠವಾದದ್ದು. ಯೇಸುವು ತನ್ನ ತಂದೆಗೆ ಹೀಗೆ ಹೇಳಿದರು, "ತಂದೆಯೇ, ನನ್ನದೆಲ್ಲಾ ನಿನ್ನದೇ, ನಿನ್ನದೆಲ್ಲಾ ನನ್ನದೇ" (ಯೋಹಾನ 17:10). ಕರ್ತನ ಸೇವೆಯನ್ನು ಸರಿಯಾಗಿ ಪೂರೈಸಲು ಕರ್ತನ ಬಲ ನಮಗೆ ಅವಶ್ಯವಾಗಿದೆ. ಕರ್ತನ ಪ್ರತಿಯೊಬ್ಬ ಸೇವಕನೂ ಆತನು ತನಗೆ ಪರಲೋಕದ ಬಲವನ್ನು ಒದಗಿಸುವುದಕ್ಕಾಗಿ - ನಮ್ಮ ಆತ್ಮದಲ್ಲಿ ಅಷ್ಟೇ ಅಲ್ಲ, ನಮ್ಮ ದೇಹದಲ್ಲೂ ಸಹ - ಪುನರುತ್ಥಾನದ ಬಲಕ್ಕಾಗಿ, ಆತನಲ್ಲಿ ಸಂಪೂರ್ಣವಾದ ನಂಬಿಕೆಯನ್ನು ಇರಿಸಬೇಕು. ಆಗ ನಾವು ಮುಪ್ಪಿನಲ್ಲಿಯೂ ಫಲಿಸುವೆವು (ಕೀರ್ತನೆ. 92:14).

2. ಪವಿತ್ರಾತ್ಮನ ಅಭಿಷೇಕವನ್ನು ಅಮೂಲ್ಯವೆಂದು ಪರಿಗಣಿಸಿರಿ

ಯೆಹೆಜ್ಕೇಲ 3:23ರಲ್ಲಿ ನಾವು ಹೀಗೆ ಓದುತ್ತೇವೆ: "ನಾನು ಎದ್ದೆನು ಮತ್ತು ಅಲ್ಲಿಯೂ ನನಗೆ ಹಿಂದಿನಂತೆ ಕರ್ತನ ಮಹಿಮೆಯು ಪ್ರತ್ಯಕ್ಷವಾಯಿತು. ಅದನ್ನು ನೋಡಿ ನಾನು ಅಡ್ಡಬಿದ್ದೆನು." ಕರ್ತನ ಸೇವೆಗೆ ಸಂಬಂಧಿಸಿದ ಒಂದು ಮುಖ್ಯವಾದ ಮೂಲತತ್ವ ಇಲ್ಲಿದೆ: ಯಾವಾಗಲೂ ನಿಮ್ಮ ಮುಖವನ್ನು ನೆಲದ ಧೂಳಿನಲ್ಲಿ ಇರಿಸಿರಿ. ಕೆಲವೊಮ್ಮೆ ಇದನ್ನು ಅಕ್ಷರಶಃವಾಗಿ - ವಾಸ್ತವಿಕವಾಗಿ - ಪಾಲಿಸುವದು ಒಳ್ಳೆಯದು. ನಿಮ್ಮ ಕೊಠಡಿಯ ಒಳಗೆ ನೆಲದ ಮೇಲೆ ದೇವರ ಮುಂದೆ ಅಡ್ಡಬೀಳಿರಿ ಮತ್ತು ಹೀಗೆ ಹೇಳಿರಿ: "ಕರ್ತನೇ, ಈಗ ನಾನಿರುವ ಈ ಜಾಗವು ನನಗೆ ಸರಿಯಾದ ಜಾಗವಾಗಿದೆ. ನಾನು ಇಷ್ಟು ಮಾತ್ರವೇ ಆಗಿದ್ದೇನೆ - ನಿನ್ನ ದೃಷ್ಟಿಯಲ್ಲಿ ಏನೂ ಅಲ್ಲದವನು." ಇತರರ ಮುಂದೆ ಎದ್ದು ನಿಂತು ಬೋಧಿಸುವ ನಾವು ಬಹಳ ದೊಡ್ಡ ಆತಂಕವನ್ನು ಎದುರಿಸುತ್ತೇವೆ, ಏಕೆಂದರೆ ಅನೇಕ ಜನರು ಬೇರೆಯವರಿಗಿಂತ ಹೆಚ್ಚಾಗಿ ನಮ್ಮನ್ನು ಮೆಚ್ಚುತ್ತಾರೆ ಮತ್ತು ಹೆಚ್ಚಳ ಪಡಿಸುತ್ತಾರೆ. ಆಗಾಗ ಏಕಾಂತದಲ್ಲಿ ಕರ್ತನ ಮುಂದೆ ಹೋಗಿ ಅಡ್ಡ ಬೀಳುವದು ಮತ್ತು ಆತನ ದೃಷ್ಟಿಯಲ್ಲಿ ನಾವು ಶೂನ್ಯರು, ಏನೂ ಅಲ್ಲದವರು ಎನ್ನುವುದನ್ನು ಅರ್ಥ ಮಾಡಿಕೊಳ್ಳುವದು ನಮಗೆ ಬಹಳ ಅವಶ್ಯವಾಗಿದೆ. ಕರ್ತನು ಒಂದೇ ಕ್ಷಣದಲ್ಲಿ ನಮ್ಮ ಉಸಿರನ್ನು ತೆಗೆದುಬಿಡಬಹುದು. ಆತನು ನಮ್ಮಿಂದ ಪವಿತ್ರಾತ್ಮನ ಅಭಿಷೇಕವನ್ನು ಕ್ಷಣಮಾತ್ರದಲ್ಲಿ ತೆಗೆದುಹಾಕಬಹುದು. ನನ್ನ ಜೀವಿತದಲ್ಲಿ ಅಭಿಷೇಕವನ್ನು ಕಳೆದುಕೊಳ್ಳುವುದರ ಬಗ್ಗೆ ನಾನು ಅತಿಯಾಗಿ ಭಯಪಡುತ್ತೇನೆ. ನಾನು ನನ್ನ ಜೀವಿತದಲ್ಲಿ ದೇವರ ಅಭಿಷೇಕವನ್ನು ಕಳೆದುಕೊಳ್ಳುವುದರ ಬದಲಾಗಿ, ನನ್ನ ಎಲ್ಲಾ ಸಂಪತ್ತನ್ನು ಮತ್ತು ನನ್ನ ಸಂಪೂರ್ಣ ಆರೋಗ್ಯವನ್ನು ಕಳೆದುಕೊಂಡರೂ ಪರವಾಗಿಲ್ಲವೆಂದು ನಂಬುತ್ತೇನೆ. ಹಣದ ವಿಚಾರದಲ್ಲಿ ಅಥವಾ ನಮ್ಮ ಮಾತಿನಿಂದಾಗಿ ಅಥವಾ ಇನ್ಯಾವುದೋ ಚಿಕ್ಕ ವಿಷಯದ ಮೂಲಕ ಪವಿತ್ರಾತ್ಮನ ಅಭಿಷೇಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು.

ಯೆಹೆಜ್ಕೇಲನು ನೆಲದ ಮೇಲೆ ಅಡ್ಡಬಿದ್ದಾಗ, ದೇವರಾತ್ಮನು ಆತನೊಳಗೆ ಸೇರಿ, ಆತನು ಎದ್ದು ನಿಂತುಕೊಳ್ಳುವಂತೆ ಮಾಡಿದನು. ಅಲ್ಲಿ - ದೇವರ ಮುಂದೆ ಧೂಳಿನಲ್ಲಿ ಅಡಿಮೊಗವಾಗಿ ಅಡ್ಡಬಿದ್ದಾಗ - ದೇವರಾತ್ಮನು ನಮ್ಮೊಳಗೆ ಬಂದು ಸೇರುತ್ತಾನೆ. ಹಾಗಿದ್ದರೆ, ಆತನೇ ನಮ್ಮನ್ನು ಮೇಲೆತ್ತಲಿ ಮತ್ತು ನಮ್ಮನ್ನು ಹೆಚ್ಚಳ ಪಡಿಸಲಿ. ನೀವು ಎಂದಿಗೂ ನಿಮ್ಮನ್ನು ಹೆಚ್ಚಳ ಪಡಿಸಿಕೊಳ್ಳಬೇಡಿರಿ.

3. ನೀವು ಹಿಂದೆ ವಿಫಲರಾಗಿದ್ದರೂ, ದೇವರು ಯಾವಾಗಲೂ ನಿಮ್ಮನ್ನು ಪ್ರೋತ್ಸಾಹಿಸುತ್ತಾರೆ

ಯೆಶಾಯ 42:2,3ರಲ್ಲಿ ಹೀಗೆ ಬರೆಯಲ್ಪಟ್ಟಿದೆ: "ಇವನು ಕೂಗಾಡುವುದಿಲ್ಲ, ಆರ್ಭಟಿಸುವುದಿಲ್ಲ, ಬೀದಿಗಳಲ್ಲಿ ಇವನ ಧ್ವನಿಯೇ ಕೇಳಿಸುವುದಿಲ್ಲ." ಈ ವಾಕ್ಯವು ಯೇಸುವಿನ ಕುರಿತಾದದ್ದು ಎಂದು ಮತ್ತಾಯ 12:19, 20 ತೋರಿಸುತ್ತದೆ; ಅಲ್ಲಿ ಹೀಗೆ ಹೇಳಲಾಗಿದೆ, "ಬೀದಿಗಳಲ್ಲಿ ಈತನ ಧ್ವನಿಯು ಯಾರಿಗೂ ಕೇಳಿಸುವುದಿಲ್ಲ. ಈತನು ಜಜ್ಜಿದ ದಂಟನ್ನು ಮುರಿದು ಹಾಕುವುದಿಲ್ಲ." ಈ ವಾಕ್ಯದ ಅರ್ಥ, ಜೀವನವನ್ನು ಹಾಳು ಮಾಡಿಕೊಂಡಿರುವ ಒಬ್ಬ ವ್ಯಕ್ತಿಯನ್ನು ಕರ್ತನು ಎಂದಿಗೂ ನಿರುತ್ಸಾಹ ಪಡಿಸುವುದಿಲ್ಲ, ಆದರೆ ಅವರು ಆತನನ್ನು ಹುರಿದುಂಬಿಸಿ ಗುಣಪಡಿಸುತ್ತಾರೆ ಎಂಬುದಾಗಿದೆ. ಕರ್ತನು ಆರಿಹೋಗುತ್ತಿರುವ ದೀಪವನ್ನು ನಂದಿಸುವುದಿಲ್ಲ. ಅದಕ್ಕೆ ಬದಲಾಗಿ, ಅದಕ್ಕೆ ಗಾಳಿ ಊದಿ ಜ್ವಾಲೆ ಉರಿಯುವಂತೆ ಮಾಡುತ್ತಾರೆ. ಸೋತುಹೋಗಿರುವ ದುರ್ಬಲರಿಗೆ ಸಹಾಯ ಒದಗಿಸಲು ದೇವರು ಇಷ್ಟಪಡುತ್ತಾರೆ. ಅವರು ನಿರುತ್ಸಾಹ ಮತ್ತು ಮನೋವ್ಯಥೆಯಿಂದ ಕುಗ್ಗಿದವರ ಸಹಾಯಕ್ಕೆ ಮುಂದಾಗುತ್ತಾರೆ ಮತ್ತು ಅವರು ಚೇತರಿಸುವಂತೆ ಮಾಡುತ್ತಾರೆ. ದೇವರ ಒಬ್ಬ ನಿಜವಾದ ಸೇವಕನು ಯಾವಾಗಲೂ ಇಂತಹ ಮನಗುಂದಿ ಬೇಸತ್ತವರನ್ನು, ನಿರೀಕ್ಷೆ ಇಲ್ಲದವರನ್ನು ಮತ್ತು ಜೀವನದಲ್ಲಿ ಸೋತಿರುವ ಎಲ್ಲರ ಮನಸ್ಸನ್ನು ಬಲಪಡಿಸಿ, ಪ್ರೋತ್ಸಾಹಿಸಿ, ಅವರಿಗೆ ಸಹಾಯ ನೀಡುವ ಸೇವೆಯಲ್ಲಿ ತೊಡಗಿರುತ್ತಾನೆ. ನಾವೆಲ್ಲರೂ ಇಂತಹ ಸೇವೆಯನ್ನು ಕೇಳಿಕೊಳ್ಳೋಣ, ಏಕೆಂದರೆ ಎಲ್ಲೆಡೆ ಜನರಿಗೆ ಇದು ಬೇಕಾಗಿದೆ.