WFTW Body: 

ಸತ್ಯವೇದವನ್ನು ತಿಳಿಯುವುದು ದೇವರನ್ನು ತಿಳಿದುಕೊಳ್ಳುವುದಕ್ಕಿಂತ ಬಹಳ ಸುಲಭವಾದದ್ದು - ಏಕೆಂದರೆ ಸತ್ಯವೇದವನ್ನು ತಿಳಿದುಕೊಳ್ಳಲು ನೀವು ಯಾವುದೇ ಬೆಲೆಯನ್ನು ತೆರಬೇಕಿಲ್ಲ. ನೀವು ಕೇವಲ ಸತ್ಯವೇದವನ್ನು ಅಭ್ಯಾಸ ಮಾಡಿದರೆ ಸಾಕು.

ನಿಮ್ಮ ಖಾಸಗಿ ಜೀವನದಲ್ಲಿ ಜಾರತ್ವವಿದ್ದರೂ ಮತ್ತು ನಿಮ್ಮ ಮನಸ್ಸಿನ ಆಲೋಚನೆಗಳಲ್ಲಿ ಅಶುದ್ಧತೆಯಿದ್ದರೂ, ನೀವು ಸತ್ಯವೇದವನ್ನು ಬಹಳ ಚೆನ್ನಾಗಿ ತಿಳಿದುಕೊಳ್ಳಲು ಸಾಧ್ಯವಿದೆ. ನೀವೊಬ್ಬ ಪ್ರಖ್ಯಾತ ಬೋಧಕರಾಗಿದ್ದು, ಅದರ ಜೊತೆಗೆ ಹಣವನ್ನು ಬಹಳವಾಗಿ ಪ್ರೀತಿಸುವವರು ಆಗಿರಲು ಸಾಧ್ಯವಿದೆ. ಆದರೆ ನೀವು ನಿಮ್ಮ ಜೀವಿತದಲ್ಲಿ ದೇವರನ್ನು ತಿಳಿದುಕೊಂಡು ಜಾರತ್ವವನ್ನು ಮಾಡಲು ಆಗುವುದಿಲ್ಲ. ನೀವು ದೇವರನ್ನು ತಿಳಿದುಕೊಂಡು ಹಣವನ್ನು ಪ್ರೀತಿಸುವವರು ಆಗಿರಲು ಸಾಧ್ಯವಿಲ್ಲ. ಇವು ಅಸಾಧ್ಯವಾದವುಗಳು. ಹಾಗಾಗಿ ಹೆಚ್ಚಿನ ಬೋಧಕರು ದೇವರನ್ನು ತಿಳಿಯುವುದಕ್ಕಿಂತ ಸುಲಭ ಮಾರ್ಗವಾದ ಸತ್ಯವೇದವನ್ನು ತಿಳಿದುಕೊಳ್ಳುವುದನ್ನು ಆರಿಸಿಕೊಳ್ಳುತ್ತಾರೆ.

ಸಹೋದರರೇ, ನಾನು ನಿಮಗೆ ಇದನ್ನು ಕೇಳ ಬಯಸುತ್ತೇನೆ: ನೀವು ಕೇವಲ ಸತ್ಯವೇದವನ್ನು ತಿಳಿದುಕೊಳ್ಳುವುದರಲ್ಲಿ ಸಂತೋಷ ಪಡುತ್ತೀರೋ ಅಥವಾ ನಿಮ್ಮ ಹೃದಯದಲ್ಲಿ ಕರ್ತನನ್ನು ತಿಳಿದುಕೊಳ್ಳಬೇಕೆಂಬ ತೀವ್ರವಾದ ಹಸಿವು ನಿಮಗೆ ಇದೆಯೇ? ಅಪೊಸ್ತಲ ಪೌಲನು ಫಿಲಿಪ್ಪಿಯವರಿಗೆ 3:8-10'ರಲ್ಲಿ, ಕರ್ತನಾದ ಯೇಸುವನ್ನು ಚೆನ್ನಾಗಿ ತಿಳಿದುಕೊಳ್ಳುವುದೇ ತನ್ನ ಅತಿ ಶ್ರೇಷ್ಠ ಹಂಬಲವಾಗಿದೆಯೆಂದು ಹೇಳಿದನು. ಕರ್ತನನ್ನು ತಿಳಿದುಕೊಳ್ಳುವುದಕ್ಕೆ ಹೋಲಿಸಿದರೆ, ಆತನು ಉಳಿದ ಎಲ್ಲವನ್ನು ಕಸವೆಂಬಂತೆ ಪರಿಗಣಿಸಿದ್ದನು. ಪೌಲನು ಬಹು ಬೆಲೆಯುಳ್ಳ ಈ ಮುತ್ತಿಗಾಗಿ ತನ್ನಲ್ಲಿದ್ದ ಎಲ್ಲಾ ಮುತ್ತುಗಳನ್ನು ಬಿಟ್ಟುಕೊಟ್ಟನು. ಪೌಲನ ಸೇವೆಯ ರಹಸ್ಯವು ಆತನು ಗಮಲಿಯೇಲನ ಸತ್ಯವೇದ ಶಾಲೆಯಲ್ಲಿ ವರ್ಷಗಟ್ಟಲೆ ಅಭ್ಯಾಸ ಮಾಡಿದ್ದರಲ್ಲಿ ಕಂಡುಬರುವುದಿಲ್ಲ, ಆದರೆ ಕರ್ತನ ಬಗ್ಗೆ ಆತನಲ್ಲಿದ್ದ ವೈಯುಕ್ತಿಕ ತಿಳುವಳಿಕೆಯಲ್ಲಿ ಕಂಡು ಬರುತ್ತದೆ.

"ದೇವರನ್ನು ಮತ್ತು ಯೇಸು ಕ್ರಿಸ್ತನನ್ನು ಅರಿತುಕೊಳ್ಳುವುದೇ ನಿತ್ಯಜೀವವಾಗಿದೆ" (ಯೋಹಾನನು 17:3).

"ನಿತ್ಯಜೀವವು ಪರಲೋಕಕ್ಕೆ ಹೋಗುವುದಕ್ಕೆ ಅಥವಾ ನರಕದಿಂದ ಪಾರಾಗುವುದಕ್ಕೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಅದು ಕರ್ತನನ್ನು ಅರಿತುಕೊಳ್ಳುವುದಕ್ಕೆ ಮಾತ್ರ ಸಂಬಂಧಿಸಿದೆ"

ನಿತ್ಯಜೀವವೆಂದರೆ ಪರಲೋಕದಲ್ಲಿ ನಿತ್ಯತ್ವಕ್ಕೂ ಜೀವಿಸುವುದು ಎಂಬುದಾಗಿ ನಾವು ಪ್ರಾಯಶಃ ವ್ಯಾಖ್ಯಾನಿಸುತ್ತೇವೆ. ಆದರೆ ಯೇಸುವು ಇದನ್ನು ಈ ರೀತಿಯಾಗಿ ವ್ಯಾಖ್ಯಾನಿಸಲಿಲ್ಲ. ನಿತ್ಯಜೀವವು ಪರಲೋಕಕ್ಕೆ ಹೋಗುವುದಕ್ಕೂ ಅಥವಾ ನರಕದಿಂದ ತಪ್ಪಿಸಿಕೊಳ್ಳುವುದಕ್ಕೂ ಯಾವುದೇ ಸಂಬಂಧವನ್ನು ಹೊಂದಿಲ್ಲ. ಅದು ಕರ್ತನನ್ನು ಅರಿತುಕೊಳ್ಳುವುದಕ್ಕೆ ಮಾತ್ರ ಸಂಬಂಧಿಸಿದೆ. ನನ್ನ ಜೀವನದ ಶ್ರೇಷ್ಠ ಹಂಬಲ ಮತ್ತು ನನ್ನ ಹೃದಯದ ಭಾರ ಏನೆಂದರೆ, ದೇವರನ್ನು ನಿಕಟವಾಗಿ ಮತ್ತು ವೈಯಕ್ತಿಕವಾಗಿ ತಿಳಿದುಕೊಳ್ಳಬೇಕು ಎಂಬುದಾಗಿದೆ. ನಾನು ದೇವರನ್ನು ವೈಯಕ್ತಿಕವಾಗಿ ಅರಿತುಕೊಂಡಾಗ ಮಾತ್ರ ನನ್ನ ಸೇವೆಯಲ್ಲಿ ದೈವಿಕ ಅಧಿಕಾರ ಇರುತ್ತದೆಂದು ನಾನು ಅರಿತಿದ್ದೇನೆ. ಹಾಗಾಗಿ ನಮ್ಮ ಎಲ್ಲಾ ಸಭೆಗಳಲ್ಲಿ, ನಾನು ಜನರನ್ನು ದೇವರ ಕುರಿತಾದ ವೈಯಕ್ತಿಕ ತಿಳುವಳಿಕೆಗೆ ನಡೆಸಲು ಬಯಸುತ್ತೇನೆ.

ಇತಿಹಾಸದಲ್ಲಿ ಎಂದೂ ಇರದಿದ್ದ ಸತ್ಯವೇದದ ಜ್ಞಾನವು ಇಂದಿನ ದಿನಗಳಲ್ಲಿದೆ. ಪಂಚಾಶತ್ತಮ ದಿನದ ನಂತರ ಸುಮಾರು 1,500 ವರ್ಷಗಳ ವರೆಗೆ ಎಲ್ಲಿಯೂ ಮುದ್ರಿಸಲ್ಪಟ್ಟ ಸತ್ಯವೇದದ ಪ್ರತಿಗಳು ಸಿಗುತ್ತಿರಲಿಲ್ಲ. ಕಳೆದ ಎರಡು ಶತಮಾನಗಳಲ್ಲಿ ಮಾತ್ರ ಸತ್ಯವೇದದ ಪ್ರತಿಗಳು ಬಹಳ ಸುಲಭವಾಗಿ ಸಿಗುತ್ತಿವೆ. ಇಂದು ಸತ್ಯವೇದದ ಹಲವಾರು ಆವೃತ್ತಿಗಳು ಮತ್ತು ಅನುಕ್ರಮಣಿಕೆಗಳು ('concordances') ಮತ್ತು ಅಧ್ಯಯನ-ಸಹಾಯಕ ಪುಸ್ತಕಗಳು ನಮಗೆ ಲಭ್ಯವಿವೆ.

ಆದರೆ, ಸತ್ಯವೇದದ ಹೆಚ್ಚಿನ ಜ್ಞಾನವು ಪರಿಶುದ್ಧ ಕ್ರೈಸ್ತರನ್ನು ಹುಟ್ಟುಹಾಕಿದೆ ಎಂದು ನೀವು ಯೋಚಿಸುತ್ತೀರಾ? ಇಲ್ಲ. ಸತ್ಯವೇದದ ಜ್ಞಾನದ ಮೂಲಕ ಪರಿಶುದ್ಧತೆ ಉಂಟಾಗುವುದೇ ಆಗಿದ್ದಲ್ಲಿ ಇಂದಿನ ದಿನಗಳಲ್ಲಿ ಅತಿ ಹೆಚ್ಚು ದೈವಿಕ ಜನರು ಇರಬೇಕಿತ್ತು. ಆದರೆ ಅದು ಹಾಗಿಲ್ಲ. ಸತ್ಯವೇದದ ಜ್ಞಾನದಿಂದ ಪರಿಶುದ್ಧತೆ ಉಂಟಾಗುವುದೇ ಆಗಿದ್ದಲ್ಲಿ, ಸ್ವತಃ ಸೈತಾನನೇ ಪರಿಶುದ್ಧನಾಗಿರುತ್ತಿದ್ದನು - ಏಕೆಂದರೆ ಆತನಲ್ಲಿರುವ ಸತ್ಯವೇದದ ಜ್ಞಾನ ಇನ್ಯಾರಲ್ಲೂ ಇಲ್ಲ.

ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ಸತ್ಯವೇದವನ್ನು ಕಲಿಸುವಂತ ಅನೇಕ ಸತ್ಯವೇದ ಕಾಲೇಜುಗಳನ್ನು ('seminaries') ನಾವು ನೋಡುತ್ತೇವೆ. ಆದರೆ ಈ ದಿನ ಜಗತ್ತಿನಲ್ಲಿ ಅತಿ ಹೆಚ್ಚು ದೈವಿಕ ಜನರು ಆ ಸಂಸ್ಥೆಗಳಲ್ಲಿ (ಸೇಮಿನರಿಗಳಲ್ಲಿ) ಸಿಗುತ್ತಾರೆಯೇ? ಇಲ್ಲ. ಇಂದು ಸೇಮಿನರಿಗಳಲ್ಲಿನ ಅನೇಕ ಪದವೀಧರರು ಆತ್ಮಿಕವಾಗಿ ಅನ್ಯಜನರಿಗಿಂತಲೂ ಕೆಳಮಟ್ಟದಲ್ಲಿದ್ದಾರೆ.

ಕೆಲವು ವರ್ಷಗಳ ಹಿಂದೆ, ಭಾರತದ ಒಂದು ಅತ್ಯುತ್ತಮ ಸುವಾರ್ತಾ ಪ್ರಚಾರಕ ಸತ್ಯವೇದ ಅಧ್ಯಯನದ ಕಾಲೇಜಿನ ಒಬ್ಬ ಪದವೀಧರನನ್ನು ನಾನು ಭೇಟಿಯಾಗಿದ್ದೆ; ಆತನು ತನ್ನ ತರಗತಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಪದವೀಧರನಾಗಿದ್ದನು. ಆತನೊಂದಿಗೆ ಮಾತನಾಡಿದಾಗ ನನಗೆ ತಿಳಿದದ್ದೇನೆಂದರೆ, ಕಾಲೇಜಿನಲ್ಲಿ ಮೂರು ವರ್ಷಗಳನ್ನು ಕಳೆದ ನಂತರ ಆತನ ಆತ್ಮಿಕ ಸ್ಥಿತಿಯು ಆತನು ಆ ಸಂಸ್ಥೆಗೆ ಸೇರಿಕೊಂಡಾಗ ಇದ್ದುದಕ್ಕಿಂತ ಕೆಟ್ಟದಾಗಿತ್ತು. ಹಾಗಾದರೆ ಆತನಿಗೆ ಆ ಸತ್ಯವೇದ ಕಾಲೇಜು ಕಲಿಸಿದ್ದಾದರೂ ಏನು? ಅದು ಆತನಿಗೆ ಸತ್ಯವೇದ ಮತ್ತು ಕ್ರೈಸ್ತತ್ವದ ಕುರಿತಾದ ಜ್ಞಾನವನ್ನು ನೀಡಿತ್ತು. ಇಂತಹ ಒಂದು ಸಂಸ್ಥೆಯ ಮೂಲಕ, ಸ್ವತಃ ಸೈತಾನನೇ ತರಗತಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಉತ್ತೀರ್ಣನಾಗುತ್ತಿದ್ದನು.

ಆ ಯೌವನಸ್ಥನು ತನ್ನಲ್ಲಿದ್ದ ಕೋಪ, ಕಹಿ ಭಾವನೆಗಳು, ಜಾರತ್ವದ ಆಲೋಚನೆಗಳು ಮತ್ತು ಹಣದ ಮೇಲಿನ ಪ್ರೀತಿ, ಇವುಗಳನ್ನು ಜಯಿಸದಿದ್ದರೆ, ಆತನು ಸತ್ಯವೇದದ ವಚನಗಳನ್ನು ವಿವರವಾಗಿ ವಿಶ್ಲೇಷಿಸುವುದನ್ನು ಕಲಿತು, ಸತ್ಯವೇದದ ಉನ್ನತ ವಿಮರ್ಶಕರ ದೃಷ್ಟಿಕೋನಗಳನ್ನು ಅರಿತುಕೊಂಡು, ಗ್ರೀಕ್ ಭಾಷೆಯ ಮೂಲ ಪದಗಳನ್ನು ಅಭ್ಯಾಸಿಸಿ ಏನನ್ನು ಸಾಧಿಸಿದನು? ಆತನು ಹೊಸದಾಗಿ ಪಡೆದಿದ್ದ ಪದವಿಯ ಪ್ರಮಾಣಪತ್ರದ ಬಲದಿಂದ, ಸದ್ಯದಲ್ಲೇ ಆತನು ಒಂದು ಕ್ರೈಸ್ತಸಭೆಯ ಪಾಸ್ಟರ್ ಆಗಲಿದ್ದನು. ಆದರೆ ಆತನ ಸಭೆಯ ಜನರ ಅತಿ ದೊಡ್ಡ ಸಮಸ್ಯೆ ನೈತಿಕ ಜೀವನ ಆಗಿರುವಾಗ, ಮತ್ತು ಧರ್ಮಶಾಸ್ತ್ರಕ್ಕೆ ಸಂಬಂಧಿತವಾದದ್ದು ಅಲ್ಲದಿರುವಾಗ, ಆತನು ಅವರಿಗೆ ಏನನ್ನು ಬೋಧಿಸುತ್ತಾನೆ? ಆ ವಿಷಯದಲ್ಲಿ ಆತನು ಅವರಿಗೆ ಯಾವುದೇ ಸಹಾಯವನ್ನು ನೀಡಲು ಸಾಧ್ಯವಾಗುವುದಿಲ್ಲ. ಹೀಗೆ ಭಾರತದಲ್ಲಿ ದೇವರ ಕಾರ್ಯವು ನಾಶವಾಗುತ್ತಿದೆ.

ನೀವು ಸ್ವತಃ ದೇವರನ್ನು ತಿಳಿದುಕೊಂಡಿದ್ದರೆ ಮಾತ್ರ, ದೇವರನ್ನು ತಿಳಿದುಕೊಳ್ಳುವುದಕ್ಕೆ ನೀವು ನಿಮ್ಮ ಸಭೆಯ ಮಂದೆಯನ್ನು ಮುನ್ನಡೆಸಲು ಸಾಧ್ಯವಾಗುತ್ತದೆ. ನೀವು ನಿಮ್ಮ ಸ್ವಂತ ಜೀವಿತದಲ್ಲಿ ಪಾಪದ ಮೇಲೆ ಜಯವನ್ನು ಗಳಿಸಿದ್ದರೆ, ಆಗ ನೀವು ನಿಮ್ಮ ಮಂದೆಯನ್ನು ಸಹ ಪಾಪದ ಮೇಲೆ ಜಯದ ಕಡೆಗೆ ಕರೆದೊಯ್ಯಲು ಸಾಧ್ಯವಾಗುತ್ತದೆ. ಆಗ ಅವರು ಕೂಡ ಕರ್ತನ ಸೇವೆ ಮಾಡುವ ಅಧಿಕಾರವನ್ನೂ, ಬಲವನ್ನೂ ಹೊಂದುತ್ತಾರೆ - ಅದಕ್ಕಾಗಿ ಹೊರಗೆ ಹೋಗಲು ತಯಾರಾಗುತ್ತಾರೆ.

ಯಾರಾದರೂ ಹೊಂದಿರುವ ಸತ್ಯವೇದ ಜ್ಞಾನ ಅಥವಾ ಪ್ರಮಾಣಪತ್ರಗಳಿಂದ ಸೈತಾನನು ಪ್ರಭಾವಿತನಾಗುತ್ತಾನೆಂದು ನೀವು ಭಾವಿಸುತ್ತೀರಾ? ನಿಶ್ಚಯವಾಗಿ ಇಲ್ಲ. ದೇವರನ್ನು ಅರಿತುಕೊಂಡವರು ಪರಿಶುದ್ಧರೂ, ದೀನತೆಯುಳ್ಳ ಪುರುಷ ಮತ್ತು ಸ್ತ್ರೀಯರಿಗೆ ಮಾತ್ರ ಸೈತಾನನು ಹೆದರುತ್ತಾನೆ.