WFTW Body: 

ಹಳೆಯ ಒಡಂಬಡಿಕೆಯಲ್ಲಿ ನಮಗೆ ಕಂಡುಬರುವುದು ಏನೆಂದರೆ, ಪ್ರತಿಯೊಬ್ಬ ಪ್ರವಾದಿಯೂ ದೇವರಿಂದ ತನಗಾಗಿ ಕಾದಿರಿಸಲಾಗಿದ್ದ ಒಂದು ವಿಶಿಷ್ಟ ಕಾರ್ಯ ಭಾರವನ್ನು ಹೊಂದಿದ್ದನು - ಆದರೆ ಎಲ್ಲಾ ಪ್ರವಾದಿಗಳ ಸಂದೇಶಗಳಲ್ಲಿ ಒಂದು ಸಾಮಾನ್ಯ ಅಂಶ ಎದ್ದುಕಾಣಿಸುತ್ತಿತ್ತು, ಏನೆಂದರೆ ದೇವಜನರಲ್ಲಿ ಪರಿಶುದ್ಧತೆ ಉಳಿದಿಲ್ಲವೆಂಬ ಕಾಳಜಿ.

ದೇವರು ನಿಮ್ಮ ಹೃದಯದಲ್ಲಿ ಇರಿಸುವ ಭಾರ (ಅಥವಾ ಸಂಕಲ್ಪ), ಅವರು ನಿಮಗಾಗಿ ಯಾವ ಸೇವೆಯನ್ನು ಯೋಜಿಸಿದ್ದಾರೆ ಎನ್ನುವುದನ್ನು ಹೆಚ್ಚು ಕಡಿಮೆ ಸರಿಯಾಗಿಯೇ ಸೂಚಿಸುತ್ತದೆ. ಆದ್ದರಿಂದ ಕರ್ತನಿಂದ ಬರುವ ಒಂದು ಭಾರಕ್ಕಾಗಿ ಕಾದಿರಿ. ಇಂತಹ ಒಂದು ಭಾರವಿಲ್ಲದೆ ನೀವು ಕರ್ತನ ಸೇವೆಗೆ ಕೈ ಹಾಕಿದರೆ, ಸ್ವಲ್ಪ ಸಮಯದ ನಂತರ ಕರ್ತನ ಕಾರ್ಯದಲ್ಲಿ ಉದಾಸೀನರಾಗುತ್ತೀರಿ, ಮತ್ತು ನೀವು ಹಣ ಸಂಪಾದನೆ, ಜನರ ಹೊಗಳಿಕೆ ಅಥವಾ ಲೌಕಿಕ ಸುಖಭೋಗವನ್ನು ಹುಡುಕುತ್ತಾ ಬೇರೊಂದು ದಾರಿಗೆ ಇಳಿಯುವ ಸಾಧ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಕರ್ತನ ಸೇವೆ ಮಾಡುತ್ತೇವೆಂದು ಹೇಳಿಕೊಳ್ಳುವ ಅನೇಕ ಜನರ ಸೇವೆಯಲ್ಲಿ ದೇವರಿಂದ ಪಡಕೊಂಡ ಯಾವುದೇ ಭಾರ ಇಲ್ಲದಿರುವುದು ದುರದೃಷ್ಟಕರವಾಗಿದೆ.

ದೇವರು ಒಬ್ಬ ಕಾರ್ಯಕರ್ತನಿಗೆ ಕೊಡುವ ಭಾರ ಮಕ್ಕಳ ನಡುವೆ ಸೇವೆ ಮಾಡುವದು ಆಗಿರಬಹುದು ಮತ್ತು ಇನ್ನೊಬ್ಬನಿಗೆ ಸುವಾರ್ತಾ ಪ್ರಸಾರದ ಭಾರವನ್ನು ಕೊಡಬಹುದು. ಮತ್ತೊಬ್ಬ ಕಾರ್ಯಕರ್ತನಿಗೆ ದೇವಜನರ ಶಿಕ್ಷಣದ ಭಾರ ಕೊಡಲ್ಪಡಬಹುದು. ಕ್ರಿಸ್ತನ ದೇಹದ ವಿವಿಧ ಅಂಗಗಳಲ್ಲಿ ದೇವರು ವಿಭಿನ್ನ ಭಾರಗಳನ್ನು ಇರಿಸುತ್ತಾರೆ. ಈ ವಿಷಯದಲ್ಲಿ ನಾವು ಇನ್ನೊಬ್ಬನ ಸೇವೆ ಅಥವಾ ಅವನ ಭಾರದ ಅನುಕರಣೆ ಮಾಡಬಾರದು. ನಿಮ್ಮ ಭಾರವನ್ನು ಇನ್ನೊಬ್ಬರ ಮೇಲೆ ಹೊರಿಸಬೇಡಿರಿ; ಮತ್ತು ಬೇರೆಯವರು ಅವರ ಭಾರವನ್ನು ನಿಮ್ಮ ಮೇಲೆ ಹೊರಿಸಲು ಸಮ್ಮತಿಸದಿರಿ. ದೇವರು ಸ್ವತಃ ನಿಮಗೆ ಒಂದು ಭಾರವನ್ನು ಕೊಡಲಿ - ಅದು ಅವರು ನಿಮಗಾಗಿಯೇ ಇಟ್ಟಿರುವಂಥದ್ದು ಆಗಿರುತ್ತದೆ.

ಅನೇಕ ಜನರು ನನ್ನನ್ನು ಅವರು ಕೈಗೊಳ್ಳುತ್ತಿರುವ ಸೇವೆಗೆ ಇಳಿಯುವಂತೆ ಒತ್ತಾಯ ಮಾಡಿದ್ದಾರೆ - ಹೆಚ್ಚಾಗಿ ಆ ಸೇವೆ ಸುವಾರ್ತಾ ಪ್ರಸಾರ ಆಗಿರುತ್ತದೆ. ಆದರೆ ನಾನು ಯಾವಾಗಲೂ ಅವರ ಒತ್ತಡಕ್ಕೆ ಜಗ್ಗದೆ ನಿಂತಿದ್ದೇನೆ. ದೇವರು ಇನ್ನೊಬ್ಬರಿಗೆ ಕೊಟ್ಟಿರುವ ಭಾರವು ನನ್ನನ್ನು ಆಕರ್ಷಿಸುವುದಿಲ್ಲ. ದೇವರು ಒಂದು ವಿಶಿಷ್ಟವಾದ ಸಂಕಲ್ಪವನ್ನು ನನ್ನ ಮನಸ್ಸಿನಲ್ಲಿ ಇರಿಸಿದ್ದಾರೆ ಮತ್ತು ನಾನು ಆ ಸೇವೆಯನ್ನು ಮಾತ್ರ ಪೂರ್ಣಗೊಳಿಸುವ ದೃಢಸಂಕಲ್ಪವನ್ನು ಇರಿಸಿಕೊಂಡಿದ್ದೇನೆ. ಎಲ್ಲಾ ಪ್ರವಾದಿಗಳು ತಮಗೆ ದೇವರು ನೀಡಿದ ಭಾರ ಮತ್ತು ಸೇವೆಯನ್ನು ಬಿಟ್ಟು ಬೇರೊಂದು ಕಾರ್ಯಕ್ಕೆ ಕಾಲಿಡುವಂತೆ ಮಾಡಲು ಯಾರಿಗೂ ಅವಕಾಶ ನೀಡಲಿಲ್ಲ.

ನೀವು ಇಂತಹ ಯಾವುದೇ ಭಾರದ ಅನುಭವವನ್ನು ಹೊಂದದೇ ಇದ್ದರೆ, ದೇವರ ಬಳಿಗೆ ಹೋಗಿ ನಿಮಗೆ ಒಂದು ಭಾರ (ಅಥವಾ ಮನಸ್ಸಿನ ಸಂಕಲ್ಪ) ಕೊಡುವಂತೆ ಬೇಡಿಕೊಳ್ಳಿರಿ. ಅವರು ಕ್ರಿಸ್ತನ ದೇಹದಲ್ಲಿ ನಿಮ್ಮಿಂದ ಪೂರ್ಣವಾಗಬೇಕಾದ ಒಂದು ನಿಖರವಾದ ಕಾರ್ಯವನ್ನು ಇರಿಸಿದ್ದಾರೆ ಮತ್ತು ನೀವು ಅದು ಏನೆಂದು ತಿಳಿದುಕೊಳ್ಳುವದು ಅವಶ್ಯವಾಗಿದೆ. ಅನೇಕ ಬೋಧಕರು ಒಂದು ಸೇವೆಯಿಂದ ಇನ್ನೊಂದು ಸೇವೆಗೆ ಸರಿಯುತ್ತಾರೆ - ಅವರಿಗೆ ಯಾವ ಕ್ರೈಸ್ತ ಸಂಘಟನೆಯಿಂದ ಅತೀ ಹೆಚ್ಚಿನ ವೇತನ ಅಥವಾ ಆದಾಯ ಬರುತ್ತದೋ ಅವರು ಅಲ್ಲಿಗೆ ಹೋಗಿ ಸೇರುತ್ತಾರೆ.

ಉದಾಹರಣೆಗಾಗಿ, ಆರಂಭದಲ್ಲಿ ಅವರಲ್ಲಿ ಒಂದು ರೇಡಿಯೋ ಸೇವೆಯ "ಭಾರ" ಇರುವಂತೆ ಭಾಸವಾಗುತ್ತದೆ. ಆದರೆ ಮಕ್ಕಳಿಗೆ ಸುವಾರ್ತೆ ನೀಡುವ ಒಂದು ಸಂಸ್ಥೆಯು ಅವರಿಗೆ ಹೆಚ್ಚಿನ ಸಂಬಳ ಕೊಡುವುದಾದರೆ, ತಕ್ಷಣವೇ ಅವರಲ್ಲಿ ಮಕ್ಕಳಿಗೆ ಸುವಾರ್ತೆ ಸಾರುವ "ಭಾರ" ಕಾಣಿಸಿಕೊಳ್ಳುತ್ತದೆ! ಸ್ವಲ್ಪ ಸಮಯದ ನಂತರ, ಕ್ರೈಸ್ತ ಸಾಹಿತ್ಯ ಪ್ರಚಾರ ಸಂಸ್ಥೆಯಿಂದ ಅವರಿಗೆ ಇನ್ನೂ ಹೆಚ್ಚಿನ ಸಂಬಳದ ಅವಕಾಶ ಬಂದರೆ, ಒಡನೆಯೇ ಅವರ ಮನಸ್ಸಿನ "ಭಾರವು" ಕ್ರೈಸ್ತ ಸಾಹಿತ್ಯ ಸೇವೆಯ ಕಡೆಗೆ ಸರಿಯುತ್ತದೆ!! ಇಂತಹ ಬೋಧಕರು ಕರ್ತನ ಸೇವೆ ಮಾಡುತ್ತಿಲ್ಲ. ಇವರು ಬಾಬೆಲಿನ "ವ್ಯವಹಾರಗಳಲ್ಲಿ" ತೊಡಗಿರುವ ಧಾರ್ಮಿಕ ವ್ಯಕ್ತಿಗಳಾಗಿದ್ದಾರೆ. ದೇವರು ನಿಮಗೆ ಒಂದು ಭಾರವನ್ನು ಕೊಟ್ಟಿರುವಾಗ, ಯಾವುದೋ ಒಂದು ಸಂಸ್ಥೆಯು ನಿಮಗೆ ಹೆಚ್ಚಿನ ಲೌಕಿಕ ಅನುಕೂಲಗಳನ್ನು ಒದಗಿಸುತ್ತದೆಂಬ ಒಂದು ಕಾರಣಕ್ಕಾಗಿ ನಿಮಗಿರುವ ಭಾರವನ್ನು ಕೈಬಿಡುವುದು ಸರಿಯಲ್ಲ.